ಕೊರೊನಾ ಕಾಲದಲ್ಲಿ ಉನ್ನತ ಶಿಕ್ಷಣ

ಶಿಕ್ಷಣ ವಲಯದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮರುಹೊಂದಾಣಿಕೆ ಹೇಗೆ ರೂಪುಗೊಳ್ಳುತ್ತದೆಂದು ಅವಲೋಕಿಸುತ್ತ, ಇಲ್ಲಿ ಉಂಟಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಆಲೋಚಿಸುವುದು ಈ ಲೇಖನದ ಮುಖ್ಯ ಆಶಯ.

ಮನುಕುಲದ ಇತಿಹಾಸದಲ್ಲಿ ಆಗಿಹೋದ ಬೇರೆಲ್ಲ ಸೋಂಕು ರೋಗಗಳಿಗೆ ಹೋಲಿಸಿ ನೋಡಿದರೆ, ಕೊರೊನಾದಿಂದ ಉಂಟಾಗುತ್ತಿರುವ ಸಾವು-ನೋವುಗಳ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಆದರೆ ಜಗತ್ತಿನಾದ್ಯಂತ ಏಕಕಾಲಕ್ಕೆ ಕೊರೊನಾ ಉಂಟು ಮಾಡಿರುವ ಪರಿಣಾಮ ಮತ್ತು ಬಿಕ್ಕಟ್ಟು ಇನ್ನುಳಿದ ಯಾವ ವಿದ್ಯಮಾನವು ಮಾಡಿರಲಿಕ್ಕಿಲ್ಲ! ಇಡೀ ಜಗತ್ತನ್ನೇ ಒಂದು ಬಾರಿ ಮೂಗುಹಿಡಿದು ನಿಲ್ಲಿಸಿದಂತಾಗಿದೆ. ಆದಾಗ್ಯೂ ಭಯ, ಆತಂಕ ಹಾಗೂ ಅನಿಶ್ಚಿತತೆಗಳ ನಡುವೆ ಜಗತ್ತು ಈ ಬಿಕ್ಕಟ್ಟನ್ನು ನಿರ್ವಹಣೆ ಮಾಡುತ್ತಿರುವ ಪ್ರಯತ್ನವನ್ನು ಗಮನಿಸಲೇಬೇಕು.

ಇಡೀ ವಿಶ್ವವನ್ನು ವಿವಿಧ ಆಯಾಮಗಳಲ್ಲಿ ಜೋಡಿಸಿದ ಜಾಗತೀಕರಣವು ಮನುಷ್ಯ ಪ್ರಪಂಚದ ಸಂಪರ್ಕವನ್ನು ದಟ್ಟವಾಗಿಸಿದ ಕಾಲವಿದು. ಆದ್ದರಿಂದ ಯಾವುದೋ ಮೂಲೆಯಲ್ಲಿ ಹುಟ್ಟಿಕೊಂಡ ಒಂದು ಎಡವಟ್ಟು ಇವತ್ತು ಜಗತ್ತನ್ನೇ ಆವರಿಸಿದೆ, ಆಕ್ರಮಿಸಿದೆ ಕೂಡ. ಹೀಗೆ ಒಂದಾದ ಜಾಗತಿಕ ವ್ಯವಸ್ಥೆಯು ಮಾನವ ಸಂಪರ್ಕದಿಂದ ಕಟ್ಟಲ್ಪಟ್ಟಿದೆ. ಇಂದು ನಮ್ಮ ಮುಂದೆ ಇರುವ ಸವಾಲೆಂದರೆ ಮನುಷ್ಯ ಸಂಪರ್ಕದಿಂದ ಹರಡುವ ಈ ರೋಗವನ್ನು ಮನುಷ್ಯ ಸಂಪರ್ಕವನ್ನು ಉಳಿಸಿಕೊಂಡೆ ತಡೆಗಟ್ಟಬೇಕಾಗಿರುವುದು.

ಈ ನಿಟ್ಟಿನಲ್ಲಿ ಜಗತ್ತನ್ನು ಮರುಜೋಡಿಸುವ ಪ್ರಯತ್ನಗಳು ನಡೆಯುತ್ತಿವೆ. ನಾವು ಸಾಮಾಜಿಕವಾಗಿ ಬದುಕುವ ಕೌಶಲಗಳನ್ನು ಮರು ಕಲಿಕೆಗೊಳಪಡಿಸುತ್ತಿದ್ದೇವೆ. ಹೀಗೆ ವಿಶ್ವದಾದ್ಯಂತ ವಿವಿಧ ವಲಯಗಳಲ್ಲಿ ಈ ಮರು-ಜೋಡಣೆ ಮರು-ಕಲಿಕೆಗಳು ಪ್ರಾರಂಭದ ಹಂತದಲ್ಲಿರುವುದರಿಂದ ಅವುಗಳ ಕುರಿತು ಕೊಂಚ ಜಿಜ್ಞಾಸೆ ನಡೆಸುವುದು ಬಿಕ್ಕಟ್ಟಿನ ಈ ಕಾಲದಲ್ಲಿ ಜರೂರಿದೆ. ಆದ್ದರಿಂದ ಶಿಕ್ಷಣ ವಲಯದಲ್ಲಿ ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಮರುಹೊಂದಾಣಿಕೆ ಹೇಗೆ ರೂಪುಗೊಳ್ಳುತ್ತದೆಂದು ಅವಲೋಕಿಸುತ್ತ, ಇಲ್ಲಿ ಉಂಟಾಗುತ್ತಿರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಆಲೋಚಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

ಕೊರೊನಾ ಚೀನಾದ ಸಮಸ್ಯೆ, ನಮಗೇನು ಆಗಲಿಕ್ಕಿಲ್ಲ ಎಂದುಕೊಂಡು, ಚೀನಿ ಸಂಸ್ಕೃತಿಯ ಮೇಲೆ ಜೋಕು, ಪೋಸ್ಟರುಗಳನ್ನು ಉತ್ಪಾದಿಸುತ್ತಿದ್ದ ನಮಗೆ ಕೊರೊನಾದ ಕಾವನ್ನು ಮಾರ್ಚ್ ತಿಂಗಳಲ್ಲಿ ಒಮ್ಮೆಗೆ ಎದುರುಗೊಳ್ಳುವಂತಾಯಿತು. ಎಲ್ಲಿಂದಲೂ ಎರಗಿ ಬಂದ ಈ ವಿದ್ಯಮಾನವನ್ನು ಎದುರಿಸಲು ನಮ್ಮಲ್ಲಿ ಯಾವುದೇ ಸಿದ್ಧತೆ ಇರಲಿಲ್ಲ. ಅನಿರೀಕ್ಷಿತ ಲಾಕ್‌ಡೌನ್‌ನಿಂದ ಕಾಲೇಜು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದವು. ಈ ಹೊತ್ತಿಗಾಗಲೇ ನಮ್ಮ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಹೆಚ್ಚು ಕಡಿಮೆ ಶೇ.60ರಿಂದ 80ರಷ್ಟು ಪಠ್ಯಕ್ರಮಗಳನ್ನು ಪಾಠಮಾಡಿಯಾಗಿತ್ತು. ಇನ್ನೇನು ಪರೀಕ್ಷೆಗಳ ತಯಾರಿ ನಡೆಯಬೇಕಿತ್ತು.

ಈ ವಿದ್ಯಮಾನವು ಅಷ್ಟುಬೇಗ ಕೊನೆಗೊಳ್ಳುವುದಿಲ್ಲವೆಂದು ಅರಿತ ಉನ್ನತ ಶಿಕ್ಷಣ ಇಲಾಖೆ ಏಪ್ರಿಲ್ ತಿಂಗಳಲ್ಲಿ ವಿಷಯ ತಜ್ಞರು ಹಾಗೂ ವಿವಿಗಳ ಕುಲಪತಿಗಳೊಂದಿಗೆ ಚರ್ಚಿಸಿ, ಅಂತರ್ಜಾಲದ ಮೂಲಕ ಉಳಿದ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ಮಾನಸಿಕ ಕುಂದುಕೊರತೆಗಳನ್ನು ನಿವಾರಿಸಲು ಉಪಕ್ರಮಗಳನ್ನು ಕೈಗೊಳ್ಳಲು ಸೂಚಿಸಿತು. ನಮ್ಮ ಬದುಕೇ ಅಸ್ಥಿರತೆಯಿಂದ ಕೂಡಿದ ಕಾಲದಲ್ಲಿ ಶಿಕ್ಷಣವು ಅಷ್ಟೊಂದು ತುರ್ತು ಅಲ್ಲವೆಂದು ಪರಿಗಣಿಸದೇ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಯಿತು.

ಡಿಜಿಟಲ್ ಡಿವೈಡ್

ಇಂತಹ ಬಿಕ್ಕಟ್ಟಿನ ಕಾಲದಲ್ಲಿ ಶೈಕ್ಷಣಿಕ ಚಿಂತನೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳೊಂದಿಗೆ ತೊಡಗಿಸಿಕೊಳ್ಳುವುದೊಂದು ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. ಆನ್‌ಲೈನ್ ಮೂಲಕ ಪಾಠ ಮಾಡುವುದರ ಕುರಿತು ಮಾಧ್ಯಮಗಳಲ್ಲಿ ಸಾರ್ವಜನಿಕ ಚರ್ಚೆ ಕೂಡಾ ನಡೆಯಿತು. ಮೊಟ್ಟಮೊದಲ ಚರ್ಚೆಯ ವಿಷಯವೆಂದರೆ ಡಿಜಿಟಲ್ ತಂತ್ರಾಂಶದಿಂದ ಆಗುವ ಅಸಮಾನತೆ (ಡಿಜಿಟಲ್ ಡಿವೈಡ್). ಹಳ್ಳಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲ ಲಭ್ಯವಾಗದೇ ಇರುವುದು, ಅದು ಲಭ್ಯವಾದರೂ ಆನ್‌ಲೈನ್ ಪಾಠ ಕೇಳಲು ಬೇಕಾಗಿರುವ ಮೊಬೈಲ್ ಸೆಟ್ಟುಗಳನ್ನು ಅವರು ಹೊಂದದೆ ಇರುವುದು, ಡೇಟಾ ರಿಚಾರ್ಜಗೆ ಬೇಕಾದ ಹಣಕಾಸಿನ ಕೊರತೆ ಇತ್ಯಾದಿ. ಇವು ಮುಖ್ಯವಾದ ಪ್ರಾಯೋಗಿಕ ಸಮಸ್ಯೆಗಳೆ. ಆದರೆ ಇವುಗಳ ನೆಪ ಒಡ್ಡಿ ಆನ್‌ಲೈನ್ ಪಾಠ ಮಾಡದೇ ಇರುವುದು ಸಮಂಜಸವಲ್ಲ.

 

ಉಳ್ಳವರಿಗೆ ಆನ್‌ಲೈನ್ ಪಾಠ ಸಿಗುತ್ತೆ, ಇತರರಿಗೆ ಅನ್ಯಾಯವಾಗುತ್ತದೆಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಉಳ್ಳವರ ಹಾಗೂ ಇತರರ ‘ಸಾಂಸ್ಕೃತಿಕ ಬಂಡವಾಳದ’ (ಕಲ್ಚರಲ್ ಕ್ಯಾಪಿಟಲ್) ಸಮಸ್ಯೆ ಕೊರೊನಾ-ಪೂರ್ವ ಸಹಜ ಸ್ಥಿತಿಯಲ್ಲೂ ನಮ್ಮನ್ನು ಕಾಡುವ ಅಂಶವಾಗಿತ್ತು. ಒಟ್ಟಾರೆ ಆನ್‌ಲೈನ್ ಪಾಠದ ವಿಷಯವನ್ನು ನಾವು ಯಾವ ಸಂದರ್ಭದಲ್ಲಿ ಕೈಗೊಳ್ಳುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು. ಇದೊಂದು ತುರ್ತುಪರಿಸ್ಥಿತಿಯ ಕಾಲ. ಇಂತಹ ಸಂದರ್ಭದಲ್ಲಿ ನಾವು ಪ್ರಾಗ್ಮ್ಯಾಟಿಕ್ ಆಗಿ ಆಲೋಚಿಸಬೇಕಾಗಿದೆ. ಆನ್‌ಲೈನ್ ಪಾಠಗಳು ಇತರರಿಗೆ ಲಭ್ಯವಾಗುವ ಹಾಗೆ, ಅಂತರ್ಜಾಲ ಹಾಗೂ ಮೊಬೈಲ್ ಸೆಟ್ಟುಗಳು ಇಲ್ಲದವರಿಗೆ ಅವುಗಳನ್ನು ದೊರಕಿಸುವಲ್ಲಿ ಸರಕಾರ ಹಾಗೂ ಶೈಕ್ಷಣಿಕ ವ್ಯವಸ್ಥೆ ಅನುವು ಮಾಡಿಕೊಡುವದರಿಂದ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ಬಗೆಹರಿಸಬಹುದೆನಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ಹೊಸ ಆರ್ಥಿಕ ನೀತಿಯನ್ನು ಯೋಜಿಸಬೇಕು.   

ಸಮಸ್ಯೆ ಹಾಗೂ ಮಾರ್ಗೋಪಾಯ

ಇಂತಹ ಮೂಲಸೌಕರ್ಯಗಳ ಸಮಸ್ಯೆಯನ್ನು ಬಗೆಹರಿಸಿದರೆ ಆನ್‌ಲೈನ್ ಶಿಕ್ಷಣದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದಲ್ಲ. ಆನ್‌ಲೈನ್ ಪಾಠಗಳ ಮೂಲಕ ನಾವು ಶೈಕ್ಷಣಿಕ ಗುರಿಗಳನ್ನು ಸಾಧಿಸುವುದಾದರೂ ಹೇಗೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಪ್ರಾರಂಭದ ಹಂತದಲ್ಲಿ ವಿದ್ಯಾರ್ಥಿಗಳ ವಾಟ್ಸ್ಅಪ್ ಗ್ರೂಪ್‌ಗಳ ಮೂಲಕ ಮತ್ತು ವಿವಿ, ಕಾಲೇಜುಗಳ ಸ್ಟೂö್ಯಡೆಂಟ್ ಪೋರ್ಟಲ್ ಮೂಲಕ ಅವರಿಗೆ ಅಭ್ಯಾಸದ ಸಾಮಗ್ರಿಗಳಾದ ನೋಟ್ಸ್, ಪಿಪಿಟಿ, ಯು-ಟ್ಯೂಬ್ ವಿಡಿಯೊದ ಉಪನ್ಯಾಸ ಇತ್ಯಾದಿಗಳನ್ನು ರವಾನಿಸಲಾಯಿತು.

ಈಗಾಗಲೇ ಅಂತರ್ಜಾಲದಲ್ಲಿ ಲಭ್ಯವಿರುವ ಈ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದರಿಂದ ನಾವು ಶೈಕ್ಷಣಿಕ ಗುರಿ ತಲುಪಿದ್ದೇವೆ, ಪಾಠಮಾಡಿದ್ದೇವೆ ಅಥವಾ ವಿದ್ಯಾರ್ಥಿಗಳು ಕಲಿತಿದ್ದಾರೆಂದು ಅಲ್ಲ. ವಿದ್ಯಾರ್ಥಿಗಳೆ ಈ ಸಾಮಗ್ರಿಗಳನ್ನು ನೇರವಾಗಿ ಅಂತರ್ಜಾಲದಲ್ಲಿ ಪಡೆದುಕೊಳ್ಳಬಹುದು. ಇಂತಹ ರೆಡಿಮೇಡ್ ಸಾಮಗ್ರಿಗಳನ್ನು ನೇರವಾಗಿ ಅಂತರ್ಜಾಲದಲ್ಲಿ ಡೌನ್ಲೊಡ್ ಮಾಡಿ ವಿದ್ಯಾರ್ಥಿಗಳಿಗೆ ಕಳಿಸುವುದರಿಂದ ನಾವು ಆನ್‌ಲೈನ್ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ್ದೇವೆ ಎಂಬ ದಾಖಲೆಯನ್ನು ಸೃಷ್ಟಿಸಿ, ನಮ್ಮ ಅಧಿಕಾರಶಾಹಿಯು ಶೈಕ್ಷಣಿಕ ಕರ್ತವ್ಯ ಪೂರೈಸಿದ್ದೇವೆಂಬ ಅನುಕೂಲಸಿಂಧು ಸಮಾಧಾನ ಮಾಡಿಕೊಂಡಿದೆ ಅಷ್ಟೇ. 

ಹಾಗಾಗಿ ಆನ್‌ಲೈನ್‌ನಲ್ಲಿ ಅಭ್ಯಾಸದ ಸಾಮಗ್ರಿಯನ್ನು ವಿದ್ಯಾರ್ಥಿಗಳಿಗೆ ರವಾನಿಸುವುದು ಎಂದರೆ ನಮ್ಮ ವಿದ್ಯಾರ್ಥಿಗಳಿಗಾಗಿ ನಾವೇ ತಯಾರಿ ಮಾಡಿದ ಬರಹಗಳನ್ನು ಮುಟ್ಟಿಸುವುದು. ಅವುಗಳ ರಚನೆಗೆ ಬೇಕಾಗಿರುವ ಸಿದ್ಧತೆಯನ್ನು ಮಾಡಿಕೊಂಡು, ನಾವು ಅವುಗಳನ್ನು ಹೇಗೆ ಬರೆಯಬೇಕೆಂದರೆ ಅವು ಒಬ್ಬ ಶಿಕ್ಷಕ ನಿಂತು ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಿದ್ದಾನೆಂಬಂತೆ ಇರಬೇಕು; ಮಾತನಾಡುವ ಪಠ್ಯಗಳಂತೆ, ಮಾಹಿತಿ ಸಾಗಿಸುವ ವಾಹಕದಂತಲ್ಲ. ಇಲ್ಲಿ ಬರಹಗಳನ್ನು ತಯಾರಿಸುವ ಶಿಕ್ಷಕರು ಆ ಕೌಶಲಗಳನ್ನು ರೂಢಿಸಿಕೊಂಡಿರಬೇಕಾಗುತ್ತದೆ. ಶಿಕ್ಷಕರು ಸಹ ತಮ್ಮಲ್ಲಿ ಒಬ್ಬ ಬರಹಗಾರನನ್ನು ಸೃಜಿಸಿಕೊಳ್ಳುವುದು ಈ ಆನ್‌ಲೈನ್ ಶಿಕ್ಷಣದಲ್ಲಿ ಜರೂರಿದೆ.

ನಂತರ ನಾವು ಪಠ್ಯಗಳನ್ನು ರವಾನಿಸುವುದರ ಜೊತೆ, ನಮ್ಮ ಉಪನ್ಯಾಸಗಳ ಧ್ವನಿ ಮುದ್ರಣ ಮಾಡಿ, ವಿಡಿಯೂ ಮಾಡಿ ವಿದ್ಯಾರ್ಥಿಗಳಿಗೆ ರವಾನಿಸಿದ್ದೇವೆ. ಈಗಾಗಲೆ ಲಭ್ಯವಿರುವ ಮಾಹಿತಿಗೆ ನಮ್ಮ ಧ್ವನಿಯನ್ನು ಸೇರಿಸಿ ಈ ಉಪನ್ಯಾಸಗಳನ್ನು ಮಾಡಿದರೆ ಇವು ಕೇವಲ ದಾಖಲೆಗಾಗಿ ಮಾಡಿದ ಪ್ರಯತ್ನಗಳಾಗಿ ಉಳಿಯುತ್ತವೆ. ಈ ಧ್ವನಿಮುದ್ರಣಗಳನ್ನೂ ನಾವು ವಿದ್ಯಾರ್ಥಿಗಳ ಕಲಿಕೆ ಸುಗಮವಾಗುವಂತೆ ಅವುಗಳ ಸಂರಚನೆಯನ್ನು ಮಾಡಬೇಕಾಗುತ್ತದೆ. ಶಿಕ್ಷಕರಿಂದ ಇದು ಹೆಚ್ಚಿನ ಶ್ರಮವನ್ನು ಬೇಡುತ್ತದೆ. ಅಜ್ಜಿ ಹೇಳುವ ಕತೆಯ ಮಾದರಿಯಲ್ಲಿ ಇವು ಇರಬೇಕೇ ಹೊರತು, ಟಿವಿ ವಾರ್ತೆ ಓದಿದಂತೆ ಇರಬಾರದು. ಈ ನಿಟ್ಟಿನಲ್ಲಿ ಶಿಕ್ಷಕ ಸಮೂಹ ತನ್ನನ್ನು ತಾನು ಮರುಆವಿಷ್ಕಾರ (ರಿಇನ್‌ವೆಂಟ್) ಮಾಡಿಕೊಳ್ಳಬೇಕಿದೆ.  

ಒಟ್ಟಾರೆಯಾಗಿ ನಾವು ಆನ್‌ಲೈನ್ ಪಾಠಪ್ರವಚನ ಮಾಡುವಾಗ, ಅಭ್ಯಾಸ ಸಾಮಗ್ರಿಗಳನ್ನು ರವಾನಿಸುವಾಗ ಅವು ಎಷ್ಟರ ಮಟ್ಟಿಗೆ ವಿದ್ಯಾರ್ಥಿಗಳೊಂದಿಗೆ ‘ಮಾತನಾಡುತ್ತವೆ’ ಹಾಗೂ ಅವು ಹೇಗೆ ಅವರ ಕಲಿಕೆಯನ್ನು ಸಾಧಿಸಲು ಸಹಾಯಕಾರಿಯಾಗುತ್ತವೆಂಬುದನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳದಿದ್ದರೆ ನಾವು ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗೆ ಅಣಿಮಾಡಿದಂತೆ ಆಗುತ್ತದೆಯೇ ಹೊರತು, ನಿಜವಾದ ಶೈಕ್ಷಣಿಕ ಗುರಿಗಳಾದ -ಆಲೋಚನೆಯ ಕಲಿಕೆ, ಶೋಧನೆಯ ಮನೋಭಾವ, ಬರಹದ ಮೂಲಕ ಮಾಹಿತಿಯನ್ನಾದರೂ ಸೃಷ್ಟಿಸುವುದು, ಸೃಜನಾತ್ಮಕವಾಗಿ ತಮ್ಮ ಜ್ಞಾನಶಿಸ್ತುಗಳ ಜೊತೆ ತೊಡಗಿಸಿಕೊಳ್ಳುವುದು ಇತ್ಯಾದಿಗಳನ್ನು- ಸಾಧಿಸಲು ಅಸಾಧ್ಯ. ಈ ಸಂಗತಿಗಳು ಕೊರೊನಾ ಕಾಲದಲ್ಲಿ ಹೊಸದಾಗಿ ಸ್ಪಂದಿಸಬೇಕಾದ ವಿಷಯಗಳಲ್ಲ. ಸಹಜ ಸ್ಥಿತಿಯಲ್ಲೂ ಇವು ನಮ್ಮನ್ನು ಕಾಡಿರಬೇಕಿದೆ.

ಆನ್‌ಲೈನ್ ಸಾಕ್ರೇಟಿಸ್

ಇನ್ನು ಝೂಮ್, ಗೂಗಲ್ ಮೀಟ್, ವೆಬೆಕ್ಸ್ ಮುಂತಾದ ವೇದಿಕೆಗಳನ್ನು ಉಪಯೋಗಿಸಿ ಲೈವ್ ಆಗಿ ಪಾಠಮಾಡುವ ವಿಷಯ. ಈ ತಂತ್ರಜ್ಞಾನ ಬಳಸುವುದನ್ನು ಕಲಿತು ಹೆಚ್ಚಿನ ಶಿಕ್ಷಕರು ಪಾಠಮಾಡುತ್ತಿದ್ದಾರೆ, ದಿಟ. ನೇರವಾಗಿ ಪ್ರೇಕ್ಷಕರ ಮುಂದೆ ನಟಿಸಿದ ನಾಟಕದ ನಟನನ್ನು ಒಮ್ಮೆಲೆ ಕ್ಯಾಮರಾದ ಮುಂದೆ ನಿಂತು ನಟಿಸಲು ಹೇಳಿದಾಗ ಉಂಟಾಗುವ ಸಂದಿಗ್ಧತೆ ಶಿಕ್ಷಕರಾದ ನಮಗೆ ಉಂಟಾಗಿದೆ. ಆದರೆ ಕಾಲಕಳೆದಂತೆ ಈ ವೇದಿಕೆಗಳನ್ನು ಉಪಯೋಗಿಸಿ ಉತ್ತಮವಾಗಿ ಪಾಠಮಾಡುವುದನ್ನು ಕಲಿಯುತ್ತಿದ್ದೇವೆ. ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಜೊತೆ ಮುಖಾಮುಖಿಯಾಗಿ ಮಾತುಕತೆ ನಡೆಸುತ್ತ ಸಂಭಾಷಣಾತ್ಮಕ ಪಾಠ ಮಾಡಿದವರಿಗೆ ಆ ವಿಧಾನವನ್ನು ಇಲ್ಲಿ ಬಳಸುವುದು ಕಷ್ಟವಾಗಿದೆ.

ನಾವು ತುರ್ತುಪರಿಸ್ಥಿತಿಯಲ್ಲಿರುವಾಗ, ಈ ವೇದಿಕೆಗಳ ಮೇಲೆ ಈ ಸಾಕ್ರೇಟಿಕ್ ವಿಧಾನವನ್ನು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತ, ತಪ್ಪುಗಳನ್ನು ತಿದ್ದಿಕೊಳ್ಳುತ್ತ, ಅದನ್ನು ಅನುಷ್ಠಾನಗೊಳಿಸಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸಿ, ಚಿಕ್ಕ ಚಿಕ್ಕ ಗುಂಪುಗಳಲ್ಲಿ ಅವರನ್ನು ಹಂಚಿ, ಈಗ ತಂತ್ರಜ್ಞಾನದಲ್ಲಿ ಸಂಭಾಷಣೆ ಮಾಡಲು ಲಭ್ಯವಿರುವ ಅನುಕೂಲತೆಯನ್ನು ಬಳಸಿಕೊಳ್ಳಬೇಕಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನಾವು ತರಗತಿಗಳಲ್ಲಿ ನಡೆಸುತ್ತಿದ್ದ ಮುಖಾಮುಖಿ ಈ ಆನ್‌ಲೈನ್ ವೇದಿಕೆಗಳ ಮೇಲೆ ಸಾಧ್ಯವಾಗುವಂತೆ ತಂತ್ರಜ್ಞಾನದ ರಚನೆ ಆಗಿಯೇ ಆಗುತ್ತದೆ. 

ಇನ್ನು ಕೊರೊನಾ ಪೂರ್ವದ ಸ್ಥಿತಿಯಲ್ಲಿ ಅಮೇರಿಕಾ ಹಾಗೂ ಕಾಸ್ಮೋಪಾಲಿಟನ್ ನಗರಗಳಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ತರಗತಿಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದರಿಂದ, ಆನ್‌ಲೈನ್‌ನಲ್ಲಿ ಪಾಠಮಾಡುವುದು ಹಾಗೂ ಪಾಠ ಕೇಳುವುದು ಅಲ್ಲಿ ಅಷ್ಟೊಂದು ಸಮಸ್ಯಾತ್ಮಕವಾಗಿರಲಿಕ್ಕಿಲ್ಲ. ನಮಗೆ ಇದೊಂದು ಹೊಸ ಅನುಭವ. ಸ್ವಲ್ಪ ಸಮಯ ಬೇಕು. ನಮ್ಮಲ್ಲಿ ಸ್ವಯಂನಂತಹ ಆನ್‌ಲೈನ್ ಕಲಿಕೆಯ ವೇದಿಕೆಗಳಿದ್ದರೂ ಅವುಗಳ ರಚನೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ನಮ್ಮ ವಿದ್ಯಾರ್ಥಿಗಳ ಕಲಿಕೆ ಹಾಗೂ ಕಾಗ್ನಿಟಿವ್ ಸಾಮರ್ಥ್ಯಗಳಿಗನುಗುಣವಾಗಿ ಅವುಗಳನ್ನು ರಚಿಸಬೇಕಾಗುತ್ತದೆ. ಕೇವಲ ಪಶ್ಚಿಮದಲ್ಲಿರುವ ‘ಮೂಕ್’ ಕೋರ್ಸ್ಗಳ (ಮ್ಯಾಸಿವ್ ಆನ್‌ಲೈನ್ ಓಪನ್ ಕೋರ್ಸ್) ಅನುಕರಣೆ ಮಾಡಿದರೆ ಸಾಲದು. ನಮ್ಮ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ನಮ್ಮ ‘ಮೂಕ್’ ಕೋರ್ಸುಗಳನ್ನು ರಚನೆ ಮಾಡಬೇಕಲ್ಲದೆ, ನಮ್ಮ ಶಿಕ್ಷಕರು ಅದಕ್ಕೆ ಬೇಕಾದ ಪಾಂಡಿತ್ಯ ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಪರೀಕ್ಷೆಎಂಬ ಪಿಡುಗು

ಇನ್ನು ಈ ಬಿಕ್ಕಟ್ಟಿನ ಮಧ್ಯೆ ಪರೀಕ್ಷೆಯ ವ್ಯಸನ ಬೇರೆ. ನಮ್ಮ ಹೆಚ್ಚಿನ ಬೌದ್ಧಿಕ ಚರ್ಚೆಗಳು ಎಷ್ಟರಮಟ್ಟಿಗೆ ಪರೀಕ್ಷೆ ನಡೆಸುವುದರ ಕಡೆ ಗಮನ ಹರಿಸಿವೆ ಎಂದರೆ ನಾವು ಆನ್‌ಲೈನ್ ಪಾಠಮಾಡಿ ಶೇಕಡಾ ನೂರರಷ್ಟು ಪಠ್ಯಕ್ರಮವನ್ನು ಮುಗಿಸಬೇಕಾಗಿರುವುದು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಮಾತ್ರ ಎಂದಾಗಿ ಬಿಟ್ಟಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆAದರೆ ಪರೀಕ್ಷೆಗಳ ತರ್ಕವನ್ನು ಅರಿಯುವುದು. ಕಲಿಕೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂದು ಮೌಲ್ಯಮಾಪನ ಮಾಡಲು ಪರೀಕ್ಷೆಗಳು ಇರುತ್ತವೆಯೇ ಹೊರತು, ಪರೀಕ್ಷೆಗಾಗಿಯೆ ಪಾಠ-ಪ್ರವಚನಗಳು ನಡೆಯುವುದಿಲ್ಲ. ಹಾಗಾಗಿ, ಪರೀಕ್ಷೆಗಳ ವ್ಯಸನದಿಂದ ಹೊರಗೆ ಬರುವುದಷ್ಟೇ ಅಲ್ಲ, ಅವುಗಳನ್ನು ಸ್ವಭಾವೀಕರಿಸದೆ, ಪರೀಕ್ಷೆ ನಡೆಸದಿದ್ದರೆ ಬಾನಲ್ಲಿ ಸೂರ್ಯಚಂದ್ರರು ಹುಟ್ಟುವುದಿಲ್ಲ ಎಂಬ ಭ್ರಮೆಯೆನ್ನು ಬಿಟ್ಟು ಕಲಿಕೆ ಮೊದಲು, ಪರೀಕ್ಷೆ ನಂತರ ಅಥವಾ ಪರೀಕ್ಷೆಗಳನ್ನು ನಡೆಸದೇ ಇದ್ದರೂ ಪರವಾಗಿಲ್ಲ ಎನ್ನುವ ಮಟ್ಟಿಗೆ ಆಲೋಚಿಸಬೇಕಾಗಿದೆ. 

ಇನ್ನೊಂದು ಪರ್ಯಾಯ ಮಾರ್ಗವೆಂದರೆ ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿವಿಗಳಿಗಿರುವ ಸ್ವಾಯತ್ತತೆಯನ್ನು ಬಳಸಿಕೊಂಡು ಪರೀಕ್ಷೆಗಳ ಸ್ವರೂಪ ಬದಲಾಯಿಸಬೇಕಾಗಿದೆ. ಈಗಿರುವ ಸಿದ್ಧ ಮಾದರಿಯನ್ನು ಬಿಟ್ಟು ಇನ್ನುಳಿದ ಪರೀಕ್ಷಾ ಪ್ರಕಾರಗಳನ್ನು ಮೌಲ್ಯಮಾಪನಕ್ಕೆ ಬಳಸಬಹುದಾಗಿದೆ. ನಾವು ಶೇಕಡಾ ಎಷ್ಟು ಪಠ್ಯಕ್ರಮವನ್ನು ಪೂರೈಸಿದ್ದೇವೆಯೊ ಅದಕ್ಕನುಗುಣವಾಗಿ ಪ್ರಶ್ನೆಪತ್ರಿಕೆಗಳ ಅಂಕ, ಪ್ರಶ್ನೆಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು. ಕೇವಲ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚುವ ಓಬಿರಾಯನ ಕಾಲದ ಪರೀಕ್ಷಾ ಪದ್ಧತಿಯನ್ನು ಬಿಟ್ಟು, ಪುಸ್ತಕಗಳನ್ನು ಉಪಯೋಗಿಸುವ (ಓಪನ್ ಬುಕ್) ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸುವುದು. ಅಥವಾ ಅಸೈನ್‌ಮೆಂಟುಗಳನ್ನು ಕೊಟ್ಟು, ಬರವಣಿಗೆಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡುವ ದಾರಿಗಳನ್ನು ಶೋಧಿಸಬೇಕಾಗಿದೆ. 

ವಿದ್ಯಾರ್ಥಿಗಳು ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಸಂಸ್ಕರಿಸಿ, ಚೆಂದದ ಬರಹದ ಮೂಲಕ ಪ್ರಾಜೆಕ್ಟ್ಗಳನ್ನು ಅಥವಾ ವಿಕಿಪಿಡಿಯಾಕ್ಕೆ ಲೇಖನಗಳನ್ನು ಸಿದ್ಧಪಡಿಸಲು ಹಚ್ಚಿ, ಅವುಗಳನ್ನು ಮೌಲ್ಯಮಾಪನ ಮಾಡುವುದು ಕೂಡಾ ಹೆಚ್ಚು ಉಪಯುಕ್ತ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಾಡುವ ಮೌಲ್ಯಮಾಪನದ ಮೇಲೆ ವಿಶ್ವಾಸ ಇಡಬೇಕಾಗುತ್ತದೆ. ಎಲ್ಲವನ್ನು ಕಳ್ಳ-ಪೊಲೀಸ್ ಆಟದಂತೆ ನೋಡಿದರೆ ಹೇಗೆ? ಒಟ್ಟಾರೆ ವಿದ್ಯಾರ್ಥಿಗಳಿಗೆ ಕೆಲಸ ಕೊಟ್ಟು ಕಲಿಸುವುದು, ಅವರ ಕೆಲಸವನ್ನು ಮೌಲ್ಯಮಾಪನ ಮಾಡುವುದು ಸಮಂಜಸ.

ಕಾಲೇಜು, ವಿವಿಗಳು ಶೈಕ್ಷಣಿಕ ತರಬೇತಿಗೆ ಹೆಚ್ಚು ಗಮನ ಕೊಟ್ಟು, ಕೋರ್ಸ್ಗಳು ಮುಗಿದನಂತರ ನಡೆಸುವ ಸೆಮಿಸ್ಟರ-ಪರೀಕ್ಷೆಯ ತೀವ್ರತೆ ಕಡಿಮೆ ಮಾಡುವುದು ಇನ್ನೊಂದು ಉಪಾಯ. ಅಂದರೆ ಪ್ರತಿ ಸೆಮಿಸ್ಟರ್ ಕೊನೆಗೆ ನಡೆಯುವ ಎಗ್ಜಿಟ್ ಪರೀಕ್ಷೆಗಳನ್ನು ಕಡಿಮೆ ಮಾಡಿ, ಎನ್ಟಿç ಪರೀಕ್ಷೆಗಳನ್ನು ತೀರ್ವಗೊಳಿಸುವುದು. ಈಗಾಗಲೆ ನಮ್ಮ ನೆಟ್/ಸೆಟ್ ಪರೀಕ್ಷೆಗಳು ನಮ್ಮ ಸ್ನಾತಕ್ಕೋತ್ತರ ಮೌಲ್ಯಮಾಪನವನ್ನು ಅಲ್ಲಗಳೆದಂತಿವೆ. ಹಾಗೂ ಉಪನ್ಯಾಸಕರ ಹುದ್ದೆಗೆ ನಡೆಸುವ ಪ್ರವೇಶ ಪರೀಕ್ಷೆಗಳು ನಾವು ಕಾಲೇಜು ವಿವಿಗಳಲ್ಲಿ ನಡೆಸುವ ಪರೀಕ್ಷೆಗಳ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಿವೆ. ಇಂತಹ ಸಂದರ್ಭದಲ್ಲಿ, ನಾವು ಕಲಿಕೆಗೆ ಹೆಚ್ಚು ಒತ್ತುಕೊಟ್ಟು, ಪರೀಕ್ಷೆಗಳನ್ನು ಇತರ ಪ್ರಾಧಿಕಾರಗಳಿಗೆ ಬಿಡುವುದು ಸಮಂಜಸ.    

ನನ್ನ ಒಟ್ಟು ಮಾತಿನ ತಾತ್ಪರ್ಯ ಇದು: ಕೊರೊನಾ ಕಾಲದ ಬಿಕ್ಕಟ್ಟಿನಲ್ಲಿ ನಾವು ಉನ್ನತ ಶಿಕ್ಷಣದ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದೇವೆ. ಇಲ್ಲಿಯ ಸಮಸ್ಯೆಗಳನ್ನು ಸಹಜ ಸ್ಥಿತಿಯ ಸಮಸ್ಯೆಗಳೆಂದು ಭಾವಿಸದೆ, ನಾವು ತುರ್ತು ಪರಿಸ್ಥಿತಿಯಲ್ಲಿ ಬಿಡಿಸುತ್ತಿರುವ ಸಮಸ್ಯೆಗಳೆಂದು ಪರಿಗಣಿಸಬೇಕು. ಕೊರೊನಾ ಮನುಷ್ಯ ಸಂಪರ್ಕದ ಸಮಸ್ಯೆಯಾಗಿರುವುದರಿಂದ, ದೂರದಿಂದ ವಿದ್ಯಾರ್ಥಿಗಳ ಕಲಿಕೆಯನ್ನು ತಂತ್ರಜ್ಞಾನದ ಉಪಯೋಗದ ಮೂಲಕ ಹೇಗೆ ಸಾಧ್ಯಗೊಳಿಸಬಹುದೆಂಬ ಹೊಸ ‘ದೂರ-ಶಿಕ್ಷಣದ’ ಸಾಧ್ಯತೆಗಳನ್ನು ಶೋಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮೂಲ ಶೈಕ್ಷಣಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ತಮ್ಮನ್ನು ತಾವು ಮರು-ಕಲಿಕೆ, ಶೈಕ್ಷಣಿಕವಾಗಿ ಮರುಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನೊಂದು ವಿಷಯವೆಂದರೆ ಪರೀಕ್ಷೆಯ ವ್ಯಸನದಿಂದ ಹೊರಗೆ ಬಂದು, ಕಲಿಕೆ ಸಾಧಿಸುವ ತರಬೇತಿಗೆ ಒತ್ತು ಕೊಡಬೇಕಿದೆ.

ಕೊನೆಯದಾಗಿ, ಹೊಸ ಸಾಮಾಜಿಕತೆ (ಸೋಶಿಯಲ್) ಉಂಟು ಮಾಡಿದ ಕೊರೊನಾ ಕಾಲ, ಸಮಾಜ ವಿಜ್ಞಾನಗಳು ಹಾಗೂ ಮಾನವಿಕಗಳು ಮನುಷ್ಯ ಸಂಬಂಧ, ಸಮಾಜಗಳನ್ನು ನೂತನವಾಗಿ ಅಧ್ಯಯನ ಮಾಡುವ ಸಾಧ್ಯತೆಗಳನ್ನು ಮುಂದಿಟ್ಟಿದೆ. ಮನುಷ್ಯ ಸ್ಪರ್ಶದ ಸಾಮಾಜಿಕ ಆಯಾಮ, ಚಲನಶೀಲತೆ, ಹೊಸ ರೂಪ ಪಡೆಯುತ್ತಿರುವ ಅಧಿಕಾರ ಶಕ್ತಿಗಳು, ಮನುಷ್ಯ-ಮನುಷ್ಯೇತರ ವಸ್ತುಗಳ ಸಂಬಂಧ, ಆಳ್ವಿಕೆಯ ಸ್ವರೂಪ ಇತ್ಯಾದಿಗಳ ಕುರಿತು ನಮ್ಮ ಸಂಶೋಧನೆಗಳ ದಿಕ್ಕು ಬದಲಾಗಬಹುದು. ಹಾಗೆಯೇ ಜೀವ ವಿಜ್ಞಾನಗಳು ‘ಜೀವ’ ಎಂಬ ಪರಿಕಲ್ಪನೆಯು ಮರುವ್ಯಾಖ್ಯಾನ ಮಾಡುವ ಸಾಧ್ಯತೆ ಉಂಟು. 

*ಲೇಖಕರು ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಶ್ ಅಧ್ಯಯನ ವಿಭಾಗದ ಮುಖ್ಯಸ್ಥರು.

 

Leave a Reply

Your email address will not be published.