ಕೊರೊನಾ ಕಾಲದ ಸಂಕಟಗಳು

ಇಂತಹ ಆಕಸ್ಮಿಕಗಳು ಎದುರಾದಾಗಲೇ ಪ್ರಭುತ್ವದ ಶಕ್ತಿಯನ್ನು ಅಳೆಯಲು ಸಾಧ್ಯ. ಭಾರತದ ಸಂದರ್ಭದಲ್ಲಿ ಸೋಲುಮುಖವೇ ಢಾಳಾಗಿ ಕಾಣಿಸುತ್ತಿರುವುದು ವಿಷಾದನೀಯ.\

ಕೊರೊನಾ ಸಾಂಕ್ರಾಮಿಕ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸಿದೆ. ಮನುಷ್ಯ ಸಂಬಂಧಗಳನ್ನು ಕುರಿತು ಮರುಚಿಂತನೆ ಮಾಡುವ ಹಾಗೆ ಮಾಡಿದೆ. ನಮ್ಮ ಧರ್ಮ ಮತ್ತು ಸಂಸ್ಕತಿಗಳನ್ನು ಮರುವಿಮರ್ಶೆಗೆ ಒಳಪಡಿಸಬೇಕಾಗಿದೆ. ನನ್ನನ್ನು ಚಿಂತನೆಗೆ ಹಚ್ಚಿದ ಕೆಲವು ಘಟನೆಗಳು ಹೀಗೆ ಯೋಚಿಸುವಂತೆ ಮಾಡಿವೆ. ಉತ್ತರ ಪ್ರದೇಶದಲ್ಲಿ ಕೊರೊನಾದಿಂದ ವೃದ್ಧರೊಬ್ಬರು ಮೃತಪಟ್ಟರು. ನ್ಯಾಯಾಧೀಶರಾಗಿದ್ದ ಅವರ ಮಗ ತಂದೆಯ ಶವವನ್ನು ಪಡೆಯಲು ಆಸ್ಪತ್ರೆಗೆ ಹೋಗಲು ಹಿಂಜರಿದರು. ಒತ್ತಾಯ ಮಾಡಿದಮೇಲೆ ಹಲವು ದಿನಗಳ ನಂತರ ತಮ್ಮ ಲಾಯರ್ ಒಬ್ಬರನ್ನು ಕಳಿಸಿ ಶವ ಪಡೆದು, ಅವರಿಂದಲೇ ಶವ ಸಂಸ್ಕಾರ ಮಾಡಿಸಿದರು. ಜನ್ಮತಃ ಪಡೆದುಕೊಂಡಿದ್ದ ಅಧಿಕಾರವನ್ನು ಇನ್ನೊಬ್ಬರಿಗೆ ಹೇಗೆ ನಿಯೋಜಿಸಿದರು? ಯಾವ ಧರ್ಮಶಾಸ್ತ್ರ ಇದನ್ನು ಒಪ್ಪುತ್ತದೆ? ಇನ್ನೊಂದು ಘಟನೆ ಮೈಸೂರಿನಲ್ಲಿ ನಡೆಯಿತು. ಹಿರಿಯರೊಬ್ಬರು ಕೊರೊನಾ ಪೀಡಿತರಾಗಿ ಹೋಮ್ ಕ್ವಾರಂಟೈನ್ ನಲ್ಲಿದ್ದರು. ಅವರ ಸ್ವಂತ ಮಗ ಮತ್ತು ಪತ್ನಿ ಬೇರೆ ಮನೆಗೆ ತೆರಳಿದರು. ಸರಿಯಾದ ಶುಶ್ರೂಷೆಯಿಲ್ಲದೆ, ಆಸರೆಯಿಲ್ಲದೆ ಅವರು ಸಾವನ್ನಪ್ಪಿದರೆನ್ನುವುದೇ ಸರಿ. ಆಗ ಮಗ ಮತ್ತು ಪತ್ನಿ ಶವವನ್ನು ಸಂಸ್ಕಾರ ಮಾಡುವುದಿರಲಿ ಆತನ ಮುಖ ನೋಡಲೂ ಸಹ ಬರಲಿಲ್ಲ. ಅಕ್ಕಪಕ್ಕದವರು ನಗರಪಾಲಿಕೆ ಸದಸ್ಯರಿಗೆ ಕರೆ ಮಾಡಿ ತಿಳಿಸಿದರು. ಸದಸ್ಯರು ಮೃತರ ಪತ್ನಿಗೆ ಫೋನ್ ಮಾಡಿ ಅಂತ್ಯಸಂಸ್ಕಾರಕ್ಕೆ ನಾವು ಜೊತೆಗಿದ್ದೇವೆ ಬನ್ನಿ ಎಂದು ಕರೆದರೆ, ಅವರು ನೀವೆ ಮಾಡಿಬಿಡಿ ಅಂದರು. ಅವರ ಬಳಿ ಹಣವಿದೆ, ಒಡವೆಯಿದೆ ಬನ್ನಿ ಎಂದು ಪುಸಲಾಯಿಸಿದರು. ಆಗಲೂ ಅವರು ಹಣ, ಒಡವೆ ಇದ್ದರೆ ತಂದುಕೊಡಿ, ಶವ ನೀವೆ ಸಂಸ್ಕಾರ ಮಾಡಿ ಮುಗಿಸಿಬಿಡಿ ಅಂದರು. ಕೆಲವರು ಕೊರೊನಾದಿಂದ ಮೃತಪಟ್ಟ ತಮ್ಮವರ ಅಂತ್ಯಕ್ರಿಯೆಯನ್ನು ನಡೆಸಲು ಹಿಂದೇಟು ಹಾಕಿ ಮುಖವನ್ನು ನೋಡಲು ಹೋಗದೆ ಆಂಬ್ಯುಲೆನ್ಸ್ ಚಾಲಕರಿಗೆ ಮಾಡಲು ಹೇಳಿ ಮರುದಿನ ಚಿತಾಭಸ್ಮವನ್ನು ತಂದುಕೊಡಿ ಎಂದು ಹೇಳುತ್ತಿದ್ದರಂತೆ. ಕರುಳು ಚುರುಕ್ ಅನ್ನುವ ಪ್ರಸಂಗಗಳು ಇವು.

ಇನ್ನು, ಶೋಷಿತರ ಸಂಕಟಗಳು ಹಲವಾರಿವೆ. ಅವುಗಳನ್ನು ಜಾತಿಯ ನೆಲೆಯಿಂದ ನೋಡುವ ಅಗತ್ಯವಿಲ್ಲ. ಸೋಂಕಿತರ ನೆಲೆಯಿಂದ ನೋಡುವುದೇ ಹೆಚ್ಚು ಸೂಕ್ತ. ಆದರೆ ಸಾವು ನೋವುಗಳು ಹೆಚ್ಚು ಬಡವರನ್ನೆ ಕಾಡಿವೆ, ಕೆಲವನ್ನು ಉದಾಹರಿಸಬಹುದು.

ವಲಸೆ/ಅಸಂಘಟಿತ ಕಾರ್ಮಿಕರು

ದೇಶದಲ್ಲಿ ಇವರ ಸಂಖ್ಯೆ 40 ಕೋಟಿ ಇದೆ ಎಂದು ಗೊತ್ತಾಗಿದೆ. ಅವರೆಲ್ಲರೂ ಬಡವರೆ. ನಗರ ಪ್ರದೇಶಗಳಲ್ಲಿ ಕೂಲಿ ಸಿಗುತ್ತದೆ ಎಂಬ ನಂಬಿಕೆಯಿಂದ ದೂರದೂರದಿಂದ ಬಂದು ತಾತ್ಕಾಲಿಕವಾಗಿ ನೆಲೆಯಾಗಿರುತ್ತಾರೆ. ಗಾರೆ ಕೆಲಸ ಮಾಡುವವರು, ಕಟ್ಟಡ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು; ಇವರೆಲ್ಲರೂ ಲಾಕ್ ಡೌನ್ ಘೋಷಣೆ ಮಾಡಿತ ಕ್ಷಣ ತಮ್ಮ ಊರಿಗೆ ಹೊರಡುವ ದೃಶ್ಯ ಕರುಣಾಜನಕವಾಗಿತ್ತು. ಮೊದಲನೆಯ ಅಲೆಯಲ್ಲಿ ಅವರಿಗೆ ಸುಳಿವೇ ಇರಲಿಲ್ಲ. ನೂರಾರು ಸಾವಿರಾರು ಮೈಲಿ ನಡೆದುಕೊಂಡೇ ಹೊರಟರು. ಕುಡಿಯಲು ನೀರು ಸಹ ಸಿಗದೆ ಪರಿತಪಿಸಿದರು. ಯಾರಾದರೂ ಅನ್ನ ದಾಸೋಹ ಮಾಡಿದರೆ ಉಂಟು ಇಲ್ಲದಿದ್ದರೆ ಇಲ್ಲ. ಕೆಲವರು ಬರಿಗಾಲಿನಲ್ಲಿ ನೂರಾರು ಮೈಲಿ ಊರು ತಲುಪಿದರೆ ಸಾಕೆಂದು ನಡೆದೇ ನಡೆದರು. ರಾತ್ರಿಯಾಗುತ್ತಿದ್ದಂತೆ ರೈಲು ಹಳಿಯಲ್ಲಿ ಮಲಗಿ ನಿದ್ರಿಸುತ್ತಿದ್ದವರು ಗೂಡ್ಸ್ ರೈಲು ಗಾಲಿಗಳಿಗೆ ಸಿಕ್ಕಿ ಸತ್ತ ಸುದ್ದಿಯನ್ನು ಓದಿ, ದೃಶ್ಯಗಳನ್ನು ನೋಡಿ ಮರುಗಿದೆವು. ಉಟ್ಟ ಬಟ್ಟೆ, ತೊಟ್ಟ ಚಪ್ಪಲಿ ಅವರ ಆಸ್ತಿ. ಅವೆಲ್ಲ ಚೆಲ್ಲಾಪಿಲ್ಲಿಯಾಗಿ ಹೆಣಗಳ ನಡುವೆ ಬಿದ್ದಿರುವುದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.

ಗಾರ್ಮೆಂಟ್ಸ್ ಕಾರ್ಮಿಕರು

ಇವರು ಎಲ್ಲ ಜಿಲ್ಲೆಗಳಲ್ಲೂ ಇದ್ದಾರೆ. ಇವರು ಬಡವರು ಮತ್ತು ಅಶಿಕ್ಷಿತರು ಅಥವಾ ಅರೆಶಿಕ್ಷಿತರು. ಅವರಿಗೆ ಪರ್ಯಾಯ ಮಾರ್ಗ ತಿಳಿದಿಲ್ಲ. ಮತ್ತೆ ಊರುಗಳಿಗೆ ತೆರಳಿದ್ದಾರೆ. ಅವರಿಗೆ ಯಾವ ಸರ್ಕಾರದ ಅಧಿಕೃತ ಸವಲತ್ತು ಇಲ್ಲ. ಖಾಯಿಲೆ ಬಂದರೆ ವೈದ್ಯಕೀಯ ಅನುಕೂಲಗಳಾಗಲಿ, ಹೆರಿಗೆ ರಜೆ ಇತ್ಯಾದಿ ಇಲ್ಲ. ದುಡಿದರೆ ಮಾತ್ರ ಉಣ್ಣಬೇಕಾದವರಿಗೆ ದೊಡ್ಡ ಹೊಡೆತ ಬಿದ್ದಿದೆ. ಮಕ್ಕಳ ವಿದ್ಯೆ ಮುಂತಾದುವು ದೂರವೇ ಉಳಿಯಿತು.

ಆಶಾ ಕಾರ್ಯಕರ್ತೆಯರು

ರಾಜ್ಯದಲ್ಲಿ ಅವರು 42000 ಜನರಿದ್ದಾರೆ ಎಂದು ತಿಳಿದುಬಂದಿದೆ. ಹಳ್ಳಿಗಳಲ್ಲಿ ಬಿಸಿಲು ಮಳೆಯನ್ನು ಲೆಕ್ಕಿಸದೆ ಮನೆ ಮನೆಗೆ ತೆರಳಿ ತಪಾಸಣೆ ನಡೆಸಿ ವರದಿ ಕೊಡುವುದು, ಮಾತ್ರೆಗಳನ್ನು ಹಂಚುವುದು ಮಾಡುತ್ತಾರೆ. ಅವರಿಗೆ ಯಾವುದೇ ರೀತಿಯ ಅನುಕೂಲಗಳನ್ನು ಕೊಡದೆ ಸರ್ಕಾರದ ಇಂಥಿಂಥ ಕೆಲಸ ಮಾಡಿ ಎಂದು ಹೇಳುತ್ತಾರೆ. ಅವರಿಗೆ ಕೊಡುವ ಸಂಭಾವನೆ ಕೇವಲ 6000 ರೂಪಾಯಿ. ಅದನ್ನೂ 3 ತಿಂಗಳು ಪಾವತಿಸಿಲ್ಲ ಅಂತ ಮುಷ್ಕರ ಹೂಡಿದರು. ಅವರಿಗೂ ಸಂಸಾರ ಇದೆ ಮಕ್ಕಳಿದ್ದಾರೆ ಅಂತ ಸರ್ಕಾರ ತಿಳಿದುಕೊಳ್ಳಲಿಲ್ಲ.

ಗುಡ್ಡಗಾಡು ಜನರು/ಗಿರಿಜನರು

ಹೆಚ್ಚಾಗಿ ಇವರು ಕೊಡಗು ಚಾಮರಾಜನಗರ ಜಿಲ್ಲೆಗಳಲ್ಲಿದ್ದಾರೆ. ದುರ್ಗಮ ಪ್ರದೇಶದಲ್ಲಿ ವಾಸಿಸುತ್ತಾರೆ. ಕತ್ತಲಾದಮೇಲೆ ಅವರು ಎಲ್ಲೂ ಸಂಚಾರ ಮಾಡುವುದಿಲ್ಲ. ಯಾಕೆಂದರೆ ಕಾಡಾನೆಗಳು ಮತ್ತು ವನ್ಯಮೃಗಗಳ ಕಾಟ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದರೆ 20 ಕಿ.ಮೀ ನಡೆದು ಹೋಗಬೇಕು. ಅಲ್ಲಿಗೆ ಆ್ಯಂಬುಲೆನ್ಸ್ ಕೂಡ ಹೋಗಲಾರದು. ಕಾರಣಕ್ಕೆ ಅವರು ಆಸ್ಪತ್ರೆಗಳಿಗೆ ಹೋಗುವುದೇ ಕಡಿಮೆ. ಅವರ ಸಾವುನೋವುಗಳು ಸರ್ಕಾರಿ ಕಡತಗಳಲ್ಲಿ ದಾಖಲಾಗುವುದೇ ಇಲ್ಲ.

ಬೀದಿಬದಿಯ ವ್ಯಾಪಾರಿಗಳು

ಇವರು ತಳ್ಳುಗಾಡಿಯಲ್ಲಿ ಒಂದು ಕಡೆ ನಿಂತು ಅಥವಾ ಬೀದಿಯಲ್ಲಿ ಸುತ್ತಾಡಿ ವ್ಯಾಪಾರ ಮಾಡುವವರು. ಸಮಯ ನಿರ್ಬಂಧ ಮಾಡಿದ್ದುದರಿಂದ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ಮಾಡುವುದಕ್ಕೆ ಆಗುತ್ತಿರಲಿಲ್ಲ. ಅರೆಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿತ್ತು. ಹಣ್ಣು ತರಕಾರಿಯವರಿಗೆ ಸ್ವಲ್ಪ ಅನುಕೂಲವಾಯಿತು. ಆದರೆ ಬೇರೆ ವಸ್ತುಗಳಿಗೆ ಬೇಡಿಕೆ ಸಮಯದಲ್ಲಿ ಇರಲಿಲ್ಲ, ಹಾಗಾಗಿ ಅವರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಯಿತು.

ಪೌರ ಕಾರ್ಮಿಕರು

ಕಸ ಸಂಗ್ರಹ, ವಿಂಗಡನೆ ಮತ್ತು ವಿಲೇವಾರಿ ಮಾಡುವುದು ಇವರ ಕೆಲಸ. ಒಂದು ಅನಾರೋಗ್ಯಕರ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇವರದು. ಇವರ ಕೈಗೆ ಗವಸು ಇರವುದಿಲ್ಲ, ಮಾಸ್ಕ್ ಹಾಕುವುದಿಲ್ಲ. ಸ್ಯಾನಿಟೈಸರ್ ಬಳಸುತ್ತಾರೋ ಇಲ್ಲವೋ ತಿಳಿಯದು. ಇವರ ಬಗ್ಗೆ ಕಾಳಜಿ ವಹಿಸುವವರು ಕಡಿಮೆ. ಸಾರ್ವಜನಿಕರು ಉಪಯೋಗಿಸಿದ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಅದಿರಲಿ ಸ್ಯಾನಿಟರಿ ಬ್ಯಾಗನ್ನು ಬೇರೆ ಮಾಡಿಕೊಡಿ ಎಂದು ಮೈಕಿನಲ್ಲಿ ಕೂಗಿ ಹೇಳಿದರೂ ಮಾಡುವುದಿಲ್ಲ. ಬೀದಿನಾಯಿಗಳು ಅವುಗಳನ್ನು ಕಚ್ಚಿ ರಸ್ತೆಯ ಮಧ್ಯೆ ಚೆಲ್ಲುತ್ತವೆ. ಅದನ್ನು ಬರಿಗೈಯಲ್ಲಿ ಇವರು ಗೋರುತ್ತಾರೆ. ಇವರ ಆರೋಗ್ಯವನ್ನು ವಿಚಾರಿಸುವವರು ಯಾರು? ಹೆಚ್ಚಾಗಿ ದಲಿತರಾದ ಇವರಿಗೆ ಜನರು ನೀರು ಕೊಡಲೂ ಸಹ ಹಿಂಜರಿಯುತ್ತಾರೆ. ಇವರು ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಇಂಥವರಿಗೆ ತಿಂಗಳಾನುಗಟ್ಟಲೆ ವೇತನ ಕೊಡದೆ ಸತಾಯಿಸುತ್ತಾರೆ. ನಮ್ಮ ನಾಗರಿಕ ಪ್ರಜ್ಞೆ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ಶವಾಗಾರದ ಕಾರ್ಮಿಕರು

ಇವರ ಸಂಕಟವಂತೂ ಅನಿರ್ವಚನೀಯ. ದಿವೊದರಲ್ಲಿ 18 ಗಂಟೆಗೂ ಹೆಚ್ಚು ಕೆಲಸ ಮಾಡಿದ್ದಾರೆ. ಸರತಿಯಲ್ಲಿ ನಿಂತ ಆ್ಯಂಬ್ಯುಲೆನ್ಸ್ ಗಳಿಂದ ಹೆಣಗಳು ಬರುತ್ತಲೇ ಇರುವಾಗ ಅಸಹಾಯಕರಾಗಿ ಒಂದಾದಮೇಲೊಂದರಂತೆ ವಿದ್ಯುತ್ ಒಲೆಯೊಳಗೆ ಹಾಕುವುದು. ಶವದ ವಾರಸುದಾರರ ಸಂಬಂಧಿಕರ ಅಸಹನೆಯ ಮಾತುಗಳನ್ನು ಸಹಿಸಿಕೊಳ್ಳುವುದು. ಪ್ರಭಾವಿಗಳಿಗೆ ಉತ್ತರ ಕೊಡುವುದು. ಬಹಳ ಕಡಿಮೆ ವೇತನಕ್ಕೆ ದುಡಿಯುವ ಇವರನ್ನು ಕೇಳುವವರಿರಲಿಲ್ಲ.

ಆಂಬ್ಯುಲೆನ್ಸ್ ಚಾಲಕರು

ತುಂಬಾ ರಿಸ್ಕ್ಗೆ ಒಡ್ಡಿಕೊಂಡವರು ಇವರು. ಮನೆಗೆ ಹೋದರೂ ಆಂಬ್ಯುಲೆನ್ಸ್ ನಲ್ಲಿಯೇ ಮಲಗಬೇಕಾದ ಪರಿಸ್ಥಿತಿ. ಹಗಲು ರಾತ್ರಿಯೆನ್ನದೆ ದುಡಿದ ವರ್ಗ ಇದು. ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಕೊಡುವುದಿಲ್ಲ. ಕೊಡುವ ರೂ.14500 ವೇತನವನ್ನೂ ಸರಿಯಾಗಿ ಪಾವತಿಸುವುದಿಲ್ಲವೆಂಬುದು ಅವರ ಗೋಳಾಗಿತ್ತು.

ವೈದ್ಯರು ಮತ್ತು ಶುಶ್ರೂಷಕರು

ಟ್ರೌಮಾ ಸೆಂಟರ್ ನಲ್ಲಿ ಕೆಲಸ ಮಾಡುವವರ ಸ್ಥಿತಿ ಚಿಂತಾಜನಕವಾದದ್ದು. ಪಿಪಿಇ ಕಿಟ್ ಧರಿಸಿ ಎರಡು ಮೂರು ಶಿಫ್ಟ್ ಗಳಲ್ಲಿ ವೈದ್ಯರು ಮತ್ತು ಶುಶ್ರೂಷಕರು ಕೆಲಸ ಮಾಡಿದ್ದಾರೆ. ಎಷ್ಟೋ ಮಹಿಳೆಯರು ಸಣ್ಣ ಮಕ್ಕಳನ್ನು ಮುಟ್ಟದೆ ಮನೆಯಲ್ಲಿ ಬೇರೆ ರೂಮಿನಲ್ಲಿದ್ದು ದೂರದಿಂದ ಮಕ್ಕಳ ಮಖ ನೋಡಿಕೊಂಡು ನೊಂದು ಅಸಹಾಯಕರಾಗಿ ತಮ್ಮ ವೃತ್ತಿಯನ್ನು ನಿಭಾಯಿಸಿದ್ದಾರೆ. ಇವರನ್ನು ಆಪತ್ಕಾಲದಲ್ಲಿ ಭೂಮಿಗಿಳಿದ ದೇವತೆಗಳು ಎಂದು ಕರೆಯಬೇಕು.

ತೃತೀಯ ಲಿಂಗಿಗಳು

ಭಿಕ್ಷಾಟನೆಯಿಂದಲೇ ಇವರ ಜೀವನ ಸಾಗುತ್ತದೆ. ಹೆಚ್ಚಾಗಿ ಸಂಚಾರ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುತ್ತಾರೆ. ಲಾಕ್ಡೌನ್ನಲ್ಲಿ ಓಡಾಟವೇ ಇರಲಿಲ್ಲವಾದ್ದರಿಂದ ಇವರ ಊಟಕ್ಕೆ ಕಲ್ಲು ಬಿದ್ದಿತ್ತು. ಅವರಲ್ಲಿ ಕೆಲವರು ಲೈಂಗಿಕ ಕಾರ್ಯಕರ್ತರು ಇದ್ದಾರೆ. ಆದರೆ ಕೊರೊನಾ ಸಮಯದಲ್ಲಿ ಅದೂ ಸಾಧ್ಯವಿರಲಿಲ್ಲ. ಇವರಿಗೆಲ್ಲ ಸರ್ಕಾರ ಈಗ ಪ್ಯಾಕೇಜ್ ಘೋಷಣೆ ಮಾಡಿದ್ದಾರೆÉ. ಚುನಾಣೆಯ ಕೆಲಸಗಳ ಕಾರಣ ಶಿಕ್ಷಕರಲ್ಲಿ ಹೆಚ್ಚು ಸಾವುಗಳು ಸಂಭವಿಸಿವೆ. ಕಲಾವಿದರು/ ಜಾನಪದ ಕಲಾವಿದರು ಕೆಲಸವಿಲ್ಲದೆ ಸಂಕಟಪಟ್ಟಿದ್ದಾರೆ.

ಅನಾಥರಾದ ಮಕ್ಕಳು

ಎಲ್ಲರಿಗಿಂತಲೂ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಅನಾಥರಾಗಿರುವ ಮಕ್ಕಳ ಸ್ಥಿತಿಯನ್ನು ನೋಡಲಾಗುವುದಿಲ್ಲ. ಅವರು ಯಾರ ಉಸ್ತುವಾರಿಯಲ್ಲಿರಬೇಕು? ಶಾಲೆಗೆ ಕಳಿಸುವವರು ಯಾರು. ಪಾಪ ನತದೃಷ್ಟ ಮಕ್ಕಳು ಅವರು. ಈಗ ತಿಂಗಳಿಗೆ ರೂ.3500 ಕೊಡಲು ಸರ್ಕಾರ ತೀರ್ಮಾನಿಸಿದೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಳ್ಳುವುದು ತುಂಬಲಾರದ ನಷ್ಟ. ಕೆಲವು ಮಠಗಳು ಅವರನ್ನು ಸಾಕಲು, ಶಿಕ್ಷಣ ಕೊಡಿಸಲು ಮುಂದೆ ಬಂದಿರುವುದು ಶ್ಲಾಘನೀಯ.

ಆಮ್ಲಜನಕದ ಪೂರೈಕೆಯ ಕೊರತೆಯಿಂದ ಚಾಮರಾಜನಗರದಲ್ಲಿ ಒಂದೇ ದಿನ 24 ಮಂದಿ ಸಾವಿಗೀಡಾದರು. ನರಕ ಸದೃಶವಾದ ದೃಶ್ಯವನ್ನು ನೋಡಲು ಆಗುತ್ತಿರಲಿಲ್ಲ. ಅದು ಆಡಳಿತದ ವೈಫಲ್ಯದಿಂದಾಯಿತು. ಒಂದು ಹಂತದಲ್ಲಿ ಸರ್ವೋಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಸೋಂಕಿನ ದಟ್ಟತೆ ಏರುತ್ತಿರುವ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಗಳಿಗಾಗಿ ಪರದಾಟ, ತೀವ್ರ ನಿಗಾ ಘಟಕಗಳಲ್ಲಿ ಹಾಸಿಗೆ ಸಿಗದಿರುವುದು, ವೆಂಟಿಲೇಟರ್ ಲಭ್ಯವಿಲ್ಲದಿರುವುದು ಇವೆಲ್ಲವೂ ಆಡಳಿತದ ವೈಫಲ್ಯಗಳೇ. ಇದು ಮಿತಿಮೀರಿದ ಭ್ರಷ್ಟಾಚಾರಕ್ಕೂ ಎಡೆಮಾಡಿಕೊಟ್ಟಿತು. ಖಾಸಗೀ ಆಸ್ಪತ್ರೆಗಳು ಎಗ್ಗಿಲ್ಲದೆ ರೋಗಿಗಳ ಶೋಷಣೆಗೆ ತೊಡಗಿದವು. ಒಬ್ಬ ಮಹಿಳೆ ತನ್ನ ಗಂಡನನ್ನು ಆಂಬ್ಯುಲೆನ್ಸ್ ನಲ್ಲಿ ಮಲಗಿಸಿಕೊಂಡು ಹಾಸಿಗೆಗಾಗಿ ಊರೆಲ್ಲ ಅಲೆದಾಡಿದ ಮೇಲೆ ಬೆಡ್ ಸಿಗದೆಯಿದ್ದಾಗ ಮುಖ್ಯಮಂತ್ರಿಯ ಮನೆಯ ಮುಂದೆ ಆಂಬ್ಯುಲೆನ್ಸ್ ನಿಲ್ಲಿಸಿ ಕಣ್ಣೀರು ಹಾಕುತ್ತಿದ್ದರು. ಕಾವಲುಪೋಲೀಸು ವಿಚಾರಣೆ ಮಾಡುವಷ್ಟರಲ್ಲಿ ಗಂಡನ ಪ್ರಾಣಹೋಯಿತು. ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮನೆಯಲ್ಲಿ ಕ್ವಾರಂಟೈನ್ ಮಾಡಿದವರ ಸಾವಿನ ಲೆಕ್ಕ 778 ಎಂದು ವರದಿಯಾಗಿದೆ. ಜನರಿಗೆ ಲಸಿಕೆ ಹಾಕುವ ವಿಷಯದಲ್ಲಿಯೂ ಸರ್ಕಾರದ ಅವ್ಯವಸ್ಥೆ ನಿರೂಪಿತವಾಯಿತು. ಅದನ್ನು ಹೆಚ್ಚಿಗೆ ವಿಸ್ತರಿಸುವ ಅಗತ್ಯವಿಲ್ಲವೆನಿಸುತ್ತದೆ.

ಚಾಮರಾಜನಗರ ಜಿಲ್ಲೆಯ ಒಂದು ಹಳ್ಳಿಯಲ್ಲಿ ನಾಲ್ಕು ಜನರಿರುವ ಒಂದು ಕುಟುಂಬವೇ ಆತ್ಮಹತ್ಯೆಗೆ ಶರಣಾಯಿತು. ಹಸಿವನ್ನು ತಾಳಲಾರದೆ ಮಾಡಿಕೊಂಡ ಕೃತ್ಯವಾಗಿತ್ತು ಅದು. ದುಡಿಮೆಯಿಲ್ಲದೆ ಹಸಿವಿನಿಂದ ಇಂಥಾ ಎಷ್ಟೊ ಘಟನೆಗಳು ನಡೆದುಹೋಗಿವೆ. ಆಸ್ಪತ್ರೆಗೆ ಪೂರ್ತ ಹಣ ತುಂಬಲಾರದೆ ಮೃತದೇಹವನ್ನು ಪಡೆಯಲಾರದ ಸ್ಥಿತಿಯನ್ನು ಅನೇಕರು ದೃಶ್ಯಮಾಧ್ಯಮದಲ್ಲಿ ಹೇಳಿಕೊಳ್ಳುವುದು ಸಾಮಾನ್ಯವಾಗಿತ್ತು. ಅಂತಹ ವಾರಸುದಾರರಿಲ್ಲದ ಶವಗಳ ಅಂತ್ಯ ಸಂಸ್ಕಾರವನ್ನು ದೇಶದಾದ್ಯಂತ ಕೆಲವು ಮುಸ್ಲಿಮ್ ಸಂಘಟನೆಗಳ ಯುವಕರು ನೆರವೇರಿಸಿದ್ದಾರೆ. ಸಾಮೂಹಿಕ ಅಂತ್ಯಕ್ರಿಯೆಗಳು ಬಹಳಷ್ಟು ಆಗಿವೆ. ಬೆಂಗಳೂರಿನ ತಾವರೆಕೆರೆ ಚಿತಾಗಾರದಲ್ಲಿ ಒಮ್ಮೆಲೆ 28 ಶವಗಳನ್ನು ಗುಡ್ಡೆ ಹಾಕಿ ಸುಟ್ಟಿದ್ದಾರೆ. ಚಿತಾಭಸ್ಮವನ್ನು ಪಡೆಯಲಾಗದ ಅನೇಕ ಕುಟುಂಬಗಳು, ಶವಗಳ ವಾರಸುದಾರರು ಅಸಹಾಯಕತೆಯಿಂದ ಕೈಚೆಲ್ಲಿದ್ದಾರೆ. ಅಂತಹ ಸಾವಿರಾರು ಭಸ್ಮ ಕಲಸಗಳನ್ನು ಸರ್ಕಾರವೇ ಶಾಸ್ತ್ರೋಕ್ತವಾಗಿ ನದಿಯಲ್ಲಿ ವಿಸರ್ಜಿಸಿದೆ.

ಉತ್ತರಪ್ರದೇಶ, ಬಿಹಾರ ರಾಜ್ಯಗಳಲ್ಲಿ ಹರಿದು ಹೋಗುವ ಗಂಗಾ, ಯಮುನಾ ನದಿಗಳಲ್ಲಿ ಹೆಣಗಳು ತೇಲುವುದು ಕೊರೊನಾ ದಟ್ಟಣೆಯ ಅವಧಿಯಲ್ಲಿ ಸಾಮಾನ್ಯವಾಗಿತ್ತು. ಅಲ್ಲಿನ ಸಾವುಗಳ ಪ್ರಮಾಣ ಊಹಿಸಲಸಾಧ್ಯ. ರಾಜ್ಯಗಳಲ್ಲಿ ಇರುವ ಆರ್ಥಿಕ ಅಸಮತೋಲನವೂ ಅದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕಟ್ಟಿಗೆಯ ದರ ಹೆಚ್ಚಾಗಿದ್ದರಿಂದ, ಸುಡಲು ಜಾಗವಿಲ್ಲದ್ದರಿಂದ, ಪೂಜಾರಿಯ ಶುಲ್ಕ ನೀಡಲು ಸಾಧ್ಯವಾಗದ್ದರಿಂದ ಬಡವರು ಹಾಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಸಾವಿನ ಪ್ರಮಾಣ ಹೆಚ್ಚಾಗಿದ್ದ ಬೇರೆ ಯಾವ ರಾಜ್ಯಗಳಲ್ಲೂ ಶವಗಳನ್ನು ನದಿಗೆ ಎಸೆಯುವ ದಾರುಣ ದೃಶ್ಯಗಳು ಕಂಡುಬರಲಿಲ್ಲ.

ಅಜ್ಞಾನ ಮತ್ತು ಮೌಢ್ಯದ ದರ್ಶನವೂ ಆಯಿತು. ಮೈಯೆಲ್ಲ ಸಗಣಿ ಬಳಿದುಕೊಂಡು, ಗೋವಿನ ಮೂತ್ರ ಕುಡಿದು ಇಮ್ಯುನಿಟಿ ಹೆಚ್ಚಿಸಿಕೊಂಡವರು ಕೆಲವರು. ಬಳ್ಳಾರಿಯ ಒಂದು ಗ್ರಾಮದಲ್ಲಿ ಸಾಮಾನ್ಯವಾಗಿ ಮಾರಿಹಬ್ಬಕ್ಕೂ ಮುಂಚೆ ಮಾಡುವ ಗೊರೆ ಎರಚುವುದು ಅಂದರೆ ಸಿದ್ಧಮಾಡಿದ ಅಡುಗೆಗಳ ಮಿಶ್ರಣವನ್ನು ಊರ ಸುತ್ತಲೂ ಚೆಲ್ಲುವುದು; ಅದನ್ನು ಕೊರೊನಾ ಮಾರಮ್ಮನ ಸಂತೃಪ್ತಿ ಪಡಿಸಲು ಮಾಡಿದ್ದಾರೆ. ಕೊರೊನಾ ಮಾರಮ್ಮನಿಗೆ ಕೋಳಿಗಳನ್ನು ಬಲಿ ನೀಡಿದವರೆಷ್ಟೋ. ರಾಯಬಾಗದ ಅಲಕನೂರಿನಲ್ಲಿ 21 ಹೋತಗಳನ್ನು ಅಮಾವಾಸ್ಯೆಯ ದಿನ ಬಲಿಕೊಡುತ್ತಾರೆಂಬ ಸುದ್ದಿಯೂ ಆಗಿತ್ತು. ಕೆಲವು ಶಾಸಕರು ಹೋಮ ಹವನಗಳಲ್ಲಿ ತಲ್ಲೀನರಾಗಿದ್ದರು. ಎಲ್ಲರೂ ತಮ್ಮ ಕರ್ಮಗಳನ್ನು ಸಮರ್ಥಿಸಿಕೊಳ್ಳುವವರೇ ಆಗಿದ್ದರು ಎಂಬುದನ್ನು ಹೇಳಬೇಕಾಗಿಲ್ಲವಷ್ಟೆ.

ನರೇಗಾ ಯೋಜನೆಯಲ್ಲಿ 72 ಲಕ್ಷ ನೋಂದಾಯಿತ ಕುಟುಂಬಗಳಿವೆಯಂತೆ. 2020-21 ರಲ್ಲಿ 14 ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡಿದ್ದಾರೆ. ಈಗ 1.68 ಕೋಟಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಂದರೆ ನಿರುದ್ಯೋಗದ ಅಗಾಧತೆಯನ್ನು ಅರ್ಥಮಾಡಿಕೊಳ್ಳಬಹುದು. ಬಹುಶಃ ಅವರೆಲ್ಲ ನಗರದಿಂದ ಹಿಂದಿರುಗಿರುವವರು.

ಕೋವಿಡ್ ನಿರ್ವಹಣೆ ವಿಷಯದಲ್ಲಿ ಮುಂಬೈ ನಗರಪಾಲಿಕೆ ಒಂದು ಮಾದರಿಯನ್ನು ತೋರಿಸಿಕೊಟ್ಟಿದೆ. ಇಕ್ಬಾಲ್ ಸಿಂಗ್ ಚಹಲ್ ಎಂಬ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಕಮಿಷನರ್ ಕೋವಿಡ್ ವಾರ್ ರೂಮ್ ಅನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಮೂಲಕ ಒಂದು ಬೃಹತ್ ನಗರವನ್ನು ಸಂಭವನೀಯ ಅಪಾರ ಸಾವುಗಳಿಂದ ಪಾರುಮಾಡಿದ್ದಾರೆ. ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿಆಮ್ಲಜನಕ ನರ್ಸ್ಗಳನ್ನು 15 ರೋಗಿಗಳಿಗೆ ಒಬ್ಬರಂತೆ ಮಾನಿಟರ್ ಮಾಡಲು ಬಿಟ್ಟು ಸಮಸ್ಯೆ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ.

ಒಟ್ಟಿನಲ್ಲಿ ಇಂತಹ ಆಕಸ್ಮಿಕಗಳು ಎದುರಾದಾಗಲೇ ಪ್ರಭುತ್ವದ ಶಕ್ತಿಯನ್ನು ಅಳೆಯಲು ಸಾಧ್ಯ. ಭಾರತದ ಸಂದರ್ಭದಲ್ಲಿ ಸೋಲುಮುಖವೇ ಢಾಳಾಗಿ ಕಾಣಿಸುತ್ತಿರುವುದು ವಿಷಾದನೀಯ.

Leave a Reply

Your email address will not be published.