ಕೊರೊನಾ ಜೊತೆಗೆ ಬದುಕುವ ಭರವಸೆ!

ಕೊರೋನ ಸೋಂಕಿಗೊಳಗಾಗಿ, ಮನೆಯಲ್ಲೇ ಕ್ವಾರಂಟೈನಾಗಿ ಇಂದು ಈ ಬರಹ ಮುಗಿಸಿದೆ. ಒಂದೊಮ್ಮೆ ಈ ಬರಹ ಪತ್ರಿಕೆಯಲ್ಲಿ ಪ್ರಕಟವಾದರೆ ನಿಮ್ಮೆಲ್ಲರೊಂದಿಗೆ ಓದಿಕೊಳ್ಳಲು ‘ನಾನಿರುವೆ’ ಎಂಬ ಭರವಸೆಯೊಂದಿಗೆ ಪತ್ರಿಕೆಗೆ ರವಾನಿಸುತ್ತಿದ್ದೇನೆ.

-ಕೆ.ಎಂ.ವೀರಮ್ಮ

ಮೊನ್ನೆ ವರಮಹಾಲಕ್ಷ್ಮೀ ಹಬ್ಬದ ದಿನ ನನ್ನ ತಂಗಿ ಮನೆಗೆ ಬಂದವಳೇ ಶಾರದಾದೇವಿ ದೇವಸ್ಥಾನಕ್ಕೆ ಹೋಗಿಬರೋಣ ಬಾ ಎಂದಳು. `ಅಯ್ಯೋ ತೀರ ಅವಶ್ಯಕತೆ ಇದ್ದಾಗಷ್ಟೇ ಹೊರಗೆ ಕಾಲಿಡಿ ಅಂತ ಬೆಳಗಿನಿಂದ ರಾತ್ರಿವರೆಗೂ ಹೊಡ್ಕೊತಾರೆ. ಮನೆಯಿಂದಲೇ ಕೈಮುಗಿದು ಪ್ರಾರ್ಥನೆ ಮಾಡಿದರಾಗಲ್ಲವೇ?’ ಎಂದೆ. ಅದಕ್ಕವಳು, ‘ಇರ್ಲಿ ಬಾ ನಿತೀಶ ನೀಟ್ ಎಕ್ಸಾಂ ಬರೆಯುವವನಿದ್ದಾನೆ, ಚೈತ್ರ (ನನ್ನ ಮಗಳು) ಎಂಡಿ ಎಂಟ್ರೆನ್ಸ್ ಎಕ್ಸಾಂ ಬರೆಯುವವಳಿದ್ದಾಳೆ, ಶಾರದಾದೇವಿಗೆ ಪೂಜೆ ಮಾಡಿಸಿಕೊಂಡು ಬಂದ್ರಾಯ್ತು’ ಎಂದಾಗ ಮ್ಯಾಚಿಂಗ್ ಮಾಸ್ಕ್ ಮುಸುಡಿಗೇರಿಸಿ ಹೊರಟೇಬಿಟ್ಟೆ.

ದೇವಸ್ಥಾನ ತಲುಪುತ್ತಿದ್ದಂತೆ ಬಾಗಿಲಲ್ಲೇ ನಿಂತ ಅರ್ಚಕರು `ತೆಂಗಿನಕಾಯಿ ಹೊರಗೇ ಒಡೆದುಕೊಂಡು ಬನ್ನಿ, ಅಂತರಕಾಯ್ದುಕೊಂಡು ನಿಧಾನವಾಗಿ ಬನ್ನಿ, ಮಾಸ್ಕ್ ಮೂಗಿನಿಂದ ಕೆಳಗೆ ಜಾರದಂತೆ ಭದ್ರವಾಗಿ ಬಿಗಿದುಕೊಳ್ಳಿ…’ ಅಂತ ಮಂತ್ರೋಚ್ಛಾರದ ಧಾಟಿಯಲ್ಲೇ ರಾಗವಾಗಿ ಹೇಳಿದರು. ಗರ್ಭಗುಡಿಯ ಮುಂದೆ ಕೈಜೋಡಿಸಿ ಮೂರಡಿಗೊಬ್ಬರಂತೆ ನಿಂತು ಆರತಿ ತೆಗೆದುಕೊಂಡೆವು. ‘ಮಕ್ಕಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬರುವಂತೆ ಅವರಿಗೆ ಹೆಚ್ಚಿನ ನೆನಪಿನಶಕ್ತಿಕೊಡು ತಾಯಿ’ ಅಂತ ಬೇಡಿಕೊಂಡು ಹೊರಡಬೇಕೆನ್ನುವಷ್ಟರಲ್ಲಿ ಅರ್ಚಕರು `ಅಮ್ಮಾ ತೀರ್ಥ ತಗೊಳ್ಳಿ’ ಅನ್ನಬೇಕೇ? ಹೊರಡುವ ಮೂಡಿನಲ್ಲಿದ್ದ ನಾನು ತೀರ್ಥ ಬೊಗಸೆಯಲ್ಹಿಡಿದು ಬಾಯಿಗೆ ಸುರಿದುಕೊಂಡೆ. ಅರೇ! ತೀರ್ಥ ಯಾಕೆ ಬಾಯಿಗೆ ಬೀಳಲೇ ಇಲ್ಲ ಎಂದು ಅಚ್ಚರಿಗೊಳ್ಳುವ ವೇಳೆಗೆ ಮಾಸ್ಕನ್ನು ಬಾಯಿಯಿಂದ ಕೆಳಗೆಳೆದುಕೊಳ್ಳದೇ ತೀರ್ಥ ತೆಗೆದುಕೊಂಡ ಅಚಾತುರ್ಯ ಅರಿವಿಗೆ ಬಂದಿತು! ಹಾಗೇ ಸುತ್ತಲೂ ಕಳ್ಳನೋಟ ಬೀರಿದೆ. ಪುಣ್ಯಕ್ಕೆ ಯಾರೂ ಗಮನಿಸಿದಂತೆ ತೋರಲಿಲ್ಲ.

ಮನೆಗೆ ವಾಪಾಸಾದ ನಂತರ ಹೀಗೇ ಮಾತನಾಡಿಕೊಳ್ಳುತ್ತಿರುವಾಗ ನನ್ನ ತಂಗಿ `ದೇವಸ್ಥಾನಗಳಲ್ಲಿ ಈಗ ತೀರ್ಥ ಕೊಡುವುದಿಲ್ಲ ಕೋವಿಡ್ ಕಾರಣದಿಂದ ಅಂತ ಕೇಳಿದ್ದೆ, ಆದರೂ ಇಲ್ಲಿ ತೀರ್ಥ ಕೊಟ್ಟರಲ್ಲವಾ?!’ ಎಂದಿದ್ದೇ ತಡ ನನ್ನ ಒಳಗೇ ಕಟ್ಟಿಕೊಂಡ ನಗು ಕಟ್ಟೆಯೊಡೆದು ಹೊರಬಂತು. ಏನಾಯ್ತೇ ಅಂತ ಆಶ್ಚರ್ಯಗೊಂಡು ಕೇಳಿದ ತಂಗಿಗೆ ನಾನು ತೀರ್ಥ ತೆಗೆದುಕೊಳ್ಳುವಾಗ ಮಾಡಿಕೊಂಡ ಎಡವಟ್ಟಿನ ಪ್ರಸಂಗ ಹೇಳುತ್ತಾ `ಸದ್ಯ ಯಾರೂ ನೋಡಲಿಲ್ಲ’ ಎಂದೆ. ಅವಳು ತಕ್ಷಣ ನಗುತ್ತಾ,  `ಹೌದಾ! ಹಾಗಾದರೆ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುತ್ತೆ ಬಿಡು’ ಎನ್ನಬೇಕೇ? `ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ’ ಎಂಬಂತಾಯ್ತಲ್ಲ ನನ್ನ ಪರಿಸ್ಥಿತಿ ಎಂದುಕೊಂಡು ತಕ್ಷಣ ಮತ್ತೊಮ್ಮೆ ಮನದಲ್ಲೇ ಶಾರದಾದೇವಿಗೆ `ಮಕ್ಕಳಿಗೆ ಒಂದಂಕ ಕಡಿಮೆ ಬಂದರೂ ಸರಿಯೇ ಸಿಸಿ ಕ್ಯಾಮರಾದೊಳಗಿನ ನನ್ನ ಎಡವಟ್ಟಿನ ಕ್ಷಣಗಳನ್ನು ಅಳಿಸಿಬಿಡು ತಾಯೇ’ ಅಂತ ಬೇಡಿಕೊಂಡೆ.

ಮಾಸ್ಕಿನ ಮಹಿಮೆ ಇಲ್ಲಿಗೇ ಮುಗಿಯಲಿಲ್ಲ. ಅಂದು ರಾತ್ರಿ ನಾನು ಮಲಗುವ ಕೋಣೆಯಿಂದ ಕುಡಿಯುವ ನೀರಿಗೋಸ್ಕರ ಅಡುಗೆ ಮನೆಗೆ ಹೋಗಲು ಡ್ರಾಯಿಂಗ್ ರೂಂಗೆ ಕಾಲಿಡುತ್ತಿದ್ದಂತೆ ಸೋಫಾದ ಮೇಲೆ ಅನಂತಶಯನನ ಶೈಲಿಯಲ್ಲಿ ಮಲಗಿದ ನನ್ನ ಮಗನ ಬಾಯಿಯ ಮೇಲಿರಬೇಕಾದ ಮಾಸ್ಕ್ ಹಣೆಯ ಮೇಲೆ ಎರಡೂ ಕಣ್ಣುಗಳನ್ನು ನೀಟಾಗಿ ಆವರಿಸಿ ಕುಳಿತದ್ದು ಕಾಣಿಸಿತು. ಅಲ್ಲೇ ದಿವಾನ್ ಕಾಟ್ ಮೇಲೆ ಓದುತ್ತಾ ಕುಳಿತ ಮಗಳಿಗೆ ಕೇಳಿದೆ, `ಇವನ್ಯಾಕೆ ಹೀಗೆ ಇಷ್ಟೊತ್ತಿನಲ್ಲಿ ಮಾಸ್ಕನ್ನು ಮೂಗು ಬಾಯಿ ಬಿಟ್ಟು ಕಣ್ಣಿಗೊರಗಿಸಿಕೊಂಡಿದ್ದಾನೆ?’. ಅದಕ್ಕವಳು, `ಕಣ್ಣಿಗೆ ಬೆಳಕು ಕುಕ್ಕುತ್ತೆ ಅಂತ ಅದನ್ನು ಹಾಕ್ಕೊಂಡು ನಾನು ಜಾಗ ಖಾಲಿ ಮಾಡೋದನ್ನು ಕಾಯುತ್ತಾ ಮಲಗಿದಾನೆ’ ಅಂದಳು. ಮಾಸ್ಕಿನ ಬಹೂಪಯೋಗವನ್ನು ಮನದಲ್ಲೇ ಮೆಚ್ಚಿಕೊಂಡೆ.

ಮೇಲಿನ ಹಾಸ್ಯ ಪ್ರಸಂಗದೊಂದಿಗೆ ಕೋವಿಡ್ ಸಂಬಂಧಿತ ನೋವಿನ ಪ್ರಸಂಗವನ್ನೂ ನಿಮ್ಮೊಂದಿಗೆ ಹೇಳಲೇಬೇಕಾಗಿದೆ. ಈ ಬರಹ ಪ್ರಾರಂಭಿಸಿದ ಸುಮಾರು ಎಂಟು ದಿನಗಳ ನಂತರ ಕೊರೋನ ಸೋಂಕಿಗೊಳಗಾಗಿ, ಮನೆಯಲ್ಲೇ ಕ್ವಾರಂಟೈನಾಗಿ ಇಂದು ಈ ಬರಹವನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಒಂದೊಮ್ಮೆ ಈ ಬರಹ ಪತ್ರಿಕೆಯಲ್ಲಿ ಪ್ರಕಟವಾದರೆ ನಿಮ್ಮೆಲ್ಲರೊಂದಿಗೆ ಓದಿಕೊಳ್ಳುವೆನೆಂಬ ಭರವಸೆಯೊಂದಿಗೆ ಪತ್ರಿಕೆಗೆ ರವಾನಿಸುತ್ತಿದ್ದೇನೆ.

ನನಗೆ ಲಕ್ಷಣಗಳು ಪ್ರಾರಂಭವಾಗಿ ಅನಾರೋಗ್ಯ ಕಾಡುತ್ತಿದ್ದರೂ ವೃತ್ತಿಯ ಒತ್ತಡದ ಕಾರಣದಿಂದ ಶಾಲೆಗೆ ಹೋಗಿಬರಲೇಬೇಕಿತ್ತು. ರಜೆ ಗುಜರಾಯಿಸಲೂ ಪುರಸೊತ್ತಿಲ್ಲದಂತೆ ಮಾಹಿತಿಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ಕಳುಹಿಸುವುದು, ಇಲಾಖೆಯ ಕಾರ್ಯಕ್ರಮಗಳ ನಿರ್ವಹಣೆಗೆ ಸಹೋದ್ಯೋಗಿಗಳೊಂದಿಗೆ ಚರ್ಚೆ ಇತ್ಯಾದಿ ಕಾರ್ಯಭಾರದಿಂದ, ಮನೆಯಲ್ಲಿಯ ಕೆಲಸ ಮುಂತಾದುವುಗಳಿಂದ ಆಯಾಸವಾಗುತ್ತಿತ್ತು. ಆದರೆ ನನಗಿರುವ ಅನಾರೋಗ್ಯ ಲಕ್ಷಣಗಳಿಂದ ಇದು ಕೊರೋನಾ ಸೋಂಕೆಂದು ನನ್ನ ಮನಸ್ಸಿಗೆ ದೃಢವಾಗಿ ಸ್ವಯಂನಿರ್ಭಂಧ ವಿಧಿಸಿಕೊಂಡು ಮಕ್ಕಳಿಂದ ಪ್ರತ್ಯೇಕವಿರಲು ಪ್ರಾರಂಭಿಸಿದೆ.

ಕೋವಿಡ್ ಟೆಸ್ಟ್ ಮಾಡಿಸಬೇಡ, ಅಗತ್ಯವಿಲ್ಲ ಸುಮ್ಮನೆ ಕಿರಿಕಿರಿ ಅನುಭವಿಸಬೇಕಾಗಬಹುದು ಎನ್ನುವ ಹಿತೈಷಿಗಳ ಸಲಹೆಯ ನಡುವೆಯೂ ಶಾಲೆಯ ಕರ್ತ್ಯವ್ಯದಿಂದ ಬಿಡುಗಡೆ ಪಡೆಯಲು ಅಧಿಕೃತವಾಗಿಯೇಬಿಡಲಿ ಎಂದು ಟೆಸ್ಟ್ಗೆ ಸರಕಾರಿ ಆಸ್ಪತ್ರೆಗೆ ಹೋದೆ. ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವುದೋ, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುವುದೋ ಎನ್ನುವ ಜಿಜ್ಞಾಸೆ ಉಂಟಾಯಿತು. ಅಂತಿಮವಾಗಿ ಮನೆಯಲ್ಲೇ ಇರುವುದೆಂದು ನಿರ್ಧರಿಸಿದೆ. ಇಲಾಖಾಧಿಕಾರಿಗಳಿಗೆ ವಿಷಯ ತಿಳಿಸುತ್ತಿದ್ದಂತೆ ‘ಶೀಘ್ರವಾಗಿ ಗುಣಮುಖರಾಗಿ’ ಎಂಬ ಹಾರೈಕೆಗಳೊಂದಿಗೆ  ಕಡ್ಡಾಯ ರಜೆ ದೊರಕಿಸಿಕೊಂಡಿದ್ದೇನೆ!

 

 

Leave a Reply

Your email address will not be published.