ಕೊರೊನಾ ನಂತರದ ಕಾಲದಲ್ಲಿ ಕರ್ನಾಟಕದ ಹಣಕಾಸು ಪರಿಸ್ಥಿತಿ ನಿಭಾಯಿಸುವುದು ಹೇಗೆ..?

2020-21ನೇ ವಿತ್ತವರ್ಷ ಕರ್ನಾಟಕದ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಲಿದೆ. ಆರೋಗ್ಯ ಸೇವೆಯಲ್ಲಿ ಸರ್ಕಾರದ ಖರ್ಚು ಹೆಚ್ಚಾದರೆ ತೆರಿಗೆ ಸಂಗ್ರಹ ಗಣನೀಯವಾಗಿ ಕಡಿಮೆಯಾಗಲಿದೆ. ಆದಾಯವೆಚ್ಚಗಳನ್ನು ಸರಿದೂಗಿಸಲು ಸರ್ಕಾರದ ಮುತ್ಸದ್ದಿತನ ಪ್ರದರ್ಶಿತವಾಗಬೇಕಿದೆ.

ಈ ಲೇಖನದಲ್ಲಿ ಕರ್ನಾಟಕದ 2020-21 ನೇ ವರ್ಷದ ಬಜೆಟ್ ವಿಶ್ಲೇಷಣೆ ಮಾಡುವ ಇರಾದೆಯಿತ್ತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಿದ ಆಯವ್ಯಯ ಪತ್ರ ಯಾವುದೇ ಹೊಸತನಕ್ಕೆ ಹೊರತಾಗಿ ಚರ್ವಿತಚರ್ವಣ ಅಂಶಗಳನ್ನೇ ಒಳಗೊಂಡಿರುವುದನ್ನು ಕಂಡು ಬಜೆಟ್ ಚರ್ಚೆಯನ್ನು ಮೊಟಕುಗೊಳಿಸಿ ಕೊರೊನಾ ನಂತರದ ಕರ್ನಾಟಕದ ಹಣಕಾಸು ಪರಿಸ್ಥಿತಿಯ ಬಗ್ಗೆ ಗಮನ ಹರಿಸಬೇಕೆಂದು ಬಯಸಿದೆ.

ಮೊದಲಿಗೆ ಯಡಿಯೂರಪ್ಪನವರು ಮಂಡಿಸಿದ ಮುಂಗಡಪತ್ರದ ಕೆಲವು ಮುಖ್ಯ ಘೋಷಣೆಗಳನ್ನು ಗಮನಿಸೋಣ.

 1. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯಡಿ ರೈತರಿಗೆ ವರ್ಷಕ್ಕೆ ಈಗ ನೀಡುತ್ತಿರುವ ರೂ.6,000 ಕ್ಕೆ ಜೊತೆಯಾಗಿ ಕರ್ನಾಟಕ ಸರ್ಕಾರ ರೂ.4,000 ಹೆಚ್ಚುವರಿಯಾಗಿ ನೀಡಲಿದೆ.
 2. ಉತ್ತರ ಕನ್ನಡ ಜಿಲ್ಲೆಯ ಬೇಲಿಕೇರಿ ಬಂದರನ್ನು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
 3. ಬೆಂಗಳೂರಿನ ಅಭಿವೃದ್ಧಿಗೆ ರೂ.8,772 ಕೋಟಿ ಅನುದಾನ. ರಾಜಧಾನಿಯ ರಸ್ತೆ, ರೈಲು, ವಾಹನ ಸಂಚಾರ ಮತ್ತಿತರ ಯೋಜನೆಗಳಿಗೆ ಒತ್ತಾಸೆ. ಆದರೆ ಪೆರಿಫೆರಲ್ ರಿಂಗ್ ರಸ್ತೆಗೆ ಯಾವುದೇ ಹೆಚ್ಚಿನ ಅನುದಾನವಿಲ್ಲ.
 4. ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಕಲಾಕ್ಷೇತ್ರಗಳ ನಿರ್ಮಾಣದ ಉದ್ದೇಶ.
 5. ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಘಟನೆ. ಬೆಂಗಳೂರಿನಲ್ಲಿ ‘ಗ್ಲೋಬಲ್ ಟೂರಿಸಮ್ ಇನ್ವೆಸ್ರ‍್ಸ್ ಮೀಟ್’ ಆಯೋಜಿಸುವ ಘೋಷಣೆ.
 6. ಬಜೆಟ್ ನಂತರದ ಘೋಷಣೆಯೊಂದರಲ್ಲಿ ನೀರಾವರಿಗೆ ರೂ.12,000 ಕೋಟಿ ಮೀಸಲು. ಆದರೆ ಇದಕ್ಕೆ ಬಜೆಟ್‌ನಲ್ಲಿ ಸೂಕ್ತ ಅನುದಾನವಿಲ್ಲ. ಜೊತೆಗೆ ಕೋಲಾರ-ಚಿಕ್ಕಬಳ್ಳಾಪುರ-ಬೆಂಗಳೂರು ಗ್ರಾಮೀಣ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಗೆ ಕೇವಲ ರೂ.1,500 ಕೋಟಿ ಮೀಸಲು.
 7. ಕೇಂದ್ರ ಸರ್ಕಾರದಿಂದ ರೈತರ ಬೆಳೆಗೆ ಬೆಂಬಲ ಬೆಲೆ ನೀಡಲು ಬೇಕಿರುವ ಅನುದಾನದಲ್ಲಿ ಖೋತಾ ಆಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಈ ಬಾಬ್ತಿಗೆ ಹೆಚ್ಚಿನ ಅನುದಾನ ನೀಡುವ ಆಶಯವಿತ್ತು. ಆದರೆ ಈ ಅವಕಾಶದ ನಿರುಪಯೋಗ.
 8. ಬಸವಕಲ್ಯಾಣದ ಅಭಿವೃದ್ಧಿಗೆ ರೂ.500 ಕೋಟಿ ಅನುದಾನ ಘೋಷಣೆ. ಈಗಾಗಲೇ ಬಸವಕಲ್ಯಾಣದಲ್ಲಿ ಅವೈಜ್ಞಾನಿಕವಾಗಿ ಹಾಗೂ ಸಂಸ್ಕೃತಿವಿಹೀನವಾಗಿ ಕಟ್ಟಿರುವ ಕಟ್ಟಡಗಳ ಸಾಲಿಗೆ ಇನ್ನಷ್ಟು ಕಟ್ಟಡಗಳ ಸೇರಿಕೆ.
 9. ಕೇಂದ್ರದಿದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನಲ್ಲಿ ಪ್ರತಿವರ್ಷ ರೂ.12,000 ಕೋಟಿಗಳಷ್ಟು ಖೋತಾ ಆಗಿರುವುದರ ಉಲ್ಲೇಖ. ಆದರೆ ಈ ಖೋತಾ ಸರಿದೂಗಿಸಲು ಯಾವುದೇ ಸಮರ್ಪಕ ನೀತಿ-ರೀತಿಗಳು ಇಲ್ಲದಿರುವಿಕೆ.
 10. ಪೆಟ್ರೋಲ್ ಹಾಗೂ ಡೀಸಲ್‌ಗಳ ಮೇಲಿನ ತೆರಿಗೆ ಹೇರಿಕೆಯ ಮುಖಾಂತರ ಪಕ್ಕದ ರಾಜ್ಯಗಳಿಗೆ ಸಮಾನಾಂತರ ಬೆಲೆ.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ 2020-21ರ ಮುಂಗಡಪತ್ರ ತಯಾರಿಸಲು ಎಂಟು ತಿಂಗಳುಗಳಿಗೂ ಹೆಚ್ಚಿನ ಸಮಯವಿತ್ತು. ಆದರೆ ಯಾವುದೇ ಹೊಸತನವಿಲ್ಲದೆ ಅಧಿಕಾರಿಗಳು ಸಿದ್ಧಪಡಿಸಿದ ಬಜೆಟ್ ಪತ್ರವನ್ನು ಓದಿದ್ದಾರೆ. ಇದನ್ನು ಬಿಟ್ಟು ಮುಖ್ಯಮಂತ್ರಿಗಳು ರಾಜ್ಯಕ್ಕೆ ಹಣಕಾಸು ಮಂತ್ರಿಯೊಬ್ಬರನ್ನು ನೇಮಿಸಿ ಕೆಲಸ ತೆಗೆಯಬಹುದಾಗಿತ್ತು. ಆ ಆವಕಾಶವನ್ನು ಕಳೆದ ಮುಖ್ಯಮಂತ್ರಿಗಳು ಮಂಡಿಸಿದ ನೀರಸ ಮುಂಗಡಪತ್ರದ ಕೆಲವು ಸ್ಥೂಲ ಅಂಶಗಳು ಈ ಕೆಳಕಂಡ ಕೋಷ್ಟಕದಲ್ಲಿವೆ.

ಟೇಬಲ್-1.  

         ವಾರ್ಷಿಕ ಹಣಕಾಸಿನ ಮೂಲಗಳು   ಮತ್ತು ಅನ್ವಯಿಸುವಿಕೆ/ಕ್ಯಾಪಿಟಲ್ ರೆವಿನ್ಯೂ

ವಿವರಗಳುಕೋಟಿ ರೂ ಗಳಲ್ಲಿ 2017-18 ಅಂತಿಮ 2018-19 ಅಂತಿಮ 2019-20ಬಜೆಟ್ ಅಂದಾಜು 2019-20ಸುಧಾರಿತ ಅಂದಾಜು 2020-21ಬಜೆಟ್ ಅಂದಾಜು
ಹಣಕಾಸಿನ ಮೂಲಗಳು          
ರೆವಿನ್ಯೂ ಆದಾಯ/ಜಮೆಗಳು 1,46,999 1,64,978 1,81,862 1,77255 1,79,919
ಸಾಲ ಮತ್ತು ಮುಂಗಡ ವಸೂಲಾತಿ 137 31 194 262 256
ಇತರೆ ಕ್ಯಾಪಿಟಲ್ ಜಮೆಗಳು 4 -5 80 80 40
ಸಾರ್ವಜನಿಕ ಸಾಲ/ಋಣ 16,852 30,831 38,636 38,251 41,312
ನಿವ್ವಳ ಸಾರ್ವಜನಿಕ ಲೆಕ್ಕದಲ್ಲಿ ಋಣ 14,872 7,876 2,901 267 4,534
ಒಟ್ಟು 1,78,865 2,03,712 2,23,680 2,16,085 2,26,068
ಹಣಕಾಸಿನ ಅನ್ವಯಿಸುವಿಕೆ          
ರೆವಿನ್ಯೂ ವೆಚ್ಚ 1,42,872 1,64,299 1,81,605 1,79,970 1,79,776
ಅಭಿವೃದ್ಧಿ /ಇತರೆ ಕಾರ್ಯಕ್ಕೆ ಸಾಲ 5,092 4,487 2,503 2,450 3,452
ಕ್ಯಾಪಿಟಲ್ ವೆಚ್ಚ 30,666 34,659 40,080 36,929 43,059
ಕ್ಯಾಶ್ ಬ್ಯಾಲೆನ್ಸ್ನಲ್ಲಿ ಹೆಚ್ಚಳ /ಕಡಿತ 623 266 -513 -269 -255
ಒಟ್ಟು 1,78,865 2,03,712 2,23,680 2,16,085 2,26,068

 

ಮೇಲಿನ ಟೇಬಲ್-1 ರಲ್ಲಿ ನೀಡಿರುವಂತೆ ವರ್ಷದಿಂದ ವರ್ಷಕ್ಕೆ ಕರ್ನಾಟಕದ ಬಜೆಟ್ ಗಾತ್ರ ಹೆಚ್ಚುತ್ತಿರುವಂತೆ ಬಿಂಬಿತವಾಗಿದೆ. ಆದರೆ ಇದು ನಿಜವಲ್ಲ. 2019-20ನೇ ವರ್ಷದಲ್ಲಿ ಕರ್ನಾಟಕದ ಸ್ವಂತ ತೆರಿಗೆ ಸಂಗ್ರಹವೇ ಕಡಿಮೆಯಾದರೆ, ಕೇಂದ್ರದಿದ ಬರುವ ತೆರಿಗೆ ಪಾಲಿನಲ್ಲಿ ಶೇಕಡಾ 22ರಷ್ಟು ಕಡಿತವಾಗಿದೆ. ಹೀಗಾಗಿ 2020-21ನೇ ವರ್ಷದಲ್ಲಿ ರೂ.20,000 ಕೋಟಿಗಳಷ್ಟು ಕಡಿತ ಮಾಡಿ ರಾಜಸ್ವ ಆದಾಯ ಕೇವಲ ರೂ.1,79,919 ಮಾತ್ರ ನೀಡಲಾಗಿದೆ. ಮಾರುಕಟ್ಟೆ ಸಾಲ/ದಾಯಿತ್ವಗಳು ರೂ.50,000 ಕೋಟಿಗಳಷ್ಟು ಇರಲಿದ್ದು 2020-21ನೇ ವರ್ಷದಲ್ಲಿ ಯಾವುದೇ ಆಯೋಜಿತ ಕ್ಯಾಪಿಟಲ್ ವೆಚ್ಚಗಳನ್ನು ಮಾಡುವಂತಿಲ್ಲ. ನಮೂದಿಸಿರುವ ರೂ.43,059 ಕೋಟಿ ಕ್ಯಾಪಿಟಲ್ ವೆಚ್ಚದಲ್ಲಿ ಸಾಲ ಮನ್ನಾಗೆ ನೀಡಿರುವ ಮೊತ್ತವೂ ಸೇರಲಾಗಿ 2020-21ರಲ್ಲಿ ಯಾವುದೇ ಕ್ಯಾಪಿಟಲ್ ಖರ್ಚನ್ನು ಮಾಡಲು ಸಾಧ್ಯವಾಗದೇ ಹೋಗಬಹುದು.

ಈಗ ಕರ್ನಾಟಕದ ಸರ್ಕಾರದ ಸಾಲ ಮತ್ತು ಬಡ್ಡಿಗಳ ಪ್ರಮಾಣಗಳನ್ನು ನೋಡೋಣ.

 

ಟೇಬಲ್-2.  

       ಒಟ್ಟು ಸಾಲಗಳ ಮತ್ತು ದಾಯಿತ್ವದ ನಿರೂಪಣೆ/ಕೋಟಿ ರೂ ಗಳಲ್ಲಿ

ಸಾಲ / ದಾಯಿತ್ವಗಳು 2017-18 ಅಂತಿಮ 2018-19 ಅಂತಿಮ 2019-20 ಬಜೆಟ್ ಅಂದಾಜು 2019-20 ಸುಧಾರಿತ ಅಂದಾಜು 2020-21 ಬಜೆಟ್ ಅಂದಾಜು
ಕೇಂದ್ರ ಸರ್ಕಾರಕ್ಕೆ ಬಾಕಿ 14,554 14,657 14,264 14,192 14,542
ಮುಕ್ತ ಮಾರುಕಟ್ಟೆ ಸಾಲಗಳು 1,25,707 1,57,890 2,02,148 1,98,017 2,40,490
ಸರ್ಕಾರಿ ಸ್ವಾಮ್ಯದ ಕಂಪನಿಗಳಿದ ಸಾಲಗಳು 22,873 21,418 20,302 19,972 18,461
ಒಟ್ಟು ಸಾರ್ವಜನಿಕ ಸಾಲಗಳು 1,63,135 1,93,966 2,36,715 2,32,181 2,73,494
ರಾಜ್ಯ ಭವಿಷ್ಯ ನಿಧಿಗಳಿಗೆ ದಾಯಿತ್ವ 27,729 31,,022 34,508 35,193 39,726
ಬಡ್ಡಿ ಸಹಿತ ಠೇವಣಿ / ಋಣಗಳು 382 836 385 257 157
ಬಡ್ಡಿ ರಹಿತ ಋಣಗಳು / ಮೀಸಲು ನಿಧಿಗಳು 41,809 44,550 37,209 40,778 39,726
ಓಟ್ಟು ದಾಯಿತ್ವಗಳು 69,922 76,409 72,104 76,230 78,265
ಸಾಲಗಳ / ದಾಯಿತ್ವದ ಒಟ್ಟು ಮೊತ್ತ 2,33,057 2,70,376 3,08,819 3,08,412 3,51,758

 

ಟೇಬಲ್-3.

    ಹೂಡಿಕೆ ಜಮೆಗಳು  ಮತ್ತು ಬಡ್ಡಿ/ ಕೋಟಿ ರೂಗಳಲ್ಲಿ.

  2017-18 ಅಂತಿಮ 2018-19 ಬಜೆಟ್ ಅಂದಾಜು 2018-19 ಸುಧಾರಿತ ಅಂದಾಜು 2019-20 ಬಜೆಟ್ ಅಂದಾಜು 2019-20 ಸುಧಾರಿತ ಅಂದಾಜು 2020-21 ಬಜೆಟ್ ಅಂದಾಜು
ಆಂತರಿಕ ಸಾಲ / ಋಣ 25,121 37,125 44,931 47,127 47,437 51,073
ಕೇಂದ್ರ ಸರ್ಕಾರದ ಸಾಲ/ಮುಂಗಡ 1,195 2,203 1,195 1,474 1,053 1,854
ಇತರೆ ಸಾಲಗಳು 137 204 204 275 263 256
ಬಡ್ಡಿ 13,929 16,208 15,595 19,060 18,641 22,216

 

ಮೇಲಿನ ಟೇಬಲ್‌ಗಳಲ್ಲಿ ನೀಡಿರುವಂತೆ ಕರ್ನಾಟಕ ಸರ್ಕಾರದ ಒಟ್ಟು ಸಾಲಗಳು ಮತ್ತು ದಾಯಿತ್ವ ಈ 2020-21ನೇ ವರ್ಷದಲ್ಲಿ ಮೂರೂವರೆ ಲಕ್ಷ ಕೋಟಿಗಳಿಗೂ ಮೀರಲಿದೆ. ಈ ವರ್ಷದ ಮಾರುಕಟ್ಟೆ ಮತ್ತು ಪಬ್ಲಿಕ್ ದಾಯಿತ್ವದ ಸಾಲಗಳನ್ನು ಸೇರಿಸಿದರೆ ರೂ.50,000 ಕೋಟಿಗೂ ಮಿಗಿಲಾಗುವ ಎಲ್ಲಾ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ 2020-21ನೇ ವರ್ಷದ ಬಡ್ಡಿಯ ಬಾಬ್ತು ರೂ.22,000 ಕೋಟಿಗೂ ಮಿಗಿಲಾಗಲಿದೆ. ಹಾಗಾಗಿ ಮೊಟ್ಟಮೊದಲಿಗೆ ಒಟ್ಟು ಬಜೆಟ್‌ನಲ್ಲಿ ಬಡ್ಡಿಯ ಪ್ರಮಾಣ ಶೇಕಡಾ 10ನ್ನು ಮೀರಲಿದೆ.

ಈಗ ರಾಜ್ಯ ಬಜೆಟ್‌ನಲ್ಲಿನ ರಾಜಸ್ವ ಮೂಲಗಳು ಹಾಗೂ ಅವುಗಳಿಂದಾಗುವ ರೆವಿನ್ಯೂ ಜಮೆಗಳನ್ನು ಗಮನಿಸೋಣ.

ಟೇಬಲ್-4.

ರಾಜಸ್ವ / ರೆವಿನ್ಯೂ ಜಮೆಗಳು / ಕೋಟಿ ರೂಗಳಲ್ಲಿ.

  2017-18 ಅಂತಿಮ 2018-19 ಬಜೆಟ್ ಅಂದಾಜು 2018-19 ಸುಧಾರಿತ ಅಂದಾಜು 2019-20 ಬಜೆಟ್ ಅಂದಾಜು 2019-20 ಸುಧಾರಿತ ಅಂದಾಜು 2020-21 ಬಜೆಟ್ ಅಂದಾಜು
ರಾಜ್ಯ ತೆರಿಗೆ ರಾಜಸ್ವ 93,376 1,03,444 1,06,312 1,18,992 1,28,107 1,28,107
ತೆರಿಗೆ ರಹಿತ ರಾಜಸ್ವ 6,476 8,163 7,287 8,055 7,767 7,767
ಕೇಂದ್ರ ತೆರಿಗೆಯಲ್ಲಿ ಪಾಲು 31,751 36,215 36,215 39,806 28,591 28,591
ಕೇಂದ್ರ ಸಹಾಯಾನುಧಾನ 15,394 14,942 16,082 15,008 15,454 15,454
ಒಟ್ಟು ರಾಜಸ್ವ ಜಮೆಗಳು 1,46,999 1,62,765 1,65,869 1,81,862 1,77,255 1,79,920

 

ಟೇಬಲ್-5. 

ರಾಜ್ಯದ ತೆರಿಗೆ ರಾಜಸ್ವದ ವಿಂಗಡಣೆ / 2018-19ರ ಬಜೆಟ್ ಅಂದಾಜಿನತೆ

ತೆರಿಗೆ ವಿಂಗಡಣೆ(ಕೋಟಿ ರೂಗಳಲ್ಲಿ) 2018-19 ಅಂತಿಮ 2018-19 ಸುಧಾರಿತ ಅಂದಾಜು 2019-20 ಬಜೆಟ್ ಅಂದಾಜು 2020-21 ಸುಧಾರಿತ ಅಂದಾಜು
ವಾಣಿಜ್ಯ ತೆರಿಗೆ 65,800 66,920 76,064 82,443
ರಾಜ್ಯ ಅಬಕಾರಿ 18,750 19,750 20,950 22,700
ಸ್ಟಾಂಪ್ಸ್ ಮತ್ತು ನೋಂದಣಿ 10,400 10,400 11,828 12,655
ವಾಹನ ತೆರಿಗೆ 6,600 6,656 7,100 7,115
ಇತರೆ 1,894 2,586 3,069 3,194
ಒಟ್ಟು 1,03,444 1,06,312 1,18,993 1,28,107

 

ಮೇಲಿನ ಟೇಬಲ್‌ಗಳಲ್ಲಿ ಮುಖ್ಯವಾಗಿ ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲಿನಲ್ಲಿ ಆಗಿರುವ ಖೋತಾ ಗಮನಕ್ಕೆ ಬರುತ್ತಿದೆ. ರೂ.12,000 ಕೋಟಿಗಳಿಗೂ ಮಿಗಿಲಾಗಿ ಒದಗಿಬಂದಿರುವ ಈ ಬಳುವಳಿಯಿಂದ ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ತುಂಬಲಾರದ ನಷ್ಟವಾಗಲಿದೆ. ಕೇಂದ್ರದ ಒಟ್ಟು ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು 4.70% ನಿಂದ 3.65% ಗೆ ಇಳಿತವಾಗಿದೆ. ಇದನ್ನು ಮುಖ್ಯಮಂತ್ರಿ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದರಾದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಮುನ್ಸೂಚನೆ ನೀಡಿಲ್ಲ. ಒಂದೆಡೆ ಕೇಂದ್ರದಿAದ ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆಯಾಗಿದ್ದರೆ ಕೊರೊನಾ ಭೀತಿಯಲ್ಲಿ 2019-20ನೇ ವರ್ಷದ ತೆರಿಗೆ ಸಂಗ್ರಹವೇ ಕಡಿಮೆಯಾಗುವ ಸಾಧ್ಯತೆಯಿದೆ. ಒಟ್ಟು ರಾಜಸ್ವ ಸಂಗ್ರಹದ ಗುರಿಯಲ್ಲಿ ಕಡಿಮೆಯೆಂದರೂ ರೂ.5,000 ಕೋಟಿಗಳಷ್ಟು ಕಡಿಮೆಯಾದರೆ ಅದಕ್ಕೆ ತಕ್ಕಂತೆ ರಾಜ್ಯದ ವೆಚ್ಚಗಳಲ್ಲಿಯೂ ಕಡಿತ ಮಾಡಬೇಕಾಗುತ್ತದೆ. ಆದ್ದರಿಂದ 2019-20ನೇ ವರ್ಷದ ಸುಧಾರಿತ ಅಂದಾಜಿಗಿತಲೂ ಸುಮಾರು 5% ರಷ್ಟು ಕಡಿಮೆ ಗಾತ್ರದ ಖರ್ಚುವೆಚ್ಚ ಅಂತಿಮವಾಗಲಿದೆ.

               ಇನ್ನು 2020-21ನೇ ವರ್ಷದ ಆರ್ಥಿಕ ಪರಿಸ್ಥಿತಿಯನ್ನು ಈ ಕೆಳಕಂಡ ಅಂಶಗಳಲ್ಲಿ ಗಮನಿಸೋಣ.

 • 2020-21 ನೇ ವರ್ಷದಲ್ಲಿ ಒಟ್ಟು ರಾಜ್ಯ ತೆರಿಗೆಯ ಸಂಗ್ರಹ ಗಣನೀಯವಾಗಿ ಕಡಿಮೆಯಾಗಲಿದೆ. ರೂ.1,28,107 ಕೋಟಿಗೆ ಬದಲಿಗೆ ರೂ.1,10,000 ಕೋಟಿ ತೆರಿಗೆ ಸಂಗ್ರಹವಾದರೆ ಹೆಚ್ಚು ಎಂದೇ ಹೇಳಬೇಕು. ಅದರಂತೆಯೇ ಕೇಂದ್ರ ಸರ್ಕಾರದ ರಾಜಸ್ವ ತೆರಿಗೆಯಲ್ಲಿಯೂ ಗಣನೀಯವಾಗಿ ಸಂಗ್ರಹ ಕಡಿಮೆಯಗಿ ರಾಜ್ಯದ ಪಾಲು ಸುಮಾರು ರೂ.20,000 ಕೋಟಿಗಳಷ್ಟು ಆಗಬಹುದು. ಒಟ್ಟಾರೆಯಗಿ ಈ ವರ್ಷದಲ್ಲಿ ಬಜೆಟ್ ಗಾತ್ರ ಕೇವಲ ರೂ.2,00,000 ಕೋಟಿಗಳಷ್ಟು ಆದರೂ ನಾವು ಅಚ್ಚರಿ ಪಡಬೇಕಿಲ್ಲ.
 • ರಾಜ್ಯ ಸರ್ಕಾರ ಮಾಡಲೇಬೇಕಾದ ಸಾಲಗಳಿಗೂ ಮಿತಿಯಿದೆ. ಈಗಾಗಲೇ ರೂ.51,073 ಕೋಟಿ ತೋರಿಸಲಾಗಿರುವ ಒಟ್ಟು ಸಾಲ/ದಾಯಿತ್ವಗಳನ್ನು ಇನ್ನೂ ಹೆಚ್ಚು ಮಾಡುವ ಸಾಧ್ಯತೆಗಳಿಲ್ಲ. ಆದರೆ ಈ ವರ್ಷ ಬಡ್ಡಿಯ ದರದಲ್ಲಿ ಇಳಿಕೆಯಾಗಿ ರಾಜ್ಯಕ್ಕೆ ಸ್ವಲ್ಪ ಲಾಭ ದಕ್ಕಲಿದೆ. ಈ ಕಾರಣದಿಂದ ಬಡ್ಡಿಯ ಮೊತ್ತ ರೂ.20,000 ಕೋಟಿಗಳಿಗೇ ನಿಲ್ಲಬಹುದು.
 • 2019-20ರಲ್ಲಿ ಕರ್ನಾಟಕಕ್ಕೆ ಕೇಂದ್ರದ ಸಹಾಯಧನದ ರೂಪದಲ್ಲಿ ರೂ.4,000 ಕೋಟಿ ಸಿಕ್ಕಿತ್ತು. ಈ ವರ್ಷದ ಕೇಂದ್ರ ಸರ್ಕಾರವೇ ಮುಗ್ಗಟ್ಟಿಗೆ ಸಿಲುಕಿರುವುದರ ಜೊತೆಗೆ ಅತಿವೃಷ್ಟಿ-ಅನಾವೃಷ್ಟಿ ಕಾರಣದಿಂದ ರಾಜ್ಯಕ್ಕೆ ಯಾವುದೇ ಸಹಾಯಧನ ದಕ್ಕದೇ ಹೋಗಬಹುದು.
 • ಕರ್ನಾಟಕ ಈಗಾಗಲೇ ಪೆಟ್ರೋಲ್ ಮತ್ತು ಡೀಸಲ್‌ಗಳ ಮೇಲಿನ ಸುಂಕ ಹೆಚ್ಚಿಸಿದೆ. ಇದು ಈಗ ಪಕ್ಕದ ರಾಜ್ಯಗಳ ಸಮಾನವಾಗಿ ಇರುವುದರಿಂದ ಇನ್ನೂ ಹೆಚ್ಚು ಮಾಡುವಂತಿಲ್ಲ. ವಾಹನ ತೆರಿಗೆ ಹಾಗೂ ಸ್ಟಾಂಪ್ಸ್ ಮತ್ತು ರಿಜಿಸ್ಟೆçÃಷನ್‌ಗಳನ್ನೂ ಹೆಚ್ಚಿಸುವಂತಿಲ್ಲ. ಏಪ್ರಿಲ್ ತಿಂಗಳ ಅಬಕಾರಿ ಸಂಗ್ರಹ ಸಂಪೂರ್ಣ ನಿಂತುಹೋಗಿದ್ದು ಮೇ ತಿಂಗಳ ಮೊದಲರ್ಧದಲ್ಲಿ ಕೂಡಾ ಕಡಿಮೆಯೇ ಇರಲಿದೆ. ಇನ್ನು ಕೇವಲ ವಾಣಿಜ್ಯ ತೆರಿಗೆಯಿಂದ ಯಾವ ಹೆಚ್ಚಿನ ಸಂಗ್ರಹ ನಿರೀಕ್ಷಿಸಲಾದೀತು..? 2020-21ರ ಈ ವರ್ಷದಲ್ಲಿ ರಾಜ್ಯದ ಮುಂದೆ ರಾಜಸ್ವ ಸಂಗ್ರಹದ ದೊಡ್ಡ ಸವಾಲೇ ನಿಂತಿದೆ.
 • ಬೆಂಗಳೂರಿನಲ್ಲಿ ಬಿಡಿಎ ನಿವೇಶನಗಳನ್ನು ಹಾಗೂ ಆಕ್ರಮಿತ ಜಾಗಗಳನ್ನು ಮಾರಾಟ ಮಾಡಲು ಸರ್ಕಾರ ಮುಂದೆ ಬಂದಿದೆ. ಅದೇ ರೀತಿಯಲ್ಲಿ ಅಕ್ರಮ-ಸಕ್ರಮದ ಜಾರಿ ಮಾಡಿ ಹೆಚ್ಚಿನ ಆದಾಯ ಗಳಿಸಲೂ ಕರ್ನಾಟಕ ಸರ್ಕಾರ ಯೋಚಿಸುತ್ತಿದೆ. ಆದರೆ ಇವೆಲ್ಲವೂ ವ್ಯಾಜ್ಯ ಮತ್ತು ವಿಳಂಬಕ್ಕೆ ಒಳಪಡಬಹುದು.
 • ರಾಜ್ಯ ಸರ್ಕಾರವು ಸರ್ಕಾರಿ ಉದ್ದಿಮೆಗಳಲ್ಲಿ ಹೂಡಿಕೆ ಹಿಂದೆಗೆತವನ್ನು ಪರಿಶೀಲಿಸಬಹುದು. ಕೇಂದ್ರ ಸರ್ಕಾರದ ರೀತಿಯಲ್ಲಿಯೇ ರಾಜ್ಯ ಸರ್ಕಾರವು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್, ಕರ್ನಾಟಕ ಸಿಲ್ಕ್ ಇಂಡಸ್ಟಿಸ್ ಲಿಮಿಟೆಡ್, ಕರ್ನಾಟಕ ವಿದ್ಯುತ್ ಕಾರ್ಖಾನೆ ಮತ್ತಿತರ ನಷ್ಟದಲ್ಲಿರುವ ಕಂಪನಿಗಳ ಶೇರು ಮಾರಾಟ ಪ್ರಕ್ರಿಯೆಯನ್ನು ಈ ವರ್ಷವೇ ಮಾಡಬಹುದು.
 • ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳಲ್ಲಿನ ಕೃಷಿ ಜಮೀನುಗಳನ್ನು ಯಾವುದೇ ತಕರಾರಿಲ್ಲದೆ ಆಟೋಮ್ಯಾಟಿಕ್ ರೂಟಿನಲ್ಲಿ ಕೃಷಿಯೇತರ ಜಮೀನಾಗಿ ಪರಿವರ್ತಿಸುವ ಮೂಲಕ ಸರ್ಕಾರ ಆದಾಯ ಸಂಗ್ರಹ ಮಾಡಬಹುದು. ಈ ಆಟೋಮ್ಯಾಟಿಕ್ ರೂಟ್ ಬಯಸುವವರು ಸರ್ಕಾರದ ಮಾರ್ಗದರ್ಶಿ ಮೌಲ್ಯದಷ್ಟು ಶುಲ್ಕ ಕಟ್ಟಿ ತಮ್ಮ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿತಗೊಳಿಸಬಹುದು. ಇದರಿಂದ ಸರ್ಕಾರಕ್ಕೆ ಸಹಸ್ರಾರು ಕೋಟಿಗಳ ಆದಾಯ ಸಂಗ್ರಹವಾಗುತ್ತದೆ.

ಈ 2020-21ನೇ ವಿತ್ತವರ್ಷ ಕರ್ನಾಟಕದ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಲಿದೆ. ಆರೋಗ್ಯ ಸೇವೆಯಲ್ಲಿ ಸರ್ಕಾರದ ಖರ್ಚು ಹೆಚ್ಚಾದರೆ ತೆರಿಗೆ ಸಂಗ್ರಹ ಗಣನೀಯವಾಗಿ ಕಡಿಮೆಯಾಗಲಿದೆ. ಈ ಆದಾಯ-ವೆಚ್ಚಗಳನ್ನು ಸರಿದೂಗಿಸಲು ಸರ್ಕಾರದ ಮುತ್ಸದ್ದಿತನ ಪ್ರದರ್ಶಿತವಾಗಬೇಕಿದೆ.

Leave a Reply

Your email address will not be published.