ಕೊರೊನಾ ನಿಯಂತ್ರಣ: ಚೀನಾದ ತುರ್ತು ಕ್ರಮಗಳು ಇತರೆಡೆ ಕಾರ್ಯಸಾಧು ಆಗಲಿಕ್ಕಿಲ್ಲ

ಕೆಲವೇ ವಾರಗಳ ಹಿಂದೆ ಕೊವಿಡ್-19 ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಚೀನಾದ ಆಸ್ಪತ್ರೆಗಳಲ್ಲಿ ಈಗ ಹಾಸಿಗೆಗಳು ಖಾಲಿ ಇವೆ. ಅನೇಕ ಪ್ರಾಯೋಗಿಕ ಔಷಧಿಗಳ ಸಂಶೋಧನೆಗೆ ಅರ್ಹ ರೋಗಿಗಳು ದೊರಕುತ್ತಿಲ್ಲ. ಕಳೆದ ಕೆಲವು ವಾರಗಳಲ್ಲಿ ಪ್ರತಿದಿನ ದಾಖಲಾಗುತ್ತಿದ್ದ ರೋಗಿಗಳ ಹೊಸ ಪ್ರಕರಣಗಳ ಸಂಖ್ಯೆ ವೇಗವಾಗಿ ಕುಸಿದಿದೆ.

ಇದು ಫೆಬ್ರವರಿ 28ರಂದು ಬಿಡುಗಡೆಯಾದ ವರದಿಯೊಂದರಲ್ಲಿ ಅಡಕವಾಗಿರುವ ಅತ್ಯಂತ ಸೋಜಿಗದ ಅಂಶ. ಇದನ್ನು ತಯಾರಿಸಿದ್ದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂö್ಯಎಚ್‌ಓ) ಮತ್ತು ಚೀನಾ ಸರ್ಕಾರ ಕೂಡಿ ರಚಿಸಿದ ಒಂದು ಜಂಟಿ ತಂಡ. ಇದರಲ್ಲಿ ಹದಿಮೂರು ಜನ ವಿದೇಶಿಯರು ಮತ್ತು ಹನ್ನೆರಡು ಜನ ಚೀನಿ ವಿಜ್ಞಾನಿಗಳು ಇದ್ದರು. ಅವರು ಚೀನಾದ ಐದು ನಗರಗಳಿಗೆ ಭೇಟಿ ನೀಡಿ ಅಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಸ್ಥಿತಿ ಹೇಗಿದೆ ಮತ್ತು ಆ ದೇಶದ ಪರಿಹಾರ ಕ್ರಮಗಳ ಪ್ರಭಾವ ಎಂಥದು ಎಂಬುದನ್ನು ಅಧ್ಯಯನ ಮಾಡಿದರು. ತಾವು ಕಂಡುಕೊಂಡ ವಾಸ್ತವಾಂಶಗಳಿಂದ ತಂಡದ ಅನೇಕ ವಿಜ್ಞಾನಿಗಳು ವಿಸ್ಮಯಗೊಂಡರು. ತಂಡದ ಸದಸ್ಯರಾಗಿದ್ದ ರಾಬರ್ಟ್ ಕಾಚ್ ಸಂಸ್ಥೆಯ ಟಿಮ್ ಎಕ್‌ಮನ್‌ರವರು “ಅವರು ನೀಡುವ ಅಂಕಿ-ಸಂಖ್ಯೆಗಳ ಮಾಹಿತಿಗಳು ನಿಜವಾಗಿರುವುದು ಸಾಧ್ಯವೇ ಇಲ್ಲ ಎಂದು ನಾನು ಮೊದಲು ಭಾವಿಸಿದ್ದೆ” ಎಂದು ತಮ್ಮ ಆಶ್ಚರ್ಯವನ್ನು ಹೊರಗೆಡವಿದರು. ಯಾವ ಹಿಂಜರಿಕೆಯೂ ಇಲ್ಲದೆ “ಈ ಹೊಸ ಶ್ವಾಸಾಂಗಗಳ ರೋಗಾಣುವಿನ ವೇಗವಾದ ಪ್ರರಸಣೆಯನ್ನು ನಿಯಂತ್ರಿಸುವಲ್ಲಿ ಚೀನಾ ತೆಗೆದುಕೊಂಡ ದಿಟ್ಟ ಕ್ರಮಗಳಿಂದಾಗಿ ಈ ಮಾರಣಾಂತಿಕ ಸಾಂಕ್ರಾಮಿಕ ರೋಗವು ವೇಗವಾಗಿ ಹಬ್ಬುತ್ತಿದ್ದ ಪ್ರಕ್ರಿಯೆಯನ್ನೇ ಬದಲಾಯಿಸಲಾಗಿದೆ” ಎಂದು ಹೇಳುವ ವರದಿಯು ಮುಂದುವರೆದು “ಚೀನಾದಾದ್ಯಂತ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿವೆ ಎಂಬುದು ಸತ್ಯ” ಎನ್ನುತ್ತದೆ.

ಚೀನಾದ ಯಶಸ್ಸಿನಿಂದ ಜಗತ್ತು ಪಾಠಗಳನ್ನು ಸ್ವೀಕರಿಸಬಹುದೇ, ಒಂದು ನಿರಂಕುಶ ಸರ್ಕಾರವು ಹೇರುವಂತಹ ಭಾರೀ ದಿಗ್ಬಂಧನಗಳು, ವಿದ್ಯುನ್ಮಾನ ಬೇಹುಗಾರಿಕಾ ಮೇಲ್ವಿಚಾರಣೆಗಳು ಉಳಿದ ದೇಶಗಳಲ್ಲಿ ಕೆಲಸ ಮಾಡಬಹುದೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. “ಇದೇ ಕೆಲಸದಲ್ಲಿ ಇಪ್ಪತ್ತು ಮೂವತ್ತು ವರ್ಷಗಳ ಕಾಲ ಕೆಲಸ ಮಾಡಿದ ಮೇಲೆ ‘ಈ ವಿಧಾನಗಳಿಂದ ಗಂಭೀರ ಬದಲಾವಣೆಗಳಾಗುತ್ತವಲ್ಲ’ ಅನಿಸುತ್ತದೆ” ಎನ್ನುತ್ತಾರೆ ಬ್ರೂಸ್ ಏಯ್ಲ್ವರ್ಡ್. ಕೆನಡಾದವರಾದ ಅವರು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಶೇಷ ತಜ್ಞರಾಗಿದ್ದು ಮೇಲೆ ಹೇಳಿದ ಅಂತರರಾಷ್ಟಿಯ ತಂಡದ ಮುಖ್ಯಸ್ಥರಾಗಿದ್ದರು. ತಮ್ಮ ತಂಡದ ವರದಿಯ ಅಂಶಗಳ ಕುರಿತು ಬೀಜಿಂಗ್ ಮತ್ತು ಜಿನೀವಾ ನಗರಗಳಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡುವಾಗ ಅವರು ಮೇಲೆ ಹೇಳಿದ ಅಂಶಗಳನ್ನು ಪ್ರಸ್ತಾಪಿಸಿದ್ದರು. “ಈ ಆಕ್ರಮಣಕಾರಿ ಪ್ರತಿಕ್ರಿಯೆಯಿಂದಾಗಿಯೇ ಲಕ್ಷಾಂತರ ಜನ ಚೀನಿಯರಿಗೆ ಕೋವಿಡ್-19 ಸೋಂಕು ಹರಡುವುದು ತಪ್ಪಿತು” ಎಂಬುದು ಅವರ ಅಭಿಪ್ರಾಯ.

ಲಂಡನ್‌ನ ಇಂಪೀರಿಯಲ್ ಕಾಲೇಜ್‌ನಲ್ಲಿ ಸಾಂಕ್ರಾಮಿಕ ರೋಗ ತಜ್ಞರಾಗಿರುವ ಸ್ಟೀವನ್ ರಿಲೆ ಅವರು, “ಕೋವಿಡ್-19ಕ್ಕೆ ತಮ್ಮ ಪ್ರತಿಕ್ರಿಯೆ ಏನಿರಬೇಕೆಂದು ಈ ಹೊತ್ತು ನಿರ್ಧರಿಸಬೇಕಾದ ಎಲ್ಲ ದೇಶಗಳಿಗೂ ಈ ವರದಿಯು ಕಷ್ಟವಾದ ಪ್ರಶ್ನೆಗಳನ್ನು ಮುಂದಿಡುತ್ತದೆ” ಎನ್ನುತ್ತಾರೆ. ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಆರೋಗ್ಯ ಕಾನೂನನ್ನು ಅಧ್ಯಯನ ಮಾಡುತ್ತಿರುವ ಲಾರೆನ್ಸ್ ಗೋಟ್ಸಿನ್‌ರವರು, “ನಮ್ಮ ಜಂಟಿ ಪರೀಕ್ಷಾ ತಂಡದ ಭೇಟಿಯು ಅತ್ಯಂತ ಫಲಪ್ರದವಾಗಿತ್ತು ಮತ್ತು ಚೀನಾದ ಮುಖ್ಯಭಾಗದಲ್ಲಿ ಹಾಗೂ ಇಡೀ ವಿಶ್ವದಲ್ಲಿ ಈ ವೈರಸ್ ಹರಡದಂತೆ ಚೀನಾ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಇದೊಂದು ಅನನ್ಯವಾದ ಒಳನೋಟವನ್ನು ನೀಡಿತು” ಎನ್ನುತ್ತಾರೆ. ಅದೇ ಸಮಯದಲ್ಲಿ ಈ ಮಾದರಿಯನ್ನು ಬೇರೆ ಕಡೆ ಅನ್ವಯಿಸುವುದರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. “ಇಂತಹ ವಿಪರೀತವಾದ ಕ್ರಮಗಳನ್ನು ಜಾರಿಗೆ ತರುವುದರ ಬಗ್ಗೆ ಅನೇಕ ದೇಶಗಳಿಗೆ ಇರುವ ಹಿಂಜರಿಕೆಗೆ ಬಹಳ ಮುಖ್ಯವಾದ ಕಾರಣಗಳಿವೆ.”

ಇದಲ್ಲದೆ ಒಂದಲ್ಲ ಒಂದು ದಿನ ಚೀನಾ ಅನಿವಾರ್ಯವಾಗಿ ತನ್ನ ಬಿಗಿಯಾದ ನಿಯಂತ್ರಣ ಕ್ರಮಗಳಲ್ಲಿ ಕೆಲವನ್ನಾದರೂ ಹಿಂತೆಗೆದುಕೊಂಡು ಆರ್ಥಿಕತೆಯನ್ನು ಪುನರಾರಂಭಿಸಿದಾಗ ಈ ಒಂದು ಸಾರ್ಸ್-ಸಿಓವಿ-2 ಎಂಬ ವೈರಸ್ ಹೇಗೆ ವರ್ತಿಸಬಹುದು ಎಂಬುದರ ಬಗ್ಗೆ ನಿರ್ದಿಷ್ಟವಾಗಿ ಏನನ್ನು ಹೇಳುವುದೂ ಸಾಧ್ಯವಿಲ್ಲ. ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚಾಗಬಹುದು ಸಹ.

ಈ ಸೋಂಕು ಒಂದು ಖಂಡಾಂತರ ಸಾಂಕ್ರಾಮಿಕ ರೋಗ ಎಂದು ಅನೇಕ ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯ ಪಡುತ್ತಿರುವಾಗ ಈ ವರದಿ ಬಂದಿದೆ. ಕಳೆದ ವಾರದಲ್ಲಿಯೇ ರೋಗ ಹರಡಿರುವ ದೇಶಗಳ ಸಂಖ್ಯೆಯು 29 ರಿಂದ 61ಕ್ಕೆ ಜಿಗಿದಿದೆ.

ಯಾತ್ರಿಕರಿಗೆ ಅಥವಾ ಅವರಿಗೆ ಸಂಬಂಧಿಸಿದವರಿಗೆ ಮಾತ್ರ ಈ ರೋಗದ ಪ್ರಕರಣಗಳು ಸೀಮಿತವಾಗಿಲ್ಲ, ಈಗಾಗಲೇ ವೈರಾಣುವು ಸಮುದಾಯಗಳೊಳಗೇ ಹರಡಿಬಿಟ್ಟಿದೆ ಎಂಬುದನ್ನು ಅನೇಕ ದೇಶಗಳು ಕಂಡುಕೊಳ್ಳುತ್ತಿದೆ ಮತ್ತು ರೋಗಿಗಳ ಸಂಖ್ಯೆ ವೇಗವಾಗಿ ಸ್ಫೋಟಗೊಳ್ಳುತ್ತಿದೆ.

ಆದರೆ ಇದಕ್ಕೆ ವಿರುದ್ಧವಾದ ವಿದ್ಯಮಾನವು ಚೀನಾದಲ್ಲಿ ಕಂಡುಬರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾದ ಜಂಟಿ ಕಾರ್ಯಪಡೆಯ ಮುಂಚೂಣಿ ತಂಡವು ಫೆ಼ಬ್ರವರಿ 10ರಂದು ತನ್ನ ಕೆಲಸವನ್ನು ಆರಂಭ ಮಾಡಿದಾಗ 2478 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಎರಡು ವಾರಗಳ ನಂತರ ವಿದೇಶಿ ತಜ್ಞರು ತಮ್ಮ ನಾಡಿಗೆ ಹಿಂತಿರುಗಲು ಸಜ್ಜಾದಾಗ ಆ ಸಂಖ್ಯೆ 409ಕ್ಕೆ ಕುಸಿದಿತ್ತು. (ಈ ಲೇಖನ ಸಿದ್ಧಪಡಿಸುವಾಗ ಚೀನಾ ವರದಿ ಮಾಡಿರುವ ಹೊಸ ಪ್ರಕರಣಗಳು 206, ಆದರೆ ಜಗತ್ತಿನ ಉಳಿದ ಭಾಗಗಳಲ್ಲಿ ಅದರ ಒಂಭತ್ತರಷ್ಟು ಪ್ರಕರಣಗಳ ಸಂಖ್ಯೆ ವರದಿಯಾಗಿದೆ). ವರದಿಯು ಹೇಳುವ ಪ್ರಕಾರ ಚೀನಾದಲ್ಲಿ ಈ ಸಾಂಕ್ರಾಮಿಕ ರೋಗವು ಪ್ರಕೋಪಾವಸ್ಥೆಯಲ್ಲಿದ್ದದ್ದು ಜನವರಿ ತಿಂಗಳ ಕೊನೆಯಲ್ಲಿ.

ಮಹತ್ವಾಕಾಂಕ್ಷಿ, ಚುರುಕು ಮತ್ತು ಆಕ್ರಮಣಶೀಲ

ತಂಡವು ತನ್ನ ಕೆಲಸವನ್ನು ಬೀಜಿಂಗ್ ನಗರದಲ್ಲಿ ಆರಂಭಿಸಿತು. ನಂತರ ಎರಡು ಗುಂಪುಗಳಾಗಿ ವಿಭಜಿತವಾಗಿ ಒಟ್ಟಾರೆ ಶೆಂಜೆ಼ನ್, ಗುಯಾಂಗ್ ಜೌ಼, ಚೆಂಗ್‌ಡು ಮತ್ತು ಅತ್ಯಂತ ಸೋಂಕು ಪೀಡಿತ ಪ್ರದೇಶವಾದ ವುಹಾನ್‌ಗೆ ಭೇಟಿ ನೀಡಲಾಯಿತು. ತಂಡಗಳು ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ, ಕಂಪೆನಿಗಳಿಗೆ, ಜೀವಂತ ಪ್ರಾಣಿಗಳ ಮಾರುಕಟ್ಟೆಗಳಿಗೆ, ರೈಲ್ವೇ ನಿಲ್ದಾಣಗಳಿಗೆ ಮತ್ತು ಸ್ಥಳೀಯ ಸರ್ಕಾರಗಳ ಕಛೇರಿಗಳಿಗೆ ಭೇಟಿ ನೀಡಿದವು. ಏಯ್ಲ್ವಾರ್ಡ್ ಹೇಳುತ್ತಾರೆ, “ನಾವು ಯಾರೊಡನೆ ಮಾತನಾಡಿದರೂ ಅವರಲ್ಲಿ ಒಂದು ಜವಾಬ್ದಾರಿ ಪ್ರಜ್ಞೆಯನ್ನು ಸಾಮೂಹಿಕ ಕಾರ್ಯೋನ್ಮುಖತೆಯನ್ನು ಕಂಡೆವು ಮತ್ತು ಕಾರ್ಯನಿರ್ವಹಣೆಯಲ್ಲಿ ಒಂದು ಸಮರೋಪಾದಿಯ ಸಿದ್ಧತೆ ವ್ಯಕ್ತವಾಗುತ್ತಿದೆ.”

ಚೀನಾದ ವಿಜ್ಞಾನಿಗಳು ಸಂಗ್ರಹಿಸಿದ್ದ ಬೃಹತ್ ದತ್ತಾಂಶವನ್ನು ತಂಡವು ಪುನರಾವಲೋಕಿಸಿತು. (ಇಂದಿಗೂ ಚೀನಾ ದೇಶವು ಜಗತ್ತಿನಲ್ಲಿ ಕಂಡುಬಂದಿರುವ 90,000 ಖಾತ್ರಿಯಾದ ಪ್ರಕರಣಗಳಲ್ಲಿ ಶೇಕಡಾ 90ರಷ್ಟನ್ನು ಹೊಂದಿದೆ). ಸೋಂಕು ತಗುಲಿದವರಲ್ಲಿ ಶೇಕಡಾ 80ರಷ್ಟು ಜನರಿಗೆ ಅಲ್ಪಪ್ರಮಾಣದಲ್ಲಿ ಅಥವಾ ಸಾಧಾರಣ ಪ್ರಮಾಣದಲ್ಲಿ ವ್ಯಾಧಿ ಹರಡಿತ್ತು, ಶೇಕಡಾ 13.8ರಷ್ಟು ಜನರಿಗೆ ತೀವ್ರವಾದ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು, ಶೇಕಡಾ 6.1ರಷ್ಟು ಜನರಿಗೆ ಶ್ವಾಸಾಂಗಗಳ ಸ್ತಂಭನವಾಗಿ, ದೇಹ ವ್ಯಾಪಿ ಸೋಂಕು ಆಘಾತ ಹಾಗೂ ಮುಖ್ಯ ಅಂಗಗಳ ವೈಫಲ್ಯವಾಗುವ ಮಟ್ಟಿಗೆ ಜೀವ ಭಯ ಉಂಟಾಗುವಂತಹ ಪರಿಸ್ಥಿತಿಯಿತ್ತು. ಮರಣದ ಪ್ರಮಾಣ ಅತಿಹೆಚ್ಚಾಗಿದ್ದುದು (ಶೇಕಡಾ 21.9) 80ರ ವಯಸ್ಸನ್ನು ಮೀರಿದವರಲ್ಲಿ ಮತ್ತು ಹೃದ್ರೋಗವಿದ್ದವರು, ಸಕ್ಕರೆ ಖಾಯಿಲೆ ಇದ್ದವರು ಹಾಗೂ ಅಧಿಕ ರಕ್ತದೊತ್ತಡವಿದ್ದವರು ಇಂಥ ಪ್ರಕರಣಗಳಲ್ಲಿ, ಬಹಳಷ್ಟು ಜನರಲ್ಲಿ ಕಂಡುಬಂದ ರೋಗ ಲಕ್ಷಣಗಳೆಂದರೆ ಜ್ವರ ಮತ್ತು ಒಣ ಕೆಮ್ಮು. ಆಶ್ಚರ್ಯಕರ ವಿಷಯವೆಂದರೆ ಸೋಂಕು ತಗಲಿದ್ದವರಲ್ಲಿ ನೆಗಡಿಯಾಗಿ ಮೂಗು ಸೋರುತ್ತಿದ್ದವರು ಕೇವಲ ಶೇಕಡಾ 4.8 ಮಂದಿ. ಒಟ್ಟಾರೆ ಪ್ರಕರಣಗಳಲ್ಲಿ ಶೇಕಡಾ 2.4 ಮಾತ್ರ ಮಕ್ಕಳು ಮತ್ತು ಅದರಲ್ಲಿ ಯಾರೂ ಗಂಭೀರ ಸ್ಥಿತಿಯನ್ನು ತಲುಪಲಿಲ್ಲ. ಅಲ್ಪಪ್ರಮಾಣದಲ್ಲಿ ಅಥವಾ ಸಾಧಾರಣ ಮಟ್ಟದಲ್ಲಿ ಸೋಂಕು ತಗುಲಿದವರು ಸಾಮಾನ್ಯವಾಗಿ ಎರಡು ವಾರಗಳಲ್ಲಿ ಗುಣಮುಖರಾದರು.

ನಮಗೆ ಸಿಗದೆಹೋಗುವ ಒಂದು ಮುಖ್ಯ ಮಾಹಿತಿ ಎಂದರೆ ಅಲ್ಪಪ್ರಮಾಣದಲ್ಲಿ ಅಥವಾ ಸಾಧಾರಣ ಮಟ್ಟದಲ್ಲಿ ಸೋಂಕು ತಗುಲಿದವರ ಸಂಖ್ಯೆ ಎಷ್ಟು ಎಂಬುದು. ಈ ರೀತಿ ದೊಡ್ಡ ಸಂಖ್ಯೆಯಲ್ಲಿ ಸ್ವಲ್ಪಮಟ್ಟಿಗೆ ಸೋಂಕು ತಗುಲಿದಂಥವರನ್ನು ಪತ್ತೆ ಮಾಡಲಾಗದಿದ್ದರೆ ಅಂಥ ರೋಗಿಗಳನ್ನು ಪ್ರತ್ಯೇಕಿಸುವ ಮತ್ತು ನಿಧಾನವಾಗಿ ವೈರಾಣು ಹರಡುವುದನ್ನು ನಿಯಂತ್ರಿಸುವ ಕೆಲಸಕ್ಕೆ ಧಕ್ಕೆಯಾಗುತ್ತದೆ. ಆದರೆ ಇನ್ನೊಂದು ರೀತಿಯಿಂದ ನೋಡಿದರೆ, ಅನೇಕ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ರೋಗಲಕ್ಷಣಗಳು ತೀರಾ ಮೆದುವಾಗಿದೆ ಎಂದರೆ ಈಗ ಅಂದಾಜಿಸಿರುವ ಸಾಧ್ಯ ಮರಣದ ಸಂಖ್ಯೆ ತೀರಾ ಹೆಚ್ಚಾಗಿದ್ದು ಪರಿಸ್ಥಿತಿ ಅಷ್ಟೊಂದು ಉಲ್ಬಣಿಸಲಾರದು ಎಂಬುದು ಒಂದು ಧನಾತ್ಮಕ ಅಂಶವೇ ಸರಿ. (ಸಾವಿನ ಪ್ರಮಾಣ ತೀರಾ ಒತ್ತಡಕ್ಕೆ ಸಿಲುಕಿದ ಆರೋಗ್ಯ ವ್ಯವಸ್ಥೆಯಿರುವ ವುಹಾನ್‌ನಲ್ಲಿ ಶೇಕಡಾ 5.8 ಇದ್ದರೆ ಉಳಿದ ಪ್ರದೇಶಗಳಲ್ಲಿ ಶೇಕಡಾ 0.7 ಇದೆ).

ಇದನ್ನು ಶೋಧಿಸುತ್ತಾ ಹೊರಟ ವರದಿಯು ಗುಯಾಂಗ್‌ಡಾಂಗ್ ಪ್ರಾಂತ್ಯದ ಜ್ವರ ಚಿಕಿತ್ಸಾಲಯಗಳಲ್ಲಿ ಮೂರು ಲಕ್ಷದ ಇಪ್ಪತ್ತು ಸಾವಿರ ಜನರನ್ನು ಕೋವಿಡ್-19 ಸೋಂಕಿಗಾಗಿ ತಪಾಸಣೆ ಮಾಡಲಾಗಿದ್ದು ಅದರಲ್ಲಿ ಅಂದಾಜು 0.14 ಶೇಕಡಾ ಜನ ಮಾತ್ರ ಸೋಂಕು ತಗುಲಿದವರಿದ್ದರು ಎನ್ನುತ್ತದೆ. ಜಾನ್ ಹಾಪ್‌ಕಿನ್ಸ್ ಆರೋಗ್ಯ ಕೇಂದ್ರದ ಸಾಂಕ್ರಾಮಿಕ ರೋಗ ತಜ್ಞರಾದ ಕೇಟ್‌ಲಿನ್ ರಿರ‍್ಸ್ ಅವರು “ಅದು ನಿಜಕ್ಕೂ ಆಸಕ್ತಿದಾಯಕ ವಿಷಯ, ಏಕೆಂದರೆ ನಾವು ಅಲ್ಪಪ್ರಮಾಣದಲ್ಲಿ ಅಥವಾ ಸಾಧಾರಣ ಮಟ್ಟದಲ್ಲಿ ಸೋಂಕು ತಗುಲಿದವರನ್ನು ನಿರೀಕ್ಷಿಸಿದ್ದೆವು. ನಮಗೆ ದೊರೆತ ಮಾಹಿತಿಯ ಅರ್ಥವೇನೆಂದರೆ ಆ ಪ್ರಮಾಣದಲ್ಲಿ ಸಹ ಸೋಂಕು ಹರಡಿಲ್ಲ. ಹೀಗಾಗಿ ಅಲ್ಲಿ ನಾವು ಕಂಡ ಸಾವಿನ ಪ್ರಮಾಣ ಹಾಗೆಯೇ ಉಳಿಯಬುದು.” ಆದರೆ ಗುವಾಂಗ್‌ಡಾಂಗ್ ತೀವ್ರವಾಗಿ ಸೋಂಕು ಹರಡಿದ ಪ್ರದೇಶವಲ್ಲ. ಆದ್ದರಿಂದ ವಿಪರೀತ ಸೋಂಕು ಹರಡಿರುವ ಹುಬೈ ಪ್ರಾಂತ್ಯದಲ್ಲಿ ಇದೇ ಪರಿಸ್ಥಿತಿ ಇರುತ್ತೆಯೋ ಎಂದು ಹೇಳಲಾಗದು ಎಂಬ ಎಚ್ಚರಿಕೆಯನ್ನೂ ರಿರ‍್ಸ್ರವರು ನೀಡುತ್ತಾರೆ.

ವೇಗವಾಗಿ ಹರಡುತ್ತಿದ್ದ ಶ್ವಾಸಾಂಗಗಳ ವೈರಾಣುವನ್ನು ನಿಯಂತ್ರಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಜನ ಸಾರ್ವಜನಿಕ ಆರೋಗ್ಯದ ತಜ್ಞರು ಅಸಾಧ್ಯ ಎಂದು ಭಾವಿಸಿದ್ದನ್ನು ಚೀನಾ ಸಾಧಿಸಿದ್ದು ಹೇಗೆ ಎಂಬುದರತ್ತ ವರದಿಯು ಹೆಚ್ಚಾಗಿ ಗಮನ ನೀಡಿದೆ. “ಪ್ರಾಯಶಃ ಚೀನಾ ದೇಶವು ಇತಿಹಾಸ ಕಂಡಿರುವ ಅತ್ಯಂತ ಮಹತ್ವಾಕಾಂಕ್ಷಿಯಾದ, ಚುರುಕಾದ ಹಾಗೂ ಆಕ್ರಮಣಶೀಲವಾದ ರೋಗ ನಿಯಂತ್ರಣವನ್ನು ಹರಿಬಿಟ್ಟಿದೆ” ಎಂದು ವರದಿಯು ತೀರ್ಮಾನಿಸುತ್ತದೆ.

ಅತ್ಯಂತ ನಾಟಕೀಯ ಮತ್ತು ವಿವಾದಾತ್ಮಕ ಕ್ರಮವೆಂದರೆ ವುಹಾನ್ ಮತ್ತು ಸುತ್ತಮುತ್ತಲಿನ ನಗರಗÀಳಿಗೆ ಸಂಪೂರ್ಣ ದಿಗ್ಬಂಧನವನ್ನು ವಿಧಿಸಿದ್ದು. ಇದರಿಂದ ಆದ ಪರಿಣಾಮವೇನೆಂದರೆ ಜನವರಿ 23 ರಿಂದ ಈಚೆಗೆ ಸುಮಾರು 5 ಕೋಟಿ ಜನರನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ (ಕ್ವಾರಂಟೈನ್) ಇರಿಸಲಾಗಿದೆ. ಇದರಿಂದಾಗಿ, “ಸೋಂಕು ತಗುಲಿದ ವ್ಯಕ್ತಿಗಳು ದೇಶದ ಬೇರೆ ಪ್ರಾಂತ್ಯಗಳಿಗೆ ಪ್ರಯಾಣ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಯಿತು” ಎಂದು ವರದಿ ಹೇಳುತ್ತದೆ. ಚೀನಾದ ಮುಖ್ಯಭಾಗದ ಇತರ ಪ್ರಾಂತ್ಯಗಳಲ್ಲಿ ಜನ ತಾವಾಗಿಯೇ ಪ್ರತ್ಯೇಕೀಕರಣಕ್ಕೆ ಒಳಗಾದರು ಮತ್ತು ನೆರೆಹೊರೆಗಳಲ್ಲಿ ಅದಕ್ಕಾಗಿ ನೇಮಿತರಾದ ವೈದ್ಯರು ಅವರ ಮೇಲೆ ನಿಗಾ ಇರಿಸಿದರು.

ಇದಲ್ಲದೆ ಚೀನಾದ ಅಧಿಕಾರಿಗಳು ವುಹಾನ್ ಪ್ರಾಂತ್ಯದಲ್ಲಿ ಸಂಪೂರ್ಣ ಇದಕ್ಕಾಗಿಯೇ ಮೀಸಲಿಟ್ಟ ಎರಡು ಆಸ್ಪತ್ರೆಗಳನ್ನು ಸುಮಾರು ಒಂದು ವಾರದಲ್ಲಿಯೇ ನಿರ್ಮಿಸಿಬಿಟ್ಟರು! ಖಾತ್ರಿಯಾದ ಪ್ರಕರಣಗಳನ್ನು ಗುರುತಿಸಿಡಲು ಸರ್ಕಾರವು ಅಭೂತಪೂರ್ವ ಪ್ರಯತ್ನವನ್ನು ಶುರುಮಾಡಿತು. ಕೇವಲ ವುಹಾನ್ ಪ್ರಾಂತ್ಯದಲ್ಲಿಯೇ ಸುಮಾರು ಐದು ಜನರಿದ್ದ ಸಾವಿರದ ಎಂಟುನೂರು ತಂಡಗಳು ಈ ಶೋಧನಾ ಕಾರ್ಯದಲ್ಲಿ ತೊಡಗಿಕೊಂಡು ಹತ್ತಾರು ಸಾವಿರ ಸೋಂಕು ತಗುಲಿದವರನ್ನು ಗುರುತಿಸಿ ಬಿಟ್ಟವು.

ಇಡೀ ದೇಶದಲ್ಲಿ ಬಹಳ ತೀವ್ರಗಾಮಿಯಾಗಿ ಸಾಮಾಜಿಕ ದೂರೀಕರಣ ಕ್ರಮಗಳನ್ನು ಜಾರಿ ಮಾಡಲಾಯಿತು. ಇದರ ಅಂಗವಾಗಿ ಕ್ರೀಡಾ ಕಾರ್ಯಕ್ರಮಗಳನ್ನು ನಿಲ್ಲಿಸಿ ಎಲ್ಲಾ ರೀತಿಯ ರಂಗಭೂಮಿ, ಚಲನಚಿತ್ರ, ಸಾಂಸ್ಕೃತಿಕ ಪ್ರದರ್ಶನಗಳನ್ನು ನಿಷೇಧಿಸಲಾಯಿತು. ಚಾಂದ್ರಮಾನ ವರ್ಷಕ್ಕಾಗಿ ಜನವರಿ ಮಧ್ಯಭಾಗದಲ್ಲಿ ದೀರ್ಘ ರಜೆಗಾಗಿ ಮುಚ್ಚಿದ ಶಾಲಾ ಕಾಲೇಜುಗಳ ಬಿಡುವನ್ನು ವಿಸ್ತರಿಸಲಾಯಿತು. ಅನೇಕ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡವು. ಮನೆಯಿಂದ ಹೊರಗಡೆ ಕಾಲಿಡುವವರೆಲ್ಲರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕೆಂದು ವಿಧಿಸಲಾಯಿತು.

ಚೀನಾದಲ್ಲಿ ನಗದು ವ್ಯವಹಾರಕ್ಕೆ ಬದಲಾಗಿ ವಿಸ್ತಾರವಾಗಿ ಉಪಯೋಗಿಸಲ್ಪಡುತ್ತಿರುವ ಅಲಿಪೇ ಮತ್ತು ವಿ ಚಾಟ್ ಎಂಬ ಆ್ಯಪ್‌ಗಳು ನಿರ್ಬಂಧವನ್ನು ಕಠಿಣವಾಗಿ ವಿಧಿಸಲು ನೆರವಾದವು. ಏಕೆಂದರೆ ಇವುಗಳ ಮೂಲಕ ಸರ್ಕಾರಕ್ಕೆ ಜನರ ಓಡಾಟದ ಮೇಲೆ ನಿಗಾ ಇಡಲು ಸಾಧ್ಯವಾಯಿತು ಮತ್ತು ಖಚಿತವಾಗಿ ಸೋಂಕು ತಗುಲಿರುವವರನ್ನು ಪ್ರಯಾಣ ಮಾಡದಂತೆ ನಿರ್ಬಂಧಿಸಲು ಕೂಡಾ ಸಹಾಯವಾಯಿತು. “ಪ್ರತಿಯೊಬ್ಬರಿಗೂ ಒಂದು ಟ್ರಾಫಿಕ್ ಸಿಗ್ನಲ್‌ನಂಥ ವ್ಯವಸ್ಥೆ ಇರುತ್ತದೆ” ಎನ್ನುತ್ತಾರೆ ಹಾಂಕಾಂಗ್ ವಿಶ್ವವಿದ್ಯಾಲಯದ ಲಿ ಕಾ ಶಿಂಗ್ ವೈದ್ಯಕೀಯ ವಿಭಾಗದ ಡೀನ್ ಆಗಿರುವ ಮತ್ತು ತಂಡದ ಸದಸ್ಯರೂ ಆಗಿದ್ದ ಗೇಬ್ರಿಯಲ್ ಲ್ಯೂಂಗ್. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಪರಿಸ್ಥಿತಿಯನ್ನು ಸೂಚಿಸುವಂತೆ ಮೊಬೈಲ್‌ನಲ್ಲಿಯೇ ಕೆಂಪು, ಹಸಿರು, ಹಳದಿ ಬಣ್ಣಗಳ ಸೂಚನಾ ದೀಪಗಳು ಹೊತ್ತಿಕೊಳ್ಳುತ್ತವೆ. ರೈಲ್ವೇ ನಿಲ್ದಾಣ ಅಥವಾ ಇನ್ನಾವುದೇ ತನಿಖಾ ದ್ವಾರಗಳಲ್ಲಿರುವ ಕಾವಲುಗಾರರು ಅದನ್ನು ನೋಡಿ ಯಾರನ್ನು ಒಳಗೆ ಬಿಡಬೇಕೆಂಬುದನ್ನು ನಿರ್ಧರಿಸುತ್ತಾರೆ.

“ಈ ಎಲ್ಲಾ ಕ್ರಮಗಳಿಂದಾಗಿ ಸಾರ್ವಜನಿಕ ಬದುಕಿಗೆ ಪೆಟ್ಟು ಬಿತ್ತು” ಎಂದು ವರದಿ ಹೇಳುತ್ತದೆ. ಆದರೆ ಈ ಕ್ರಮಗಳು ಪರಿಣಾಮಕಾರಿಯಾದದ್ದು ಖಂಡಿತ. ಲ್ಯೂಂಗ್‌ರು ಹೇಳುವಂತೆ ಸೋಂಕು ತಗುಲಿದವರು ತಮ್ಮ ಕುಟುಂಬದ ಸದಸ್ಯರಿಗೆ ಬಿಟ್ಟರೆ ಇನ್ಯಾರಿಗೂ ವ್ಯಾಧಿಯನ್ನು ಪಸರಿಸಲಿಲ್ಲ. ಒಂದು ಮನೆಯಲ್ಲೋ ಅಥವಾ ಅಪಾರ್ಟ್ಮೆಂಟ್ ಕಟ್ಟಡದಲ್ಲೋ ಇರುವ ಎಲ್ಲ ಸದಸ್ಯರು ವೈರಾಣುವಿನ ಸಂಪರ್ಕಕ್ಕೆ ಬಂದ ಮೇಲೆ, ಅದರ ಆಚೆ ಇನ್ಯಾರಿಗೂ ಅದು ಸೋಂಕಲಿಲ್ಲ. ಅಲ್ಲಿಗೆ ಪ್ರಸರಣೆಯ ಕೊಂಡಿ ಮುರಿದು ಬೀಳುತ್ತಿತ್ತು. “ಹೀಗೆ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂತು” ಎಂದು ಲ್ಯೂಂಗ್ ಹೇಳುತ್ತಾರೆ. ಒಟ್ಟಿನಲ್ಲಿ “ಸಾಮಾಜಿಕ ದೂರೀಕರಣ ಮತ್ತು ರೋಗಿಗಳ ಪ್ರತ್ಯೇಕಿಸುವಿಕೆ (ಕ್ವಾರಂಟೈನ್) ಯಂಥ ಹಳೆಯ ವಿಧಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಯಿತು ಮತ್ತು ಇದರೊಂದಿಗೆ ಬುಡಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಉಪಯೋಗಿಸಿ ನೆರೆಹೊರೆಯಲ್ಲಿ ಲಭ್ಯ ದತ್ತಾಂಶಗಳನ್ನು ಅಳವಡಿಸಿಕೊಂಡದ್ದು ಸಹಾಯಕವಾಯಿತು” ಎನ್ನುತ್ತಾರೆ ಲ್ಯೂಂಗ್.

ಸಾಮೂಹಿಕ ಕಾರ್ಯಾಚರಣೆಗೆ ಆಳವಾದ ಬದ್ಧತೆ

ಇಂತಹ ಕಟ್ಟುನಿಟ್ಟಾದ ಕ್ರಮಗಳು ಬೇರೆ ದೇಶಗಳಲ್ಲಿ ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬುದು ಚರ್ಚಾಸ್ಪದ. ಗೊಟ್ಸಿನ್ ಹೇಳುತ್ತಾರೆ:

“ತೀವ್ರವಾದ ಕ್ರಮಗಳನ್ನು ಜನತೆ ವಿಧೇಯತೆಯಿಂದ ಸ್ವೀಕರಿಸುವಂಥ ಒಂದು ರಾಜಕೀಯ ವ್ಯವಸ್ಥೆ ಇರುವುದರಿಂದ ಚೀನಾ ದೇಶವು ಅನನ್ಯವಾದದ್ದು. ಜಾಗತಿಕ ಅಭಿವೃದ್ಧಿ ಕೇಂದ್ರದಲ್ಲಿ ಹಿರಿಯ ನೀತಿ ನಿರೂಪಕರಾದ ಜೆರೆಮಿ ಕಾಂನೈನ್‌ಡಿಕ್ ಅವರು, “ಈ ದೇಶಕ್ಕೆ ಬೃಹತ್ ಪ್ರಮಾಣದ, ಶ್ರಮ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಬಲ್ಲ ಅಸಾಧಾರಣ ಸಾಮರ್ಥ್ಯವಿದೆ. ಚೀನಾ ಏನನ್ನು ಸಾಧಿಸಿದೆಯೋ ಅದನ್ನು ಜಗತ್ತಿನ ಇನ್ನಾವ ದೇಶವೂ ಮಾಡುವುದು ಸಾಧ್ಯವಿಲ್ಲ.”

ಬೇರೆ ದೇಶಗಳು ಇಂಥ ಕ್ರಮಗಳನ್ನು ಪ್ರಯತ್ನಿಸಲೂಬಾರದು ಎಂಬುದು ಅಲೆಕ್ಸಾಂಡ್ರಾ ಫೆಲಾನ್ ಅವರ ಅಭಿಮತ. ಆಕೆ ಜಾರ್ಜ್ಟೌನ್‌ನ ಜಾಗತಿಕ ಆರೋಗ್ಯ ವಿಜ್ಞಾನ ಮತ್ತು ಭದ್ರತೆಯ ಕೇಂದ್ರದಲ್ಲಿ ಚೀನಾ ಕುರಿತಾದ ತಜ್ಞೆ ಆಗಿದ್ದಾರೆ. “ಯಾವುದೇ ಒಂದು ಕಾರ್ಯಕ್ರಮವು ಉತ್ತಮ ಸಾರ್ವಜನಿಕ ಆರೋಗ್ಯ ನಿಯಂತ್ರಣ ಕ್ರಮ ಹೌದೇ ಅಲ್ಲವೇ ಎನ್ನಲು ಅದು ಚೆನ್ನಾಗಿ ಕೆಲಸ ಮಾಡಿದೆ ಎಂಬುದೊಂದೇ ಮಾನದಂಡವಾಗಬಾರದು. ಒಂದು ಸಾಂಕ್ರಾಮಿಕ ಪಿಡುಗು ಸ್ಫೋಟವಾಗುವುದನ್ನು ತಡೆಯುವುದಕ್ಕೆ ಯಶಸ್ವಿಯಾಗಬಹುದಾದ ಅನೇಕ ಕ್ರಮಗಳಿರಬಹುದು. ಆದರೆ ಒಂದು ನ್ಯಾಯಯುತವಾದ, ಸ್ವತಂತ್ರವಾದ ಸಮಾಜದಲ್ಲಿ ಅದು ನಮಗೆ ಒಪ್ಪಲಿಕ್ಕಾಗದಂತಹುದಿರಬಹುದು” ಎನ್ನುತ್ತಾರೆ ಫೆಲಾನ್.

ಚೀನಾ ಕೆಲವೊಂದು ವಿಷಯಗಳಲ್ಲಿ ಸುಧಾರಿಸಿಕೊಳ್ಳಬೇಕು ಎಂದು ವರದಿ ಹೇಳುತ್ತದೆ. ಅದರಲ್ಲಿ ಒಂದೆಂದರೆ, “ಮುಖ್ಯವಾದ ದತ್ತಾಂಶಗಳನ್ನು ಹಾಗೂ ಬೆಳವಣಿಗೆಗಳನ್ನು ಇನ್ನೂ ಸ್ಪಷ್ಟವಾಗಿ ಅಂತರರಾಷ್ಟಿಯವಾಗಿ ಹಂಚಿಕೊಳ್ಳುವುದು. ಆದರೆ ವರದಿಯು ಬಲಾತ್ಕಾರದ ಕ್ರಮಗಳು ಮತ್ತು ಅದಕ್ಕಾಗಿ ತೆರಬೇಕಾದ ಬೆಲೆ ಇವುಗಳ ಬಗ್ಗೆ ಮೌನವಾಗಿದೆ. ಎಡಿನ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯದ ತಜ್ಞರಾಗಿರುವ ದೇವಿ ಶ್ರೀಧರ್ ಅವರು, “ಮಾನವ ಹಕ್ಕುಗಳ ಪ್ರಶ್ನೆಯನ್ನು ಸಂಪೂರ್ಣವಾಗಿ ಬದಿಗೆ ಸರಿಸಲಾಗಿದೆ” ಎನ್ನುತ್ತಾರೆ. ಬದಲಿಗೆ ವರದಿಯು, “ಸಾಮಾಜಿಕ ಆಪತ್ತಿನ ಎದುರು ಚೀನಾದ ಜನತೆ ಸಾಮೂಹಿಕ ಕಾರ್ಯಾಚರಣೆಗೆ ಆಳವಾದ ಬದ್ಧತೆಯನ್ನು” ಪ್ರದರ್ಶಿಸಿದ್ದಾರೆ ಎಂದು ಹೊಗಳುತ್ತದೆ.

ಫೆ಼ಲಾನ್ ಹೇಳುವುದು “ಚೀನಾದಲ್ಲಿ ಬೇಕಾದಷ್ಟು ಸಮಯವನ್ನು ಕಳೆದಿರುವ ನನಗೆ ಅಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ (ವರದಿಯಲ್ಲಿ) ವಿಪರೀತ ಬೋಳೆತನ ಕಾಣುತ್ತದೆ; ಮುಗ್ಧತೆ ಅಲ್ಲದಿದ್ದರೆ ಸ್ವಯಮಿಚ್ಛೆಯ ಕುರುಡತನ ಎನ್ನಿ”. ಪ್ರಾಯಶಃ ಸಿಂಗಾಪುರ ಮತ್ತು ಹಾಂಕಾಂಗ್ ಮಾದರಿಗಳು ವಾಸಿ ಎನಿಸುತ್ತದೆ. ಕಾನಿನ್‌ಡಿಕ್ ಅವರು ಹೇಳುವುದು, “ಇದೇ ಮಟ್ಟದ ಶಿಸ್ತು ಮತ್ತು ಶ್ರದ್ಧೆ ಆ ಪ್ರದೇಶಗಳಲ್ಲೂ ಕಾಣುತ್ತದೆಯಾದರೂ, ಇಲ್ಲಿನಂತಹ ನಿರಂಕುಶ ಕ್ರಮಗಳನ್ನು ಅಲ್ಲಿ ಅಳವಡಿಸಿಲ್ಲ.”

ವರದಿಯು ಚೀನಾದ ಯೋಜನಾಬದ್ಧ ಕ್ರಮಗಳ ಇನ್ನಿತರ ಹಿನ್ನಡೆಗಳನ್ನು ಹೆಸರಿಸಿಲ್ಲ ಎನ್ನುವ ಜಾನ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯಕ್ಕೆ ಸೇರಿದ ಬ್ಲೂಮ್‌ಬರ್ಗ್ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಸಾಂಕ್ರಾಮಿಕ ರೋಗ ತಜ್ಞರಾಗಿರುವ ಜೆನ್ನಿರ್ ನುಜ್ಜೊ಼ ಅವರು ಈ ಕ್ರಮಗಳಿಂದ ಕ್ಯಾನ್ಸರ್ ಮತ್ತು ಎಚ್‌ಐವಿ ರೋಗಿಗಳ ಮೇಲೆ ಆದ ಪರಿಣಾಮವೇನು ಎಂದು ಪ್ರಶ್ನಿಸುತ್ತಾರೆ. “ಇಂಥ ವ್ಯಾಪಕ ಕ್ರಮಗಳ ಪರಿಣಾಮಗಳೇನು ಎಂಬುದರ ಮೌಲ್ಯಮಾಪನ ಮಾಡುವಾಗ ದ್ವಿತೀಯ ಮತ್ತು ತೃತೀಯ ಹಂತದ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳಬೇಕು” ಎಂಬುದು ನುಜ್ಜೊ಼ ಅವರ ಅಭಿಪ್ರಾಯ.

ಇಷ್ಟಾಗಿಯೂ ಚೀನಾದ ಬೃಹತ್ ಪ್ರಯತ್ನಗಳು ಕೇವಲ ಸಾಂಕ್ರಾಮಿಕದ ಪ್ರಸರಣೆಯನ್ನು ಮಂದಗೊಳಿಸಬಹುದು ಅಷ್ಟೇ. “ಅದನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲಾಗಿಲ್ಲ ಎನ್ನುವ ಮಿನ್ನೆಸೋಟ ಅವಳಿ ನಗರಗಳ ವಿಶ್ವವಿದ್ಯಾಲಯದ ಸೋಂಕು ರೋಗಗಳ ಸಂಶೋಧನೆ ಮತ್ತು ನೀತಿ-ನಿರೂಪಣೆ ಕೇಂದ್ರದ ಮುಖ್ಯಸ್ಥರಾದ ಮೈಕ್ ಓಸ್ಟರ್‌ಹಾಮ್‌ರವರು ಮುಂದುವರೆದು, “ಇದೆಲ್ಲಾ ಕಾಳ್ಗಿಚ್ಚನ್ನು ತುಳಿದು ಅಡಗಿಸಿದ್ದೇವೆ ಎಂದುಕೊಂಡಂತೆ. ಅದು ಮತ್ತೆ ಭಯಂಕರವಾಗಿ ಭುಗಿಲೇಳುತ್ತದೆ” ಎನ್ನುತ್ತಾರೆ. ಆದರೆ ರಿಲೆ ಎನ್ನುತ್ತಾರೆ, “ಹಾಗಾದರೆ ಅದೂ ಸಹ ಜಗತ್ತಿಗೆ ಹೊಸ ಪಾಠಗಳನ್ನು ಕಲಿಸಬಹುದು. ಚೀನಾ ಮತ್ತೆ ತಲೆ ಎತ್ತುವ ಕೋವಿಡ್-19 ಅನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಗಮನಿಸುವ ಅವಕಾಶ ಲಭ್ಯವಾಗುತ್ತದೆ.”

ಚೀನಾದ ಯಶಸ್ಸಿನಿಂದಾಗಿ ಬೇರೆ ದೇಶಗಳಿಗೆ ತಾವು ಕೋವಿಡ್-19 ಅನ್ನು ಮಣಿಸಬಹುದು ಎಂಬ ಆತ್ಮವಿಶ್ವಾಸ ಉಂಟಾಗಿದೆ ಎಂದು ಏಯ್ಲ್ವಾರ್ಡ್ ಹೇಳುತ್ತಾರೆ. “ಪ್ರತಿದಿನವೂ ಹೊಸ ಹೊಸ ದೇಶಗಳಲ್ಲಿ ಈ ಸೋಂಕು ಹರಡುತ್ತಿದೆ ಎಂಬ ಹೊಸ ವರದಿಗಳು ಬರುತ್ತಿವೆ. ‘ಅಯ್ಯೋ ಏನೂ ಮಾಡಲಾಗುವುದಿಲ್ಲವೇನೋ’ ಎಂದು ಜನ ಕೈಚೆಲ್ಲುತ್ತಾ, ಇದು ಒಂದು ವಿಶ್ವವ್ಯಾಪಿ ಜನಪದೋಧ್ವಂಸ ಮಹಾರೋಗ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಆಗಲ್ಲಾ ನಾವು ಹೇಳುತ್ತೇವೆ, ‘ಕ್ಷಮಿಸಿ, ಇದಕ್ಕೆ ಸೂಕ್ತ ಪ್ರತಿಕ್ರಿಯೆಯಾಗಿ ನೀವು ಮಾಡಬಹುದಾದ ಅನೇಕ ಕಾರ್ಯಸಾಧು ಕ್ರಮಗಳಿವೆ.’ ನಾವು ಅಂಥವುಗಳ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.”

ಕೃಪೆ: ಸೈನ್ಸ್ ಮಾಗಜಿನ್ ಅನುವಾದ: ಡಾ.ಬಿ.ಆರ್.ಮಂಜುನಾಥ

*ಕೈ ಕುಪ್‌ಫ಼ರ್‌ಶ್ಮಿಚ್ ಮತ್ತು ಜಾನ್ ಕೊಹೆನ್ ಅವರು ಸೈನ್ಸ್ ಮ್ಯಾಗಜಿನ್ ಲೇಖಕರು

 

Leave a Reply

Your email address will not be published.