ಕೊರೊನಾ ಲಸಿಕೆ: ಬೃಹತ್ ಉತ್ಪಾದನೆಯೇ ಇಂದಿನ ಅಗತ್ಯ

ಕೊರೊನಾ ವೈರಸ್ ಲಸಿಕೆ ಉತ್ಪಾದನೆಗಾಗಿ ಜಗತ್ತಿನ್ನೂ ಸಾಕಷ್ಟು ಖರ್ಚು ಮಾಡುತ್ತಿಲ್ಲ. ಇದನ್ನು ದುಂದು ವೆಚ್ಚವೆಂದು ಭಾವಿಸಲಾಗಿದೆ. ಆದರೆ ಲಸಿಕೆ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ಬದಲಾಗಿ, ಯಶಸ್ವೀ ಲಸಿಕೆಗಾಗಿ ಸುಮ್ಮನೆ ಕಾಯುವುದು ನಿಜವಾದ ದುಂದುವೆಚ್ಚ!

ಮೂಲ: ದ ಎಕಾನಾಮಿಸ್ಟ್  ಅನುವಾದ: ಡಾ.ಜ್ಯೋತಿ

ಒಂದು ಕ್ಷಣ ಈ ಚಿಂತನಾ ಪ್ರಯೋಗವನ್ನು ಗಮನಿಸಿ. ನೀವು, ಇನ್ನು ಕೇವಲ ಒಂದು ಗಂಟೆಯೊಳಗೆ ಪಿಜ್ಜಾ ತಿನ್ನಲು ವಿಫಲವಾದರೆ, ಹಸಿವಿನಿಂದ ಸಾಯುತ್ತೀರಿ ಅಂದುಕೊಳ್ಳಿ. ಆಗ ನೀವೇನು ಮಾಡುತ್ತೀರಿ? ಹೆಚ್ಚಿನ ಜನ ತಕ್ಷಣವೇ ಪಿಜ್ಜಾ ಆರ್ಡರ್ ಮಾಡುತ್ತಾರೆ- ಕೇವಲ ಒಂದು ಪಿಜ್ಜಾ ರೆಸ್ಟೋರೆಂಟಿನಿAದಲ್ಲ, ಬದಲಾಗಿ ಹಲವಾರು ರೆಸ್ಟೋರೆಂಟ್‌ಗಳಿಂದ. ಯಾಕೆಂದರೆ, ಸಮಯಕ್ಕೆ ಸರಿಯಾಗಿ ಕನಿಷ್ಠ ಒಂದು ಪಿಜ್ಜಾವಾದರೂ ನಿಮಗೆ ಸಿಗಲಿ ಎನ್ನುವ ಆಶಯದಿಂದ. ಈ ಪ್ರಕ್ರಿಯೆಯಲ್ಲಿ, ಕೆಲವು ಪಿಜ್ಜಾ ವ್ಯರ್ಥವಾಗುತ್ತದೆ ಎನ್ನುವ ಅರಿವಿದ್ದರೂ ನೀವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಪ್ರಾಣ ಉಳಿಸುವುದು ಅಲ್ಲಿ ಮುಖ್ಯವೆನಿಸುತ್ತದೆ.

ಅದರಂತೆಯೇ, ಈಗ ಕೋವಿಡ್-19 ವೈರಸ್ ಲಸಿಕೆಗಾಗಿ ಇಡೀ ಜಗತ್ತು ಕಾತರದಿಂದ ನಿರೀಕ್ಷಿಸುತ್ತಿದೆ. ಇಲ್ಲಿಯವರೆಗೆ, ಈ ಸಾಂಕ್ರಾಮಿಕದಿAದಾಗಿ ಪ್ರಪಂಚದಾದ್ಯಂತ ಏಳು ಲಕ್ಷ ಸಾವು ದಾಖಲಾಗಿವೆ ಮತ್ತು ವಾರಕ್ಕೆ ಸುಮಾರು ನಲವತ್ತು ಸಾವಿರ ಜನ ಸಾಯುತ್ತಿದ್ದಾರೆ. ಇನ್ನು, ದಾಖಲಾಗದ ಸಾವಿನ ಸಂಖ್ಯೆಯನ್ನು ಸೇರಿಸಿದರೆ, ಇನ್ನೂ ಹೆಚ್ಚಾಗಬಹುದು. ಪ್ರಸ್ತುತ, ಜಾಗತಿಕ ಆರ್ಥಿಕ ವ್ಯವಸ್ಥೆಯು, ಮಹಾ ಆರ್ಥಿಕ ಕುಸಿತದ ನಂತರ ಮೊದಲ ಬಾರಿಗೆ ಇಷ್ಟೊಂದು ಕುಸಿತ ಕಂಡಿದೆ. ಆರ್ಥಿಕ ತಜ್ಞರ ಪ್ರಕಾರ 2020ರ ಮೊದಲಾರ್ಧದಲ್ಲಿ ಶೇಕಡಾ 8 ರಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕುಸಿತ ಕಂಡಿದೆ.

ಈ ಹಿನ್ನೆಡೆಗಳ ನಡುವೆಯೂ ಆಶಾದಾಯಕವಾಗಿ, ಸಾಂಕ್ರಾಮಿಕ ರೋಗದ ಆರಂಭದಲ್ಲಿ ಅಂದುಕೊAಡದ್ದಕ್ಕಿಂತ ಕ್ಷಿಪ್ರವಾಗಿ ವಿಜ್ಞಾನಿಗಳು ಲಸಿಕೆಯನ್ನು ಉತ್ಪಾದಿಸುವ ಸಾಧ್ಯತೆ ಇದೆ. ಆದರೂ ಸಹ, ಲಸಿಕೆಗಳನ್ನು ತಯಾರಿಸುವ ಮತ್ತು ವಿತರಿಸುವ ಜಾಗತಿಕ ಪ್ರಯತ್ನಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇಲ್ಲಿಯವರೆಗೆ, ಲಸಿಕೆ ಉತ್ಪಾದನೆಗೆ ಕೇವಲ 10 ಶತಕೋಟಿ ಡಾಲರ್ ವಿನಿಯೋಗಿಸಲಾಗಿದೆ. ಇದು, ಹಲವಾರು ಪಿಜ್ಜಾ ಅಗತ್ಯವಿರುವ ಸಮಯದಲ್ಲಿ ಕೇವಲ ಒಂದು ಪಿಜ್ಜಾಕ್ಕೆ ಆದೇಶ ಕೊಟ್ಟ ಹಾಗೆ.

ಈ ಜಾಗತಿಕ ಲಸಿಕೆ ತಯಾರಿ ಮತ್ತು ವಿತರಣೆ ಕುರಿತ ಅಂಕಿಅಂಶಗಳು ಅಸ್ಪಷ್ಟವಾಗಿವೆ. ಆದರೆ, ಒಂದು ಅಂದಾಜಿನ ಪ್ರಕಾರ ಮುಂದಿನ ವರ್ಷದ ಅಂತ್ಯದ ವೇಳೆಗೆ ವಿತರಣೆಗಾಗಿ ಜಗತ್ತಿನಾದ್ಯಂತ ಸುಮಾರು 4 ಶತಕೋಟಿ ಪ್ರಮಾಣದ ಕೋವಿಡ್-19 ಲಸಿಕೆಗೆ ಮುಂಗಡ ಬೇಡಿಕೆ ಬಂದಿದೆ. ಇದು, ಪ್ರಪಂಚದ ಅರ್ಧ ಜನಸಂಖ್ಯೆಗೆ ಸಾಕಾಗುತ್ತದೆ. ಆದಾಗ್ಯೂ, ವಾಸ್ತವದಲ್ಲಿ ಬಹಳ ಕಡಿಮೆ ಸಂಖ್ಯೆಯ ಜನರು ಈ ಲಸಿಕೆಯ ಪ್ರಯೋಜನ ಪಡೆಯಲಿದ್ದಾರೆ.

ಯಾಕೆಂದರೆ… ಮೊದಲನೆಯದಾಗಿ ಉತ್ಪಾದನೆಯ ಹಂತದಲ್ಲಿರುವ ಕೆಲವು ಲಸಿಕೆಗಳು ನಿಯಂತ್ರಕ ಸಂಸ್ಥೆಯಿಂದ ಅನುಮೋದನೆ ಪಡೆಯಲು ವಿಫಲವಾಗಬಹುದು. ಅದಲ್ಲದೆ, ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಪ್ರಯೋಗ ಹಂತ ತಲುಪುವ ಲಸಿಕೆಯು ಕೂಡ ಶೇಕಡಾ 20ರಷ್ಟು ವೈಫಲ್ಯ ಕಾಣಬಹುದು. ಜೊತೆಗೆ, ಅನುಮೋದನೆ ಪಡೆದವುಗಳೂ ಕೂಡ ಸಂಪೂರ್ಣ ರಕ್ಷಣೆ ನೀಡದಿರಬಹುದು. ಉದಾಹರಣೆಗೆ, ಕೆಲವೊಂದು ಲಸಿಕೆಗಳು ವಯೋವೃದ್ಧರನ್ನು ಸಂರಕ್ಷಿಸಲು ವೈಫಲ್ಯವಾಗಬಹುದು. ಇನ್ನು ಕೆಲವು, ಜನರು ಕೋವಿಡ್-19ನಿಂದ ಸಾಯುವುದನ್ನು ನಿಲ್ಲಿಸಬಹುದು, ಆದರೆ ಇತರರಿಗೆ ಹರಡುವುದನ್ನು ತಡೆಯದಿರಬಹುದು. ಕೆಲವು ಲಸಿಕೆಗಳು ಪರಿಣಾಮಕಾರಿಯಾಗಿ ಕೆಲಸಮಾಡಲು ಒಂದಕ್ಕಿಂತ ಹೆಚ್ಚು ಪ್ರಮಾಣದ ಅಗತ್ಯವಿರಬಹುದು. ಈ ಎಲ್ಲಾ ಗೊಂದಲಗಳಿಂದಾಗಿ, ಬ್ರಿಟನ್ ಮತ್ತು ಅಮೆರಿಕದಂತಹ ದೇಶಗಳು ತಮ್ಮ ದೇಶವಾಸಿಗಳಿಗೆ ಎರಡು ಪ್ರಮಾಣಗಳಿಗಿಂತ ಹೆಚ್ಚು ಲಸಿಕೆಯ ಮುಂಗಡ ಬೇಡಿಕೆಯಿಟ್ಟಿವೆ.  ಇಷ್ಟಾಗಿಯೂ, ಅದು ಸಾಕೆನ್ನುವ ಭರವಸೆಯಿಲ್ಲ. 

ಆ ಎಲ್ಲ ಕಾರಣಗಳಿಂದ, ದೃಢೀಕರಣವಾಗದ ಲಸಿಕೆ ಉತ್ಪಾದನೆಯನ್ನು ದುಂದುವೆಚ್ಚವೆಂದು ಪರಿಗಣಿಸುವ ಬದಲು, ಅವುಗಳನ್ನು ಜೀವ ವಿಮಾ ಪಾಲಿಸಿಯೆಂದು ಭಾವಿಸಬೇಕಾಗಿದೆ. ಯಾಕೆಂದರೆ, ಏಕಕಾಲದಲ್ಲಿ ಹತ್ತಾರು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದರೆ, ಅದರ ಫಲಿತಾಂಶ ನಿರ್ಧರಿಸಲು ಶೇಕಡಾ 90ರಷ್ಟು ಹೆಚ್ಚಿನ ಸದವಕಾಶವಿದೆಯೆಂದು ಸಂಶೋಧನೆಗಳು ಹೇಳುತ್ತವೆ. ಈ ಲಸಿಕೆಗಳಲ್ಲಿ, ಯಾವುದಾದರೊಂದು ಪರಿಣಾಮಕಾರಿಯೆಂದು ಸಾಬೀತಾದ ನಂತರ, ಶತಕೋಟಿ ಪ್ರಮಾಣದಲ್ಲಿ ತ್ವರಿತವಾಗಿ ವಿತರಿಸಬೇಕಾಗುತ್ತದೆ. ಆದರೆ, ಯಾವ ಲಸಿಕೆ ಯಶಸ್ವಿಯಾಗುತ್ತದೆ ಎಂಬುದನ್ನು ಮೊದಲೇ ತಿಳಿಯುವುದು ಅಸಾಧ್ಯ. ಈ ನಿಟ್ಟಿನಲ್ಲಿ, ಸರ್ಕಾರಗಳು ವಿವಿಧ ರೀತಿಯ ಲಸಿಕೆಗಳನ್ನು ಉತ್ಪಾದಿಸಲು ಔಷಧ ಸಂಸ್ಥೆಗಳಿಗೆ ಸಹಾಯಹಸ್ತ ನೀಡಬೇಕು. ಅದೂ ಸಹ, ನಿಯಂತ್ರಕ ಸಂಸ್ಥೆಯ ಅನುಮೋದನೆ ಅಥವಾ ಮಂಜೂರಾತಿ ದೊರೆಯುವ ಮೊದಲೇ, ಹತ್ತಾರು ಶತಕೋಟಿ ಪ್ರಮಾಣದಲ್ಲಿ ಉತ್ಪಾದಿಸಬೇಕು. ಇಂತಹ ಕ್ರಮದಿಂದ, ವಿಫಲವಾದ ಲಸಿಕೆಯನ್ನು ಬಳಸದೆ ಎಸೆಯಬೇಕಾದ ಸಂದರ್ಭ ಬಂದರೂ ಸಹ, ಯಶಸ್ವಿ ಲಸಿಕೆ ಜನರಿಗೆ ಬೇಗನೆ ತಲುಪಲು ಸಹಾಯವಾಗುತ್ತದೆ.

ಮೇಲ್ನೋಟಕ್ಕೆ, ಏಕಕಾಲದಲ್ಲಿ ಹತ್ತಾರು ಲಸಿಕೆ ಉತ್ಪಾದನಾ ಪ್ರಕ್ರಿಯೆ, ಉದ್ದೇಶರಹಿತ ಮತ್ತು ಅನಗತ್ಯ ದುಬಾರಿ ವೆಚ್ಚವೆಂದು ಕಾಣಿಸಬಹುದು. ಆದರೆ, ಸಾಂಕ್ರಾಮಿಕ ರೋಗವು ಪ್ರಾರಂಭವಾದ ದಿನದಿಂದಲೂ, ಪ್ರಸಕ್ತ ಆದಾಯ ಮತ್ತು ಉದ್ಯೋಗಗಳನ್ನು ಕಾಪಾಡುವ ಸಲುವಾಗಿ, ವಿಶ್ವದಾದ್ಯಂತ ಸರ್ಕಾರಗಳು ಖರ್ಚು ಅಥವಾ ವಾಗ್ದಾನ ಮಾಡಿದ 7 ಟ್ರಿಲಿಯನ್ ಡಾಲರಿಗೆ ಹೋಲಿಸಿದರೆ, ಲಸಿಕೆ ಉತ್ಪಾದನಾ ಧನಸಹಾಯವನ್ನು, ಪ್ರಸ್ತುತ 100 ಬಿಲಿಯನ್ ಡಾಲರಿನ ಹತ್ತು ಪಟ್ಟು ಹೆಚ್ಚಿಸಿದರೂ, ಅತ್ಯಲ್ಪವಾಗಿ ಕಾಣಿಸುತ್ತದೆ. ಈ ನಿಟ್ಟಿನಲ್ಲಿ, ಲಸಿಕೆ ಉತ್ಪಾದನ ಪ್ರಮಾಣವನ್ನು ಹೆಚ್ಚಿಸುವ ಬದಲಾಗಿ, ಯಶಸ್ವಿ ಲಸಿಕೆಗಾಗಿ ಸುಮ್ಮನೆ ಕಾಯುವುದು ನಿಜವಾದ ದುಂದುವೆಚ್ಚ. ಇನ್ನು, ಆರ್ಥಿಕ ಉತ್ಪಾದನೆಯ ಉಳಿತಾಯದ ದೃಷ್ಟಿಯಿಂದ ಹೇಳುವುದಾದರೆ, ಕೇವಲ ಒಂದು ವಾರದೊಳಗೆ ಪರಿಣಾಮಕಾರಿಯಾದ ಕೋವಿಡ್-19 ಲಸಿಕೆಯನ್ನು ಜಗತ್ತಿಗೆ ಬಿಡುಗಡೆ ಮಾಡುವ ಸಲುವಾಗಿ, 200 ಬಿಲಿಯನ್ ಡಾಲರಿನಷ್ಟು ಖರ್ಚು ಮಾಡಿದರೂ ಅದು ಹೆಚ್ಚು ಅರ್ಥಪೂರ್ಣವೆನಿಸುತ್ತದೆ.

ಈ ಮಧ್ಯೆ, ಕೆಲವು ಬಡ ದೇಶಗಳಿಗೆ ಲಸಿಕೆ ಉತ್ಪಾದನೆ ಮೇಲಿನ ಇಂತಹ ಭಾರಿ ಆರ್ಥಿಕ ಹೂಡಿಕೆಯ ಸಂಭವನೀಯತೆ, “ಲಸಿಕೆಯ ರಾಷ್ಟ್ರೀಕರಣದ”ದ ಆತಂಕ ಹೆಚ್ಚಿಸಿದೆ.  ಯಾಕೆಂದರೆ, ಶ್ರೀಮಂತ ರಾಷ್ಟ್ರಗಳು ತಮ್ಮ ನಾಗರಿಕರಿಗಾಗಿ ಲಸಿಕೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಿ, ಬಡರಾಷ್ಟ್ರಗಳನ್ನು ಮೂಲೆಗುಂಪು ಮಾಡುವ ಸಾಧ್ಯತೆಯಿದೆ. ಇದರ ಪರಿಹಾರಕ್ಕಾಗಿ, ಸಂಪನ್ಮೂಲಗಳನ್ನು ಸಮರ್ಪಕವಾಗಿ ಸಂಗ್ರಹಿಸುವುದು ಮತ್ತು ಅಗತ್ಯದ ಆಧಾರದ ಮೇಲೆ ಲಸಿಕೆಯನ್ನು ಹಂಚುವ ಮೂಲಕ, ಸೀಮಿತ ಪೂರೈಕೆಯಲ್ಲಿರುವ ಲಸಿಕೆಯ ಹೆಚ್ಚಿನ ಲಾಭವನ್ನು ನಾವು ಪಡೆಯಬಹುದು. 

ಉದಾಹರಣೆಗೆ, ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ಪೂರೈಕೆ, ಅದನಂತರ ದುರ್ಬಲ ಜನರು, ಈ ಕ್ರಮದಲ್ಲಿ ವಿತರಿಸುವುದು ಉತ್ತಮ. ಇಂತಹ ಒಪ್ಪಂದ ಕ್ರಮಕ್ಕೆ, ಸುಮಾರು 80 ದೇಶಗಳು ಆಸಕ್ತಿ ಹೊಂದಿವೆ. ದುರದೃಷ್ಟವಶಾತ್, ಕೆಲವು ಹೆಚ್ಚು ಉತ್ಪಾದನಾ ಸಾಮರ್ಥ್ಯ ಹೊಂದಿರುವ ದೇಶಗಳಲ್ಲಿನ ರಾಜಕಾರಣಿಗಳು, ತಮ್ಮ ದೇಶದವರಿಗೆ ಮಾತ್ರ ವಿಶೇಷ ಆದ್ಯತೆ ನೀಡುವ ಸಾಧ್ಯತೆಯಿದೆ. ಈ ರೀತಿ, ಯಾವ ದೇಶಕ್ಕೆ ಮೊದಲು ಲಸಿಕೆ ಸಿಗುತ್ತದೆ, ಎನ್ನುವ ಅಂತರರಾಷ್ಟ್ರೀಯ ಮಟ್ಟದ ಕ್ಷುಲ್ಲಕ ವಾಗ್ವಾದವನ್ನು ತಡೆಗಟ್ಟಲು, ಸರಬರಾಜುಗಳನ್ನು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಗರಿಷ್ಠಗೊಳಿಸುವುದು, ಒಂದು ಸೂಕ್ತ ಮಾರ್ಗವಾಗಿದೆ. ಇದರೊಂದಿಗೆ, ಬಡ ದೇಶಗಳಿಗೆ ಲಸಿಕೆಯನ್ನು ರಿಯಾಯಿತಿ ದರದಲ್ಲಿ ಹಂಚಬೇಕಾಗಬಹುದು. ಬಹುಶಃ, ಇತರ ಲಸಿಕೆಗಳಂತೆ, ಇದನ್ನೂ ಸಹ ಅಂತಾರಾಷ್ಟ್ರೀಯ ಲಸಿಕೆ ಒಕ್ಕೂಟ ಗವಿ (GAVI) ಮೂಲಕ ವಿತರಿಸುವುದು ಒಳ್ಳೆಯದು.

ಕೊನೆಯದಾಗಿ, ಸಾರ್ವಜನಿಕ ನಿಧಿಯ ಮೇಲೆ ಅಗಾಧ ಪ್ರಮಾಣದ ಹಕ್ಕಿರುವ ದೇಶಗಳಲ್ಲಿ, ರಾಜಕಾರಣಿಗಳಿಗೆ, ಯಾವುದಾದರೊಂದು ವಸ್ತುವನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸಬೇಕಾದ ಅನಿವಾರ್ಯತೆಯ ತುರ್ತು ಸುಲಭವಾಗಿ ಅರ್ಥವಾಗುವುದಿಲ್ಲ. ಅಕಸ್ಮಾತ್. ಒಂದು ದೊಡ್ಡ ಮಟ್ಟದ ಉತ್ಪಾದನೆ ನಿಷ್ಪçಯೋಜಕವಾದರೆ, ರಾಜಕಾರಣಿಗಳು ವ್ಯರ್ಥ ಹಣ ಪೋಲು ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗುತ್ತೇವೆ ಎನ್ನುವ ಅಳುಕು. ಉದಾಹರಣೆಗೆ, ಬ್ರಿಟಿಷ್ ಸರ್ಕಾರ ಪ್ರಸಕ್ತ ಸಾಂಕ್ರಾಮಿಕ ರೋಗದ ಆರಂಭದ ದಿನಗಳಲ್ಲಿ ನಿರ್ಮಿಸಿದ ತುರ್ತು ಆಸ್ಪತ್ರೆಗಳು, ಕೆಲವೇ ದಿನಗಳಲ್ಲಿ ಅನಗತ್ಯವೆನಿಸಿಕೊಂಡವು. ಆದರೂ ಸಹ, ಈ ಎಚ್ಚರಿಕೆಯ ನಡುವೆ ರಾಜಕಾರಣಿಗಳು ಸದಾ ತರ್ಕಬದ್ಧವಾಗಿ ವ್ಯವಹರಿಸಬೇಕಾಗುತ್ತದೆ. ಯಾಕೆಂದರೆ, ಭವಿಷ್ಯದಲ್ಲಿ ಏನಾಗುವುದೆಂದು ತಿಳಿಯುವ ಮೊದಲೇ, ನಾವು ಜೀವವಿಮೆಯನ್ನು ಖರೀದಿಸುತ್ತೇವೆ, ಅನಂತರವಲ್ಲ. ಹಾಗೆಯೇ, ಕೊರೋನಾ ಲಸಿಕೆಯ ಬೃಹತ್ ಪ್ರಮಾಣದ ಉತ್ಪಾದನೆಯೂ ಕೂಡ, ಸದ್ಯದ ತುರ್ತು ಅಗತ್ಯ.

Leave a Reply

Your email address will not be published.