ಕೊರೊನಾ ವೈರಾಣು ಯಾವ ಅಂಗ? ಏನು ಪರಿಣಾಮ?

ಈಗಾಗಲೇ ಕೊರೊನಾ ವೈರಸ್ ಲಕ್ಷಾಂತರ ಜನರನ್ನು ಸ್ಪರ್ಶಿಸಿ, ತಬ್ಬಿ ಬೈಬೈ ಹೇಳಿದೆ. ಒಮ್ಮೆ ಬೈಬೈ ಹೇಳಿದ್ದು ಮತ್ತೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೊರೊನಾ ಶ್ವಾಸಕೋಶಕ್ಕೆ ನೇರವಾಗಿ ಲಗ್ಗೆ ಹಾಕಿದರೂ ಅನೇಕರಲ್ಲಿ ಹೃದಯದ ಬಾಗಿಲು ತಟ್ಟಿ ಜೀವವನ್ನೇ ಹೊತ್ತೊಯ್ದಿದೆ. ಇನ್ನು ಕೆಲವರಲ್ಲಿ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿದೆ. ಹಾಗಾಗಿ ಕೊರೊನಾ ವೈರಾಣು ಮಾನವ ದೇಹದ ವಿವಿಧ ಅಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ವೈದ್ಯರು ಮತ್ತು ಜನಸಾಮಾನ್ಯರಲ್ಲಿ ಸಮಾನ ಕುತೂಹಲ, ಆತಂಕ ಹುಟ್ಟಿಸಿದೆ.

ಈ ಬಗ್ಗೆ ಶ್ವಾಸಕೋಶ ತಜ್ಞ ಡಾ.ವಿವೇಕ್ ಜಿ., ಹೃದಯ ತಜ್ಞ ಡಾ.ಮಹಾಂತೇಶ ಚರಂತಿಮಠ, ಮೂತ್ರಪಿಂಡ ಶಾಸ್ತ್ರಜ್ಞ  ಡಾ.ಅರುಣ್ ಕೆ.ಎನ್. ಹಾಗೂ ಜಠರ ತಜ್ಞ ಡಾ.ಉಮೇಶ ಜಾಲಿಹಾಳ ಅವರನ್ನು ಸಮಾಜಮುಖಿಗಾಗಿಯೇ ವಿಶೇಷವಾಗಿ ಸಂದರ್ಶಿಸಿದ್ದಾರೆ ವೈದ್ಯಲೇಖಕಿ ಡಾ.ವಸುಂಧರಾ ಭೂಪತಿ.

ಡಾ.ವಸುಂಧರಾ ಭೂಪತಿ

ಕೊರೋನಾ ಮತ್ತು ಶ್ವಾಸಕೋಶ

ಕೊರೋನಾ ವೈರಸ್ ಶ್ವಾಸಕೋಶಗಳ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಸಾವಿನ ಪ್ರಕರಣಗಳು ಹೆಚ್ಚಾಗಿ ಆಗುತ್ತಿವೆ. ಪಲ್ಮನಾಲಾಜಿಸ್ಟ್ ಡಾ.ವಿವೇಕ್ ಜಿ. ಅವರ ಪ್ರಕಾರ ಆಸ್ತಮಾ, ಅಲರ್ಜಿ, ಬ್ರಾಂಕೈಟಿಸ್ ಮತ್ತು ಇತರ ಉಸಿರಾಟದ ತೊಂದರೆಗಳು ಇರುವವರಿಗೆ ಕೋವಿಡ್ ಬಂದರೆ ಬಹಳ ಹುಷಾರಾಗಿ ಮತ್ತು ಚೆನ್ನಾಗಿ ಆರೈಕೆ ಮಾಡಬೇಕಾಗುತ್ತದೆ. ಕೊರೋನಾ ಅಥವಾ ಬೇರೆ ಯಾವ ವೈರಸ್, ಬ್ಯಾಕ್ಟೀರಿಯಾ ಸೋಂಕು ಬಂದು ಹೋದ ನಂತರ ಶ್ವಾಸಕೋಶದ ಮೇಲೆ ಪರಿಣಾಮ ಅಥವಾ ನ್ಯೂಮೋನಿಯಾ ಆದರೆ ಅದರ ಕಲೆಗಳು (ಸ್ಕಾರ್) ಶ್ವಾಸಕೋಶದಲ್ಲಿಯೇ ಉಳಿಯುತ್ತವೆ. ಇದನ್ನು ಫೈಬ್ರೋಸಿಸ್ ಎಂದು ಕರೆಯುತ್ತಾರೆ. ನ್ಯೂಮೋನಿಯಾ ಸೋಂಕು ಅಧಿಕವಾಗಿದ್ದಲ್ಲಿ ಫೈಬ್ರೋಸಿಸ್ ಪ್ರಮಾಣ ಹೆಚ್ಚು. ಉಬ್ಬಸ, ಮತ್ತೆ ಮತ್ತೆ ಸೋಂಕು, ಇನ್ಸುಲಿನ್ ಸಹನಶಕ್ತಿ ಕಡಿಮೆಯಾಗಬಹುದು. ಡಯಾಬಿಟಿಸ್, ಡಯಾಲಿಸಿಸ್‌ನಂತಹ ಸಮಸ್ಯೆ ಇದ್ದರೆ ಅಂತಹವರಿಗೆ ಹೆಚ್ಚು ತೊಂದರೆ. ಅವರು ಆದಷ್ಟು ಬೇಗ ಚಿಕಿತ್ಸೆ ಪಡೆಯಬೇಕು.

ಕೊರೋನಾ ವೈರಸ್ ಮಾನವ ದೇಹದೊಳಗೆ ಮುಖ್ಯವಾಗಿ ಮೂಗು ಮತ್ತು ಬಾಯಿಯ ಮೂಲಕ ಪ್ರವೇಶಿಸುತ್ತದೆ. ಈ ವೈರಸ್ ಸಾರ್ಸ್ ಅಂದರೆ ತೀವ್ರ ಉಸಿರಾಟದ ತೊಂದರೆ ಉಂಟುಮಾಡುವ ವೈರಸ್ ಕುಟುಂಬಕ್ಕೆ ಸೇರಿದ್ದು. ಇದು ಮೊದಲಿಗೆ ಉಸಿರಾಟದ ಮಾರ್ಗದಲ್ಲಿ ಸೇರಿ ಕೆಟ್ಟ ಪರಿಣಾಮ ಉಂಟುಮಾಡಲು ಶುರುಮಾಡುತ್ತದೆ. ವೈರಸ್ ಸೋಂಕು ಮೊದಲು ಕಡಿಮೆ ಫ್ಲೂ ತರಹದ ಲಕ್ಷಣಗಳನ್ನು ತೋರಿಸಬಹುದು. ನಿಧಾನವಾಗಿ ಕೆಮ್ಮು, ಗಂಟಲು ನೋವು, ಗಂಟಲಲ್ಲಿ ಕಿರಿಕಿರಿಗಳು ಆಗಬಹುದು. ಕ್ರಮೇಣ ಜ್ವರ, ಉಸಿರಾಡಲು ತೊಂದರೆ, ತಲೆನೋವು, ರುಚಿ ಮತ್ತು ವಾಸನೆ ಗೊತ್ತಾಗುವುದಿಲ್ಲ. ಕೆಲವರಲ್ಲಿ ಭೇದಿ ಮತ್ತು ದಣಿವು ಕಾಣಿಸಿಕೊಳ್ಳುತ್ತದೆ. ಸದ್ಯ ಕೊರೋನಾ ವೈರಸ್ ಶ್ವಾಸಕೋಶವನ್ನೇ ಮೊದಲು ಆಕ್ರಮಿಸುತ್ತದೆ. ಆದ್ದರಿಂದಲೇ ಹೆಚ್ಚಿನ ಭೀತಿ ಇದೆ.

ಉಸಿರಾಟದ ಮಾರ್ಗದಲ್ಲಿ ವೈರಸ್ ಹೋಗಿ ನೆಲೆಸಿದರೆ ಕಷ್ಟ. ನಿಧಾನವಾಗಿ ಆ ಮಾರ್ಗದಿಂದ ಜಾರಿ ಶ್ವಾಸಕೋಶಗಳನ್ನು ತಲುಪಿ ಉಸಿರಾಟಕ್ಕೆ ತೊಂದರೆ ಉಂಟುಮಾಡುತ್ತದೆ. ಶ್ವಾಸಕೋಶಗಳಲ್ಲಿರುವ ಆಲ್ವಿಯೋಲೈಗಳೆಂಬ ತೆಳು ಗಾಳಿಚೀಲಗಳಿಗೆ ತೊಂದರೆ ಉಂಟುಮಾಡುತ್ತವೆ. ಆಲ್ವಿಯೋಲೈಗಳು ಶ್ವಾಸಕೋಶದಲ್ಲಿ ಆಮ್ಲಜನಕವನ್ನು ರಕ್ತನಾಳಗಳಿಗೆ ವರ್ಗಾಯಿಸುತ್ತವೆ. ಕೊರೋನಾ ವೈರಸ್ ಆಲ್ವಿಯೋಲೈಗಳನ್ನು ಮತ್ತು ರಕ್ತನಾಳಗಳನ್ನು ಹಾಳುಗೆಡವುತ್ತದೆ. ಆಗ ಆಲ್ವಿಯೋಲೈಗಳು ಶ್ವಾಸಕೋಶದಲ್ಲಿ ಆಮ್ಲಜನಕವನ್ನು ರಕ್ತನಾಳಗಳಿಗೆ ಸರಾಗವಾಗಿ ವರ್ಗಾಯಿಸಲು ಅಗುವುದಿಲ್ಲ. ದೇಹದೊಳಗೆ ರಕ್ತದ ಮೂಲಕ ಆಮ್ಲಜನಕ ಸರಬರಾಜಾಗದೇ ಅಂಗಗಳು ಸೊರಗುತ್ತವೆ. ಉಸಿರಾಟವೂ ಸರಿಯಾಗಿ ಆಗುವುದಿಲ್ಲ. ಆ ದೇಹದ ರಕ್ಷಣಾ

ವ್ಯವಸ್ಥೆ ವೈರಸ್ ವಿರುದ್ಧ ಹೋರಾಡತೊಡಗುತ್ತದೆ. ರೋಗನಿರೋಧಕತೆ ಚೆನ್ನಾಗಿದ್ದರೆ ವೈರಸ್ ತೊಲಗುತ್ತದೆ. ಇಲ್ಲವಾದರೆ ಕಷ್ಟ. ದೇಹ ವೈರಸ್ ಅನ್ನು ಹೊರಹಾಕದಿದ್ದರೆ ಗಂಭೀರ ಪರಿಣಾಮಗಳು ಆಗುತ್ತವೆ.

ಶ್ವಾಸಕೋಶದಲ್ಲಿ ವೈರಸ್ ತೊಂದರೆಯಿಂದ ನ್ಯೂಮೋನಿಯಾ ಆಗಬಹುದು. ಆಗ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತದೆ. ಆಗ ಉಸಿರಾಟದ ತೊಂದರೆ ಬಹಳ ಆಗುತ್ತದೆ. ಮಾಮೂಲಿ ಸಂದರ್ಭಗಳಲ್ಲಿ ಜನರು ಹೀಗಾದರೆ ಚೇತರಿಸಿಕೊಳ್ಳುತ್ತಾರೆ. ಆದರೆ ಕೊರೊನಾ ವೈರಸ್ ಸೋಂಕಿನಿಂದ ನ್ಯೂಮೋನಿಯಾ ಬಂದರೆ ಬೇಗ ಹೋಗುವುದಿಲ್ಲ. ಒಮ್ಮೆ ಹೋದರೂ ಅದರಿಂದ ಆದ ಪರಿಣಾಮ ದೀರ್ಘಕಾಲ ಕಾಡುತ್ತದೆ.

ಡಾ.ವಿವೇಕ್ ಅವರ ಹೇಳುವಂತೆ ಯಾವುದೇ ವiಹಾಮಾರಿ ವೈರಸ್ ಕಾಯಿಲೆಗೂ ಒಂದು ಮಿತಿಯಿದೆ. ಆದರೆ ಅದು ದೀರ್ಘಕಾಲದ ನಂತರವಷ್ಟೇ ಸಂಪೂರ್ಣ ಹೋಗುತ್ತದೆ. ಎಚ್1ಎನ್1, ಡೆಂಗ್ಯೂ ಯಾವುದಾದರೂ ಸರಿಯೇ ಅದಕ್ಕೆ ಲಸಿಕೆ ಕಂಡುಹಿಡಿಯಬಹುದು. ಲಸಿಕೆ ಕೊಟ್ಟರೂ ಅದರ ಪರಿಣಾಮ ಸೀಮಿತ. ವೈರಸ್ ರೋಗಗಳು ತಾವಾಗಿಯೇ ಹೋಗಬೇಕು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ವೈರಸ್ ಸೋಂಕು ತಗುಲದಂತೆ ನೋಡಿಕೊಳ್ಳಬೇಕು.

ಕೋವಿಡ್ ರೋಗಿಗಳನ್ನು ಸಾಧಾರಣ (ಮೈಲ್ಡ್), ಮಧ್ಯಮ ಮತ್ತು ತೀವ್ರತರ ರೋಗಿಗಳೆಂದು ವರ್ಗೀಕರಿಸಲಾಗಿದೆ. ಮೊದಲನೆಯ ವರ್ಗದವರಿಗೆ ಅಷ್ಟೇನೂ ತೊಂದರೆ ಇರುವುದಿಲ್ಲ. ಈಗಾಗಲೇ ಆರೋಗ್ಯ ಸಮಸ್ಯೆಗಳು ಇರುವವರಿಗೆ ಕೋವಿಡ್‌ನಿಂದ ತೊಂದರೆಯಾಗುವ ಸಂಭವ ಹೆಚ್ಚು. ಇನ್ನು ಮೂರನೆಯ ವರ್ಗದವರಲ್ಲಿ ಹೆಚ್ಚಿಗೆ ಆರೋಗ್ಯ ಸಮಸ್ಯೆ ಇರುವವರಿದ್ದಾರೆ. ಅವರಲ್ಲಿ ರಕ್ತದ ಹೆಪ್ಪುಗಟ್ಟುವಿಕೆ, ಹೃದಯ ವೈಫಲ್ಯ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಕೊರೋನಾ ಮತ್ತು ಹೃದಯ

ಹೃದ್ರೋಗ ತಜ್ಞ ಡಾ. ಮಹಾಂತೇಶ್ ಚರಂತಿಮಠ ಅವರು ಹೇಳುವ ಪ್ರಕಾರ ಕೊರೋನಾ ವೈರಸ್ (ಸಾರ್ಸ್-ಸಿಒವಿ-2) ಮುಖ್ಯವಾಗಿ ಹೃದಯ, ಶ್ವಾಸಕೋಶಗಳು ಮತ್ತು ರಕ್ತನಾಳಗಳಲ್ಲಿ ಇರುವ ಆಂಜಿಯೋಟೆನ್ಸಿನ್ ಕನ್ವರ್ಟಿಂಗ್ ಎನ್‌ಜೈಮ್ 2 (ಎಸಿಇ2) ರಿಸೆಪ್ಟರ್ಸ್ ಮೂಲಕ ಪ್ರವೇಶ ಪಡೆಯುತ್ತದೆ. ಕಿರೀಟವಿರುವ ಈ ವೈರಸ್ ಇಂತಹ ರಿಸೆಪ್ಟರ್ಸ್ ಮೇಲೆ ಆಕ್ರಮಣ ಮಾಡಿ ಜೀವಕೋಶಗಳ ಒಳಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹಾಳು ಮಾಡಿ ತನ್ನ ಪ್ರತಿರೂಪಗಳನ್ನು ಸೃಷ್ಟಿಮಾಡುತ್ತದೆ. ಒಂದು ಜೀವಕೋಶದಲ್ಲಿ ವೈರಸ್ ನೂರಾಗಿ ಸಾವಿರವಾಗಿ ನಂತರ ಅಲ್ಲಿಂದ ಹೊರಬಂದು ಬೇರೆ ಜೀವಕೋಶಗಳ ಮೇಲೆ ದಾಳಿ ಮಾಡುತ್ತದೆ.

ಹೀಗೆ ದೇಹದ ವಿವಿಧ ಅಂಗಗಳನ್ನು ವೈರಸ್ ಆಕ್ರಮಿಸಿ ಹಾಳುಗೆಡುವುತ್ತದೆ. ಶ್ವಾಸಕೋಶದ ಜೀವಕೋಶಗಳನ್ನು ಕೊರೋನಾ ವೈರಸ್ ಹಾಳುಮಾಡತೊಡಗಿದರೆ ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತದೆ. ಆಗ ದೇಹದಲ್ಲಿ ಆಮ್ಲಜನಕದ (ಆಕ್ಸಿಜನ್) ಅಂಶ ಕಡಿಮೆಯಾಗಿ ಹೃದಯದ ಮೇಲೆ ಒತ್ತಡ ಹೇರುತ್ತದೆ. ಆಗ ಹೃದಯ ಬಹುಬೇಗ ಹೆಚ್ಚು ಪ್ರಮಾಣದಲ್ಲಿ ರಕ್ತವನ್ನು ಪಂಪ್ ಮಾಡಬೇಕಾಗುತ್ತದೆ. ದೇಹದಲ್ಲಿ ಉಸಿರಾಟದ ಮೂಲಕ ಸರಿಯಾಗಿ ಆಮ್ಲಜನಕ ಸಿಗದೆ, ಹೃದಯ

ಹೆಚ್ಚು ಹೆಚ್ಚು ಕೆಲಸ ಮಾಡಬೇಕಾದಾಗ ಹೃದಯ ವೈಫಲ್ಯವೇ ಉಂಟಾಗಬಹುದು. ಅಲ್ಲದೇ ಕೋವಿಡ್ ಸಂಬಂಧಿ ಬಹುಅಂಗಾಂಗ ವೈಫಲ್ಯ ಉಂಟಾದಾಗ ಹೃದಯಕ್ಕೂ ತೊಂದರೆ ತಪ್ಪಿದ್ದಲ್ಲ. ಇದಲ್ಲದೇ ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಇದ್ದರೆ ಅಂತಹವರಿಗೆ ಇನ್ನೂ ತೊಂದರೆ ಹೆಚ್ಚು. ಬ್ಲಾಕ್ ಒಡೆಯಬಹುದು. ರಕ್ತ ಹೆಪ್ಟುಗಟ್ಟಿ ಹೃದಯಾಘಾತ ಅಥವಾ ಹೃದಯ ವೈಫಲ್ಯವೂ ಉಂಟಾಗಬಹುದು ಎಂದು ಅವರು ಹೇಳುತ್ತಾರೆ.

ಕೋವಿಡ್ ಹೃದ್ರೋಗಿಗಳಲ್ಲಿ ಹೃದಯಕ್ಕೆ ತೀವ್ರತರವಾದ ಮಾರಣಾಂತಿಕ ತೊಂದರೆಗಳನ್ನು ತರುವ ಸಂಭವ ಇರುತ್ತದೆ. ಕೆಲವು ಹೃದ್ರೋಗಿಗಳಿಗೆ ಕೋವಿಡ್ ಗುಣಮುಖರಾದ ಮೇಲೆ ಕೂಡ ದೂರಗಾಮಿ ತೊಂದರೆಗಳು ಕಾಣಿಸಿಕೊಳ್ಳಬಹುದು. “ಹೃದ್ರೋಗಿಗಳ ವಯಸ್ಸು, ಸಹ ಅಸ್ವಸ್ಥತೆ (ಕೊಮಾರ್ಬಿಡಿಟಿ) ಮತ್ತು ಆರೋಗ್ಯ ಪರಿಸ್ಥಿತಿಯ ಮೇಲೆ ಪ್ರೋಗ್ನೋಸಿಸ್ ನಿಂತಿದೆ. ಕೊರೋನಾ ನೇರ ಮತ್ತು ಪರೋಕ್ಷವಾಗಿ ಹೃದಯದ ಮೇಲೆ ದಾಳಿಯಿಡಬಹುದು. ಕೊರೋನಾ ಆಕ್ರಮಣದಿಂದ ವಿವಿಧ ಅಂಗಾಂಗಗಳು ವೈಫಲ್ಯತೆ ಹೊಂದಿ ಹೃದಯದ ಕಾರ್ಯಕ್ಷಮತೆಯ ಮೇಲೆಯೇ ಪರಿಣಾಮ ಬೀರಬಹುದು.

ಈ ವೈರಸ್ ಹೃದಯದ ಸ್ನಾಯುಗಳನ್ನೇ ನೇರವಾಗಿ ಆಕ್ರಮಿಸಿ ಅವುಗಳನ್ನು ಬಲಹೀನಗೊಳಿಸಬಹುದು. ಜರ್ಮನಿ ದೇಶದಲ್ಲಿ ಕೈಕೊಂಡ ಕಾರ್ಡಿಯಾಕ್ ಎಂಆರ್‌ಐ ಅಧ್ಯಯನದ ಪ್ರಕಾರ ಶೇ 78% ರೋಗಿಗಳಲ್ಲಿ ಹೃದಯದ ಮೇಲೆ ಕೊರೋನಾ ವೈರಸ್ ಆಕ್ರಮಣ ಮಾಡುತ್ತದೆ. ಇದು ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟುವಂತೆ ಮಾಡಿ ಸರಾಗ ರಕ್ತಪರಿಚಲನೆಗೆ ತೊಂದರೆ ಉಂಟುಮಾಡಿ ಹೃದಯಾಘಾತಕ್ಕೆ ಕಾರಣವಾಗಬಹುದು ಇದು ಪರೋಕ್ಷ ರೀತಿಯಲ್ಲಿ ತೊಂದರೆಯಾಗುವ ಸಂದರ್ಭ, ಎಂದು ಅವರು ಹೇಳುತ್ತಾರೆ. 

ಹೃದಯದ ರೋಗಿಗಳಿಗೆ ಕೋವಿಡ್ ಬಂದಾಗ ಕೊಡಲಾಗುವ ಸ್ಟೀರಾಯಿಡ್‌ಗಳು, ಕ್ಲೋರೊಕಿನ್, ಅಜಿತ್ರೋಮೈಸಿನ್ ಮತ್ತಿತರ ಔಷಧಿಗಳು ಹೃದಯದ ಎಲೆಕ್ಟ್ರಿಕಲ್ ಕಂಡಕ್ಷನ್ (ವಿದ್ಯುದ್ವಾಹಕತೆ) ಮೇಲೆ ಪರಿಣಾಮ ಬೀರಿ ಹೃದಯದ ಬಡಿತದ ವೇಗ ಏರುಪೇರಾಗಿ ಹಠಾತ್ ಸಾವಿಗೆ ಕಾರಣವಾಗಬಹುದು. ಅಲ್ಲದೇ ದೇಹದ ರಕ್ಷಣಾ ವ್ಯವಸ್ಥೆ ಈ ವೈರಸ್ಸಿನೊಂದಿಗೆ ಹೋರಾಡುವಾಗ ಭಾರಿ ಇಮ್ಯೂನ್ ಪ್ರತಿಕ್ರಿಯೆ ಉಂಟಾಗಿ ಶ್ವಾಸಕೋಶ, ಹೃದಯ, ಕಿಡ್ನಿ, ಮೆದುಳು ಮತ್ತು ಲಿವರ್ ಇತರೆ ಅಂಗಾಂಗಗಳು ಹಾನಿಗೊಳಗಾಗಿ ವಿಫಲವಾಗಿ ಬಿರುಗಾಳಿಯಂತಹ ವಾತಾವರಣ ನಿರ್ಮಾಣವಾಗಿ ಬಹಳಷ್ಟು ಸಾವಿಗೆ ಕಾರಣವಾಗಿದೆ. ಇದನ್ನು ಸೈಟೋಕೈನ್ ಸ್ಟಾರ್ಮ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಐದರಿಂದ ಒಂಬತ್ತನೇ ದಿನ ಕಾಣಿಸಕೊಳ್ಳಬಹುದು. ಈ ದಿನಗಳಲ್ಲಿ ಆರೈಕೆ ಜೊತೆಗೆ ರೋಗಿಯ ಮೇಲೆ ತೀವ್ರ ನಿಗಾ ಇಡಬೇಕು ಎಂದು ಅವರು ಹೇಳುತ್ತಾರೆ.

ಹೃದ್ರೋಗಿಗಳಿಗೆ ಕೋವಿಡ್ ಬಂದು ಚೇತರಿಸಿಕೊಂಡರೂ ಇಂತಹ ಲಕ್ಷಣಗಳ ಹಿನ್ನೆಲೆಯಲ್ಲಿ ಬಹಳ ಜಾಗರೂಕರಾಗಿ ಇರಬೇಕಾಗುತ್ತದೆ. ವೆಂಟಿಲೇಟರ್ ಮತ್ತು ದೇಹಕ್ಕೆ ಆಸ್ಪತ್ರೆಯಲ್ಲಿ ಪೂರೈಸಲಾಗುವ ಆಮ್ಲಜನಕ ಸರಿಯಾದ ಸಮಯಕ್ಕೆ ಲಭ್ಯವಿಲ್ಲದಿದ್ದಲ್ಲಿ ಜೀವಕ್ಕೆ ಅಪಾಂiÀiವಾಗುವ ಸಾಧ್ಯತೆ ಹೆಚ್ಚು. ಇದೆಲ್ಲವನ್ನು ಕೋವಿಡ್ ರೋಗಿಗಳ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆಯಿಂದ ದೃಢಪಡಿಸಿಕೊಳ್ಳಲಾಗಿದೆ. ಕೆಲವರು ಕೋವಿಡ್‌ನಿಂದ ಗುಣಮುಖರಾದ ಒಂದೂವರೆ ಎರಡು ತಿಂಗಳ ನಂತರ ಎದೆ ನೋವು, ದಣಿವು ಎಂದು ಹೇಳಬಹುದು. ಉಸಿರಾಟದ ತೊಂದರೆಯೂ ಆಗಬಹುದು. ಅಂತಹವರು ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಕೊರೋನಾ ಮತ್ತು ಮೂತ್ರಪಿಂಡ

ನೆಫಾಲಜಿಸ್ಟ್ ಡಾ.ಅರುಣ್ ಕೆ.ಎನ್. ಅವರ ಪ್ರಕಾರ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಇರುವವರಿಗೆ ಕೋವಿಡ್ ಬಂದಲ್ಲಿ ಮೂತ್ರಪಿಂಡದ ಮೇಲೆ ನೇರವಾಗಿ ಪರಿಣಾಮ ಬೀರಬಹುದು ಇಲ್ಲವೇ ಪರೋಕ್ಷ ಪರಿಣಾಮವೂ ಆಗಬಹುದು.

ಅಕ್ಯೂಟ್ ಟ್ಯೂಬ್ಯೂಲಾರ್ ನ್ಯೂರೋಸಿಸ್ ಆಗಬಹುದು. ವೈರಸ್‌ಗಳ ಪ್ರಭಾವ ಹೆಚ್ಚಾದಲ್ಲಿ ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆ ಆಗುತ್ತದೆ.

ಈಗಾಗಲೇ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿರುವ ಡಯಾಲಿಸಿಸ್‌ಗೆ ಒಳಗಾಗಿರುವ ರೋಗಿಗಳು ಕೊರೋನಾ ಸೋಂಕಿಗೆ ಹೆಚ್ಚು ಈಡಾಗುತ್ತಾರೆ. ಏಕೆಂದರೆ ಅವರ ದೇಹದಲ್ಲಿ

ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೇ ಮೂತ್ರಪಿಂಡದ ಕಸಿಗೊಳಗಾದವರಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆ ಏರುಪೇರಾಗುವುದರಿಂದ ಅವರ ಮೇಲೆ ಕೊರೋನಾ ಸೋಂಕಿನ ಪರಿಣಾಮ ಹೆಚ್ಚು. ಅಲ್ಲದೇ ಮೂತ್ರಪಿಂಡದ ತೊಂದರೆಯಿಂದ ಬಳಲುವವರಲ್ಲಿ ಹೃದಯ, ಶ್ವಾಸಕೋಶಗಳ ಬೇರೆ ಸೋಂಕು ಇದ್ದಲ್ಲಿ ಮತ್ತಷ್ಟು ತೊಂದರೆ ಇರುತ್ತದೆ ಎಂದು ಡಾ.ಅರುಣ್ ಹೇಳುತ್ತಾರೆ.

ಕೊರೋನಾ ಮತ್ತು ಕರುಳು

ಕೊರೋನಾ ಬಂದವರಲ್ಲಿ ನಾಸಿಯಾ (ವಾಕರಿಕೆ), ವಾಂತಿ, ಹೊಟ್ಟೆನೋವು ಮತ್ತು ಭೇದಿ ಬರಬಹುದು ಎನ್ನುತ್ತಾರೆ ಉದರ ಮತ್ತು ಕರುಳು ರೋಗ ತಜ್ಞರಾದ ಡಾ.ಉಮೇಶ ಜಾಲಿಹಾಳ. ಇಂತಹ ಲಕ್ಷಣಗಳು ಕೊರೊನಾ ಬರುವುದಕ್ಕೆ ಮೊದಲೂ ಕೂಡ ಇರಬಹುದು. ವೈರಸ್ ಸೋಂಕು ಬಂದಾಗ ಮತ್ತು ಹೋದ ಮೇಲೆಯೂ ಭೇದಿ ಕಾಣಿಸಿಕೊಳ್ಳಬಹುದು. ಈ ವೈರಸ್ ದೇಹದಿಂದ ವಿಸರ್ಜನೆಯಾಗಲು ಎರಡು ವಾರಗಳಿಗೂ ಹೆಚ್ಚು ಕಾಲ ಬೇಕು.

ಮಲದಿಂದ ಕೂಡ ಕೊರೋನಾ ವೈರಸ್ ಹರಡುತ್ತದೆ, ಕೊರೊನಾ ಪಾಸಿಟಿವ್ ರೋಗಿಗಳು ನಲ್ಲಿ, ಕಮೋಡ್‌ನ ಭಾಗಗಳನ್ನು ಸರಿಯಾಗಿ ಫ್ಲಶ್ ಮಾಡದಿದ್ದರೆ ಅವುಗಳನ್ನು ಬೇರೆಯವರು ನಂತರ ಸ್ಪರ್ಷಿಸಿದರೆ ಆಗ ಅಲ್ಲಿಯೂ ವೈರಸ್ ಹರಡುವ ಸಂಭವ ಇದೆ. ಆದ್ದರಿಂದ ಸಾಮಾನ್ಯ ಶೌಚಾಲಯಗಳನ್ನು ಬಳಸುವಾಗ ಎಚ್ಚರದಿಂದ ಇರಬೇಕು ಎಂದು ಅವರು ಹೇಳುತ್ತಾರೆ.

ಮೊದಲಿಗೆ ಕೊರೋನಾ ವೈರಸ್ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶ ಮತ್ತು ಹೃದಯವನ್ನು ತಲುಪುವ ಹಾಗೆ ಕರುಳನ್ನೂ ತಲುಪಿ ಅಲ್ಲಿಯೂ ಕೋಲಾಹಲ ಉಂಟುಮಾಡುತ್ತದೆ. ಅದು ಅಲ್ಲಿಯೂ ಹೆಚ್ಚಾಗುವ ಸಾಧ್ಯತೆ ಇದೆ. ಎಂಡೋಸ್ಕೋಪಿ ಮತ್ತು ಎಲೆಕ್ಟ್ರಾನಿಕ್ಸ್  ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಇದು ತಿಳಿಯುತ್ತದೆ.

ಕೆಮ್ಮುವಾಗ ಮತ್ತು ಸೀನುವಾಗ ಕೊರೊನಾ ವೈರಸ್ ಕಣಗಳು ಹೊರಗೆ ಸಿಡಿಯುತ್ತವೆ ಮತ್ತು ಬೇರೆಯವರ ಸಂಪರ್ಕಕ್ಕೆ ಬರುತ್ತವೆ. ಒಮ್ಮೆ ವೈರಸ್ ಸೋಂಕು ತಗುಲಿ ಹೋದ ನಂತರವೂ ಮತ್ತೆ ಸೋಂಕು ಬರಬಹುದು. ಕೋವಿಡ್‌ನಿಂದ ಗುಣಮುಖರಾದ ಜನರಲ್ಲಿ ಕೊರೋನಾದ ಆಂಟಿಬಾಡೀಸ್ ಎರಡು ಮೂರು ತಿಂಗಳ ನಂತರ ಕಡಿಮೆಯಾದರೆ ಮತ್ತೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಹರ್ಡ್ ಇಮ್ಯುನಿಟಿ ದೂರದ ಮಾತು ಎಂಬುದು ಡಾ.ಜಾಲಿಹಾಳರ ಅಭಿಪ್ರಾಯ.

*

ಒಟ್ಟಾರೆ ಹೇಳುವುದಾದರೆ ನಮ್ಮ ಬದುಕಿಗೆ ನಾವೇ ಜವಾಬ್ಬಾರರು. ಕೊರೋನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದೇ ಇಂದಿನ ಬಹುದೊಡ್ಡ ಚಿಕಿತ್ಸೆ. ಮಾಸ್ಕನ್ನು ಧರಿಸುವುದು, ಸೋಪಿನಿಂದ ಕೈ ತೊಳೆಯುವುದು ಇಲ್ಲವೇ ಸ್ಯಾನಿಟೈಸರ್ ಬಳಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಜನರು ಸೇರಿರುವ ಕಡೆಗೆ ಹೋಗದೇ ಇರುವುದು, ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಕಂಡುಬಂದಲ್ಲಿ ಅಲಕ್ಷಿಸದೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.

ಬಹುತೇಕ ಜನರಲ್ಲಿ ಸಾಮಾನ್ಯ ಇನ್‌ಫ್ಲುಯೆಂಜಾ ರೀತಿಯ ಲಕ್ಷಣಗಳಿದ್ದು ಐದು ಅಥವಾ ಏಳು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವುದನ್ನು ನಾವು ಕಾಣುತ್ತಿದ್ದೇವೆ. ಇನ್ನು ಕೆಲವರಲ್ಲಿ ನ್ಯೂಮೋನಿಯಾ ಉಂಟಾಗಿ ನಂತರ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಒಂದು ರೀತಿಯಲ್ಲಿ ಕೊರೋನಾ ತನ್ನ ನಿಜವಾದ ರೂಪ ಬಿಟ್ಟುಕೊಡದೇ ವೈದ್ಯರನ್ನು ಮತ್ತು ರೋಗಿಗಳನ್ನು ಸತಾಯಿಸುತ್ತಿರುವುದು ಸುಳ್ಳಲ್ಲ.

*ಲೇಖಕಿ ಪ್ರಖ್ಯಾತ ಆಯುರ್ವೇದ ವೈದ್ಯರು, ವೈದ್ಯಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.

Leave a Reply

Your email address will not be published.