ಕೊರೊನ ಎರಡನೆಯ ಅಲೆ ಉಸಿರುಗಟ್ಟಿದ ಭಾರತ

ಇನ್ನು ಸತ್ಯವನ್ನು ನಿರಾಕರಿಸಿ ಉಪಯೋಗವಿಲ್ಲ. ನಮ್ಮ ಸರ್ಕಾರಗಳು ಭಾರೀ ಎಡವಟ್ಟು ಮಾಡಿಕೊಂಡಿವೆ. ಈಗ ಆಗಿರುವ ಪ್ರಮಾದಗಳಿಗೆ ಭಾರೀ ಅಪರಾಧದ, ನರಮೇಧದ ಆಯಾಮವೇ ಇದೆ.

-ಡಾ.ಬಿ.ಆರ್.ಮಂಜುನಾಥ್

ಈ ಲೇಖನ ಅಚ್ಚಿಗೆ ಹೋಗುವ ವೇಳೆಗೆ ಭಾರತದಲ್ಲಿ ಒಂದು ದಿನದ ಕೊರೊನ ಸಾವಿನ ಸಂಖ್ಯೆ 3700 ಮುಟ್ಟಿದೆ. ಆದರೆ ಇದಕ್ಕಿಂತ ಗಾಬರಿ ಹುಟ್ಟಿಸುವ ಸಂಗತಿ ಎಂದರೆ ಅನೇಕ ರಾಜ್ಯಗಳಲ್ಲಿ ಸಾವಿನ ಸಂಖ್ಯೆಯನ್ನು ಸರಿಯಾಗಿ ಬಹಿರಂಗಪಡಿಸುತ್ತಿಲ್ಲ. ಉತ್ತರ ಪ್ರದೇಶವು ಎಂದಿನಂತೆ ವಾಸ್ತವವನ್ನು ನಿರಾಕರಿಸುವ ಕುಯುಕ್ತಿ, ಕುತಂತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಗುಜರಾತ್‍ನಲ್ಲಿ ಅಲ್ಲಿನ ಹೈಕೋರ್ಟ್ ದಂತಗೋಪುರದಿಂದ ಕೆಳಗಿಳಿದು ವಾಸ್ತವವನ್ನು ಗ್ರಹಿಸಿ ಎಂದು ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಎಂದಿನಂತೆ ಭಾರತದ ಬೃಹತ್ ಮಾಧ್ಯಮಗಳು ಸರ್ಕಾರದ ಸತ್ಯ ಬಚ್ಚಿಡುವ ಮಹಾಮೋಸದಲ್ಲಿ ಭಾಗಿಯಾಗಿವೆ. ಆದರೆ ಅಂತರರಾಷ್ಟ್ರೀಯ ಮಾಧ್ಯಮಗಳು ಸಾಕಷ್ಟು ಸತ್ಯಗಳನ್ನು ಬಯಲಿಗೆಳೆದಿವೆ. ಗಾರ್ಡಿಯನ್ ಪತ್ರಿಕೆಯಲ್ಲಿ ಬರೆಯುತ್ತಾ ಸುಪ್ರಸಿದ್ಧ ಲೇಖಕಿ ಅರುಂಧತಿ ರಾಯ್ ಇದನ್ನು ‘ಮಾನವತೆಯ ವಿರುದ್ಧದ ಹೇಯ ಅಪರಾಧ’ ಎಂದಿದ್ದಾರೆ. ಅವರ ಲೇಖನ ಹೇಳುವ ಪ್ರಕಾರ ಸತ್ತವರ ನಿಜವಾದ ಸಂಖ್ಯೆಯು ವರದಿಯಾಗಿರುವ ಸಂಖ್ಯೆಯ ಮೂವತ್ತರಷ್ಟಿದೆ.

ಅನೇಕ ಮಹಾನಗರಗಳಲ್ಲಿ ಆಸ್ಪತ್ರೆಗಳೇ ನರಕಸದೃಶವಾಗಿವೆ. ರೋಗಿಗಳನ್ನು ಕರೆದುಕೊಂಡು ಬಂದ ಆಂಬುಲೆನ್ಸ್‍ಗಳು ಅವರನ್ನು ಇಳಿಸಲಾಗದೆ ಆಸ್ಪತ್ರೆಯ ಮುಂದೆ ಸಾಲಾಗಿ ನಿಂತಿವೆ. ಸತ್ತವರನ್ನು ಸುಡಲು ಸ್ಮಶಾನಗಳಿಲ್ಲ. ಅನೇಕ ಸ್ಮಶಾನಗಳಲ್ಲಿ ಸುಮ್ಮನೆ ಹೆಣಗಳನ್ನು ಎಲ್ಲೆಂದರಲ್ಲಿ ಸೌದೆ ಒಟ್ಟಿ ಸುಡಲಾಗುತ್ತಿದೆ. ಇದೆಲ್ಲಾ ಯಾರ ಪಾಪದ ಸಾಲಕ್ಕೆ ನಾವು ತೆರುವ ಬಡ್ಡಿ! ನಾವು ಇನ್ನೂ ಮಾತನಾಡದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸೀತೆ!

ಮಾನವ ನಿರ್ಮಿತ ನರಮೇಧ

ಕೋವಿಡ್ ರೋಗ ಒಂದು ಭಯಂಕರ ಜನಪದೋಧ್ವಂಸ ವ್ಯಾಧಿ. ಅದು ಇತಿಹಾಸ ಕಂಡ ಪ್ಲೇಗ್, ಸಿಡುಬು, ಕಾಲರಾಗಳಂತೆಯೇ ಸುಲಭಕ್ಕೆ ನಿಯಂತ್ರಣಕ್ಕೆ ಸಿಗುವುದಿಲ್ಲ. ಆದರೆ ನಾವೀಗ 21 ನೇ ಶತಮಾನದಲ್ಲಿದ್ದೇವೆ. ಅಗಾಧವಾದ ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯ ವಾರಸುದಾರದಾಗಿದ್ದೇವೆ. ಮತ್ತೆ ಬೃಹತ್ ರಾಷ್ಟ್ರಗಳ ಕೈನಲ್ಲಿ ಅಪಾರ ಸಂಪನ್ಮೂಲಗಳು ಶೇಖರಣೆಯಾಗಿವೆ. ಆದ್ದರಿಂದ ಈಗ ಜನತೆ ಹಾದಿಬೀದಿಗಳಲ್ಲಿ ಮಿಡತೆಗಳಂತೆ ಸಾಯುವ ಪರಿಸ್ಥಿತಿ ಉಂಟಾಗಬೇಕಾದ ಯಾವ ಅನಿವಾರ್ಯತೆಯೂ ಇರಲಿಲ್ಲ.

ಸರ್ಕಾರವನ್ನು ಬೆಂಬಲಿಸುವ ಬುದ್ಧಿಜೀವಿಗಳು ಕೆಟ್ಟ ಸುದ್ದಿ ಹರಡಬೇಡಿ ಎಂದು ಬೊಬ್ಬಿರಿಯುತ್ತಾರೆ. ಆದರೆ ಸತ್ಯ ಮಾತ್ರ ಜನಸಾಮಾನ್ಯರ ಕೈನಲ್ಲಿನ ಆಯುಧ. ಪರಿಸ್ಥಿತಿ ಎಷ್ಟು ಭೀಕರವಾಗಿದೆ, ಎಷ್ಟು ನಿರ್ದಯವಾಗಿದೆ ಎಂದು ಹೇಳದಿದ್ದರೆ ಸರ್ಕಾರದಿಂದ ಉತ್ತರದಾಯಿತ್ವವನ್ನೂ ಆಗ್ರಹಿಸುವುದು ಯಾರು ಮತ್ತು ಹೇಗೆ?

ನಮ್ಮನ್ನು ರಕ್ಷಿಸುವಲ್ಲಿ ನಿಜಕ್ಕೂ ನಮ್ಮ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಮೊದಲ ಅಲೆ ಬಂದಾಗಲೂ ಸರ್ಕಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕಾಲಾವಧಿ ಇತ್ತು. ಆದರೆ ಟ್ರಂಪ್ ಜೊತೆ ಸಭೆ ಮಾಡುವುದು, ಕೋಮುದಂಗೆಯನ್ನು ಉತ್ತೇಜಿಸುವುದು, ವಿರೋಧ ಪಕ್ಷದ ಸರ್ಕಾರಗಳನ್ನು ಉರುಳಿಸುವುದು ಇದರಲ್ಲಿ ಮುಳುಗಿದ್ದ ಸರ್ಕಾರ ಮತ್ತು ಆಳುವ ಪಕ್ಷ ನಿಸರ್ಗ ನಮಗೆ ನೀಡಿದ್ದ ಅವಕಾಶವನ್ನು ಹಾಳು ಮಾಡಿಕೊಂಡರು. ವಾಸ್ತವದಲ್ಲಿ ಈ ಬಾರಿಯ ಅಪರಾಧ ಹತ್ತು ಪಟ್ಟು ದೊಡ್ಡದು.

ಆಗಬೇಕಾಗಿದ್ದೇನು?

ಮೊದಲ ಬಾರಿ ಕೊರೊನಾ ಜಗತ್ತನ್ನು ಅಪ್ಪಳಿಸಿದಾಗ ನಡೆದುಹೋದ ಕೆಲವು ತಪ್ಪುಗಳು ಕ್ಷಮಾರ್ಹ. ಆದರೂ ಅಲ್ಲಿ ಸಹ ಒಂದು ಮುಖ್ಯವಾದ ಪಾಠ ಇದ್ದೇ ಇತ್ತು. ಅದೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಖಾಸಗಿಗೆ ಒಪ್ಪಿಸಬಾರದು. ಆರೋಗ್ಯ ವ್ಯವಸ್ಥೆ ಖಾಸಗೀಕರಣಗೊಂಡಾಗ, ಲಾಭದಾಹದ ರಕ್ಕಸರ ಕೈಗೆ ಜನತೆಯ ಆರೋಗ್ಯದ ಹೊಣೆಯನ್ನು ವರ್ಗಾಯಿಸಿದಾಗ ಏನೇನು ಅನಾಹುತಗಳಾಗುತ್ತವೆ ಎಂಬುದಕ್ಕೆ ಅಮೆರಿಕಾ ಒಂದು ಸ್ಪಷ್ಟ ಮಾದರಿಯಾಗಿತ್ತು. ವಿಮಾ ಕಂಪನಿಗಳು, ಔಷಧ ಹಾಗೂ ವೈದ್ಯಕೀಯ ಯಂತ್ರ ಸಾಮಾಗ್ರಿಗಳ ಲಾಬಿಗಳು ಅಮೆರಿಕಾವನ್ನು ನಿಯಂತ್ರಿಸುತ್ತಿರುವುದರ ಬಗ್ಗೆ ಅಲ್ಲಿನ ಪ್ರಗತಿಶೀಲ ಚಿಂತಕರು ಸಹ ಎಚ್ಚರಿಸುತ್ತಲೇ ಇದ್ದರು. ಒಂದು ಮಟ್ಟಿಗೆ ಈಗಲೂ ಸಾರ್ವಜನಿಕ ಆರೋಗ್ಯ ಕ್ಷೇತ್ರವು ಸರ್ಕಾರದ ಜವಾಬ್ದಾರಿಯಾಗಿರುವ ಕೆನಡಾ, ಇಂಗ್ಲೆಂಡ್, ಫ್ರಾನ್ಸ್‍ಗಳ ಮಾದರಿಗಳು ಖಂಡಿತಾ ಸಾಪೇಕ್ಷವಾಗಿ ಉತ್ತಮವಾಗಿವೆ. ಇನ್ನು ಸಂಪೂರ್ಣವಾಗಿ ಸಾರ್ವಜನಿಕ ನಿಯಂತ್ರಣದಲ್ಲಿದ್ದು ಜನಪರ ಧೋರಣೆಯನ್ನು ಹೊಂದಿರುವ ಕ್ಯೂಬಾದ ಯಶಸ್ಸು ಎಲ್ಲರಿಗೂ ಗೊತ್ತು.

ಆದರೆ ನಮ್ಮ ಭಾರತದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಂಗ್ರೆಸ್ ಆಡಳಿತದ ಕಾಲದಿಂದಲೂ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿಯವರಿಗೆ ಮಣೆ ಹಾಕುತ್ತಾ ಬಂದವು. ಇಂಥ ಪದ್ಧತಿಯ ವೈಫಲ್ಯ ತೀರಾ ನಗ್ನವಾಗಿ ಕಾಣಿಸಿಕೊಳ್ಳುವುದು ಕೊರೊನಾದಂಥ ಭಯಂಕರ ಸಾಂಕ್ರಾಮಿಕ ನಮ್ಮ ಮೇಲೆ ಸವಾರಿ ಮಾಡಲಾರಂಭಿಸಿದಾಗ. ಅದೇನೇ ಇರಲಿ ಮೊದಲ ಅಲೆಯ ನಂತರ ನಮ್ಮ ಸರ್ಕಾರಗಳು ಎಚ್ಚೆತ್ತುಕೊಂಡು ಹೆಚ್ಚಿನ ಹಣಕಾಸನ್ನು ಬಿಡುಗಡೆ ಮಾಡಬೇಕಿತ್ತು. ವಿಪತ್ತನ್ನು ಎದುರಿಸಲು ನೀಲನಕ್ಷೆಯೊಂದನ್ನು ಸಿದ್ಧಪಡಿಸಿಕೊಳ್ಳಬೇಕಿತ್ತು.

ವಾಸ್ತವದಲ್ಲಿ ಇಂಥ ಕ್ರಮಗಳ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿ ಸೂಚಿಸಿತ್ತು. ಮತ್ತು ಅತ್ಯಂತ ಹೆಸರುವಾಸಿಯಾದ ಅಂತರರಾಷ್ಟ್ರೀಯ ವೈದ್ಯಕೀಯ ತಜ್ಞರ ವೇದಿಕೆಯಾದ ಲ್ಯಾನ್ಸೆಟ್ ಸಹ ಅವಶ್ಯ ಕ್ರಮಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿತ್ತು. 2020 ರ ಜೂನ್ ವೇಳೆಗೆ ಎಲ್ಲಾ ತಜ್ಞರೂ ಬರಲಿರುವ ಎರಡನೇ ಅಲೆಯ ಬಗ್ಗೆ ಹೇಳುತ್ತಲೇ ಇದ್ದರು.

ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವುದು, ಐಸಿಯುಗಳನ್ನು ಹೆಚ್ಚಿಸುವುದು, ಭಾರೀ ಪ್ರಮಾಣದಲ್ಲಿ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲು ಸರಬರಾಜು ಸರಪಳಿಯನ್ನು ಬಲಪಡಿಸುವುದು, ವೆಂಟಿಲೇಟರ್‍ಗಳನ್ನು ಹೆಚ್ಚಿಸಿಕೊಳ್ಳುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇಡಿಯ ಜನತೆಗೆ ಲಸಿಕೆ ಹಾಕಲು ಬೃಹತ್ತಾದ ವ್ಯಾಕ್ಸಿನ್ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಇವು ಆಗಬೇಕಿದ್ದ ಸರಳವಾದ ಕ್ರಮಗಳು. ಇದು ಯಾವುದಕ್ಕೂ ರಾಕೆಟ್ ವಿಜ್ಞಾನದ ತಿಳುವಳಿಕೆ ಬೇಕಿಲ್ಲ.

ವೈಜ್ಞಾನಿಕ ಕ್ರಮಗಳಲ್ಲಿ ನಂಬಿಕೆ, ದಕ್ಷತೆ, ಜನಪರ ಕಾಳಜಿ, ವೈಫಲ್ಯಗಳನ್ನು ಒಪ್ಪಿಕೊಳ್ಳುವ ವಿನಯ, ತಜ್ಞರ ಅಭಿಪ್ರಾಯಗಳನ್ನು ಆಲಿಸಿ ಒಮ್ಮತದ ನೀತಿಗಳನ್ನು ರೂಪಿಸುವ ರಾಜಕೀಯ ಜಾಣ್ಮೆ, ಜನತೆಯಲ್ಲಿ ಧೈರ್ಯ-ವಿಶ್ವಾಸವನ್ನು ಹುಟ್ಟಿಸುವ ನಾಯಕರ ನಡತೆ ಭಾರತಕ್ಕೆ ಅವಶ್ಯವಿತ್ತು. ಆದರೆ ದೇಶದ ದೌರ್ಭಾಗ್ಯವೆಂದರೆ ಅತ್ಯಂತ ಅಗತ್ಯವಾದ ಘಳಿಗೆಯಲ್ಲಿ ನಮ್ಮಲ್ಲಿ ರಾಜಕೀಯ ಸದ್ವಿವೇಕ ಎಂಬುದು ಕಾಣದಂತೆ ಮಾಯವಾಯಿತು.

ಜಾಗತಿಕ ಅನುಭವ

ಜಗತ್ತಿನಾದ್ಯಂತ ಮೊದಲನೇ ಅಲೆಯಲ್ಲಿ ಪೆಟ್ಟು ತಿಂದಿದ್ದ ದೇಶಗಳು ಈ ಬಾರಿ ಒಂದು ಮಟ್ಟಿಗೆ ವಿಪತ್ತನ್ನು ಎದುರಿಸಲು ಸಜ್ಜಾಗಿದ್ದವು. ಅಮೆರಿಕನ್ನರ ಅದೃಷ್ಟ. ದುರಹಂಕಾರಿಯಾಗಿ ಅಜ್ಞಾನಿಯಾಗಿ, ನಿರಂಕುಶವಾಗಿ ಮೆರೆಯುತ್ತಿದ್ದ ಟ್ರಂಪ್ ನಿರ್ಗಮಿಸಿದ್ದರು. ಬೈಡೆನ್- ಕಮಲಾ ಜೋಡಿ ಜನತೆಯ ಅಗತ್ಯಕ್ಕೆ ಸ್ಪಂದಿಸುವ ಒಂದು ಆಧುನಿಕ ಮಾದರಿಯ ಜವಾಬ್ದಾರಿಯುತ ಸರ್ಕಾರವಾಗಿ ಕಾಣಿಸಿಕೊಂಡಿತ್ತು.

ಕಳೆದ ಬಾರಿ ಭಯಂಕರವಾದ ಹೊಡೆತವನ್ನು ಎದುರಿಸಿದ್ದ ಇಟಲಿ ಮತ್ತು ಸ್ಪೇನ್‍ಗೆ ಈ ಬಾರಿ ಮಾಧ್ಯಮಗಳು ಬಹಳ ಬೇಗನೆ ಎರಡನೇ ಅಲೆಯ ಬಗ್ಗೆ ಎಚ್ಚರಿಸಿ, ಸರ್ಕಾರದ ನಿಧಾನಗತಿಯ ಪ್ರತಿಸ್ಪಂದನೆಯನ್ನು ಟೀಕಿಸಿ ತಪರಾಕಿ ನೀಡಿದವು. ಸರ್ಕಾರಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದಲ್ಲದೆ ಆಸ್ಪತ್ರೆ ವ್ಯವಸ್ಥೆಯನ್ನು ಬಲಪಡಿಸಿಕೊಂಡವು.

ವ್ಯಾಕ್ಸಿನ್ ತಯಾರಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಮುಂದುವರೆದ ರಾಷ್ಟ್ರಗಳು ಎಂದಿನಂತೆ ತಮ್ಮ ಮಾರುಕಟ್ಟೆ ಆಧಾರಿತ ಧೋರಣೆಯನ್ನು ತೋರಿಸುತ್ತಾ ಬಂದವು. ಅವು ವ್ಯಾಕ್ಸಿನ್‍ಗೆ ಸಂಬಂಧಿಸಿದ ಎಲ್ಲಾ ಕಚ್ಚಾ ವಸ್ತುಗಳನ್ನು ಯಂತ್ರ ಸಲಕರಣೆಗಳನ್ನು ತಮ್ಮ ಏಕಸ್ವಾಮ್ಯದಲ್ಲಿರಿಕೊಂಡು ಬೀಗಹಾಕಿಕೊಂಡು ಕೂತಿವೆ. ಆದರೆ ಬಡರಾಷ್ಟ್ರಗಳಲ್ಲಿ ಮತ್ತೆ ಕೊರೊನಾ ಸ್ಫೋಟವಾದರೆ ಅದು ಶ್ರೀಮಂತ ರಾಷ್ಟ್ರಗಳನ್ನು ತಲುಪುತ್ತದೆ. ಭಾರತ, ದಕ್ಷಿಣ ಆಫ್ರಿಕಾ, ಬ್ರೆಜಿಲ್‍ಗಳಲ್ಲಿ ರೂಪಾಂತರಗೊಂಡ ತಳಿಗಳು ಕಾಣಿಸಿಕೊಳ್ಳುತ್ತಿವೆ. ನಾಳೆ ಅವು ಕಡಲು ದಾಟಿ ಮುಂದುವರೆದ ದೇಶಗಳ ಕರಾವಳಿಯನ್ನೂ ಅಪ್ಪಳಿಸುತ್ತವೆ. ಆದ್ದರಿಂದ ಮುಂದುವರೆದ ರಾಷ್ಟ್ರಗಳಿಗೆ ವಿಶಾಲವಾದ, ಜಾಗತಿಕ ದೃಷ್ಟಿಕೋನ ಅಗತ್ಯ.

ಅದೇನೇ ಇರಲಿ, ಆಸ್ಟ್ರೇಲಿಯಾ, ನ್ಯೂಜಿûಲ್ಯಾಂಡ್, ಚೀನಾ, ಕ್ಯೂಬಾ ಮೊದಲಾದ ದೇಶಗಳು ತಮ್ಮ ಪ್ರಜೆಗಳ ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿವೆ ಎಂಬ ಬಗ್ಗೆ ಎರಡು ಮಾತಿಲ್ಲ. ಇಸ್ರೇಲ್‍ನಲ್ಲಿ ವ್ಯಾಕ್ಸಿನೇಶನ್ 52% ಜನರನ್ನು ತಲುಪಿ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದೆ. ಅಮೆರಿಕಾ 17% ಜನಕ್ಕೆ ಪೂರ್ತಿ ವ್ಯಾಕ್ಸಿನ್ ಹಾಕಿ, ಎರಡು ಬಾರಿ ಲಸಿಕೆ ತೆಗೆದುಕೊಂಡವರು ಇನ್ನು ಮುಂದೆ ಮಾಸ್ಕ್ ಹಾಕಿಕೊಳ್ಳಬೇಕಿಲ್ಲ ಎಂದು ಘೋಷಿಸುವಷ್ಟು ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಕುಂಭಕರ್ಣ ನಿದ್ರೆಯೋ, ತಪ್ಪಾದ ಆದ್ಯತೆಗಳೋ

ಎರಡನೇ ಅಲೆಗೆ ಸರ್ಕಾರ ಏಕೆ ಸ್ಪಂದಿಸಲಿಲ್ಲ ಎಂಬುದು ಚಿದಂಬರ ರಹಸ್ಯವೇ! ಮೊದಲ ಅಲೆ ಬಂದಾಗಲೇ ಅನೇಕ ತಾತ್ಕಾಲಿಕ ಆಸ್ಪತ್ರೆಗಳನ್ನು ಸೃಷ್ಟಿಸಲಾಗಿತ್ತು. ಆದರೆ ಆಗ ಸೃಷ್ಟಿಸಿದ ಆಸ್ಪತ್ರೆಗಳನ್ನು ಮುಚ್ಚಿಸದೆ ಅವುಗಳನ್ನು ಯಾವುದೇ ಕ್ಷಣದಲ್ಲಿ ಪುನರಾರಂಭಿಸಲು ಸಿದ್ಧವಾಗಿರಬೇಕಿತ್ತು. ಹೊಸ ಆಸ್ಪತ್ರೆಗಳನ್ನು ಯುದ್ಧೋಪಾದಿಯಲ್ಲಿ ನಿರ್ಮಿಸುವುದು ಸಹ ಕಷ್ಟವೇನಲ್ಲ. ರಣರಂಗದಲ್ಲಿ ರಾತ್ರೋರಾತ್ರಿ ಟೆಂಟ್ ಆಸ್ಪತ್ರೆಗಳನ್ನು ಹಾಕುವುದು, ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಸೃಷ್ಟಿಸುವುದು ಇದನ್ನೆಲ್ಲಾ ದಶಕಗಳ ಹಿಂದೆಯೇ ಸಾಧಿಸಲಾಗಿದೆ.

ಆಸ್ಪತ್ರೆಗೆ ಅಗತ್ಯವಾದ ಮಂಚ, ಹಾಸಿಗೆ ಅಗತ್ಯವಾದ ಸಾಧಾರಣ ಸಲಕರಣೆಗಳನ್ನು ಹೊಂದಿಸುವುದು ಕಷ್ಟವಾಗಬಾರದು. ಭೂಕಂಪ, ಪ್ರವಾಹ, ತ್ಸುನಾಮಿ ಇವು ಅಪ್ಪಳಿಸಿದ ಸ್ಥಳಗಳಲ್ಲಿ ರಾತ್ರೋರಾತ್ರಿ ಇಂಥ ಸೌಲಭ್ಯಗಳನ್ನು ಹಿಂದೆ ಒಂದು ಮಟ್ಟಿಗೆ ಸರ್ಕಾರಗಳು ಮಾಡಿವೆ. ಸ್ವಯಂ ಸೇವಾ ಸಂಸ್ಥೆಗಳಂತೂ ತುಂಬಾ ದಕ್ಷತೆಯಿಂದ ಅದನ್ನು ನಿರ್ವಹಿಸಿವೆ.

ಇನ್ನು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸುವ ಸವಾಲು. ನಮ್ಮ ಭಾರತದ ಅದೃಷ್ಟ. ನಮ್ಮಲ್ಲಿ ಒಂದುಮಟ್ಟಿಗೆ ಉತ್ತಮ ವೈದ್ಯರು, ತಜ್ಞರು ಲಭ್ಯರಿದ್ದಾರೆ. ಬಹುತೇಕ ಇಂತಹ ಸರಳ ಚಿಕಿತ್ಸೆಯನ್ನು ನೀಡಬೇಕಾದ ಘಟಕಗಳಲ್ಲಿ ಕೆಲಸ ಮಾಡಲು ನಿವೃತ್ತ ವೈದ್ಯರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಖಾಸಗಿ ವೈದ್ಯರು ಇವರನ್ನು ತೊಡಗಿಸಿಕೊಳ್ಳಲು ಸರ್ಕಾರ ಕ್ರಮಕೈಗೊಳ್ಳಬೇಕಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಮೇಲ್ದರ್ಜೆ ಆಸ್ಪತ್ರೆಗಳಿಗೆ, ತಜ್ಞರಿಗೆ ವರ್ಗಾಯಿಸಬಹುದಿತ್ತು.

ಇನ್ನು ಬಹಳ ದೊಡ್ಡದಾಗಿ ಕಾಣುತ್ತಿರುವ ಆಮ್ಲಜನಕದ ಕೊರತೆಯ ಸಮಸ್ಯೆಗೆ ಬರೋಣ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರತದಲ್ಲಿ ಆಮ್ಲಜನಕದ ಕೊರತೆ ಇಲ್ಲ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣ ಲಭ್ಯವಿದೆ ಎಂಬ ಮಾಹಿತಿಯನ್ನು ಹರಿಬಿಡಲಾಗಿದೆ. ಆದರೆ ಇದು ಅರ್ಧ ಸತ್ಯ. ವೈದ್ಯಕೀಯ ಆಮ್ಲಜನಕ ಮತ್ತು ಕೈಗಾರಿಕಾ ಆಮ್ಲಜನಕ ಎರಡೂ ಬೇರೆ. ನಿಜ, ತುರ್ತಿನ ಸಂದರ್ಭದಲ್ಲಿ ಕೈಗಾರಿಕಾ ಆಮ್ಲಜನಕವನ್ನು ಜೀವಗಳನ್ನು ಉಳಿಸಲು ಬಳಸಬಹುದು. ಆದರೆ ಈಗ ಹೀಗೆ ಹೇಳುವುದರಿಂದ ಆಮ್ಲಜನಕದ ಕೊರತೆಯಿಂದ ಸತ್ತವರು ವಾಪಸ್ ಬರುವುದಿಲ್ಲ. ನಿನ್ನೆ ಗುರಗಾಂವ್‍ನಲ್ಲಿ ಮಾಜಿ ರಾಯಭಾರಿ ಅಮ್ರೋಹಿ ಎಂಬುವರು ಒಂದು ಆಸ್ಪತ್ರೆಯ ಕಾರು ನಿಲುಗಡೆ ತಾಣದಲ್ಲಿ ಆಮ್ಲಜನಕವಿಲ್ಲದೆ ಐದು ತಾಸು ನರಳಾಡಿ ಸತ್ತರು. ಇನ್ನು ಜನಸಾಮಾನ್ಯರ ಪಾಡೇನು? ಬೆಂಗಳೂರಿನಲ್ಲಿ ಮಂತ್ರಿಗಳ, ಸಂಸತ್ ಸದಸ್ಯರ ಶಿಪಾರಸು ಉಪಯೋಗಿಸಿ ಲಕ್ಷ ರೂ ಕೊಡುತ್ತೇವೆಂದರೂ ಆಮ್ಲಜನಕದ ಹಾಸಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆದು ಲೂಟಿ ಹೊಡೆಯುತ್ತಿದ್ದಾರೆ.

ಭಾರತಕ್ಕೆ ದಿನವಹಿ 7129 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುವ ಶಕ್ತಿ ಇದೆ. ಕೊರೊನಾ ಪೂರ್ವ ಕಾಲದಲ್ಲಿ ಭಾರತದಲ್ಲಿ ಅಗತ್ಯ ಬರುತ್ತಿದ್ದ ವೈದ್ಯಕೀಯ ದ್ರವ ಆಮ್ಲಜನಕ ಕೇವಲ 750 ಮೆಟ್ರಿಕ್ ಟನ್. ಉಳಿದದ್ದು ಕೈಗಾರಿಕಾ ಉಪಯೋಗಕ್ಕೆ ಹೋಗುತ್ತಿತ್ತು. ಆದರೆ ಏಪ್ರಿಲ್ 22 ರ ಹೊತ್ತಿಗೆ ನಮ್ಮ ಅಗತ್ಯ 675 ಮೆಟ್ರಿಕ್ ಟನ್ ಮುಟ್ಟಿತು. ಈಗಂತೂ ನಾವು ಖಂಡಿತಾ ಕೊರತೆಯನ್ನು ಎದುರಿಸುತ್ತಿದ್ದೇವೆ. ಮೇ 15 ರ ಹೊತ್ತಿಗೆ ಈಗ ಮೂರುವರೆ ಲಕ್ಷ ಇರುವ ರೋಗಿಗಳ ಸಂಖ್ಯೆ ಐದು ಲಕ್ಷ ಮುಟ್ಟುತ್ತದಂತೆ. ಹಾಗಿದ್ದರೆ ಆಗಂತೂ ನಾವು ವಿಪರೀತ ಕೊರತೆಯನ್ನು ಎದುರಿಸಲಿದ್ದೇವೆ.

ಆದರೆ ಈಗಾಗಲೇ ನಾವು ಕಾಣುತ್ತಿರುವ ಕೊರತೆಗೆ ಕಾರಣವೇನು? ಕೈಗಾರಿಕೆಗಳಲ್ಲಿ ವಾತಾವರಣದಿಂದ ವೈದ್ಯಕೀಯ ಆಮ್ಲಜನಕವನ್ನು ಕ್ರಯೊಜೆನಿಕ್ ಡಿಸ್ಟಿಲೇಶನ್ ತಂತ್ರಜ್ಞಾನದ ಮೂಲಕ ವಾತಾವರಣದಿಂದ ಹೀರಿ, ಶೋಧಿಸಿ ದ್ರವರೂಪಕ್ಕೆ ತರಲಾಗುತ್ತದೆ. ಇದನ್ನು ಮೈನಸ್ 180 ಡಿಗ್ರಿ ತಾಪಮಾನದಲ್ಲಿ ವಿಶೇಷ ಕ್ರಯೊಜೆನಿಕ್ ಟ್ಯಾಂಕ್‍ಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಹೊತ್ತೂಯ್ಯುತ್ತಾರೆ. ಇದಕ್ಕೆ ವಿಶೇಷ ಟ್ರಕ್ಕುಗಳು, ನುರಿತ ಚಾಲಕರು ಬೇಕು. ಈಗ ಇದ್ದಕ್ಕಿದ್ದಂತೆ ಕಾರ್ಖಾನೆಗಳಿಂದ ಆಮ್ಲಜನಕವನ್ನು ವೈದ್ಯಕೀಯ ಉಪಯೋಗಕ್ಕೆಂದು ತಿರುಗಿಸಿದರೂ ಹೊತ್ತೂಯ್ಯಲು ಬೇಕಾದ ಮೂಲ ಸೌಕರ್ಯ ಸಾಲದು. ಮತ್ತೆ ಆ ದ್ರವರೂಪಿ ಆಮ್ಲಜನಕವು ಮಹಾನಗರಗಳನ್ನು ತಲುಪಿದ ಮೇಲೆ ಮತ್ತೆ ಅವುಗಳನ್ನು ಅನಿಲರೂಪಕ್ಕೆ ತಂದು ಒತ್ತಡದಲ್ಲಿ ತುಂಬಿಸಿ ಸಿಲಿಂಡರ್‍ಗಳಲ್ಲಿ ರವಾನೆ ಮಾಡಬೇಕು. ಈಗಿನ ತುರ್ತು ಅವಶ್ಯಕತೆಗೆ  ಅಗತ್ಯವಾದ ಯಂತ್ರಗಳು, ಸಿಲಿಂಡರ್‍ಗಳು, ವಾಹನಗಳು ಯಾವುದೂ ಲಭ್ಯವಿಲ್ಲ. ಇದು ಬಿಕ್ಕಟ್ಟಿನ ಮೂಲ. ಆದ್ದರಿಂದಲೇ ಈಗ ಸಂಂಧಿಸಿದ ಎಲ್ಲಾ ಸಲಕರಣೆಗಳನ್ನು, ಆಮ್ಲಜನಕವನ್ನು ಹೊರದೇಶಗಳಿಂದ ತರಿಸಲು ಗಾಬರಿಯಿಂದ ಪ್ರಯತ್ನಗಳು ನಡೆಯುತ್ತಿವೆ. ವೆಂಟಿಲೇಟರ್‍ಗಳು, ಬಿಪ್ಯಾಪ್ ಯಂತ್ರಗಳು ಕೂಡಾ ಸೂಕ್ತ ಸಂಖ್ಯೆಯಲ್ಲಿ ಇಲ್ಲ ಎಂಬುದು ಮೊದಲ ಅಲೆಯ ಸಂದರ್ಭದಲ್ಲೇ ಗೊತ್ತಾಗಿತ್ತು. ನವೆಂಬರ್‍ನಿಂದ ಮಾರ್ಚ್‍ವರೆಗೂ ನಮಗೆ ಸಿಕ್ಕಿದ ಅವಕಾಶದಲ್ಲಿ ನಮ್ಮ ಸರ್ಕಾರಗಳು ಸರಿಯಾದ ಯೋಜನೆ ರೂಪಿಸಿದ್ದರೆ ಇದೆಲ್ಲಾ ಹೂ ಎತ್ತಿದಂತೆ ಸರಾಗವಾಗಿ ನಡೆದಿರುತ್ತಿತ್ತು.

ಔಷಧಗಳ ಕೊರತೆ

ಕೋವಿಡ್ -19 ನ್ನು ಹೋರಾಡಲು ಯಾವುದೇ ರಾಮಬಾಣವಾಗಲೀ ಮೃತಸಂಜೀವಿನಿಯಾಗಲೀ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಹೈಡ್ರಾಕ್ಸಿಲ್ ಕ್ಲೊರೊಕ್ಸಿನ್, ಪ್ಲಾಸ್ಮ ಚಿಕಿತ್ಸೆ ಇವೆಲ್ಲಾ ಢೋಂಗಿ ಎಂಬುದು ಸ್ಪಷ್ಟವಾಗಿ ಸಾಬೀತಾಗಿ ತಿಂಗಳುಗಳೇ ಉರುಳಿವೆ. ಆದರೆ ಭಾರತದ ಅಧಿಕೃತ ಚಿಕಿತ್ಸಾ ಪಟ್ಟಿಯಲ್ಲಿ ಇವೆಲ್ಲಾ ಇನ್ನೂ ಇವೆ. ಹಾಗೆಯೇ ರೆಮ್‍ಡಿಸಿವಿರ್ ಮೊದಲಾದ ಅನೇಕಾನೇಕ ವೈರಾಣು ವಿರೋಧಿ ಔಷಧಗಳು, ಐವರ್‍ಮೆಕ್ಟಿನ್‍ನಂಥ ಪರೋಪಜೀವಿ ವಿರೋಧಿಗಳು ಅನೇಕ ಆ್ಯಂಟಿಬಯಾಟಿಕ್‍ಗಳು ಆಸ್ಪತ್ರೆಯಲ್ಲಿ ಉಪಯೋಗಿಸಲ್ಪಡುತ್ತಿವೆ. ಇವೆಲ್ಲಾ ಎಷ್ಟು ಉಪಯುಕ್ತ ಎನ್ನುವುದು ಚರ್ಚಾಸ್ಪದ ವಿಷಯ ನಿಜ. ಆದರೆ ಒಮ್ಮೆ ಸರ್ಕಾರ ಅದನ್ನು ಅವಶ್ಯಕ ಎಂದು ಪಟ್ಟಿ ಮಾಡಿದ ಮೇಲೆ ಅಗತ್ಯ ಪ್ರಮಾಣದಲ್ಲಿ ಶೇಖರಿಸಿ ಇಡಬೇಕಿತ್ತು; ಹಾಗಾಗದೆ ಇಂದು ಇದು ಅಪಾರವಾದ ಕಾಳಸಂತೆ ವ್ಯವಹಾರಕ್ಕೆ ಕಾರಣವಾಗಿದೆ.

ವ್ಯಾಕ್ಸಿನ್ ವೈಫಲ್ಯ

ಹದಿನೆಂಟು ವಯಸ್ಸಿಗೆ ಮೇಲ್ಪಟ್ಟ ವ್ಯಾಕ್ಸಿನ್ ಅವಶ್ಯಕತೆ ಇರುವ ಭಾರತೀಯರ ಸಂಖ್ಯೆ ಸುಮಾರು 94 ಕೋಟಿ ಎನ್ನುತ್ತಾರೆ ಕೇಂದ್ರ ಸರ್ಕಾರದ ಮಾಜಿ ಕಾರ್ಯದರ್ಶಿ ಕೆ, ಸುಜಾತಾ ರಾವ್. ಎಂದರೆ ಪೋಲಾಗುವ ಲಸಿಕೆಗಳನ್ನೂ ಸೇರಿಸಿದರೆ ಒಬ್ಬರಿಗೆ ಎರಡು ಲಸಿಕೆಯಂತೆ ನಮಗೆ 190 ಕೋಟಿ ಲಸಿಕೆ ಬೇಕು. ಇಲ್ಲಿಯವರೆಗೂ ಭಾರತ ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ 10 ಕೋಟಿ. ಭಾರತದಲ್ಲಿ ಲಸಿಕೆ ಮಾಡುತ್ತಿರುವ ಸೀರಂ ಇನ್ಸ್‍ಟಿಟ್ಯೂಟ್ ಮತ್ತು ಭಾರತ್ ಬಯೋಟಿಕ್ ಇಬ್ಬರೂ ಸೇರಿ ತಿಂಗಳಿಗೆ ಹೆಚ್ಚೆಂದರೆ ಎರಡೂಕಾಲು ಕೋಟಿ ಲಸಿಕೆ ಉತ್ಪಾದಿಸಬಹುದು ಅಷ್ಟೇ ಎನ್ನುತ್ತಾರೆ ಸುಜಾತಾ. ಈ ಲೆಕ್ಕದಲ್ಲಿ ಇಡೀ ಭಾರತಕ್ಕೆ ಲಸಿಕೆ ಹಾಕುವುದು ಯಾವಾಗ?

ಇಲ್ಲಿ ಸರ್ಕಾರ ಅನೇಕ ಪ್ರಮಾದಗಳನ್ನು ಮಾಡಿದೆ. ಲಸಿಕೆ ಉತ್ಪಾದನೆಗೆ ಬೇರೆಯವರಿಗೆ ಪರವಾನಗಿ ಕೊಡಲು ಸರ್ಕಾರಕ್ಕೆ ಬೇಕಾದಷ್ಟು ಅಧಿಕಾರವಿದೆ. ಆದರೆ ಸರ್ಕಾರ ಈ ಕ್ಷೇತ್ರವನ್ನು ಕೆಲವೇ ಖಾಸಗಿ ಲಾಭಬಡುಕರಿಗೆ ವಹಿಸಿದೆ. ಸಾಲದೆಂಬಂತೆ ನಮಗೇ ಲಸಿಕೆ ಇಲ್ಲದಿರುವಾಗ ಹತ್ತಿರ ಹತ್ತಿರ ಅರ್ಧದಷ್ಟು ಭಾಗವನ್ನು ದೊಡ್ಡಸ್ತಿಕೆ ಮೆರೆಯಲು ಮೋದಿ ಬೇರೆ ರಾಷ್ಟ್ರಗಳಿಗೆ ಕೊಟ್ಟು ಕೈ ಖಾಲಿಮಾಡಿಕೊಂಡರು. ವಿದೇಶಿ ಕಂಪನಿಗಳಿಗೂ ಬೇಡಿಕೆ ಸಲ್ಲಿಸಲಿಲ್ಲ. ಎಲ್ಲೂ ಸಹ ಮುಂಜಾಗ್ರತೆ, ಮುಂಗಾಣ್ಕೆಯ ಲವಲೇಶವೂ ಕಾಣುವುದಿಲ್ಲ.

ತಪ್ಪು ಸಂದೇಶ

ಇಡೀ ದೇಶವನ್ನು ತುದಿಗಾಲಿನಲ್ಲಿ ನಿಲ್ಲಿಸಿ, ಶಾಶ್ವತ ಜಾಗರೂಕತೆಗೆ ಸಿದ್ಧಪಡಿಸಬೇಕಾಗಿದ್ದ ಪ್ರಧಾನಿ ಕಲ್ಕತ್ತಾದ ಬೀದಿಗಳಲ್ಲಿ ತಾನೇ ಮಾಸ್ಕ್ ಹಾಕಿಕೊಳ್ಳದೇ ಚುನಾವಣಾ ಪ್ರಚಾರ ಮಾಡುತ್ತಾ, ವಿರೋಧ ಪಕ್ಷದವರನ್ನು ಹಳಿಯುತ್ತಾ ಬೇಜವಾಬ್ದಾರಿಯಿಂದ ಓಡಾಡಿಕೊಂಡಿದ್ದರು. ಗೃಹಮಂತ್ರಿ ಅಮಿತ್ ಶಾ ಕೂಡ ಆಡಳಿತದ ಕಡೆ ತಲೆ ಹಾಕಿ ತಿಂಗಳುಗಳೆ ಉರುಳಿವೆ. ಇನ್ನು ಇವರನ್ನು ಬಿಟ್ಟು ತೀರ್ಮಾನ ತೆಗೆದುಕೊಳ್ಳಬಲ್ಲ ಧೈರ್ಯವಾಗಲೀ ಸಾಮಥ್ರ್ಯವಾಗಲೀ ಸಂಬಂಧಪಟ್ಟ ಸಚಿವರಿಗೇ ಇಲ್ಲ. ಬೇಜವಾಬ್ದಾರಿಯಿಂದ ಬೃಹತ್ ರ್ಯಾಲಿಗಳನ್ನು ಮಾಡಿದ್ದಲ್ಲದೇ ಮಿಲಿಯಾಂತರ ಜನ ಸೇರುವ ಕುಂಭಮೇಳಕ್ಕೂ ಸರ್ಕಾರ ಅನುಮತಿ ನೀಡಿತು.

ಅಲ್ಲದೆ ಈ ಸರ್ಕಾರದ ನೇತಾರರಿಗೇ ವಿಜ್ಞಾನದಲ್ಲಿ, ಅದು ನೀಡುವ ವೈದ್ಯಕೀಯ ಪರಿಹಾರದಲ್ಲಿ ನಂಬಿಕೆ ಇಲ್ಲ. ದನಗಳು ಉಸಿರಾಡಿದರೆ ಅದರ ಬಾಯಿಂದ ಆಮ್ಲಜನಕ ಬರುತ್ತದೆ ಎಂದು ಒಬ್ಬ ಭೂಪ ಹೇಳುತ್ತಾನೆ. ದೈವೀ ಕೃಪೆ ಇದ್ದರೆ ಕುಂಭಮೇಳದಿಂದ ಏನೂ ಆಗುವುದಿಲ್ಲ ಎಂದು ಒಬ್ಬ ಮುಖ್ಯಮಂತ್ರಿ ಗಳಹುತ್ತಾರೆ. ಕೆಲವು ನಾಯಕರೆನ್ನಿಸಿಕೊಂಡವರು ಸಗಣಿ, ಗಂಜಲ ಸೇವಿಸಿದರೆ ಯಾವ ಔಷಧವೂ ಅಗತ್ಯವಿಲ್ಲ ಎನ್ನುತ್ತಾರೆ. ಉತ್ತರ ಪ್ರದೇಶದಲ್ಲಿ ಜನ ವೈದ್ಯಕೀಯ ಸೌಲಭ್ಯವಿಲ್ಲದೆ ನರಳುತ್ತಿರುವಾಗ, “ಆಮ್ಲಜನಕ ಇಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದರೆ ನಿಮ್ಮ ಆಸ್ತಿಯನ್ನೇ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ” ಎಂದು ಅಲ್ಲಿನ ಮುಖ್ಯಮಂತ್ರಿ ಘರ್ಜಿಸುತ್ತಾರೆ. (ಸದ್ಯ ಇದೀಗ ಸುಪ್ರೀಂಕೋರ್ಟ್ ಈ ಹುಚ್ಚಾಟಕ್ಕೆ ಅಂಕುಶ ಹಾಕಿದೆಯಂತೆ). ಜಾಗತಿಕ ವೇದಿಕೆಗಳಲ್ಲಿ ಪ್ರಧಾನಿಗಳು ಭಾರತವು ಕೋವಿಡ್ ಯುದ್ಧದಲ್ಲಿ ಗೆದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದೆಲ್ಲಾ ಜಂಭ ಕೊಚ್ಚಿಕೊಂಡಿದ್ದರು. ಒಟ್ಟಿನಲ್ಲಿ ವಿಪತ್ತನ್ನು ನಿರ್ವಹಿಸುವಲ್ಲಿ ಇವರ ಮೌಢ್ಯ, ಮೂರ್ಖತನ ದುರಹಂಕಾರ ಎದ್ದು ಕಾಣುತ್ತಿದೆ.

ಕರ್ನಾಟಕದಲ್ಲಿನ ಅಡ್ಡಕಸುಬಿಗಳು

ಕರ್ನಾಟಕದಲ್ಲಿ ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ ಎಂದು ಯಾರಿಗೂ ಅನಿಸುತ್ತಿಲ್ಲ. ಇಂದು ಇಡೀ ದೇಶದಲ್ಲಿ ಕೋವಿಡ್ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಒಂದು. ಕರ್ನಾಟಕಕ್ಕೆ ಈ ಗತಿ ಬರಬೇಕಿರಲಿಲ್ಲ. ನಮ್ಮಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅತಿಹೆಚ್ಚು ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ, ಆಸ್ಪತ್ರೆಗಳಿವೆ. ಆದರೆ ಅಲ್ಲಿನ ಹಾಸಿಗೆಗಳನ್ನು ವಶಪಡಿಸಿಕೊಳ್ಳಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಈ ಸರ್ಕಾರದಲ್ಲಿನ ಮುಖಂಡರೆಲ್ಲರೂ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆಗಳ ಧನದಾಹಿ ಲಾಬಿಗಳ ಭಾಗಿಗಳೇ. ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರಿದ್ದಾರೆ, ತಜ್ಞರಿದ್ದಾರೆ. ಆದರೆ ನಮ್ಮ ಸರ್ಕಾರದ ಸಮಯವೆಲ್ಲಾ ಹಗರಣಗಳನ್ನು ಮುಚ್ಚುವಲ್ಲಿ, ಚುನಾವಣೆಗಳಲ್ಲಿ ಕಳೆದುಹೋಯಿತು. ಮೃತ್ಯು ಬಾಗಿಲಿನಲ್ಲಿ ಕುಳಿತಿರುವಾಗ ಈ ಸರ್ಕಾರ ಕಳ್ಳದಾರಿಯಲ್ಲಿ ಜಿಂದಾಲ್‍ಗೆ ಮೂರುವರೆ ಸಾವಿರ ಎಕರೆಯನ್ನು ಕೊಟ್ಟುಬಿಟ್ಟಿತು ಎಂದರೆ ನಮಗೆ ಇವರ ಆದ್ಯತೆಗಳು ಅರ್ಥವಾಗಬೇಕು.

ಹಿಂದೆ ಕೊರೊನಾ ಮೊದಲ ಅಲೆ ಬಂದಾಗ ಉಪಕರಣ ಕೊಳ್ಳುವುದರಲ್ಲಿ ನಡೆದ ಭ್ರಷ್ಟಾಚಾರ ಎಲ್ಲರಿಗೂ ಗೊತ್ತಿದೆ. ಈಗ ಪಿ.ಸಾಯಿನಾಥ್‍ರಂಥ ಪತ್ರಕರ್ತರು ‘ಕೊರೊನಾ ಅಂದ್ರೆ ಎಲ್ಲರಿಗೂ ಇಷ್ಟ’ ಅನ್ನುವ ಹೊಸ ಪುಸ್ತಕ ಬರೆಯಬೇಕಾಗಬಹುದು.

ಬರಲಿರುವ ದಿನಗಳು ಇನ್ನು ಕೆಟ್ಟದಾಗಿರುತ್ತವೆ. ಇದರ ಬಗ್ಗೆ ಯಾವ ಸಂಶಯವೂ ಬೇಡ. ಮುಂದೊಂದು ದಿನ ಬದುಕುಳಿದವರು ಒಂದು ಜನಪರ ಆರೋಗ್ಯ ನೀತಿಗಾಗಿ ಸೆಣಸಾಡಿ ಗೆದ್ದು, ಮುಂದಿನ ತಲೆಮಾರುಗಳನ್ನಾದರೂ ಕಾಪಾಡಲಿ ಎಂದು ಆಶಿಸೋಣ. ಭರವಸೆಯೇ ಬದುಕಿನ ಬೆಳಕಲ್ಲವೇ!

ಜಗವೆಲ್ಲಾ ಮಲಗಿರಲು ಇವನೊಬ್ಬ ಎದ್ದ

ರಾಜೇಂದ್ರ ಭರೂಡ್ ಎಂಬುವವರು ಒಬ್ಬ ಐಎಎಸ್ ಅಧಿಕಾರಿ. ಆತ ಎರಡನೇ ಅಲೆಗೆ ಸ್ಪಂದಿಸಿದ ರೀತಿಯಲ್ಲಿ ಇಡಿಯ ದೇಶದ ನಾಯಕತ್ವಕ್ಕೇ ಒಂದು ಸಂದೇಶವಿದೆ, ಮಾದರಿಯಿದೆ. ಅವರು ಮಹಾರಾಷ್ಟ್ರದ ನಂದೂರ್‍ಬಾರ್‍ನ ಜಿಲ್ಲಾಧಿಕಾರಿ. ಮೊದಲ ಅಲೆ ಮುಗಿದು ಎಲ್ಲವೂ ಶಾಂತವಾಗಿದ್ದಾಗ ಅವರು ಇಲಾಖೆಯಲ್ಲಿದ್ದ ಉಪಯೋಗಿಸಲಾಗುವ ಎಲ್ಲ ಹಣವನ್ನು ಕ್ರೋಡೀಕರಿಸಿ, ಹೊರಗಿನ ನೆರವನ್ನು ತೆಗೆದುಕೊಂಡು ನವೆಂಬರ್‍ನಿಂದ ಮಾರ್ಚ್ ಒಳಗೆ 48 ಲಕ್ಷ ಲೀಟರ್ ಸಾಮಥ್ರ್ಯದ ಆಮ್ಲಜನಕದ ಘಟಕಗಳನ್ನು ಆರಂಭಿಸಿದ್ದಾರೆ. 1300 ಆಕ್ಸಿಜನ್ ವ್ಯವಸ್ಥೆಯಿರುವ ಐಸಿಯು ಬೆಡ್‍ಗಳನ್ನು, 27 ಆಂಬುಲೆನ್ಸ್‍ಗಳನ್ನು ಕೊಂಡು, ರೆಮ್‍ಡೆಸವಿರ್ ನಂಥ ಔಷಧಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಒಟ್ಟಾರೆ ಅವರು ಸೃಷ್ಟಿಸಿಕೊಂಡಿರುವ ಹಾಸಿಗೆ ಸಾಮಥ್ರ್ಯ 11,000. ಈತ ಮೂಲತಃ ವೈದ್ಯರು, ಬುಡಕಟ್ಟು ಜನರೇ ತುಂಬಿರುವ ತನ್ನ ಜಿಲ್ಲೆಯನ್ನು ಕಾಪಾಡಿಕೊಳ್ಳಲು ಈತ ತೋರಿದ ಮುಂಜಾಗರೂಕತೆ, ಪರಿಶ್ರಮಗಳನ್ನೂ ನಮ್ಮ ಕೇಂದ್ರ ಹಾಗೂ ರಾಜ್ಯ ನಾಯಕತ್ವ ತೋರಿದ್ದರೇ! ಕೇರಳ ರಾಜ್ಯ ಮತ್ತು ತಮಿಳುನಾಡಿನ ಮಧುರೈ ಜಿಲ್ಲೆಗಳಲ್ಲೂ ಸಹ ಅಭಿನಂದನಾರ್ಹ ಕೆಲಸ ನಡೆದಿದ್ದು ಅಲ್ಲಿ ಆಮ್ಲಜನಕದ ಪರಿಸ್ಥಿತಿ ಸದ್ಯಕ್ಕೆ ತೃಪ್ತಿಕರವಾಗಿದೆ.

Leave a Reply

Your email address will not be published.