ಕೊರೊನ ಕಾಲದಲ್ಲಿ ಕಲಾವಿದರ ಬವಣೆ

ಕೊರೊನ ಮೊದಲ ಅಲೆಯನ್ನು ಸಾಂಸ್ಕøತಿಕವಾಗಿಯೇ ಎದುರಿಸಿದ ಕಲಾವಿದರು, 2ನೇ ಅಲೆಯ ಆಘಾತವನ್ನು ಎದುರಿಸಲು ಮಾನಸಿಕವಾಗಿ ಸಿದ್ಧಗೊಂಡಿರಲಿಲ್ಲ. ಮೊದಲ ಅಲೆ ಕಲಾವಿದರ ಸಾಮಾಜಿಕ, ಆರ್ಥಿಕ ಬದುಕನ್ನು ಕಂಗೆಡಿಸಿದರೆ, ಎರಡನೇ ಅಲೆ ಕಲಾವಿದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ.

-ಶಶಿಧರ ಭಾರಿಘಾಟ್

“ಒಳಿತು ಮಾಡು ಮನುಷ…..” ಎಂಬ ತತ್ವಪದದ ಮೊದಲ ಸಾಲನ್ನು ಶೀರ್ಷಿಕೆಯಾಗಿಸಿಕೊಂಡು ನಮ್ಮ ತಂಡ “ಕಾಯಕ ಜೀವಿಗಳಿಗೆ ಶರಣು” ಎಂದು ಹೇಳುತ್ತಾ ಬೀದಿ ನಾಟಕವನ್ನು ಕಳೆದ ನವೆಂಬರ್ ತಿಂಗಳಲ್ಲಿ ಅಭಿನಯಿಸಿತು. ಕೊರೊನ ಸಾಂಕ್ರಾಮಿಕ ರೋಗದ ಪರಿಣಾಮ ಘೋಷಿತವಾದ ಲಾಕ್‍ಡೌನ್‍ನಲ್ಲಿ ಉಂಟಾದ ಕೂಲಿ ಕಾರ್ಮಿಕರ ಮಹಾವಲಸೆ, ಕೈಮಗ್ಗ-ಗಾರ್ಮೆಂಟ್ ಕೆಲಸಗಾರರು, ರೈತರಿ ಹಾಗೂ ಇನ್ನಿತರ ಕರಕುಶಲಕರ್ಮಿಗಳ ಬವಣೆ, ಕೊರೊನ ರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ಬಳಗದ ತಳಮಳ, ಮರೆಯಾದ ಮಾನವೀಯ ನಡತೆ, ರಾಜಕಾರಣಿಗಳು-ಅಧಿಕಾರಸ್ಥರ-ರಾಜಕೀಯ ಪಕ್ಷಗಳ ಸ್ವಾರ್ಥಪರ ನಡೆಗಳನ್ನು ವಿಶ್ಲೇಷಿಸುತ್ತಾ ಸಾಗಿತು ಈ ನಾಟಕ. ಮಾಧ್ಯಮಗಳಲ್ಲಿ ವರದಿಯಾದ, ಕಣ್ಣೆದುರು ನಡೆದ ಸತ್ಯಘಟನೆಗಳನ್ನು ಆಧರಿಸಿ ಈ ನಾಟಕ ಸಿದ್ಧಗೊಂಡಿತ್ತು.

ಬೆಂಗಳೂರು ಸಮುದಾಯದ ಕಲಾವಿದರು ಕೊರೊನ ಭೀತಿಯ ನಡುವೆ ಬೀದಿಗಿಳಿದು ಬೆಂಗಳೂರಿನಿಂದ ಸಾಗರದ ಹೆಗ್ಗೋಡಿನವರೆಗೆ ಜಾಥ ನಡೆಸಿದರು. ಎಲ್ಲಿಯೂ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಅಷ್ಟಾಗಿ ಕಾಣಬರಲಿಲ್ಲ. ಜನಜೀವನ ಸಹಜಸ್ಥಿತಿಗೆ ಮರಳುತ್ತಿತ್ತು. ಒಂದು ರೀತಿಯಲ್ಲಿ ಕೊರೊನವನ್ನು ಗೆದ್ದಿದ್ದೇವೆ ಎಂಬ ಧೈರ್ಯ ಬಂದರೂ, ಎಲ್ಲಾ ಪ್ರದರ್ಶನಗಳಲ್ಲಿ ಜನರಿಗೆ ಮಾಸ್ಕ್ ಧರಿಸುವಂತೆ, ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡುತ್ತಿದ್ದೆವು.

ಲಾಕ್‍ಡೌನ್, ಸೀಲ್‍ಡೌನ್ ಮುಂತಾದ ಪ್ರತಿಕ್ರಿಯೆಗಳು ಅಂತ್ಯಗೊಂಡು ‘ನವಸಹಜ ಸ್ಥಿತಿ’ಗೆ ಹೊಂದಿಕೊಳ್ಳುವ ಪರಿ ರಂಗಕಲಾವಿದರಿಗೆ ಮುಖ್ಯವಾಗಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಪ್ರಯತ್ನ ನಡೆಯಿತು. ಕಾವ್ಯದ ಓದು, ಕಥನಗಳು, ಓದಿದ ಪುಸ್ತಕಗಳು, ನೋಡಿದ ಸಿನಿಮಾಗಳು ಮುಂತಾದವುಗಳ ಬಗ್ಗೆ ಅಭಿಪ್ರಾಯಗಳು ವಿನಿಮಯಗೊಂಡವು. ರಂಗಚಿಂತನೆ ಮಾಲಿಕೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಓದು, ಜಾನಪದ, ಸುಗಮ ಸಂಗೀತಗಳ ಗಾಯನ, ವೆಬಿನಾರ್‍ಗಳು, ಅಭಿನಯ ಕಾರ್ಯಾಗಾರಗಳು ನಡೆದವು. ದೇಶದ ಪ್ರತಿಷ್ಠಿತ ರಂಗತಜ್ಞರು, ಸಂಗೀತ ನೃತ್ಯಪಟುಗಳಿಂದ ಪ್ರಾತ್ಯಕ್ಷಿಕೆಗಳು ನಡೆದವು. ಇವುಗಳ ಜೊತೆಗೆ ಕೊರೊನೋತ್ತರ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ ಅಭಿವ್ಯಕ್ತಿಯ “ರೂಪ” ಮತ್ತು “ವಸ್ತು”ಗಳ ಬಗ್ಗೆಯೂ ಚರ್ಚೆ, ಸಂವಾದಗಳು ನಡೆದವು.

2021 ಜನವರಿಯನ್ನು ಬಹಳ ಹರ್ಷದಿಂದ ಸ್ವಾಗತಿಸಿದ ಕಲಾ ಸಮೂಹ ನಿಧಾನವಾಗಿ ಆನ್‍ಲೈನ್‍ನಿಂದ ವಿಮುಖಗೊಂಡು, ಸೀಮಿತ ಪ್ರೇಕ್ಷಕವರ್ಗದವರನ್ನು ಸೇರಿಸಿ ನಾಟಕ ಮಾಡಲು ಪ್ರಾರಂಭಿಸಿದರು. ಹೊಸ ನಾಟಕಗಳಿಗೆ, ಮರು ಪ್ರದರ್ಶನಗಳಿಗೆ ತಾಲೀಮುಗಳು ನಡೆದವು. ನಾಟಕೋತ್ಸವಗಳು, ನೃತ್ಯೋತ್ಸವಗಳು ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡವು. ಇವೆಲ್ಲವೂ ಸರ್ಕಾರದ ಮಾರ್ಗಸೂಚಿಯಂತೆಯೇ ನಡೆಯತೊಡಗಿದವು. ವೃತ್ತಿ ನಾಟಕ ಕಂಪನಿಗಳು ಮೊಕ್ಕಾಂ ಪ್ರಾರಂಭಿಸಿದವು. ಒಟ್ಟಿನಲ್ಲಿ ಹೊಸ ಹುರುಪಿನಿಂದ ಚಟುವಟಿಕೆಗಳು ಒಂದಷ್ಟು ನಡೆಯತೊಡಗಿದವು. ಆಗಲೇ ಅಪ್ಪಳಿಸಿದ್ದು ಕೊರೊನ ಎರಡನೇ ಅಲೆ.

ಕಳೆದ ಎರಡು ತಿಂಗಳಿಂದ ಸಾಂಸ್ಕೃತಿಕ ವಲಯ ಮತ್ತೆ ದಿಕ್ಕುತೋಚದೆ ಕೂತಿದೆ. ನೋಡು ನೋಡುತ್ತಲೇ ಕಲಾವಿದರ ಕುಟುಂಬಗಳಿಗೂ (ಇವರೂ ಜನಸಾಮಾನ್ಯರೇ ತಾನೆ?) ಕೊರೊನ ಯಾವುದೇ ಭೇದಭಾವವಿಲ್ಲದೆ ಹರಡತೊಡಗಿತು. ಅನೇಕ ರಂಗಕಲಾವಿದರು, ಸಂಘಟಕರು, ಹಿರಿಕಿರಿಯ ಲೇಖಕರು, ಉಪನ್ಯಾಸಕರು, ಜಾನಪದ ಕಲಾವಿದರು, ಪತ್ರಕರ್ತರು, ರಾಜಕಾರಣಿಗಳನ್ನು ಬಿಡದೆ ಕಾಡತೊಡಗಿತು. ಕುಟುಂಬದ ಸದಸ್ಯರು, ಆತ್ಮೀಯರು ಸಾವಿನ ಮನೆಯತ್ತ ಮುಖ ಮಾಡಿದರು. ಒಂದೆಡೆ ಲಸಿಕೆ ದೊರೆಯುವುದು ದುರ್ಲಭವಾದರೆ, ಮತ್ತೊಂದೆಡೆ ಆಸ್ಪತ್ರೆಯಲ್ಲಿ ಹಾಸಿಗೆ, ವೆಂಟಿಲೇಟರ್, ಆಮ್ಲಜನಕ, ಐಸಿಯು, ರೆಮಿಡಿಸಿವಿರ್ ಇಂಜೆಕ್ಷನ್ ಸಮಯಕ್ಕೆ ಸಿಗದಂತೆ ಭೀತಿ ಉಂಟಾಯಿತು. ಈಗ ಕಪ್ಪು ಶಿಲೀಂದ್ರ, ಬಿಳಿ ಶಿಲೀಂದ್ರ ರೋಗಗಳು ಕಾಣಿಸಿಕೊಂಡಿವೆ. ಈ ನಡುವೆ ಸಾವು ನೋವಿನಿಂದ ಕಂಗೆಟ್ಟಿರುವ ಕಲಾವಿದ ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದಾನೆ.

ಇಂತಹ ದುರಿತ ಕಾಲದಲ್ಲಿ ಸರ್ಕಾರ ಸ್ವಲ್ಪ ಉದಾರವಾಗಿ ವರ್ತಿಸಿದರೆ ಕಲಾವಿದರ ಸಂಕಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ. ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಸರ್ಕಾರ ನೀಡಿರುವ ವಾರ್ಷಿಕ ಅನುದಾನ ಕಾರ್ಯಕ್ರಮಗಳು ನಡೆಯದೆ ಹಿಂದಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಸಂಸ್ಕೃತಿ ಇಲಾಖೆಯಲ್ಲಿ ಬಳಕೆಯಾಗದೆ ಉಳಿದ ಹಣವನ್ನು ಕಲಾಗ್ರಾಮ, ಜಿಲ್ಲಾ ರಂಗಮಂದಿರಗಳ ದುರಸ್ತಿ ಕಾಮಗಾರಿ, ಇನ್ನಿತರ ಸ್ಥಿರಾಸ್ತಿ ಹೆಚ್ಚಿಸಲು ವಿನಿಯೋಗಿಸಲು ಸಂಸ್ಕೃತಿ ಇಲಾಖೆ ಸಚಿವರು ಸಲಹೆ ನೀಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದೇ ಹಣವನ್ನು ಸರ್ಕಾರ ಈಗ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಕಳೆದ ವರ್ಷ ಅಕಾಡೆಮಿಗಳಲ್ಲಿ ಕೊರೊನ ಕಾರಣಕ್ಕೆ ಕಾರ್ಯಕ್ರಮಗಳು ನಡೆಯದೆ ಉಳಿದಿರುವ ಹಣವನ್ನು ಕಲಾವಿದರಿಗೆ ಈ ಸಮಯದಲ್ಲಿ ವಿತರಿಸಬಹುದು. ಈ ಬಗ್ಗೆ ಸಂಬಂಧಪಟ್ಟವರು ಇಚ್ಛಾಶಕ್ತಿ ತೋರಬೇಕು ಅಷ್ಟೆ.

ಕೊರೊನ ಮೊದಲ ಅಲೆಯನ್ನು ಸಾಂಸ್ಕøತಿಕವಾಗಿಯೇ ಎದುರಿಸಿದ ಕಲಾವಿದರು, 2ನೇ ಅಲೆಯ ಆಘಾತವನ್ನು ಎದುರಿಸಲು ಮಾನಸಿಕವಾಗಿ ಸಿದ್ಧಗೊಂಡಿರಲಿಲ್ಲ. ಮೊದಲ ಅಲೆ ಕಲಾವಿದರ ಸಾಮಾಜಿಕ, ಆರ್ಥಿಕ ಬದುಕನ್ನು ಕಂಗೆಡಿಸಿದರೆ, ಎರಡನೇ ಅಲೆ ಕಲಾವಿದರ ಸಂಸಾರಕ್ಕೆ ಕೊಳ್ಳಿ ಇಟ್ಟಿದೆ. ನೋಡು ನೋಡುತ್ತಲೇ ಕಲಾವಿದರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ಪ್ರತಿದಿನವೂ ಸಾವಿನ ಸರಣಿ ಮುಂದುವರಿಯುತ್ತಿದೆ. ಹಿರಿ-ಕಿರಿಯರೆನ್ನದೆ ಎಲ್ಲರನ್ನೂ ಸಾವು ಹತ್ತಿಕ್ಕಿದೆ. ರೋಗಮುಕ್ತರಾಗೋಣವೆಂದು ಆಸ್ಪತ್ರೆ ಸೇರಬೇಕೆಂದರೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಕ್ಕದೆ, ಇಂಜೆಕ್ಷನ್ ಆಮ್ಲಜನಕ, ವೆಂಟಿಲೇಟರ್ ದೊರೆಯದೇ ಕಂಗಾಲಾಗಿದವರೆಷ್ಟೋ. ಇದೇ ಅವ್ಯವಸ್ಥೆಯಿಂದಾಗಿ ಅಸುನೀಗಿದವರೆಷ್ಟೋ. ಅಂತಿಮ ಸಂಸ್ಕಾರಕ್ಕೂ ಪರದಾಡಿದ ಕುಟುಂಬಗಳೆಷ್ಟೋ.

ಕೊರೊನ ಮೊದಲ ಅಲೆಯ ಸಂದರ್ಭದಲ್ಲಿ ಒಂದಷ್ಟು ಕಲಾವಿದರು, ಸಂಘಟಕರು, ತಂಡಗಳು ಸಂಘಟಿತರಾಗಿ ಆಹಾರದ ಕಿಟ್ ವಿತರಣೆ, ಆರ್ಥಿಕ ಸಹಾಯ, ಕಲಾವಿದರ ಮಕ್ಕಳ ಶಾಲಾ-ಕಾಲೇಜು ಶುಲ್ಕ, ವೈದ್ಯಕೀಯ ವೆಚ್ಚ ಭರಿಸುವ ಕೆಲಸವನ್ನು ಬಹಳ ಶಿಸ್ತಿನಿಂದ ಮಾಡಿದರು.

ಸಂಚಯ ರಂಗತಂಡ, ‘ಸಂಚಯ ಕೇರ್’ ಎಂಬ ಯೋಜನೆ ಪ್ರಾರಂಭಿಸಿ 25 ಲಕ್ಷಕ್ಕೂ ಹೆಚ್ಚು ನಿಧಿ ಸಂಗ್ರಹಿಸಿ 250 ಕಲಾವಿದರಿಗೆ ಪ್ರತಿ ತಿಂಗಳು ರೂ.3,000 ರಂತೆ ಮೂರು ತಿಂಗಳು ವಿತರಿಸಿದರು.  ಅನೇಕ ರಂಗತಂಡಗಳು ಸಂಕಷ್ಟದಲ್ಲಿದ್ದ ವೃತ್ತಿ ಕಲಾವಿದರನ್ನು ದತ್ತು ತೆಗೆದುಕೊಂಡು 6 ತಿಂಗಳ ಕಾಲ ತಲಾ ರೂ.2,000 ನೀಡಿದವು. ಇಂದು ಇಂತಹ ಪ್ರಯತ್ನಗಳು ನಡೆಯುತ್ತಿವೆ. ರೋಗಕ್ಕೆ ತುತ್ತಾದವರಿಗೆ ವೈದ್ಯಕೀಯ ನೆರವು, ಆಸ್ಪತ್ರೆಗಳಲ್ಲಿ ಹಾಸಿಗೆ, ರೆಮ್‍ಡಿಸಿವರ್ ಇಂಜಕ್ಷನ್ ಕೊಡಿಸಲು ಪ್ರಯತ್ನಿಸಿದ್ದಾರೆ.

ಎಂತಹ ದಾರುಣ ಪರಿಸ್ಥಿತಿ ಎನ್ನುವುದಕ್ಕೆ ಬಹುಶಃ ಈ ಒಂದು ಉದಾಹರಣೆ ಸಾಕೆನಿಸುತ್ತದೆ. ಹಾಸನದ ಒಬ್ಬ ರಂಗಕಲಾವಿದ, ತನ್ನ ತಾಯಿ ತಂದೆ ಸಹಿತ ಕೊರೊನ ಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಇದೇ ಸಮಯದಲ್ಲಿ ಕಲಾವಿದನ ಹೆಂಡತಿ ಕೊರೊನದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 4 ತಿಂಗಳು ಹಾಗೂ 4 ವರ್ಷ ತುಂಬಿರುವ ಇಬ್ಬರು ಮಕ್ಕಳಿದ್ದಾರೆ. ಆ ಕಲಾವಿದ ಕುಟುಂಬದ ಪರಿಸ್ಥಿತಿ ಎಂಥದ್ದು ಎಂದು ಊಹಿಸಬಹುದು. ಇದೇ ರೀತಿ ಅನೇಕರು ಕೊರೊನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕುಟುಂಬದ ಕೆಲವು ಸದಸ್ಯರು ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ, ಇಲ್ಲವೇ ಆಸ್ಪತ್ರೆ ಸೇರಿದ್ದಾರೆ. ಮತ್ತೆ ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದಾರೆ. ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ಬಂದ ಒಬ್ಬ ಜಾನಪದ ಕಲಾವಿದನ ಆಸ್ಪತ್ರೆಯ ಚಿಕಿತ್ಸೆ ಬಿಲ್ಲು ನಾಲ್ಕು ಲಕ್ಷ ರೂಪಾಯಿಗಳು, ಮತ್ತೊಬ್ಬ ಕಲಾವಿದೆ ಎರಡೂವರೆ ಲಕ್ಷ ಕಟ್ಟಿದ್ದಾರೆ. ಅನೇಕ ಕಲಾವಿದರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಕೋವಿಡ್-19ಕ್ಕೆ ಬಲಿಯಾದ ಕಲಾಕುಟುಂಬಗಳನ್ನು ಅವಲೋಕಿಸಿದರೆ ನಿಜಕ್ಕೂ ಎರಡನೇ ಅಲೆಯ ತೀವ್ರತೆ ಅರಿವಾಗುತ್ತದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಖ್ಯಾತ ಬೆಳಕು ತಜ್ಞ ವಿ.ರಾಮಮೂರ್ತಿ, ಹಿರಿಯ ರಂಗಭೂಮಿ ಕಿರುತೆರೆ, ಸಿನಿಮಾ ನಟರಾದ ಆರ್.ಎಸ್.ರಾಜಾರಾಂ, ಕೃಷ್ಣೇಗೌಡ, ಎಂ.ಸಿ.ಆನಂದ್, ಸಮುದಾಯ ಸಂಘಟನೆಯ ಎಂ.ಜಿ.ವೆಂಕಟೇಶ್, ವೇದಿಕೆ ರಂಗತಂಡದ ಶಾರದ ಸಿಂಹ, ಸಂವಿಧಾನ ಓದು ರೂವಾರಿ ಉತ್ತರ ಕನ್ನಡದ ವಿಠ್ಠಲ ಭಂಡಾರಿ, ಸುಚಿತ್ರ ಫಿಲ್ಮ್ ಅಕಾಡೆಮಿಯ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ರವೀಂದ್ರನಾಥ ಟಾಗೋರ್, ಹಿರಿಯ ನೃತ್ಯ ಗುರು ಬಿ.ಭಾನುಮತಿ, ಕಲಾವಿದ ದಂಪತಿ ಶಂಖನಾದ ಅರವಿಂದ್-ರಮಾ ಅರವಿಂದ್, ಚಿತ್ರ-ನಿರ್ಮಾಪಕ ರಾಮು, ಕಾಲೇಜು ಅಧ್ಯಾಪಕರಾದ, ಕನ್ನಡ ಹೋರಾಟಗಾರ ರಾಮಕೃಷ್ಣೇಗೌಡ, ಲಿಂಗಮಾರಯ್ಯ, ರಂಗಸಂಘಟಕರಾದ ಪುಟ್ಟೇಗೌಡ, ಯುವನಟ ವಿಕ್ರಂ… ಹೀಗೆ ಪಟ್ಟಿ ಬೆಳೆಯುತ್ತದೆ. ಕೊರೊನ ನಿಜಕ್ಕೂ ಕಲಾಸಮುದಾಯಕ್ಕೇ ಬಂದಿದೆ ಏನೋ ಅನಿಸುತ್ತದೆ. ಇವರಲ್ಲದೆ ಅನೇಕ ಚಿತ್ರಕಲಾವಿದರು, ಪತ್ರಕರ್ತರು ಜೀವಕಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳೆಂದರೆ ರಂಗಭೂಮಿಯನ್ನು ವೃತ್ತಿಯಾಗಿ ತೆಗೆದುಕೊಂಡವರಿಗೆ ಮಕ್ಕಳ ರಂಗತರಬೇತಿ ಶಿಬಿರದ ಸೀಜನ್. ಕಳೆದ ವರ್ಷವೂ ಇಲ್ಲ, ಈ ವರ್ಷವೂ ಇಲ್ಲದ ಪರಿಸ್ಥಿತಿ. ಒಂದೆರಡು ಶಿಬಿರಗಳನ್ನು ಮಾಡಿ ಬಂದ ಸಂಭಾವನೆಯಿಂದ 2-3 ತಿಂಗಳು ಬದುಕು ಸಾಗಿಸುತ್ತಿದ್ದ ಕಲಾವಿದರು ಮತ್ತೆ ಅತಂತ್ರವಾಗಿದ್ದಾರೆ.

ವೃತ್ತಿರಂಗಭೂಮಿಯ ಕಂಪನಿಗಳ ಕಲಾವಿದರ ಪರಿಸ್ಥಿತಿಯೂ ಅಷ್ಟೆ. ಉತ್ತರ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಬೆರಳಣಿಕೆಯ ಕಂಪನಿಗಳು ಬಂದ್ ಆಗಿವೆ. ಮಾಲೀಕರ ಸಹಿತ ಕಲಾವಿದರು ಕಂಗಾಲಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಊರಹಬ್ಬಗಳ ಸಂದರ್ಭದಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳು ನಿಂತುಹೋಗಿವೆ. ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದ ನೂರಾರು ಸ್ತ್ರೀ ಕಲಾವಿದರೂ ಕಳೆದ ಒಂದು ವರ್ಷದಿಂದ ಬಣ್ಣ ಹಚ್ಚಿಲ್ಲ. ಇಂತಹ ಪರಿಸ್ಥಿತಿ ಇನ್ನು ಎಷ್ಟು ಕಾಲವೋ ಹೇಳಲಾಗುತ್ತಿಲ್ಲ. ಜಾನಪದ ಕಲಾವಿದರ ಪರಿಸ್ಥಿತಿಯೂ ಇಷ್ಟೇ. ಸರ್ಕಾರಿ ಪ್ರಾಯೋಜಿತ ಜಯಂತಿಗಳು, ಉತ್ಸವ, ಜಾನಪದ ಜಾತ್ರೆಗಳು ನಿಂತು ಹೋಗಿವೆ.

ಈ ಮೇಲಿನದೆಲ್ಲಾ ಒಂದು ರೀತಿಯಲ್ಲಿ ಚದುರಿದ ಚಿತ್ರಗಳಂತೆ. ಮತ್ತಷ್ಟು ಆಳಕ್ಕಿಳಿದರೆ ಎಲ್ಲವೂ ಕರುಳು ಕಿವುಚುವ ಚಿತ್ರಗಳೇ. ಕಲೆಯನ್ನು ಅಪ್ಪಿ ಬದುಕು ಕಟ್ಟಿಕೊಳ್ಳ ಬಯಸುವವನಿಗೆ ನೆಮ್ಮದಿ ಕನಸಿನ ಗಂಟಾಗಿದೆ. ಕಲಾವಿದರ ಮಕ್ಕಳೂ ಕೂಡ ಇಂದಿನ ಪರಿಸ್ಥಿತಿಯ ಬಲಿಪಶುಗಳು. ಎಲ್ಲಾ ಗ್ರಾಮೀಣ ಮಕ್ಕಳಂತೆ ಅವರ ಶೈಕ್ಷಣಿಕ ಬದುಕು ಕಗ್ಗಂಟಾಗಿದೆ. ಝಗಮಗಿಸುವ ಬೆಳಕಿನಲ್ಲಿ, ವೇಷಭೂಷಣ ತೊಟ್ಟು ಮೆರೆಯುತ್ತಾ, ಸಹೃದಯರಿಗೆ ಮನರಂಜನೆ ನೀಡುತ್ತಿದ್ದ ಕಲಾವಿದ ಇಂದು ಒಬ್ಬಂಟಿ. ಅವನ ಕುಟುಂಬ ಬೀದಿಪಾಲು. ಇದಕ್ಕೆ ಯಾರನ್ನು ಹೊಣೆ ಮಾಡಬೇಕೋ..!

ಆರ್ಥಿಕ ಪ್ಯಾಕೇಜ್ ಗೊಂದಲ!

ಇತ್ತೀಚೆಗೆ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಕಲಾವಿದರಿಗೂ ನೆರವು ಘೋಷಿಸಿದೆ. ಕಳೆದ ಬಾರಿ 16 ಸಾವಿರ ಜನರಿಗೆ ತಲಾ ರೂ.2,000 ದಂತೆ ಕೊಡಮಾಡಿತ್ತು. ಸಾಕಷ್ಟು ಗೊಂದಲದಿಂದ ಕೂಡಿದ್ದ ವಿತರಣಾ ಪ್ರಕ್ರಿಯೆಯಿಂದ ಅರ್ಹ ಕಲಾವಿದರಿಗೆ ದೊರೆತಿಲ್ಲವೆಂಬ ಮಾತು ಕೇಳಿಬಂದಿತು. ಈ ಬಾರಿಯೂ 16095 ಜನ ಕಲಾವಿದರಿಗೆ ತಲಾ ರೂ.3,000 ಕೊಡುವುದಾಗಿ ಸರ್ಕಾರ ಘೋಷಿಸಿದೆ. ಈ ಮೊತ್ತ ಸಾಲದು, ಹತ್ತು ಸಾವಿರ ರೂ.ಗಳನ್ನಾದರು ಕೊಡಿ ಎಂಬ ಬೇಡಿಕೆ ಕಲಾವಿದರದು. ಇದಕ್ಕೆ ಸರ್ಕಾರದ ಸ್ಪಂದನೆ ಸಿಗಬೇಕು. ಈಗ ಘೋಷಿತವಾಗಿರುವ ಆರ್ಥಿಕ ಸಹಾಯ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ ಸಾವಿರಾರು ಕಲಾವಿದರು.

Leave a Reply

Your email address will not be published.