ಕೊರೋನಾ ಬಿಕ್ಕಟ್ಟು ಪರಿಹಾರದ ನಾಲ್ಕು ಮಾರ್ಗ!

ಕೋವಿದ್-19 ಎದುರಿಸಲು ಸುಲಭ ಪರಿಹಾರ ಮಾರ್ಗಗಳಿಲ್ಲ. ಮುಂದಿನ ಕೆಲವು ತಿಂಗಳುಗಳ ಕಾಲ ಸರ್ಕಾರಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿ ಎಲ್ಲವನ್ನೂ ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಅವಲಂಬಿಸುವುದು ಅನಿವಾರ್ಯವಾಗುತ್ತದೆ.

ಚೀನಾದಲ್ಲಿ ಒಂದು ಹೊಸ ವೈರಾಣು ಉಗಮಿಸುತ್ತದೆ. ಚೀನಾ ಈ ರೋಗವಾಹಕವನ್ನು ಶೀಘ್ರವಾಗಿ ಗುರುತಿಸಿ ತನ್ನ ಗಡಿಗಳನ್ನು ಬಂದ್ ಮಾಡುತ್ತದೆ. ವೈರಾಣುವನ್ನು ಹೋಗಲಾಡಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಕಠಿಣ ಕ್ರಮಗಳ ಮೂಲಕ ಅತಿ ಕಡಿಮೆ ಸಂಖ್ಯೆಯ ಜನರು ಚೀನಾದಿಂದ ಹೊರಹೋಗುತ್ತಾರೆ. ಏತನ್ಮಧ್ಯೆ ಇತರ ದೇಶಗಳಲ್ಲೂ ವೈರಾಣು ದಾಳಿ ಆರಂಭವಾಗುತ್ತದೆ. ದಕ್ಷಿಣ ಕೊರಿಯಾ, ಟೈವಾನ್, ಹಾಂಕಾಂಗ್, ಸಿಂಗಪೂರ್ ಈ ದೇಶಗಳಲ್ಲಿ ಸೋಂಕು ತಗುಲಿದವರನ್ನು ಬೇಗನೆ ಗುರುತಿಸಲಾಗುತ್ತದೆ; ಸೋಂಕಿತರನ್ನು ಪ್ರತ್ಯೇಕಿಸಿ, ವೈರಾಣು ಹರಡುವುದನ್ನು ತಡೆಗಟ್ಟಲಾಗುತ್ತದೆ. ಈ ಮೂರು ಆಯಾಮದ ತಂತ್ರವನ್ನು ಅನುಸರಿಸುವ ಮೂಲಕ (ಪರೀಕ್ಷೆ, ಗುರುತಿಸುವಿಕೆ ಮತ್ತು ಪ್ರತ್ಯೇಕಿಸುವಿಕೆ) ವೈರಾಣುವನ್ನು ನಿವಾರಿಸುವಲ್ಲಿ ಯಶಸ್ಸು ಸಾಧಿಸಲಾಗುತ್ತದೆ. ಮನುಕುಲದ ರಕ್ಷಣೆಯಾಗುತ್ತದೆ.

ವಾಸ್ತವ ಸಂಗತಿ ಎಂದರೆ ಎಸ್‌ಎಆರ್‌ಎಸ್-ಸಿಒವಿ-2 ವೈರಾಣು, ಅಂದರೆ ನೋವೆಲ್ ಕೊರೋನಾ ವೈರಾಣು ಚೀನಾದ ಆರೋಗ್ಯ ಸಿಬ್ಬಂದಿಯ ಪ್ರಯತ್ನದ ಹೊರತಾಗಿಯೂ ವಿಶ್ವದಾದ್ಯಂತ ಹರಡುತ್ತದೆ. ಇತರ ದೇಶಗಳಲ್ಲಿ ಸರ್ಕಾರಗಳು ಆರಂಭದ ಹಂತದಲ್ಲಿ ಶೀಘ್ರ ಕ್ರಮ ಕೈಗೊಳ್ಳಲು ವಿಫಲವಾಗಿದ್ದರಿಂದ ಕೊರೋನಾ ಸಮುದಾಯದಲ್ಲಿ ಹರಡಲು ಆರಂಭಿಸಿದ್ದು, ಅನೇಕರು ಆಸ್ಪತ್ರೆ ಸೇರಿದ್ದರೆ, ಸಾವಿರಾರು ಜನರು ಮೃತಪಟ್ಟಿದ್ದಾರೆ. ಕೊರೋನಾ ವೈರಾಣು ತೀವ್ರ ಅಪಾಯಕಾರಿಯಾಗಿದೆ. ನೆಗಡಿ, ಫ್ಲೂ ಇತರ ಜ್ವರಗಳಂತೆ ಬೇಗನೆ ಹರಡುತ್ತದೆ, ಯಾವುದೇ ಲಕ್ಷಣಗಳು ಇಲ್ಲದವರಿಂದಲೂ ಹರಡುತ್ತದೆ.

ಇತ್ತೀಚಿನ ಮಾಹಿತಿಯ ಅನುಸಾರ ಸೋಂಕು ತಗುಲಿದ ಶೇ 5ಕ್ಕಿಂತಲೂ ಕಡಿಮೆ ಜನರಿಗೆ ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗಿದೆ. ಇವರ ಪೈಕಿ ಶೇ 30ರಷ್ಟು ಜನ ತುರ್ತು ನಿಗಾ ಘಟಕದಲ್ಲಿರಬೇಕಾಗುತ್ತದೆ. ಸೋಂಕು ತಗುಲಿದ ಶೇ 0.6 ರಿಂದ 1.4ರಷ್ಟು ಜನರು ಸಾಯುತ್ತಾರೆ.

ವಿಶ್ವದಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಕೊರೋನಾ ಸೋಂಕಿತರಿದ್ದಾರೆ. ಅಮೆರಿಕ ಒಂದರಲ್ಲೇ ನಾಲ್ಕು ಲಕ್ಷ ಸೋಂಕಿತರು ಇದ್ದು 13 ಸಾವಿರ ಜನ ಮೃತಪಟ್ಟಿದ್ದಾರೆ. 82000 ಸೋಂಕಿತರು, 3000 ಸಾವುಗಳನ್ನು ದಾಖಲಿಸಿದ್ದ ಚೀನಾವನ್ನು ಅಮೆರಿಕ ಹಿಂದಿಕ್ಕಿದೆ (*ಇವು ಏಪ್ರಿಲ್ 8ರ ಅಂಕಿಅಂಶಗಳು). ಕೊರೋನಾ ಸೋಂಕು ತಗುಲಿರುವ ಶೇ 50ಕ್ಕಿಂತಲೂ ಹೆಚ್ಚು ಜನರು ಯೂರೋಪ್ ಖಂಡದಲ್ಲೇ ಇದ್ದಾರೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಕೆಲವು ವಾರಗಳಷ್ಟು ಹಿಂದಿವೆ.

ಸೆನೆಗಲ್, ಲೈಬೀರಿಯಾ, ನೈಜೀರಿಯಾ ಮುಂತಾದ ದೇಶಗಳು ಈ ಸವಾಲನ್ನು ಎದುರಿಸಲು ಸಕಲ ಸಿದ್ಧತೆ ನಡೆಸಿದ್ದರೂ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿವೆ. ಆರೋಗ್ಯ ಸೇವೆ ಮತ್ತು ಪರೀಕ್ಷಾ ಕಿಟ್‌ಗಳ ಕೊರತೆ ಕಾಡುತ್ತಿದೆ. ಬ್ರೆಜಿಲ್, ಭಾರತ, ಮೆಕ್ಸಿಕೋ ಮುಂತಾದ ದೇಶಗಳು ಮುಂದೇನಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲು ನಿರಾಕರಿಸುತ್ತಿವೆ.

ಈವರೆಗೆ ಜಗತ್ತಿನ ಎಷ್ಟು ಜನರಿಗೆ ಕೊರೋನಾ ಸೊಂಕು ತಗುಲಿದೆ ಎಂಬ ಶೇಕಡಾವಾರು ಮಾಹಿತಿ ಲಭ್ಯವಾಗಿಲ್ಲ. ಒಬ್ಬ ವ್ಯಕ್ತಿಗೆ ವೈರಾಣು  ಸೋಂಕು ತಗುಲಿರುವುದನ್ನು ದೃಢಪಡಿಸುವ ವಿಶ್ವಾಸಾರ್ಹ ಪರೀಕ್ಷಾ ವಿಧಾನ ಇಲ್ಲದಿರುವುದರಿಂದ ಯಾವುದೇ ಲಕ್ಷಣಗಳೂ ಇಲ್ಲದೆ ಎಷ್ಟು ಜನರಲ್ಲಿ ಕೊರೋನಾ ವೈರಾಣು ಪ್ರವೇಶಿಸಿದೆ ಎಂದು ನಿರ್ಧರಿಸಲಾಗುತ್ತಿಲ್ಲ. ಮಕ್ಕಳಲ್ಲಿ ಕೊರೋನಾ ಹೇಗೆ ಪ್ರಸರಣ ಹೊಂದುತ್ತದೆ ಎಂಬ ಮಾಹಿತಿಯೂ ಇಲ್ಲ. ಮಕ್ಕಳಿಗೆ ಹೆಚ್ಚಿನ ನಿರ್ಬಂಧಕ ಶಕ್ತಿ ಇದೆ ಎನ್ನಲಾಗಲೀ, ಬೇಗನೆ ಸೋಂಕಿಗೆ ಬಲಿಯಾಗುತ್ತವೆ ಎನ್ನಲಾಗಲೀ ಆಧಾರವಿಲ್ಲ.

ಈಗ ಏನಾಗುತ್ತದೆ?

ಕೊರೋನಾ ವಿರುದ್ಧದ ಹೋರಾಟದಲ್ಲಿ ಇತರ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ಪ್ರಕಟವಾಗಿರುವ ಮಾದರಿಗಳನ್ನು ಗಮನಿಸಿ ಹೇಳುವುದಾದರೆ ಕೊರೋನಾ ನಾಶವಾಗುವ ನಾಲ್ಕು ಮಾರ್ಗಗಳನ್ನು ಗುರುತಿಸಬಹುದು.

ಮಾರ್ಗ-1

ಎಲ್ಲ ಸರ್ಕಾರಗಳೂ ಪರಸ್ಪರ ಸಹಕಾರದ ಮೂಲಕ ಅಗ್ಗದ ದರದಲ್ಲಿ ಪರೀಕ್ಷೆ ನಡೆಸುವುದರ ಮೂಲಕ ಶೀಘ್ರಗತಿಯ ಕ್ರಮಗಳನ್ನು ಕೈಗೊಳ್ಳುವುದು. ಎಲ್ಲ ದೇಶಗಳು ನಿಗದಿತ ಸಮಯದವರೆಗೆ ತಮ್ಮ ಗಡಿಗಳನ್ನು ಬಂದ್ ಮಾಡಿ ಕೊರೋನಾ ಸೋಂಕಿತರನ್ನು ಗುರುತಿಸಿ, ಅನ್ಯ ದೇಶಗಳಿಗೆ ಹರಡದಂತೆ ತಡೆಗಟ್ಟಬಹುದು.

ಬಹುಶಃ ಇದು ಸಾಧ್ಯವಾಗದ ಮಾತು. ಈಗಾಗಲೇ ವೈರಾಣು ವ್ಯಾಪಕವಾಗಿ ಹರಡಿದೆ. ಕೆಲವು ದೇಶಗಳು ಪರಸ್ಪರ ಸಹಕಾರಕ್ಕೆ ಮುಂದಾಗುತ್ತಿಲ್ಲ. ಆದರೆ ಮೂರು ಕಾರಣಗಳಿಗಾಗಿ ಇದು ಅಗತ್ಯ ಎನಿಸುತ್ತದೆ.  ಕೋವಿದ್-19 ಪತ್ತೆ ಹಚ್ಚುವಲ್ಲಿ ಮತ್ತು ನಿವಾರಿಸುವಲ್ಲಿ ಬಳಸುವ ಚಿಕಿತ್ಸಾ ವಿಧಾನಗಳು ಸಮರ್ಪಕವಾಗಿಲ್ಲದಿರಬಹುದು. ಒಂದು ಲಸಿಕೆ ತಯಾರಿಸಲು ದಶಕಗಳೇ ಬೇಕಾಗಬಹುದು. ಜನರಲ್ಲಿನ ರೋಗ ನಿರ್ಬಂಧಕ ಶಕ್ತಿ ಸೀಮಿತವಾಗಿದ್ದು ಸೋಂಕು ಬಹುಆಯಾಮಗಳ ಮೂಲಕ ಹರಡಬಹುದು. ನ್ಯೂಜಿಲೆಂಡ್ ಈ ವಿಧಾನವನ್ನು ಅನುಸರಿಸುತ್ತಿದೆ. ತನ್ನ ಗಡಿಗಳನ್ನು ಬಂದ್ ಮಾಡಿದೆ, ಕಟ್ಟುನಿಟ್ಟಾದ ಲಾಕ್ ಡೌನ್ ಘೋಷಿಸಿದ್ದು ವೈರಾಣು ಹೋಗಲಾಡಿಸಲು ಸಮುದಾಯ ಆಧಾರಿತ ಪರೀಕ್ಷೆ ನಡೆಸುತ್ತಿದೆ.

ಮಾರ್ಗ-2

ಇದು ಬಹುಪಾಲು ಸಂಭವ ಎನಿಸುತ್ತದೆ. ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ಫಲಕಾರಿಯಾಗುತ್ತಿವೆ. ಈ ಲಸಿಕೆಯನ್ನು ಕಂಡುಹಿಡಿಯುವ ವೇಳೆಗೆ ಮುಂದಿನ 12 ರಿಂದ 18 ತಿಂಗಳ ಅವಧಿಯಲ್ಲಿ ವಿವಿಧ ದೇಶಗಳು, ಮಧ್ಯೆ ಮಧ್ಯೆ ಲಾಕ್ ಡೌನ್ ಮಾಡುತ್ತಿರುವುದರ ಮೂಲಕ ಕೊರೋನಾ ಹರಡುವಿಕೆಯನ್ನು ತಡೆಗಟ್ಟಬಹುದು. ಆರೋಗ್ಯಾಧಿಕಾರಿಗಳು ಮೂರು ತಿಂಗಳ ಮುನ್ನವೇ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿದೆಯೇ, ವೆಂಟಿಲೇರ್ಸ್ ಸೌಲಭ್ಯ ಇದೆಯೇ, ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿಬ್ಬಂದಿ ಇದ್ದಾರೆಯೇ ಎಂದು ಅಂದಾಜು ಮಾಡಬಹುದು. ಇದನ್ನು ಆಧರಿಸಿ ಸರ್ಕಾರಗಳು ಕ್ವಾರಂಟೈನ್ ಕ್ರಮಗಳನ್ನು ಹೆಚ್ಚಿಸುವುದು, ಕಡಿಮೆ ಮಾಡುವುದು ಸಾಧ್ಯ.

ಆದರೆ ಈ ಸಂದರ್ಭ ಎದುರಾದರೆ ಆರೋಗ್ಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಲಾಕ್ ಡೌನ್ ಮಾಡುವುದರಿಂದ ಉಂಟಾಗುವ ಸಾಮಾಜಿಕ ಹಾಗೂ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಪದೇಪದೇ ಲಾಕ್ ಡೌನ್ ಮಾಡುವುದರಿಂದ ನಿರುದ್ಯೋಗ, ಮಕ್ಕಳ ಕಾಳಜಿಯ ಕೊರತೆ ಹೆಚ್ಚಾಗಿ ಎಲ್ಲೆಡೆ ಸಾಮಾಜಿಕ ಕ್ಷೋಭೆ ಉಂಟಾಗುತ್ತದೆ. ಬಡ ರಾಷ್ಟçಗಳಲ್ಲಿ ಹೆಚ್ಚು ಜನರು ವೈರಾಣುಗಿಂತಲೂ ಲಾಕ್ ಡೌನ್ ಪರಿಣಾಮದಿಂದಲೇ ಸಾಯುತ್ತಾರೆ. ಶುದ್ಧ ಕುಡಿವ ನೀರಿನ ಕೊರತೆ ಮತ್ತು ಅಪೌಷ್ಟಿಕತೆಯಿಂದಲೇ ಹೆಚ್ಚು ಜನ ಸಾಯುತ್ತಾರೆ.

ಮಾರ್ಗ-3

ಮೂರನೆಯ ಸಾಧ್ಯತೆ ಎಂದರೆ, ವಿವಿಧ ದೇಶಗಳು ಲಸಿಕೆಯ ನಿರೀಕ್ಷೆಯಲ್ಲೇ ದಕ್ಷಿಣ ಕೊರಿಯಾ ಮಾದರಿಯನ್ನು ಅನುಸರಿಸುವುದು. ವೈರಾಣು ಹೊತ್ತಿರುವವರನ್ನು ಗುರುತಿಸಲು ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದು. ಸೊಂಕಿತರನ್ನು ಕಂಡುಹಿಡಿಯುವುದು ಮತ್ತು ಮೂರು ವಾರಗಳ ಕಾಲ ಅವರನ್ನು ಕ್ವಾರಂಟೈನ್ ಮಾಡುವುದು. ಇದಕ್ಕೆ ಭಾರಿ ಪ್ರಮಾಣದ ಪೂರ್ವ ಸಿದ್ಧತೆ ಅವಶ್ಯವಾಗುತ್ತದೆ. ಸೋಂಕಿತರನ್ನು ಗುರುತಿಸುವ ಆ್ಯಪ್ ತಯಾರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕಾಗುತ್ತದೆ. ಗಂಟಲು ಪರೀಕ್ಷೆ ನಡೆಸಲು, ಫಲಿತಾಂಶವನ್ನು ಸಂಸ್ಕರಿಸಲು, ಕ್ವಾರಂಟೈನ್ ನಿಗಾವಹಿಸಲು ಸಾಕಷ್ಟು ಸಿಬ್ಬಂದಿ ಬೇಕಾಗುತ್ತಾರೆ. ದೈಹಿಕ ಅಂತರದ ನಿಯಮಗಳನ್ನು ಕೊಂಚ ಸಡಿಲಗೊಳಿಸಿ ಜಾರಿಯಲ್ಲಿಡಲಾಗುತ್ತದೆ. ಇದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ಮಾರ್ಗ-4

ಶೀಘ್ರದಲ್ಲೇ ಪರಿಣಾಮಕಾರಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇಲ್ಲವಾದ್ದರಿಂದ ಕೋವಿದ್ 19 ಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದೇ ಹೊರತು, ಅದರ ಮೂಲ ಕಾರಣವನ್ನು ಶೋಧಿಸಲಾಗುವುದಿಲ್ಲ. ಸೋಂಕಿತರಿಗೆ ವೈರಾಣು ನಿರ್ಬಂಧಕ ಚಿಕಿತ್ಸೆ ನೀಡುವ ಮೂಲಕ ಆರೋಗ್ಯ ಸಿಬ್ಬಂದಿ ತುರ್ತು ಚಿಕಿತ್ಸೆಗೆ ಜಾರುವುದರಿಂದ ಸೋಂಕಿತರನ್ನು ತಡೆಗಟ್ಟಬಹುದು. ಇದರಿಂದ ಗಂಭೀರ ಸ್ಥಿತಿ ತಲುಪಿರುವವರನ್ನು ಸಾವಿನಿಂದ ತಪ್ಪಿಸಬಹುದು. ಇದಕ್ಕಿಂತಲೂ ಉತ್ತಮ ಪರಿಹಾರ ಎಂದರೆ ಸೋಂಕಿತರನ್ನು ಕಂಡುಹಿಡಿಯಲು ಕ್ಷಿಪ್ರ ಪರೀಕ್ಷೆಯನ್ನು ನಡೆಸುವ ಮೂಲಕ ಪ್ರಾಫಿಲಾಕ್ಟಿಕ್ ಚಿಕಿತ್ಸೆಯನ್ನು ನೀಡಬಹುದು. ಹೆಚ್ಚು ಸಂಪನ್ಮೂಲಗಳಿರುವ ದೇಶದಲ್ಲಿ ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬಹುದು. ಆದರೆ ಬಡ ದೇಶಗಳಿಗೆ ಇದು ಅಸಾಧ್ಯವೇ ಆಗುತ್ತದೆ.

ಕೋವಿದ್-19 ಎದುರಿಸಲು ಸುಲಭ ಪರಿಹಾರ ಮಾರ್ಗಗಳಿಲ್ಲ. ಮುಂದಿನ ಕೆಲವು ತಿಂಗಳುಗಳ ಕಾಲ ಸರ್ಕಾರಗಳು ಸಾರ್ವಜನಿಕ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಹಿತಾಸಕ್ತಿ ಎಲ್ಲವನ್ನೂ ಕಾಪಾಡುವ ನಿಟ್ಟಿನಲ್ಲಿ ಪರಸ್ಪರ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಅರ್ಧದಷ್ಟು ಶ್ರಮ ಲಸಿಕೆಯನ್ನು ಕಂಡುಹಿಡಿಯಲೆಂದೇ ವ್ಯಯವಾಗುತ್ತದೆ. ಇನ್ನುಳಿದಂತೆ ಸಮರ್ಪಕವಾದ ಔಷಧಿ ತಯಾರಿಕೆ, ಇದರ ವಿತರಣೆ ಮತ್ತು ಎಲ್ಲರಿಗೂ ತಲುಪುವಂತೆ ಮಾಡುವುದು ಮಹತ್ತರವಾದ ಕಾರ್ಯವಾಗುತ್ತದೆ.

ಮೂಲ: ದ ಗಾರ್ಡಿಯನ್   ಅನುವಾದ : ನಾ ದಿವಾಕರ

*ಲೇಖಕರು ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.

Leave a Reply

Your email address will not be published.