ಕೊರೋನಾ ವೈರಸ್ ಬಿಕ್ಕಟ್ಟು

ಒಂದು ವ್ಯಾಕ್ಸಿನ್ ಮತ್ತು ಸಮೂಹ ರೋಗ ನಿರೋಧಕ ಸಾಮರ್ಥ್ಯವು ಕೊರೋನಾ ವೈರಸ್ ಸಾಂಕ್ರಾಮಿಕ ರೊಗವನ್ನು ಕೊನೆಗಾಣಿಸಬಹುದೇ?.

– ನೈಗೇಲ್ ಮ್ಯಾಕ್ ಮಿಲನ್

ನಾವು ಒಟ್ಟಾಗಿ ಕಾಫಿ ಕುಡಿಯುತ್ತಿದ್ದ, ಜೊತೆಯಾಗಿ ಕುಳಿತು ಸಿನಿಮಾ ನೋಡುತ್ತಿದ್ದ, ಗುಂಪಾಗಿ ನೆರೆದು ಸಂಗೀತ ಕೇಳಿ ಕಾಲಿನಲ್ಲಿ ತಾಳ ಹಾಕುತ್ತಾ, ಆಟಗಳನ್ನು ನೋಡುತ್ತ ಆನಂದಿಸುತ್ತಿದ್ದ ಹಿಂದಿನ ಜಗತ್ತಿನ ಬದುಕಿಗೆ ನಾವು ಮರಳುವುದು ಹೇಗೇ? ಇದರ ಸಾಧ್ಯತೆಯ ಬಗ್ಗೆ ಎರಡು ಅಭಿಪ್ರಾಯಗಳು ಕೇಳಿಬರುತ್ತವೆ. ಒಂದು- ಪರಿಣಾಮಕಾರಿಯಾದ ಲಸಿಕೆ (ವ್ಯಾಕ್ಸಿನ್). ಮತ್ತೊಂದು ಸಮೂಹ ಬೆಳೆಸಿಕೊಳ್ಳುವ ನಿರೋಧಕ ಶಕ್ತಿ (Herd Immunity) ಅಥವಾ ಶೇ. 60ರಿಂದ 80ರಷ್ಟು ಜನರಿಗೆ ಸೋಂಕು ತಗಲುವ ಮೂಲಕ. ಈ ಎರಡು ಆಯ್ಕೆಗಳಲ್ಲಿ ಒಂದರ ಮೂಲಕವಾದರೂ ಕೋವಿಡ್-19 ರೋಗವನ್ನು ತರುವ SARS-CoV-2 ವೈರಸ್‌ಗೆ ಮನುಷ್ಯ ಸೋಂಕು ಅಂಟದಂತೆ ನಿರೊಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅಗತ್ಯ.

ಆನ್‌ಲೈನ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಬಹಳ ಮುಖ್ಯವಾದ ಅಧ್ಯಯನವೊಂದು 2021 ಮತ್ತು ನಂತರದ ದಿನಗಳಲ್ಲಿ ನಮ್ಮ ಭವಿಷ್ಯ ಹೇಗಿರಬಹುದೆಂಬ ಮುನ್ಸೂಚನೆಯ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ.

ಈ ಅಧ್ಯಯನವು SARS-CoV-2 ವೈರಸ್ ವಿರುದ್ಧ ಸೃಷ್ಟಿಯಾಗುವ ರೋಗನಿರೋಧಕ ಶಕ್ತಿಯು ದರ‍್ಘಕಾಲ ಉಳಿಯುವುದಿಲ್ಲ, ಹೆಚ್ಚೆಂದರೆ ಕೆಲವರಲ್ಲಿ ಎರಡು ತಿಂಗಳಷ್ಟು ಕಡಿಮೆ ಅವಧಿ ಇರಬಹುದು ಎಂದು ಸೂಚಿಸುತ್ತದೆ. ಪರಿಸ್ಥಿತಿ ಹೀಗಿದ್ದರೆ, ಸಮೂಹದಲ್ಲಿ ಬೆಳೆಯುವ ಇಮ್ಯೂನಿಟಿ ಹೆಚ್ಚುಕಾಲ ಉಳಿಯದು: ರೋಗನಿರೋಧಕ ಶಕ್ತಿಯನ್ನು ಕಾಲಕಾಲಕ್ಕೆ ಹೆಚ್ಚಿಸುವ ಪರಿಣಾಮಕಾರಿ ಲಸಿಕೆಯನ್ನು ನೀಡುವ ಅಗತ್ಯವಿದೆ.

ವೇಗವಾಗಿ ಕ್ಷಯಿಸುವ ಇಮ್ಯೂನಿಟಿ

ರಕ್ತದಲ್ಲಿ ಉತ್ಪತ್ತಿಯಾಗುವ ರೋಗನಿರೋಧಕ ಪ್ರತಿವಿಷ ವಸ್ತು ಅಥವಾ ಆಂಟಿಬಾಡಿಗಳು ನಮ್ಮ ರೋಗನಿರೋಧಕ ವ್ಯವಸ್ಥೆಯ ಬಹುಮುಖ್ಯ ಘಟಕ. ಅವು ಮುಖ್ಯವಾಗಿ ವೈರಸ್ ಕಣಗಳ ಜೊತೆ ಅಂಟಿಕೊಂಡು ಜೀವಕೋಶಗಳಿಗೆ ಸೋಂಕು ತಗುಲದಂತೆ ಮಾಡುತ್ತವೆ. ಕೆಲವು ಸಂದರ್ಭಗಳಲ್ಲಿ ಅವು ಸೋಂಕು ತಗುಲಿದ ಜೀವಕೋಶಗಳಿಗೆ ಅಂಟಿಕೊಂಡು ಕೋಶಗಳ ಸಾವಿಗೆ ಕಾರಣವಾಗಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟುತ್ತವೆ.

ಇದರ ಜೊತೆಗೆ ನಮ್ಮ ರೋಗನಿರೋಧಕ ವ್ಯವಸ್ಥೆಯ ಭಾಗವಾಗಿ ‘ಟಿ’ ಜೀವಕೋಶಗಳಿವೆ. ಅವು ವೈರಸ್ ಸೋಂಕಿತ ಜೀವಕೋಶಗಳನ್ನು ಸರ‍್ಥವಾಗಿ ಗುರುತಿಸಿ ಸಾಯಿಸುತ್ತವೆ. ಆದರೆ ಕೋವಿಡ್-19ಗೆ ಶ್ವಾಸಕೋಶಗಳಲ್ಲಿ ಆಂಟಿಬಾಡಿಗಳಿರುವುದು ಅಪೇಕ್ಷಣೀಯ. ಏಕೆಂದರೆ ‘ಟಿ’ ಕೋಶಗಳು ವೈರಸ್ ಮೊದಲು ದಾಳಿ ಮಾಡುವ ವಾಯುಮಯ ಪುಪ್ಪಸಗಳಿಗೆ ಸರಾಗವಾಗಿ ತಲುಪಲಾರವು.

ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ ಈ ಬಗ್ಗೆ ಅಧ್ಯಯನ ಮಾಡಿರುವ ಕೇಟಿ ಡೂರೆಸ್ ಮತ್ತವರ ತಂಡವು ಕೋವಿಡ್-19 ಸೋಂಕಿನ ರೋಗಿಗಳಲ್ಲಿ ಆಂಟಿಬಾಡಿಗಳು ಎಷ್ಟುಕಾಲ ಸಕ್ರಿಯವಾಗಿರುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಿದೆ. ಅದನ್ನು ಪತ್ರಿಕೆಯೊಂದಕ್ಕೆ ಪ್ರಕಟಣೆಗಾಗಿ ಸಲ್ಲಿಸಲಾಗಿದೆ. ಆದರೆ ಆ ಅಧ್ಯಯನವು ಸಹವಿಜ್ಞಾನಿಗಳ ಪರಿಶೀಲನೆಗೆ ಇನ್ನೂ ಒಳಪಟ್ಟಿಲ್ಲವಾದ್ದರಿಂದ ಅದನ್ನು ಸ್ವಲ್ಪ ಎಚ್ಚರಿಕೆಯಿಂದಲೇ ಪರಿಗಣಿಸಬೇಕಾಗಬಹುದು.

ಈ ವರದಿಯ ಪ್ರಕಾರ ಅಧ್ಯಯನ ಮಾಡಿದ 65 ಸೋಂಕಿತ ರೋಗಿಗಳಲ್ಲಿ 63 ಜನರಲ್ಲಿ ಆಂಟಿಬಾಡಿಗಳು ರೋಗಕ್ಕೆ ಪ್ರತಿಕ್ರಿಯಿಸಿವೆ. ಆದರೆ ಈ ಅಧ್ಯಯನದ ಮುಖ್ಯವಾದ ಅಂಶವೆಂದರೆ ಆಂಟಿಬಾಡಿಗಳ ಪ್ರತಿಕ್ರಿಯೆ ಎಷ್ಟು ಸರ‍್ಥವಾಗಿತ್ತು ಎನ್ನುವುದು. ಇದು ಪ್ರಯೋಗಾಲಯದಲ್ಲಿ ರೋಗಿಗಳ ರಕ್ತಸಾರವನ್ನು ಸೋಂಕುಕಾರಕ SARS-CoV-2 ವೈರಸ್ ಜೊತೆ ಸೇರಿಸಿ  ನಂತರ ಆ ವೈರಸ್ ಜೀವಕೋಶಗಳಲ್ಲಿ ಸೋಂಕು ತರಬಲ್ಲದೇ ಎಂದು ಪರೀಕ್ಷಿಸುವ ವಿಧಾನ. ಇದಕ್ಕೆ “ರೋಗವನ್ನು ತಟಸ್ಥಗೊಳಿಸುವುದನ್ನು ಪರೀಕ್ಷಿಸುವ ವಿಧಾನ” ಅಥವಾ “neutralisation assay” ಎನ್ನುತ್ತಾರೆ. ಇಲ್ಲಿ ಲಭ್ಯವಾದಂತಹ ಫಲಿತಾಂಶಗಳು ಆಶಾದಾಯಕವಾಗಿದ್ದವು. ಸುಮಾರು ಶೇ. 60ರಷ್ಟು ರೋಗಿಗಳ ರಕ್ತದಲ್ಲಿ ರೋಗವನ್ನು ತಟಸ್ಥಗೊಳಿಸಲು ವೈರಸ್ ಬೆಳೆಯುವುದಕ್ಕೆ ಅಡ್ಡಿ ಪಡಿಸುವ ಪ್ರತಿವಿಷ ವಸ್ತುಗಳ ಪ್ರತಿಕ್ರಿಯೆ ಉತ್ತಮವಾಗಿತ್ತು.

ಅಂತಿಮವಾಗಿ ಸಂಶೋಧಕರು ಈ ಪ್ರತಿವಿಷ ವಸ್ತುಗಳ ಪ್ರತಿಕ್ರಿಯೆ ಎಷ್ಟು ಕಾಲ ಉಳಿಯುತ್ತದೆಂಬುದನ್ನು ಪರೋಕ್ಷೆಗೊಳಪಡಿಸಿದರು. ಅಲ್ಲಿ ದೊರಕಿದ ಮಾಹಿತಿಯೇ ಬಹುಮುಖ್ಯವಾದದ್ದು. ದುರದೃಷ್ಟವಶಾತ್ ಪ್ರತಿವಿಷ ವಸ್ತುಗಳ ಮಟ್ಟ 20ನೆ ದಿನದಿಂದ ಕ್ಷೀಣಿಸತೊಡಗಿತು.

ಶೇ. 17ರಷ್ಟು ರೋಗಿಗಳ ರಕ್ತದಲ್ಲಿ ಮಾತ್ರ ಪ್ರತಿವಿಷವಸ್ತುಗಳ ಸಾಮರ್ಥ್ಯದ ಮಟ್ಟ 57 ದಿನಗಳ ನಂತರವೂ ಉಳಿದಿತ್ತು. ಕೆಲವು ರೋಗಿಗಳು ಎರಡು ತಿಂಗಳ ನಂತರದಲ್ಲಿ ಸಂಪೂರ್ಣವಾಗಿ ಆಂಟಿಬಾಡಿಗಳನ್ನು ಕಳೆದುಕೊಂಡಿದ್ದರು.

ನಮ್ಮ ರೋಗನಿರೋಧಕ ಪ್ರತಿಕ್ರಿಯೆಯು SARS-CoV-2 ವೈರಸ್‌ಗೆ ನಿರೀಕ್ಷೆಗೂ ಮೊದಲೇ ಕಳೆದುಹೋಗುವ ಅಂಶವನ್ನು ಈ ಅಧ್ಯಯನ ಹೇಳುತ್ತದೆ. ಈ ಶಕ್ತಿ ಇಲ್ಲವಾದ ನಂತರ ಜನರಿಗೆ ವೈರಸ್‌ನಿಂದ ಮತ್ತೆ ಸೋಂಕು ತಗಲಬಹುದು.

ಮೂಲ: ಸ್ಕ್ರೋಲ್ ಇನ್ ಅನುವಾದ: ಡಾ.ಕೆ.ಪುಟ್ಟಸ್ವಾಮಿ

Leave a Reply

Your email address will not be published.