ಕೊರೋನೋತ್ತರ ನಿತ್ಯ ಜೀವನದ ಹತ್ತು ನಿದರ್ಶನಗಳು

ಕೋವಿದ್-19 ಪಿಡುಗು ನಮ್ಮನ್ನು ವ್ಯಕ್ತಿಗಳಾಗಿ ಮತ್ತು ಒಂದು ಸಮಾಜವಾಗಿ ಬದಲಿಸುತ್ತಿದೆ. ಇದರ ಪರಿಣಾಮ ಗಾಢವಾಗಿರುತ್ತದೆ. ಕೆಲವು ಪರಿಣಾಮಗಳು ಈಗ ನಮ್ಮ ಊಹೆಗೂ ನಿಲುಕುವುದಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ನಾವು ಅನುಸರಿಸುತ್ತಿರುವ ಕೆಲವು ಆಚರಣೆಗಳು ಅಥವಾ ಕೈಬಿಟ್ಟಿರುವ ಕೆಲವು ಆಚರಣೆಗಳು ಕೊರೋನಾ ನಂತರದ ಜೀವನದ ಒಂದು ಭಾಗವಾಗಿಬಿಡುತ್ತವೆ. ನಮ್ಮ ನಿತ್ಯ ಜೀವನದಲ್ಲಿನ ಹತ್ತು ಉದಾಹರಣೆಗಳನ್ನು ಗಮನಿಸಬಹುದು. ನನ್ನ ಗ್ರಹಿಕೆ ಮತ್ತು ತಕ್ಷಣದ ಭರವಸೆಗಳು ಈ ಹತ್ತು ನಿದರ್ಶನಗಳನ್ನು ಹೊರಹಾಕಿದೆ.

 

 

1. ಸಾರ್ವಜನಿಕ ನೈರ್ಮಲ್ಯ ಉತ್ತಮವಾಗುತ್ತದೆ. ಎಲ್ಲೆಂದರಲ್ಲಿ ಉಗಿಯುವ ಅಭ್ಯಾಸ ಇಲ್ಲವಾಗುತ್ತದೆ. ಇದು ಎಲ್ಲ ಸೋಂಕುಗಳಿಗೂ ಮೂಲ ಎನ್ನುವುದನ್ನು ಗಮನಿಸಬೇಕು. ಕೋವಿದ್ 19 ವಿರುದ್ಧ ಹೋರಾಟದಲ್ಲಿ ಇಂತಹ ಅನೈರ್ಮಲ್ಯ ಸೃಷ್ಟಿಸುವ ಅಭ್ಯಾಸಗಳನ್ನು ಆಡಳಿತ ವ್ಯವಸ್ಥೆ ನಿರ್ಬಂಧಿಸುತ್ತಿದೆ. ಜನರೂ ಸಹ ಪ್ರಜ್ಞಾಪೂರ್ವಕವಾಗಿಯೇ ಎಲ್ಲೆಂದರಲ್ಲಿ ಉಗಿಯುವುದನ್ನು ಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ, ರಾಜಕೀಯ, ಸಾಮುದಾಯಿಕ ಮತ್ತು ಮತಧಾರ್ಮಿಕ ನಾಯಕರು ಎಲ್ಲೆಂದರಲ್ಲಿ ಉಗಿಯುವ ಅಭ್ಯಾಸವನ್ನು ಖಂಡಿಸಬೇಕು ಮತ್ತು ಕೈಬಿಡುವಂತೆ ಒತ್ತಾಯಿಸಬೇಕು. ಭಾರತದಲ್ಲಿ ಈ ಹೊಲಸು ಅಭ್ಯಾಸಕ್ಕೆ ಅಂತ್ಯಹಾಡಲು ಇದು ಸಕಾಲ.

 

 

 

2. ಮನೆಯಲ್ಲೇ ಕುಳಿತು ಕಚೇರಿ ಕೆಲಸ ಮಾಡುವುದು ಕೊರೋನಾ ನಂತರ ಸಹಜ ಪ್ರವೃತ್ತಿಯಾಗಿಬಿಡುತ್ತದೆ. ಬಿಳಿ ಕಾಲರಿನ ವೃತ್ತಿಪರರಿಗೆ ಮತ್ತು ಸೇವಾ ವಲಯದ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ನೀತಿ ಉಪಯುಕ್ತವಾಗಿ ಕಾಣುತ್ತದೆ. ಹಾಗಾದಲ್ಲಿ ನಾವೆಲ್ಲರೂ ಅಲ್ಲದಿದ್ದರೂ, ನಮ್ಮಲ್ಲಿ ಬಹುಪಾಲು ಜನರು, ಕಳೆದ ಮೂರು ವಾರಗಳಿಂದ ಮನೆಯಲ್ಲೇ ಕುಳಿತು ನಮ್ಮ ಕಚೇರಿ ಕೆಲಸ ನಿರ್ವಹಿಸಿದ್ದೇವೆ, ಇನ್ನು ಮುಂದೆಯೂ ಹೀಗೆಯೇ ಮಾಡಬಾರದೇಕೆ? ವ್ಯಕ್ತಿಗಳು ಮತ್ತು ಕುಟುಂಬಗಳು ಕಚೇರಿ ನೌಕರಿ ಮತ್ತು ಗೃಹಜೀವನದ ನಡುವೆ ಹೊಂದಾಣಿಕೆ ಸಾಧಿಸಲು ಈ ಪ್ರಶ್ನೆಯನ್ನು ಶೋಧಿಸುವ ಸಾಧ್ಯತೆಗಳಿವೆ. ಕಂಪನಿಗಳಿಗೆ ತಮ್ಮ ಹೆಚ್ಚುವರಿ ಖರ್ಚು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ತನ್ನ ಉದ್ಯೋಗಿಗಳಿಗೆ ಉತ್ತಮ ಲ್ಯಾಪ್‌ಟಾಪ್, ಹೆಚ್ಚು ವೇಗದ ಅಂತರ್ಜಾಲ ಸೌಲಭ್ಯ, ವಿಡಿಯೋ ಕಾನ್ಫರೆನ್ಸ್ ಖಾತೆ ಮುಂತಾದುವನ್ನು ಅಗ್ಗದ ದರದಲ್ಲಿ ಒದಗಿಸಲು ಸಾಧ್ಯವಾಗುತ್ತದೆ.

3. ಪ್ರತಿದಿನವೂ ಪ್ರಯಾಣ ಮಾಡುವ ಪದ್ಧತಿಯಲ್ಲಿ ಬದಲಾವಣೆಯಾಗಲಿದೆ. ಮೇಲೆ ಉಲ್ಲೇಖಿಸಿರುವ ಎರಡನೆಯ ಅಂಶಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಒಂದೆರಡು ಗಂಟೆಯ ಅಥವಾ ಒಂದು ದಿನದ ಸಭೆಗೆ ಹಾಜರಾಗಲು, ಹತ್ತು ನಿಮಿಷದ ವಿಚಾರಣೆಗಾಗಿ ಕೋರ್ಟ್ಗೆ ಹಾಜರಾಗಲು ದಿನವಿಡೀ ಪ್ರಯಾಣ ಮಾಡುವ ಅಥವಾ ಮತ್ತೊಂದು ನಗರಕ್ಕೆ ವಿಮಾನದಲ್ಲಿ ಓಡಾಡುವ ಅಭ್ಯಾಸ ಉಪಯುಕ್ತವಲ್ಲ ಎನ್ನುವ ವಾಸ್ತವವನ್ನು ಬಹುಶಃ ಜನರು ಈಗ ಅರ್ಥ ಮಾಡಿಕೊಂಡಿರಬೇಕು. ವಿಮಾನ ಹತ್ತುವ ಮುನ್ನ ಜನರು ಎರಡು ಬಾರಿ, ಮೂರು ಬಾರಿ ಯೋಚನೆ ಮಾಡುತ್ತಾರೆ. ಹೆಚ್ಚಿನ ಮೀಟಿಂಗ್‌ಗಳು, ಬೃಹತ್ ಕಂಪನಿಗಳ ಬೋರ್ಡ್ ಮೀಟಿಂಗ್‌ಗಳೂ ಸಹ ಝೂಂ ಮೂಲಕ ಆನ್ ಲೈನ್ ನಡೆಯುತ್ತವೆ. ಸರ್ಕಾರ ಮತ್ತು ನ್ಯಾಯಾಲಯಗಳೂ ಈ ತಂತ್ರಜ್ಞಾನದ ಮಾರ್ಗಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಕಡಿಮೆ ವಿಮಾನ ಪ್ರಯಾಣ, ಕಡಿಮೆ ವಾಹನ ಚಾಲನೆಯಿಂದ ಇಂಗಾಲದ ಪ್ರಮಾಣವಾದರೂ ಕಡಿಮೆಯಾಗುತ್ತದೆ.

 

4.ಸಾಮಾಜಿಕ ಮಾಧ್ಯಮಗಳು ಕೆಲಸವಿಲ್ಲದ ಗಾಳಿಸುದ್ದಿಗಳಿಗೆ, ಕ್ಷುಲ್ಲಕ ಹಾಸ್ಯಕ್ಕೆ ಸೀಮಿತವಾಗುವುದಿಲ್ಲ. ಕುಟುಂಬಗಳ ವಾಟ್ಸಪ್ ಗುಂಪುಗಳಲ್ಲಿ ರಾಜಕೀಯ ಚರ್ಚೆ, ಶಾಲೆಗಳ ವಾಟ್ಸಪ್ ಗುಂಪಿನಲ್ಲಿ ಬಿಡುವಿನ ವೇಳೆಯ ಹಾಸ್ಯ ಲಹರಿ, ಸೆಲ್ ಫೋನ್‌ಗಳಲ್ಲಿ ಬೇಡವೆಂದರೂ ಕಾಣಿಸಿಕೊಳ್ಳುವ ಮೀಮ್‌ಗಳು, ಜಿಐಎಫ್‌ಗಳು ಇರುವುದಿಲ್ಲ. ಇವೆಲ್ಲವೂ ಕೊರೋನಾ ಪೂರ್ವದ ಕಾಲಕ್ಕೇ ಅಂತ್ಯವಾಗಬಹುದು. ನನ್ನ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ವಾರ ಕಂಡುಬಂದ ಬಹುಪಾಲು ಸಂದೇಶಗಳು ಗಂಭೀರ ಸ್ವರೂಪದ್ದು. ಕೊರೋನಾ ಕುರಿತು ಮತ್ತು ಅದರ ಹರಡುವಿಕೆಯನ್ನು ಕುರಿತಾದದ್ದು. ನಗರಗಳಲ್ಲಿ ವಾಟ್ಸಪ್ ಸಮುದಾಯಗಳು, ಸಾರ್ವಜನಿಕ ಸೇವಾ ಸಂದೇಶದ ಗುಂಪುಗಳು ಈಗಾಗಲೇ ಹುಟ್ಟಿಕೊಂಡಿವೆ. ಗಾಳಿ ಸುದ್ದಿಗಳನ್ನು ಮೀರಿ ಈ ಗುಂಪುಗಳು ಸ್ಪಷ್ಟ ಉದ್ದೇಶ ಕಂಡುಕೊಂಡಿವೆ. ಇದರಲ್ಲಿ ಕೆಲವಾದರೂ ಭವಿಷ್ಯದಲ್ಲಿ ಉಳಿದುಕೊಳ್ಳಲಿವೆ.

5.ಟೆಲಿ ಮೆಡಿಸಿನ್ ಇನ್ನು ಸಹಜ ಪ್ರಕ್ರಿಯೆಯಾಗಲಿದೆ. ದೂರದಲ್ಲಿರುವ ಕುಗ್ರಾಮಗಳಲ್ಲಿನ ರೋಗಿಗಳ ತಪಾಸಣೆ ನಡೆಸಿ ಅವರನ್ನು ನಗರದಲ್ಲಿರುವ ವೈದ್ಯರೊಡನೆ ಸಂಪರ್ಕಿಸುವುದನ್ನು ಟೆಲಿ ಮೆಡಿಸಿನ್ ಎಂದು ಹೇಳಬಹುದು. ದೈಹಿಕ ಅಂತರದ ಯುಗದಲ್ಲಿ, ಕೋವಿದ್ 19ರ ತಪಾಸಣೆಯ ಸಂದರ್ಭದಲ್ಲಿ ನಗರಗಳಲ್ಲಿರುವ ಮಧ್ಯಮವರ್ಗಗಳಿಗೆ ಇದು ಅಭ್ಯಾಸವಾಗಿದೆ. ಹಿರಿಯರು ಇದರ ಉಪಯೋಗ ಪಡೆಯುತ್ತಿದ್ದಾರೆ. ಇವರು ವಾಟ್ಸಪ್ ವಿಡಿಯೋ, ಫೇಸ್ ಟೈಂ ಮುಂತಾದ ತಂತ್ರಜ್ಞಾನಗಳನ್ನು ಬಳಸಿ ವೈದ್ಯರೊಡನೆ ಮಾತನಾಡುತ್ತಿರುವುದರಿಂದ ಹೊರ ಹೋಗುವುದನ್ನು ತಪ್ಪಿಸಲಾಗುತ್ತಿದೆ. ಇದು ಆಸ್ಪತ್ರೆಗಳಲ್ಲಿ ಸಾಲುಗಟ್ಟುವ ಜನಜಂಗುಳಿಯನ್ನೂ ತಪ್ಪಿಸಿದೆ.

ಇದರ ಪ್ರಭಾವ ಅಪಾರವಾದದ್ದು. ಸುಂದರ್‌ಬನ್ಸ್ನಲ್ಲಿರುವ ಒಂದು ಗ್ರಾಮದಲ್ಲಿ ವೈದ್ಯಕೀಯ ಸೌಲಭ್ಯವೇ ಇಲ್ಲದಿರುವುದನ್ನು ನಾನು ಕಂಡಿದ್ದೇನೆ. ಈಗ ಅಲ್ಲಿ ಡಿಜಿಟಲ್ ಚಿಕಿತ್ಸಾಲಯ ಇದೆ. ಇಲ್ಲಿ ವೈದ್ಯರು ತಪಾಸಣೆ ನಡೆಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಔಷಧಿ ನೀಡುತ್ತಿದ್ದಾರೆ. ವೈದ್ಯರು ವಿಡಿಯೋ ಮೂಲಕ ಸಂಪರ್ಕಿಸಲು ರೋಗಿಗಳಿಗೆ ನಿಗದಿತ ಸಮಯವನ್ನು ತಿಳಿಸುವ ಮೂಲಕ ಅವರೊಡನೆ ಮಾತನಾಡುತ್ತಿದ್ದಾರೆ. ಇದು ಎಷ್ಟು ಅನುಕೂಲಕರ ಮತ್ತು ಎಷ್ಟು ಹಣ ಉಳಿಸುತ್ತದೆ ಯೋಚಿಸಿ.ಇನ್ನು ಮುಂದೆ ಬ್ಯಾಂಕಿನಲ್ಲಿ ಎಷ್ಟು ಹಣ ಇದೆ ಎನ್ನುವುದಕ್ಕಿಂತಲೂ ವೈಯಕ್ತಿಕ ಆರೋಗ್ಯ ಮತ್ತು ಚೇತರಿಕೆ ಮುಖ್ಯ ಗುರಿಯಾಗುತ್ತದೆ. ಇದು ಸಾಧಾರಣವಾಗಿ ಸುಸ್ಥಿರವಾಗಿರುವವರಿಗೆ ಅನ್ವಯಿಸುತ್ತದೆ ಎನ್ನುವುದು ನಿಜ, ಆದರೆ ಬಹಳಷ್ಟು ಜನರು ಜೀವನದ ಮುಖ್ಯ ಸಂಗತಿಗಳಿಗೆ ಸಮಯ ನೀಡುತ್ತಾರೆ. ಧ್ಯಾನ, ಪ್ರಾರ್ಥನೆ, ವ್ಯಾಯಾಮ, ಕುಟುಂಬ ಬಂಧನ ಹೀಗೆ. ಕೋವಿದ್ ನಂತರ ನಮ್ಮ ಆದ್ಯತೆಗಳ ಪುನರ್ ಪರಿಷ್ಕರಣೆಯಾಗುತ್ತದೆ.

6.ನಾವು ಊಹಿಸಲೂ ಸಾಧ್ಯವಾಗದ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣಬಹುದು. ಅತಿ ಹೆಚ್ಚು ಹೊಸತನ್ನು, ಆವಿಷ್ಕಾರಗಳನ್ನು ಬಯಸುವವರು, ಶೀಘ್ರವಾಗಿ ಹೊಂದಾಣಿಕೆಗೆ ಸಿದ್ಧರಾಗಿರುವವರು ಲಾಭ ಪಡೆಯುತ್ತಾರೆ. ಹಳೆಯ ವಿಧಾನಕ್ಕೆ ಅಂಟಿಕೊಂಡವರು ಹಿಮ್ಮೆಟ್ಟುತ್ತಾರೆ. ಇದು ಅಮೂರ್ತ ಎನಿಸಿದರೂ ನಿಜ ಜೀವನದಲ್ಲಿ ಹೇಗೆ ಪ್ರಭಾವಬೀರುತ್ತದೆ? ಕೋವಿದ್ 19 ಕೆಲವು ವ್ಯಾಪಾರಗಳಿಗೆ ಧಕ್ಕೆ ಉಂಟುಮಾಡುತ್ತದೆ. ಕೆಲವು ವ್ಯಾಪಾರಗಳಿಗೆ ನೆರವಾಗುತ್ತದೆ. (ಉದಾಹರಣೆಗೆ ಕುಳಿತು ತಿನ್ನುವ ರೆಸ್ಟೋರೆಂಟ್‌ಗಳ ವಿರುದ್ಧ ಕ್ಲೌಡ್ ಕಿಚನ್ ಪರಿಕಲ್ಪನೆ, ಪಾರ್ಸೆಲ್ ಸೇವೆ, ಊಬರ್/ಓಲಾ ವಿರುದ್ಧ ಝೂಂ). ಇದು ಉದ್ಯೋಗ ಸೃಷ್ಟಿಸುವಷ್ಟೇ ನಷ್ಟ ಉಂಟುಮಾಡುವುದೂ ಹೌದು. ಚುರುಕಾಗಿರುವ ವ್ಯಕ್ತಿಗಳು, ಕಂಪನಿಗಳು ಮಾತ್ರ ಉಳಿಯಲು ಸಾಧ್ಯ.

1929ರಲ್ಲಿ ತಲೆದೋರಿದ ಮಹಾಕ್ಷಾಮ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಇತ್ತು. ಈ ಅವಧಿಯಲ್ಲೇ ಬಾಲ್ ಪಾಯಿಂಟ್ ಪೆನ್, ನೈಲಾನ್, ಪ್ರಥಮ ಸಕ್ರಿಯ ಹೆಲಿಕಾಪ್ಟರ್ ಆವಿಷ್ಕಾರ ನಡೆಯಿತು. ಇವುಗಳಲ್ಲಿ ಕೆಲವು ಕಾಕತಾಳೀಯ, ಕೆಲವು ಅವಶ್ಯಕತೆಯಿಂದ ಉಗಮಿಸಿದ ಪರಿಸ್ಥಿತಿಗೆ ಅನುಗುಣವಾಗಿ ಹುಟ್ಟಿಕೊಂಡಿದ್ದವು. ಹೊಸ ತಂತ್ರಜ್ಞಾನಗಳು, ವೈದ್ಯಕೀಯ ಸೇವೆ ವಿತರಣೆಯಿಂದ ಡ್ರೋನ್ ಆಧಾರಿತ ವಿತರಣೆಯವರೆಗೆ, ಕೈ ಕೆಲಸ ಮಾಡುವ ವೈರಸ್ ರೋಗ ನಿರ್ಬಂಧಕ ರೋಬೋಟ್ಸ್ಗಳಿಂದ 4ಡಿ ಮುದ್ರಣದ ವೆಂಟಿಲೇರ‍್ಸ್ವರೆಗೆ ಆವಿಷ್ಕಾರಗಳು ನಡೆದವು.

  1. ನಮ್ಮ ಸಾಮಾಜಿಕ ಪ್ರತಿಸ್ಪಂದನೆ ಹೇಗಿರುತ್ತದೆ? ಸಿನಿಮಾಗೆ ಹೋಗುವುದು, ಬಾರ್‌ಗೆ ಹೋಗುವುದು, ಮಾಲ್‌ಗಳಲ್ಲಿ ಕಾಲ ಕಳೆಯುವುದು, ಸಿಹಿತಿಂಡಿಯ ಅಂಗಡಿಗೆ ಹೋಗುವುದು, ಚಾಟ್ಸ್ ತಿನ್ನಲು ಹೋಗುವುದು, ಕ್ಲಬ್‌ಗೆ ಹೋಗುವುದು, ಕೆಲ ಕಾಲ ಇವೆಲ್ಲವೂ ಕಡಿಮೆಯಾಗುತ್ತದೆ. ಜನರು ಜನದಟ್ಟಣೆಯಿಂದ ದೂರ ಉಳಿಯುತ್ತಾರೆ. ದೊಡ್ಡ ಪ್ರಮಾಣದ ಪಾರ್ಟಿಗಳು ಇಲ್ಲವಾಗುತ್ತವೆ. ಸಣ್ಣ ಪ್ರಮಾಣದ ಸಮಾರಂಭಗಳು ಹೆಚ್ಚಾಗುತ್ತವೆ. ಹೆಚ್ಚು ಕುಟುಂಬಗಳ ಸಂಪರ್ಕ ಹೊಂದಿರುವ ಭಾರತೀಯರಿಗೆ ಇದು ಹೇಗೆ ಪರಿಣಾಮ ಬೀರುತ್ತದೆ?
  2. ಶುಚಿತ್ವ ಎನ್ನುವುದು ಎಷ್ಟು ಮುಖ್ಯ ಎನ್ನುವುದನ್ನು ಕೊನೆಗೂ ನಾವು ಗ್ರಹಿಸಿದ್ದೇವೆ. ಜನರು ಮುಖ ಗವುಸು ಬಳಸುತ್ತಿದ್ದಾರೆ. ಮುಕ್ತವಾಗಿ ಸೀನುತ್ತಿಲ್ಲ. ಸೀನುವಾಗ ಮೂಗು ಬಾಯಿ ಮುಚ್ಚಿಕೊಳ್ಳುತ್ತಿದ್ದಾರೆ. ಟಿಷ್ಯೂ ಪೇಪರ್‌ಗಳ ಹೊಸ ವಿನ್ಯಾಸಗಳು ಬರುತ್ತಿವೆ. ನೆಲ, ಟೇಬಲ್ಲು, ಟೀಪಾಯಿಗಳನ್ನು ಒರೆಸುವುದು, ಪಾತ್ರೆಪಡುಗಗಳನ್ನು ತೊಳೆಯುವುದು, ಆಗಾಗ್ಗೆ ಕೈತೊಳೆಯುವುದು ಎಲ್ಲವೂ ಅಭ್ಯಾಸವಾಗುತ್ತಿದೆ.
  3. ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಖಂಡಿತವಾಗಿಯೂ ಹೆಚ್ಚಾಗುತ್ತದೆ. 1000 ಜನರಿಗೆ 2.5 ಹಾಸಿಗೆಗಳನ್ನು ಹೊಂದಿರುವ ಪಶ್ಚಿಮ ಬಂಗಾಲ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದ 22 ಜಿಲ್ಲೆಗಳಲ್ಲೂ ಒಂದು ಅಥವಾ ಎರಡರಂತೆ 50 ಆಸ್ಪತ್ರೆಗಳನ್ನು ನಿರ್ಮಿಸಲಾಗಿದ್ದು ಕೋವಿದ್ 19 ನಿರ್ವಹಿಸಲು ಬಳಸಲಾಗುತ್ತಿದೆ. ಇದು ಒಂದು ನಿದರ್ಶನವಷ್ಟೆ. ದೇಶದಲ್ಲಿ ಇಂತಹ ಬೆಳವಣಿಗೆಗಳನ್ನು ಎಲ್ಲೆಡೆ ಕಾಣಬಹುದು. ಆರೋಗ್ಯ ಕಾಳಜಿಯ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ಆಸ್ಪತ್ರೆಯಲ್ಲಿ ಹಾಸಿಗೆಗಳು ಹೆಚ್ಚಾಗುತ್ತವೆ, ಪ್ರತ್ಯೇಕ ಕೋಣೆಗಳು ಹೆಚ್ಚಾಗುತ್ತವೆ. ವೈದ್ಯಕೀಯ ಉಪಕರಣಗಳ ತಯಾರಿಕೆ ಹೆಚ್ಚಾಗುತ್ತದೆ. ಮಾಸ್ಕ್ಗಳು, ಪಿಪಿಇ ಹೆಚ್ಚು ತಯಾರಾಗುತ್ತವೆ. ಇವೆಲ್ಲವೂ ಭವಿಷ್ಯದಲ್ಲಿ ನೆರವಾಗುತ್ತವೆ. ಕೋವಿದ್ ಪರಂಪರೆಯಾಗಿ ಮುಂದುವರೆಯುತ್ತದೆ.

ಮೂಲ: ದಿ ಇಂಡಿಯನ್ ಎಕ್ಸ್ಪ್ರೆಸ್  ಅನುವಾದ : ನಾ ದಿವಾಕರ

*ಲೇಖಕರು ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಸಭಾ ಸದಸ್ಯರು.

Leave a Reply

Your email address will not be published.