ಕೊರೋನೋತ್ತರ ಸಮಾಜದ ಅನಿರೀಕ್ಷಿತ ತಿರುವುಗಳು

ಭವಿಷ್ಯದ ಸಮಾಜದ ಮೇಲೆ ಕೊರೋನಾ ಬೀರುವ ಪ್ರಭಾವಗಳು ಅಲ್ಪಾವಧಿ, ದೀರ್ಘಾವಧಿ ಅಥವಾ ಶಾಶ್ವತ ಸ್ವರೂಪದವಾಗಿರುವ ಸಾಧ್ಯತೆ ಇದೆ.

ಸಾಂಕ್ರಾಮಿಕ ರೋಗವೊಂದು ಯಾರೂ ಊಹಿಸದ ರೀತಿಯಲ್ಲಿ ಮನುಷ್ಯಕುಲವನ್ನೇ ಹೆದರಿಸಿ ಮನೆಯೊಳಗೆ ಸೇರಿಕೊಳ್ಳುವಂತೆ ಮಾಡಿರುವ ಈ ಐತಿಹಾಸಿಕ ಕಾಲಘಟ್ಟವು ಮುಂದಿನ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ಉಂಟುಮಾಡಬಹುದಾದ ದೂರಗಾಮಿ ಪರಿಣಾಮಗಳ ಬಗೆಗೆ ಖಚಿತವಾಗಿ ಊಹಿಸಲು ಈಗಲೇ ಸಾಧ್ಯವಾಗಲಿಕ್ಕಿಲ್ಲ. ಆದರೆ ಈಗ ಬಂದಿರುವ ಮತ್ತು ಮುಂದೆ ಬರಬಹುದಾದ ಸಾಂಕ್ರಾಮಿಕ ಪಿಡುಗುಗಳು ಮನುಷ್ಯನ ವರ್ತನೆಗಳನ್ನು, ಅಭ್ಯಾಸಗಳನ್ನು, ಕಲಿಯುವ, ಚಿಂತಿಸುವ ಮತ್ತು ಬದುಕುವ ರೀತಿಯನ್ನು ಬದಲಿಸಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಹಾಗೆಯೇ ಈ ಪರಿಣಾಮ ಅಲ್ಪಾವಧಿಯದೂ ಆಗಿರಬಹುದು, ದೀರ್ಘಾವಧಿಯದೂ ಆಗಬಹುದು, ಅಥವಾ ಶಾಶ್ವತವೂ ಆಗಬಹುದು.

ಸಿ.ಡಬ್ಲ್ಯು.ಮಿಲ್ಸ್ ಪರಿಚಯಿಸಿದ ಸಮಾಜಶಾಸ್ತ್ರೀಯ ಕಲ್ಪನಾಶಕ್ತಿ ಪರಿಕಲ್ಪನೆಯ ಮೂಲಕ ನೋಡುವುದಾದರೆ, ಈ ಬಗೆಯ ಪಿಡುಗುಗಳು ಸಮಾಜದಲ್ಲಿ, ಜಗತ್ತಿನಲ್ಲಿ ಅನಿಶ್ಚಿತತೆ, ಅಸ್ಥಿರತೆ ಮತ್ತು ಅಶಾಂತಿಯನ್ನು ಕೂಡ ಉಂಟುಮಾಡಬಹುದು. ನಮ್ಮ ಸುತ್ತಲಿನ ಜೈವಿಕ ಜಗತ್ತು ಮನುಷ್ಯ ನಿರ್ಮಿತ ಸಾಮಾಜಿಕ ಜಗತ್ತಿನ ಮೇಲೆ ಬೀರಿರುವ ಪರಿಣಾಮಗಳಿಂದಾಗಿ ನಾಗರಿಕರು ಮತ್ತು ಸರ್ಕಾರಗಳು ಹೊಸ ಮಾದರಿಯ ವರ್ತನೆಗಳನ್ನು, ನಿಯಮಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಅಲ್ಲದೆ ಇದು ಜನರು ಸರ್ಕಾರದ ಮೇಲೆ ಮತ್ತಷ್ಟು ಅವಲಂಬಿತರಾಗುವಂತೆ ಮಾಡಿದೆ.

ಈಗಾಗಲೇ ಯುಕೆ, ಅಮೆರಿಕಾ, ತೈವಾನ್ ಮುಂತಾದ ದೇಶಗಳು ತನ್ನ ದೇಶದ ಜನರಿಗೆ ಆರ್ಥಿಕ ಮತ್ತು ಆರೋಗ್ಯ ಸಹಕಾರವನ್ನು ನೀಡುವ ಮೂಲಕ ವ್ಯಕ್ತಿ ದುಡಿಯಲಿ ದುಡಿಯದಿರಲಿ ಆತನನ್ನು ರಕ್ಷಿಸುವುದು ದೇಶದ ಕರ್ತವ್ಯ ಎಂಬ ನಿಲುವು ತಳೆದಿವೆ. ಹಾಗೆಯೇ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟಿಕರಣ ಮಾಡಿದ ಸ್ಪೇನ್ ಮತ್ತು ರ‍್ಲೆಂಡ್ ಮಾದರಿಗಳು ಹೊಸ ಬಗೆಯ ರಾಜಕೀಯ ನೀತಿಗಳಿಗೆ ಕಾರಣವಾಗಿವೆ.

 

ಜಗತ್ತಿನಲ್ಲಿ ಹಿಂದೆಯೂ ಬಂದಿರುವ ಪ್ಲೇಗ್, ಕಾಲರಾ, ಮಲೇರಿಯಾ ಮೊದಲಾದ ಸಾಂಕ್ರಾಮಿಕ ರೋಗಗಳು ಹಿಂದಿನ ಸಮಾಜಗಳನ್ನು ಹೆದರಿಸಿವೆ, ಅಳಿಸಿವೆ ಮತ್ತು ಹೊಸದಾಗಿ ಬದುಕುವ ದಾರಿಯನ್ನು ಸಹ ಕಲಿಸಿಕೊಟ್ಟಿವೆ. ಆದರೆ ಈಗಿನ ಜಾಗತೀಕರಣ ಹೊಂದಿದ ಜಗತ್ತಿನಲ್ಲಿ, ನಮ್ಮ ಅರಿವಿಗೆ ಬಂದೇ ಇಲ್ಲದ ಹೊಸ ಹೊಸ ವೈರಸ್ಸುಗಳು, ಉತ್ಪತ್ತಿಯಾದ ಕೆಲವೇ ದಿನಗಳಲ್ಲಿ ಜಗದ್ವಾö್ಯಪಿಯಾಗಿ ಹರಡಿ ಲಕ್ಷಾಂತರ ಜನರನ್ನು ಬಲಿಪಡೆಯುವ ಸಾಧ್ಯತೆ ಹೆಚ್ಚು. ಸಾಮಾನ್ಯರಿಗೆ ಸೋಂಕಿನ ಭಯ, ಆತಂಕಗಳು ದಿನನಿತ್ಯ ಜೀವನಕ್ರಮದಲ್ಲಿಯೇ ಹುಟ್ಟುಹಾಕುವ ಅಪನಂಬಿಕೆಗಳು ಒಂದೆಡೆಯಾದರೆ ಸೋಂಕಿತ ವ್ಯಕ್ತಿ ಮತ್ತು ಕುಟುಂಬಗಳು ಅನುಭವಿಸುವ ಸಾಮಾಜಿಕ ಕಳಂಕವು ಮತ್ತೊಂದು ಬಗೆಯ ಭಾವನಾತ್ಮಕ ಮತ್ತು ಮಾನಸಿಕ ಒತ್ತಡಗಳನ್ನು ನಿರ್ಮಿಸುತ್ತದೆ.

ನಾನು ಈ ಲೇಖನ ಬರೆಯುವ ಹೊತ್ತಿಗೆ, ಕೊರೋನಾದಿಂದ ಚೇತರಿಸಿಕೊಂಡು ಈಗ ತಾನೆ ಮತ್ತೆ ಸಾಮಾನ್ಯ ಜೀವನ ಪ್ರಾರಂಭಿಸಿರುವ ಚೀನಾದ ರೆಸ್ಟೊರೆಂಟ್ ಒಂದರಲ್ಲಿ ಆಫ್ರಿಕಾ ಮೂಲದ ಕಪ್ಪು ಜನರಿಗೆ ಪ್ರವೇಶ ನಿರಾಕರಿಸಲಾಗಿದೆ. ಹಾಗೆಯೇ ಭಾರತದಲ್ಲಿ ಅನೇಕ ಕಡೆ ಚೈನೀಯರಂತೆ ಕಾಣುವ ಮಣಿಪುರ, ನಾಗಾಲ್ಯಾಂಡ್ ಮೊದಲಾದ ಪ್ರದೇಶಗಳ ಜನರಿಗೆ ಸಾಮಾಜಿಕ ಕಳಂಕದ ಅನುಭವವಾಗಿದೆ. ಮತ್ತೊಂದು ಸುದ್ದಿ, ಅಹಮದಾಬಾದ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಹಿಂದೂ ಮತ್ತು ಮುಸಲ್ಮಾನ ರೋಗಿಗಗಳಿಗೆ ಪ್ರತ್ಯೇಕ ವಾರ್ಡ್ ನಿರ್ಮಿಸಲಾಗಿದೆ ಎಂಬುದು.

ಹೀಗೆ ಕೆಲವು ವರ್ಗದವರ ಜೊತೆ ಒಡನಾಟ ಪ್ರತಿಬಂಧಿಸುವುದು, ಕೆಲವು ಪ್ರದೇಶಗಳಿಗೆ, ಜಾತಿಗಳಿಗೆ, ಧರ್ಮಗಳಿಗೆ, ಕುಲಗಳಿಗೆ ಸೇರಿದ ಜನರಿಗೆ ಸಾಮಾಜಿಕ ಕಳಂಕ ಹೊರಿಸುವ ವಿಷಮ ಪರಿಸ್ಥಿತಿಯು ಗಂಭೀರವಾದ ಸಾಮಾಜಿಕ ಸನ್ನಿವೇಶಗಳನ್ನು ಉಂಟುಮಾಡುತ್ತಿವೆ. ಸೋಂಕಿನ ಭಯ ಮತ್ತು ಕಳಂಕಗಳಿಂದಾಗಿ ಕೆಲವರು ಖಿನ್ನತೆಗೆ, ಒತ್ತಡಕ್ಕೆ ಒಳಗಾಗುವುದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕೂಡ ಆಧುನಿಕ ಸಮಾಜವು ಇಂತಹ ಸೋಂಕುಗಳಿಗೆ ಸಜ್ಜಾಗದಿರುವುದನ್ನು ತೋರುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕು ಸಂಪೂರ್ಣ ಮರೆಯಾಗುವವರೆಗೂ, ಅಥವಾ ಮರೆಯಾದ ಮೇಲೂ ಜನರು ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮುಟ್ಟದಿರುವುದು, ಕೈಕುಲಕದಿರುವುದು, ಅಪ್ಪಿಕೊಳ್ಳದಿರುವುದು ಹೀಗೆ ಹೊಸ ವರ್ತನಾ ಮಾದರಿಗಳನ್ನು ಅಳವಡಿಕೊಳ್ಳುವುದನ್ನು ಕಾಣಬೇಕಾಗುತ್ತದೆ.

ವಿಜ್ಞಾನಿಗಳ ಅನುಸಾರ ಮುಂದೆಯೂ ಅನೇಕ ಸೋಂಕುಗಳು ಹರಡುವ ಸಂಭವವಿದ್ದು, ಸೋಂಕಿತರು ತಮ್ಮ ಸೋಂಕು ಗುಣವಾದ ಮೇಲೆಯೂ ಸಮಾಜದಲ್ಲಿ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯವಾಗುವ, ಅಥವಾ ಯಾರಿಗೇ ಆದರೂ ಸಾಮಾಜಿಕ ಕಳಂಕ ಉಂಟಾಗದ ಪರಿಸರವನ್ನು ಸೃಷ್ಟಿಸಬೇಕಾದ ಸವಾಲು ಮುಂದಿದೆ.

ಇದರಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಮನುಷ್ಯರು ಪರಸ್ಪರ ಅಂತರ ಕಾಯ್ದುಕೊಂಡು ವ್ಯವಹರಿಸಲು ಆನ್‌ಲೈನ್ ಮೂಲಕವೇ ದಿನನಿತ್ಯದ ಅನೇಕ ಕೆಲಸಗಳನ್ನು ಪೂರೈಸಿಕೊಳ್ಳುವುದು, ಮನೆಯಿಂದಲೇ ಕೆಲಸ ನಿರ್ವಹಿಸುವುದು, ಸಾಮಾಜಿಕವಾಗಿ ಬೆರೆಯವುದನ್ನು ನಿಲ್ಲಿಸುವುದು, ಖರೀದಿಯ ಒತ್ತಡಕ್ಕೆ ಒಳಗಾಗಿ ಬೇಕಾದ್ದು ಬೇಡವಾದದ್ದನ್ನು ಖರೀದಿಸಿ ಸಂಗ್ರಹಿಸತೊಡಗುವುದು, ಯಾರೇ ಅಪರಿಚಿತರು ಸಹ ಸೋಂಕಿತರಂತೆ ಕಾಣತೊಡಗುವುದು ಸಾಮಾನ್ಯ ಸಂಗತಿಯಾಗಿ, ಮನುಷ್ಯ ಸಮಾಜ ಹೊಸ ಬಗೆಯ ಬಿಕ್ಕಟ್ಟಿಗೆ ಒಳಗಾಗುತ್ತದೆ. ಹಾಗೆಯೇ ಹೊಸ ಬಗೆಯ ಜೈವಿಕ ಪ್ರಯೋಗಗಳು ಮನುಷ್ಯ ಕುಲವನ್ನು ಆತಂಕದಲ್ಲಿಯೇ ಕಳೆಯುವಂತೆ ಮಾಡಿ, ವೈರಸ್‌ಗಳು ಹೊಸ ಅಸ್ತಗಳಾಗಿ ಪ್ರಯೋಗವಾಗುವ ಭಯ ಜಗತ್ತನ್ನೇ ಆವರಿಸುವ ಸಾಧ್ಯತೆಯೂ ಇದೆ.

ಈಗ ಕರೋನಾ ನಮ್ಮೆದುರಿಗೆ ಸ್ಪಷ್ಟಪಡಿಸಿರುವ ಎರಡು ಪ್ರಮುಖ ಅಂಶಗಳೆಂದರೆ…

ಒಂದನೆಯದು, ಆಧುನಿಕ ಜಗತ್ತು ಮತ್ತು ಜಾಗತೀಕರಣದ ಬಿಸಿಯಲ್ಲಿ ನಾವೆಲ್ಲರೂ ನಾವಾಯಿತು ನಮ್ಮ ಜೀವನವಾಯಿತು, ನಮಗೂ ನಮ್ಮ ಪಕ್ಕದ ಮನೆಯವರಿಗೂ, ದೇಶಕ್ಕೂ, ನಮ್ಮ ಸುತ್ತಲಿನ ಜಗತ್ತಿಗೂ, ಪರಿಸರಕ್ಕೂ ಏನೂ ಸಂಬಂಧವಿಲ್ಲ, ನಾವು ಶ್ರೇಷ್ಠ, ಅವನು ಕನಿಷ್ಠ ಮೊದಲಾದ ತಾರತಮ್ಯದ, ವರ್ಗೀಕರಣದ ಮನೋಭಾವ ಪೊಳ್ಳು ಗೋಡೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಪರಸ್ಪರ ಗೌರವವಿರದ, ಸ್ವ-ಕೇಂದ್ರಿತ ಜೀವನ ದೃಷ್ಟಿಕೋನದಿಂದ ಕೂಡಿದ ಬದುಕು ನಮ್ಮದಾಗಿದೆ. ಇಡೀ ಜಗತ್ತೇ ಲಕ್ಷಾಂತರ ಕೋಟಿ ಜಾಹೀರಾತಾಧಾರಿತ ಕಾರ್ಪೋರೇಟ್ ಒಡೆಯರ ಮಾರುಕಟ್ಟೆಯೊಳಗೆ ಸಿಲುಕಿದೆ. ಪ್ರಸ್ತುತ ಸೋಂಕು ಈ ಸ್ವಕೇಂದ್ರಿತ, ಲಾಭಾಧಾರಿತ ವೇಗದ ಜೀವನಕ್ಕೆ ಒಂದು ನಿಲುಗಡೆಯನ್ನಂತೂ ಕೊಟ್ಟಿದೆ. ಮನುಷ್ಯ ಅಹಂಕಾರದ ಪೊಳ್ಳು ಮಿಥ್ಯೆಗಳನ್ನು  ಒಡೆದುದಲ್ಲದೆ, ಇಡೀ ಪ್ರಾಣಿಸಂಕುಲವೇ ಒಂದಕ್ಕೊಂದು ಸಂಬಂಧಿತ ಮತ್ತು ಪೂರಕ ಮತ್ತು ಅನೂಹ್ಯವಾದ ಪ್ರಪಂಚದಲ್ಲಿ ನಾವೆಷ್ಟು ಅಸಹಾಯಕರು, ಅಲ್ಪಜ್ಞಾನಿಗಳು ಎನ್ನುವ ತಿಳಿವಳಿಕೆಯನ್ನು ನೀಡುತ್ತಿದೆ.

ಎರಡನೆಯದು, ಮನುಷ್ಯಕುಲ ಪರಸ್ಪರ ಒಗ್ಗಟ್ಟು ಮತ್ತು ಸಹಕಾರದಿಂದ, ಪರಿಸರಾತ್ಮಕ ಸಮತೋಲನದಿಂದ ಮಾತ್ರ ತನಗೊದಗುವ ಸಮಸ್ಯೆಗಳಿಂದ ಪಾರಾಗಬಲ್ಲದು ಎಂಬುದನ್ನೂ ತಿಳಿಸಿದೆ. ಆದರೆ ನಮ್ಮ ಸಮಾಜ ಈ ಪಾಠವನ್ನು ಕಲಿತು ಭವಿಷ್ಯದಲ್ಲಿ ಬರಬಹುದಾದ ಸವಾಲುಗಳನ್ನೆದುರಿಸಲು ತಯಾರಾಗುತ್ತದೆಯೇ ಅಥವಾ ಇನ್ನು ಕೆಲವು ತಿಂಗಳುಗಳ ನಂತರ ಎಲ್ಲವೂ ಮೊದಲಿನಂತಾದಾಗ ಸಮಾಜ ತಾನು ಮೊದಲಿದ್ದ ಸಾಮಾಜಿಕ ಸ್ಥಿತಿಗೇ ಹಿಂದಿರುಗುವುದಾ ಎಂಬುದನ್ನು ಕಾದು ನೋಡಬೇಕಿದೆ.

ಇವೆಲ್ಲಾ ಈಗ ನಾವು ಕಲಿಯಬಹುದಾದ, ಭವಿಷ್ಯಕ್ಕಾಗಿ ತಯಾರಾಗಬಲ್ಲ ಅಂಶಗಳು. ಶಿಕ್ಷಣ ಡಿಜಿಟಲೀಕರಣದ ಹೊಸ ದಿಕ್ಕಿನ ಕಡೆಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಜಗತ್ತಿನಾದ್ಯಂತ ಅನೇಕ ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸುಗಳನ್ನು ನಡೆಸಲು ಮುಂದಾಗಿವೆ. ಭವಿಷ್ಯದಲ್ಲಿ ಅಂತರರಾಷ್ಟಿಯ ವಿಶ್ವವಿದ್ಯಾಲಗಳ ಬಹುಶಿಸ್ತೀಯ ಆನ್‌ಲೈನ್ ಕೋರ್ಸ್ಗಳು ಎಲ್ಲಡೆ ಲಭ್ಯವಾಗುವ ಸಾಧ್ಯತೆಗಳಿದ್ದು, ಇದೇ ಸಾಮಾನ್ಯ ಶಿಕ್ಷಣಕ್ರಮವಾಗಬಹುದಾದ ಲಕ್ಷಣಗಳು ಗೋಚರಿಸುತ್ತಿವೆ.

ಡಿಜಿಟಲ್ ಸೌಲಭ್ಯಗಳನ್ನು ಬಳಸಿ ಕಲಿಸಲಾಗದ ಶಿಕ್ಷಕ ಔಟ್‌ಡೇಟೆಡ್ ಆಗಿಬಿಡುತ್ತಾನೆ. ಹಾಗೆಯೇ ಮನೆಯಿಂದಲೇ ಕಾರ್ಯನಿರ್ವಹಿಸಬಹುದಾದ ಸಾಫ್ಟ್ವೇರ್ ಮೊದಲಾದ ಉದ್ಯೋಗಗಳು ಹೆಚ್ಚಿ, ಒಂದು ರೀತಿಯಲ್ಲಿ ದೇಶದ ಆರ್ಥಿಕತೆ ಮತ್ತು ಪರಿಸರಕ್ಕೂ ಒಳ್ಳೆಯದನ್ನೇ ಮಾಡಬಹುದು. ಜನರು ಮನೆಯಿಂದಲೇ ನಿರ್ವಹಿಸಬಹುದಾದ ಕೆಲಸಗಳಿಂದಾಗಿ ಕಂಪನಿಗಳಿಗೆ ನೀಡುತ್ತಿದ್ದ ನೂರಾರು ಎಕರೆ ಜಾಗ, ಪ್ರಯಾಣದ ಸಮಯ, ವಾಹನದ ತೈಲಗಳ ಬಳಕೆ ಇದರಿಂದಾಗುತ್ತಿದ್ದ ಮಾಲಿನ್ಯ, ಖರ್ಚು, ತೆರಿಗೆ ಮೊದಲಾದವುಗಳಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನೇ ನಿರೀಕ್ಷಿಸೋಣ. ಹಾಗೆಯೇ ನಗರಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ.

ಆದರೆ ಅದೇ ಸಮಯಕ್ಕೆ ವೃತ್ತಿ, ವ್ಯವಹಾರ, ಆರೋಗ್ಯ, ಮನೋರಂಜನೆಯಷ್ಟೇ ಅಲ್ಲದೆ ತನ್ನ ಸಾಮಾನ್ಯ ಜೀವನದ ಸಂಬಂಧಗಳು, ಪ್ರೀತಿ, ಸ್ನೇಹ ಮೊದಲಾದ ಎಲ್ಲವಕ್ಕೂ ಆಧುನಿಕ ತಂತ್ರಜ್ಞಾನದ ಮೊರೆ ಹೋಗಬೇಕಾದೀತು. ಹೀಗೆ ಅವಲಂಬಿತನಾಗುವ ವ್ಯಕ್ತಿಯು ತನ್ನ ಖಾಸಗಿ ಬದುಕನ್ನೇ ಕಳೆದುಕೊಳ್ಳುವ, ತನ್ನೆಲ್ಲಾ ವಿಷಯ, ವಿವರಗಳನ್ನು ಡಿಜಿಟಲ್ ಸೇವೆಗಳನ್ನೊದಗಿಸುವ ಕಂಪನಿಗಳಿಗೆ ಹಂಚಿಕೊಳ್ಳಬೇಕಾಗುತ್ತದೆ. ತನ್ನ ದೇಹದ ಆರೋಗ್ಯ ಸ್ಥಿತಿಗಳನ್ನು ಅರಿಯುವ, ವ್ಯಕ್ತಿಯ ಓಡಾಟದ ವಿವರಗಳನ್ನು ಅರಿಯುವ ಸಾಧನಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿ ಈಗಿರುವ ವ್ಯಕ್ತಿ ಸ್ವಾತಂತ್ರö್ಯವನ್ನು ತನಗೇ ಅರಿವಾಗದಂತೆ ಕಳೆದುಕೊಳ್ಳಬೇಕು. ನಾಗರಿಕರು ಸರ್ಕಾರಗಳ, ಸಂಸ್ಥೆಗಳ, ಕಂಪನಿಗಳ ಕಣ್ಗಾವಲಿಗೆ, ನಿಯಂತ್ರಣಕ್ಕೆ ಒಳಗಾಗುವ ದಿನಗಳು ಕೂಡ ಬರಬಹುದು.

ಡಿಜಿಟಲ್ ರೆವ್ಯುಲೂಶನ್ ಕುರಿತು ಬರೆದಿರುವ ಆಂಡ್ರೂö್ಯ ಕೀನ್ ಪ್ರಕಾರ ಮುಂದಿನ ದಿನಗಳಲ್ಲಿ ಡಿಜಿಟಲ್ ಕಂಪನಿಗಳು ಹೆಚ್ಚು ಬಲಿಷ್ಠವಾಗುತ್ತಾ ಹೋಗುತ್ತವೆ. ಸಮಾಜವನ್ನು ನಿಯಂತ್ರಿಸಲು ತೊಡಗುತ್ತವೆ. ಈಗಾಗಲೇ ಟೆಕ್ನೋಕ್ರಾಟಿಕ್ ಆಡಳಿತದ ಮಾದರಿಗಳಂತೆ ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರಗಳು ಕೊರೊನಾವನ್ನು ನಿಯಂತ್ರಿಸಲು ಪ್ರಜೆಗಳ ಮೇಲೆ ನಿರಂತರ ಡಿಜಿಟಲ್ ಕಣ್ಗಾವಲನ್ನು ಇಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದು ಮೆಚ್ಚುಗೆ ಗಳಿಸಿದರೂ, ಇದೇ ಸಮಯಕ್ಕೆ ಪ್ರಜಾಪ್ರಭುತ್ವ, ವ್ಯಕ್ತಿ ಸ್ವಾತಂತ್ರö್ಯಗಳನ್ನು ಎತ್ತಿಹಿಡಿಯುವ ಯುರೋಪಿನ ದೇಶಗಳು ಇದೇ ಸಾಂಕ್ರಾಮಿಕ ಪಿಡುಗನ್ನು ನಿಯಂತ್ರಿಸಲಾಗದೆ ಹೋದದ್ದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವ್ಯಕ್ತಿ ಸ್ವಾತಂತ್ರö್ಯ ಮತ್ತು ಖಾಸಗೀತನ ಎಂಬುದು ಏನಾಗುತ್ತದೆ ಎಂಬುದರ ಕುರಿತು ಕಳವಳ ಉಂಟಾಗುತ್ತದೆ.

ಹಾಗೆಯೇ ಸಾಮಾಜಿಕ ಜೀವಿಯಾದ ಮನುಷ್ಯ, ತನ್ನ ಅನೇಕ ಸಾಮಾಜಿಕ, ಮಾನಸಿಕ, ಮನೋರಂಜನೆಯ ಮತ್ತು ಸ್ನೇಹ, ವಿಶ್ವಾಸ, ರಿಲಾಕ್ಸೇಶನ್‌ಗಳಿಗೆ ಸಂಬಂಧಿಸಿದ ಅಗತ್ಯಗಳನ್ನು ಮನೆಯಿಂದ ಹೊರಗೆ ಪೂರೈಸಿಕೊಳ್ಳುತ್ತಿದ್ದು, ದೀರ್ಘಾವಧಿ ಕಾಲಕ್ಕೆ ಮನೆಯಲ್ಲಿಯೇ ಇರಬೇಕಾದ ಸಂದರ್ಭದಲ್ಲಿ ಮಾನಸಿಕ ಒತ್ತಡಗಳಿಗೆ ಒಳಗಾಗಿ, ಕೌಟುಂಬಿಕ ಸಮಸ್ಯೆಗಳಿಗೆ, ಖಿನ್ನತೆಗೆ ಒಳಗಾಗುವ ಸನ್ನಿವೇಶ ಉಂಟಾಗುತ್ತದೆ. ಈಗಾಗಲೇ ಲಾಕ್‌ಡೌನ್ ನಿಂದಾಗಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿರುವ ಕುರಿತು ಅನೇಕ ವರದಿಗಳು ಬರುತ್ತಿವೆ.

ಆನೇಕ ಧಾರ್ಮಿಕ ಒಲವುಗಳಿಂದ, ಆಚರಣೆಗಳಿಂದ, ನೂರಾರು ಜಾತ್ರೆ, ಮಹೋತ್ಸವಗಳಿಂದ ಕೂಡಿರುವ ನಮ್ಮ ದೇಶ ಮತ್ತೊಂದು ಬಗೆಯ ಧಾರ್ಮಿಕ ಬಿಕ್ಕಟ್ಟಿಗೆ ಒಳಗಾಗುತ್ತದೆ. ಈಗಾಗಲೇ ಲಾಕ್‌ಡೌನ್ ನಿಂದಾಗಿ ಈ ತಿಂಗಳುಗಳಲ್ಲಿ ನಡೆಯಬೇಕಿದ್ದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿವೆ. ಮುಂದೆ ಸಾವಿರಾರು ಜನರು ಸೇರಿ ನಡೆಸುವ ಎಲ್ಲಾ ಚಟುವಟಿಕೆಗಳು, ಮದುವೆಗಳು, ತಿಥಿಗಳು, ಸಮಾರಂಭಗಳು ಮಾತ್ರವಲ್ಲದೆ ದಿನವೂ ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುತ್ತಿದ್ದ, ನೂರಾರು ಕೋಟಿ ಆದಾಯ ಪಡೆಯುತ್ತಿದ್ದ ಧಾರ್ಮಿಕ ಸ್ಥಳಗಳು ಸೋಂಕುಗಳ ಭೀತಿಯಿಂದ ತಮ್ಮ ಮೊದಲಿನ ವೈಭವ ಕಳೆದುಕೊಳ್ಳಲಿವೆ.

ಇದರಿಂದ ನಿಧಾನವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸ್ವರೂಪ ಬದಲಾವಣೆಗೆ ಒಳಗಾಗುತ್ತದೆ. ಸಿನೆಮಾ, ನಾಟಕ, ಸಂಗೀತ, ಬಾರ್, ಕ್ಲಬ್, ಪಬ್, ಮೊದಲಾದ ಸಾಮಾಜಿಕವಾಗಿ ಒಡನಾಟವಿರುತ್ತಿದ್ದ ಸ್ಥಳಗಳೆಲ್ಲಾ ಹೊಸಬಗೆಯ ಶಿಸ್ತಿಗೆ ಒಳಪಟ್ಟು ಮೊದಲಿನಂತೆ ಜನ ಇವುಗಳಲ್ಲಿ ಪಾಲ್ಗೊಳ್ಳಲಾಗುವುದಿಲ್ಲ. ಹೊಸ ಸಿನೆಮಾ, ಧಾರಾವಾಹಿಗಳ ನಿರ್ಮಾಣಗಳು ಪ್ರಾರಂಭವಾಗಲು ಸಹ ಅನೇಕ ತಿಂಗಳುಗಳೇ ಬೇಕಿದೆ. ಅಲ್ಲಿಯವರೆಗೂ ಮನೆಯಲ್ಲಿ ಸಿಗುವ ಹಳೆಯ ಸಿನೆಮಾ, ಧಾರಾವಾಹಿ ಎಪಿಸೋಡ್‌ಗಳನ್ನೇ ಜನ ನೋಡುತ್ತಿರಬೇಕಾಗಿದೆ.

ಮತ್ತೊಂದು ಬಗೆಯಲ್ಲಿ ಆಶಾವಾದಿಗಳಾಗಿ ಯೋಚಿಸಿದರೆ, ನಿಧಾನಕ್ಕೆ ಗ್ರಾಮಗಳು ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ವಾವಲಂಬಿತನವನ್ನು ಸಾಧಿಸಿ ನಗರಗಳ ಮೇಲೆ ಒತ್ತಡ ಕೂಡ ಕಡಿಮೆ ಮಾಡಬಹುದು. ಹೊರ ದೇಶಗಳೊಡನೆ ಒಪ್ಪಂದಗಳು, ಯುದ್ಧೋಪಕರಣಗಳ ಮೇಲಿನ ಅಗಾಧ ವೆಚ್ಚಗಳು ಕಡಿಮೆಯಾಗಿ ಶಿಕ್ಷಣ, ಆರೋಗ್ಯ, ಕೃಷಿ, ಸ್ವದೇಶಿ ಕೈಗಾರಿಕಾ ನೀತಿ, ಸ್ವಾವಲಂಬನೆ, ಸುಸ್ಥಿರ ಅಭಿವೃದ್ಧಿ, ಮೊದಲಾದ ಕ್ಷೇತ್ರಗಳು ಬೆಳವಣಿಗೆಯನ್ನು ಕಾಣಬಹುದು. ಏನೇ ಆದರೂ ಕೊರೊನೋತ್ತರ ಸಮಾಜ ಜಗತ್ತಿನ ಇತಿಹಾಸದಲ್ಲಿ ಒಂದು ತಿರುವನ್ನು ನೀಡಲಿರುವುದು ಮಾತ್ರ ಸತ್ಯ.

*ಲೇಖಕರು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರು.

Leave a Reply

Your email address will not be published.