‘ಕೊರೋನ ನಂತರ’ ಯುಗದ ಗುಣಲಕ್ಷಣಗಳೇನು?

ಭವಿಷ್ಯವನ್ನು ಕುರಿತು ಮುನ್ನೋಟವನ್ನು ವ್ಯಕ್ತಪಡಿಸುವಾಗ ಇರುವ ಸವಾಲೆಂದರೆ, ನೀವು ಹೇಳಿದ್ದು ಸರಿಯಾದರೆ ನಿಮ್ಮನ್ನು ಮಹಾನ್ ಮೇಧಾವಿ ಎಂದು ಕರೆಯುತ್ತಾರೆ. ತಪ್ಪಾದರೆ ಮುಠ್ಠಾಳ ಎನ್ನುತ್ತಾರೆ. ಅಂಶವನ್ನು ಗಮನದಲ್ಲಿಟ್ಟುಕೊಂಡೇ, ಅಪಾಯವನ್ನು ಅರಿತೇ ಲೇಖನ ಬರೆಯುತ್ತಿದ್ದೇನೆ. ಒಂದು ಮುನ್ನೋಟದ ಪರಿಕಲ್ಪನೆಯನ್ನು ಜನರ ಮುಂದಿಡುವುದು ಮುಖ್ಯ ಎನ್ನುವುದನ್ನು ಅರಿತು ಬರೆಯುತ್ತಿದ್ದೇನೆ. ಇಲ್ಲಿ ಸರಿ ತಪ್ಪುಗಳ ನಡುವೆ ವಾಗ್ವಾದ ಅಗತ್ಯವಿಲ್ಲ. ಆದರೆ ಎರಡು ಸರಿಯಾದ ಪ್ರತಿಪಾದನೆಗಳ ನಡುವೆ ಇದೆ. ದೃಷ್ಟಿಯಿಂದ ಓದುಗರು ನನ್ನ ಪ್ರತಿಪಾದನೆಯನ್ನು ಒಂದು ದೃಷ್ಟಿಕೋನದ ಅಭಿಪ್ರಾಯ ಎಂದು ಪರಿಗಣಿಸಬೇಕೇ ಹೊರತು ಅಂತಿಮ ಸತ್ಯ ಎಂದಲ್ಲ.

ಆರ್ಥಿಕ ದೃಷ್ಟಿಕೋನದಿಂದ ಕೋವಿಡ್ 19 ಮತ್ತು ಅದರ ಪ್ರಭಾವ, ಎರಡನೆಯ ಮಹಾಯುದ್ಧದ ನಂತರ ಮತ್ತು ನಮ್ಮ ಜೀವಮಾನದಲ್ಲೇ ಕಂಡಿಲ್ಲದ ದೊಡ್ಡ ಪ್ರಮಾಣದ ಆಘಾತ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ನನ್ನ ಮುನ್ನೋಟದ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ನಾನು ನಿಜಕ್ಕೂ ಮೇಧಾವಿಯೋ ಅಥವಾ ಮುಠ್ಠಾಳನೋ ಎಂದು ನನಗೆ ನಾನೇ ಸ್ಪಷ್ಟಪಡಿಸಿಕೊಳ್ಳಲು ಪ್ರತಿವರ್ಷ ನನ್ನ ಈ ಮುನ್ನೋಟದ ದಾಖಲೆಯನ್ನು ಓದುತ್ತಿರುತ್ತೇನೆ.

ಮೊದಲನೆಯದು…

ಒಳ್ಳೆಯದಕ್ಕೋ, ಕೆಟ್ಟದಕ್ಕೋ ಜಗತ್ತು ಮಂದಗತಿಯಲ್ಲಿ ಸಾಗುತ್ತದೆ. ನಾವು ಈಗ ಅನುಸರಿಸುತ್ತಿರುವ ಆರ್ಥಿಕ ಚಟುವಟಿಕೆಗಳನ್ನು ಕಾಪಾಡಿಕೊಳ್ಳಲಾಗುವುದಿಲ್ಲ ಅಥವಾ ಅನಗತ್ಯವಾದದ್ದು ಎಂದು ಜನರಿಗೆ ಅರ್ಥವಾಗುತ್ತದೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವ ಪದ್ಧತಿಯಲ್ಲಿ ಕೆಲಸದ ಅವಧಿ ಹೆಚ್ಚಾಗುತ್ತಿದ್ದಂತೆಲ್ಲಾ ಅನಗತ್ಯವಾಗಿ ಪ್ರಯಾಣ ಮಾಡುವುದು ಬೇಕಿಲ್ಲ ಎನಿಸುತ್ತದೆ. ವಿಮಾನ ಯಾನಕ್ಕೂ ಇದೇ ಅನ್ವಯಿಸುತ್ತದೆ. ವಾರದಲ್ಲಿ ಮೂರು ದೇಶಗಳಿಗೆ ಹೋಗಿ ಕೆಲಸ ಮಾಡುವುದು ತ್ರಾಸದಾಯಕ ಎನಿಸುತ್ತದೆ. ಕೋವಿಡ್-19ನ ಏಕೈಕ ಸಕಾರಾತ್ಮಕ ಅಂಶವೆಂದರೆ ವಾಯು ಮಾಲಿನ್ಯ ಕಡಿಮೆಯಾಗಿದೆ ಮತ್ತು ಇಂಗಾಲದ ಪ್ರಮಾಣ ತೀವ್ರ ಕುಸಿತ ಕಂಡಿದೆ. ಇದರಿಂದ ನಮ್ಮ ಜೀವಿತಾವಧಿ ಕೆಲವು ದಿನಗಳಷ್ಟಾದರೂ ಹೆಚ್ಚಾಗಬಹುದು.

ಆದರೆ ಒಮ್ಮೆ ಕೋವಿಡ್ ನಿಯಂತ್ರಣಕ್ಕೆ ಬಂದರೆ ನಮ್ಮ ಆರ್ಥಿಕ ಚಟುವಟಿಕೆಗಳು ಒಮ್ಮೆಲೇ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗುವುದನ್ನು ಕಾಣುತ್ತೇವೆ. ಎರಡನೆಯ ಮಹಾಯುದ್ಧದ ನಂತರವೂ ಹೀಗೆಯೇ ಆಗಿತ್ತು. ಆದರೆ ಈಗ ಈ ರೀತಿ ಆದರೂ ಅದು ಪರಿಸರದ ವಿನಾಶಕ್ಕೆ ಕಾರಣವಾಗದಂತೆ ಎಚ್ಚರ ವಹಿಸಬೇಕು. ಅಂತಿಮವಾಗಿ ನಾವು ಕೇಳಬೇಕಾಗಿರುವ ಪ್ರಶ್ನೆ ಎಂದರೆ -ಅಧಿಕ ಆರ್ಥಿಕತೆ ನಿಜಕ್ಕೂ ಅಗತ್ಯವೇ?

ಎರಡನೆಯದಾಗಿ…

ಕೃತಕ ಬುದ್ಧಿಮತ್ತೆ ಮನುಕುಲದ ಅವಸಾನಕ್ಕೆ ಮತ್ತೊಂದು ಕಾರಣವಾಗುತ್ತದೆ. ಒಂದು ದಶಕದ ಹಿಂದೆಯೇ ಕೋವಿಡ್ ರೀತಿಯ ವಿಶ್ವವ್ಯಾಪಿ ಪಿಡುಗಿನ ಬಗ್ಗೆ ಲಾರಿ ಬ್ರಿಲಿಯಂಟ್ ಮಾತನಾಡಿದ್ದು ನನಗೆ ನೆನಪಿದೆ. ಅವರು ನಿರ್ಮಿಸಿದ ಕಂಟೇಜಿಯನ್ ಸಿನಿಮಾದಲ್ಲಿ ಇವತ್ತಿನ ಪ್ರಪಂಚವನ್ನು ಕಾಣಬಹುದು. 2015ರ ತಮ್ಮ ಉಪನ್ಯಾಸವೊಂದರಲ್ಲಿ ಬಿಲ್ ಗೇಟ್ಸ್ ನಾವು ವಿಶ್ವವ್ಯಾಪಿ ಪಿಡುಗು ಎದುರಿಸಲು ಸನ್ನದ್ಧರಾಗಿಲ್ಲ ಎಂದು ಎಚ್ಚರಿಸಿದ್ದರು. ನಾವು ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಟ್ಟಿಲ್ಲ. ಕನಿಷ್ಠ ಮುಂದಿನ ವಿನಾಶವನ್ನಾದರೂ ತಪ್ಪಿಸಲು ನಮ್ಮಿಂದ ಸಾಧ್ಯವೇ?

ನನ್ನ ಅಭಿಪ್ರಾಯದಲ್ಲಿ ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಕೃತಕ ಬುದ್ಧಿಮತ್ತೆ ಮನುಕುಲದ ಅಸ್ತಿತ್ವಕ್ಕೆ ಸವಾಲಾಗಿ ನಿಲ್ಲುತ್ತದೆ. ಎಲಾನ್ ಮಸ್ಕ್ ಅವರಂತಹ ತಜ್ಞರ ಎಚ್ಚರಿಕೆಯ ಮಾತುಗಳನ್ನು ನಾವು ಅಲಕ್ಷಿಸುತ್ತೇವೆ, ಏಕೆಂದರೆ ಕೃತಕ ಬುದ್ಧಿಮತ್ತೆಯ ಬಗ್ಗೆ ನಮ್ಮಲ್ಲಿರುವುದು ಅಲ್ಪಜ್ಞಾನ. ಕೆಲವರಿಗೇ ಇದರ ಜ್ಞಾನ ಇದೆ. ಹೆಚ್ಚು ಜ್ಞಾನ ಇದ್ದವರು ತಮ್ಮ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳಲು ಸಜ್ಜಾಗುತ್ತಾರೆ. ಅಂತರ್ಜಾಲದ ಪಿತಾಮಹ ವಿಂಟ್ ಸರ್ಟ್ ಯಂತ್ರಗಳಿಗೆ ಸ್ವಾಯತ್ತತೆ ನೀಡುವುದರಿಂದ ನಾವು ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದಾರೆ. ಕೃತಕ ಬುದ್ಧಿಮತ್ತೆ ವಿನಾಶಕ್ಕೆ ಕಾರಣವಾಗುವುದು ಶತಃಸಿದ್ಧ.

ಮೂರನೆಯ ಅಂಶವೆಂದರೆ…

ಬಂಡವಾಳ ವ್ಯವಸ್ಥೆಯ ಅಂತ್ಯ ಸಮಾಜವಾದಿ ವ್ಯವಸ್ಥೆಯ ಉಗಮಕ್ಕೆ ಕಾರಣವಾಗುತ್ತದೆ. ನೈತಿಕ ಮೌಲ್ಯಗಳ ನೆಲೆ ಇಲ್ಲದ ಬಂಡವಾಳ ವ್ಯವಸ್ಥೆ ದೀರ್ಘ ಕಾಲ ಉಳಿಯುವುದಿಲ್ಲ ಎಂದು ಗಾಂಧಿ ಹೇಳಿದ್ದರು. ಕಾಕತಾಳೀಯವಾಗಿ ವಿಶ್ವದ ಅತಿ ದೊಡ್ಡ, ಅತ್ಯಂತ ಪ್ರಬಲ ಬಂಡವಾಳಶಾಹಿ ರಾಷ್ಟç ಅಮೆರಿಕದ ಚುನಾವಣೆಯ ಪ್ರಚಾರದಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದ ಪರ್ಯಾಯ ಶಕ್ತಿಯಾಗಿ ಉದಯಿಸುತ್ತಿದೆ. ಅಮೆರಿಕದ ಹಾಲಿ ಸರ್ಕಾರ ಬೃಹತ್ ಪ್ರಮಾಣದ ನಗದು ವಿತರಣೆಗಾಗಿ 2 ಲಕ್ಷ ಕೋಟಿ ಡಾಲರ್ ಹಣವನ್ನು ಹೊಂದಿಸುತ್ತಿದೆ. ಒಂದು ಸಮಾಜವಾದಿ ರಾಷ್ಟçವೂ ಇದನ್ನೇ ಮಾಡುತ್ತದೆ. ಸಾರ್ವತ್ರಿಕ ಕನಿಷ್ಠ ಆದಾಯದ ಪರಿಕಲ್ಪನೆ ಈಗ ಸಾಕಾರಗೊಳ್ಳುತ್ತಿದೆ. ಇಲ್ಲಿ ಉಳಿಯುವ ಪ್ರಶ್ನೆ ಎಂದರೆ, ಬಂಡವಾಳಶಾಹಿ ವ್ಯವಸ್ಥೆಯ ಅಂತಿಮ ಫಲಿತಾಂಶ ಸಮಾಜವಾದವೇ?

ನಾಲ್ಕನೆಯ ಅಂಶ…

ನಾವು ಇನ್ನೂ ಹೆಚ್ಚು ವಿಕೇಂದ್ರೀಕರಣಗೊಳ್ಳುತ್ತೇವೆ. ಆದರೂ ಪರಸ್ಪರ ಸಂಪರ್ಕದಲ್ಲಿರುತ್ತೇವೆ. ಒಂದು ಶತಮಾನದ ಒಳಗೆ ನಾವು ಪರಸ್ಪರ ಸಂಪರ್ಕವಿಲ್ಲದ ವಿಕೇಂದ್ರೀಕೃತ ಜಗತ್ತಿನಿಂದ ಸಂಪರ್ಕವಿರುವ ಕೇಂದ್ರೀಕೃತ ವ್ಯವಸ್ಥೆಗೆ ಜಾರಿದ್ದೆವು. ಈಗ ನಾವು ವಿಕೇಂದ್ರೀಕೃತ ಜಗತ್ತಿನತ್ತ ನಡೆಯುತ್ತೇವೆ, ಸಂಪರ್ಕವನ್ನೂ ಹೊಂದಿರುತ್ತೇವೆ.

ಭಾರತ ಈಗಾಗಲೇ ಹತ್ತಾರು ಔಷಧಿಗಳ ರಫ್ತು ಸ್ಥಗಿತಗೊಳಿಸಿದೆ. ಜ್ವರಕ್ಕೆ ಕೊಡುವ ಪ್ಯಾರಾಸಿಟಮೋಲ್ ಮತ್ತು ಇತರ ಆಂಟಿಬಯೋಟಿಕ್ ಔಷಧಿಗಳ ರಫ್ತು ನಿಲ್ಲಿಸಿರುವುದರಿಂದ ಜಾಗತಿಕ ಮಟ್ಟದಲ್ಲಿ ಅವಶ್ಯ ಔಷಧಿಗಳ ಕೊರತೆ ಉಂಟಾಗುತ್ತದೆ. ಇದೇ ರೀತಿ, ಫ್ರಾನ್ಸ್ ದೇಶ ಬ್ರಿಟನ್‌ಗೆ ಸರಬರಾಜು ಮಾಡುತ್ತಿದ್ದ ಎನ್ 95 ಮಾಸ್ಕ್ಗಳ ರಫ್ತು ಸ್ಥಗಿತಗೊಳಿಸಿದೆ. ಅಂದರೆ ಒಂದು ದೇಶ ಅಥವಾ ಒಂದು ಕಂಪನಿಯನ್ನೇ ಅವಲಂಬಿಸುವುದು ಉಪಯೋಗವಾಗುವುದಿಲ್ಲ ಎನ್ನುವುದು ಸ್ಪಷ್ಟ.

ತಂತ್ರಜ್ಞಾನದಲ್ಲೂ ಸಹ ನಾವು ಕೇಂದ್ರೀಕೃತ ವ್ಯವಸ್ಥೆಗೆ ಒಗ್ಗಿಹೋಗಿದ್ದೇವೆ. ಅಮೆಜಾನ್ ಸರ್ವರ್ ಕೈಕೊಟ್ಟರೆ ನಾವು ನೆಟ್‌ಫ್ಲಿಕ್ಸ್ ನೋಡಲಾಗುವುದಿಲ್ಲ. ಗೂಗಲ್ ಮತ್ತು ಅಮೆಜಾನ್ ಕಂಪನಿಗಳ ಒಡೆತನದಲ್ಲಿರುವ ಸರ್ವರ್‌ಗಳ ಬೃಹತ್ ಪ್ರಮಾಣದ ಕೇಂದ್ರೀಕೃತ ವ್ಯವಸ್ಥೆಯನ್ನು ನಾವು ಕಂಡಿದ್ದೇವೆ. ಭವಿಷ್ಯದಲ್ಲಿ ಇದು ಬದಲಾಗಿ ಸಂಪರ್ಕ ಸಾಧಿಸಿದರೂ ಹೆಚ್ಚು ವಿಕೇಂದ್ರೀಕರಣವನ್ನು ನೋಡಲಿದ್ದೇವೆ.

ಐದನೆಯ ಅಂಶವೆಂದರೆ…

ಔದ್ಯಮಿಕ ವಲಯದಲ್ಲಿ ಕೆಲವು ಸಂಗತಿಗಳು ಸರಿಹೋಗುತ್ತವೆ. ನಾವು ಕೆಲಸ ಮಾಡುವ ರೀತಿ ಬದಲಾಗುತ್ತದೆ. ಆರೋಗ್ಯ ಕ್ಷೇತ್ರದ ಉದ್ದಿಮೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಅಮೆರಿಕದಂತಹ ದೇಶಗಳಲ್ಲಿ ಇದು ಮೂಲಭೂತ ಬದಲಾವಣೆಗಳನ್ನು ಹೊಂದುತ್ತದೆ. ಸಾಫ್ಟ್ ವೇರ್ ಉದ್ಯಮವೂ ಪಲ್ಲಟಗಳನ್ನು ಎದುರಿಸುತ್ತದೆ. ಅನೇಕ ಸ್ಟಾರ್ಟ್ಅಪ್ ಉದ್ದಿಮೆಗಳು ಮುಚ್ಚಿಹೋಗುತ್ತವೆ. ನೆಲೆ ಕಂಡಿರುವ ಉದ್ದಿಮೆಗಳು ಉಳಿಯುತ್ತವೆ. ಸಾಫ್ಟ್ ವೇರ್ ಕಂಪನಿಗಳು ತಮ್ಮ ವಾಣಿಜ್ಯ ಮಾದರಿಯನ್ನು ಪರಿಷ್ಕರಿಸಬೇಕಾಗುತ್ತದೆ, ಇಲ್ಲವಾದರೆ ಮುಚ್ಚಬೇಕಾಗುತ್ತದೆ.

ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಸಾಮಾನ್ಯ ಸಂಗತಿಯಾಗುತ್ತದೆ. ಆಟೋಮ್ಯಾಟಿಕ್ ಇಂಕ್, ವರ್ಲ್ಡ್ ಪ್ರೆಸ್ ಡಾಟ್ ಕಾಂ ಮುಂತಾದ ಕಂಪನಿಗಳು 2005ರಲ್ಲಿ ಆರಂಭವಾದವು. ಇವು ಆರಂಭದಿಂದಲೇ ತಮ್ಮ ಜಾಲವನ್ನು ಎಲ್ಲೆಡೆ ವಿಸ್ತರಿಸಿವೆ. ಜಾಗತಿಕ ರಿಮೋಟ್ ಉದ್ದಿಮೆಗೆ ಇವು ನಿದರ್ಶನವಾಗಿವೆ. ಸ್ಕಾಟ್ ಬರ್ಕುನ್ ತನ್ನ ‘ದ ಇಯರ್ ವಿದೌಟ್ ಪ್ಯಾಂಟ್ಸ್’ ಕೃತಿಯಲ್ಲಿ ತನ್ನ ಅಭಿಪ್ರಾಯಗಳನ್ನು ಮಂಡಿಸಿದ್ದು, ದೈಹಿಕ ಹಾಜರಿಯನ್ನು ನಿರೀಕ್ಷಿಸುವ ಸಭೆಗಳನ್ನು ನಡೆಸುವ ಮೂಲಕ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ಬೃಹತ್ ಕಂಪನಿಗಳು ಹೊಸ ಮಾದರಿ ಅನುಸರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇಲ್ಲಿ ಪ್ರಶ್ನೆ ಇರುವುದು, ವ್ಯಕ್ತಿಗತ ನೆಲೆಯಲ್ಲಿ ನೀವು ವಿಕೇಂದ್ರೀಕರಣ ತತ್ವ  ಅನುಸರಿಸಲು ಸಾಧ್ಯವೇ?

ಕೊನೆಯದಾಗಿ…

ನೀವು ಹೊರಗೆ ಹೋಗುವುದು ಸಾಧ್ಯವಿಲ್ಲ ಎಂದಾದರೆ ಒಳಗೆ ಹೋಗುವುದು ಅನಿವಾರ್ಯ, ಹೋಗಲೇಬೇಕು ಎನ್ನುವ ಸತ್ಯ ನಮಗೆ ಅರಿವಾಗಿದೆ. ಹಾಗಾಗಿ ಜನರು ಧ್ಯಾನ ಮಾಡುವುದು, ಆತ್ಮಾವಲೊಕನ ಮಾಡಿಕೊಳ್ಳುವುದು, ಅವಲೋಕನ ಮಾಡುವುದನ್ನು ಕಡ್ಡಾಯವಾಗಿ ಕಲಿತಿದ್ದಾರೆ. ನಮ್ಮ ಆಂರ‍್ಯದಲ್ಲಿ ನಾವು ಕೇಂದ್ರೀಕೃತವಾಗಿ, ಸಂಪರ್ಕವನ್ನು ಸಾಧಿಸಿ, ಕುತೂಹಲ ಹೊಂದಿದ್ದು, ಬದ್ಧತೆಯನ್ನೂ ಹೊಂದಿದ್ದೇವೆ.

ಇವತ್ತಿನ ಪ್ರಕ್ಷುಬ್ದ ಸನ್ನಿವೇಶದಲ್ಲಿ ನಾವು ನಮ್ಮ ಆಂರ‍್ಯದಲ್ಲಿರುವ ಪ್ರಪಂಚವನ್ನೊಮ್ಮೆ ನೋಡಬೇಕಿದೆ, ಅಲ್ಲಿಂದ ಸಂಕೀರ್ಣವಾದ ಹೊರಜಗತ್ತಿನತ್ತ ನಡೆಯಬೇಕಿದೆ. ನಾವು ಎಷ್ಟರ ಮಟ್ಟಿಗೆ ಪರಸ್ಪರ ಸಂಪರ್ಕ ಸಾಧಿಸಿದ್ದೇವೆ ಎನ್ನುವುದನ್ನು ಅರಿತರೆ, ನಮ್ಮಲ್ಲಿ ಎಷ್ಟು ನಿಯಂತ್ರಣಶಕ್ತಿ ಇದೆ ಎಂದು ಅರಿತರೆ, ನಾವು ನಮ್ಮ ಅತ್ಯುತ್ತಮ ಬದುಕಿನತ್ತ ನಡೆಯುತ್ತೇವೆ, ಶತಮಾನಗಳ ಇತಿಹಾಸವಿರುವ ಪ್ರೀತಿ ನಮ್ಮನ್ನು ಸೆಳೆಯುತ್ತದೆ.

ಮೂಲ: ಲೈವ್ ಮಿಂಟ್  ಅನುವಾದ: ನಾ ದಿವಾಕರ

*ಲೇಖಕರು ಸಿಲಿಕಾನ್ ವ್ಯಾಲಿಯಲ್ಲಿರುವ ಎಸ್‌ಎಪಿ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿದ್ದಾರೆ.

Leave a Reply

Your email address will not be published.