ಕೊವಿಡ್ ಕಾಲದ ಹೊಸ ಆವಿಷ್ಕಾರಗಳು

-ಎಲ್.ಪಿ.ಕುಲಕರ್ಣಿ

ಕೊರೊನಾ ಅಂತ ಮನುಷ್ಯ ಕೈಕಟ್ಟಿ ಕುಳಿತಿಲ್ಲ; ವಿಜ್ಞಾನ-ತಂತ್ರಜ್ಞಾನದ ಮೂಲಕ ಹತ್ತುಹಲವು ಆವಿಷ್ಕಾರಗಳನ್ನು ಮಾಡಿ ಕೋವಿಡ್-19 ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ನೆರವಾಗಬಲ್ಲ ಕೆಲವು ಆವಿಷ್ಕಾರಗಳು ಹೀಗಿವೆ.

ಟೈನಿ ಫೈಟರ್

ಕೊರೊನಾ ಸೋಂಕಿತ ವ್ಯಕ್ತಿ ಮುಟ್ಟಿದ ಎಲ್ಲ ವಸ್ತುಗಳ ಮೇಲೆ ಗಂಟೆಗಳು, ದಿನಗಳ ಲೆಕ್ಕದಲ್ಲಿ ವೈರಾಣು ಕುಳಿತಿರುತ್ತದೆ. ಅಂದರೆ, ನಾವು ಬಳಸುವ ಎಟಿಎಮ್ ಮಷಿನ್ನಿನ ಬಟನ್ ಹಾಗೂ ಸ್ಕ್ರೀನ್, ಎಲಿವೇಟರ್, ಟೇಬಲ್, ಗ್ಲಾಸುಗಳು, ಪುಸ್ತಕ… ಇನ್ನೂ ಮುಂತಾದ ಪರಿಕರಗಳು. ಇಂತಹ ವಸ್ತುಗಳನ್ನು ನಾವು ಮುಟ್ಟಿದಾಗ ನಮಗೂ ಸೋಂಕು ತಗುಲುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸೋಂಕಿತ ವಸ್ತುಗಳನ್ನು ಬಳಸುವಾಗ ಈ `ಟೈನಿ ಫೈಟರ್’ ಉಪಕರಣ ರಕ್ಷಿಸುತ್ತದೆ.

‘ನಾವು ಬಳಸುವ ಪೆನ್ನಿನಷ್ಟೇ ಇರುವ, ಈ ಟೈನಿ ಫೈಟರ್, ಶೇ.70 ರಷ್ಟು ಎಥೆನಾಲ್ ಆಲ್ಕೋಹಾಲ್ ನಿಂದ ಕೂಡಿರುತ್ತದೆ. 22 ಮಿಮೀ ಉದ್ದ ಮತ್ತು 20 ಮಿಮೀ ಅಗಲವಿರುವ ಈ ಉಪಕರಣವನ್ನು ಸ್ಯಾನಿಟೈಸರ್ ರೂಪದಲ್ಲಿ ಬಳಸಬಹುದು’ ಎಂಬುದಾಗಿ ಲಿಂಕ್ ಪೆನ್ ಆಂಡ್ ಪ್ಲಾಸ್ಟಿಕ್ ಲಿಮಿಟೆಡ್ ಸಿಇಒ ದೀಪಕ್ ಜಲನ್ ಹೇಳುತ್ತಾರೆ. ಅಂದಹಾಗೆ ಬ್ಯಾಂಕ್, ಹಣಕಾಸು ಸಂಸ್ಥೆಗಳ ಕ್ಯಾಶೀಯರ್, ಬಿಲ್ ಮೊತ್ತವನ್ನು ಟೈಪ್ ಮಾಡುವ ಸಾಧನದಲ್ಲಿ, ಮನೆ, ಕಚೇರಿ, ಪ್ರವಾಸದಲ್ಲಿಯೂ ಈ ಟೈನಿ ಫೈಟರ್ ಬಳಸಬಹುದು. ಒಟ್ಟಾರೆ ಈ ಉಪಕರಣದ ಸದ್ಯದ ಮಾರುಕಟ್ಟೆ ಬೆಲೆ ರೂ.150.

ದೇಶಿ ಡಿಲೈಟ್

ಕೋವಿಡ್-19 ಸೋಂಕು ಯಾವ ಪದಾರ್ಥವನ್ನೂ ಬಿಟ್ಟಿಲ್ಲ. ತರಕಾರಿ, ದವಸ-ಧಾನ್ಯಗಳು, ಮೊಬೈಲ್, ಕೈಗಡಿಯಾರ,.. ಇತ್ಯಾದಿ. ಇಂತಹ ವಸ್ತುಗಳ ಮೇಲೆ ವೈರಾಣು ಕೂಡದಂತೆ ನೋಡಿಕೊಳ್ಳಲು ಅವುಗಳನ್ನು ಒಂದು ಬಾಸ್ಕೆಟ್ ನಲ್ಲಿ ಸಂರಕ್ಷಿಸಿಟ್ಟರೆ ಹೇಗಿರುತ್ತದೆ? ಎಂಬ ಪರಿಕಲ್ಪನೆಯ ಆಧಾರದ ಮೇಲೆ ರೂಪುಗೊಂಡ ಉಪಕರಣವೇ ಈ ‘ದೇಸಿ ಡಿಲೈಟ್’ ಎಂಬ ಶುದ್ಧೀ ಬಾಸ್ಕೆಟ್.

‘ಈ ಬಾಸ್ಕೆಟ್ ಗಳನ್ನು ಕಲ್ಕತ್ತಾದ ಸೆಣಬಿನಿಂದ ಆರ್.ಐ.ಎಫ್. ಹೈಟೆಕ್ ಚಿಪ್ ಗಳನ್ನು ಸೇರಿಸುವ ಮೂಲಕ ತಯಾರಿಸಲಾಗಿದೆ. ದೆಹಲಿ ಹಾಗೂ ಗುರುಗ್ರಾಮಗಳ ಶಕ್ತಿ ಉತ್ಪಾದನಾ ಪ್ರಯೋಗಾಲಯಗಳಲ್ಲಿ ಇವುಗಳನ್ನು ರೆಡಿ ಮಾಡಲಾಗಿದೆ. ಸರಳವಾಗಿ ಮಡಚಲು, ಎಲ್ಲೆಂದರಲ್ಲಿ ಒಯ್ಯಲು ಸಹಾಯವಾಗಲೆಂದು ಕಡಿಮೆ ತೂಕ ಹೊಂದಿರುವ ಇವುಗಳನ್ನು ಯು.ಎಸ್.ಬಿ. ಯಿಂದ ಚಾರ್ಜ್ ಸಹ ಮಾಡಬಹುದಾಗಿದೆ’ ಎಂಬುದಾಗಿ ಅರಿಸ್ಟಾ ವಾಲ್ಟ್ ಕಂಪನಿಯ ಸಿಇಒ ಪೂರ್ವಿ ರಾಯ್ ಹೇಳುತ್ತಾರೆ. ಸದ್ಯ ಈ ಉಪಕರಣದ ಮಾರುಕಟ್ಟೆ ಬೆಲೆ ರೂ.2,999.

ಕೋಲ್ಡ್ ಶುಗರ್

ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗೆ ಆಗಾಗ ‘ಇನ್ಸೂಲಿನ್’ ಇಂಜೆಕ್ಷನ್ ಮಾಡಲೇಬೇಕು. ಇಂತಹ ಇನ್ಸೂಲಿನ್ ನ ಚಿಕ್ಕ ಬಾಟಲಿಯನ್ನು 20 ಡಿಗ್ರಿ ಸೆಲ್ಸಿಯಸ್ ನಿಂದ 80 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪದಲ್ಲಿ ಅತೀ ಪುಟ್ಟ ಬಾಟಲಿ ಆಕಾರದ ರೆಫ್ರಿಜೆರೇಟರ್‍ನಲ್ಲಿ ಸಂರಕ್ಷಿಸಿ ಇಡುವಂತಿದ್ದರೆ ಹೇಗೆ? ಅಂತಹ ಉಪಕರಣವೇ ‘ಕೋಲ್ಡ್ ಶುಗರ್’ ಅಥವಾ “nSULin” (ಎನ್‍ಸುಲಿನ್). ‘ಯು.ಎಸ್.ಬಿ. ಯಿಂದ ಚಾರ್ಜ್ ಆಗಬಲ್ಲ, 750 ಮಿಲಿಲೀಟರ್ ಗಾತ್ರದ ಥರ್ಮಸ್ ಪ್ಲಾಸ್ಕ್ ನಂತಿರುವ ಹಾಗೂ 8 ರಿಂದ 10 ಗಂಟೆಗಳವರೆಗೆ ಇನ್ಸೂಲಿನ್ ನ್ನು ಕೆಡದಂತೆ ಕಾಪಾಡುವ ಪುಟ್ಟ ರೆಫ್ರಿಜರೇಟರ್ `ಎನ್ ಸುಲಿನ್’ ಆಗಿದೆ’ ಎನ್ನುತ್ತಾರೆ ಡಿಸೈನರ್ ಕ್ಯಾರೆಟ್ಟೆ ಸಂಸ್ಥೆಯ ಸ್ಥಾಪಕ ಪ್ರಸಾದ್ ಜೋಶಿ.  ಮನೆ, ಕಚೇರಿ, ಪ್ರವಾಸದಲ್ಲಿರುವಾಗ ಬಳಸಬಹುದಾದ ಈ ಉಪಕರಣದ ಸದÀ್ಯದ ಮೌಲ್ಯ ರೂ.5,500.

ಕೊರೋನಾ ಓವನ್

ಆಹಾರ ಪದಾರ್ಥಗಳನ್ನು ತಯಾರಿಸಲು ಒಲೆಯನ್ನು ಬಳಸುತ್ತಾರೆ. ಆದರೆ ಇದೇನಿದು ಕೊರೋನಾ ಒಲೆ ಎಂದು ಗಾಬರಿಯಾಗಬೇಡಿ. ಇದೊಂದು ಕೊರೋನಾ ಸೋಂಕು ನಿವಾರಕ ಉಪಕರಣವಷ್ಟೆ. ಯುನಿಕ್ಯೂ ಮಲ್ಟಿ ಫೋಕಲ್ ಯುವಿ (ನೆರಳಾತೀಯ ವಿಕಿರಣ) ಸಹಾಯದಿಂದ, ಕೇವಲ 10 ಸೆಕೆಂಡ್‍ಗಳಲ್ಲಿ ಸೋಂಕಿತ ಪ್ರದೇಶವನ್ನು ಸ್ಯಾನಿಟೈಸ್ ಮಾಡುವ ಉಪಕರಣ ಇದಾಗಿದೆ. ಸೋಂಕು ತಗುಲಿದ ವಸ್ತುಗಳಾದ ಹಾಲಿನ ಪ್ಯಾಕೆಟ್, ಆಹಾರದ ಪೊಟ್ಟಣಗಳು, ಮಾಸ್ಕ್, ಕೈಗಡಿಯಾರ, ಚೈನು, ಕನ್ನಡಕ ಮುಂತಾದವುಗಳನ್ನು ಸ್ಯಾನಿಟೈಸ್ ಮಾಡುತ್ತದೆ. ‘33 ಲೀಟರ್ ಸಾಮಥ್ರ್ಯದ ಈ ಉಪಕರಣ ಗಂಟೆಗೆ 40 ಮಾಸ್ಕ್ ಗಳಂತೆ, ಪಿಪಿಇ ಕಿಟ್ ಗಳನ್ನೂ ಸಹ ಸ್ಯಾನಿಟೈಸ್ ಮಾಡುತ್ತದೆ’ ಎನ್ನುತ್ತಾರೆ, ಲಾಗ್-9 ಮಟೀರಿಯಲ್ಸ್ ಆಂಡ್ ಸೈಂಟಿಫಿಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಅಕ್ಷಯ್ ಸಿಂಘಾಲ್. ಮಿಸ್ಟರ್ ಕ್ಲೀನ್ ಬೆಲೆ ರೂ.14,399 (33 ಲೀಟರ್ ಸಾಮಥ್ರ್ಯದ ಉಪಕರಣ).

ಬಬಲ್ ಮೇಕರ್

ಪಿಎಪಿಆರ್ (ಪಾವರ್ಡ್ ಏರ್ ಪ್ಯೂರಿಫೈಯಿಂಗ್ ರೆಸ್ಪಿರೇಟರ್), ಗಾಳಿಯಲ್ಲಿ ತೂರಿ ಬರುವ ಸೂಕ್ಷ್ಮ ಜೀವಿಗಳನ್ನು ನಮ್ಮ ದೇಹ ಪ್ರವೇಶಿಸದಂತೆ ತಡೆಯುವುದು ಹೇಗೆ? ಇಂತಹ ರೋಗಕಾರಕ ಜೀವಿಗಳಿಂದ ಬಚಾವಾಗುವುದು ಹೇಗೆ? ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇದಕ್ಕೆ ತಕ್ಕನಾಗಿ ಪರಿಹಾರ ಸೂಚಿಸಲು ತಯಾರಾದ ಉಪಕರಣವೇ `ಬಬಲ್ ಮೇಕರ್’.  ಈಗ ಕೋವಿಡ್-19 ಸೋಂಕು ಎಲ್ಲೆಡೆ ಪಸರಿಸುತ್ತಿದೆ. ಅದು ಗಾಳಿಯ ಮೂಲಕವೂ ಹರಡುತ್ತದೆ ಎಂದು ಕೆಲವು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಬಬಲ್ ಮೇಕರ್ ತಯಾರಾಗಿ ನಿಂತಿದೆ. 

ಇದನ್ನು `ಫ್ಯಾನ್ ಅಸಿಸ್ಟೆಡ್ ಪಾಸಿಬಲ್ ಪ್ರೆಶರ್’ ಎಂಬ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ‘ನಾವು ಹೊರಹಾಕಿದ ಗಾಳಿಯ ಸೂಕ್ಷ್ಮ ಗುಳ್ಳೆಗಳಲ್ಲಿರುವ ಅಂದರೆ ತೇವ ಮಿಶ್ರಿತ ಗಾಳಿಯಲ್ಲಿರುವ ಸೂಕ್ಷ್ಮ ನಂಜುಕಾರಕ ಕಣಗಳನ್ನು ಸೋಸಿ ವಾತಾವರಣಕ್ಕೆ ಬಿಡುವ ಕೆಲಸ ಈ ಉಪಕರಣ ಮಾಡುತ್ತದೆ. ಇದರಿಂದ ಮತ್ತೊಬ್ಬರಿಗೆ ನಮ್ಮಲ್ಲಿರುವ ಸೋಂಕು ಹರಡದು’ ಎಂಬುದಾಗಿ ಡಿ.ಐ.ವೈ. ಆರೋಗ್ಯ ಸಹಾಯಕ ಕಂಪನಿಯ ಸಹ ಸಂಸ್ಥಾಪಕ ಡಾ.ಸ್ವಪ್ನಿಲ್ ಪಾರೀಖ್ ಹೇಳುತ್ತಾರೆ. ಹಾ! ಅಂದಹಾಗೆ ಈ ಉಪಕರಣವನ್ನು ಕಚೇರಿ, ಹೆಚ್ಚು ಜನಸಂದಣಿ ಪ್ರದೇಶಗಳಾದಂತಹ ಸಂತೆ, ಜಾತ್ರೆ ಮುಂತಾದ ಕಡೆಗಳಲ್ಲಿ ಬಳಸಬಹುದಂತೆ. ಬಬಲ್ ಮೇಕರ್ ನ ಸದ್ಯದ ಮಾರುಕಟ್ಟೆ ಬೆಲೆ ರೂ.10,000.

ಲಂಗ್ ಪಾವರ್

ಕೋವಿಡ್-19 ಸೋಂಕಿನಿಂದ ರೋಗಿಯ ದೇಹದಲ್ಲಿ ಉದ್ಭವಿಸುವ ಕಫದ ಶಬ್ದ, ಶ್ವಾಸಕ್ರಿಯೆಯಲ್ಲಾಗುವ ತೊಂದರೆಗಳನ್ನು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರದ ಮೂಲಕ ಸ್ಮಾರ್ಟ್ ಫೋನ್‍ಗಳಲ್ಲಿ ಸುಲಭವಾಗಿ ದಾಖಲಿಸುವಂತಿದ್ದರೆ ಹೇಗಿರುತ್ತದೆ? ಎಂಬ ಪರಿಕಲ್ಪನೆಯ ಆಧಾರದ ಮೇಲೆ ತಯಾರಾಗಿದೆ ಈ ತಾಂತ್ರಿಕ ಉಪಕರಣ. ಕಫ್ ಅಗೇನಸ್ಟ್ ಕೋವಿಡ್ ನ ಈ ರೂಪುರೇಷೆಯನ್ನು ಮಾಡಿದ್ದು ಭಾರತದ ‘ವಾದ್ವಾನಿ ಇನ್ಸ್ಟಿಟ್ಯೂಟ್’. ಸದ್ಯ ಈ ತಂತ್ರಜ್ಞಾನ ಇನ್ನೂ ಬೆಳವಣಿಗೆ ಹಂತದಲ್ಲಿದೆ ಎಂಬುದಾಗಿ ಐ.ಸಿ.ಎಮ್.ಆರ್ (ಇಂಡಿಯನ್ ಕೌಂನ್ಸಿಲ್ ಆಫ್ ಮೆಡಿಕಲ್ ರೀಸರ್ಚ್) ಹೇಳುತ್ತಿದೆ.

ಬ್ಲಡ್ ಬ್ರದರ್

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇ.40 ಸಾವುಗಳು ಗಾಯದ ತೀವ್ರ ಆಂತರಿಕ ರಕ್ತ ಸ್ರಾವದಿಂದ ಉಂಟಾಗುತ್ತವಂತೆ. ಹಾಗಾದರೆ ಅಪಘಾತ ಸಂಭವಿಸಿ ಗಾಯದಿಂದ ರಕ್ತ ಸೋರುವುದನ್ನು ತಕ್ಷಣ ತಡೆಗಟ್ಟಲು ಸುತ್ತುವ ಬ್ಯಾಂಡ್ ಏಡ್ ಅಥವಾ ರೋಲ್ಡ್ ಗೇಜ್ ಇದ್ದರೆ ಹೇಗೆ ಪ್ರಾಣಾಪಾಯದಿಂದ ಪಾರಾಗುವುದು ಹೇಗೆ ಎಂಬ ಯೋಚನೆಯ ಆಧಾರದ ಮೇಲೆ ಬ್ಲಡ್ ಬ್ರದರ್ ಎಂಬ ರೋಲ್ಡ್ ಗೇಜ್ ತಯಾರಿಸಲಾಗಿದೆ. ಶೇ.100 ಚಿಟ್ಸಾನ್ (Chitosan) ನಿಂದ ತಯಾರಿಸಿದ ಈ ಸುತ್ತುವ ಗೇಜ್, ಇಂತಹ ಅದ್ಭುತ ಕಾರ್ಯ ಮಾಡುತ್ತದಂತೆ. ‘ಗಾಯಕ್ಕೆ ಈ ಗೇಜ್ ಲೇಪಿಸಿದಾಗ ಅದು, ಆಂತರಿಕ ರಕ್ತ ಸೋರಿಕೆಯನ್ನು ತಡೆದು ಗಾಯ ಶಮನಗೊಳಿಸುತ್ತದೆ. ಗಾಯಕ್ಕೆ ಸುತ್ತಿದ ಈ ಪಟ್ಟಿಯ ಮೇಲೆ ಕೇವಲ ಸಲೈನ್ ಇಲ್ಲವೆ ನೀರನ್ನು ಲೇಪಿಸುವ ಮೂಲಕ ಸುಲಭವಾಗಿ ಹೊರ ತೆಗೆಯಬಹುದು’ ಎಂಬುದಾಗಿ ಹೇಳುತ್ತಾರೆ ಆಯಕ್ಸಿಯೊ ಬಯೋಸೊಲುಷನ್ಸ್ ಸ್ಥಾಪಕ ಹಾಗೂ ಸಿಇಒ ಆಗಿರುವ ಲಿಯೋ ಮಾವೆಲಿ.

ಡಿಸ್ ಇನ್ಫಕ್ಟಂಟ್ ಫಾಗರ್

ಧೂಮ ಸೋಂಕು ನಿವಾರಕ ಎಂದು ಸರಳವಾಗಿ ಹೇಳಬಹುದಾದ ಉಪಕರಣ ಇದಾಗಿದೆ. ಮನೆಯ ನಿಲುಕದ ಮೇಲ್ಛಾವಣಿ, ಗೋಡೆಗಳ ಮೇಲ್ಭಾಗ ಮುಂತಾದ ಕಡೆಗಳಲ್ಲಿ ಕೋವಿಡ್-19 ಸೋಂಕು ಕಚ್ಚಿ ಕುಳಿತರೆ ಅದನ್ನು ತೆಗೆಯುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರವೇ ಈ ಧೂಮ ಸೋಂಕು ನಿವಾರಕ. ‘ಸ್ಯಾನಿಟೈಸರ್ ನಲ್ಲಿ ಬಳಸುತ್ತಿರುವ ಶೇ.70 ಆಲ್ಕೋಹಾಲ್‍ನ್ನು ಧೂಮವನ್ನಾಗಿ ಪರಿವರ್ತಿಸಿ ಈ ಉಪಕರಣದ ಮೂಲಕ ಸೋಂಕಿತ ಪ್ರದೇಶಗಳ ಮೇಲೆ ಸಿಂಪಡಿಸಲಾಗುತ್ತದೆ. ಇದರಿಂದ ನಮಗೆ ಕೈಗೆಟುಕದ ಪ್ರದೇಶಗಳನ್ನೂ ಸಹ ಸೋಂಕು ಇಲ್ಲದಂತೆ ಮಾಡಬಹುದು’ ಎನ್ನುತ್ತಾರೆ ಗ್ಲೋಬಸ್ ಇನ್ ಫೋ ಕಾಮ್ ಲಿಮಿಟೆಡ್ ಸಿಇಒ ಕಿರಣ್ ಧಾಮ್. ಈ ಉಪಕರಣದ ಬೆಲೆ ರೂ.30,000 ರಿಂದ ರೂ.35,000.

ಸೆರೆಬ್ರಲ್ ಚಾಂಪಿಯನ್

`ಹೈಪರ್ ಇಲಾಸ್ಟಿಕ್ ಮಾಡಲ್’ ಎಂಬ ತಂತ್ರಜ್ಞಾನಾಧಾರಿತ ಈ ಉಪಕರಣವನ್ನು ಐಐಟಿ ಮದ್ರಾಸ್ ತಯಾರಿಸಿದೆ. ಇದರ ಉಪಯೋಗವೇನು ಗೊತ್ತೆ? ಮಿದುಳಿನಲ್ಲಾಗುವ ಆಂತರಿಕ ಒತ್ತಡದ ಪ್ರಭಾವ, ಮಿದುಳು ಗಡ್ಡೆಯ ವಿಕಾರ ಬೆಳವಣಿಗೆ ಅಲ್ಲದೆ ಮಿದುಳಿನ ಆಂತರಿಕ ತೊಂದರೆ, ನರದೋಶಗಳನ್ನು ಪತ್ತೆ ಹಚ್ಚಿ ತಕ್ಷಣವೇ ಸರಿಪಡಿಸುವುದಾಗಿದೆ. ಈ ನಿಟ್ಟಿನಲ್ಲಿ ಸಂಶೋಧನಾ ತಂಡದ ಸದಸ್ಯರುಗಳಾದ ಐಐಟಿ ಮದ್ರಾಸಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾನನ್ ಹಾಗೂ ಸಹಾಯಕ ಪ್ರೊ.ದುರ್ಗಾ ಪ್ರಸಾದ ಕಾರ್ಯನಿರತರಾಗಿದ್ದಾರೆ. ಈ ಸಂಶೋಧನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆಯಂತೆ. ಮುಂದಿನ ದಿನಮಾನಗಳಲ್ಲಿ ಇದು ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಕಂಡುಬರುತ್ತಿವೆ.

ರಿವೈವಲಿಸ್ಟ್ ಮಿರಾಕಲ್

ಸ್ಟ್ರೋಕ್ ಇಲ್ಲವೇ ಪಾಶ್ರ್ವವಾಯು, ಸ್ಪೈನಲ್ ಕಾರ್ಡ್ ಇಂಜ್ಯೂರಿ (ಎಸ್.ಸಿ.ಐ.) ಇಲ್ಲವೇ ನರ ಸಂಬಂಧಿ ರೋಗಗಳಿಗೆ ತುತ್ತಾದ ದೇಹದ ಚಲನೆಗೆ ಅನುಕೂಲವಾಗುವಂತೆ ರೋಗಿಯ ದೇಹಕ್ಕೆ ರೊಬೊಟಿಕ್ ಸಾಧನದ ಮೂಲಕ ಬಾಹ್ಯವಾಗಿ ಆಧಾರ ಒದಗಿಸುವ ಉಪಕರಣ ಇದಾಗಿದೆ.

ಪಾಶ್ರ್ವವಾಯು ಇಲ್ಲವೇ ಸ್ಟ್ರೋಕ್ ಗೆ ಒಳಗಾದ ವ್ಯಕ್ತಿಗೆ ದೇಹದ ಒಂದು ಭಾಗ ಇಲ್ಲವೇ ಎಲ್ಲ ಭಾಗಗಳೂ ತಮ್ಮ ಸ್ವಾಧೀನ ಕಳೆದುಕೊಂಡಿರುತ್ತವೆ. ಅಂದರೆ ಅವರಿಗೆ ತಮ್ಮ ದೈನಂದಿನ ಸಾಮಾನ್ಯ ಕಾರ್ಯ ಚಟುವಟಿಕೆಗಳನ್ನು ಸಹ ಮಾಡಿಕೊಳ್ಳಲು ಆಗುವುದಿಲ್ಲ. ಅಂಥವರು ತಮ್ಮ ಸಹಜ ಕ್ರಿಯೆಗಳನ್ನು ನಡೆಸಲು ಸಂಪೂರ್ಣವಾಗಿ ಮತ್ತೊಬ್ಬರನ್ನು ಆಶ್ರಯಿಸಬೇಕಾಗುತ್ತದೆ. ಅವರಿಗೆ ಸಹಾಯಕವಾಗಲು ಮನುಷ್ಯನ ಅಸ್ಥಿಪಂಜರವನ್ನೇ ಹೋಲುವ ರೋಬೊ ಸ್ವಯಂಚಾಲಿತ ಉಪಕರಣವನ್ನು ದೇಹಕ್ಕೆ ಬಾಹ್ಯವಾಗಿ ಜೋಡಿಸಲಾಗುತ್ತದೆ. ‘ಈ ಉಪಕರಣ ಪಾಶ್ರ್ವವಾಯು ಪೀಡಿತ, ಇಲ್ಲವೇ ನರಸಂಬಂಧಿ ರೋಗಕ್ಕೆ ತುತ್ತಾದ ವ್ಯಕ್ತಿಯು ಚಲಿಸಲು, ಕೆಲವು ಸರಳ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹಾಯಕವಾಗುತ್ತದೆ’ ಎಂಬುದಾಗಿ ಜೆನ್ ಇಲೆಕ್ ಟೆಕ್ನಾಲಜೀಸ್ ಸಂಸ್ಥೆಯ ಸ್ಥಾಪಕ ಹಾಗೂ ಸಿಇಒ ಆಗಿರುವ ಜಾನ್ ಐ ಕುಜುರ್ ಹೇಳುತ್ತಾರೆ. ಈ ಉಪಕರಣದ ಬೆಲೆ ಬಹಳ ದುಬಾರಿಯಾಗಿದ್ದು ಸದ್ಯದ ಮಾರುಕಟ್ಟೆಯ ಅಂದಾಜು ಬೆಲೆ ರೂ.25 ಲಕ್ಷಗಳು!

ಎ ಗುಡ್ ಡಜ್

ನಾವಿಂದು ಕೊರೊನಾ ಕಾಲದಲ್ಲಿ ಜೀವಿಸುತ್ತಿದ್ದೇವೆ. ಈ ಕೊರೊನಾ ಉಸಿರಾಟಕ್ಕೆ ತೊಂದರೆ ಕೊಡುವ ಕಾಯಿಲೆ. ನಮ್ಮ ದೇಹದ ರಕ್ತದಲ್ಲಿ ಆಮ್ಲಜನಕದ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇರಲೇಬೇಕು. ಇಲ್ಲವೆಂದರೆ ಯಾವುದಾದರೂ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದೇವೆಂದೇ ಅರ್ಥ. ಹಾಗಾಗಿ ನಾವು ಕೈಗೆ ಕಟ್ಟಿಕೊಳ್ಳುವ ಗಡಿಯಾರವು ನಮ್ಮ ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ ಮುಂತಾದ ಮಾಹಿತಿಗಳನ್ನು ಪ್ರತೀ ಕ್ಷಣವೂ ತಿಳಿಸುತ್ತಿದ್ದರೆ ಹೇಗಿರುತ್ತದಲ್ಲವೆ? ಇದಕ್ಕೆಂದೆ GOQii ಸಂಸ್ಥೆ ‘ಎ ಗುಡ್ ಡಜ್’ ಎಂಬ ಸ್ಮಾರ್ಟ್ ವಾಚ್ ನ್ನು ಮಾರುಕಟ್ಟೆಗೆ ತಂದಿದೆ.

‘ದಿನದ 24 ಗಂಟೆಯೂ ನಿಖರವಾಗಿ ವೇಳೆಯನ್ನು ತಿಳಿಸುವುದರೊಂದಿಗೆ ಇದರಲ್ಲಿ ಅಳವಡಿಸಿದ ಪಲ್ಸ್ ಆಕ್ಸಿಮೀಟರ್ ಸಹಾಯದಿಂದ ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಅಳೆಯುತ್ತದೆ. ಅಲ್ಲದೆ ಹೃದಯ ಬಡಿತವನ್ನೂ ಸಹ ಸ್ಪಷ್ಟವಾಗಿ ನಮೂದಿಸುವ ವಿಭಿನ್ನ ತಾಂತ್ರಿಕ ಅಂಶಗಳನ್ನು ಇದು ಒಳಗೊಂಡಿದೆ’ ಎಂಬುದಾಗಿ GOQii ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ವಿಶಾಲ್ ಗೊಂಡಾಲ್ ಹೇಳುತ್ತಾರೆ. ಮನೆ, ಕಚೇರಿ, ಪ್ರವಾಸದಲ್ಲಿ ಬಳಸಬಹುದಾದ ಈ ಸಾರ್ಟ್ ವಾಚ್ ಬೆಲೆ ರೂ.5,999.

ವೈಪ್ ಔಟ್ ವಾರಿಯರ್

ಇದೊಂದು ಬಹುಕಾರ್ಯ ನಿರ್ವಹಿಸಬಲ್ಲ ಯು.ವಿ ಸ್ಟೆರಿಲೈಜರ್. ವೈಯರ್ ಲೆಸ್ ಚಾರ್ಜರ್ ನಿಂದ ಕೂಡಿದ ಪುಟ್ಟ ಉಪಕರಣ. ನಮಗೆ ಗಾಳಿ, ನೀರು, ಆಹಾರ, ವಸತಿ, ಬಟ್ಟೆಗಳೆಂಬ ಮೂಲಭೂತ ಸೌಕರ್ಯಗಳ ಸಾಲಿನಲ್ಲಿ ಈಗ ಹೊಸದಾಗಿ ಸ್ಮಾರ್ಟ್ ಫೋನ್ (ಮೊಬೈಲ್ ಫೋನ್) ಕೂಡ ಸೇರಿದೆ ಎಂದರೆ ತಪ್ಪಾಗಲಾರದು. ಇಂದು ನಾವು ಬಳಸುತ್ತಿರುವ ಗ್ಯಾಜೆಟ್, ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮುಂತಾದವುಗಳ ಮೇಲೆ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಕುಳಿತರೆ ಹೇಗೆ? ಅವುಗಳನ್ನು ಮುಟ್ಟಿದಾಗ ಆ ರೋಗಕಾರಕಗಳು ನಮ್ಮ ದೇಹವನ್ನು ಸೇರಿ ಆರೋಗ್ಯ ಕೆಡಲು ಕಾರಣವಾಗುತ್ತವೆ. ಅಂತಹ ಗ್ಯಾಜೆಟ್ ಸಾಧನಗಳ ಮೇಲಿರುವ ಶೇ.99.9 ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಬಲ್ಲ ಉಪರಣವನ್ನು ಡೇಲಿ ಆಬ್ಜೆಕ್ಟ್ಸ್ ಕಂಪನಿ ತಯಾರಿಸಿದೆ.

‘ಟಾಯ್ಲೆಟ್ ಸೀಟ್ ಮೇಲಿರುವ ಸೂಕ್ಷ್ಮ ಜೀವಿಗಳಿಗಿಂತಲೂ ಏಳು ಪಟ್ಟು ಹೆಚ್ಚು ಸೂಕ್ಷ್ಮ ಜೀವಿಗಳು ನಮ್ಮ ಸ್ಮಾರ್ಟ್ ಫೋನ್ ಗಳ ಮೇಲಿರುತ್ತವಂತೆ! ಶಾಪಿಂಗ್ ಮಾಲ್ ನಲ್ಲಿರುವ ವಸ್ತುಗಳ ಮೇಲೆ ಕುಳಿತ ಸೂಕ್ಷ್ಮ ಜೀವಿಗಳಿಗಿಂತಲೂ ಹತ್ತು ಪಟ್ಟು ಹೆಚ್ಚು ನಾವು ದಿನ ನಿತ್ಯ ಬಳಸುವ ಕೈಚೀಲ, ಪರ್ಸ್, ಮುಂತಾದವುಗಳ ಮೇಲೆ ಕಚ್ಚಿ ಕುಳಿತಿರುತ್ತವಂತೆ! ಹೀಗಿರುವಾಗ ಇಂತಹ ವಸ್ತುಗಳನ್ನು ಬಳಸುವುದರಿಂದಲೇ ಸೋಂಕುಗಳು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಸೂಕ್ಷ್ಮ ಜೀವಿಗಳನ್ನು ಶೇ.99.9ರಷ್ಟು ನಾಶಗೊಳಿಸಲು ಈ ‘ವೈಪ್ ಔಟ್ ವಾರಿಯರ್’ ಉಪಕರಣವನ್ನು ತಯಾರಿಸಿದ್ದೇವೆ’ ಎನ್ನುತ್ತಾರೆ ಡೇಲಿ ಆಬ್ಜೆಕ್ಟ್ ಸಂಸ್ಥಾಪಕ ಹಾಗೂ ಸಿಇಒ ಪಂಕಜ್ ಗಾರ್ಗ್. ಸದ್ಯ, ಈ ಉಪಕರಣದ ಮಾರುಕಟ್ಟೆ ಬೆಲೆ ರೂ.6,000.

Leave a Reply

Your email address will not be published.