ಕೋಕೋ ಚಾಕಲೇಟ್: ದೊರೆಸ್ವಾಮಿ ಅವರ ಮಾಹಿತಿ ನಿಜವಲ್ಲ!

-ಸಹನಾ ಕಾಂತಬೈಲು

ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ಕೋಕೋ ಬೆಳೆಯುವುದನ್ನೇ ಕೈಬಿಟ್ಟರು ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಎಚ್.ಎಸ್.ದೊರೆಸ್ವಾಮಿ ಅವರು ಯಾವ ಆಧಾರದಿಂದ ಇದನ್ನು ಬರೆದರೋ

ಪ್ರತಿಬಿಂಬ ವಿಭಾಗದಲ್ಲಿನ ಎಚ್.ಎಸ್.ದೊರೆಸ್ವಾಮಿ ಅವರ ‘ಮಾರಕ ಜಾಗತೀಕರಣ’ ಬರಹ ಗಮನ ಸೆಳೆಯಿತು. ಅವರು ಜಾಗತೀಕರಣ ದೇಶಕ್ಕೆ ಹೇಗೆ ಮಾರಕ ಎಂಬುದಕ್ಕೆ ಉದಾಹರಣೆ ಕೊಡುತ್ತಾ ಒಂದು ಕಡೆ ಹೀಗೆ ಬರೆದಿದ್ದಾರೆ- ‘ಚಾಕಲೇಟ್ ತಯಾರು ಮಾಡುವ ಕ್ಯಾಡ್‌ಬರಿ ಕಂಪೆನಿ ಕರ್ನಾಟಕಕ್ಕೆ ಬಂತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋಕೋ ಬೆಳೆಯಲು ಆರ್ಥಿಕ ನೆರವು ನೀಡುವುದಾಗಿ ಹೇಳಿತು. ಸ್ವಲ್ಪ ದಿನ ಕೆ.ಜಿ.ಗೆ ೮ ರೂ.ನಂತೆ ಕೊಂಡ ಕ್ಯಾಡ್‌ಬರಿ ಕಂಪೆನಿ ಮುಂದೆ ಅದರ ಬೆಲೆಯನ್ನು ಕೆ.ಜಿ.ಗೆ ೬ಕ್ಕೆ ಇಳಿಸಿತು. ಮುಂದೆ ಕೋಕೋ ಕೊಳ್ಳುವುದನ್ನು ನಿಲ್ಲಿಸಿತು. ದಕ್ಷಿಣ ಕನ್ನಡದಲ್ಲಿ ಮೊದಲಿನಿಂದ ಕೋಕೋ ಚಾಕಲೇಟ್ ತಯಾರಿಸುತ್ತಿದ್ದ ಒಂದು ಸಹಕಾರ ಸಂಸ್ಥೆ ಇತ್ತು. ಕ್ಯಾಡ್‌ಬರಿ ಕಂಪನಿಯ ಪೈಪೋಟಿಯಿಂದ ತನ್ನ ಫ್ಯಾಕ್ಟರಿ ಮುಚ್ಚಬೇಕಾಯಿತು. ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ಕೋಕೋ ಬೆಳೆಯುವುದನ್ನೇ ಕೈಬಿಟ್ಟರು’. ಇದು ಸಂಪೂರ್ಣ ಸುಳ್ಳು ಮಾಹಿತಿ. ಲೇಖಕರು ಯಾವ ಆಧಾರದಿಂದ ಇದನ್ನು ಬರೆದರೋ ಗೊತ್ತಿಲ್ಲ.

ನಾನು ಕಳೆದ ೩೦ ವರ್ಷಗಳಿಂದ ಅಡಿಕೆ, ತೆಂಗಿನ ತೋಟದಲ್ಲಿ ಕೋಕೋ ಬೆಳೆಯುತ್ತಿದ್ದೇನೆ. ಇದು ಒಂದು ಉಪಬೆಳೆ. ವರ್ಷವಿಡೀ ಹಣ್ಣು ಕೊಡುತ್ತದಾದರೂ ಮೇ ತಿಂಗಳಿನಿಂದ ಆಗಸ್ಟ್ ತಿಂಗಳವರೆಗೆ ಇದರ ಸೀಸನ್. ಕೋಕೋ ಹಣ್ಣನ್ನು ಇಡಿಯಾಗಿ ಮಾರಾಟ ಮಾಡುವ ಕ್ರಮ ಇಲ್ಲ. ಹಣ್ಣನ್ನು ಒಡೆದು ಒಳಗಿನ ಬೀಜ ತೆಗೆದು ತಕ್ಷಣ ಮಾರಾಟ ಮಾಡುವುದು ಕ್ರಮ. ಅಪರೂಪಕ್ಕೆ ಕೆಲವರು ಬೀಜ ಒಣಗಿಸಿ ಮಾರುವವರೂ ಇದ್ದಾರೆ. ದರದಲ್ಲಿ ಏರಿಳಿತ ಇದ್ದರೂ ನನ್ನ ೩೦ ವರ್ಷಗಳ ಕೃಷಿ ಜೀವನದಲ್ಲಿ ಒಮ್ಮೆಯೂ ಕೋಕೋಗೆ ಮಾರುಕಟ್ಟೆ ಇಲ್ಲ ಎಂದಾಗಿಲ್ಲ.

ಮಳೆಗಾಲದಲ್ಲಿ ಅಡಿಕೆ ಇರುವುದಿಲ್ಲ. ನಮ್ಮ ಮಳೆಗಾಲದ ಖರ್ಚು ಈ ಕೋಕೋ ಮಾರಾಟದಿಂದಲೇ ನಡೆಯುತ್ತದೆ. ಅಷ್ಟರಮಟ್ಟಿಗೆ ಇದು ನಮ್ಮ ಕೈಹಿಡಿದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಯಾವ ರೈತನೂ ಕೋಕೋ ಬೆಳೆಯುವುದನ್ನು ನಿಲ್ಲಿಸಿಲ್ಲ. ಸಾಮಾನ್ಯವಾಗಿ ಎಲ್ಲ ರೈತರ ಕೃಷಿಭೂಮಿಯಲ್ಲೂ ಅಷ್ಟೋಇಷ್ಟೋ ಕೋಕೋ ಗಿಡಗಳಿವೆ. ಹೊಸದಾಗಿ ಗಿಡಗಳನ್ನು ನೆಟ್ಟವರೂ ಇದ್ದಾರೆ. ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ನನ್ನ ತಿಳಿವಳಿಕೆ ಪ್ರಕಾರ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಲ್ಲ. ನಾನು ಒಂದಷ್ಟು ಕೋಕೋ ಬೆಳೆಗಾರರನ್ನು ಈ ಕುರಿತು ವಿಚಾರಿಸಿದೆ. ಯಾರೂ ಕ್ಯಾಡ್‌ಬರಿಯಿಂದ ಅನ್ಯಾಯ ಆಗಿದೆ ಎಂದು ಹೇಳಲಿಲ್ಲ. ಹಾಗೆ ನೋಡಿದರೆ ರೈತರಿಗೆ ತಮ್ಮ ಉತ್ಪನ್ನಗಳನ್ನು ಕೊಳ್ಳುವ ಕಂಪೆನಿಗಳು ಇದ್ದಷ್ಟೂ ಒಳ್ಳೆಯದೆ. ನಮ್ಮೂರಿನ ರೈತರಿಗೆ ಕಳೆದ ವರ್ಷ ಕ್ಯಾಡ್‌ಬರಿ ಅತಿ ಕಡಿಮೆ ದರದಲ್ಲಿ ಅಂದರೆ ೧ ಸಸಿಗೆ ೨ ರೂಪಾಯಿಯಂತೆ ಸಸಿಗಳನ್ನು ವಿತರಣೆ ಮಾಡಿತ್ತು.

‘ದಕ್ಷಿಣ ಕನ್ನಡದಲ್ಲಿ ಕೋಕೋ ಚಾಕಲೇಟ್ ತಯಾರಿಸುವ ಒಂದು ಸಹಕಾರ ಸಂಸ್ಥೆ ಇತ್ತು. ಕ್ಯಾಡ್‌ಬರಿ ಕಂಪನಿಯ ಪೈಪೋಟಿಯಿಂದ ತನ್ನ ಫ್ಯಾಕ್ಟರಿ ಮುಚ್ಚಬೇಕಾಯಿತು’ ಎಂಬ ಅಸತ್ಯದ ವಾಕ್ಯ ಓದಿ ನನಗೆ ಗಾಬರಿಯಾಯಿತು. ನಾನು ಆ ಸಂಸ್ಥೆಯ (ಕ್ಯಾಂಪ್ಕೊ) ಸದಸ್ಯಳೂ ಆಗಿದ್ದೇನೆ. ಸಂಸ್ಥೆ ಲಾಭದಲ್ಲಿ ನಡೆಯುತ್ತಿದೆ.

ಇಂದು ಯುವಜನರು ಕೃಷಿ ಮಾಡಬೇಕಾದರೇ ಹಿಂದೇಟು ಹಾಕುತ್ತ ಇದ್ದಾರೆ. ಅಂತಹದರಲ್ಲಿ ಕೋಕೋ ಕೃಷಿ ಮಾಡಲು ಹೊರಟವರು ಈ ಮಾಹಿತಿ ಓದಿದರೆ ಅವರು ಎಂದೂ ಕೋಕೋ ಗಿಡ ನೆಡಲಿಕ್ಕಿಲ್ಲ. ಅಷ್ಟರಮಟ್ಟಿಗೆ ಅವರು ಅದರಿಂದ ವಂಚಿತರಾಗುತ್ತಾರೆ. ಏಕೆಂದರೆ ಕೋಕೋ ಒಂದು ಲಾಭದಾಯಕ ಬೆಳೆ. ನೆಟ್ಟು ಬಿಟ್ಟರೆ ಸಾಕು. ಹೆಚ್ಚು ಆರೈಕೆ ಬೇಡ. ಹೆಣ್ಣುಮಕ್ಕಳೂ ಮಾಡಬಹುದಾದ ಕೃಷಿ. ಅದರ ಸೊಪ್ಪು ಅಡಿಕೆ, ತೆಂಗಿನ ಮರಗಳಿಗೆ ಗೊಬ್ಬರವಾಗುತ್ತದೆ. ಸೊಪ್ಪನ್ನು ಬೇಸಿಗೆಯಲ್ಲಿ ಹುಲ್ಲು ಇಲ್ಲದ ಸಮಯದಲ್ಲಿ ಹಸುಗಳಿಗೆ ಮೇವು ಆಗಿ ಬಳಸಬಹುದು. ಹಸಿ ಬೀಜಕ್ಕೆ ಸರ್ವಕಾಲದಲ್ಲೂ ಬೇಡಿಕೆ ಇದೆ.

ಕೃಷಿಕರ ಹೆಮ್ಮೆಯ ಕ್ಯಾಂಪ್ಕೋ ಕೋಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ವೈವಿಧ್ಯಮಯವಾದ ಚಾಕಲೇಟು ಮತ್ತು ಕೋಕೋ ಕೈಗಾರಿಕೋತ್ಪನ್ನಗಳು ತಯಾರಾಗುತ್ತಿದ್ದು, ೨೦೧೬ರ ಅಕ್ಟೋಬರ್ ೮ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ‘ಟಾಪ್ ಮಲ್ಟಿ ಪ್ರಾಡಕ್ಟ್ ಎಕ್ಸ್‌ಪೋರ್ಟರ್’ ಎಂಬ ಪ್ರಶಸ್ತಿಯೂ ಕ್ಯಾಂಪ್ಕೋಗೆ ಲಭ್ಯವಾಗಿದೆ. ಇಂಥ ಒಂದು ಫ್ಯಾಕ್ಟರಿ ಮುಚ್ಚಿದೆಯೆಂದು ಪತ್ರಿಕೆಗೆ ಬರೆಯುವ ಮೊದಲು ಅದರ ಸತ್ಯಾಸತ್ಯತೆಯನ್ನು ದೊರೆಸ್ವಾಮಿಯವರು ಸಂಬಂಧಪಟ್ಟವರಲ್ಲಿ ವಿಚಾರಿಸಬೇಕಿತ್ತು. ಬಹುಶಃ ರೈತರ ವಿಷಯಗಳನ್ನು ರೈತರು ಬರೆಯದೆ ಹೊರಗಿನವರು ಬರೆದರೆ ಹೀಗೆ ಎಡವಟ್ಟಾಗುವುದಿರಬಹುದು.

ಗೊತ್ತಿಲ್ಲ!

Leave a Reply

Your email address will not be published.