ಕೋಚೆ ನೆನಪು

 

ಇತ್ತೀಚೆಗೆ ನಿಧನರಾದ ನಿವೃತ್ತ ನ್ಯಾಯಾಧೀಶ, ಸಾಹಿತಿ, ಚಿಂತಕ, ಪ್ರಾಂಜಲ ಮನದ ಕೋ.ಚೆನ್ನಬಸಪ್ಪ ಅವರು ಸಮಾಜಮುಖಿಯ ಹಿತೈಷಿಗಳು, ಖಾಯಂ ಓದುಗರು; ದಿನಾಂಕ 08-12-2017ರಂದು ಅವರು ಬರೆದ ಪತ್ರ ಹೀಗಿತ್ತು:

ಸಮಾಜಮುಖಿಯ ಉದ್ದೇಶ, ಸಾಧಿಸಬೇಕಾಗಿರುವ ಗುರಿ ಶ್ಲಾಘನೀಯವಾದವು. ಆ ಗುರಿಯ ಸಿದ್ಧಿಗೆ ಬೇಕಾದ ಸಕಲ ಪರಿಕರಗಳ, ಸಲಕರಣೆಗಳ, ಉಪಕರಣಗಳನ್ನು ಗುರುತಿಸಿದ್ದೀರಿ. ಆದರೆ ಆ ಗುರಿಯನ್ನು ತಲುಪಲು ಬೇಕಾದ ಮುಖ್ಯ ಬೀಗದ ಕೈಯನ್ನು ಹುಡುಕಬೇಕಾಗಿದೆ ಎಂದು ಗ್ರಹಿಸಿದ್ದೀರಿ. ಆ ಬೀಗದ ಕೈ ಯಾವುದು? ಅದೀಗ ಮುಖ್ಯವಾದ ಸಂಗತಿ.

ಈ ಹುಡುಕಾಟದಲ್ಲಿ ಪತ್ರಿಕೆಯ ಓದುಗರು, ಬರಹಗಾರರು, ಚಿಂತಕರು, ವಿಮರ್ಶಕರು ನೆರವಾಗಬೇಕೆಂದು ಬರೆದಿದ್ದೀರಿ. ಇದೇ ಎಲ್ಲಾ ಬರಹಗಾರರ ಮುಂದೆ ಇರುವ ಸಮಸ್ಯೆ. ಅದನ್ನು ರಾಘವಾಂಕ ಕವಿ ಜನಬದುಕಬೇಕೆಂಬ `ಅನಪೇಕ್ಷಿಯಂ ಕಾವ್ಯ ರಚನೆ ಮಾಡಿದೆ’ ಎಂದು ಹೇಳುತ್ತಾನೆ. ಇದು ನಿಮ್ಮ ಪತ್ರಿಕೆಯ ಗುರಿಯಾಗಿರಬೇಕು. ಜನ ಬದುಕಬೇಕೆಂದು ಬರೆಯುವುದಾದರೆ ಅವರ ಮನಸ್ಸಿನ ಪರಿವರ್ತನೆ ಈಗ ಎದ್ದುಕಾಣುವ ಅಷ್ಟೇನೂ ಅಪೇಕ್ಷಣೀಯವಲ್ಲದ ಬೌದ್ಧಿಕ ಕಸರತ್ತಿನಿಂದ ಯಾವುದಾದರೂ ಸ್ವಾರ್ಥ, ಅಪೇಕ್ಷೆಯಿಂದ ಅದು ಸಾಧಿಸಲಾರದು. ಆದ್ದರಿಂದ ಮನುಜ ಕುಲ ತಾನೊಂದೆ ವಲಂ ಎಂಬಂತೆ, ಅಸಮಾನತೆ, ಮೇಲು-ಕೀಳು ಎಂಬ ಭಾವನೆ ಅಳಿಯಬೇಕು. ಅದಕ್ಕೆ ಬೇಕು `ಪ್ರೇಮ’. ಮತ್ಸರ, ದ್ವೇಷ, ವೈರ, ಮತಾಂಧತೆ.. ಇತ್ಯಾದಿ ಅಮಾನವೀಯ ಗುಣದಿಂದ ಮನುಷ್ಯ ಮುಕ್ತನಾಗಬೇಕು.

ಈ ದೆಸೆಯಲ್ಲಿ ಸಮಾಜಮುಖಿ ಪತ್ರಿಕೆ ಶ್ರಮಿಸಬೇಕೆಂದು ಹಾರೈಸುತ್ತೇನೆ. ಈಗ ನಿಮ್ಮ ಪ್ರಾಯೋಗಿಕ ಸಂಚಿಕೆಯಲ್ಲಿ ಬಂದಿರುವ ಲೇಖನಗಳಿಂದ ನಿಮ್ಮ ಉದ್ದೇಶಕ್ಕೆ ಅನುಗುಣವಾದ ಲೇಖನಗಳು ಬಂದಿರುವುದು ಸಂತೋಷದ ಸಂಗತಿ. ಹಾಗೂ ಈ ಮಾಸಿಕ ಪತ್ರಿಕೆಯನ್ನು ನಮ್ಮ ರಾಷ್ಟ್ರಪತಿಯಿಂದ ಹಿಡಿದು, ಅತ್ಯಂತ ಕೆಲದರ್ಜೆಯ ಕೂಲಿಕಾರ್ಮಿಕರು ಓದಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗದ ಜನರಿಗೂ ತಿಳಿವಳಿಕೆಯನ್ನು ಕೊಡುವಂಥ ತಿಳಿಯಾದ ಸರಳ ಮಾತಿನಲ್ಲಿ ಬರೆದರೆ ಉತ್ತಮ. ಪತ್ರಿಕಾ ಸಂಪಾದಕನು ಸತ್ಯವನ್ನಾಡುವುದಕ್ಕೆ ಹಂಗು, ಹೆದರಿಕೆ ಕಿಂಚಿತ್ತೂ ಇರಬಾರದು. ಆದರೆ ಸತ್ಯ ಏನೆಂಬುದನ್ನು ಮೊದಲು ಪೂರ್ವಾಪರ ಯೋಚನೆ ಮಾಡಿ ಖಚಿತಪಡಿಸಿಕೊಳ್ಳಬೇಕು. ಅದಕ್ಕೆ ಬೇಕು ತಾಳ್ಮೆ, ಅಭ್ಯಾಸ, ಸಮತೋಲನ ದೃಷ್ಟಿ -ಈ ಮನೋಭಾವ ನಿಮ್ಮದಾಗಿರಲಿ. ಆಗ ನೀವು ಯಾರಿಗೂ ತಲೆಬಾಗದೆ, ಧೈರ್ಯವಾಗಿ ಜನರ ಹಿತೈಷಿಗಳಾಗಿರುವಿರಿ.

ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದುವವರ ಸಂಖ್ಯೆ ಕುಸಿಯುತ್ತಿದೆ ಎಂದು ಹೇಳುತ್ತಾರೆ. ಆದರೆ ಅದೇ ಕಾಲಕ್ಕೆ ಸಮಾಜಮುಖಿಯಂಥ ಪತ್ರಿಕೆಗಳು ಅತ್ಯಂತ ಉತ್ತಮವಾಗಿ ಪ್ರಕಟವಾಗುತ್ತಿವೆ. ಅದರಲ್ಲೂ ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಯಲು ಅವಕಾಶವಿಲ್ಲದಂಥ ಈ ಸಂದರ್ಭದಲ್ಲಿ ನೀವು ಕೈಗೊಂಡ ಈ ಕಷ್ಟದಾಯಕ ಬಹು ಆರ್ಥಿಕ ಭಾರಹೊತ್ತಿರುವುದು ಧೈರ್ಯದ ಕೆಲಸ. ಧೈರ್ಯದಿಂದ ಮುನ್ನುಗ್ಗಿ, ಯಶಸ್ಸು ನಿಮ್ಮದಾಗುತ್ತದೆ.

Leave a Reply

Your email address will not be published.