ಕೋಲಾರವೆಂದರೆ ಬರೀ ಬಿಸಿಲಲ್ಲೋ ಅಣ್ಣ

ಡಾ.ಕಲೀಮ್ ಉಲ್ಲಾ

ನಡೆದು ಜಗವ ನೋಡುವ ಮನುಷ್ಯ ಹೆಚ್ಚು ಸೂಕ್ಷ್ಮಗಳನ್ನು ಗ್ರಹಿಸುತ್ತಾನೆ. ಹೊಸ ಜಾಗೆಯಲ್ಲಿನ ಓಡಾಟ ಮತ್ತು ಒಡನಾಟಗಳು ಆತನ ಕಣ್ಣ ರೆಪ್ಪೆಗಳ ಅಚ್ಚರಿಯಿಂದ ಹಿಗ್ಗಿಸುತ್ತವೆ. ತೆರೆದ ಮನಸ್ಸಿನಿಂದ ಕಾಣುವ ಹೊಸ ಜಗತ್ತು ನಮ್ಮ ಅನುಭವ ಲೋಕದ ವಿಸ್ತಾರವಾಗಬಲ್ಲದು. “ನಮ್ಮ ಸುತ್ತಮುತ್ತಲ ಸ್ಥಳಗಳನ್ನೇ ನೆಟ್ಟಗೆ ನೋಡದ ನಾವು ದೂರದೂರದ ಸ್ಥಳಗಳಿಗೆ ಪ್ರವಾಸ ಹೋಗುವುದು ವ್ಯರ್ಥಎಂದು ತೇಜಸ್ವಿ ಆಗಾಗ ಹೇಳುತ್ತಿದ್ದರು.

ಪೂಚಂತೇ ಅವರ ಮಾತು ಅಕ್ಷರಶಃ ಸತ್ಯ. ನಮ್ಮ ನೆಲೆಯ ಕಾಡು, ನದಿ, ಪರ್ವತ, ಗದ್ದೆ ಹೊಲಗಳ ನೋಡುವ ಅಗತ್ಯವಿದೆ. ಕರುನಾಡ ಜನರ ಊಟ, ಹಾಡು, ಹಸೆ, ನಡೆ, ನುಡಿಗಳ ತೆರೆದ ಕಂಗಳಿಂದ ಅರಿಯುವ ಜರೂರತ್ತಿದೆ. ನಾಡಿನ ರೈತಾಪಿಗಳ ಸನಿಹ ಹೋಗಿ ಅವರ ದುಃಖ ದುಮ್ಮಾನಗಳ ಆಲಿಸುವ ತುರ್ತಿದೆ. ನಮ್ಮ ಇತಿಹಾಸ, ನಮ್ಮ ಸಂಸ್ಕೃತಿಗಳ ನಡೆದು ನೋಡುವ ಮೂಲಕ ಕಾಣುವ ನಮ್ರ ಹಂಬಲ ಸಮಾಜಮುಖಿ ಪತ್ರಿಕೆಯದು.

ನಾಡಿನ ಪ್ರತಿ ಜಿಲ್ಲೆಗಳ ಸಂದರ್ಶಿಸುವ ಪತ್ರಿಕೆ ಓದುಗರ ನಡಿಗೆ-9 ಕಾರ್ಯಕ್ರಮ ಸಲ ಕೋಲಾರದ ಜಿಲ್ಲೆಯ ಸುತ್ತ ಮುತ್ತ ನಡೆಯಿತು. ನಮ್ಮ ಮೊದಲ ದಿನದ ಪಯಣ ಆರಂಭವಾಗಿದ್ದು ಮಾಲೂರು ಸಮೀಪದ ಚೊಕ್ಕೊಂಡಹಳ್ಳಿಯಿಂದ. ಅಲ್ಲಿ ನಮ್ಮ ತಂಡದ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಂಡವರು ಮಾಲೂರಿನ ಲಕ್ಷ್ಮೀನಾರಾಯಣ. ಸಾಹಿತ್ಯ, ಸಂಗೀತಗಳ ಆಸ್ವಾದಕರಾದ ಅವರು ಮೂರು ದಿನಗಳ ಕಾಲ ನಮ್ಮ ನಡಿಗೆಗೆ ದಿಕ್ಸೂಚಿಯಾಗಿದ್ದರು.

ಚೊಕ್ಕೊಂಡಹಳ್ಳಿಯಲ್ಲಿ ಕೋಲಾರದ ಜಿಲ್ಲೆಯ ರೈತರು ತಾವು ಬೆಳೆದ ತರಕಾರಿಗಳನ್ನು ತಂದು ಸುರಿಯುತ್ತಾರೆ. ನಿಂಜಾಕಾರ್ಟ್ ಎಂಬ ತರಕಾರಿ ವಿಂಗಡಣೆ ಮತ್ತು ಮಾರಾಟ ಸಂಸ್ಥೆ ತರಕಾರಿಗಳ ಕ್ವಾಲಿಟಿ ಆಧಾರದ ಮೇಲೆ ಆನ್ಲೈನ್ನಲ್ಲಿ ಬೆಲೆ ನಿಗದಿ ಮಾಡಿಸುತ್ತದೆ. ರೈತರಿಗೆ ಬೆಲೆ ಒಪ್ಪಿಗೆಯಾದರೆ ಬೆಳೆಯ ಹಣ ಪಡೆಯಬಹುದು. ಇಲ್ಲಿ ದಲ್ಲಾಳಿಗಳ ಕಾಟವಿಲ್ಲ. ಹೀಗಾಗಿ ರೈತರಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ರೈತರು ಹೇಳಿದರು. ಇಲ್ಲಿನ ತರಕಾರಿ ಬೆಂಗಳೂರು ಹಾಗೂ ಚೆನ್ನೈ ನಗರಗಳ ತನಕ ಹೋಗುತ್ತದೆ. ನೇರವಾಗಿ ರೈತರು ಬೆಳೆದ ಬೆಳೆಯು ಗ್ರಾಹಕನಿಗೆ ಸಿಗುವಂತಹ ಒಂದು ಹೊಸ ವ್ಯವಸ್ಥೆ ಇಲ್ಲಿ ರೂಪುಗೊಂಡಿದೆ.

ಅದೇ ದಿನ ವಕ್ಕಲೇರಿ ಎಂಬ ಹಳ್ಳಿಯ ಬುಡದಲ್ಲಿರುವ ಬೆಳ್ಳಿ ಬೆಟ್ಟದ ಆಂಜನೇಯ ಸ್ವಾಮಿ ಬೆಟ್ಟಕ್ಕೆ ಚಾರಣ ಹೊರಟೆವು. ಸಲ ಒಂದಿಷ್ಟು ಹದವಾದ ಮಳೆಯಾಗಿ ಇಡೀ ಕೋಲಾರ ಜಿಲ್ಲೆ ಮಲೆನಾಡ ಪ್ರತಿಧ್ವನಿಯಾಗಿತ್ತು. `ಕೋಲಾರವೆಂದರೆ ಬರಿ ಬಿಸಿಲಲ್ಲೋ ಅಣ್ಣಎಂದು ಅಲ್ಲಿನ ಹಸಿರು ಹುಲ್ಲು ತಂಪಾದ ಗಿಡಮರಗಳು ನಮಗೆ ನೀತಿಪಾಠ ಹೇಳಿದವು. ತುಂಬಿದ ಕೆರೆಗಳಿಂದ, ಹಸಿರು ಹೊಲಗಳಿಂದ, ಮಾವಿನ ತೋಟಗಳಿಂದ, ಸೋಜಿಗದ ಕಲ್ಲು ಬಂಡೆಗಳಿಂದ ಕೂಡಿದ ಇಲ್ಲಿನ ಪರಿಸರ ನಮ್ಮ ಅನೇಕ ತಪ್ಪು ಗ್ರಹಿಕೆಗಳನ್ನು ತಿದ್ದಿ ಹಾಕಿತು. ಒಂದು ಸೀಮೆಯನ್ನು ಕೇಳಿ ತಿಳಿಯುವುದು ಖಂಡಿತಾ ಅರೆ ಜ್ಞಾನ. ಸ್ವತಃ ಹೋಗಿ ನೋಡಿ ಅರಿಯುವುದು ಪರಿಪೂರ್ಣ ಮನನ. ಮಾತು ನಡಿಗೆಯಲ್ಲಿ ಮತ್ತೆ ನಿಜವಾಯಿತು. ಕೋಶ ಓದುತ್ತಾ ಜತೆಗೆ ದೇಶವನ್ನೂ ಸುತ್ತುತ್ತಿದ್ದರೆ ದಕ್ಕುವ ತಿಳಿವಳಿಕೆ ಒಂದು ಅನುಭಾವ ಪವಾಡವಲ್ಲದೆ ಮತ್ತೇನು?

ಗುಡ್ನಳ್ಳಿವೆಂಕಟೇಶಪ್ಪ ಎಂಬ ರೈತರು 2011ರಲ್ಲಿ ಹೊಸದಾದ ರಾಗಿ ಬೆಳೆ ಬೇಸಾಯವನ್ನು ಶುರು ಮಾಡಿದ್ದರು. ಅವರ ಜೊತೆಗೆ ಕೋಡೂರು ಗೋಪಾಲಣ್ಣ ಎಂಬುವವರೂ ಕೈ ಜೋಡಿಸಿ ಗುಣಿ ಅಥವಾ ಗುಳಿ ಪದ್ಧತಿ ಎಂಬ ಪ್ರಯೋಗ ಮಾಡುತ್ತಿದ್ದರು. ಅವರ ಹೊಲವನ್ನು ಹುಡುಕಿಕೊಂಡು ನಮ್ಮ ನಡಿಗೆ ಹೋದಾಗ ಸೂರ್ಯ ಮುಳುಗುತಲಿದ್ದ. ನಮ್ಮ ಹಿಂದಿನ ರೈತರು ರಾಗಿ ನಟ್ಟಿ ಮಾಡುತ್ತಿದ್ದ ಕ್ರಮವನ್ನೇ ಕೊಂಚ ಮಾರ್ಪಡಿಸಿಕೊಂಡು ರಾಗಿಸಸಿ ನೆಟ್ಟಿದ್ದರು.

ಗುಡ್ನಳ್ಳಿವೆಂಕಟೇಶಪ್ಪ ಅವರ ತಾತ ಒಂದ್ರಿಂದ ಇನ್ನೊಂದ್ ನಟ್ಟಿ ನಡುವ ಕುರಿಮರಿ ಮಲಗೋವಷ್ಟು ಜಾಗ ಇರಬೇಕು ಕಣ ದಡ್ಡಅಂತ ಬುದ್ಧಿ ಮಾತು ಹೇಳುತ್ತಿದ್ದರಂತೆ. ಅದರಂತೆ ಎಂಟು ನಾಟಿ ಎಮ್ಮೆ ಸಾಕಿ ಅದರ ಗೊಬ್ಬರ ಗಂಜಳ ಬಳಸಿ ವ್ಯವಸಾಯ ಆರಂಭಿಸಿದ ಗುಡ್ನಳ್ಳಿ ವೆಂಕಟೇಶಪ್ಪರ ನೋಡಿ ಜನ ಗೇಲಿ ಮಾಡಿ ನಕ್ಕಿದ್ದರಂತೆ. “ಒಂದು ಎಕರೆ ಬಿತ್ತನೆಗೆ ಆಗೋವಷ್ಟು ಸಸಿ ರೆಡಿ ಆಗಲು ನಲವತ್ತು ಗ್ರಾಂ ನಷ್ಟು ರಾಗಿ ಸಾಕುಎಂದು ಹೇಳಿ ವೆಂಕಟೇಶಪ್ಪ ಅಚ್ಚರಿ ಹುಟ್ಟಿಸಿದರು. ರಾಗಿ ಸಸಿಯಲ್ಲಿ ಕನಿಷ್ಠವೆಂದರೆ ಇಪ್ಪತ್ತು ತೆನೆಗಳು ಗೊಂಚಲಾಗಿ ಒಟ್ಟಿಗೆ ಮೂಡುತ್ತವೆ. ನಾಟಿ ಹಸು ವಿನ ಜೀವಾಮೃತ ರೆಡಿಮಾಡಿಕೊಟ್ಟರೆ ಮತ್ತೆ ಯಾವುದೇ ಗೊಬ್ಬರ ಕೊಡುವ ಅಗತ್ಯವಿಲ್ಲ. ಒಂದೇ ಎಕರೆಯಲ್ಲಿ ನಲವತ್ತು ಕ್ವಿಂಟಾಲ್ ರಾಗಿ ಬೆಳೆದಿದ್ದೀನಿ ಎಂದರು.

ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ತೊಗಲು ಬೊಂಬೆಯಾಟದಿಂದ ಆರಂಭವಾಗುವುದಿತ್ತು. ಮುಖ್ಯ ಅತಿಥಿಗಳಾಗಿದ್ದ ಲೇಖಕ ಕೆ.ಪುಟ್ಟಸ್ವಾಮಿ ಅವರು ಕೋಲಾರ ಜಿಲ್ಲೆಗೆ ಪ್ರಮುಖ ಕಲೆಯಾದ ಬೊಂಬೆಯಾಟ ವೈಶಿಷ್ಟ್ಯ ಮತ್ತು ಮಹತ್ವವನ್ನು ವಿವರಿಸಿದರು. ಇಲ್ಲಿನ ಜನರ ಭಾûಷೆ ಭಾವದಲ್ಲಿ ನೆಲೆ ಕಂಡ ತೆಲುಗು ಕನ್ನಡ ಸಂಮಿಶ್ರಿತ ಶೈಲಿಯ ಸೊಗಡನ್ನು ಕಟ್ಟಿಕೊಟ್ಟರು. ಜಯರಾಮ್ ರಾಯಪುರ ಅವರು ಮಾತನಾಡಿ, ‘ಕೋಲಾರದ ಜನ ತಮ್ಮ ಅನೇಕ ಕಷ್ಟಗಳ ನಡುವೆ ಬದುಕಿದ್ದಾರೆ. ಪ್ರಕೃತಿ ಅವರಿಗೆ ನೂರಾರು ಪ್ರತಿಕೂಲ ಅವಸ್ಥೆಗಳನ್ನು ಕೊಟ್ಟರೂ ಅದನ್ನು ಗೆದ್ದು ಕಲೆ, ಸಾಹಿತ್ಯ, ಜನಪದ ಸಂಗೀತದಲ್ಲಿ ಸಾಧನೆ ಮಾಡಿದ್ದಾರೆ. ಐತಿಹಾಸಿಕ ಮಹತ್ವದ ರಾಜಪರಂಪರೆಗಳು ಆಳಿದ ನಾಡು ಕನ್ನಡ ನೆಲಕ್ಕೆ ಸಕಲವನ್ನೂ ಕೊಟ್ಟಿದೆಎಂದರು.

ನಂತರ ಬೊಮ್ಮಲಾಟಪುರ ತಂಡದಿಂದ ರಾಮಯಣದ ಸುಂದರ ಕಾಂಡ ಪ್ರಸ್ತುತವಾಯಿತು. ತೆಲುಗು ಕನ್ನಡವನ್ನು ಸಮನಾಗಿ ಬಳಸಿ ಅದ್ಭುತವಾಗಿ ಹಾಡಿದ ಬೊಂಬೆಯಾಟದ ಕಲಾವಿದರು ಪಕ್ಕಾ ರೈತಾಪಿಗಳೇ ಆಗಿದ್ದದ್ದು ಹೆಚ್ಚು ಹೆಮ್ಮೆ ಎನಿಸುತ್ತಿತ್ತು. ವಿಪರ್ಯಾಸವೆಂದರೆ ತುಂಬಾ ಕಾರಣಗಳಿಂದ ಕಲೆ ನಶಿಸುವ ಹಾದಿಯಲ್ಲಿದೆ. ಕಲಾವಿದರ ಜೊತೆ ಕೂತು ಮಾತಾಡಿಸಿದಾಗ ಸತ್ಯ ಅರ್ಥವಾಯಿತು. ಕಲಾವಿದರ ಬಡತನ, ಹೊಸ ಜನಾಂಗದ ನಿರಾಸಕ್ತಿ, ದೃಶ್ಯ ಮಾಧ್ಯಮದ ಹಾವಳಿ, ಹೀಗೆ ಪಟ್ಟಿ ಬೆಳೆಯಿತು.

ಮಾರನೆಯ ದಿನ ಶಿವಾರಪಟ್ಟಣಕ್ಕೆ ಹೋದೆವು. ಇದು ದೇವರುಗಳ ತವರೂರು. ಇಡೀ ಗ್ರಾಮವೇ ಶಿಲ್ಪಕಲಾ ವನವಾಗಿ ರೂಪುಗೊಂಡಿದೆ. ಮಹಾದೇವ ಪಾಂಚಾಲ, ಷಣ್ಮುಖ ಪ್ರಸಾದ್, ಜಗನ್ನಾಥಾಚಾರ್ ಎಂಬ ಶಿಲ್ಪಿಗಳು ನಮಗೆ ಮಾಹಿತಿಗಳನ್ನು ನೀಡಿದರು. ನಾಗರಕಲ್ಲಿನಿಂದ ಹಿಡಿದು ನವಗ್ರಹಗಳು, ಶಕ್ತಿದೇವತೆಗಳಾದ ಯಲ್ಲಮ್ಮ, ಮಾರಮ್ಮ, ಪಟಾಲಮ್ಮ, ಗಣಪತಿ, ಸುಬ್ರಹ್ಮಣ್ಯ, ಶಿವ, ಹೀಗೆ ಹೆಚ್ಚೆಚ್ಚು ಮಾರಾಟ ಆಗುವ ಶಿಲ್ಪಗಳ ತಯಾರಿಸುತ್ತೇವೆ ಎಂದರು.

ಶಿಲೆಗಳಲ್ಲಿ ಸ್ತ್ರೀಶಿಲೆ, ಕೃಷ್ಣಶಿಲೆ, ಗಂಡುಶಿಲೆ ಎಂಬ ಬಗೆಗಳಿರುವ ಸಂಗತಿ ನಮಗೆ ಗೊತ್ತೇ ಇರಲಿಲ್ಲ. ಹಂಪಿಯಲ್ಲಿ ಕಲ್ಲಿನಿಂದ ಸಂಗೀತ ದನಿಸುವ ಕಲ್ಲು ಗಂಡುಶಿಲೆಯಂತೆ. ಅಂತಹ ನಾದ ಶಿಲೆಗಳನ್ನು ತಮ್ಮ ಹಿರೀಕರು ತಯಾರಿಸಿರುವ ಕಥೆಗಳ ಹಂಚಿಕೊಂಡರು. ಕನ್ನಡ ನಾಡನ್ನು ಆಳಿದ ಗಂಗ, ಕದಂಬ, ಚಾಲುಕ್ಯ, ಪಲ್ಲವ, ವಿಜಯನಗರ ಸಾಮ್ರಾಜ್ಯದವರೆಗೆ ಗಂಡು ಶಿಲೆಯ ಬಳಕೆ ಹೇಗೆಲ್ಲ ಆಯಿತು ಎಂಬ ಭರಪೂರ ಮಾಹಿತಿಯನ್ನು ಒದಗಿಸಿದರು. ಹೊಯ್ಸಳರ ಕಾಲದಿಂದ ಸ್ತ್ರೀಶಿಲೆಯ ಬಳಕೆ ಆರಂಭವಾಗಿ ಚಿತ್ರಕಲೆಯಲ್ಲಿ ಬಂದ ಕುಸುರಿ ಕೆತ್ತನೆಯ ಪ್ರಾವೀಣ್ಯ, ಬೇಲೂರು ಹಳೇಬೀಡಿನಲ್ಲಿ ವಿಸ್ತಾರಗೊಂಡ ಇತಿಹಾಸ ವಿವರಿಸಿದರು. ಎಲ್ಲಾ ಧರ್ಮದವರು ಜಾತಿ ಮತಗಳ ಭೇದವಿಲ್ಲದೆ ಇದನ್ನೊಂದು ಹೊಟ್ಟೆ ಹೊರೆಯುವ ಕಾಯಕವಾಗಿ ನಿಭಾಯಿಸುತ್ತಿದ್ದಾರೆ. ಶಿವನ ಮೊಗಕೆ ಸಾಣೆ ಹಿಡಿದು ಹರನ ನಗುವಿನ ಅಂದವ ಯುವಕನೊಬ್ಬ ಇಮ್ಮಡಿಗೊಳಿಸುತ್ತಿದ್ದ. ಆತನ ಮಾತಾಡಿಸಿ ಖುಷಿಖುಷಿಯಾಗಿ ಬಂದ ರಮೇಶ್ ಗಬ್ಬೂರು ಸಂಭ್ರಮಿಸುತ್ತಿದ್ದರು. ಇದಕ್ಕೆ ಕಾರಣ ಶಿವನ ಮೂರ್ತಿ ರೂಪಿಸುತ್ತಿದ್ದ ಹುಡುಗ ಮುಸ್ಲಿಮನಾಗಿದ್ದ. “ಇದು ಕಂಡ್ರಿ ನಮ್ಮ ನಿಜವಾದ ಭಾರತಎಂದು ಮತ್ತಷ್ಟು ಖುಷಿಯಾದರು.

ನಂತರ ದಿನಕ್ಕೊಂದು ರೂಪಾಯಿ ಕೂಡಿಟ್ಟು ಗೆಳೆಯರೆಲ್ಲಾ ಸೇರಿ ಕನಸುಗಟ್ಟಿ ಬೆಟ್ಟದ ತುದಿಯಲ್ಲಿ ರೂಪಿಸಿದಆದಿಮಎಂಬ ಸಂಸ್ಥೆಗೆ ಹೋದೆವು. ನಟನೆ, ಹಾಡು ನೃತ್ಯ, ಸಾಹಿತ್ಯ, ನಾಟಕಗಳ ತಾಲೀಮು ನಡೆಸುವ ಆದಿಮ ಒಂದು ವಿಶ್ವವಿದ್ಯಾನಿಲಯದಂತೆ ಕೆಲಸ ಮಾಡುತ್ತಿದೆ. ಕೋಟಿಗಾನಹಳ್ಳಿ ರಾಮಯ್ಯ, ..ರಾಮಚಂದ್ರ. ಕೊಂಬಣ್ಣ ಅವರೆಲ್ಲರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಕಳೆದ ಹದಿನೈದು ವರ್ಷಗಳಿಂದ ಹುಣ್ಣಿಮೆ ಹಾಡು ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಆದಿಮ ನಡೆಸಿಕೊಂಡು ಬಂದಿದೆ. ಅನಕ್ಷರಸ್ಥ ದನಕಾಯುವ ಹಳ್ಳಿಯ ಮಕ್ಕಳನ್ನು ಒಗ್ಗೂಡಿಸಿ ಏಕಲವ್ಯ ನಾಟಕ ಮಾಡಿಸಿದೆ. ಹಳ್ಳಿ ಮಕ್ಕಳಲ್ಲಿರುವ ಹಾಡು, ಕಥೆ, ನಾಟಕ, ನೃತ್ಯ ಕಲೆಗಳ ಹೆಕ್ಕಿ ತೆಗೆದು ಹಲವು ಪ್ರತಿಭೆಗಳ ರೂಪಿಸಿದೆ. ಅನೇಕ ಜನರ ಶ್ರಮ ಕನಸಾಗಿ ಅರಳುತ್ತಿದೆ. ಹೊಸ ರೂಪದ ಶಿಕ್ಷಣ ಪದ್ಧತಿ ಪ್ರಾರಂಭಿಸುವ ಆಸೆಯನ್ನು ಅಲ್ಲಿನ ಸಂಘಟಕರು ಹಂಚಿಕೊಂಡರು.

ಸಣ್ಣ ಕಣ ದೊಡ್ಡ ಶಕ್ತಿ ಆಗುವ ಒಂದು ಪ್ರಯತ್ನವೇ ಆದಿಮ ಆಗಿದೆ. ಆರ್ಥಿಕ ಚೈತನ್ಯಕ್ಕೆ ಹಳ್ಳಿಯ ಮನೆಮನೆಗಳಲ್ಲಿ ಎರಡೆರಡು ಕುರಿಮರಿಗಳನ್ನು ಸಾಕಲು ಬಿಟ್ಟು ಅದರಲ್ಲಿ ಒಂದು ಬೆಳೆದ ಕುರಿಯನ್ನು ಆದಿಮ ಪಡೆದು ಅದರಿಂದ ಕೂಡ ನಿಧಿ ಸಂಗ್ರಹಿಸಿದೆ. ಅನೇಕ ಸಂಕಷ್ಟ ಸವಾಲುಗಳ ನಡುವೆ ಬೆಳೆಯುತ್ತಿರುವ ಆದಿಮ ಸಂಸ್ಥೆಯ ಹಿಂದಿನ ನಡಿಗೆಯನ್ನು ಹಿರಿಯ ವಿಮರ್ಶಕ ಚಂದ್ರಶೇಖರ ನಂಗಲಿ ಮನಮುಟ್ಟುವಂತೆ ವಿವರಿಸಿದರು. ಆದಿಮ ಪರಿಸರ ತಮ್ಮ ಬದುಕಿನ ಗತಿಯನ್ನೇ ಬದಲಿಸಿದ ಅನೇಕ ಸೋಜಿಗದ ಸಂಗತಿಗಳನ್ನು ಹೇಳಿ ನಂಗಲಿ ಅಚ್ಚರಿ ಹುಟ್ಟಿಸಿದರು. ಚಂದ್ರಶೇಖರ ನಂಗಲಿ ಅವರ ಜೊತೆ ನಡೆಸಿದ ಆದಿಮ ಚಾರಣ ಮರೆಯಲಾಗದ್ದು. ನಮಗೆ ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ಅನೇಕ ಕಠಿಣ ಬಂಡೆಗಳ ಹತ್ತಿಳಿಸಿದರು. ನಮ್ಮೊಳಗೆ ಉತ್ಸಾಹ ತುಂಬಿ ಜಾರುಬಂಡೆಗಳ ಆಳಕ್ಕಿಳಿಸಿ ಜಟಿಲ ದಾರಿಯಲ್ಲಿ ಅಲೆದಾಡಿಸಿ ಪಾಂಡವರ ಪಡಸಾಲೆ ತೋರಿಸಿದರು. ಹನ್ನೆರಡು ವರುಷದ ಪುಟಾಣಿ ಮನ್ವಿತಾಳಿಂದ ಹಿಡಿದು ಎಪ್ಪತ್ತು ವಯಸ್ಸಿನ ಎಲ್ಲರೂ ಶ್ರಮವೂ ತ್ರಾಸದಾಯಕವೂ ಆಗಿದ್ದ ಚಾರಣ ಮುಗಿಸಿದೆವು.

ಸಂಜೆಗೆ ವಿ.ಎಸ್.ಎಸ್ ಶಾಸ್ತ್ರಿ ಎಂಬ ಇತಿಹಾಸ ತಜ್ಞರು ಕೋಲಾರಮ್ಮನ ದೇವಾಲಯದ ಶಾಸನಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಮೊದಲು ರಾಜರಾಜ ಜೋಳ ಎಂಬಾತ ಪಿಡಾರಿಯೇರ್ ದೇವತೆಗೆ ಕಾಣಿಕೆ ರೂಪದಲ್ಲಿ ಒಂದು ದೇವಾಲಯ ನಿರ್ಮಿಸಿದ. ತದನಂತರ ಕಂಚಿಯ ರಾಜೇಂದ್ರ ಚೋಳನ ಕಾಲದಲ್ಲಿ ಇಟ್ಟಿಗೆ ಸ್ವರೂಪದಲ್ಲಿದ್ದ ದೇವಾಲಯ ಕಲ್ಲಿನ ಕಟ್ಟಡವಾಗಿ ಬದಲಾಯಿತು. ಕಾಪಾಲಿಕ ಸಂಪ್ರದಾಯದ ಹಿನ್ನೆಲೆಯ ದೇವಾಲಯದ ದೇವಿಗೆ ಪಿಡಾರಿಯೇರ್, ನಾಚಿಯರ್, ಎಂಬ ಹೆಸರುಗಳಿದ್ದು ತದನಂತರ ಅದು ಕೋಲಾರಮ್ಮ ಆಗಿರುವ ಚರಿತ್ರೆಯನ್ನು ತುಂಬ ಸುಂದರವಾಗಿ ನಿರೂಪಿಸಿದರು.

ಎರಡನೆಯ ದಿನ ಮಧ್ಯಾಹ್ನ ಹೈದರಾಲಿ ಹುಟ್ಟಿದ ಸ್ಥಳ ಬೂದಿಕೋಟೆಗೆ ನಡಿಗೆ ತಂಡ ಭೇಟಿ ಕೊಟ್ಟಿತು. ಅದರ ಸನಿಹದಲ್ಲೇ ಇರುವ ಮಹಾರಾಜರ ಕಾಲದಲ್ಲಿ ನಿರ್ಮಿಸಿದ ಅಣೆಕಟ್ಟನ್ನು ಕೂಡ ವೀಕ್ಷಿಸಲಾಯಿತು. ಚಾರಿತ್ರಿಕ ಹಿನ್ನೆಲೆ ಇರುವ ಸ್ಥಳಗಳು ನಿಜಕ್ಕೂ ಅದ್ಭುತ ಎನಿಸಿದವು. ಅದೇ ದಿನ ರಾತ್ರಿ ಮಾಲೂರಿನಲ್ಲಿ ಪಿಚ್ಚಳ್ಳಿ ಶ್ರೀನಿವಾಸ್ ಅವರಸಾರಂಗ ರಂಗಸಾಂಸ್ಕೃತಿಕ ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕನ್ನಡ ನೆಲದ ಹೋರಾಟದ ಹಾಡುಗಳಿಗೆ, ತತ್ವ ಪದಗಳಿಗೆ ದನಿ ರೂಪ ಕೊಟ್ಟ ಪಿಚ್ಚಳ್ಳಿ ಮನದುಂಬಿ ಹಾಡಿದರು. ಮಾರನೆಯ ದಿನ ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ನಂತರ ಮೈಸೂರಿನ ಧರ್ಮರಾಜ್ ಪಾಳೇಕಾರ್ ಕೃಷಿ ಪದ್ಧತಿಯ ಬಗ್ಗೆ ಅದ್ಭುತ ಉಪನ್ಯಾಸ ನೀಡಿದರು. ಕೊನೆಯ ದಿನ ಆವನಿ ಬೆಟ್ಟದ ಚಾರಣ ಬಾಕಿಯಿತ್ತು. ಅದನ್ನು ಮುಗಿಸಿ ಕೈವಾರ ತಾತಯ್ಯರ ಕಂಡೆವು.

ಮೂರು ದಿನಗಳ ಕಾಲ ರೈತರ ಭೇಟಿ, ಚಾರಣ, ಕೋಲಾರದ ಚರಿತ್ರೆ, ಜನಪದ ಗಾಯನದ ಜೊತೆಗೆ ವಿಭಿನ್ನ ರುಚಿರುಚಿಯಾದ ಸ್ಥಳೀಯ ಊಟ ತಿಂಡಿಗಳ ಸವಿದೆವು. ತಟ್ಟೆ ಇಡ್ಲಿ, ಹಿತಕವರೆ ಸಾರು, ಚಿತ್ರಾನ್ನದೊಂದಿಗೆ ತಯಾರಿಸಿದ ಗರಿಗರಿ ದೋಸೆ, ರಾಗಿಮುದ್ದೆ ಮೇಲೆ ನಾಟಿಕೋಳಿಯ ಸಾರಿನ ಪರಿಮಳ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮೂರು ದಿನ ಮೂರು ಕ್ಷಣಗಳಂತೆ ಕಳೆದು ಹೋದವು. ನಡಿಗೆಯ ಗೆಳೆಯರು ಒಲ್ಲದ ಮನಸ್ಸುಗಳಿಂದಲೇ ಊರಿಗೆ ಹೊರಟೆವು. ಸಲದ ನಡಿಗೆ ಹೊಸ ಜೀವನಾನುಭವ, ನೆಚ್ಚನೆಯ ಜೀವನ ಪ್ರೀತಿಯ ಜತೆಗೆ ಅನೇಕ ಹೊಸ ಮಿತ್ರರ ಗಳಿಸಿಕೊಟ್ಟಿತು.

Leave a Reply

Your email address will not be published.