ಕೋಳಿ ಮಾಂಸೋದ್ಯಮದಲ್ಲಿ ಅನಿಯಂತ್ರಿತ ಪ್ರತಿಜೀವಕ ಔಷಧಿಗಳ ಬಳಕೆ

ಕೋಳಿಮರಿಗಳ ಮಾಂಸಖಂಡ ಬೆಳೆಸಲು ಬಳಸುತ್ತಿರುವ ಕೊಲಿಸ್ಟಿನ್ ಎಂಬ ಪ್ರತಿಜೀವಕ ಔಷಧಿಯು ಕೋಳಿ ತಿನ್ನುವವರ ಆರೋಗ್ಯದ ಮೇಲೆ ದೂರಗಾಮಿ ಪಾಶ್ರ್ವ ಪರಿಣಾಮ ಬೀರಬಲ್ಲದು. ಈ ಕಾರಣದಿಂದ ಜಾಗತಿಕ ಆರೋಗ್ಯ ಸಂಸ್ಥೆಯು ಕೊಲಿಸ್ಟಿನ್ ಬಳಕೆಯನ್ನು ನಿಷೇಧಿಸಬೇಕೆಂದು ಅಗ್ರಹಿಸಿದ. 

ಸಂಸ್ಕರಿಸಿದ ಮಾಂಸಾಹಾರ ವ್ಯಾಪಾರವು ಇಂದು ಕಾರ್ಪೋರೇಟ್ ಸ್ವರೂಪ ಪಡೆದು ಬೃಹತ್ ಜಾಗತಿಕ ಉದ್ಯಮವಾಗಿ ಬೆಳೆದು ನಿಂತಿದ್ದನ್ನು ನಾವು ನೋಡು ತ್ತಿದ್ದೇವೆ. ಕಾರ್ಪೋರೇಟ್ ಉದ್ಯಮಗಳೆಂದರೆ ಮಾರುಕಟ್ಟೆ ಪೈಪೋಟಿ ಸಹಜವಾದದ್ದು. ಉದ್ಯಮವನ್ನು ಜಾಗತಿಕ ಸ್ತರದಲ್ಲಿ ವ್ಯಾಪಕವಾಗಿ ವಿಸ್ತರಣೆ ಮಾಡುವುದು ಮತ್ತು ಅಧಿಕ ಲಾಭಾಂಶ ನಿರೀಕ್ಷಣೆಗಳು ಕೆಲವೊಂದು ಅನೈತಿಕ ಬಳಸುಮಾರ್ಗಗಳಿಗೆ ಹಾದಿ ಕಲ್ಪಿಸುತ್ತವೆ. ಕುಕ್ಕುಟ ಮಾಂಸೋದ್ಯಮದಲ್ಲಿ ಪ್ರತಿಜೀವಕ ಔಷಧಿಗಳ (ಆ್ಯಂಟಿಬೈಯಾಟಿಕ್ಸ್) ದುರ್ಬಳಕೆಯನ್ನು ಇಂಥ ಬಳಸು ಮಾರ್ಗಗಳಿಗೆ ಒಂದು ಉತ್ತಮ ಉದಾಹರಣೆಯಾಗಿ ನೋಡಬಹುದು.

ಕೋಳಿ ಸಾಕಣೆಯು ಕೃಷಿಗೆ ಪೂರಕ ಉದ್ಯಮವಾಗಿದ್ದು ಅದನ್ನು ಸಣ್ಣ ಪ್ರಮಾಣದಲ್ಲಿ ರೈತರು ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಮಾಂಸಾಹಾರದ ಬೇಡಿಕೆ ಹೆಚ್ಚಿದಂತೆ ಕೋಳಿ ಸಾಕಣೆಯು ಕೃಷಿಯೇತರರೂ ಮಾಡಬಹುದಾದ ಒಂದು ವಾಣಿಜ್ಯ ಉದ್ಯಮವಾಗಿ ಬೆಳೆದು ನಿಂತಿದೆ. ಕೋಳಿ ಒಂದು ಅತಿ ಸೂಕ್ಷ್ಮ ಹಕ್ಕಿಯಾಗಿದ್ದು ಅದು ತನ್ನ ಬೆಳವಣಿಗೆಯ ಹಂತದಲ್ಲಿ ವಾತಾವರಣದಲ್ಲಿನ ಸೋಂಕು ತಗಲಿ ರೋಗಗ್ರಸ್ಥವಾಗಿ ತಾನು ಸಾಯುವುದಲ್ಲದೆ ತನ್ನೊಡನಿರುವ ಇತರ ಕೋಳಿಗಳಿಗೂ ಸಾಂಕ್ರಾಮಿಕ ಸೋಂಕು ತಗಲಿಸುವ ಮೂಲಕ ಸಾಮೂಹಿಕ ಮಾರಣಹೋಮ ನಡೆಯುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕುಕ್ಕುಟೋದ್ಯಮಿಗಳು ಕೋಳಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ಪ್ರತಿಜೀವಕ ಔಷಧಿಗಳನ್ನು ನೀಡುತ್ತಾರೆ.

ಕೊಲಿಸ್ಟಿನ್ (Colistin) ಎಂಬ ಪ್ರತಿಜೀವಕ ಔಷಧಿ ಕುಕ್ಕುಟೋದ್ಯಮದಲ್ಲಿ ವ್ಯಾಪಕವಾಗಿ ಉಪಯೋಗವಾಗುತ್ತಿದೆ. ಈ ಕೊಲಿಸ್ಟಿನ್ ಪ್ರತಿಜೀವಕವು ಮನುಷ್ಯನ ರೋಗ ಗುಣಪಡಿಸಲು ಉಪಯೋಗಿಸುವ ಅಂತಿಮ ಆಯ್ಕೆಯ ಔಷಧಿಯಾಗಿದೆ. ಬೇರಾವುದೇ ಪ್ರತಿಜೀವಕ ಔಷಧಿಗಳು ಮನುಷ್ಯನ ರೋಗ ಚಿಕಿತ್ಸೆಗೆ ಸ್ಪಂದಿಸಿ ನಿರೀಕ್ಷಿತ ಪರಿಣಾಮ ಬೀರದಿದ್ದಾಗ ಈ ಕೊಲಿಸ್ಟಿನ್ ಅಂತಿಮ ಆಯ್ಕೆಯಾಗಿ ಉಪಯೋಗಿಸ್ಪಡುತ್ತದೆ.

ಕೋಳಿಗಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಯಲು ಉಪಯೋಗಿಸಲಾಗುತ್ತಿದೆ ಎಂದು ಹೇಳಲಾಗುವ ಈ ಕೊಲಿಸ್ಟಿನ್ ಔಷಧಿಯನ್ನು ಕುಕ್ಕುಟೋದ್ಯಮಿಗಳು ಬೇರೆಯದ್ದೇ ಕಾರಣಗಳಿಗೆ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕೋಳಿ ಮರಿಗಳಿಗೆ ನೀಡುವ ಕೊಲಿಸ್ಟಿನ್ ಅವುಗಳನ್ನು ತ್ವರಿತಗತಿಯಲ್ಲಿ ಬೆಳೆದು ದೊಡ್ಡದಾಗಿ ಮಾಡಲು ಸಹಕರಿಸುತ್ತದೆ. ಕೊಲಿಸ್ಟಿನ್ ಪರಿಣಾಮಗಳಿಂದ ತ್ವರಿತಗತಿಯಲ್ಲಿ ಕೋಳಿ ಮರಿಗಳು ಮಾಂಸಖಂಡಗಳು ತುಂಬಿಕೊಂಡು ದಷ್ಟಪುಷ್ಟವಾಗಿ ತೂಕ ಪಡೆಯುತ್ತವೆ. ಅದಕ್ಕಾಗಿ ಇದನ್ನು ತೂಕ ಹೆಚ್ಚಿಸುವ ಔಷಧಿ (Growth promoter) ಎಂತಲೂ ಕರೆಯುತ್ತಾರೆ. ಇದೊಂದು ಅನೈಸರ್ಗಿಕ ಬಳಸುಮಾರ್ಗವೆಂದು ಬೇರೆ ಹೇಳುವ ಅಗತ್ಯವಿಲ್ಲ. ಈ ರೀತಿ ಕೋಳಿಮರಿಗಳ ಮಾಂಸಖಂಡ ಬೆಳೆಸಲು ಬಳಸುತ್ತಿರುವ ಕೊಲಿಸ್ಟಿನ್ ಔಷಧಿಯು ಮಾಂಸ ಭಕ್ಷಕರ ಆರೋಗ್ಯದ ಮೇಲೆ ದೂರಗಾಮಿ ಪಾಶ್ರ್ವ ಪರಿಣಾಮ ಬೀರಬಲ್ಲದು. ಆ ಕಾರಣದಿಂದ ಜಾಗತಿಕ ಆರೋಗ್ಯ ಸಂಸ್ಥೆಯು (World Health Organization) ಕೊಲಿಸ್ಟಿನನ್ನು ಕೋಳಿಮರಿಗಳ ತೂಕ ಹೆಚ್ಚಿಸುವ ಔಷಧಿಯಾಗಿ ಬಳಸುವುದನ್ನು ನಿಷೇಧಿಸಬೇಕೆಂದು ಅಗ್ರಹಿಸಿದೆ.

ಭಾರತದಲ್ಲಿ ಪಶು ಔಷಧಿ ಉತ್ಪಾದನಾ ಕಂಪನಿಗಳು ಬಹಿರಂಗವಾಗಿ ವಿವಿಧ ಪ್ರತಿಜೀವಕ  ಔಷಧಿಗಳಿರುವ ಮಾಂಸೋತ್ಪನ್ನಗಳ ಜಾಹೀರಾತುಗಳನ್ನು ನೀಡುತ್ತವೆ. ಇವುಗಳಲ್ಲಿ ವೆಂಕಿ’ಸ್ ಕಂಪನಿಯು ಪ್ರಮುಖವಾದದ್ದು. ಈ ಕಂಪನಿಯು ಪಶು ಔಷಧೋತ್ಪನ್ನವನ್ನಷ್ಟೆ ಅಲ್ಲದೆ ಕೋಳಿ ಮಾಂಸಾಹಾರವನ್ನೂ ಉತ್ಪಾದಿಸುತ್ತದೆ ಹಾಗೂ ಮಾಂಸೋತ್ಪನ್ನಗಳನ್ನು ಕೆ.ಎಫ್.ಸಿ., ಮಾಕ್ ಡೋನಾಲ್ಡ್, ಪಿಜಾ ಹಟ್ ಮತ್ತು ಡೋಮಿನೋಸ್‍ಗೆ ವಿತರಿಸುತ್ತದೆ.

ಭಾರತದಲ್ಲಿ ಕೊಲಿಸ್ಟಿನನ್ನು ವೈದ್ಯರ ಚೀಟಿಯಿಲ್ಲದೆ ಖರೀದಿಸಬಹುದು. ಆದರೆ ಯುರೋಪ್ ದೇಶಗಳಲ್ಲಿ ಕೊಲಿಸ್ಟಿನ್ ಕೇವಲ ವೈದ್ಯರ ಚೀಟಿಯ ಮೂಲಕ ಮಾತ್ರ ಮಾರಲ್ಪಡುತ್ತದೆ. ಕೊಲಿಸ್ಟಿನನ್ನು ರೈತೋದ್ಯಮಿಗಳಿಗೆ ಮಾರುವ ವೆಂಕಿ’ಸ್ ಕಂಪನಿಯು ಕೊಲಿಸ್ಟಿನ್ ತುಂಬಿದ ಚೀಲಗಳ ಮೇಲೆ ಖುಷಿಯಿಂದ ನಲಿಯುವ ಕೋಳಿಮರಿಯ ಚಿತ್ರವನ್ನು ಬಳಸಿ ಗ್ರಾಹಕರಿಗೆ ಈ ರೀತಿಯ ಸೂಚನೆಯನ್ನು ನೀಡಿದೆ: ‘ತೂಕವನ್ನು ಹೆಚ್ಚಿಸುತ್ತದೆ’, ಮತ್ತು ‘ಒಂದು ಟನ್ ಕೋಳಿ ಮಾಂಸಾಹಾರಕ್ಕೆ 50 ಗ್ರಾಂ ಕೊಲಿಸ್ಟಿನ್ ಹಾಕಿರಿ’.

ಭಾರತದಲ್ಲಿ ವೆಂಕಿ’ಸ್ ಕಂಪನಿಯು ಕೊಲಿಸ್ಟಿನನ್ನು ಕೋಳಿ ಮಾಂಸಾಹಾರದಲ್ಲಿ ರೋಗ ಚಿಕಿತ್ಸೆಯ ಸಲುವಾಗಿ ಮತ್ತು ಅತ್ಯಲ್ಪ ಪ್ರಮಾಣದಲ್ಲಿ ರೋಗ ತಡೆಯಲು ಮುನ್ನೆಚ್ಚರಿಕೆಗಾಗಿ ಉಪಯೋಗಿಸುವುದಾಗಿ ಹೇಳಿಕೊಂಡಿದೆ. ಅದು ಕೋಳಿಮರಿಗಳ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗಿರಬಹುದೆಂದು ವಾದಿಸುತ್ತದೆ.

ಕೊಲಿಸ್ಟಿನ್ ಪ್ರತಿರೊಧಕ ಬ್ಯಾಕ್ಟೇರಿಯಾ ಸೂಕ್ಷ್ಮಾಣು ಜೀವಿಗಳು ಕೋಳಿ ಸಾಕಣೆ ಮಾಡುವ ಹೊಲದ ವಾತಾವರಣದಲ್ಲಿ ಪಸರಿಸಿರುವು ದರಿಂದ ಕೋಳಿ ಮಾಂಸದಲ್ಲಿ ಸೂಕ್ಷ್ಮಾಣು ಜೀವಿಗಳು ಸೇರಿಕೊಳ್ಳುತ್ತವೆ. ಹಾಗಾಗಿ ಕೊಲಿಸ್ಟಿನ್ ಸತತ ಇಂಥ ಬ್ಯಾಕ್ಟೇರಿಯಾ ಸೂಕ್ಷ್ಮಾಣು ಜೀವಿಗಳ ಸಂಪರ್ಕಕ್ಕೆ ಬರುವುದರಿಂದ ಅವು ಕೊಲಿಸ್ಟಿನ್ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಹಾಗಾಗಿ ಮನುಷ್ಯನ ರೋಗಕ್ಕೆ ಕಾರಣ ವಾಗುವ ಈ ಸೂಕ್ಷ್ಮಾಣು ಜೀವಿಗಳನ್ನು ಚಿಕಿತ್ಸೆಯ ಮೂಲಕ ಪರಿಹರಿ ಸಲು ಪ್ರಯತ್ನಿಸಿದಾಗ ಸಹಜವಾಗಿ ಪ್ರತಿರೋಧಕ ಶಕ್ತಿಹೊಂದಿರುವ ಈ ಬ್ಯಾಕ್ಟೇರಿಯಾಗಳನ್ನು ರೋಗಿಯ ದೇಹದಲ್ಲಿ ನಾಶಪಡಿಸಲು ಕೊಲಿಸ್ಟಿಲ್ ವಿಫಲವಾಗುತ್ತದೆ ಎನ್ನುತ್ತಾರೆ ಪ್ರೊಫೆಸರ್ ಟಿಮೋಥಿ ವಾಲ್ಸ್. ಕೊಲಿಸ್ಟಿನ್ನನ್ನು ಪ್ರತಿಜೀವಕ ಔಷಧಿಯನ್ನಾಗಿ ಅಲ್ಲದೆ ಬೇರೆ ಕಾರಣಗಳಾದ ಮಾಂಸೋತ್ಪನ್ನಗಳ ಬೆಳವಣಿಗೆಗಳಿಗೆ ಉಪಯೋಗಿಸಿದಾಗ ಅದು ವಾತಾವಕರಣವನ್ನು ವಿಷಮಗೊಳಿಸುವ (Environmental toxin) ವಸ್ತುವಾಗಿ ಮಾರ್ಪಾಟಾಗುತ್ತದೆ ಎನ್ನುತ್ತಾರೆ ಪ್ರೊಫೆಸರ್ ವಾಲ್ಸ್.

ಕೋಳಿ ಮಾಂಸಾಹಾರೋತ್ಪನ್ನಗಳಲ್ಲಿ ಕೊಲಿಸ್ಟಿನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಅದರ ಬಳಕೆಯನ್ನು ಮನುಷ್ಯ ಚಿಕಿತ್ಸೆಗಾಗಿ ಮಾತ್ರ ಸೀಮಿತಗೊಳಿಸಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿರುವುದರಿಂದ ಮಾಕ್ ಡೋನಾಲ್ಡ್ ಕಂಪನಿಯು ಕೊಲಿಸ್ಟಿನ್ ಬಳಕೆಯನ್ನು 2018 ರೊಳಗೆ ಯುರೋಪ್ ರಾಷ್ಟ್ರಗಳಲ್ಲಿ ಹಂತಹಂತವಾಗಿ ನಿಲ್ಲಿಸುವ ವಾಗ್ದಾನ ಮಾಡಿದೆ. ಕೆ.ಎಫ್.ಸಿ ಕೂಡ ಇಂಥದ್ದೆ ವಾಗ್ದಾನವನ್ನು ಮಾಡಿದೆ. ಆದರೆ ಈ ಕಂಪನಿಗಳು ಭಾರತದಲ್ಲಿ ಕೊಲಿಸ್ಟಿನ್ ಬಳಕೆಯ ಕುರಿತು ಇಂಥದ್ದೇ ವಾಗ್ದಾನಗಳನ್ನು ಮಾಡಿದ್ದರೂ ಅವು ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿಲ್ಲ. ಡೋಮಿನೋ’ಸ್ ಮಾಲಿಕತ್ವದ ಜ್ಯುಬಿಲಂಟ್ ಫುಡ್ ವರ್ಕ್ಸ್ ಮಾತ್ರ ಭಾರತದಲ್ಲಿ ಮಾಂಸಾಹಾರಗಳಲ್ಲಿ ಕೊಲಿಸ್ಟಿನ್ ಬಳಕೆಯನ್ನು 2019 ರಿಂದ ಹಂತಹಂತವಾಗಿ ನಿಲ್ಲಿಸುವುದಾಗಿ ಹೇಳಿದೆ.

ಭಾರತದಲ್ಲಿ ಎರಡು ಪ್ರಮುಖ ಕಂಪನಿಗಳು ಕೊಲಿಸ್ಟಿನ್‍ನ್ನು ಉತ್ಪಾ ದಿಸುತ್ತವೆ. ಉಳಿದಂತೆ ವಾರ್ಷಿಕ 150 ಟನ್ ಕೊಲಿಸ್ಟಿನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತವು ಜಾಗತಿಕ ಪ್ರತಿಜೀವಕ ಪ್ರತಿರೋಧಕ ಸಮಸ್ಯೆಯ ಅಧಿಕೇಂದ್ರವಾಗಿ ಮಾರ್ಪಟ್ಟಿದೆ. ಇದಕ್ಕೆ ಹಲವಾರು ಕಾರಣ ಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಅನಿಯಂತ್ರಿತ ಪ್ರತಿ  ಜೀವಕಗಳ ಮಾರಾಟ ಮತ್ತು ಬಳಕೆ, ದುರ್ಬಲ ಸೋಂಕು ನಿಯಂತ್ರಣ ವ್ಯವಸ್ಥೆ, ಪ್ರತಿಜೀವಕ ಉತ್ಪಾದನಾ ಕಾರ್ಖಾನೆಗಳ ಅಸಮರ್ಪಕ ತ್ಯಾಜ್ಯ ವಿಲೇವಾರಿ, ಪ್ರತಿಜೀವಕಗಳು ಪ್ರತಿರೋಧಕ ಗುಣ ಬೆಳೆಸಿಕೊಳ್ಳಲು ಅನುಕೂಲಕರವಾದ ವಾತಾವರಣ ಮುಂತಾದವು.

ಸಾಮಾನ್ಯವಾಗಿ ಮೂತ್ರಕೋಶ, ಶ್ವಾಸಕೋಶ ಮತ್ತು ರಕ್ತಸೋಂಕಿಗೆ ಕಾರಣವಾಗಬಲ್ಲ ಕ್ಲೆಬ್ಸಿಲ್ಲಾ ನಿಮೋನಿಯೆ ಎಂಬ ಬ್ಯಾಕ್ಟೇರಿಯಾ ಸೂಕ್ಷ್ಮಾಣುಜೀವಿಯು ಶೇಕಡ 57 ರಷ್ಟು ಕಾರ್ಬಾಪೆನೆಮ್ಸ್ ಎಂಬ ಪ್ರತಿಜೀವಕ ಔಷಧಿಯ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿದ್ದು ಸಂಶೋಧನೆಗಳಿಂದ ದೃಢಪಟ್ಟಿದೆ. ಪ್ರತಿಜೀವಕ ಪ್ರತಿರೋಧಕ ಕ್ರೀಯೆಯಿಂದ ಭಾರತದಲ್ಲಿ ವರ್ಷಕ್ಕೆ 58000 ನವಜಾತ ಶಿಸುಗಳು ಮರಣಿಸುತ್ತವೆ ಎನ್ನುತ್ತವೆ ಕೆಲವು ಸರ್ವೇಕ್ಷಣಾ ಫಲಿತಾಂಶಗಳು.

ಇಂಗ್ಲೆಂಡಿನ ಮುಖ್ಯ ವೈದ್ಯಾಧಿಕಾರಿ ಪ್ರೋಫೆಸರ್ ಡೇಮ್ ಶಾಲ್ಲಿ ಡೇವಿಸ್ ಮಾಂಸಾಹಾರೋತ್ಪನ್ನಗಳಲ್ಲಿ ಕೊಲಿಸ್ಟಿನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸದೆ ಹೋದರೆ ಮುಂದಿನ ಐದು ವರ್ಷಗಳಲ್ಲಿ ಔಷಧ ಪ್ರತಿರೋಧಕ ಸಮಸ್ಯೆಯು ತೀವ್ರ ಜಾಗತಿಕ ಆರೋಗ್ಯ ಸಮಸ್ಯೆಯಾಗಿ ನಿಲ್ಲಲಿದೆ ಎಂದು ಅಭಿಪ್ರಾಯ ಪಡುತ್ತಾರೆ. ಆಕೆಯ ಪ್ರಕಾರ ಜಗತ್ತಿನಲ್ಲಿ ಪ್ರಸ್ತುತ ವಾರ್ಷಿಕ ಏಳು ಲಕ್ಷ ಜನರು ಔಷಧ ಪ್ರತಿರೋಧಕ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವಿಗೀಡಾಗುತ್ತಿದ್ದಾನೆ. ಇದು ಹೀಗೆಯೆ ಮುಂದುವರೆದರೆ 2050 ರಷ್ಟೊತ್ತಿಗೆ ಈ ಸಂಖ್ಯೆ 10 ಮಿಲಿಯನ್ನಗೆ ಏರಿಕೆಯಾಗುವ ನಿರೀಕ್ಷೆಗಳಿವೆ.

ಅದಕ್ಕೆ ಭಾರತ ಸರಕಾರದ ಕೃಷಿ ಮಂತ್ರಾಲಯವು ಆ ಪ್ರತಿಜೀವಕಗಳ ಪ್ರಮಾಣವು ಒಪ್ಪಿತ ಮಿತಿಯೊಳಗಿದೆ ಎಂದು ಸ್ಪಷ್ಟೀಕರಣ ನೀಡಿತ್ತು. 2010ಕ್ಕೆ ಹೋಲಿಸಿದರೆ ಕೋಳಿ ಮಾಂಸಾಹಾರದಲ್ಲಿ ಕೋಲಿಸ್ಟಿನ್ ಮತ್ತು ಇತರ ಪ್ರತಿಜೀವಕಗಳ ಬಳಕೆಯು 2030ರ ತನಕ ಐದು ಪಟ್ಟು ಹೆಚ್ಚಬಹುದೆಂದು ಅಂದಾಜಿಸಲಾಗಿದೆ.

ಭಾರತದ ಸೂಪರ್ ಮಾರುಕಟ್ಟೆಗಳಲ್ಲಿ ಲಭಿಸುವ ಮಾಂಸಾಹಾರದ ಸ್ಯಾಂಪಲ್ಲುಗಳಲ್ಲಿ ಆರು ಬಗೆಯ ಪ್ರತಿಜೀವಕ ಔಷಧಿಗಳ ಅಂಶವನ್ನು 2014ರಲ್ಲಿ ಕೆಲವು ಸಂಶೋಧಕರು ಪತ್ತೆ ಹಚ್ಚಿದ್ದರು. ಅದಕ್ಕೆ ಭಾರತ ಸರಕಾರದ ಕೃಷಿ ಮಂತ್ರಾಲಯವು ಆ ಪ್ರತಿಜೀವಕಗಳ ಪ್ರಮಾಣವು ಒಪ್ಪಿತ ಮಿತಿಯೊಳಗಿದೆ ಎಂದು ಸ್ಪಷ್ಟೀಕರಣ ನೀಡಿತ್ತು. 2010ಕ್ಕೆ ಹೋಲಿಸಿದರೆ ಕೋಳಿ ಮಾಂಸಾಹಾರದಲ್ಲಿ ಕೋಲಿಸ್ಟಿನ್ ಮತ್ತು ಇತರ ಪ್ರತಿಜೀವಕಗಳ ಬಳಕೆಯು 2030ರ ತನಕ ಐದು ಪಟ್ಟು ಹೆಚ್ಚಬಹುದೆಂದು ಅಂದಾಜಿಸಲಾಗಿದೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿರಿಸಿಕೊಂಡು ಜಾಗತಿಕ ಆರೋಗ್ಯ ಸಂಸ್ಥೆಯು ಕೋಳಿ ತೂಕ ಹೆಚ್ಚಳಕ್ಕಾಗಿ ಕೋಳಿ ಮಾಂಸೋ ತ್ಪನ್ನಗಳಲ್ಲಿ ಪ್ರತಿಜೀವಕಗಳ ಬಳಕೆಯನ್ನು ಕಡಿತಗೊಳಿಸುವ ಕುರಿತು 2017ರ ನವೆಂಬರನಲ್ಲಿ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಗೊಳಿಸಿದೆ. ಯುರೋಪಿನಲ್ಲಿ ಇವುಗಳ ಬಳಕೆಯನ್ನು 2006ರಲ್ಲಿಯೇ ನಿಷೇಧಿಸಲಾಗಿದ್ದು, 2017ರಲ್ಲಿ ಅಮೆರಿಕ ಕೂಡ ಅಂಥದ್ದೆ ಕ್ರಮ ತೆಗೆದುಕೊಂಡಿದೆ. 2014ರಲ್ಲಿ ಭಾರತದ ಕೃಷಿ ಮಂತ್ರಾಲಯವು ಎಲ್ಲ ರಾಜ್ಯ ಸರಕಾರಗಳಿಗೆ ಕೋಳಿ ಮಾಂಸೋತ್ಪನ್ನಗಳಲ್ಲಿ ತೂಕ ಹೆಚ್ಚಳ ಕಾರಣ ಕ್ಕಾಗಿ ಪ್ರತಿಜೀವಕಗಳ ಬಳಕೆ ಬಗ್ಗೆ ಎಚ್ಚರ ವಹಿಸಲು ಸಲಹಾಪತ್ರವನ್ನು ಬರೆದಿತ್ತು. 2017ರ ಕ್ರೀಯಾಯೋಜನೆಯಲ್ಲಿ ಭಾರತ ಸರಕಾರವು ಕೋಳಿ ಮಾಂಸೋತ್ಪನ್ನಗಳಲ್ಲಿ ಪ್ರತಿಜೀವಕಗಳ ಬಳಕೆಯನ್ನು ನಿಷೇಧಿಸಿತ್ತು.

ಇಷ್ಟೆಲ್ಲ ಬೆಳವಣಿಗೆಗಳ ನಂತರವೂ ಭಾರತದಲ್ಲಿ ಕೋಳಿ ಮಾಂಸೋತ್ಪನ್ನಗಳಲ್ಲಿ ಅಪರಮಿತ ಪ್ರಮಾಣದ ಪ್ರತಿಜೀವಕ ಔಷಧಿಗಳ ದುರ್ಬಳಕೆಯು ಅವ್ಯಾಹತವಾಗಿ ಮುಂದುವರೆದಿದೆ.

(ಆಕರ: ಮ್ಯಾಡ್ಲೆನ್ ಡೇವಿಸ್ ಮತ್ತು ರಾಹುಲ್ ಮೀಸರರ್ಗಂದಾ; ದಿ ಬ್ಯೂರೋ ಆಫ್ ಇನ್ವೆಷ್ಟಿಗೇಟಿವ್ ಜರ್ನಲಿಸಂ)

*ಲೇಖಕರು ವಿಜಯಪುರದ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕರು.

Leave a Reply

Your email address will not be published.