ಕೋವಿಡ್ ಎರಡನೇ ಅಲೆಯ ಪಾಠಗಳು

ಎರಡು ಅಥವಾ ಮೂರನೇ ಅಲೆಗೆ ಸರಿಯಾಗಿ ತಯಾರಾಗಬೇಕೆಂದರೆ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕು. ನಾಣ್ಣುಡಿಯ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತಲೆ ಹುದುಗಿಸಿಕೊಂಡರೆ ವಾಸ್ತವ ಪರಿಸ್ಥಿತಿ ಮಾಯವಾಗುವುದಿಲ್ಲ.

-ಡಾ.ಬಿ.ಆರ್.ಮಂಜುನಾಥ್

ಭಾರತದಾದ್ಯಂತ ಕೊರೊನಾದ ಎರಡನೆಯ ಅಲೆ ತೀವ್ರವಾಗಿದೆ. ಸಾವಿನ ಬೀಭತ್ಸ ನರ್ತನ ಬಿಡುವಿಲ್ಲದೆ ನಡೆಯುತ್ತಿದೆ. ಆತಂಕ ಹೆಚ್ಚುತ್ತಿದೆ. ಕುಟುಂಬದವರನ್ನು, ಮಿತ್ರರನ್ನು ಕಳೆದುಕೊಳ್ಳಬಾರದು, ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ತಹತಹಿಕೆಯಲ್ಲಿ ಎಲ್ಲರೂ ಇದ್ದಾರೆ. ಅನೇಕ ಹಿರಿಯರಿಗೆ ನಾನು ಈ ಅಲೆಯನ್ನು ಮೀರಿ ಬದುಕುಳಿಯುತ್ತೇನೆಯೇ ಎಂಬ ಭಯ ಕಾಡುತ್ತಿದೆ. ಇದರ ಜೊತೆಗೇ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಆರ್ಥಿಕ ಅಭದ್ರತೆಯೂ ಕಾಡುತ್ತಿದೆ.

ಈ ಸಂದರ್ಭದಲ್ಲಿ ನಾವು ಕೊರೊನಾ ಅನ್ನು ಎದುರಿಸುವಲ್ಲಿ ಎಡವಿದ್ದೆಲ್ಲಿ, ಇನ್ನು ಮುಂದೆ ಜೀವವನ್ನು, ಜೀವನವನ್ನು ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದು ಅವಶ್ಯಕವಾದ ಚರ್ಚೆಯಾಗಿದೆ. ಅದಕ್ಕೆ ನಮಗೆ ಸೂಕ್ತ ಮಾಹಿತಿ ಬೇಕು. ನಿಜಕ್ಕೂ ಕೊರೊನಾಗೆ ಬಲಿಯಾದವರೆಷ್ಟು, ಸೋಂಕಿತರ ಸಂಖ್ಯೆ ಎಷ್ಟು, ನಮ್ಮ ಚಿಕಿತ್ಸಾ ವ್ಯವಸ್ಥೆಯಲ್ಲಿನ ಕೊರತೆಗಳೇನು ಎಂಬುದನ್ನು ನಾವು ಗ್ರಹಿಸಬೇಕು. ಸರ್ಕಾರದ ಪರವಾಗಿ ನೀತಿಗಳನ್ನು ರೂಪಿಸಬೇಕಾದ ತಜ್ಞರಿಗೂ ಸಹ ಸಂಪೂರ್ಣ ಮಾಹಿತಿ, ಅಂಕಿ ಅಂಶಗಳ ಕೊರತೆ ಕಾಡುತ್ತಿದೆ. ಪರಿಸ್ಥಿತಿಯ ಬಗ್ಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅರಿವು ಮೂಡದಿದ್ದರೆ ಆಗ ವೈಜ್ಞಾನಿಕ ಪರಿಹಾರಗಳನ್ನು ರೂಪಿಸುವುದು ಹೇಗೆ ಸಾಧ್ಯವಾಗುತ್ತದೆ?

ನಮ್ಮ ಸರ್ಕಾರಗಳು ಇಂಥ ಭಯಂಕರ ವಿಪತ್ತು ಬಂದೊದಗಿದಾಗಲೂ ಅತ್ಯಂತ ಬೇಜವಾಬ್ದಾರಿಯಿಂದಲೇ ವರ್ತಿಸುತ್ತಾ ಬಂದಿವೆ. ಮನೆಗೆ ಕಳ್ಳರು ನುಗ್ಗಿರುವಾಗ ಮುಸುಕು ಹಾಕಿಕೊಂಡು ಮಲಗಿ ಯಾರೂ ಬಂದಿಲ್ಲ ಎಂದು ಕಲ್ಪಿಸಿಕೊಂಡರೆ ಡಕಾಯತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಆದರೆ ನಮ್ಮ ಸರ್ಕಾರಗಳ ಕಾರ್ಯವೈಖರಿ ಹಾಗೆಯೇ ಇದೆ.

ಕೊರೊನಾ ಬಂದೇ ಇಲ್ಲ ಎನ್ನುವಂತೆ ವರ್ತಿಸುವುದು. ಇದನ್ನು ಇಂಗ್ಲಿಷಿನಲ್ಲಿ ಡಿನೈಯಲ್ ಮೋಡ್ ಎನ್ನುತ್ತಾರೆ; ಸತ್ಯ ನಿರಾಕರಣೆಯ ಭಯಂಕರ ಮಾನಸಿಕ ಸ್ಥಿತಿ ಇದು. ಪರಿಸ್ಥಿತಿ ಕೈ ಮೀರಿದಾಗ ಏನೋ ಮಾಡುತ್ತಿದ್ದೇವೆ ಎನ್ನುವಂತೆ ವರ್ತಿಸುವುದು, ಆ ನಟನೆ ಮಾಧ್ಯಮಗಳಲ್ಲಿ ಪ್ರಚಾರವಾಗುವಂತೆ ನೋಡಿಕೊಳ್ಳುವುದು. ಮಾಧ್ಯಮವನ್ನು ನಿರ್ವಹಿಸಿದರೆ ವಿಪತ್ತನ್ನು ನಿರ್ವಹಿಸಿದಂತೆ ಎಂಬಂತಹ ತಂತ್ರಗಾರ ಆಡಳಿತ ಶೈಲಿ ಇದು.

ಪಾರದರ್ಶಕತೆಯ ಅಭಾವ

ಸಂಬಂಧಪಟ್ಟ ಎಲ್ಲ ಸರ್ಕಾರಗಳೂ ಸಾವು ನೋವಿನ ಅಂಕಿ ಅಂಶಗಳನ್ನು ಮುಚ್ಚಿಡುತ್ತಿವೆ. ಮೊದಲಿಗೆ ಸೋಂಕಿನ ಸಂಖ್ಯೆಗೆ ಬರೋಣ. ಅನೇಕ ಸೋಂಕಿನ ಪ್ರಕರಣಗಳು ಲಕ್ಷಣರಹಿತವಾಗಿದ್ದು ಅವು ಯಾವ ಲೆಕ್ಕಕ್ಕೂ ಬರುವುದಿಲ್ಲ. ಅದನ್ನು ಬಿಡಿ. ಆದರೆ ನಮ್ಮ ಭಾರತದಂತಹ ಬಡದೇಶದಲ್ಲಿ ಬೇರೆ ಸಮಸ್ಯೆಗಳಿವೆ. ಅನೇಕರಿಗೆ ತಮಗೆ ಬಂದಿರುವುದು ಕೊರೊನ ಎಂಬ ಅರಿವೇ ಇರುವುದಿಲ್ಲ. ಕೆಲವೊಮ್ಮೆ ಲಕ್ಷಣಗಳು ಉಲ್ಬಣವಾದರೂ ಪರೀಕ್ಷೆ ಮಾಡಿಸಿಕೊಳ್ಳಲಿಕ್ಕೆ ಪ್ರಯಾಣದ ಸೌಕರ್ಯವೂ ಇರುವುದಿಲ್ಲ. ಕೈಯಲ್ಲಿ ಹಣವೂ ಇರುವುದಿಲ್ಲ. ಇನ್ನು ಕೆಲವರಿಗೆ ತಮಗೆ ಕೊರೊನಾ ತಗುಲಿದೆ ಎಂದು ಹೇಳಿಕೊಳ್ಳಲು ಇಷ್ಟವಿರುವುದಿಲ್ಲ. ಏಕೆಂದರೆ ಅವರನ್ನು ಶಾಪಗ್ರಸ್ತರಂತೆ ನೋಡುವ, ಅಸ್ಪೃಶ್ಯರನ್ನಾಗಿಡುವ ಸಾಧ್ಯತೆ ಇರುತ್ತದೆ. ದಿನಗೂಲಿಗಳು, ಬೀದಿ ಬದಿ ವ್ಯಾಪಾರಿಗಳು ತಮಗೆ ಸೋಂಕಿದೆ ಎಂದು ಒಪ್ಪಿಕೊಂಡರೆ ದಿನಗೂಲಿ ನಷ್ಟವಾಗುತ್ತದೆ ಎಂಬ ಭಯದಲ್ಲಿರುತ್ತಾರೆ. ಈ ಎಲ್ಲ ಕಾರಣಗಳಿಂದ ಸೋಂಕಿನ ಪ್ರಮಾಣದ ಲೆಕ್ಕ ಸುಲಭವಿಲ್ಲ.

ಇವುಗಳಿಗಿಂತ ಗಾಬರಿ ಹುಟ್ಟಿಸುವ ಇನ್ನೊಂದು ಬೆಳವಣಿಗೆ ಇದೆ. ಅದೆಂದರೆ ಸರ್ಕಾರಗಳೇ ಸೋಂಕಿತರ ಮತ್ತು ಸಾವಿಗೀಡಾದವರ ಸಂಖ್ಯೆಯನ್ನು ಕಡಿಮೆಯಾಗಿ ತೋರಿಸುತ್ತಿವೆ. ಇದರ ಬಗ್ಗೆ ಇತ್ತೀಚೆಗೆ ಎನ್.ಡಿ.ಟಿವಿ ಒಂದು ವರದಿಯನ್ನು ಪ್ರಕಟಿಸಿತ್ತು. ಅದರ ಪ್ರಕಾರ ಸೋಂಕು ಕಡಿಮೆಯಾದ ನಗರ ಪ್ರದೇಶಗಳಲ್ಲಿ ಪರೀಕ್ಷೆಗಳನ್ನು ಸ್ವಲ್ಪಮಟ್ಟಿಗೆ ಮುಂದುವರೆಸಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಏಕೆಂದರೆ ಈಗ ಸೋಂಕು ವ್ಯಾಪಕವಾಗಿ ಗ್ರಾಮೀಣ ಪ್ರದೇಶದಲ್ಲಿ ಹರಡಿದೆ.

ಆದರೆ ಸೋಂಕಿತರ ಸಂಖ್ಯೆಯನ್ನು ಅಂದಾಜು ಮಾಡಲು ಕೆಲವು ಪರೋಕ್ಷ ವಿಧಾನಗಳಿವೆ. ಅದರಲ್ಲಿ ಸೆರೊ ಸರ್ವೆ ಒಂದು. ಎಂದರೆ ವೈಜ್ಞಾನಿಕ ಮಾನದಂಡಗಳಿಂದ ಕೆಲವರನ್ನು ಆಯ್ದು ಅವರಲ್ಲಿ ಸೋಂಕು ಉಂಟಾಗಿ, ಕೋವಿಡ್ ವಿರೋಧಿ ಪ್ರತಿಕಾಯಗಳಿವೆಯೇ ಎಂಬುದನ್ನು ಪರೀಕ್ಷಿಸಿ ಅದರ ಆಧಾರದ ಮೇಲೆ ಲೆಕ್ಕ ಹಾಕುವುದು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು 2020 ರ ಡಿಸೆಂಬರ್ 17 ರಿಂದ 2021 ರ ಜನವರಿ 8 ರವರೆಗೆ ಮಾಡಿದ ಸೆರೊ ಸರ್ವೆಯಲ್ಲಿ ಹದಿನೆಂಟು ವಯಸ್ಸು ದಾಟಿದ ಭಾರತೀಯರಲ್ಲಿ ಶೇಕಡಾ 21.5 ಜನರಿಗೆ ಸೋಂಕು ಬಂದು ಹೋಗಿದೆ ಎಂದು ಅಂದಾಜಿಸಿದೆ. ಎಂದರೆ ಆ ವಯೋಮಾನದ 17 ಕೋಟಿ ಜನರಿಗೆ ಆ ವೇಳೆಗೆ ಸೋಂಕು ಬಂದು ಹೋಗಿತ್ತು. ಆದರೆ ದಾಖಲಾಗಿರುವ ಸೋಂಕಿತರ ಸಂಖ್ಯೆ ಅದರಲ್ಲಿ ಕೇವಲ ಶೇಕಡಾ 6 ಮಾತ್ರ.

ಸತ್ತವರ ಸಂಖ್ಯೆಯನ್ನು ಮುಚ್ಚಿಡುವುದು ಇನ್ನೂ ಹೇಯವಾದದ್ದು. ಗುಜರಾತಿನಲ್ಲಿ ಕೆಲವರು ಪತ್ರಿಕೆಗಳಲ್ಲಿ ಬಂದಿರುವ ನಿಧನವಾರ್ತೆಗಳನ್ನು ಲೆಕ್ಕ ಹಾಕಿಯೇ ಸರ್ಕಾರ ಪ್ರಕಟಿಸುತ್ತಿರುವ ಸಾವಿನ ಸಂಖ್ಯೆ ಸುಳ್ಳು, ಕಡೆಯ ಪಕ್ಷ ವಾಸ್ತವ ಸಂಖ್ಯೆ ಅದರ ದುಪ್ಪಟ್ಟಿದೆ ಎಂದು ಅನುಮಾನಿಸುತ್ತಿದ್ದರು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಸ್ಮಶಾನದಲ್ಲಿ ಸಿಗುವ ಲೆಕ್ಕ ಮತ್ತು ಸರ್ಕಾರದ ಲೆಕ್ಕದ ನಡುವೆ 5 ಪಟ್ಟು, ಒಮ್ಮೊಮ್ಮೆ ಎಂಟು ಪಟ್ಟು ವ್ಯೆತ್ಯಾಸ ಬರುವುದನ್ನು ತೋರಿಸಿತು. ಕಡೆಗೆ ಸಂಶೋಧಕರು ಬೇರೆ ಪರೋಕ್ಷ ವಿಧಾನಗಳನ್ನು ಹುಡುಕಿಕೊಂಡರು. ಅದೆಂದರೆ ಸಾಮಾನ್ಯವಾಗಿ ಆ ರಾಜ್ಯದಲ್ಲಿ ಒಂದು ಅವಧಿಯಲ್ಲಿ ಸಾಯುತ್ತಿದ್ದ ಜನರ ಸರಾಸರಿ ಸಂಖ್ಯೆ ಎಷ್ಟು ಮತ್ತು ಈ ಕೋವಿಡ್ ಅವಧಿಯಲ್ಲಿ ಸತ್ತವರ ಸಂಖ್ಯೆ ಎಷ್ಟು ಎಂಬುದನ್ನು ಲೆಕ್ಕ ಹಾಕುವುದು. ಎರಡರ ಮಧ್ಯದ ವ್ಯತ್ಯಾಸವು ಕೋವಿಡ್‍ನಿಂದ ಸತ್ತವರ ಸಂಖ್ಯೆ ಎಂದು ತೀರ್ಮಾನಿಸುವುದು.

ಇತ್ತೀಚೆಗೆ ಹಿಂದೂ ಪತ್ರಿಕೆ ಪ್ರಕಟಿಸಿರುವ ವರದಿಯ ಪ್ರಕಾರ 2021 ಮಾರ್ಚ್ 1 ರಿಂದ ಮೇ 10 ರವರೆಗೆ 71 ದಿನಗಳ ಅವಧಿಯಲ್ಲಿ ಗುಜರಾತ್‍ನಲ್ಲಿ ಸರಾಸರಿ ಸಾವಿನ ಸಂಖ್ಯೆಗಿಂತ ನಲವತ್ತು ಸಾವಿರ ಹೆಚ್ಚಿಗೆ ಸಾವುಗಳಾಗಿವೆ. ಆದರೆ ಸರ್ಕಾರಿ ಅಂಕಿ ಅಂಶಗಳು ಹೇಳುವುದು ಕೇವಲ 4200 ಜನ ಸತ್ತಿದ್ದಾರೆ ಎಂದು! ಎಂದರೆ ಸಾವಿನ ಸಂಖ್ಯೆ ಅಧಿಕೃತ ಸಂಖ್ಯೆಯ ಹತ್ತರಷ್ಟಿದೆ. ಉತ್ತರಪ್ರದೇಶದ ಪರಿಸ್ಥಿತಿ ಸಹ ಭಯಾನಕವಾಗಿದೆ. ಗಂಗೆಯ ತಡಿಯಲ್ಲಿ ಸಾಲು ಸಾಲು ಚಿತೆಗಳು ಉರಿಯುತ್ತಿವೆ, ಗಂಗೆಯ ಉಡಿಯಲ್ಲಿ ಹೆಣಗಳು ತೇಲುತ್ತಿವೆ. ಇಂದಿಗಾಗಲೀ, ಅಥವಾ ಬರುತ್ತದೆ ಎನ್ನಲಾಗಿರುವ ಮೂರನೇ ಅಲೆಗಾಗಲೀ ಸರಿಯಾಗಿ ತಯಾರಾಗಬೇಕೆಂದರೆ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕು. ನಾಣ್ಣುಡಿಯ ಉಷ್ಟ್ರಪಕ್ಷಿಯಂತೆ ಮರಳಿನಲ್ಲಿ ತಲೆ ಹುದುಗಿಸಿಕೊಂಡರೆ ವಾಸ್ತವ ಪರಿಸ್ಥಿತಿ ಮಾಯವಾಗುವುದಿಲ್ಲ.

ರೋಗಿಯೊಬ್ಬ ಆಸ್ಪತ್ರೆಯಲ್ಲಿ ಸತ್ತಾಗ ಸಹ ಆ ಸಾವನ್ನು ಕೋವಿಡ್ ಸಾವು ಎಂದು ದಾಖಲಿಸದೇ ಹೃದಯಾಘಾತ, ಶ್ವಾಸಕೋಶ ಅಥವಾ ಮೂತ್ರಪಿಂಡದ ತೊಂದರೆ ಎಂದು ದಾಖಲಿಸಲು ಸಹ ಸರ್ಕಾರಗಳ ಒತ್ತಡವೇ ಕಾರಣ ಎನ್ನಲಾಗಿದೆ. ನಿಜವಾದ ಕಾರಣವನ್ನು ನಮೂದಿಸದಿದ್ದರೆ, ನೊಂದವರಿಗೆ ಪರಿಹಾರ ಸಿಗುವುದಕ್ಕೆ ತೊಂದರೆಯಾಗುವುದಿಲ್ಲವೇ ಎಂದು ನ್ಯಾಯಾಲಯಗಳು ಕೇಳಿವೆ. ಜೂನ್ 4 ರ ಫ್ರೆಂಟ್‍ಲೈನ್ ಪತ್ರಿಕೆಯು ಸರ್ಕಾರಿ ಅಂಕಿ ಅಂಶಗಳ ಪ್ರಕಾರ ದಾಖಲಾದ 2.5 ಲಕ್ಷ ಜನ ಸತ್ತಿದ್ದಾರೆ ಎಂಬ ಮಾಹಿತಿಯನ್ನು ನಿರಾಕರಿಸಿ, ಸರಿಯಾಗಿರಬಹುದಾದ ಸಂಖ್ಯೆ 6.5 ಲಕ್ಷ ಎನ್ನುತ್ತದೆ. ಸೆಪ್ಟೆಂಬರ್ ವೇಳೆಗೆ ಇದು 10 ಲಕ್ಷ ಮುಟ್ಟಬಹುದು ಎಂದಿದೆ.

ಮುಗಿಯದ ವ್ಯಾಕ್ಸಿನ್ ಸಮಸ್ಯೆ

ವ್ಯಾಕ್ಸಿನ್ ಬಗ್ಗೆ ಸಹ ಎಲ್ಲವೂ ಪಾರದರ್ಶಕವಾಗಿರಲಿಲ್ಲ. ಆದ್ದರಿಂದಲೇ ಜನರಲ್ಲಿ ‘ವ್ಯಾಕ್ಸಿನ್ ಹಿಂಜರಿಡಡತಿತ’ ದ ಸಮಸ್ಯೆ ಕಂಡು ಬಂದದ್ದು. ಅದೇನೇ ಇರಲಿ ಈಗ ಆ ಸಮಸ್ಯೆ ಇಲ್ಲ. ಈಗಿರುವುದು ವ್ಯಾಕ್ಸಿನ್‍ಗಳ ಲಭ್ಯತೆಯ ಸಮಸ್ಯೆ. ಜನ ಗಂಟೆಗಟ್ಟಲೆ ಕ್ಯೂ ನಲ್ಲಿ ನಿಲ್ಲುತ್ತಿದ್ದಾರೆ. ಆದರೆ 45-60 ವಯೋಮಾನದವರಿಗೆ ಅಥವಾ ಹಿರಿಯರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಇನ್ನು 18-45 ವಯಸ್ಸಿನವರಿಗೆ ಯಾವಾಗ ವ್ಯಾಕ್ಸಿನ್ ಸಿಗಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಉತ್ಪಾದಿಸಲಿಕ್ಕೆ ಸಾಧ್ಯವಿರುವುದು ಹೆಚ್ಚೆಂದರೆ ತಿಂಗಳಿಕೆ  ನಾಲ್ಕುವರೆ ಕೋಟಿ ವ್ಯಾಕ್ಸಿನ್‍ಗಳನ್ನು ಮಾತ್ರ. ಆ ಲೆಕ್ಕದಲ್ಲಿ ಭಾರತಕ್ಕೆ ಅಗತ್ಯವಾದ 180 ಕೋಟಿ ಲಸಿಕೆ ಸಿದ್ಧವಾಗುವುದಕ್ಕೆ ಎರಡು ವರ್ಷಗಳು ಕೂಡ ಸಾಕಾಗುವುದಿಲ್ಲ. ಆದ್ದರಿಂದಲೇ ಅತ್ಯಂತ ಶೀಘ್ರವಾಗಿ ವ್ಯಾಕ್ಸಿನ್ ಉತ್ಪಾದನೆಗೆ ಪರವಾನಗಿಯನ್ನು ಬೇರೆ ಕಂಪನಿಗಳಿಗೆ ಹಂಚಬೇಕು.

ಈ ದಿಶೆಯಲ್ಲಿ ತಡವಾಗಿಯಾದರೂ ಸರ್ಕಾರ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲವಕ್ಕೆ ವ್ಯಾಕ್ಸಿನ್ ಮಾಡಲು ಆದೇಶಿಸಿರುವುದು ಗಮನಾರ್ಹ. ಪೊಲಿಯೋ ವ್ಯಾಕ್ಸಿನ್ ತಯಾರಿಕೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದ ಬಿಬ್‍ಕಾಲ್ ಸಂಸ್ಥೆ ತಿಂಗಳಿಗೆ ಒಂದು ಕೋಟಿ ಲಸಿಕೆ ತಯಾರಿಸಲು ಸಿದ್ಧವಿದೆ. ಆದರೆ ಅದು ಲಭ್ಯವಾಗಿರುವುದು ಸೆಪ್ಟೆಂಬರ್ ವೇಳೆಗೆ ಮಾತ್ರ. ನಿವೃತ್ತ ಅಧಿಕಾರಿಗಳು ಮತ್ತು ಕೆಲವು ಸಂಸ್ಥೆಗಳು ಆರ್ಥಿಕ ಉದಾರೀಕರಣದ ನಂತರ ಅಳಿದುಳಿದಿರುವ ಏಳು ಸಾರ್ವಜನಿಕ ಉದ್ದಿಮೆಗಳನ್ನು ಈಗ ಸಕ್ರಿಯಗೊಳಿಸಿ ಅವುಗಳಿಗೆ ವ್ಯಾಕ್ಸಿನ್ ಮಾಡಲು ಪರವಾನಗಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಇದರ ಬಗ್ಗೆ ಅದೇ ನ್ಯಾಯಾಲಯ 2016 ರಲ್ಲೇ ಒಂದು ತೀರ್ಪು ನೀಡಿದ್ದರೂ ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕುತ್ತಾ ಭಾರತ ಸರ್ಕಾರ ಈಗ ತೀವ್ರವಾದ ಕಷ್ಟಕ್ಕೆ ಸಿಲುಕಿಕೊಂಡಿದೆ.

ರಷ್ಯಾದ ಸ್ಪುಟ್‍ನಿಕ್ ಲಸಿಕೆಯನ್ನು ಭಾರತದಲ್ಲಿ ತಯಾರಿಸಲು ರೆಡ್ಡಿ ಲ್ಯಾಬ್ಸ್ ಎಂಬ ಕಂಪನಿ ಒಪ್ಪಂದ ಮಾಡಿಕೊಂಡಿದೆ ಮತ್ತು ಒಂದೇ ಚುಚ್ಚುಮದ್ದು ಸಾಕಾಗುವ ಲಸಿಕೆಯನ್ನೂ ಉತ್ಪಾದಿಸಲು ರಷ್ಯಾ ಸಿದ್ಧವಿದೆ. ಹೀಗಾಗಿ ಆದಷ್ಟು ಬೇಗ ದೇಶದಲ್ಲೇ ಉತ್ಪಾದಿಸಲು ಸರ್ಕಾರ ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು.

ಆದಷ್ಟು ಬೇಗ ಜನರಿಗೆ ವ್ಯಾಕ್ಸಿನ್ ಆಗಬೇಕು. ಈಗ ಇಡೀ ದೇಶದಲ್ಲಿ ಹೆಚ್ಚೆಂದರೆ 10 ಕೋಟಿ ಜನರಿಗೆ ಲಸಿಕೆಗಳನ್ನು ನೀಡಲಾಗಿದೆಯಂತೆ. ಇದರಲ್ಲಿ ಎರಡು ಬಾರಿ ತೆಗೆದುಕೊಂಡಿರುವವರೂ ಇದ್ದಾರೆ. ಮತ್ತೆ ಇವರೆಲ್ಲ ನಗರ ಪ್ರದೇಶದ ವಯಸ್ಸಾದ ಜನ ಅಷ್ಟೇ. ವ್ಯಾಕ್ಸಿನ್ ಹಳ್ಳಿಗಳನ್ನು ಮುಟ್ಟಿರುವುದು ಬಹಳ ಕಡಿಮೆ. ಮತ್ತು ಯುವಕರು ಹಾಗೂ ಮಧ್ಯವಯಸ್ಕರಿಗೆ ಲಸಿಕೆ ಹಾಕಲಾಗದಿದ್ದರೆ ಮುಂದಿನ ಅಲೆಗಳಲ್ಲಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಆದ್ದರಿಂದ ಸಿಗುವ ಲಸಿಕೆಗಳನ್ನು ಬಹಳ ವಿವೇಕದಿಂದ ಬಳಸಬೇಕು. ರೋಗಕ್ಕೆ ತುತ್ತಾಗುವ ಸಾಧ್ಯತೆಯಿರುವ ಮುದುಕರಿಗೆ ಲಸಿಕೆಯನ್ನು ನಿರಾಕರಿಸುವುದು ಅಮಾನವೀಯ, ಆದರೆ ಯುವಕರಿಗೆ ಇಲ್ಲದಂತೆ ಮಾಡುವುದೂ ಅವಿವೇಕ. ನಗರ ಪ್ರದೇಶಗಳಲ್ಲಿ ಲಸಿಕೆ ಹಂಚಿಕೆಗಳನ್ನು ಹೆಚ್ಚಿಸಿದರೆ, ಎಲ್ಲೆಡೆ ಹರಡುವ ವೇಗವು ಕಡಿಮೆಯಾಗುತ್ತದೆ ಎಂಬ ವಾದವೂ ಇದೆ. ಎಲ್ಲ ಅಂಶಗಳನ್ನೂ ಗಮನಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕಾಗಿದೆ.

ಬೇಕಾಗಿದೆ ಸಮರ್ಥ ಲಸಿಕೆ ರಾಯಭಾರ

ಮೂರನೇ ಅಲೆ ಅಕ್ಟೋಬರ್ ತಿಂಗಳಲ್ಲಿ ಬರಬಹುದು ಎಂದು ಅಂದಾಜಿಸಲಾಗಿದೆ. ವಿಶ್ವಸಂಸ್ಥೆಯ ವೈಜ್ಞಾನಿಕ ಸಲಹೆಗಾರರಾದ ಸೌಮ್ಯ ಸ್ವಾಮಿನಾಥನ್ ಹೇಳುವುದು ಅನೇಕ ಅಲೆಗಳು ಬರುವ ಸಾಧ್ಯತೆ ಇದೆ, ಇಂಥ ಜಾಗತಿಕ ಸಾಂಕ್ರಾಮಿಕಗಳ ಗುಣವೇ ಹಾಗೆ ಎಂದು. ಈ ಬಾರಿ ಮಕ್ಕಳೇ ರೋಗಕ್ಕೆ ಹೆಚ್ಚಿಗೆ ತುತ್ತಾಗುತ್ತಾರೆ ಎನ್ನುವುದಕ್ಕೆ ವೈಜ್ಞಾನಿಕ ಆಧಾರವೇನೂ ಇಲ್ಲ. ಆದರೆ ಅವರಿಗೆ ಆದಷ್ಟು ಬೇಗ ವ್ಯಾಕ್ಸಿನ್ ಸಿಗಬೇಕು. ಈ ಹಿನ್ನಲೆಯಲ್ಲಿ ಸ್ವತಃ ತನ್ನ ನೆಲದಲ್ಲಿನ ಲಸಿಕೆ ಉತ್ಪಾದನೆ ಬೇಗ ಹೆಚ್ಚಿನ ಪ್ರಮಾಣದಲ್ಲಿ ಆಗುವ ಸಾಧ್ಯತೆ ಇಲ್ಲವಾದ್ದರಿಂದ ಭಾರತ ಸರ್ಕಾರವು ಬೇರೆ ದೇಶಗಳಿಂದ ವ್ಯಾಕ್ಸಿನ್ ಪಡೆಯುವ ಕಡೆಗೆ ಕೂಡಲೇ ಗಮನಹರಿಸಬೇಕಾಗುತ್ತದೆ.

ಅನೇಕ ಮುಂದುವರೆದ ರಾಷ್ಟ್ರಗಳು ತಮ್ಮ ಅಗತ್ಯಕ್ಕಿಂತ ಹೆಚ್ಚಿಗೆ ಮೂರು ಪಟ್ಟು ಐದು ಪಟ್ಟು ವ್ಯಾಕ್ಸಿನ್‍ಗಳನ್ನು ದಾಸ್ತಾನು ಮಾಡಿಕೊಂಡಿವೆ. ಯಾವ ಕಂಪನಿ ವ್ಯಾಕ್ಸಿನ್‍ಅನ್ನು ಬೇಗ ತಯಾರಿಸಬಹುದು ಎಂಬುದು ಒಂದು ವರ್ಷದ ಹಿಂದೆ ಗೊತ್ತಿಲ್ಲದೇ ಇದ್ದುದರಿಂದ ಮತ್ತು ಅದರಲ್ಲಿ ಪರಿಣಾಮಕಾರಿ ಯಾವುದು ಎಂದು ಸ್ಪಷ್ಟವಿಲ್ಲದ್ದರಿಂದ ಶ್ರೀಮಂತ ರಾಷ್ಟ್ರಗಳು ಕಂಡ ಕಂಡಲ್ಲೆಲ್ಲಾ ವ್ಯಾಕ್ಸಿನ್‍ಗೆ ಮುಂಗಡ ಕೊಟ್ಟು ಕೂತವು. ಭಾರತವೇನೂ ಭಿಕ್ಷುಕ ರಾಷ್ಟ್ರವಲ್ಲ. ಮನಸ್ಸು ಮಾಡಿದ್ದರೆ ನಾವೂ ಸಹ ಬಹಳ ಹಿಂದೆಯೇ ಜಾಗತಿಕ ಮಟ್ಟದ ಕಂಪನಿಗಳಿಗೆ ಮುಂಗಡ ನೀಡಿ ಒಂದಷ್ಟು ಕೋಟಿ ಲಸಿಕೆಗಳನ್ನು ತುರ್ತಿಗೆ ಎಂದು ಕಾಯ್ದಿರಿಸಿಕೊಳ್ಳಬಹುದಾಗಿತ್ತು.

ಈಗ ಅಮೆರಿಕಾ ಎಂಟು ಕೋಟಿ ವ್ಯಾಕ್ಸಿನ್‍ಗಳನ್ನು ಉಳಿದ ರಾಷ್ಟ್ರಗಳಿಗೆ ಹಂಚಲು ಸಿದ್ಧವಾಗಿದೆ. ಭಾರತ ಪ್ರಯತ್ನಪಟ್ಟರೆ ಅದರಲ್ಲಿ ಆರು ಕೋಟಿ ವ್ಯಾಕ್ಸಿನ್ ಸಿಗಬಹುದಂತೆ. ಭಾರತ ಮುಂದುವರೆದ ರಾಷ್ಟ್ರಗಳೊಡನೆ ಜಾಣ್ಮೆಯಿಂದ ವ್ಯವಹರಿಸಬೇಕು. ಇದಕ್ಕೆ ದೇಶದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಾಯಕರನ್ನು, ಹಿಂದಿನ ರಾಜತಂತ್ರಜ್ಞರನ್ನು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಲೋಚಿಸಬೇಕು. ಈ ವಿವೇಕ, ಜಾಣ್ಮೆ ಮೋದಿ ನೇತೃತ್ವದ ಸರ್ಕಾರಕ್ಕಿದೆಯೇ ಎಂಬುದು ಮುಖ್ಯ ಪ್ರಶ್ನೆ.

ಎಂದರೆ ಮೂರನೇ ಅಲೆ ಬರುವ ವೇಳೆಗೆ ದೇಶದೊಳಗೆ ಕೊನೆಯ ಪಕ್ಷ 15-20 ಕೋಟಿ ಲಸಿಕೆ ಲಭ್ಯವಿದ್ದು, ಜೊತೆಗೆ ಅಮೆರಿಕಾ, ರಷ್ಯಾಗಳಿಂದ ಕೆಲವು ಕೋಟಿ ಲಸಿಕೆ ಸಿಗುತ್ತದೆ. ಆ ಹೊತ್ತಿಗೆ ಇನ್ನಷ್ಟು ಹೊಸ ಕಂಪನಿಗಳ ಲಸಿಕೆ ಸಿಗಬಹುದು.

ಏತನ್ಮಧ್ಯೆ ಕೇಂದ್ರವು ಲಸಿಕೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನೀವೇ ಖರೀದಿಸಿ ಎಂದು ರಾಜ್ಯ ಸರ್ಕಾರಗಳ ಹೆಗಲಿಗೆ ಭಾರವನ್ನು ವರ್ಗಾಯಿಸಿ ತಾನು ಸುಮ್ಮನೆ ಕುಳಿತಿರುವುದು ತೀರ ಬೇಜವಾಬ್ದಾರಿ ನಡೆ ಮತ್ತು ಅದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥದ್ದು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಅನೇಕ ರಾಜ್ಯಗಳು ಅನಾರೋಗ್ಯಕರ ಪೈಪೋಟಿಯಲ್ಲಿ ಬೀಳುತ್ತವೆ. ಆಗ ಬೆಲೆ ಹೆಚ್ಚಳವಾಗುತ್ತದೆ. ಅಲ್ಲದೆ ಅನೇಕ ಬೃಹತ್ ಕಂಪನಿಗಳ ನಿಯಮದ ಪ್ರಕಾರ ಅವರು ರಾಷ್ಟ್ರೀಯ ಸರ್ಕಾರದೊಂದಿಗೆ ಮಾತ್ರ ಲಸಿಕೆ ವ್ಯವಹಾರ ನಡೆಸಲು ಸಾಧ್ಯ. ಇದೇ ಕಾರಣವನ್ನು ಮುಂದೊಡ್ಡಿ ಕಳೆದವಾರ ಫೈಸರ್ ಮತ್ತು ಮಾಡರ್ನ ಕಂಪನಿಗಳು ಪಂಜಾಬ್ ಸರ್ಕಾರಕ್ಕೆ ಲಸಿಕೆ ನೀಡಲು ನಿರಾಕರಿಸಿವೆ. ಅಲ್ಲದೆ ಈ ಕ್ರಮದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಮಣ್ಣುಪಾಲಾಗುತ್ತಿದೆ.

ಈಗಲೂ ತಡವಾಗಿಲ್ಲ. ಭಾರತ ಸರ್ಕಾರವೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಕ್ಕೂಟದ ಪರವಾಗಿ ಅಗ್ಗದ ದರದಲ್ಲಿ ಗುಣಮಟ್ಟದ ಲಸಿಕೆ ಖರೀದಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯೋಚಿತವಾಗಿ ಹಂಚಬೇಕು. ಇಲ್ಲದಿದ್ದರೆ ಆರ್ಥಿಕವಾಗಿ ದುರ್ಬಲವಾಗಿರುವ ರಾಜ್ಯಗಳು ವ್ಯಾಕ್ಸಿನ್ ಗಳಿಸಿಕೊಳ್ಳುವ ಓಟದಲ್ಲಿ ಹಿಂದೆ ಬೀಳುತ್ತವೆ. ಭಾರತದ ಯಾವುದೇ ಭಾಗದಲ್ಲಿ ಕೋವಿಡ್ ಸಮರ್ಪಕವಾಗಿ ನಿಯಂತ್ರಣವಾಗದಿದ್ದರೆ ಭವಿಷ್ಯದಲ್ಲಿ ಇಡೀ ದೇಶ ಮತ್ತೆ ಅಪಾಯಕ್ಕೆ ತುತ್ತಾಗುತ್ತದೆ.

ಗ್ರಾಮೀಣ ಆರೋಗ್ಯ ವ್ಯವಸ್ಥೆ ಬಲಗೊಳ್ಳಲಿ

ನಗರಗಳಲ್ಲೂ ಹಾಸಿಗೆ, ಆಮ್ಲಜನಕ ಎಲ್ಲವೂ ಕೊರತೆಯಲ್ಲಿದೆ. ಇಷ್ಟಾಗಿಯೂ ಬಲಿಷ್ಟರು, ದನಿ ಇರುವವರು ನಗರಗಳಲ್ಲಿ ಇರುವುದಂದ ಅಲ್ಲಿ ಒಂದಿಷ್ಟು ಸೌಲಭ್ಯಗಳಾದರೂ ಸಿಕ್ಕಿವೆ. ಆದರೆ ಕೊರೊನಾ ಈಗ ಗ್ರಾಮೀಣ ಪ್ರದೇಶದತ್ತ ಧಾವಿಸಿಬಿಟ್ಟಿದೆ. ಸಣ್ಣ ಪುಟ್ಟ ಹಳ್ಳಿಗಳಲ್ಲೂ ಎಂಟು ಹತ್ತು ಜನ ಸತ್ತಿದ್ದಾರೆ. ಆದರೆ ಅಲ್ಲೆಲ್ಲೂ ಸೂಕ್ತ ಆರೋಗ್ಯ ಸೌಲಭ್ಯಗಳಿಲ್ಲ. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮ ಸರ್ಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಲಾಭದಾಹಿ ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕಿ ಕೂಡಿಸಿದ್ದಲ್ಲದೆ ಅಸ್ತಿತ್ವದಲ್ಲಿದ್ದ ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡವಿದವು. ಉತ್ತರಪ್ರದೇಶ, ಬಿಹಾರಗಳಲ್ಲಂತೂ ಪರಿಸ್ಥಿತಿ ಸಂಪೂರ್ಣವಾಗಿ ಅಧ್ವಾನಗೊಂಡಿದೆ.

2005 ಕ್ಕೆ ಹೋಲಿಸಿದರೆ ಈಗ ಜನಸಂಖ್ಯೆ ಹೆಚ್ಚಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಘಟಕಗಳ ಸಂಖ್ಯೆ ಕುಸಿದಿದೆ ಎಂಬುದು ಆಘಾತಕಾರಿ ಅಂಶ. ಕೆಲವು ಕಡೆ ಆಸ್ಪತ್ರೆಗಳಲ್ಲಿ ಬೆರಣಿ, ಹುಲ್ಲುಗಳನ್ನು ಶೇಖರಣೆ ಮಾಡಿರುವ ಚಿತ್ರಗಳನ್ನು ಟಿ.ವಿ. ಚಾನೆಲ್‍ಗಳು ತೋರಿಸುತ್ತಿವೆ. ಈಗಲೋ ಆಗಲೋ ಕುಸಿಯುತ್ತಿವೆ ಎಂಬಂಥ ಕಟ್ಟಡಗಳು! ಕರ್ನಾಟಕದ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲ ಎಂಬುದು ನಿಜ. ಆದರೆ ಇಲ್ಲಿ ಸಹ ತುರ್ತಾಗಿ ಹಾಸಿಗೆಗಳು, ಆಮ್ಲಜನಕ ಸರಬರಾಜು, ಸಿಬ್ಬಂದಿ ಹಾಗೂ ಔಷಧಗಳು ಅಗತ್ಯವಾಗಿವೆ. ಬಹುತೇಕ ಜಿಲ್ಲಾ ಆಸ್ಪತ್ರೆಗಳ ಸ್ಥಿತಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ಹೇಳುವುದಾದರೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ, ಈ ಭೀಕರ ಪರಿಸ್ಥಿತಿಯನ್ನು ಎದುರಿಸಲು ಯಾವ ರೀತಿಯಲ್ಲೂ ಸಿದ್ಧವಿಲ್ಲ. ಇನ್ನು ತಾಲೂಕು, ಹೋಬಳಿಗಳ ಪರಿಸ್ಥಿತಿ, ಅದರಲ್ಲೂ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕಗಳಲ್ಲಿ ಇನ್ನೂ ಭೀಕರವಾಗಿದೆ. ಸರ್ಕಾರ ಕೂಡಲೇ ಇಲ್ಲೆಲ್ಲಾ ವ್ಯವಸ್ಥೆಯನ್ನು ಬಲಪಡಿಸಲು ಧಾವಿಸಬೇಕು. ಇದು ಒಂದೆರಡು ವಾರ, ತಿಂಗಳಲ್ಲಿ ಆಗಬೇಕಾದ ಕೆಲಸ. ಹಾಗಾದರೆ ಮಾತ್ರ ನಾವು ಒಂದಿಷ್ಟು ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬಹುದು ಮತ್ತು ಮೂರನೇ ಅಲೆಯನ್ನೂ ಒಂದು ಮಟ್ಟಿಗೆ ಸಮರ್ಥವಾಗಿ ಎದುರಿಸಬಹುದು.

ಬಡಬಗ್ಗರನ್ನು ಬದುಕಿಸಿ

ಸೋಂಕು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ ನಿಜ. ಆದರೆ ಅಪೌಷ್ಟಿಕತೆ, ಹಸಿವುಗಳಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಎಲ್ಲ ಊರುಗಳಲ್ಲೂ ಅಗತ್ಯವನ್ನು ಗುರುತಿಸಿ ಬೇಯಿಸಿದ ಆಹಾರವನ್ನು, ಧಾನ್ಯಗಳನ್ನು ಹಾಗೂ ಖರ್ಚಿಗೆ ಒಂದಿಷ್ಟು ಹಣವನ್ನು ವಿತರಿಸಲೇಬೇಕು. ಅನೇಕ ಕಡೆ ಲಕ್ಷಾಂತರ ದಿನಗೂಲಿಗಳು, ತಳ್ಳುಗಾಡಿಯವರು, ಸಣ್ಣ ಅಂಗಡಿಗಳವರು, ದರ್ಜಿಗಳು, ಅಗಸರು ಚಪ್ಪಲಿ ಹೊಲೆಯುವವರು ಲಾಕ್‍ಡೌನ್‍ನಿಂದ ಕಂಗೆಟ್ಟಿದ್ದಾರೆ. ರಿಕ್ಷಾ ಚಾಲಕರು ಅಷ್ಟೇಕೆ ಖಾಸಗಿ ಶಾಲಾ ಶಿಕ್ಷಕರು ಸಹ ಆದಾಯವಿಲ್ಲದೆ ರಸ್ತೆಗೆ ಬೀಳುತ್ತಿದ್ದಾರೆ. ಇವರೆಲ್ಲರಿಗೂ ನೆರವು ನೀಡಲು ಸರ್ಕಾರ ಮುಂದಾಗಬೇಕು. ಇದೀಗ ಸರ್ವೋಚ್ಚ ನ್ಯಾಯಾಲಯ ರೇಶನ್ ಕಾರ್ಡ್ ಇರಲಿ ಬಿಡಲಿ ಎಲ್ಲ ವಲಸೆ ಕಾರ್ಮಿಕರಿಗೂ ಧಾನ್ಯ ವಿತರಿಸಿ ಎಂದು ಚಾಟಿ ಬೀಸಿದೆ. ಆದರೆ ಬಡತನ ರೇಖೆಯ ಕೆಳಗಿರುವವರಿಗೆ ನಗದು ವರ್ಗಾವಣೆಯಾಗುವುದು ಅತ್ಯಗತ್ಯ. ಮತ್ತೆ ಅನೇಕ ಕಡೆ ನರೇಗಾ ನಿಂತು ಹೋಗಿದೆ. ನಿಜವಾಗಲೂ ಈಗಿರುವ ಅವಶ್ಯಕತೆ ನರೇಗಾವನ್ನು ವಿಸ್ತರಿಸುವುದು, ಕೂಲಿಯನ್ನು ಹೆಚ್ಚಿಸುವುದು.

ಇದಕ್ಕೆ ಸರ್ಕಾರವು ಹಣ ಇಲ್ಲ ಎಂಬ ಕುಂಟು ನೆಪವನ್ನು ನೀಡಬಾರದು. ಇಂಥ ಸಂಕಷ್ಟದಲ್ಲೂ ಬೆಂಗಳೂರಿನ ರೋಡುಗಳಿಗೆ ಅಗತ್ಯವಿಲ್ಲದೆಡೆ ಕೂಡ ಡಾಂಬರು ಹಾಕುವ ಪ್ರಕ್ರಿಯೆಯನ್ನು ನೋಡಿದಾಗ ಸಂಕಟವಾಗುತ್ತದೆ, ಆಕ್ರೋಶ ಮೂಡುತ್ತದೆ. ವಿಪತ್ತಿನ ಸಂದರ್ಭದಲ್ಲಿ, ಮಹಾಯುದ್ಧದ ಸಂದರ್ಭದಲ್ಲಿ ನಮ್ಮ ಆದ್ಯತೆಗಳು ಬದಲಾಗಬೇಕು. ಎಲ್ಲ ಇಲಾಖೆಗಳಲ್ಲೂ ತೀರಾ ಅವಶ್ಯವಾದ ಖರ್ಚುಗಳನ್ನು ಬಿಟ್ಟರೆ ಉಳಿದ ಎಲ್ಲ ವೆಚ್ಚವನ್ನೂ ಕಡಿತಗೊಳಿಸಿ, ಸಂಪನ್ಮೂಲವನ್ನು ಆರೋಗ್ಯ ಸೌಲಭ್ಯ ಮತ್ತು ಬಡವರÀ ನೆರವಿಗೆ ವಿನಿಯೋಗಿಸಬೇಕು.

ದೇಶ ಸ್ಮಶಾನವಾಗುತ್ತಾ ಹೋದರೆ ನಿಮ್ಮ ರಸ್ತೆ, ಕಟ್ಟಡ ಇದೆಲ್ಲಾ ಯಾರಿಗೆ ಬೇಕು. ಆದರೆ ಇಂತಹ ಸಂದರ್ಭದಲ್ಲಿ ಇಪ್ಪತ್ತು ಸಾವಿರ ಕೋಟಿವೆಚ್ಚದಲ್ಲಿ ದೆಹಲಿಯನ್ನು ಪುನರ್‍ನಿರ್ಮಿಸುತ್ತೇವೆ, ನಾಯಕರ ವಾಸಕ್ಕೆ ಹೊಸ ಅರಮನೆಗಳನ್ನು ಕಟ್ಟುತ್ತೇವೆ ಎಂದು ಹೊರಟಿರುವ ಪ್ರಧಾನಿಗಳು ಇಡೀ ದೇಶಕ್ಕೆ ಕೆಟ್ಟ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ಇವೆಲ್ಲಾ ಕೂಡಲೇ ನಿಂತು ಸಂಪತ್ತಿನ ಸದ್ಬಳಕೆಯಾಗಬೇಕು.

ಆಡಳಿತದ ವೈಖರಿ ಬದಲಾಗಲೇಬೇಕು. ಇಂಥ ರೋಗ ಬಂದು ವಕ್ಕರಿಸುವುದೂ ಒಂದೇ, ಮಹಾಯುದ್ಧವೊಂದನ್ನು ಎದುರಿಸುವುದೂ ಒಂದೇ! ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳನ್ನೂ, ನಾಡಿನ ಶ್ರೇಷ್ಠ ಚಿಂತಕರನ್ನು ತೊಡಗಿಸಿಕೊಂಡ ಒಂದು ರಾಷ್ಟ್ರೀಯ ಸರ್ಕಾರದ ರಚನೆಯಾಗಬೇಕು ಎಂಬ ಅಭಿಪ್ರಾಯವಿದೆ. ಅದೆಲ್ಲಾ ಆಗುವುದು ಸಾಧ್ಯವಿಲ್ಲ ಬಿಡಿ. ಆದರೆ ಎಲ್ಲಾ ಕ್ಷುದ್ರ ಲೆಕ್ಕಾಚಾರ, ಕಾಲೆಳೆಯುವ ಪ್ರವೃತ್ತಿ, ಅಧಿಕಾರ ದಾಹಗಳನ್ನು ಮೀರಿದ ಒಂದು ಶ್ರೇಷ್ಠ ಮುತ್ಸದ್ದಿತನವನ್ನು, ರಾಷ್ಟ್ರಪುರುಷರ-ಸ್ಟೇಟ್ಸ್‍ಮನ್-ಗುಣವನ್ನು ನಾಯಕರು ತೋರಿಸಬೇಕಲ್ಲವೇ? ಇದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳನ್ನು ದೂರಿ ಫಲವಿಲ್ಲ. ಈ ಮುಂದೊಡಗು ಆಳುವ ಪಕ್ಷದ ಕಡೆಯಿಂದಲೇ ಬರಬೇಕು. ಆದರೆ ನಾವು ನೋಡುತ್ತಿರುವುದು ತೀರಾ ನಿರಾಶಾದಾಯಕ ನಡವಳಿಕೆಯನ್ನು.

ಈಗಲೂ ಪ್ರಧಾನಿಗಳು ಮತ್ತು ಆಳುವ ಪಕ್ಷ ಉತ್ತರ ಪ್ರದೇಶದ ಚುನಾವಣೆಯನ್ನು ಗೆಲ್ಲುವುದು ಹೇಗೆ ಎಂದು ವ್ಯೂಹರಚನೆ ಮಾಡಲು ಸಭೆ ಸೇರುತ್ತಾರೆ! ಏನೇ ಆಗಲಿ ‘ಸೆಂಟ್ರಲ್ ವಿಸ್ತ’ ಎಂಬ ಬಿಳಿ ಆನೆ ಯೋಜನೆಯನ್ನು ಕೈ ಬಿಡುವುದಿಲ್ಲ ಎನ್ನುತ್ತಾರೆ. ಕಾಂಗ್ರೆಸ್ ವಿರುದ್ಧ ಖೋಟಾ ಟೂಲ್‍ಕಿಟ್ ಬಿಡುಗಡೆ ಮಾಡುತ್ತಾರೆ. ಟ್ವಿಟರ್ ಸಂಸ್ಥೆಯ ಮೇಲೆ ದಾಳಿ ಮಾಡುತ್ತಾರೆ. ಕೆಲವರು ನ್ಯಾಯಾಲಯಗಳ ನಿರ್ದೇಶನದ ವಿರುದ್ಧ ಧಿಮಾಕಿನಿಂದ ಹರಿಹಾಯುತ್ತಾರೆ! ಹೀಗಾದರೆ ಈ ದೇಶಕ್ಕೆ ಭವಿಷ್ಯವಿದೆಯೇ? ಇನ್ನೊಂದು ಕಡೆ ರಾಜ್ಯದಲ್ಲಿ ಯಡಿಯೂರಪ್ಪ ಪರ-ವಿರೋಧಿ ಬಣಗಳು ಕುರ್ಚಿಗೆ ಕಿತ್ತಾಟ ನಡೆಸಿವೆ. ಯುದ್ಧದ ಮಧ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಕಿತಾಪತಿ ನಡೆದಿದೆ.

ಇದು ಹೀಗಾಗಲು ಬಿಡಬಾರದು. ಈಗಲಾದರೂ ನಾಯಕರು ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ, ಇಡಿಯ ದೇಶವನ್ನು ತೊಡಗಿಸಿಕೊಂಡು ಕೋವಿಡ್ ವಿರುದ್ಧ ಕದನಕ್ಕೆ ಇಳಿಯಬೇಕು. ಇಲ್ಲದಿದ್ದರೆ ಚರಿತ್ರೆ ಈ ದುರಂತಕ್ಕೆ ಕಾರಣರಾದ ಯಾರನ್ನೂ ಕ್ಷಮಿಸುವುದಿಲ್ಲ!

ಕೋವಿಡ್ ನಿಯಂತ್ರಣಕ್ಕೆ ಮುಂಬೈ ಮಾದರಿ

ಮುಂಬೈ ಎರಡು ಕೋಟಿಗೂ ಮಿಗಿಲಾದ ಜನಸಂಖ್ಯೆ ಇರುವ ಊರು ಮತ್ತು ಇಲ್ಲಿನ ಧಾರಾವಿ ಎಂಬ ಪ್ರದೇಶವು ವಿಶ್ವದಲ್ಲೇ ಅತಿದೊಡ್ಡ ಕೊಳೆಗೇರಿ. ಇಕ್ಕಟ್ಟಾದ ಗಲ್ಲಿಗಳು, ಮನೆಗಳು ಇರುವ ಇಲ್ಲಿ ಜನ ಕೋವಿಡ್-19 ರಿಂದ ಮಿಡತೆಗಳಂತೆ ಸಾಯುತ್ತಾರೆ ಎಂದೇ ತಜ್ಞರು ಸಹ ನಿರೀಕ್ಷಿಸಿದ್ದರು.

ಆದರೆ ಮುಂಬೈ ಮೆಟ್ರೊಪಾಲಿಟನ್ ಕಾಪೋರೇಶನ್ ಅತ್ಯುತ್ತಮ ರೀತಿಯಲ್ಲಿ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸರ್ವೋಚ್ಚ ನ್ಯಾಯಾಲಯ ಸಹ ಮುಂಬೈ ಮಾದರಿಯನ್ನು ಎತ್ತಿ ಹಿಡಿದಿದೆ.

ಕಳೆದ ವರ್ಷ ಮೊದಲ ಅಲೆ ಅಪ್ಪಳಿಸಿದಾಗ ಬಿ.ಎಂ.ಸಿ ಅಡಿಯಲ್ಲಿ 40 ಆಂಬ್ಯುಲೆನ್ಸ್ ಹಾಗೂ 4 ಶವಸಾಗಣೆ ವಾಹನಗಳಿದ್ದವು. ಈಗ 675 ಆಂಬ್ಯುಲೆನ್ಸ್ ಹಾಗೂ 400 ಶವಸಾಗಣೆ ವಾಹನಗಳಿವೆ. ಕೊಳೆಗೇರಿ ನಿವಾಸಿಗಳಲ್ಲಿ ಪರೀಕ್ಷೆಯಲ್ಲಿ ಪಾಸಿಟಿವ್ ಆದವರನ್ನು ಇರಿಸಲು 187 ಹೋಟೆಲ್‍ಗಳ 47000 ಕೊಠಡಿಗಳನ್ನು ಸರ್ಕಾರ ವಶಕ್ಕೆ ಪಡೆದು ಒಂದೂವರೆ ಲಕ್ಷ ಜನರನ್ನು ಸ್ಥಳಾಂತರ ಮಾಡಿತ್ತು.

ಎಲ್ಲಾ ದೊಡ್ಡ ಖಾಸಗಿ ಆಸ್ಪತ್ರೆಗಳನ್ನು ತನ್ನ ನಿಯಂತ್ರಣಕ್ಕೆ ತಂದುಕೊಂಡ ಬಿಎಂಸಿ ಎಲ್ಲಾ ಹಾಸಿಗೆಗಳ ಶೇಕಡಾ 80 ಭಾಗವನ್ನು ಹಾಗೂ ಶೇಕಡಾ 100 ರಷ್ಟು ಐಸಿಯು ಹಾಸಿಗೆಗಳನ್ನು ಕೋವಿಡ್‍ಗೆಂದು ತಾನೇ ಕೈವಶಮಾಡಿಕೊಂಡಿತು.

ನಗರದಾದ್ಯಂತ ಬೃಹತ್ ಗಾತ್ರದ ಒಂಬತ್ತು ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿ ಅವುಗಳನ್ನು ಮೊದಲ ಅಲೆಯ ನಂತರವೂ ಸುಸಜ್ಜಿತವಾಗಿ ಉಳಿಸಿಕೊಳ್ಳಲಾಯಿತು. ಬೃಹತ್ತಾದ ಕೋವಿಡ್ ಕೇರ್ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಹವಾನಿಯಂತ್ರಿತವಾಗಿದ್ದು, ಸದಾ ಆಮ್ಲಜನಕ ವ್ಯವಸ್ಥೆಯಿರುವ 78 ಸಾವಿರ ಹಾಸಿಗೆಗಳು ಇಲ್ಲಿ ಯಾವಾಗಲೂ ಲಭ್ಯ ಇವೆ.

ಈ ಮಾದರಿಯ ಹಿಂದೆ ಹಗಲಿರುಳು ದುಡಿದ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್‍ರ ಒಂದು ವರ್ಷ ದೀರ್ಘಕಾಲದ ದಣಿವರಿಯದ ನಾಯಕತ್ವವಿದೆ. ಈ ಮಾದರಿ ಇಂದು ಮಹಾರಾಷ್ಟ್ರದಾದ್ಯಂತ ಮಾತ್ರವಲ್ಲ, ದೇಶದಾದ್ಯಂತ ಹೆಸರುವಾಸಿಯಾಗಿದೆ.

Leave a Reply

Your email address will not be published.