ಕೋವಿಡ್ ಕೊನೆಗೆ ದಾರಿ ಯಾವುದಯ್ಯ…?

ಯೋಜನೆಯಂತೆ ಎಲ್ಲವೂ ನಡೆದರೆ ಈ ವರ್ಷದ ಕೊನೆಗೆ ಅಥವಾ 2021ರ ಮಧ್ಯಭಾಗದಲ್ಲಿ ಲಸಿಕೆ ಸಿದ್ಧವಾಗುತ್ತದೆ. ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದವರಿಗೆ ಲಸಿಕೆ ನೀಡಿ ಪಾಸಿಟಿವ್ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ ಮುಂದುವರೆಸಿದರೆ ಕೋವಿಡ್ ಗೆ ಕಡಿವಾಣ ಹಾಕಬಹುದು.

ಹೇಮಂತ್ ಎಲ್.

ಕೊರೋನಾ ಯಾವಾಗ ಮರೆಯಾಗುತ್ತದೆ, ಜಗತ್ತು ಯಾವಾಗ ಸಹಜ ಸ್ಥಿತಿಗೆ ಮರಳುತ್ತದೆ? 2020ರ ಬಹುಮುಖ್ಯ ಪ್ರಶ್ನೆ ಇದು. ಕೊರೋನಾ ನಮ್ಮಲ್ಲೇ ನಮ್ಮೊಳಗೊಂದಾಗಿ ಉಳಿಯುತ್ತದೆಂದು ವಿಜ್ಞಾನಿಗಳು ಮತ್ತು ಪರಿಣತರು ಹೇಳಿಯಾಗಿದೆ. ಇನ್ನೇನಿದ್ದರೂ ಅದರ ಹಾವಳಿಯನ್ನು ನಿಯಂತ್ರಿಸಿ ಆಗಬಹುದಾದ ಹಾನಿಯನ್ನು ಸ್ವಲ್ಪ ಮಟ್ಟಿಗೆ ತಡೆಯುವುದಷ್ಟೇ ಉಳಿದಿರುವ ದಾರಿ.

ವಿಶ್ವದ ಹಲವೆಡೆ ಕೊರೋನಾ ಲಸಿಕೆಯ ವಿಚಾರವಾಗಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಮಾಧ್ಯಮಗಳ ವರದಿಗಳನ್ನು ನೋಡಿದ ಜನಸಾಮಾನ್ಯರು ಇನ್ನೇನು ಕೊರೋನಾಗೆ ಔಷಧಿ ಕಂಡುಹಿಡಿದುಬಿಟ್ಟರು ಎಂದು ಭ್ರಮಿಸಿ ಕೊಂಚ ಅಲಕ್ಷಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಕೊರೋನಾಗೆ ನಿರ್ದಿಷ್ಟ ಔಷಧಿಯನ್ನು ಕಂಡುಹಿಡಿದಿಲ್ಲ. ಲಸಿಕೆ ಮತ್ತು ಔಷಧಕ್ಕಿರುವ ಮೂಲ ವ್ಯತ್ಯಾಸವನ್ನು ತಿಳಿಯುವುದು ಒಳಿತು. ಔಷಧವೆಂದರೆ ಅದಾಗಲೇ ಸಿದ್ಧವಾಗಿದ್ದು ರೋಗ ಬಂದ ತಕ್ಷಣ ಅದರ ಉಪಶಮನಕ್ಕೆ ನೀಡುವ ಮದ್ದು. ಲಸಿಕೆ ಎಂಬುದು ಆರೋಗ್ಯವಂತರಿಗೆ ರೋಗವು ಬರದಂತೆ ಮುನ್ನೆಚ್ಚರಿಕೆಯಾಗಿ ನೀಡುವ ಮದ್ದು. ಕೊರೋನಾ ಪೀಡಿತರಿಗೆ ಸಾಮಾನ್ಯ ಜ್ವರದ ಗುಳಿಗೆಗಳಿಂದ ಹಿಡಿದು ಮಲೇರಿಯಾ, ಏಡ್ಸ್ ಮುಂತಾದ ರೋಗಗಳಿಗೆ ನೀಡುವ ವಿವಿಧ ಔಷಧಿಗಳನ್ನು ಬಳಕೆ ಮಾಡುತ್ತಿದ್ದಾರೆ. ಹಲವೆಡೆ ಅದಾಗಲೇ ಕೊರೋನಾ ಬಂದು ಗುಣಮುಖರಾದವರ ಪ್ಲಾಸ್ಮಾವನ್ನು ಸಂಗ್ರಹಿಸಿ ರೋಗಿಗಳಿಗೆ ನೀಡುತ್ತಿದ್ದಾರೆ. ಆದರೆ ಈ ಎಲ್ಲವೂ ಪ್ರಯೋಗಗಳೇ. ಯಾವ ರೋಗಿಗೆ ಔಷಧಿ ಹಿಡಿಸುತ್ತದೆಯೋ ಅದನ್ನು ಮುಂದುವರೆಸಲಾಗುತ್ತಿದೆ.

ಅನ್ಯಜೀವಿಯೊಂದು ನಮ್ಮ ದೇಹದ ಮೇಲೆ ದಾಳಿಮಾಡಿದರೆ ಅದನ್ನು ಪ್ರತಿರೋಧಿಸುವ ಜೈವಿಕ ಕ್ರಿಯೆ ನಡೆಯುತ್ತದೆ. ಇದನ್ನು ಪ್ರತಿರೋಧಕ ಶಕ್ತಿ ಎನ್ನುತ್ತಾರೆ. ಭಾರತೀಯರಲ್ಲಿ ಈ ಪ್ರತಿರೋಧಕ ಗುಣ ಅಧಿಕವಾಗಿರುವುದರಿಂದಲೇ ರೋಗದ ತೀವ್ರತೆ ಹೆಚ್ಚಾಗದೆ, ಗುಣಮುಖರಾಗುವವರ ಸಂಖ್ಯೆ ಹೆಚ್ಚಿದೆ. ಕೋವಿಡ್ ಲಸಿಕೆ ಕಂಡುಹಿಡಿಯುವಷ್ಟರಲ್ಲಿ ರೋಗವು ಇಡೀ ಸಮೂಹಕ್ಕೆ ಹರಡಿ ಜನಸಾಮಾನ್ಯರಲ್ಲೇ ಅದಕ್ಕೆ ಬೇಕಾದ ಪ್ರತಿರೋಧವೊಂದು ಸ್ವಾಭಾವಿಕವಾಗಿ ಸೃಷ್ಟಿಯಾಗಿ ರೋಗದ ಹರಡುವಿಕೆಗೆ ಕಡಿವಾಣ ಬೀಳುತ್ತದೆ ಎಂಬುದು ಕೆಲವರ ವಾದ. ಇದನ್ನು ಸಮೂಹ ರೋಗನಿರೋಧಕ ಶಕ್ತಿ Herd immunity ಎಂದು ಕರೆಯಲಾಗುತ್ತದೆ.

ಒಮ್ಮೆ ಕೋವಿಡ್‌ಗೆ ತುತ್ತಾಗಿ ಗುಣಮುಖರಾದವರಿಗೆ ಸಾಕಷ್ಟು ಪ್ರತಿರೋಧಕ ಶಕ್ತಿ ಬೆಳೆದು ಮತ್ತೆ ರೋಗಕ್ಕೆ ತುತ್ತಾಗುವುದಿಲ್ಲ ಎಂದು ನಂಬಲಾಗಿತ್ತು. ಅಮೆರಿಕ ಇಂಗ್ಲೆಂಡಿನಂತಹ ಮುಂದುವರೆದ ರಾಷ್ಟ್ರಗಳೂ ಸಹ ಇದನ್ನೇ ನೆಚ್ಚಿಕೊಂಡು ಕೂತಿದ್ದವು. ಆದರೆ ವಿಶ್ವ ಆರೊಗ್ಯ ಸಂಸ್ಥೆಯ ತುರ್ತು ಆರೋಗ್ಯ ನಿರ್ದೇಶಕರಾದ ಡಾ.ಮೈಕೆಲ್ ರ್ಯಾನ್ ಪ್ರಕಾರ, “ಈ ರೋಗದ ಹರಡುವಿಕೆಯನ್ನು ತಡೆಯಲು ಬೇಕಾದ ಪ್ರತಿರೋಧಕದ ಹತ್ತಿರವೂ ನಾವಿಲ್ಲ. ಸಮೂಹ ರೋಗನಿರೋಧಕ ಶಕ್ತಿಯನ್ನು ನೆಚ್ಚಿಕೊಂಡು ಮೋಕ್ಷಕ್ಕಾಗಿ ಕಾಯುವ ಬದಲು ವಾಸ್ತವಿಕವಾಗಿ ಮಾಡಬೇಕಾದ ಕೆಲಸಗಳ ಕಡೆ ಗಮನಹರಿಸುವುದು ಒಳಿತು”. ಯೂರೋಪಿನ ಹಲವು ರಾಷ್ಟ್ರಗಳಲ್ಲಿ ತುತ್ತತುದಿಯಲ್ಲಿದ್ದ ರೋಗವು ಕ್ರಮೇಣ ಕಡಿಮೆಯಾಗಿ ಮತ್ತೆ ಏರಿಕೆ ಕಾಣುತ್ತಿದೆ. ಇದನ್ನು “ಎರಡನೆಯ ಅಲೆ” ಎಂದು ಗುರುತಿಸಲಾಗುತ್ತಿದೆ. ಹಾಗಾಗಿ ಈಗ ವಿಶ್ವದ ಗಮನವೆಲ್ಲವೂ ಲಸಿಕೆಯ ಕಡೆಗೆ ತಿರುಗಿದೆ.

ಒಂದು ಸಾಂಕ್ರಾಮಿಕ ರೋಗ ಕೊನೆಗೊಳ್ಳುವುದು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲಿ ಮೊದಲನೆಯದು ರೋಗದ ಬಗೆಗಿನ “ಜ್ಞಾನ”. ಒಂದು ವೈರಸ್ ಬಗ್ಗೆ ನಮಗೆ ಎಷ್ಟು ಹೆಚ್ಚು ಮಾಹಿತಿ ಸಿಗುತ್ತದೆಯೋ, ಅಷ್ಟು ಬೇಗ ನಾವು ಪಿಡುಗಿನಿಂದ ಹೊರಬರಬಹುದು. ಇದರಿಂದ ಪರಿಣಾಮಕಾರಿಯಾದ ಮತ್ತು ಸುರಕ್ಷಿತವಾದ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ. ಕೊರೋನಾ ವೈರಸ್ಸಿನ ವಿಷಯದಲ್ಲಿ ನಾವು ಸ್ವಲ್ಪ ಅದೃಷ್ಟವಂತರೆಂದೇ ಹೇಳಬಹುದು. ಏಕೆಂದರೆ ಈ ಹಿಂದೆ ಬಂದ SARS (Severe acute respiratory syndrome) ಮತ್ತು MERS (Middle East respiratory syndrome coronavirus) ನಂತಹ ವೈರಸ್ಸುಗಳ ಮತ್ತೊಂದು ರೂಪವೇ ಈ ಕೊರೊನಾ ವೈರಸ್. ಅದರ ಸೋಂಕಿನಿಂದ ಬರುವ ರೋಗವೇ COVID-19 ( ‘CO’ CORONA, ‘VI’ VIRUS ‘I’ INFECTED, ‘D’ DISEASE – 2019). ಈಗಾಗಲೇ ಅವುಗಳನ್ನು ಅಭ್ಯಸಿಸಿದ್ದ ವಿಜ್ಞಾನಿಗಳಿಗೆ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಉಪಯುಕ್ತ ಮಾಹಿತಿ ದೊರೆಯಲು ಸುಲಭ ಸಾಧ್ಯವಾಯಿತು. ಇದರಿಂದ ಲಸಿಕೆಯ ಅನ್ವೇಷಣೆಯ ವೇಗವೂ ಹೆಚ್ಚಿತು.

ಎರಡನೆಯ ಪ್ರಮುಖ ಅಂಶವೆಂದರೆ ಲಸಿಕೆಯ ಉತ್ಪಾದನೆಗೆ ಬೇಕಾದ ಸಾಮರ್ಥ್ಯ. ಕೊರೋನಾ ವೈರಸ್ಸಿನ ಲಸಿಕೆಯನ್ನು ಕಂಡುಹಿಡಿಯುವುದು ಮೊದಲ ಹಂತವಾದರೆ ಅದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ, ವಿಶ್ವದಾದ್ಯಂತ ತಲುಪಿಸಿ, ಆರೋಗ್ಯ ಕಾರ್ಯಕರ್ತರ ಮೂಲಕ ಎಲ್ಲರಿಗೂ ಲಸಿಕೆ ಹಾಕಿಸಬೇಕಾಗುತ್ತದೆ. ಇದು ಲಸಿಕೆಯನ್ನು ಕಂಡುಹಿಡಿಯುವುದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈ ಎರಡೂ ಹಂತಗಳ ವೇಗ ಹೆಚ್ಚಿದಂತೆಲ್ಲಾ ನಾವು ಈ ಪಿಡುಗಿನಿಂದ ಬೇಗ ಹೊರಬರಬಹುದು.

ಇಲ್ಲಿನವರೆಗೂ 185ಕ್ಕೂ ಹೆಚ್ಚು ಸಂಶೋಧನಾ ತಂಡಗಳು ಕೊರೋನಾ ಲಸಿಕೆಯನ್ನು ಕಂಡುಹಿಡಿಯುವ ರೇಸಿನಲ್ಲಿವೆ. ಹೈದರಾಬಾದಿನ ಔಷಧ ಕಂಪನಿ ಭಾರತ್ ಬಯೋಟೆಕ್ ನ `ಕೋವ್ಯಾಕ್ಸ್’ ಮತ್ತು ಜೈಡಸ್ ಕ್ಯಾಡಿಲಾ ಕಂಪನಿಯ ‘ಜೈಕೋವ್-ಡಿ’ ಎಂಬ ಎರಡು ಲಸಿಕೆಗಳನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಮೊದಲ ಮತ್ತು ಎರಡನೆಯ ಹಂತದ ಪರೀಕ್ಷೆಯಲ್ಲಿವೆ. ಸದ್ಯಕ್ಕೆ ಚೀನಾದ ಸೈನೋವ್ಯಾಕ್ ಮತ್ತು ಸೈನಾಫಾರ್ಮ್, ಇಂಗ್ಲೆಂಡಿನ ಆಕ್ಸ್‌ಫರ್ಡ್ (ಆಸ್ಟ್ರಾ ಜೆನೆಕಾ), ಅಮೆರಿಕೆಯ ಮೊಡೆರ್ನಾ ಮತ್ತು ಫೈಜರ್, ಜರ್ಮನಿಯ ಕೋವ್ಯಾಕ್ಸ್ ಲಸಿಕೆಗಳು ಮಾನವರ ಮೇಲಿನ ಪರೀಕ್ಷಾರ್ಥ ಪ್ರಯೋಗದ 3ನೆಯ ಹಂತದಲ್ಲಿವೆ. 

ಈ ತಂಡಗಳ ಸಂಶೋಧಕರ ಪ್ರಕಾರ ಸೆಪ್ಟೆಂಬರ್ ಹೊತ್ತಿಗೆ ತಯಾರಿ ಪೂರ್ಣವಾಗಿ ಬಳಕೆಗೆ ಬಿಡುಗಡೆ ಮಾಡುವ ಸಾಧ್ಯತೆಯಿತ್ತು. ಆದರೆ ಇದನ್ನು ಆತುರದ ತೀರ್ಮಾನವೆನ್ನಬಹುದು. ಏಕೆಂದರೆ ಲಸಿಕೆಯ ಸಂಶೋಧನೆ, ರಾಕೆಟ್ ಸೈನ್ಸ್ ಗಿಂತಲೂ ಕ್ಲಿಷ್ಟಕರ. ಲಸಿಕೆಯು ಕೊನೆಯ ಹಂತದಲ್ಲಿಯೂ ವಿಫಲವಾಗಬಹುದು. ಲಸಿಕೆಯ ಅನ್ವೇಷಣೆಯಲ್ಲಿ ಇಲ್ಲಿಯವರೆಗೂ ಅನುಸರಿಸಿದ ಎಲ್ಲಾ ಕ್ರಮಗಳನ್ನು ಪುನಃ ಮೊದಲಿನಿಂದ ಮಾಡಬೇಕಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಇಂಗ್ಲೆಂಡಿನ ಆಸ್ಟ್ರಾ ಜೆನೆಕಾ ಲಸಿಕೆಯನ್ನು ಹಾಕಿಸಿಕೊಂಡ ಒಬ್ಬ ರೋಗಿಗೆ ತೀವ್ರತರಹದ ವಿವರಿಸಲಾಗದ ಅಸೌಖ್ಯ ಉಂಟಾಗಿದ್ದರಿಂದ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಇವೆಲ್ಲದರ ನಡುವೆ ಚೀನಾ ಮತ್ತು ರಷ್ಯಾದ ಸ್ಪುಟ್ನಿಕ್-5 ಲಸಿಕೆಯು ಅದಾಗಲೇ ಉಪಯೋಗಕ್ಕೆ ಯೋಗ್ಯ ಎಂದು ಅಲ್ಲಿನ ಅಧ್ಯಕ್ಷರು ಹೇಳಿಕೊಂಡಿದ್ದಾರೆ. ಹಲವು ಪರಿಣತರು ಈ ಆತುರದ ನಿರ್ಧಾರವನ್ನು ವಿರೋಧಿಸಿದರೂ, ಭಾರತದ ಔಷಧ ಕಂಪೆನಿಯೊಂದು ಸ್ಪುಟ್ನಿಕ್-5 ಲಸಿಕೆಯ ವಿತರಣೆಯ ಒಪ್ಪಂದವನ್ನೂ ಮಾಡಿಕೊಂಡಿದೆ.

ಇಲ್ಲಿಯವರೆಗೆ 140ಕ್ಕೂ ಹೆಚ್ಚು ತಂಡಗಳು ಕೋವಿಡ್ ಲಸಿಕೆಯ ಅನ್ವೇಷಣೆಯಲ್ಲಿ ತೊಡಗಿವೆ. ಅವುಗಳಲ್ಲಿ 27 ಲಸಿಕೆಗಳು ಲಘು ಸುರಕ್ಷತಾ ಪ್ರಮಾಣದ ಮೊದಲ ಹಂತದಲ್ಲಿದ್ದರೆ, 15 ಲಸಿಕೆಗಳು ವಿಸ್ತ್ರತ ಸುರಕ್ಷತಾ ಪ್ರಮಾಣದ ದ್ವಿತೀಯ ಹಂತದಲ್ಲಿವೆ. 9 ಲಸಿಕೆಗಳ ಫಲದಾಯಕತೆಯ ಪರೀಕ್ಷೆಯು ತೃತೀಯ ಹಂತದಲ್ಲಿಯೂ, 5 ಲಸಿಕೆಗಳು ಸೀಮಿತ ಬಳಕೆಗೆ ಒಪ್ಪಿಗೆ ಪಡೆಯುವ ಹಂತದಲ್ಲಿವೆ. ಒಟ್ಟಿನಲ್ಲಿ ಒಬ್ಬರು ವಿಫಲರಾದರೂ ಮತ್ತೊಬ್ಬರು ಸಫಲರಾಗಬಹುದು. ಕೆಲವು ತಜ್ಞರ ಪ್ರಕಾರ ಕೊರೋನಾ ಲಸಿಕೆ ಡಿಸೆಂಬರ್ 2020ರಲ್ಲಿ ಅಥವಾ ಮಾರ್ಚಿ 2021ರ ವೇಳೆಗೆ ದೊರಕಲಿದೆ. ಹಾಗಾಗಿ 2021ರ ದ್ವಿತೀಯಾರ್ಧದಲ್ಲಿ ಲಸಿಕೆಯು ಎಷ್ಟು ಪರಿಣಾಮಕಾರಿ ಎಂಬುದು ತಿಳಿಯಲಿದೆ. ಒಂದು ವೇಳೆ ಪರಿಣಾಮಕಾರಿ ಎಂದರೆ ಅದನ್ನು ಉತ್ಪಾದಿಸುವ ಮತ್ತು ಸರಬರಾಜು ಮಾಡುವ ವ್ಯವಸ್ಥಾಪನಾ ಕಾರ್ಯಗಳಿಗೆ ಮತ್ತೆ 3 ರಿಂದ 6 ತಿಂಗಳ ಸಮಯ ಹಿಡಿಯಬಹುದು. ಒಟ್ಟಾರೆ 2021ರ ಮಧ್ಯಭಾಗಕ್ಕೆ ಅಥವಾ ಕೊನೆಗೆ ನಮಗೆ ಲಸಿಕೆ ದೊರೆಯಬಹುದು.

ಮೂರನೆಯ ಮುಖ್ಯ ಅಂಶ ಸ್ವತಃ ವೈರಸ್. ಕೊರೋನಾ ವೈರಸ್ ಮತ್ತಷ್ಟು ಆಕ್ರಮಣಕಾರಿಯಾಗಿ ಅಥವಾ ಶಕ್ತಿಗುಂದುತ್ತಾ ಕ್ಷೀಣಿಸಿ ರೂಪಾಂತರ ಹೊಂದಬಹುದು (mutate). ಅಕಸ್ಮಾತ್ ವೈರಸ್ ಆಕ್ರಮಣಕಾರಿಯಾಗಿ ಬದಲಾದರೆ ಲಸಿಕೆಯ ಅನ್ವೇಷಣೆಯಲ್ಲಿ ಇಲ್ಲಿಯವರೆಗೆ ನಡೆದಿರುವ ಕೆಲಸವೆಲ್ಲ ವ್ಯರ್ಥವಾಗುತ್ತದೆ. ರೋಗವನ್ನು ತಡೆಗಟ್ಟುವ ಕ್ರಿಯೆ ಮತ್ತಷ್ಟು ನಿಧಾನವಾಗುತ್ತದೆ. ಬದಲಾಗಿ ವೈರಸ್ಸಿನ ಶಕ್ತಿ ಕಡಿಮೆಯಾದರೆ, ಸಾವುಗಳೂ ಕಡಿಮೆಯಾಗುತ್ತ ಸೋಂಕು ತಂತಾನೇ ಹತೋಟಿಗೆ ಬರುತ್ತದೆ.

ಸದ್ಯದವರೆಗೂ ತಿಳಿದಿರುವ ಹಾಗೆ ಕೊರೋನಾ ವೈರಸ್ ನಿಧಾನಗತಿಯಲ್ಲಿ ರೂಪಾಂತರ ಹೊಂದುತ್ತಿದೆ. ಮಾರ್ಚಿಯ ಮಧ್ಯಭಾಗದವರೆಗೂ 13000 ಮಾದರಿಗಳನ್ನು ವಿಶ್ಲೇಶಿಸಿರುವ ಪ್ರಕಾರ ವೈರಸ್ ಪ್ರತೀ ಎರಡು ತಿಂಗಳಿಗೊಮ್ಮೆ ರೂಪಾಂತರಗೊಳ್ಳುತ್ತಿದೆ. ರೂಪಾಂತರಗೊಳ್ಳುವ ವೇಗದ ಮೇಲೆ ಅದರ ಪರಿಣಾಮಗಳು ನಿರ್ಧಾರಿತವಾಗಿರುತ್ತವೆ. ಅತಿ ವೇಗದಲ್ಲಿ ವಿಕಸನವಾಗುವ ವೈರಸ್ಸಿಗೆ ಲಸಿಕೆ ಕಂಡುಹಿಡಿಯುವುದು ಕಷ್ಟ. ಕೇವಲ ಎರಡು ಉತ್ಪರಿವರ್ತನಗಳಲ್ಲಿ ಕೋಶಗಳ ಮೇಲೆ ದಾಳಿ ಮಾಡುವ ಸ್ಪೈಕ್ ಪ್ರೋಟೀನಿನಲ್ಲಿ ಬದಲಾವಣೆಯಾಗಿದೆ. ಸಮಾಧಾನದ ಸಂಗತಿಯೆಂದರೆ ಸದ್ಯಕ್ಕೆ ಈ ಸ್ಪೈಕ್ ಪ್ರೋಟೀನುಗಳ ಮಾರ್ಪಾಡಾಗುತ್ತಿರುವುದು ಅತ್ಯಂತ ವಿರಳ. ಆದ್ದರಿಂದ ವೈರಾಣುವಿನಲ್ಲಿ ಸದ್ಯಕ್ಕೆ ಆಗುತ್ತಿರುವ ಉತ್ಪರಿವರ್ತನೆಗಳನ್ನು ಮಾನವ ದೇಹವು ಸಮರ್ಥವಾಗಿ ನಿಭಾಯಿಸಬಹುದು. ಆದ್ದರಿಂದ ಈ ವೈರಸ್ಸನ್ನು ಎದುರಿಸಲು ಒಂದು ಲಸಿಕೆ ಸಾಕಾಗಬಹುದೆಂಬುದು ವಿಜ್ಞಾನಿಗಳ ಅಭಿಪ್ರಾಯ.

ಕೋವಿಡ್ ಕೊನೆಯಾಗುವಲ್ಲಿ ಪ್ರಮುಖವಾಗುವ ನಾಲ್ಕನೆಯ ಅಂಶವೆಂದರೆ ಸಾಮಾಜಿಕ ಅಂತರವನ್ನು ಪಾಲಿಸಲು ನೀವೆಷ್ಟು ಸಿದ್ಧರಿದ್ದೀರಿ ಎಂಬುದು. ಲಾಕ್‌ಡೌನ್ ತೆರವಾದ ನಂತರ ಕೋಟ್ಯಂತರ ಜನರು ಹೊರಗೆ ಬಂದಿದ್ದಾರೆ. ಆದರೆ ಅವರಲ್ಲಿ ಬಹಳಷ್ಟು ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ. ಹೀಗೆ ಜನರು ಗುಂಪುಗೂಡುತ್ತಿರುವುದರಿಂದ ಕೊರೋನಾ ಕೇಸುಗಳು ಸ್ಫೋಟಗೊಳ್ಳುತ್ತಿವೆ. ಇದು ಮುಂದುವರೆದರೆ ಇಡೀ ವೈದ್ಯಕೀಯ ವ್ಯವಸ್ಥೆಯಲ್ಲಿ ಏರುಪೇರಾಗಿ ನಿರ್ವಹಿಸಲಾಗದ ಒತ್ತಡ ಉಂಟಾಗುತ್ತದೆ. ಹಾಲಿ ಇರುವ ಶಕ್ತಿ ಮತ್ತು ಸಂಪನ್ಮೂಲವನ್ನೆಲ್ಲ ಹೊಸ ರೋಗಿಗಳ ಶುಶ್ರೂಷೆಗೇ ಖರ್ಚಾಗುತ್ತದೆ. ಕೋಟ್ಯಂತರ ರೂಪಾಯಿಗಳನ್ನು ಈ ಹೊಸ ರೋಗಿಗಳಿಗೆ ಮೀಸಲಿಡಬೇಕಾಗುತ್ತದೆ. ಈ ಹಣವನ್ನೆಲ್ಲ ಲಸಿಕೆಯ ಸಂಶೋಧನೆ ಮತ್ತು ಸರಬರಾಜಿಗೆ ವಿನಿಯೋಗಿಸಬಹುದು.

ನಮ್ಮ ದೇಶದ ಮಟ್ಟಿಗೆ ಆಗುತ್ತಿರುವ ಬೆಳವಣಿಗೆಗಳನ್ನೇ ನೀವು ಗಮನಿಸಬಹುದು. ಮೊದಲಿಗೆ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಪರದಾಡಿದ ರಾಜ್ಯ ಮತ್ತು ಕೇಂದ್ರ ಸರಕಾರಗಳು, ಈಗ ದಿನವೊಂದಕ್ಕೆ ಲಕ್ಷ ಕೇಸುಗಳು ಮುಟ್ಟುವ ಹಂತ ತಲುಪಿದಾಗ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ ಕುಳಿತುಕೊಂಡಿವೆ. ಆದ್ದರಿಂದ ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆ ಲಭ್ಯವಾಗುವವರೆಗೆ ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತ ಜವಾಬ್ದಾರಿಯುತರಾಗಿರಬೇಕು ಅಷ್ಟೇ.

ಕೊನೆಯ ಅಂಶವೆಂದರೆ ನೀವು ಮುಖಗವಸನ್ನು ಧರಿಸುವ ಬಗ್ಗೆ ಎಷ್ಟು ದೃಢಚಿತ್ತರಿದ್ದೀರಿ ಎಂಬುದು. ಸಾಮಾಜಿಕ ಅಂತರವನ್ನು ಕಾಪಾಡದೆ ಆಗುವ ಹೊಸ ಪ್ರಕರಣಗಳ ಸ್ಫೋಟ ಮತ್ತು ಖರ್ಚಿನ ಬಗ್ಗೆ ಈಗಾಗಲೇ ತಿಳಿದಿದ್ದೇವೆ. ಮಾಸ್ಕ್ ಧರಿಸುವುದರಿಂದ ಹೆಚ್ಚು ಪರಿಶ್ರಮವಿಲ್ಲದೆ ಇದನ್ನು ತಡೆಯಬಹುದು. ಇದು ಅತ್ಯಂತ ಸುಲಭದ ಕೆಲಸ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮಾಸ್ಕ್ ಧರಿಸುವುದರಿಂದ ಕೊರೋನಾ ಸಮುದಾಯಗಳಿಗೆ ಹರಡುವುದನ್ನು ತಡೆಯಬಹುದು ಎಂದು ತಿಳಿದು ಬಂದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದ ಪ್ರಕಾರ ಕೊರೋನಾ ಕೆಮ್ಮು ಅಥವಾ ಸೀನಿನ ಕಣಗಳು ಕಣ್ಣು, ಮೂಗು ಬಾಯಿಯ ಮುಖಾಂತರ ಮಾತ್ರ ದೇಹ ಪ್ರವೇಶಿಸುತ್ತಿದ್ದವು. ಆದರೆ 230 ಜನ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಬರೆದ ಪತ್ರದಲ್ಲಿ ಹೊಸ ಅಧ್ಯಯನಗಳ ಮಾತನಾಡುವುದರಿಂದ ಗಾಳಿಯಿಂದ ಸಹ ವೈರಸ್ ಹರಡಬಹುದಾದ ಸಾಧ್ಯತೆಯನ್ನು ತಿಳಿಸಿದ್ದಾರೆ.  ವೈರಾಣುವನ್ನು ಹೊಂದಿದ ವಾಯುದ್ರವಗಳು 14 ನಿಮಿಷಗಳ ವರೆಗೆ ಗಾಳಿಯಲ್ಲಿ ತೇಲುತ್ತಿರುತ್ತವೆ. ಹಾಗಾಗಿ ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಿದರೆ ರೋಗದ ಹರಡುವಿಕೆಗೆ ಕಡಿವಾಣ ಬಿದ್ದು, ಸಂಪನ್ಮೂಲವನ್ನು ಲಸಿಕೆಯ ಸಂಶೋಧನೆ, ಪ್ರಯೋಗ ಮತ್ತು ಸರಬರಾಜಿಗೆ ಬಳಸಬಹುದು. ಈ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಹೊರಬರಬಹುದು.

ಸಾಮಾಜಿಕ ಅಂತರ ಮತ್ತು ಮಾಸ್ಕ್ ಧಾರಣೆ ಇವುಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು ಎಂಬುದರ ಬಗ್ಗೆ ಹೊಸ ತಿಕ್ಕಾಟ ನಡೆದಿದೆ. ಇಂಗ್ಲೆಂಡಿನ ಲ್ಲಿ ದ್ವಿತೀಯ ಅಲೆ ಕಾಣಿಸಿಕೊಂಡ ಪರಿಣಾಮ ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಕೈ, ಮುಖ ಮತ್ತು ಅಂತರ ಎಂಬ ಸಂದೇಶ ನೀಡಿದರು. ಅಂದರೆ ಕೈಯನ್ನು ಸದಾ ಸೋಪು ಹಾಕಿ ತೊಳೆದು ಶುಚಿಯಾಗಿಟ್ಟುಕೊಳ್ಳುವುದು (ಸ್ಯಾನಿಟೈಜರ್‌ಗಿಂತಲೂ ಸೋಪು ಪರಿಣಾಮಕಾರಿ), ಮಾಸ್ಕ್ ಅನ್ನು ಕಟ್ಟುನಿಟ್ಟಾಗಿ ಧರಿಸುವುದು ಮತ್ತು 2 ಮೀಟರುಗಳ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು. ಇದರ ಬೆನ್ನಲ್ಲಿಯೇ ಅಲ್ಲಿನ ವಿಜ್ಞಾನಿಗಳು ಪ್ರಧಾನಿಗಳ ಆಯ್ಕೆಯಲ್ಲಿನ ಪ್ರಾಶಸ್ತ್ಯ ಸರಿಯಿಲ್ಲವೆಂದು ಮುಗಿಬಿದ್ದಿದ್ದಾರೆ. 

ಕೆಲವು ಅಧ್ಯಯನಗಳ ಪ್ರಕಾರ ಕೋವಿಡ್ ಹರಡುವಿಕೆಯು 20 ಪ್ರತಿಶತ ಸ್ಪರ್ಶದಿಂದಾದರೆ ಮಿಕ್ಕ ಸೋಂಕಿಗೆ ವಾಯುದ್ರವ (aerosol) ಕಾರಣವಾಗಿದೆ. ಲಂಡನ್ ಯೂನಿವರ್ಸಿಟಿಯ ಜೆನಿಫರ್ ಕೋಲ್ ಹೇಳುವಂತೆ “ಒಳಾಂಗಣವಾಗಲಿ-ಹೊರಾಂಗಣವಾಗಲಿ ಸುರಕ್ಷಿತ ಅಂತರವು ಕೋವಿಡ್ ವೈರಸ್ ಹರಡುವುದನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖಗವಸು ಹಾಕಿದ ಮಾತ್ರಕ್ಕೆ 2 ಮೀಟರುಗಳಿಗಿಂತ ಒಳಕ್ಕೆ ಹೋಗುವುದು ಸುರಕ್ಷಿತವಲ್ಲ. ಹಾಗಾಗಿ ನಿಮ್ಮ ಅಂತರವನ್ನು ಕಾಪಾಡಿಕೊಳ್ಳುವುದು ಒಳಿತು”.

ಕೋವಿಡ್ ಯಾವಾಗ ಕೊನೆಯಾಗುತ್ತದೆ ಎಂದು ಅಂದಾಜಿಸುವ ಹಲವಾರು ಮಾದರಿಗಳು ಇವೆ. ಎಲ್ಲಿಯವರೆಗೂ ಅವುಗಳಿಗೆ ಸರಿಯಾದ ಮಾಹಿತಿಯನ್ನು ಉಣಿಸಲಾಗುತ್ತದೆಯೋ ಅಲ್ಲಿಯವರೆಗೆ ಅವು ಉತ್ತಮ ಫಲಿತಾಂಶ ನೀಡುತ್ತವೆ. ಈ ಮುಂಚಿನ ಮಾಡೆಲ್‌ಗಳು ಲಾಕ್ ಡೌನ್ ನಂತರದ ವಿದ್ಯಮಾನಗಳನ್ನು ಪರಿಗಣಿಸಿರಲಿಲ್ಲ. ಹಾಗಾಗಿಯೇ ಕೊರೋನಾದ ಕೊನೆಗಾಲವನ್ನು ಊಹಿಸುವಲ್ಲಿ ಅವು ವಿಫಲವಾದವು. ಈಗ ಲಾಕ್‌ಡೌನ್ ತೆರವಿನ ನಂತರ ಹೊಸ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಲಾಕ್‌ಡೌನಿನ ಮಧ್ಯಭಾಗಲ್ಲಿ ಪ್ರತಿನಿತ್ಯ ಗರಿಷ್ಠ 70 ರಿಂದ 80 ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದವು. ಕಟ್ಟುಪಾಡುಗಳನ್ನು ತೆಗೆದ ಮೇಲೆ ದಿನನಿತ್ಯದ ಪ್ರಕರಣಗಳು 3 ಲಕ್ಷಕ್ಕೆ ಏರಿಕೆ ಕಂಡಿವೆ.

ಒಂದೇ ದಿನಕ್ಕೆ 94372 ಪ್ರಕರಣಗಳನ್ನು ದಾಖಲಿಸಿದ ಭಾರತ ಸದ್ಯಕ್ಕೆ ವೇಗವಾಗಿ ಮುನ್ನುಗ್ಗುತ್ತಿದೆ. ಈ ಮುಂಚಿನ ಮಾಡೆಲ್ಲುಗಳು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಕರಣಗಳು ಪ್ರತಿದಿನ ದಾಖಲಾಗುತ್ತಿವೆ. ಹಾಗಾಗಿ ಕೊರೋನಾ ಯಾವಾಗ ಕೊನೆಯಾಗುತ್ತದೆಂದು ತಿಳಿಯಲು ಈ ಮಾಡೆಲ್‌ಗಳ ಮೇಲೆ ಸಂಪೂರ್ಣ ಅವಲಂಬಿತವಾಗಲು ಸಾಧ್ಯವಿಲ್ಲ. ಒಂದಂತೂ ಸತ್ಯ. ಅಕಸ್ಮಾತ್ ವೈರಾಣು ಏನಾದರೂ ಉಚ್ಛ್ರಾಯ ಸ್ಥಿತಿ ತಲುಪಿ, ಎರಡನೆಯ ಶಕ್ತಿಶಾಲಿ ಅಲೆ ಬಂದರೆ (ಈಗಾಗಲೇ ಇಂಗ್ಲೆಂಡ್, ಸ್ಪೇನ್, ಬಲ್ಗೇರಿಯಾ, ರೊಮೇನಿಯಾಗಳಲ್ಲಿ ಕಾಣಿಸಿಕೊಂಡಿದೆ) ವಿಶ್ವದ ಎಲ್ಲಾ ದೇಶಗಳ ಆರೋಗ್ಯ ವ್ಯವಸ್ಥೆಯು ಹೊಸ ಪ್ರಕರಣಗಳನ್ನು ನಿಭಾಯಿಸುವಲ್ಲಿಯೇ ಪರದಾಡುತ್ತದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಮೊದಲ ಹೆಜ್ಜೆಗೆ ಮರಳಬೇಕಾಗುತ್ತದೆ.

ಯೋಜನೆಯಂತೆ ಎಲ್ಲವೂ ನಡೆದರೆ ಈ ವರ್ಷದ ಕೊನೆಗೆ ಅಥವಾ 2021ರ ಮಧ್ಯಭಾಗದಲ್ಲಿ ಲಸಿಕೆ ಸಿದ್ಧವಾಗುತ್ತದೆ. ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದವರಿಗೆ ಲಸಿಕೆ ನೀಡಿ ರೋಗನಿರೋಧಕವನ್ನು ಹೆಚ್ಚಿಸುತ್ತಾ, ರೋಗ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ ಮುಂದುವರೆಸಿದರೆ ಕಡಿವಾಣ ಹಾಕಬಹುದು. ಅಲ್ಲಿಯವರೆಗೂ ನಾವೆಲ್ಲರೂ ನಮ್ಮ ಜಾಗೃತಿಯಲ್ಲಿದ್ದು ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿರುವುದು ಒಳ್ಳೆಯದು.

*ಲೇಖಕರು ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲ ಗ್ರಾಮದವರು; ಎಲೆಕ್ಟ್ರಿಕಲ್-ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರು. ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕನ್ನಡದ ಭರವಸೆಯ ವಿಜ್ಞಾನ ಲೇಖಕರು.

 

 

Leave a Reply

Your email address will not be published.