ಕೋವಿಡ್ ತಂದ ಅವಕಾಶದಲ್ಲಿ ಕರ್ನಾಟಕದ ಆರೋಗ್ಯ ವ್ಯವಸ್ಥೆ ಹೇಗೆ ಸುಧಾರಿಸಬಹುದು..?

ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಪ್ರಾಮುಖ್ಯ ಮತ್ತೊಮ್ಮೆ ನಮಗೆ ಗೋಚರವಾಗಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರಿ ಸೌಲಭ್ಯಗಳ ಮೇಲೆಯೇ ಅವಲಂಬಿತವಾಗಬೇಕೆನ್ನುವುದು ನಮಗೆ ಮನದಟ್ಟಾಗಿದೆ. ಎರಡನೆಯ ಅಲೆಯ ಸಂದರ್ಭದಲ್ಲಿಯಂತೂ ಖಾಸಗಿ ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾದರೆ ಸರ್ಕಾರಿ ಆರೋಗ್ಯ ಸೇವಾ ಪದ್ಧತಿ ಬಡ ರೋಗಿಗಳಿಗೆ ಸಂಜೀವಿನಿಯಾಗಿದೆ. ಕೋವಿಡ್ ವಿಷಯದಲ್ಲಾದರೂ ನಮ್ಮ ಕಣ್ಣು ತೆರೆಸಿದೆ ಹಾಗೂ ನಮಗೆ ಕನ್ನಡಿ ಹಿಡಿದಿದೆ.

ಮೋಹನದಾಸ್

ಪೃಥ್ವಿದತ್ತ ಚಂದ್ರಶೋಭಿ

ಕೋವಿಡ್ ಎಂಬ ಕನ್ನಡಿ ಹಲವು ಕ್ಷೇತ್ರಗಳಲ್ಲಿ ನಮಗೆ ವಾಸ್ತವವನ್ನು ತೋರಿಸಿದೆ. ಅದರಲ್ಲಿ ಕರ್ನಾಟಕದ ಶಿಥಿಲ ಆರೋಗ್ಯ ಸೇವೆಗಳ ಕ್ಷೇತ್ರವೂ ಒಂದು. ಮೊದಲ ಮತ್ತು ಎರಡನೆಯ ಕೋವಿಡ್ ಅಲೆಯ ಸಂದರ್ಭಗಳೆರಡರಲ್ಲಿಯೂ ನಮ್ಮ ಆಸ್ಪತ್ರೆ ಹಾಗೂ ವೈದ್ಯಕೀಯ ಸೌಲಭ್ಯಗಳು ರೋಗಿಗಳನ್ನು ಬದುಕಿಸಿ ಉಳಿಸುವಲ್ಲಿ ಅತೀವ ಹೆಣಗಾಡಬೇಕಾದದ್ದು ಮತ್ತು ಕರ್ನಾಟಕದಲ್ಲಿನ ಒಟ್ಟಾರೆ ಸಾವಿನ ಸಂಖ್ಯೆ ಮತ್ತು ಸೋಂಕಿತರೊಡನೆಯ ಸಾವಿನ ಅನುಪಾತ ಈ ಶಿಥಿಲ ಪರಿಸ್ಥಿತಿಯನ್ನು ಬಿಂಬಿಸಿವೆ. ಈ ಸಂದರ್ಭದಲ್ಲಿ ನೀವು ಉತ್ತರ ಭಾರತದ ‘ಬಿಮಾರು’ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡು ಸಮಾಧಾನಪಟ್ಟುಕೊಂಡರೆ ಅದು ಬೇರೆಯ ಮಾತು ಆದೀತು. ಆದರೆ ದೇಶಿ ರಾಜ್ಯಗಳ ಹೋಲಿಕೆಯಲ್ಲಿ ‘ಮುಂದುವರೆದ’ ರಾಜ್ಯವೆಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದ ಕರ್ನಾಟಕದ ನಮಗೆ ನಾವು ಇನ್ನೂ ಕ್ರಮಿಸಬೇಕಾದ ದಾರಿ ಎಷ್ಟು ದೂರವಿದೆಯೆಂದು ಕೋವಿಡ್ ತೋರಿಸಿದೆಯೆಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ.

ಈಗ ಇಲ್ಲಿಯವರೆಗೆ ಒಟ್ಟು ಕರ್ನಾಟಕದಲ್ಲಿನ ಕೋವಿಡ್ ಪೀಡಿತರ ಸಂಖ್ಯೆಯನ್ನು ಒಮ್ಮೆ ಗಣನೆಗೆ ತೆಗೆದುಕೊಳ್ಳೋಣ.

2021 ಜೂನ್ 25 ರವರೆಗೆ ಕೋವಿಡ್ ವರದಿ:

ಕೋವಿಡ್ ಪೀಡಿತರ ಸಂಖ್ಯೆ ಕೋವಿಡ್‍ನಿಂದ ಸಾವು
ಭಾರತ 302 ಲಕ್ಷ  3,94,000
ಕರ್ನಾಟಕ 28.3 ಲಕ್ಷ  34,539
ಕೇರಳ 28.7 ಲಕ್ಷ 12,699

ಮೇಲ್ಕಂಡ ಪಟ್ಟಿಯು ಸರ್ಕಾರಿ ಮೂಲಗಳಿಂದ ರಚಿತವಾಗಿರುವ ಕಾರಣ ಸಂಪೂರ್ಣವಾಗಿ ನಿಖರವೆಂದು ಹೇಳಲಾಗುವುದಿಲ್ಲ. ನಿಜವಾದ ಸಂಖ್ಯೆ ಪ್ರಕಾಶಿತ ಪಟ್ಟಿಯ ದುಪ್ಪಟ್ಟು ಇರಬಹುದು. ಮುಂದಿನ ತಿಂಗಳುಗಳಲ್ಲಿ ಕೋವಿಡ್‍ನಿಂದ ನಿಧನರಾದವರ ಸಂಖ್ಯೆಯನ್ನಾದರೂ ಮರು-ಪರಿಶೀಲನೆ ಮಾಡಿದರೆ ಈ ಸಂಖ್ಯೆಯ ನಿಖರತೆಯ ಸಮೀಪ ನಾವು ತಲುಪಬಹುದು. ಸದ್ಯದ ಸಂಖ್ಯೆಯ ಪ್ರಮಾಣದಲ್ಲಿಯೇ ಕೋವಿಡ್ ಸಾವಿನ ಸಂಖ್ಯೆ ರಾಜ್ಯದ ಆರೋಗ್ಯ ಸೇವೆಗಳ ಬಗ್ಗೆ ಕಪ್ಪು ಚುಕ್ಕೆ ಇಡುವಂತಿದೆ ಮತ್ತು ಕಳವಳಕ್ಕೆ ಎಡೆಮಾಡುಕೊಡುವಂತಿದೆ. ಕಳೆದ ಐದಾರು ದಶಕಗಳಲ್ಲಿ ನಾವು ಆರೋಗ್ಯ ಸೇವೆಗಳಿಗೆ ಮಾಡಿರುವ ಒಟ್ಟು ಹೂಡಿಕೆ-ವ್ಯಯದ ಹಿನ್ನೆಲೆಯಲ್ಲಿ ಇದು ಇನ್ನಷ್ಟು ನಿರಾಶಾದಾಯಕ ಭಾವನೆಗೆ ಎಡೆಮಾಡಿಕೊಡುತ್ತದೆ. ಇಷ್ಟು ವರ್ಷಗಳ ನಮ್ಮ ನೀತಿ-ಯೋಜನೆ-ಕ್ರಿಯಾಯೋಜನೆಗಳು ವಿಫಲವಾದ ಹತಾಶ ಭಾವನೆ ಮೂಡಿಸುತ್ತದೆ.

ಇದಕ್ಕೆ ಕಾರಣಗಳೇನು..? ವಿಷಮ ಪರಿಸ್ಥಿತಿಯೊಂದರಲ್ಲಿ ನಮ್ಮ ‘ವ್ಯವಸ್ಥೆ’ ಕುಸಿದುಬಿದ್ದು ನಾವು ಕೇವಲ ‘ಆಡ್‍ಹಾಕ್’ ರೀತಿಯಲ್ಲಿ ಆರೋಗ್ಯ ಸೇವೆಗಳಿಗೆ ತೇಪೆ ಹಾಕಿ ಕೈಗೆ ಸಿಕ್ಕ ಮುಲಾಮು ಬಳಿಯವ ಪರಿಸ್ಥಿತಿಗೆ ಕಾರಣರ್ಯಾರು..? ಪ್ರತಿಯೊಂದು ಬಿಕ್ಕಟ್ಟಿನ ಸಮಯದಲ್ಲಿಯೂ ನಾವು ಭೂಮಿ-ಆಕಾಶ ನೋಡಬೇಕಾಗುವ ಸನ್ನಿವೇಶ ಹೇಗೆ ಬೆಳೆದುಬಂತು..?

 • ಕರ್ನಾಟಕದ ಆರೋಗ್ಯ ಸೇವೆಗಳ ಗುಣಮಟ್ಟ ಕಡಿಮೆಯಾಗಿರುವುದು ಕೇವಲ ಈ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತ ವಿಷಯವೇನಲ್ಲ. ಸರ್ಕಾರಿ ಸೇವೆಗಳ ಮತ್ತು ಸರ್ಕಾರಿ ವ್ಯವಸ್ಥೆಯ ಗುಣಮಟ್ಟ ಪ್ರತಿಯೊಂದು ಇಲಾಖೆ ಮತ್ತು ಕ್ಷೇತ್ರಗಳಲ್ಲಿಯೂ ಕುಸಿದುಬಿದ್ದಿದೆ. ಒಟ್ಟಾರೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಶಿಥಿಲತೆ ಮತ್ತು ಅವನತಿ ಕಂಡುಬಂದಿರುವ ಸನ್ನಿವೇಶದಲ್ಲಿ ಕೇವಲ ಆರೋಗ್ಯ ಇಲಾಖೆ ಇದಕ್ಕೆ ಹೊರತಾಗಿರುವುದು ಸಾಧ್ಯವಿಲ್ಲ. ಒಟ್ಟಾರೆ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ನಿರ್ಲಕ್ಷ್ಯ ಮತ್ತು ಅದಕ್ಷತೆ ಆರೋಗ್ಯ ಇಲಾಖೆಯನ್ನು ತಟ್ಟದಿರುವುದು ಸಾಧ್ಯವಿಲ್ಲ.
 • ಕಳೆದ ಎರಡು ಮೂರು ದಶಕಗಳಲ್ಲಿ ಕರ್ನಾಟಕದ ಯಾವುದೇ ಆರೋಗ್ಯ ಮಂತ್ರಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಬದ್ಧತೆಯನ್ನು ತೋರಿಸಿಲ್ಲ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾಲದ ಯಾವುದೇ ಆರೋಗ್ಯ ಮಂತ್ರಿ ವ್ಯವಸ್ಥೆಯನ್ನು ಸುಧಾರಿಸುವ ಯಾವುದೇ ಪ್ರಯತ್ನವನ್ನು ಮಾಡಿದ ವರದಿಯಿಲ್ಲ. ಪ್ರತಿಯೊಬ್ಬರು ‘ತಣ್ಣಗೆ ಮೇಯಲು’ ಆರೋಗ್ಯ ಇಲಾಖೆಯನ್ನು ಬಳಸಿಕೊಂಡ ಹಾಗೆಯೇ ಗೋಚರಿಸುತ್ತದೆ. ಈ ಯಾವುದೇ ಮಂತ್ರಿಗಳಿಂದ ಯಾವುದೇ ಆದರ್ಶದ, ದೊಡ್ಡತನದ ಅಥವಾ ಬದಲಾವಣೆಯ ಮಾತುಗಳನ್ನೇ ನಾವು ಕೇಳಿಲ್ಲ. ಈ ಪ್ರತಿಯೊಬ್ಬರು ಆರೋಗ್ಯ ಸೇವೆಗಳನ್ನು ಖಾಸಗಿಯವರಿಗೆ ಬಿಟ್ಟು ಇಲಾಖೆಯನ್ನು ಮುಚ್ಚುವ ಮನಸ್ಥಿತಿಯಲ್ಲಿಯೇ ಕೆಲಸ ಮಾಡಿದ ಹಾಗಿದೆ. ಇಲಾಖೆಯ ಆಸ್ಪತ್ರೆಗಳಿಗೆ ಖರೀದಿಸಲಾಗುವ ಔಷಧಿ, ಪರಿಕರ ಮತ್ತು ಮಂಚ-ಹಾಸಿಗೆ ಖರೀದಿಗಳಲ್ಲಿ ದುಡ್ಡುಮಾಡುವಷ್ಟಕ್ಕೆ ತಮ್ಮ ಕಾರ್ಯಶೀಲತೆ ಸೀಮಿತಗೊಳಿಸಿಕೊಂಡಿದ್ದಾರೆ. ಒಂದಿಬ್ಬರು ಖಾಸಗಿ ನರ್ಸಿಂಗ್ ಹೋಮ್‍ಗಳನ್ನು ಸರ್ಕಾರಿ ನಿಯಂತ್ರಣಕ್ಕೆ ಒಳಪಡಿಸುವ ಮತ್ತು ಈ ಮೂಲಕ ಭ್ರಷ್ಟಾಚಾರಕ್ಕೆ ಹೊಸದೊಂದು ವಿಧಾನ ಹುಡಿಕಿಕೊಳ್ಳುವ ಮಾತನ್ನಾಡಿದ್ದಾರೆ. ಈ ಆರೋಗ್ಯ ಮಂತ್ರಿಗಳಿಂದ ಯಾವುದೇ ಒಳ್ಳೆಯ ಕೆಲಸವನ್ನು ನಿರೀಕ್ಷಿಸದ ಮಟ್ಟಕ್ಕೆ ನಮ್ಮ ಬಹುತೇಕ ಮುಖ್ಯಮಂತ್ರಿಗಳು ಆರೋಗ್ಯ ಇಲಾಖೆಯ ಬಗ್ಗೆ ತಮ್ಮ ಕಾಳಜಿಯನ್ನು ಮೆರೆದಿದ್ದಾರೆ.
 • ಪ್ರಾಥಮಿಕ ಆರೋಗ್ಯ ಯುನಿಟ್‍ಗಳಿಂದ ಹಿಡಿದು ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಿಗೆ ನಮ್ಮ ಎಲ್ಲಾ ಆರೋಗ್ಯ ಸೇವೆ ಇಲಾಖೆಗಳಲ್ಲಿ ತೀವ್ರವಾದ ಸಿಬ್ಬಂದಿ ಕೊರತೆಯಿದೆ. ದಶಕಗಳಿಂದ ಈ ಆಸ್ಪತ್ರೆಗಳಲ್ಲಿ ನಿರ್ಧಾರಿತ ಸಿಬ್ಬಂದಿಯ ನಿಯೋಜನೆ ಆಗಿಲ್ಲ. ಹಲವೆಡೆ ಸಿಬ್ಬಂದಿ ಕೊರತೆ ಶೇಕಡಾ 70 ರಿಂದ 80 ರಷ್ಟಿದೆ. ಪರಿಣಿತ ವೈದ್ಯರ ಕೊರತೆಯಂತೂ ಹೇಳತೀರದ್ದಾಗಿದೆ. ಹಲವೆಡೆ ಉಪಕರಗಳನ್ನು ನಿಭಾಯಿಸಬಲ್ಲ ಸೂಕ್ತ ಟೆಕ್ನಿಶಿಯನ್ ಇಲ್ಲವಾಗಿದ್ದರೆ, ನರ್ಸ್, ಎಎನ್‍ಎಮ್, ವಾರ್ಡ್‍ಬಾಯ್‍ಗಳ ಕೊರತೆ ಯಾವುದೇ ವ್ಯದ್ಯಕೀಯ ಸೇವೆಗಳನ್ನು ದಕ್ಷತೆಯಿಂದ ನಡೆಸದಂತಾಗಿದೆ. ಈ ಹುದ್ದೆಗಳ ಭರ್ತಿಗೆ ರಾಜ್ಯದ ಹಣಕಾಸು ಇಲಾಖೆ ಅನುಮತಿ ನೀಡಿಲ್ಲವೆಂಬುದು ಮೇಲೆ ಕಾಣುವ ಕಾರಣವಾದರೂ ಈ ಸಿಬ್ಬಂದಿ ಕೊರತೆ ಸರ್ಕಾರದ ಆದ್ಯತೆಯನ್ನೇ ಪ್ರಶ್ನಿಸುವಂತಿದೆ.
 • ಇನ್ನು ಸರ್ಕಾರಿ ಆಸ್ಪತ್ರೆಗಳ ಕಟ್ಟಡ, ನೈರ್ಮಲ್ಯ ನಿರ್ವಹಣೆ, ಕಸ ವಿಲೇವಾರಿ, ಪರಿಕರ ನಿರ್ವಹಣೆ, ಮಂಚ-ದಿಂಬು-ಹಾಸಿಗೆ-ಬೆಡ್‍ಶೀಟ್‍ಗಳ ನಿರ್ವಹಣೆ ಮತ್ತು ಒಟ್ಟು ಈ ಆಸ್ಪತ್ರೆಗಳ ಮೇಲ್ವಿಚಾರಣೆಯನ್ನು ನಾವು ಪರಿಶೀಲಿಸುವ ಹಾಗೆಯೇ ಇಲ್ಲ. ಯಾವುದೇ ಕೆಳ ಮಧ್ಯಮ ವರ್ಗದ ರೋಗಿಯೂ ಈ ಆಸ್ಪತ್ರೆಗಳಿಗೆ ಹೋಗಬಯಸುವ ರೀತಿಯಲ್ಲಿ ಈ ಆಸ್ಪತ್ರೆಗಳಿಲ್ಲ. ಎಷ್ಟೇ ಬಡವನಾದರೂ ಅವನು ಖಾಸಗಿ ಕ್ಲಿನಿಕ್-ಆಸ್ಪತ್ರೆಗಳಿಗೇ ಹೋಗಿ ಆರೋಗ್ಯ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಗೆ ನೈರ್ಮಲ್ಯ ನಿರ್ವಹಣೆ ಮತ್ತಿತರ ಬಾಬ್ತುಗಳಿಗೆ ಸರ್ಕಾರ ಯಾವುದೇ ಧನಸಹಾಯ ನೀಡುತ್ತಿಲ್ಲ. ಕೊಡಲಾಗುತ್ತಿರುವ ಅಲ್ಪಸ್ವಲ್ಪ ಹಣದಲ್ಲಿ ಆಸ್ಪತ್ರೆಗಳ ಕನಿಷ್ಠ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗಳ ನಿರ್ವಹಣೆಗೆ ಯಾವುದೇ ಹಣ ನೀಡದ ಪರಿಸ್ಥಿತಿಯಲ್ಲಿ ಇವುಗಳ ನಿರ್ವಹಣೆಯನ್ನು ಬೇರೆ ಯಾವುದೇ ಸರ್ಕಾರಿ ಅಧಿಕಾರಿಗಳು ಪ್ರಶ್ನಿಸುವಂತಿಲ್ಲ.
 • ಕಳೆದ ಎರಡು ದಶಕಗಳಲ್ಲಿ ನಮ್ಮ ಸುತ್ತಲಿನ ಪ್ರಪಂಚವೇ ಸಂಪೂರ್ಣ ಬದಲಾಗಿದೆ. ಸಾರಿಗೆ ಮತ್ತು ಸಂವಹನ ಮಾಧ್ಯಮದ ಕ್ರಾಂತಿಯಿಂದ ಪರಸ್ಪರ ದೂರ ಗೌಣವಾಗಿದೆ. ಡಿಜಿಟಲ್ ಮತ್ತು ಮೊಬೈಲ್ ತಾಂತ್ರಿಕತೆಯ ಕ್ರಾಂತಿಕಾರಕ ಸುಧಾರಣೆಯಿಂದ ಹಲವು ಹೊಸ ಸಾಧ್ಯತೆಗಳು ಎದುರಾಗಿವೆ. ಈ ಬದಲಾದ ಸನ್ನವೇಶಕ್ಕೆ ತಕ್ಕಂತೆ ನಮ್ಮ ಆರೋಗ್ಯ ಸೇವೆಗಳನ್ನು ಕೂಡಾ ಬದಲಾಯಿಸುವ ಅಗತ್ಯವಿದೆ. ಆದರೆ ಒಟ್ಟಾರೆ ಆರೋಗ್ಯ ಇಲಾಖೆ ಮತ್ತು ಸೇವೆಗಳು 60 ರ ಮತ್ತು 70 ರ ದಶಕಗಳಲ್ಲಿ ರಚಿತವಾದ ಗುಣಮಟ್ಟವನ್ನು ಇಂದು ಹೆಚ್ಚಿಸುವ ಯಾವುದೇ ಮನಸ್ಥಿತಿ ಕಾಣದಾಗಿದೆ.
 • ಬಹಳ ಮುಖ್ಯವಾಗಿ ನಮ್ಮ ವೈದ್ಯಕೀಯ ಶಿಕ್ಷಣ ಬಹುತೇಕ ವ್ಯಾಪಾರೀಕರಣಗೊಂಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿದರೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಡೊನೇಶನ್ ಮತ್ತು ದುಬಾರಿ ಶುಲ್ಕ ಕಟ್ಟಿ ತರಬೇತಿ ಪಡೆದ ವೈದ್ಯರು ಹಳ್ಳಗಾಡಿನಲ್ಲಿ ಕೆಲಸ ಮಾಡುವ ಯಾವುದೇ ಸಾಧ್ಯತೆಯಿಲ್ಲ. ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೊರಗಿನ ವಾಣಿಜ್ಯೀಕರಣದ ವಾತಾವರಣದಲ್ಲಿ ಕೇವಲ ಹಣ ಗಳಿಸುವ ಮತ್ತು ಐಷಾರಾಮಿ ಜೀವನ ನಡೆಸುವಲ್ಲಿ ಸಹಕಾರಿಯಾಗುವ ವೃತ್ತಿ ಬಯಸುತ್ತಿದ್ದಾರೆ. ಹಳ್ಳಿಗಾಡಿನಲ್ಲಿ ಹೋಗಲಿ, ತಾಲ್ಲೂಕು-ಹೋಬಳಿ ಕೇಂದ್ರಗಳಲ್ಲಿ ಕೂಡಾ ಕೆಲಸ ಮಾಡಲು ಈ ವೈದ್ಯರು ಒಪ್ಪದ ಮನೋಭಾವದವರಾಗಿದ್ದಾರೆ. ಸಹಜವಾಗಿ ಜಿಲ್ಲೆಗಳ ಕೆಳಗಿನ ವೈದ್ಯಕೀಯ ಸೇವೆಗಳು ಶಿಥಿಲಗೊಳ್ಳುತ್ತಿವೆ.
 • ಕಳೆದೆರೆಡು ದಶಕಗಳಲ್ಲಿ ಸರ್ಕಾರವು ಸಮುದಾಯ ಕೇಂದ್ರಿತ ಆರೋಗ್ಯ ಸೇವೆಗಳ ಬಗ್ಗೆ ಸೂಕ್ತ ಹಣ ವ್ಯಯ ಮಾಡುತ್ತಿಲ್ಲ. ಹಳ್ಳಿಗಳ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ಸಂಬಳ ವಿತರಣೆಯೇ ಆಗುತ್ತಿಲ್ಲ. ಈ ಕಾರ್ಯಕರ್ತೆಯರ ಮೇಲೆಯೇ ಎಲ್ಲಾ ಜವಾಬ್ದಾರಿ ಹೊರಿಸಲಾಗಿದೆ. ಜಿಲ್ಲಾ-ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಗ್ರಾಮಮಟ್ಟದ ಈ ಕಾರ್ಯಕರ್ತೆಯರ ನಡುವೆ ಬೇಕಿರುವ ಪೂರಕ ವ್ಯವಸ್ಥೆ ಕಾಣದಾಗಿದೆ. ಪುನರಾವರ್ತನೆಯಾಗದ ಸೇವೆಗಳ ಹೊರತಾಗಿ ಬೇರಾವುದೇ ರೋಗ ಕೇಂದ್ರಿತ ಚಿಕಿತ್ಸೆ ಹಾಗೂ ಗ್ರಾಮನೈರ್ಮಲ್ಯ ನಿರ್ವಹಣೆ ಕಾಣದಾಗಿದೆ. ಸಮುದಾಯ ಆರೋಗ್ಯ ನಿರ್ವಹಣೆಗೆ ಸೂಕ್ತ ಸಿಬ್ಬಂದಿ, ಟೆಸ್ಟಿಂಗ್ ಲ್ಯಾಬೊರೇಟರಿ, ಪರಿಕರಗಳು ಮತ್ತು ತರಬೇತಿ ಇಲ್ಲವಾಗಿದೆ. ಸಾಂಕ್ರಾಮಿಕ ರೋಗಗಳನ್ನು ನಿರ್ವಹಿಸಿಲು ಬೇಕಾಗುವ ಪದ್ಧತಿ-ತರಬೇತಿ-ಕ್ರಮಬದ್ಧ ನಿರ್ವಹಣೆ ಇಲ್ಲವಾಗಿದೆ. ಕನಿಷ್ಠಪಕ್ಷ ಪಕ್ಕದ ಕೇರಳ ರಾಜ್ಯದಲ್ಲಿ ಕಮ್ಯುನಿಟಿ ಹೆಲ್ತ್ ವಿಷಯದಲ್ಲಿ ತರಲಾಗಿರುವ ಬದಲಾವಣೆಗಳನ್ನಾದರೂ ನಾವು ಅಳವಡಿಸಿಕೊಳ್ಳಬೇಕಿದೆ.
 • ಈ ಮಧ್ಯೆ ವೈದ್ಯಕೀಯ ಸೇವೆಗಳು ಸಂಪೂರ್ಣ ಖಾಸಗಿ ವಲಯಕ್ಕೆ ವರ್ಗಾವಣೆಯಾಗುವುದರಲ್ಲಿವೆ. ಸರ್ಕಾರಿ ವಲಯದ ಆಸ್ಪತ್ರೆಗಳ ಸಿಬ್ಬಂದಿ ಕೊರತೆ, ಅದಕ್ಷತೆ ಮತ್ತು ನಿರ್ವಹಣೆ ಕೊರತೆಯ ಕಾರಣದಿಂದ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೇ ಹೋಗಬೇಕಾದ ಪ್ರಮೇಯ ಒದಗಿದೆ. ಎಸ್.ಎಂ.ಕೃಷ್ಣ ಸರ್ಕಾರದ ಯಶಸ್ವಿನಿ ಯೋಜನೆ ಕೂಡಾ ಖಾಸಗೀಕರಣಕ್ಕೆ ಪುಷ್ಟಿ ನೀಡಿ ಸರ್ಕಾರಿ ವಲಯದ ಆಸ್ಪತ್ರೆಗಳ ಅವನತಿಗೆ ಇನ್ನಷ್ಟು ಕಾರಣವಾಗಿತ್ತು. ಈ ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ತಾಯಿ-ಮಕ್ಕಳ ಚಿಕಿತ್ಸೆ, ಮೂಳೆ-ಕೀಲು ಚಿಕಿತ್ಸೆ ಮುಂತಾದ ಜನಪ್ರಿಯ ಪರಿಣತಿಯ ಚಿಕಿತ್ಸೆಗಳು ದೊರೆಯುತ್ತಾದರೂ ಸಾಂಕ್ರಾಮಿಕ ರೋಗಗಳಂತಹಾ ವೈದ್ಯಕೀಯ ಸಮಸ್ಯೆಗಳಿಗೆ ಯಾವುದೇ ಪರಿಹಾರ ದೊರೆಯುವ ಸಾಧ್ಯತೆಯಿಲ್ಲ. ಮೇಲಾಗಿ ಕೇವಲ ಲಾಭಕ್ಕಾಗಿ ರಚಿತವಾಗಿರುವ ಈ ವಲಯದಲ್ಲಿ ಬಡ-ಗ್ರಾಮೀಣ-ನಿರ್ಗತಿಕ ರೋಗಿಗಳಿಗೆ ಪ್ರವೇಶವಿಲ್ಲ. ಕಾಲಕ್ರಮೇಣ ವಾಣಿಜ್ಯೀಕರಣ-ಖಾಸಗೀಕರಣದ ಜಾಲದಲ್ಲಿ ಸರ್ಕಾರಿ ವಲಯದ ಆರೋಗ್ಯ ಸೇವಾ ವ್ಯವಸ್ಥೆ ಶಿಥಿಲಗೊಂಡಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಲ್ಪವಾದರೂ ಚಿಕಿತ್ಸೆ ದೊರೆಯುತ್ತಿದ್ದರೆ ಮಧ್ಯ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿನ ಸರ್ಕಾರಿ ವೈದ್ಯಕೀಯ ಚಿಕಿತ್ಸೆ ಸಂಪೂರ್ಣ ಕುಸಿದಿದೆ. ಇತ್ತೀಚಿಗೆ ಸ್ಥಾಪಿತವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಕ್ಕಮಟ್ಟಿಗೆ ಚಿಕಿತ್ಸೆ ದೊರೆಯುತ್ತಿದ್ದರೂ ಈ ಸೇವೆಗೆ ತನ್ನದೇ ಆದ ಸೀಮಿತತೆ ಇದೆ.

ಕೋವಿಡ್ ಸಮಯದಲ್ಲಿ ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಪ್ರಾಮುಖ್ಯತೆ ಮತ್ತೊಮ್ಮೆ ನಮಗೆ ಗೋಚರವಾಗಿದೆ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ನಾವು ಸರ್ಕಾರಿ ಸೌಲಭ್ಯಗಳ ಮೇಲೆಯೇ ಅವಲಂಬಿತವಾಗಬೇಕೆನ್ನುವುದು ನಮಗೆ ಮನದಟ್ಟಾಗಿದೆ. ಈ ಎರಡನೆಯ ಅಲೆಯ ಸಂದರ್ಭದಲ್ಲಿಯಂತೂ ಖಾಸಗಿ ಆಸ್ಪತ್ರೆಗಳು ಸುಲಿಗೆ ಕೇಂದ್ರಗಳಾದರೆ ಸರ್ಕಾರಿ ಆರೋಗ್ಯ ಸೇವಾ ಪದ್ಧತಿ ಬಡ ರೋಗಿಗಳಿಗೆ ಸಂಜೀವಿನಿಯಾಗಿದೆ. ಕೋವಿಡ್ ಈ ವಿಷಯದಲಾದÀರೂ ನಮ್ಮ ಕಣ್ಣು ತೆರೆದಿದೆ ಹಾಗೂ ನಮಗೆ ಕನ್ನಡಿ ಹಿಡಿದಿದೆ. ಮತ್ತೊಮ್ಮೆ ನಮ್ಮನ್ನು ಸರ್ಕಾರಿ ವೈದ್ಯಕೀಯ ಸೇವೆಗಳ ಉತ್ತಮಿಕೆ ಹೇಗೆಂಬ ದಿಕ್ಕಿನಲ್ಲಿ ಚಿಂತೆಗೆ ಹಚ್ಚಿದೆ. ಮುಂದಿನ ಮೂರನೇ ಅಲೆ ಅಥವಾ ಬೇರಾವುದೇ ಸಾಂಕ್ರಾಮಿಕ ರೋಗದ ಮೊದಲು ನಮ್ಮ ಸರ್ಕಾರಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಮಯಮಿತಿ ನೀಡಿದೆ. ಈ ಸಂದರ್ಭದಲ್ಲಿ ಈ ಕೆಳಕಂಡ ಸುಧಾರಣೆಗಳು ಸದ್ಯಕ್ಕೆ ಅನಿವಾರ್ಯವಾಗಿ ನಮಗೆ ಗೋಚರಿಸುತ್ತಿವೆ.

 1. ಹೋಬಳಿ ಮಟ್ಟದಲ್ಲಿ ಸಂಪೂರ್ಣ ಪ್ರಾಥಮಿಕ ಚಿಕಿತ್ಸೆ: ಮೊದಲು ನಮ್ಮ ಬದಲಾದ ಸಮಯ-ಸಂದರ್ಭವನ್ನು ನಾವು ಗುರುತಿಸಬೇಕು. ಹಳ್ಳಿಹಳ್ಳಿಗೆ ನೀಡಲಾಗಿರುವ ರಸ್ತೆ ಮತ್ತು ಸಾರಿಗೆ ಆಯ್ಕೆಗಳು ನಮ್ಮಲ್ಲಿನ ಪರಸ್ಪರ ದೂರವನ್ನು ಇಲ್ಲವಾಗಿಸಿವೆ. ಪ್ರತಿಯೊಬ್ಬರ ಕೈಯಲ್ಲಿನ ಮೊಬೈಲ್ ಫೋನ್‍ಗಳು ಸಂವಹನದ ಕೊರತೆಯನ್ನು ಕಡಿಮೆ ಮಾಡಿದೆ. ಈಗ ಸರ್ಕಾರಿ ಆರೋಗ್ಯ ಚಿಕಿತ್ಸಾ ಕೇಂದ್ರಗಳನ್ನು ಪ್ರತಿಯೊಂದು ಗ್ರಾಮದಲ್ಲಿ ತೆರೆಯಬೇಕಾದ ಪ್ರಮೇಯ ಕಾಣುತ್ತಿಲ್ಲ. ಈಗಿರುವ ಸಿಬ್ಬಂದಿಯೆಲ್ಲವನ್ನೂ ಹೋಬಳಿಗೆ ಒಂದರಂತೆ ಸಂಪೂರ್ಣ ಪ್ರಾಥಮಿಕ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಯೊಂದರಲ್ಲಿ ನಿಯೋಜಿಸಬಹುದು. ಹೋಬಳಿಗೆ ಒಂದರಂತೆ ಹಾಗೂ ತಾಲ್ಲೂಕಿಗೆ 5 ರಿಂದ 6 ರಂತೆ ಈ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಎಲ್ಲಾ ರೀತಿಯ ಪ್ರಾಥಮಿಕ ಚಿಕಿತ್ಸೆ ನೀಡಿ ಅಗತ್ಯ ಬಿದ್ದರೆ ತಾಲ್ಲೂಕು ಮಟ್ಟದ ಸುಸಜ್ಜಿತ ರೆಫೆರಲ್ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಬಹುದು. ಇದರಿಂದ ಸಿಬ್ಬಂದಿ ಕೊರತೆಯ ದೂರು ಕಡಿಮೆಯಾಗಿ ನಿರ್ವಹಣೆ ಸುಲಭವಾಗುತ್ತದೆ. ಎಲ್ಲಾ ಸಿಬ್ಬಂದಿಗೆ ಈ ಹೋಬಳಿ ಕೇಂದ್ರದಲ್ಲಿಯೇ ವಸತಿ ಸೌಲಭ್ಯ ಕೊಡಮಾಡಿದರೆ ಸಿಬ್ಬಂದಿಯ ಕ್ಷಮತೆಯೂ ಹೆಚ್ಚುತ್ತದೆ.
 2. ವೈದ್ಯಕೀಯ ಶಿಕ್ಷಣದ ಸರ್ಕಾರೀಕರಣ: ಹೋಬಳಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಮಟ್ಟದಲ್ಲಿ ಸಂಪೂರ್ಣ ರೆಪರಲ್ ವೈದ್ಯಕೀಯ ಚಿಕಿತ್ಸೆ ನೀಡಬಲ್ಲಂತಹ ಆಸ್ಪತ್ರೆ ಸಂಚಯಗಳ ಜೊತೆಗೆ ಈಗಿನ ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಬೇಕು. ಈ ಕಾಲೇಜುಗಳಲ್ಲಿ ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಗಳನ್ನು ವೈದ್ಯಕೀಯ ಮತ್ತು ನರ್ಸಿಂಗ್ ವಲಯಗಳಲ್ಲಿ ಒದಗಿಸಬೇಕು. ಈಗ ರಾಜ್ಯದಲ್ಲಿ 56 ವೈದ್ಯಕೀಯ ಕಾಲೇಜುಗಳು ಮತ್ತು ಅವುಗಳಲ್ಲಿ ಸುಮಾರು 8,300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಅವಕಾಶವಿದೆ. ಆದರೆ ಅವುಗಳಲ್ಲಿ ಮೂರನೆಯ ಎರಡು ಭಾಗದಷ್ಟು ಕಾಲೇಜುಗಳು ಖಾಸಗಿ ಒಡೆತನಕ್ಕೆ ಸೇರಿವೆ. ಈ ಸಂಸ್ಥೆಗಳಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳನ್ನು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವಂತೆ ಪುಸಲಾಯಿಸುವುದು ಕಷ್ಟ ಸಾಧ್ಯವೆ ಸರಿ. ಹೀಗಾಗಿ, ರಾಜ್ಯ ಸರ್ಕಾರವು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕು ಹಾಗೂ ಈ ಸಂಸ್ಥೆಗಳಲ್ಲಿ ಕಡಿಮೆ ಖರ್ಚಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸುವ ವೈದ್ಯರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎನ್ನುವ ನಿಯಮವನ್ನು ಮಾಡಬೇಕು. ಇದಕ್ಕೆ ಬದ್ಧರಾಗುವ ವೈದ್ಯರಿಗೆ ಸ್ನಾತಕೋತ್ತರ ಕೋರ್ಸುಗಳಲ್ಲಿ ಆದ್ಯತೆಯ ಮೇರೆಗೆ ಅವಕಾಶಗಳನ್ನು ಒದಗಿಸಬೇಕು. ಇಂತಹ ಪ್ರೋತ್ಸಾಹಕ ನಿಯಮಗಳು ಮತ್ತು ಸುಸಜ್ಜಿತ ವ್ಯವಸ್ಥೆಗಳಿರುವ ಆಸ್ಪತ್ರೆ ಸಮುಚ್ಚಯಗಳನ್ನು ಸೃಷ್ಟಿಸಿದರೆ, ಸರ್ಕಾರಿ ಆಸ್ಪತ್ರೆಗಳು ಸಹ ಚೆನ್ನಾಗಿಯೆ ಕೆಲಸ ಮಾಡುತ್ತವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದರೆ, ಸುಮಾರು 31 ಕಾಲೇಜುಗಳಲ್ಲಿ 3,000ಕ್ಕೂ ಮೀರಿ ವೈದ್ಯರಿಗೆ ಶಿಕ್ಷಣ ನೀಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ ಕನಿಷ್ಟ 1000 ಜನರಿಗೆ ಒಬ್ಬ ವೈದ್ಯರ ಅವಶ್ಯಕತೆಯಿದೆ ಎನ್ನುವುದಾದರೂ, ಕರ್ನಾಟಕಕ್ಕೆ ಸುಮಾರು 65,000 ವೈದ್ಯರ ಅಗತ್ಯವಿದೆ. ನಮ್ಮ ಗುರಿ ಇದರ ಎರಡರಷ್ಟು ಸಂಖ್ಯೆಯಲ್ಲಾದರೂ ವೈದ್ಯರ ಲಭ್ಯತೆಯಿರುವಂತೆ ನೋಡಿಕೊಳ್ಳುವುದು ಆಗಬೇಕು. ಪ್ರತಿವರ್ಷವೂ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಂದ ರಾಜ್ಯಕ್ಕೆ ಕನಿಷ್ಟ 6,500 ವೈದ್ಯರು ಲಭ್ಯವಾಗುವಂತೆ ನಾವು ನೋಡಿಕೊಳ್ಳಬೇಕು.
 3. ಔಷಧಿ ಖರೀದಿ ಮತ್ತು ಸರಬರಾಜಿನ ಸಮಸ್ಯೆ: ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಜನ ಔಷಧಾಲಯಗಳಲ್ಲಿ ಒದಗಿಸುವುದು ಒಂದು ಒಳ್ಳೆಯ ಆದರ್ಶ. ಕರೋನಾ ಲಸಿಕೆಯ ಸಂದರ್ಭದಲ್ಲಿಯೆ ನಾವು ನೋಡುತ್ತಿರುವಂತೆ, ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿದರೆ ಅಪಾರ ಪ್ರಮಾಣದಲ್ಲಿ ಉಳಿತಾಯವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ಜೊತೆಗೆ ಅನಾವಶ್ಯಕವಾಗಿ ಔಷಧಿಗಳನ್ನು ನೀಡುವ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡುವ ಪದ್ಧತಿಯನ್ನು ಕಡಿಮೆ ಮಾಡಿದರೆ ಮತ್ತಷ್ಟು ಉಳಿತಾಯವೂ ಆಗುತ್ತದೆ. ಆದರೆ ಇಂದು ಎರಡು ಬಗೆಯ ಭ್ರಷ್ಟತೆಯನ್ನು ಈ ವ್ಯವಸ್ಥೆಯಲ್ಲಿ ನೋಡುತ್ತಿದ್ದೇವೆ. ಒಂದು, ಔಷಧಿ ಕಂಪನಿಗಳು, ವೈದ್ಯಕೀಯ ಸಲಕರಣೆಗಳ ಉತ್ಪಾದಕರು ಮತ್ತು ಪ್ರಯೋಗಾಲಯಗಳು ವೈದ್ಯರುಗಳ ಮೂಲಕ ಅನವಶ್ಯಕ ಔಷಧಿಗಳು ಮತ್ತು ಚಿಕಿತ್ಸಾ ಕ್ರಮಗಳನ್ನು ರೋಗಿಗಳ ಮೇಲೆ ಹೇರುತ್ತಿರುವುದು. ಎರಡನೆಯದು, ಸರ್ಕಾರಿ ವಲಯದ ಖರೀದಿ-ಸರಬರಾಜು ವ್ಯವಸ್ಥೆಯಲ್ಲಿನ ಸೋರಿಕೆ ಮತ್ತು ಭ್ರಷ್ಟತೆ. ಇವುಗಳನ್ನು ನಿವಾರಿಸುವುದು ಹೇಗೆ? ಬಹುಶಃ ಖರೀದಿ-ಸರಬರಾಜು ವ್ಯವಸ್ಥೆಯನ್ನೆ ನಿಲ್ಲಿಸಿ, ಸರಕಾರವು ಅಗತ್ಯ ಔಷಧಿಗಳ ಬೆಲೆ-ಗುಣಮಟ್ಟಗಳನ್ನು ನಿಯಂತ್ರಿಸಬಹುದಾಗಿದೆ. ಕೈಗೆಟಕುವ ದರಗಳಲ್ಲಿ ಔಷಧಿಗಳು ದೊರೆತರೆ, ರೋಗಿಗಳೆ ಖರೀದಿಸಿಯಾರು. ಇದರಿಂದ ಪ್ರತಿವರ್ಷವೂ ಉಳಿಕೆಯಾಗುವ ಸುಮಾರು 3,000 ಕೋಟಿಗಳಲ್ಲಿ ಆಸ್ಪತ್ರೆಗಳ ಆಧುನೀಕರಣ ಮತ್ತು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯನ್ನು ಮಾಡಬಹುದು.
 4. ಆರೋಗ್ಯ ವಿಮೆ: ಭಾರತ ಸರ್ಕಾರ ಆಯುಷ್ಮಾನ್ ಭಾರತ ಎಂಬ ವೈದ್ಯಕೀಯ ವಿಮೆ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಅಥವಾ ಇದೇ ತೆರನಾಗಿ ಎಲ್ಲ ಬಿಪಿಎಲ್-ಎಪಿಎಲ್ ಕಾರ್ಡ್ ಉಳ್ಳವರಿಗೆ ವೈದ್ಯಕೀಯ ವಿಮೆ ನೀಡಬಹುದು. ಇದರಿಂದ ಸರ್ಜರಿ ಸೇರಿದಂತೆ ಯಾವುದೇ ಗಂಭೀರ ವೈದ್ಯಕೀಯ ವೆಚ್ಚವನ್ನು ಬಡರೋಗಿಗಳು ಭರಿಸಲು ಸಾಧ್ಯವಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಈ ಎಲ್ಲಾ ಸೌಲಭ್ಯಗಳು ದೊರಕುವಂತೆ ಮಾಡಿ ಸರ್ಕಾರಿ ಆಸ್ಪತ್ರೆಗಳೂ ಈ ಎಲ್ಲಾ ಸೇವೆಗಳಿಗೆ ಶುಲ್ಕ ವಿಧಿಸಿ ಆದಾಯ ಗಳಿಸುವ ರೀತಿಯಲ್ಲಿ ಸಹಾ ಈ ಯೋಜನೆಯನ್ನು ಕಾರ್ಯಾನ್ವಯಿತಗೊಳಿಸಬಹುದಾಗಿದೆ.
 5. ಕಮ್ಯುನಿಟಿ ಹೆಲ್ತ್‍ಗಾಗಿ ಕೆಹೆಚ್‍ಎಸ್: ಕಮ್ಯುನಿಟಿ ಹೆಲ್ತ್ ಯೋಜನೆಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಬೇಕಿದೆ. ಇದಕ್ಕೆ ಬೇಕಾದ ಸಿಬ್ಬಂದಿ ನಿಯೋಜನೆ ಮೊದಲು ಆಗಬೇಕಿದೆ. ಎಎನ್‍ಎಮ್ ಆಶಾ ಕಾರ್ಯಕರ್ತೆಯರಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಬೇಕಿರುವ ಲ್ಯಾಬೊರೇಟರಿ ಸ್ಥಾಪನೆ ಮಾಡುವವರಿಗೆ ಸಂಪೂರ್ಣವಾಗಿ ಸಮುದಾಯ ಆರೋಗ್ಯ ಸೌಲಭ್ಯವನ್ನು ಆಧುನೀಕರಿಸಬೇಕಿದೆ. ಬ್ರಿಟನ್ನಿನ ಎನ್‍ಹೆಚ್‍ಎಸ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕೆಎಚ್‍ಎಸ್ ಎಂಬಂತೆ ಸಂಪೂರ್ಣವಾಗಿ ಸಮುದಾಯದ ಆರೋಗ್ಯದ ಮೇಲೆ ನಿಗಾ ವಹಿಸುವ ಯೋಜನೆ ಬೇಕಿದೆ.
 6. ಎಲ್ಲರಿಗೂ ಆರೋಗ್ಯ ಶಿಕ್ಷಣ: ಆಡುಭಾಷೆ ಕನ್ನಡದಲ್ಲಿ ಆರೋಗ್ಯ ಶಿಕ್ಷಣದ ಅತೀವ ಕೊರತೆ ತುಂಬಬೇಕಿದೆ. ಗರ್ಭಿಣಿಯರ ಆರೋಗ್ಯ, ತಾಯಿ-ಮಕ್ಕಳ ಆರೋಗ್ಯ, ಸಾಮಾನ್ಯ ಅಂಟು ರೋಗಗಳು, ಸಂತಾನೋತ್ಪತ್ತಿ ಶಿಕ್ಷಣ ಮತ್ತಿತರ ವಿಷಯಗಳ ಬಗ್ಗೆ ಕನ್ನಡದಲ್ಲಿ ಕೈಪಿಡಿ ರಚನೆ ಮತ್ತು ಉಚಿತ ವಿತರಣೆಯ ಅಗತ್ಯವಿದೆ. ಈಗಲೂ ಕೂಡ ಈ ವಿಷಯಗಳಲ್ಲಿ ತಿಳಿವಳಿಕೆಯ ಕೊರತೆ ಅನೇಕ ತಪ್ಪು ಮತ್ತು ಅನಾರೋಗ್ಯಕರ ನಡೆವಳಿಕೆಗೆ ಕಾರಣವಾಗಿದೆ. ಹೆಂಗಸರ ಆರೋಗ್ಯದ ವಿಷಯದಲ್ಲಿಯೂ ಪ್ರತಿಯೊಬ್ಬ ಮಹಿಳೆಗೆ ಆಕೆಯ ಆಡುಭಾಷೆಯಲ್ಲಿ ಕೈಪಿಡಿಯನ್ನು ತಕ್ಷಣವೇ ನೀಡಬೇಕಿದೆ.
 7. ಮಾನಸಿಕ ಆರೋಗ್ಯ ಚಿಕಿತ್ಸೆ: ಮಾನಸಿಕ ಆರೋಗ್ಯ ಕಾಳಜಿಯನ್ನು ನಾವು ಇದುವರೆಗೂ ಸಂಪೂರ್ಣವಾಗಿ ಕಡೆಗಣಿಸಿದ್ದೇವೆ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿಯೂ ಖಿನ್ನತೆ, ಮಾನಸಿಕ ಅಸ್ವಸ್ಥತೆ ಮತ್ತು ಮಾನಸಿಕ ದೌರ್ಬಲ್ಯಗಳು ಯಾವುದೇ ಪರಿಶೀಲನೆ-ಚಿಕಿತ್ಸೆ ದೊರೆಯದೇ ಉಳಿದಿವೆ. ಕರ್ನಾಟಕದಾದ್ಯಂತ ಹೋಬಳಿ ಮಟ್ಟದ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾನಸಿಕ ಚಿಕಿತ್ಸಾ ವೈದ್ಯರನ್ನು ನೇಮಿಸಬೇಕಿದೆ ಹಾಗೂ ಇವರಿಗೆ ಸೂಕ್ತ ಚಿಕಿತ್ಸಕ ವಾತಾವರಣ ಸೃಷ್ಟಿಸಬೇಕಿದೆ.

ಬೊಬ್ಬೆ ಹೊಡೆಯಬೇಡಿ ಎಂದ ಮುಖ್ಯಮಂತ್ರಿ..!

ಕರ್ನಾಟಕದ ಶಿಥಿಲ ಆರೋಗ್ಯ ವ್ಯವಸ್ಥೆಯ ಇನ್ನೊಂದು ಶೋಚನೀಯ ಮುಖವನ್ನು ನಮ್ಮ ಅಧಿಕಾರಸ್ಥರು ತೋರಿಸಿದರು. ದುರದೃಷ್ಟಕರವೆಂದರೆ ಇದರ ಮುಂಚೂಣಿಯಲ್ಲಿ ಇದ್ದದ್ದು ರಾಜ್ಯದ ಮುಖ್ಯಮಂತ್ರಿಗಳೆ. ವ್ಯಾಕ್ಸಿನ್ ವ್ಯವಸ್ಥೆಯನ್ನು ತುರ್ತಾಗಿ ಮಾಡುವಂತೆ ಕೇಳಿದ ರಾಜ್ಯದ ಜನರಿಗೆ `ಬೊಬ್ಬೆ ಹೊಡೆಯಬೇಡಿ’ ಎನ್ನುವ ಭತ್ರ್ಸನೆಯ ಮಾತುಗಳು ಅವರ ಬಾಯಿಯಿಂದಲೆ ಹೊರಬಂದವು. ಕರೋನಾದಿಂದ ಬಸವಳಿದಿರುವ ಜನರಿಗೆ ಸಾಂತ್ವನ ಹೇಳುವುದಿರಲಿ, ಬದಲಿಗೆ ಅವರು ಸಂಪೂರ್ಣ ಅಸಹನೆಯಿಂದ ವರ್ತಿಸಿದ್ದು ರಾಜ್ಯದ ಹಿರಿಯ ನಾಯಕರೊಬ್ಬರಿಗೆ ಗೌರವ ತರುವಂತಹ ವಿಷಯವಲ್ಲ. ಅದಿರಲಿ, ಅವರ ಈ ಮಾತಿಗೆ ಜನರಾಗಲಿ, ವಿರೋಧಪಕ್ಷದ ನಾಯಕರುಗಳಾಗಲಿ ಆಕ್ಷೇಪ ಮಾಡಲಿಲ್ಲ ಎನ್ನುವುದು ನಮ್ಮ ರಾಜಕೀಯ ಸಂಸ್ಕೃತಿ ತಲುಪಿರುವ ಮಟ್ಟವನ್ನು ತೋರಿಸುತ್ತದೆ.

ಇನ್ನು ಅವರ ಮಂತ್ರಿಮಂಡಳದ ಸದಸ್ಯರು ತಮ್ಮ ನಾಯಕನ ಉದಾಹರಣೆಯನ್ನು ಅನುಸರಿಸಲು ಹಿಂಜರಿಯಲಿಲ್ಲ. ಪಡಿತರ ವಿತರಣೆಯ ಜವಾಬ್ದಾರಿಯನ್ನು ಹೊಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರು ಹೆಚ್ಚಿನ ಪಡಿತರ ಬೇಡಿದ ರೈತನೊಬ್ಬನಿಗೆ, ಅವನ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಮಾತ್ರ ಹೇಳಿ ಸುಮ್ಮನಾಗಲಿಲ್ಲ. ಜೊತೆಗೆ ಅವನು (ಮತ್ತು ಅವನ ಕುಟುಂಬದವರು) ಸಾಯಬಹುದು ಎನ್ನುವ ಪುಕ್ಕಟೆ ಸಲಹೆಯನ್ನು ಕೊಟ್ಟರು. ಇನ್ನೊಂದು ಸಂದರ್ಭದಲ್ಲಿ, ತಮ್ಮ ಉಸ್ತುವಾರಿ ಜಿಲ್ಲೆಯಾದ ಬಾಗಲಕೋಟೆಯ ವೈದ್ಯರುಗಳೊಡನೆ ಮಾತನಾಡುವಾಗ, ಇದೇ ಸಚಿವರು `ಜನರಿಗೆ ಏನಾದರೂ ಸರಿ, ತಾವು ಬದುಕಿ ಉಳಿಯಬೇಕು’ ಎನ್ನುವ ಮಾತುಗಳನ್ನೂ ಆಡಿದರು.

ಲಾಕ್‍ಡೌನುಗಳು ಮತ್ತು ಕರೋನಾ ಕಾಲದ ಆರ್ಥಿಕ ಕುಸಿತದಿಂದ ಜರ್ಜರಿತರಾಗಿರುವ ರಾಜ್ಯದ ಜನರಿಗೆ ಹೆಚ್ಚಿನ ಪಡಿತರ ನೀಡುವಂತೆ ಮತ್ತು ದುಡಿಯುವ ವರ್ಗಗಳಿಗೆ ಒಂದಷ್ಟು ಧನಸಹಾಯ ಮಾಡುವಂತೆ ವಿರೋಧಪಕ್ಷಗಳು ಸಲಹೆ ನೀಡಿದಾಗ ಮತ್ತೊಬ್ಬ ಹಿರಿಯ ಸಚಿವರು, `ನಾವೇನು ನೋಟು ಮುದ್ರಣ ಮಾಡುತ್ತಿದ್ದೇವೆಯೇ?’ ಎಂದರು. ಹೌದು, ನೋಟು ಮುದ್ರಿಸಿ ಹಂಚುವುದೆ ಇವತ್ತಿನ ತುರ್ತು ಎಂದು ಜಗತ್ತಿನ ಎಲ್ಲ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಕರೋನಾ ಕನ್ನಡಿಯಲ್ಲಿ ಕಾಣುವ ಉತ್ತರಗಳು ನಮ್ಮ ಆಡಳಿತ ವ್ಯವಸ್ಥೆಯ ಬಿಕ್ಕಟ್ಟುಗಳನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಪರಿಣತರ ಸಲಹೆ ನಿರ್ಲಕ್ಷಿಸಿದ ಸರ್ಕಾರ

ರಾಜ್ಯದ ವೈದ್ಯಕೀಯ ಸೌಲಭ್ಯಗಳನ್ನು ನವೀಕರಿಸುತ್ತಿರುವುದಾಗಿ ಮತ್ತು ಕರೋನಾ ನಿಯಂತ್ರಣಕ್ಕೆ ಪರಿಣತರ ಮಾರ್ಗದರ್ಶನವನ್ನು ಪಡೆಯುತ್ತಿರುವಾಗಿ ರಾಜ್ಯ ಸರ್ಕಾರವು ಪದೇಪದೇ ಹೇಳುತ್ತಿದೆ. ಇವೆರಡೂ ಹುರುಳಿರದ ಹೇಳಿಕೆಗಳು.

ಪರಿಣತರ ಮಾರ್ಗದರ್ಶನದ ಅಂಶವನ್ನು ಮೊದಲು ಪರಿಗಣಿಸಿ. ಡಾ. ದೇವಿಶೆಟ್ಟಿ, ಡಾ. ಸಿ.ಎನ್. ಮಂಜುನಾಥ್, ಡಾ. ಗಿರಿಧರಬಾಬು ಮತ್ತು ಡಾ. ವಿಶಾಲ್ ರಾವರಂತಹ ನುರಿತ, ಅನುಭವಿ ವೈದ್ಯರುಗಳ ಹೆಸರುಗಳು ಸರ್ಕಾರದ ಪಟ್ಟಿಗಳಲ್ಲಿ ಕಾಣಬರುತ್ತವೆ. ಈ ವೈದ್ಯರುಗಳು ಆಗಾಗ ಸುದ್ದಿವಾಹಿನಿಗಳಲ್ಲಿ ಆಗಾಗ ಮಾತನಾಡುವುದರಿಂದ ಅವರ ವಿಚಾರಗಳು-ಸಲಹೆಗಳು ಯಾವುವು ಎನ್ನುವುದು ರಹಸ್ಯವೇನಲ್ಲ. ವೈದ್ಯಕೀಯ ಸೌಲಭ್ಯಗಳ ಸುಧಾರಣೆ ಮತ್ತು ಜನರ ನಡೆವಳಿಕೆಯ ಬದಲಾವಣೆಯಾಗಬೇಕೆನ್ನುವ ನಿಟ್ಟಿನಲ್ಲಿ ಈ ಪರಿಣತರು ಮಾಡಿರುವ ಹೆಚ್ಚಿನ ಸಲಹೆಗಳನ್ನು ರಾಜ್ಯ ಸರ್ಕಾರವು ಅನುಸರಿಸಿಲ್ಲ ಎನ್ನುವುದು ಸುಸ್ಪಷ್ಟ.

ಇದಕ್ಕಿಂತ ಮುಖ್ಯವಾಗಿ, ಕರೋನಾ ಸೋಂಕಿನ ಪರೀಕ್ಷೆ ಮಾಡುವುದನ್ನೆ ಕಡಿಮೆ ಮಾಡಿರುವ ನಿದರ್ಶನವೂ ಇದೆ. ಎರಡನೆಯ ಅಲೆಯು ರೂಪಾಂತರಗೊಂಡಿರುವ ವೈರಾಣುವಿನಿಂದ ಹಬ್ಬುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಆದರೆ ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡುವ ಯಾವ ಕ್ರಮಗಳನ್ನೂ ಸರ್ಕಾರವು ಮಾಡಿಲ್ಲ. ಸರಳವಾಗಿ, ಸ್ಪಷ್ಟವಾಗಿ ಹೇಳುವುದಾದರೆ ಕರೋನಾ ಸೋಂಕು ನಿಯಂತ್ರಿಸಲು ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಯಾವುದೆ ಪ್ರಾಮಾಣಿಕ ಪ್ರಯತ್ನ ಮಾಡದ ಸರ್ಕಾರದ ಯಾವ ಮಾತುಗಳನ್ನು ನಾವು ನಂಬಬೇಕು?

ಇನ್ನು ಮೂರನೆಯ ಅಲೆಯನ್ನು ಎದುರಿಸಲು ಅಗತ್ಯವಿರುವ ಹೊಸ ವೈದ್ಯಕೀಯ ಸೌಲಭ್ಯಗಳನ್ನು ಮುಂದಿನ ಮೂರು ತಿಂಗಳುಗಳಲ್ಲಿ ಸಿದ್ಧಪಡಿಸುವುದಾಗಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಹೇಳುತ್ತಾರೆ. ಕೋವಿಡ್ ಕಾರ್ಯಪಡೆಯು ಇದಕ್ಕಾಗಿ ಸುಮಾರು 1,500 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಅಂಗವಾಗಿ ಸುಮಾರು 146 ತಾಲೂಕು ಆಸ್ಪತ್ರೆಗಳು ಮತ್ತು 16 ಜಿಲ್ಲಾ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳು ದೊರಕಲಿವೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿಯೂ 100 ಹಾಸಿಗೆಗಳ ವ್ಯವಸ್ಥೆಯಿರುತ್ತದೆ ಮತ್ತು ವೆಂಟಿಲೇಟರ್ ಮತ್ತಿತರ ಸಲಕರಣೆಗಳು ಇರಲಿವೆ. ಜೊತೆಗೆ ಸುಮಾರು 4,000 ವೈದ್ಯರ ಅವಶ್ಯಕತೆಯಿದೆ ಎನ್ನುವುದನ್ನು ಗುರುತಿಸಲಾಗಿದೆ.

ಪತ್ರಿಕೆಗಳಲ್ಲಿ ವರದಿಯಾಗಿರುವ ಈ ಮೇಲೆ ಪ್ರಸ್ತಾಪಿತವಾಗಿರುವ ಯೋಜನೆಯ ವಿವರಗಳು ಸಮಾಜಮುಖಿಯು ಮುಂದಿಡುತ್ತಿರುವ ಸಲಹೆಗಳಿಗೆ ಹತ್ತಿರವಿರುವಂತೆ ಕಾಣುತ್ತವೆ. ಆದರೆ ಸರ್ಕಾರದ ಎದುರು ಇರುವ ಸವಾಲು ಯೋಜನೆಯ ಅನುಷ್ಠಾನದ್ದು. ಉಪಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಇಬ್ಬರೂ ವೈದ್ಯರೂ ಹೌದು. ಹಾಗಾಗಿ ಇಂತಹ ಯೋಜನೆಗಳ ವಿವರಗಳನ್ನು ಕೊಡುವಾಗ ಅವರು ಪ್ರಾಜ್ಞರಂತೆ ತೋರುತ್ತಾರೆ. ಆದರೆ ಪ್ರಸ್ತುತ ಸರ್ಕಾರವೂ ಸೇರಿದಂತೆ, ಇತ್ತೀಚಿನ ದಶಕಗಳ ಎಲ್ಲ ಸರ್ಕಾರಗಳೂ ಭ್ರಷ್ಟತೆಯ ಕೂಪಗಳು ಮತ್ತು ಯಾವುದೇ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಎಡುವುತ್ತವೆ. ಇದನ್ನು ಮೀರುವಲ್ಲಿ ಅಗತ್ಯವಿರುವ ನೈತಿಕ ಸ್ಥೈರ್ಯವನ್ನು ಯಡಿಯೂರಪ್ಪನವರ ಸರ್ಕಾರವು ತೋರುತ್ತದೆ ಎನ್ನುವುದಕ್ಕೆ ಪುರಾವೆಗಳು ಇಲ್ಲ.

Leave a Reply

Your email address will not be published.