ಕೋವಿಡ್ ತೆರೆದಿಟ್ಟ ಆರೋಗ್ಯ ವ್ಯವಸ್ಥೆ

ಕಾಯಿಲೆ ಏನು, ಅದರ ಔಷಧಿ ಯಾವುದು ಎಂಬ ಬಗ್ಗೆ ಕೇಂದ್ರೀಕರಿಸಬೇಕಾದ ವೈದ್ಯಕೀಯ ಜಗತ್ತು ಕೊರೋನಾ ಅವಧಿಯ ಅರ್ಧದಷ್ಟು ಸಮಯವನ್ನು ಆಡಳಿತದ ಅಡ್ಡಿಆತಂಕ ನಿವಾರಿಕೊಳ್ಳಲು ಕಳೆಯಬೇಕಾದುದು ವಿಪರ್ಯಾಸಕರ.

-ಡಾ.ಕೆ.ಎಸ್.ಪವಿತ್ರ

ಇಲ್ಲಿಯವರೆಗೆ ಜೀವನ ಒಂದು ದಾರಿಯಲ್ಲಿ, ಒಂದು ರೀತಿಯಲ್ಲಿ ಸಾಗುತ್ತಿತ್ತು. ಕೋವಿಡ್ ಹಠಾತ್ತನೆ ತಂದ ಬದಲಾವಣೆ ಅಗಾಧ, ತೀವ್ರ ಎಂಬ ರೀತಿಯಲ್ಲಿ ಈ ದಾರಿ-ರೀತಿಗಳನ್ನು ಬದಲಿಸಿಬಿಟ್ಟಿತು. ವ್ಯವಸ್ಥೆಯೊಂದರ ಸಾಫಲ್ಯ-ವೈಫಲ್ಯಗಳು ಪರೀಕ್ಷೆಗೆ ಒಳಗಾಗುವ ಸಮಯವೇ ಇದು ಎನಿಸುವಷ್ಟರ ಮಟ್ಟಿಗೆ ಕೋವಿಡ್ ನಮ್ಮನ್ನು ಚಿಂತನೆಗೆ ಹಚ್ಚಿದೆ.

ಆರೋಗ್ಯ ವ್ಯವಸ್ಥೆಯಲ್ಲಿ ಭಾರತ ಹಿಂದೆ-ಮುಂದೆ ಎನ್ನುವ ವಾದ ನಿನ್ನೆಮೊನ್ನೆಯದಲ್ಲ. ಬಹು ಹಿಂದಿನದು. ಪಾಶ್ಚಾತ್ಯ ದೇಶಗಳ ವೈದ್ಯಕೀಯ ತರಬೇತಿ ಕ್ರಮ ಭಾರತದಲ್ಲಿಲ್ಲ. ಭಾರತದಲ್ಲಿರುವ ಅಧ್ಯಯನ ಕ್ರಮ ಬೇರೆಯೇ. ನಮ್ಮಲ್ಲಿ ಓದಿಗೆ ಕೊಡುವ ಪ್ರಾಮುಖ್ಯ, ವಿದ್ಯಾರ್ಥಿಗಳು ಅವಿರತ ಓದುವ ರೀತಿ ಪಾಶ್ಚಾತ್ಯ ವೈದ್ಯ ವಿದ್ಯಾರ್ಥಿಗಳಲ್ಲಿ ಕಡಿಮೆಯೇ. ನಮ್ಮಲ್ಲಿಯ ಹಾಗೆ 23-24 ವರ್ಷಗಳ ಹೊತ್ತಿಗಾಗಲೇ ವೈದ್ಯರಾಗುವ ಸಂಭವವೂ ಅಲ್ಲಿ ಇಲ್ಲ. ವೈದ್ಯಕೀಯ ಅನುಭವದಲ್ಲಿ ವೈವಿಧ್ಯ-ಬಾಹುಳ್ಯ ಎಲ್ಲದರಲ್ಲಿಯೂ ಭಾರತದ ವೈದ್ಯರು ಹೊರದೇಶಗಳಿಗೆ ಹೋಲಿಸಿದರೆ ಹೆಚ್ಚೇ ಎನ್ನುವಷ್ಟು ನೋಡಿರುತ್ತಾರೆ. ಪ್ರತಿದಿನಕ್ಕೆ ಇಲ್ಲಿ ಅಂದಾಜು 30ರಿಂದ 50 ರೋಗಿಗಳನ್ನು ಒಬ್ಬ ವೈದ್ಯ ನೋಡಿದರೆ, ಅದೇ ಕಡಿಮೆ ಜನಸಂಖ್ಯೆಯ, ಪಾಶ್ಚಾತ್ಯ ದೇಶಗಳು ಸರಾಸರಿ 6-10 ರೋಗಿಗಳನ್ನು ನೋಡುತ್ತಾರೆ. ಇಂದಿಗೂ ಭಾರತದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿ ವೈದ್ಯರು ಆಸ್ಟ್ರೇಲಿಯಾ-ಅಮೆರಿಕಾ-ಬ್ರಿಟನ್‍ಗಳಲ್ಲಿ ಬಹು ಜನಪ್ರಿಯರಾದಂತೆ, ಕಡಿಮೆ ಸೌಲಭ್ಯಗಳಿರುವ ದೇಶಗಳಲ್ಲಿಯೂ ತತ್‍ಕ್ಷಣ ಸ್ವಾಗತಿಸಲ್ಪಡುವವರೇ ಎಂಬುದು ನಿಜಸಂಗತಿಯೇ.

ಹೆಚ್ಚಿನ ಜನಸಂಖ್ಯೆ ನಮಗೊಂದು ವರದಾನವೂ ಹೌದು, ಸವಾಲೂ ಹೌದು! ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಜನಸಂಖ್ಯೆಯ ಕಾರಣ, ಕೇವಲ ನಿರ್ದಿಷ್ಟ ವೈದ್ಯನೊಬ್ಬನೇ ಕೆಲಸಕ್ಕೆ ಸಾಕಾಗದು! ಹಾಗಾಗಿ ಅಮೆರಿಕೆ-ಇಂಗ್ಲೆಂಡ್‍ಗಳಂತೆ ವ್ಯವಸ್ಥಿತವಾಗಿ ರೆಫೆರಲ್ ವ್ಯವಸ್ಥೆ ನಮ್ಮಲ್ಲಿ ಸಾಧ್ಯವಿಲ್ಲ. ಅಂದರೆ ಒಬ್ಬ ವ್ಯಕ್ತಿಗೆ ತಲೆನೋವು ಬಂದಿತು ಎನ್ನಿ. ಇಂಗ್ಲೆಂಡ್‍ನಲ್ಲಿ ಆತ ನೇರವಾಗಿ ತಾನೇ ನಿರ್ಧರಿಸಿ ನರರೋಗ ತಜ್ಞನ  ಬಳಿ ಧಾವಿಸುವಂತಿಲ್ಲ. ಮೊದಲು `ಜಿಪಿ’ -ಕುಟುಂಬ ವೈದ್ಯ /ಜನರಲ್ ಪ್ರಾಕ್ಟಿಷನರ್ ಬಳಿ ಹೋಗಿ, ಆತ `ರೆಫರ್’ ಮಾಡಿದ ಮೇಲೂ, ತಿಂಗಳುಗಟ್ಟಲೆ ಕಾದ ಮೇಲೆ ನರರೋಗ ತಜ್ಞನನ್ನು ನೋಡಬೇಕು. ಅದೇ ನಮ್ಮಲ್ಲಿ ರೋಗಿಗೆ ಯಾವ ವೈದ್ಯನನ್ನೂ, ಯಾವ ಊರಿಗೂ ಹೋಗಿ ನೋಡುವ ಆಯ್ಕೆಯಿದೆ. ಒಂದು ರೀತಿಯಲ್ಲಿ ಇದು ವೈದ್ಯಕೀಯ ಕ್ಷೇತ್ರದ ಪ್ರಜಾಪ್ರಭುತ್ವ ಎನ್ನಲಡ್ಡಿಯಿಲ್ಲ!

ಆದರೆ ಇದೂ ಕೂಡ ವೈದ್ಯಕೀಯ ಸೇವೆಯಲ್ಲಿ ಹಲವು ಅಡ್ಡಿ-ಆತಂಕಗಳನ್ನು ಸೃಷ್ಟಿಸಬಹುದು. ಕಾಯುವಿಕೆ, ಸರ್ಕಾರಿ ವ್ಯವಸ್ಥೆಗಳಲ್ಲಿ ಅಪನಂಬಿಕೆ, ಔಷಧಿಗಳ ಕೊರತೆ, ಪರೀಕ್ಷೆಗಳ ಲಭ್ಯತೆಯಿರದಿರುವುದು ಇವು ಎಂದಿನಿಂದ ಇರುವ ಸವಾಲುಗಳೇ. ಈ ಸವಾಲುಗಳು ಮತ್ತಷ್ಟು ಬೃಹದಾಕಾರವಾಗಿ ನಿಂತದ್ದು ಕೋವಿಡ್ ಸಂಕಷ್ಟದ ಸಮಯದಲ್ಲಿ. ಅವುಗಳನ್ನು ಒಂದೊಂದಾಗಿ ಗಮನಿಸೋಣ.

ಕೋವಿಡ್ ಸಂದರ್ಭದಲ್ಲಿ ನಮಗೆ ಹಲವು ಪದಗಳು ಹೊಸತಾಗಿ ಪರಿಚಯವಾದವಷ್ಟೆ. ಅವುಗಳಲ್ಲಿ ಲಾಕ್‍ಡೌನ್-ಸೀಲ್‍ಡೌನ್ ಇವು ಪ್ರಮುಖವಾದವು. ಹೋದ ವರ್ಷ ಏಪ್ರಿಲ್‍ನಿಂದ ಆಗಸ್ಟ್ ತಿಂಗಳವರೆಗೆ ಈ ಪದಗಳು ಸೃಷ್ಟಿಸಿದ ಆತಂಕ ಅಷ್ಟಿಷ್ಟಲ್ಲ. ಖಾಸಗೀ ಆಸ್ಪತ್ರೆಗಳಂತೂ ಹೊರಜಿಲ್ಲೆಯ ರೋಗಿಗಳನ್ನು ನೋಡಬೇಕು /ಬೇಡ ಎನ್ನುವ ಬಗ್ಗೆ ಪಟ್ಟ ಗೊಂದಲ ವಿವರಿಸಲೇ ಅಸಾಧ್ಯ. ಉದಾಹರಣೆಗೆ ಒಬ್ಬ ರೋಗಿಯನ್ನು ಹೊನ್ನಾವರದಿಂದ ನನ್ನ ಬಳಿ ಚಿಕಿತ್ಸೆಗಾಗಿ ಕರೆತಂದರು. ಟೆಲಿ ಕನ್ಸಲ್ಟೇಷನ್ ನಿಂದ ಕಾಯಿಲೆಗೆ ಚಿಕಿತ್ಸೆ ಸಾಧ್ಯವಿರದ ಪರಿಸ್ಥಿತಿ. ಅವರ ಬಳಿ ಇದ್ದದ್ದು ಅಲ್ಲಿನ ಜಿಲ್ಲಾಧಿಕಾರಿಗಳ ಒಂದು ದಿನದ ಅನುಮತಿ ಪತ್ರ. ಬಂದವರು ಭಯದಿಂದ ಅದನ್ನು ವೈದ್ಯ ತಂಡಕ್ಕೆ ತೋರಿಸದೇ, ಶಿವಮೊಗ್ಗೆಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿಬಿಟ್ಟರು.

ಒಳರೋಗಿಯಾಗಿ ಚಿಕಿತ್ಸೆ ಪಡೆಯುವ ಅಗತ್ಯವೇನೋ ಇತ್ತು. ಒಂದು ದಿನ ಕಳೆದು ಅವರು ತಿರುಗಿ ಹೋಗದ ಕಾರಣ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಶಿವಮೊಗ್ಗೆಯ ಕಚೇರಿಯನ್ನು ಸಂಪರ್ಕಿಸಿತು. ತತ್‍ಕ್ಷಣ ಆರೋಗ್ಯಾಧಿಕಾರಿಗಳು ಬಂದು ಅಂದಿನ ನಿಯಮದ ಹಾಗೆ ಅವರನ್ನು ಕ್ವಾರಂಟೈನ್‍ಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅದೂ ಕೈದಿಯನ್ನು ಪೋಲೀಸರು ಬಂದು ಕರೆದೊಯ್ಯುವ ರೀತಿ! ಈ ರೋಗಿಯ ಮನೆಯವರೂ ಬಿಡದೆ, ಸರ್ಕಾರಿ ಆಸ್ಪತ್ರೆಯ ಕ್ವಾರಂಟೈನ್ ವಾರ್ಡ್‍ನಲ್ಲಿ ಹೊರಗಿರುವ ವಾಚ್‍ಮನ್-ವಾರ್ಡ್‍ಬಾಯ್‍ಗೆ ಲಂಚ ನೀಡಿ ತರೀಕೆರೆಯ ಹತ್ತಿರದ ತಮ್ಮ ಊರಿಗೆ `ಪರಾರಿ’ ಯೇ ಆಗಿಬಿಟ್ಟರು!  ಫೋನಿನ ಮೇಲೆ ಫೋನು, ಪ್ರಶ್ನೆಗಳ ಮೇಲೆ ಪ್ರಶ್ನೆ, ವರದಿಯ ಮೇಲೆ ವರದಿಗಳನ್ನು ಕೊಟ್ಟು ವೈದ್ಯಕೀಯ ಸಿಬ್ಬಂದಿ ಪರದಾಡಬೇಕಾಯಿತು. ಇಂಥ ಗೊಂದಲಗಳಿಂದ ವೈದ್ಯಕೀಯ ವ್ಯವಸ್ಥೆ ತುಂಬಿಹೋಯಿತು. ಕಾಯಿಲೆ ಏನು, ಅದರ ಔಷಧಿ ಯಾವುದು ಎಂಬ ಬಗ್ಗೆ ಕೇಂದ್ರೀಕರಿಸಬೇಕಾದ ವೈದ್ಯಕೀಯ ಜಗತ್ತು ಕೊರೋನಾ ಅವಧಿಯ ಅರ್ಧದಷ್ಟು ಸಮಯವನ್ನು ಇಂಥ ಆಡಳಿತದ ಅಡ್ಡಿ-ಆತಂಕಗಳಿಂದ ಕಳೆಯಿತು ಎಂಬುದು ನಿರ್ವಿವಾದ.

ನಮ್ಮ ಸಮಾಜದಲ್ಲಿರುವ ಮೌಢ್ಯ, ತತ್‍ಕ್ಷಣದ ಸುಲಭದ ಪರಿಹಾರವನ್ನು ಹುಡುಕುವ ಮನೋಭಾವ -ಇವು ಈ ಒಂದೂವರೆ ವರ್ಷದಲ್ಲಿ ಮತ್ತಷ್ಟು ಎದ್ದು ಕಾಣುವಂತೆ ತೋರುತ್ತಿವೆ. `ಕೊರೋನಾ ಅಮ್ಮ’ ನಿಗೆಂದು ಕೆ.ಜಿ.ಗಟ್ಟಲೆ ಅನ್ನದ ನೈವೇದ್ಯ, ರಾಜಕಾರಣಿಗಳಿಂದ ಲಾಕ್‍ಡೌನ್ ಸಮಯದಲ್ಲಿ ಪೂಜೆಗಳು, ತಮ್ಮ ಚುನಾವಣೆ ಪ್ರಚಾರ-ಹುಟ್ಟಿದ ಹಬ್ಬಗಳಲ್ಲಿ ಸಿಹಿಯೊಂದಿಗೆ `ಕೊರೋನಾ’ ವನ್ನೂ ಹಂಚುವುದು ಇವೆಲ್ಲ ಇಂಥ ಮೌಢ್ಯ-ಉಡಾಫೆ ಎರಡೂ ತುಂಬಿದ ಜನರ ಕೊಡುಗೆಗಳು. ಸರ್ಕಾರೀ ಆಸ್ಪತ್ರೆಗಳು ಸೌಲಭ್ಯಗಳಿಂದ ತುಂಬಿದ್ದರೂ, ಕೇವಲ ವೈದ್ಯರು-ವೈದ್ಯಕೀಯ ಸಿಬ್ಬಂದಿಗಳನ್ನು ಮಾತ್ರ ಅವುಗಳ ವ್ಯವಸ್ಥೆ-ಅವ್ಯವಸ್ಥೆಗೆ ಹೊಣೆಯಾಗಿಸಿದ್ದೂ ಒಂದು ಗಮನಾರ್ಹ ವಿಷಯವೇ. ನಮ್ಮ ರಾಜಕಾರಣಿಗಳ್ಯಾರೂ ತಮಗೆ ಕಾಯಿಲೆ ಉಂಟಾದಾಗ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡದೆ, ಖಾಸಗೀ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆದಿದ್ದು ನಮ್ಮೆಲ್ಲರಲ್ಲಿಯೂ ಅಚ್ಚರಿ ಮೂಡಿಸಲೇ ಇಲ್ಲ!

ಕೊರೋನಾದಿಂದ ಈ ಒಂದೂವರೆ ವರ್ಷಗಳಲ್ಲಿ ಸತ್ತಷ್ಟೇ ಅಥವಾ ಅದಕ್ಕಿಂತ ಹೆಚ್ಚು ಜನ ಸಕಾಲಕ್ಕೆ ಚಿಕಿತ್ಸೆ ದೊರೆಯದ ಕಾರಣ, ಕೊರೋನಾ ಅಲ್ಲದ ಕಾಯಿಲೆಗಳಿಂದ ಮರಣಿಸಿದ್ದಾರೆ. `ಪರಿಸ್ಥಿತಿ ಹಾಗಿತ್ತು’ ಎಂದು ತಳ್ಳಿ ಹಾಕಿ ಬಿಡಬಹುದು. ಆದರೆ ಈ ಪಾಠಗಳನ್ನು ಈಗ ಕಲಿಯದೆ ಹೋದರೆ, ತಪ್ಪುಗಳನ್ನು ಸರಿಪಡಿಸದೆ ಹೋದರೆ, ಜೀವಗಳನ್ನು ಬಲಿ ನೀಡುವುದು ಭವಿಷ್ಯದಲ್ಲಿಯೂ ತಪ್ಪಲಾರದು.

ಕೊರೋನಾ ಜೀವನಶೈಲಿಯ ಪಾಠವನ್ನು ಆರೋಗ್ಯದಲ್ಲಿ `ಬಹು ಮುಖ್ಯ’ ಎನ್ನುವಂತೆ ಕಲಿಸಿರುವುದು ಸತ್ಯ. ಹಾಗೆಯೇ ಕ್ರಾಂತಿಯ ರೀತಿಯಲ್ಲಿ `ಟೆಲಿವೈದ್ಯಕೀಯ’ ಸೇವೆಗಳು ಪ್ರಗತಿ ಸಾಧಿಸಿವೆ. ವೃದ್ಧ, ಬಹುದೂರ ಪಯಣಿಸಬೇಕಾದ, ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆಯಿಂದ ಕುಳಿತೆಡೆ ವೈದ್ಯಕೀಯ ಸಲಹೆ ಪಡೆಯಬಹುದಾದ ಸೌಲಭ್ಯ ಇಂದು ಸಾಧ್ಯ.

ಬಹಳ ಜನ ರೋಗಿಗಳು-ಅವರ ಆತ್ಮೀಯರು ಬಂದು ಕೇಳುವ ಪ್ರಶ್ನೆಯೊಂದಿದೆ. “ಡಾಕ್ಟ್ರೇ ಈ ಕೊರೋನಾ ಯಾವಾಗ ಮುಗಿಯುತ್ತದೆ?”. ರೋಗನಿರೋಧಕ ಶಕ್ತಿಯನ್ನು ಸಹಜವಾಗಿ (ಸಾಮುದಾಯಿಕ ರೋಗ ನಿರೋಧಕ ಶಕ್ತಿ -Herd immunity) ಬೆಳೆಸುವುದರ ಮೂಲಕ, ವ್ಯಾಕ್ಸೀನ್ ಮೂಲಕ ಕೊರೋನಾ ಎಂಬ ಪ್ಯಾಂಡೆಮಿಕ್ ನಿಯಂತ್ರಿತವಾಗಬಹುದು. ಆದರೆ ಅದು ಮಲೇರಿಯಾ, ಡೆಂಗ್ಯೂ ಜ್ವರಗಳ ರೀತಿ ಒಂದು `ಸೀಸನಲ್’, `ಎಂಡೆಮಿಕ್’ ಕಾಯಿಲೆಯಾಗಿ ಉಳಿಯುತ್ತದೆ. ನಮ್ಮಂತೆ ವೈರಸ್ಸೂ ಒಂದು ಜೀವಿಯಷ್ಟೆ! ಆದರೆ ಕೊರೋನಾದಿಂದ ನಾವು ಕಲಿತ ಪಾಠಗಳನ್ನು ಮರೆಯುವ ಹಾಗಿಲ್ಲ. ಅವುಗಳನ್ನು ನಾವು ನೆನಪಿನಲ್ಲಿಟ್ಟುಕೊಂಡಿದ್ದೇವೆಯೇ, ಅವುಗಳಿಂದ ನಾವು ಸುಧಾರಿಸಿದ್ದೇವೆಯೆ, ಎಂಬುದು ಪರೀಕ್ಷೆಯಾಗುವುದು, ನಂತರದ ವರ್ಷಗಳಲ್ಲಿ ಮತ್ತೆ ಒದಗಬಹುದಾದ  ಇಂಥದ್ದೇ ಸಂದರ್ಭಗಳಲ್ಲಿ.

ಪರಿವರ್ತನೆ-ಬದಲಾಗುವಿಕೆ ಜಗದ ನಿಯಮ. ಕೋವಿಡ್ ಪೂರ್ವ ಯುಗವೇ ಚೆನ್ನಾಗಿತ್ತು, ಸುಖವಾಗಿತ್ತು ಎಂದು ಸುಮ್ಮನೆ ಮತ್ತೆ ಮತ್ತೆ ಮಾತನಾಡಿ, ಹಳಿದುಕೊಂಡು ಪ್ರಯೋಜನವಿಲ್ಲ. ಅಥವಾ ಯಾವುದೇ ಒಂದು ಕ್ಷೇತ್ರವನ್ನು, ಆಡಳಿತ ವ್ಯವಸ್ಥೆಯನ್ನು/ಮಾಧ್ಯಮಗಳನ್ನು ದೂರುವುದು, ನಮ್ಮ ಆತ್ಮಸಾಕ್ಷಿಯಿಂದ ತಪ್ಪಿಸಿಕೊಳ್ಳುವುದೂ ಉಪಯುಕ್ತವಲ್ಲ. ವಾಸ್ತವವನ್ನು ಎದುರಿಸುವುದೇ ನಮಗಿರುವ ದಾರಿ. ನಮ್ಮ ಬಲಗಳ ಬಗೆಗೆ ನಾವು ಹೆಮ್ಮೆ ಪಡಬೇಕು, ಮಾತನಾಡಬೇಕು. ಅದರೆ ಅಷ್ಟಕ್ಕೇ ಸಮಾಧಾನ ಪಡದೇ, ನಮ್ಮ ದೌರ್ಬಲ್ಯಗಳು, ವೈಫಲ್ಯ, ಸಾವಿನ ಅಂಕಿ-ಅಂಶ, ವ್ಯವಸ್ಥೆಗಳ ಬಗ್ಗೆ ಮಾತನಾಡಬೇಕು.

ಅಂತಹ ಧೈರ್ಯವನ್ನು ವೈದ್ಯರು, ರಾಜಕಾರಣಿಗಳು, ಮಾಧ್ಯಮಗಳು, ಎಲ್ಲರೂ ತೋರಬೇಕು. ಜನರೂ ಅಷ್ಟೆ, ಕೇವಲ ವೈದ್ಯಕೀಯ ಜಗತ್ತು-ಆಡಳಿತ ವ್ಯವಸ್ಥೆಗಳನ್ನಷ್ಟೇ ಪ್ರಶ್ನಿಸದೆ, ತಮ್ಮ ಜವಾಬ್ದಾರಿ-ಕರ್ತವ್ಯ-ಆರೋಗ್ಯಗಳ ಬಗೆಗೆ ಕಾಳಜಿ ವಹಿಸಬೇಕು.

*ಲೇಖಕರು ಶಿವಮೊಗ್ಗದಲ್ಲಿ ಮನೋರೋಗ ಚಿಕಿತ್ಸಕರು; ಮನೋವೈದ್ಯಶಾಸ್ತ್ರ, ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಜೊತೆಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯೋಗ, ವೀಣೆಹೀಗೆ ಬಹುಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪರಿಣತಿ ಹೊಂದಿದ್ದಾರೆ.

Leave a Reply

Your email address will not be published.