ಕೋವಿಡ್ ನಂತರ… ಶಿಕ್ಷಣ-ಉದ್ಯೋಗ ಕ್ಷೇತ್ರದಲ್ಲಿ ಹೊಸ ಕ್ರಾಂತಿ!

ಥಾಮಸ್ ಫ್ರೆಡ್‍ಮನ್

ಹೊಸ ಸನ್ನಿವೇಶದಲ್ಲಿ ಕೆಲಸಗಳ ವಿಧಾನ, ಕೆಲಸದ ಸ್ಥಳ ಮತ್ತು ಕೆಲಸಗಾರರು ರೂಪಾಂತರಗೊಳ್ಳಬೇಕಾಗುತ್ತದೆ. ಉದ್ಯಮಗಳು ಅಪೇಕ್ಷಿಸುವುದು ಉದ್ಯೋಗಕ್ಕೆ ಅಗತ್ಯವಾದ ಕುಶಲತೆ ಮತ್ತು ನಿರಂತರ ಕಲಿಕೆ. ಇದು ‘ಪದವಿಯಿಂದ ಕುಶಲತೆಯೆಡೆಗಿನ’ ನಡಿಗೆÀ; ಡಿಗ್ರಿ ಇಲ್ಲದವರಿಗೂ ಸಾಫ್ಟ್‍ವೇರ್ ಕಂಪನಿಯಲ್ಲಿ ನೌಕರಿ, ಹೋಟೆಲ್ ಕಾರ್ಮಿಕ ಸೈಬರ್ ರಕ್ಷಣೆ ಮಾಡೋ ತಂತ್ರಜ್ಞ, ಟಿಕೆಟ್ ಕೊಡೋ ಗುಮಾಸ್ತೆ ಡೇಟಾ ಸಲಹಾಗಾರ್ತಿ… ಎಲ್ಲವೂ ಸಾಧ್ಯ!

ಅನುವಾದ: ಹನುಮಂತರೆಡ್ಡಿ ಸಿರೂರು

ನಿಸರ್ಗದ ಲೀಲೆಗಳು ನಿಗೂಢವಾಗಿರುತ್ತವೆ. ಅದು ಕೋವಿಡ್ ಅನ್ನೋ ಸಾಂಕ್ರಾಮಿಕ ಪಿಡುಗನ್ನ ನಮ್ಮ ಅಂಗಳಕ್ಕೆಸೆದು ನಮ್ಮ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿದೆ. ನಮ್ಮ ಕಲಿಯುವಿಕೆ, ಮಾಡುವ ಕೆಲಸ ಮತ್ತು ಉದ್ಯೋಗ ದಕ್ಕಿಸಿಕೊಳ್ಳೋ ವಿಧಾನದಲ್ಲಿ ತೀವ್ರಗತಿಯ ಬದಲಾವಣೆಗಳಾಗೋ ಕಾಲ ಸನ್ನಿಹಿತವಾಗಿದೆ.

ಈ ಕೊರೋನಾ ಬಿಕ್ಕಟ್ಟು ಮುಗಿಯುತ್ತಿದ್ದಂತೆ ಶುಂಪೀಟರ್ (Schumpeter)ಹೇಳಿದ್ದ “ಸೃಜನಶೀಲ ವಿನಾಶಕಾಲ” ನಮ್ಮ ಮುಂದೆ ಶರವೇಗದಲ್ಲಿ ತೆರೆದುಕೊಳ್ಳಲಿದೆ. ಅದಕ್ಕೆ ನಾವು ಸಿದ್ಧರಾಗಬೇಕಿದೆ. (ಜರ್ಮನಿಯ ಶುಂಪೀಟರ್ ಹತ್ತೊಂಬತ್ತನೇ ಶತಮಾನದ ಖ್ಯಾತ ಅರ್ಥಶಾಸ್ತ್ರಜ್ಞ. ಬದಲಾಗೋ ಸಂದರ್ಭಗಳಲ್ಲಿ ಒಂದಿಲ್ಲೊಂದು ರೂಪದಲ್ಲಿ ಉತ್ಪಾದನೆ ಮತ್ತು ಉದ್ಯಮಗಳು ಬಂಡವಾಳಶಾಹಿತನದಿಂದ ಬಚಾವೋಗೋದು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದ್ದ).

ಮೇಲೆ ಹೇಳಿದ ಶರವೇಗದ ಬದಲಾವಣೆಯಿಂದ ಉದ್ಯೋಗ, ಶಿಶುವಿಹಾರದಿಂದ ಹೈಸ್ಕೂಲ್ ಮಟ್ಟದ ಶಿಕ್ಷಣ, ವಿಶ್ವವಿದ್ಯಾಲಯ, ಕಾರ್ಖಾನೆ, ಕಚೇರಿ… ಯಾವುದೂ ತಪ್ಪಿಸಿಕೊಳ್ಳಲಾರದು; ಶ್ರಮಜೀವಿಗಳು ಮತ್ತು ಶ್ರಮಜೀವಿಗಳಲ್ಲದವರೂ ಮುಂಬರೋ ಬದಲಾವಣೆಗಳಿಂದ ಬಚಾವಾಗಲಿಕ್ಕಿಲ್ಲ. ಅದಕ್ಕಾಗಿಯೇ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಈಗ ಬಹು ಮುಖ್ಯ. ಅಮೆರಿಕಾದ ಪ್ರಜೆಗಳಿಗೆ ಭಾರವಾಗದಂತೆ ಆರೋಗ್ಯ ರಕ್ಷಣೆ, ಪಿಂಚಣಿ ಮತ್ತು ಜೀವನಪರ್ಯಂತ ಕಲಿಯುವ ಅವಕಾಶಗಳನ್ನ ಈ ಸಂಕ್ರಮಣ ಸಂದರ್ಭದಲ್ಲಿ ಹೇಗೆ ಒದಗಿಸಬೇಕು ಅನ್ನೋ ಸಂಗತಿ ನವೆಂಬರ್ 3ರ ಚುನಾವಣೆಯ ನಂತರದ ರಾಜಕೀಯ ನಾಯಕತ್ವ ಸರಿಯಾಗಿ ಯೋಚಿಸಬೇಕಾಗಿದೆ. ಇಲ್ಲವಾದರೆ ನಾವು ಅಸ್ಥಿರತೆಯನ್ನು ಎದುರಿಸಬೇಕಾಗುತ್ತೆ.

ಅಸಂಖ್ಯಾತ ಜನರಿಗೆ ಈಗ ಲಭ್ಯವಿರೋ ಅಗ್ಗದ ತಂತ್ರಾಂಶ, ಉಪಕರಣಗಳು ಮತ್ತು ಅವುಗಳಿಂದಾಗುತ್ತಿರೋ ಹೊಸ ಆವಿಷ್ಕಾರಗಳು; ಕಡಿಮೆ ಬೆಲೆಗೆ ಸಿಗುತ್ತಿರೋ ಶಕ್ತಿಯುತ ಕಂಪ್ಯೂಟರ್; ಹೊಸ ಹೊಸ ಉತ್ಪನ್ನ ಮತ್ತು ಸೇವೆಗಳ ಅಭಿವೃದ್ಧಿಗಾಗಿ ಸಿಗುತ್ತಿರೋ ಸರಳ ಸಾಲಗಳು, ….ಹೆಚ್ಚು ಕಡಿಮೆ ಪುಕ್ಕಟೆ ಹಣ ಅನ್ನಿ; ಇವೆಲ್ಲವುಗಳ  ಜೊತೆ ಗಮನ ಕೊಟ್ಟು ಪರಿಹರಿಸಬೇಕಾದ ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ಪರಿಸರದಂಥ ದೊಡ್ಡ ಸವಾಲುಗಳು. ಈ ಎಲ್ಲ ಕಾರಣಗಳಿಂದ ಕೊರೋನಾ ನಂತರದ ದಿನಗಳಲ್ಲಿ ವಿನಾಶ ಮತ್ತು ಸೃಜನಶೀಲತೆ ಎಂಬ ತದ್ವಿರುದ್ಧ ಕ್ರಿಯೆಗಳು ಒಟ್ಟೊಟ್ಟಿಗೇ ನಡೆಯೋ ಸಾಧ್ಯತೆ ಇದೆ.

ಮೇಲೆ ಹೇಳಿದ ಎಲ್ಲವನ್ನೂ ಒಟ್ಟಿಗೆ ಕೂಡಿಸಿದರೆ ಆಗೋ ಪರಿಣಾಮ ಆಸ್ಫೋಟಕಕಾರಿ ಬದಲಾವಣೆಗಳು!

ಇವು ಅದ್ಭುತ ಬದಲಾವಣೆಗಳು. ನಾವು ಮಾಡೋ ಕೆಲಸಗಳ ವಿಧಾನ, ಕೆಲಸ ಮಾಡೋ ಸ್ಥಳ ಮತ್ತು ಕೆಲಸಗಾರರು ರೂಪಾಂತರಗೊಳ್ಳಬೇಕಾಗುತ್ತದೆ. ಬಹುಕಾಲದಿಂದ ಅಸ್ತಿತ್ವದಲ್ಲಿರೋ ಸಂಸ್ಥೆಗಳು ಉದಾಹರಣೆಗೆ ವಿಶ್ವವಿದ್ಯಾಲಯಗಳು ಮಾಯವಾಗಲಿವೆ. ಈ ಹಿನ್ನೆಲೆಯಲ್ಲಿ ನಾನೀಗ ರವಿಕುಮಾರ್ ಅವರೊಂದಿಗೆ ಚರ್ಚಿಸುತ್ತಿದ್ದೇನೆ. ರವಿಕುಮಾರ್ ಇಂಡಿಯಾದ ಬೆಂಗಳೂರಿನಲ್ಲಿರೋ ಐಟಿ ಸೇವಾ ಕ್ಷೇತ್ರದಲ್ಲಿ ಹೆಸರು ಮಾಡಿರೋ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷ. ಜಗತ್ತಿನ ಅನೇಕ ಕಂಪನಿಗಳು ಹಾಲಿ ಹಾಗೂ ಮುಂಬರೋ ಡಿಜಿಟಲ್ (ಅಂಕೀಯ) ಪ್ರಪಂಚಕ್ಕೆ ತಯಾರಾಗಲು ಸಹಾಯ ಮಾಡೋ ಇನ್ಫೋಸಿಸ್ ಸಂಸ್ಥೆ ಮತ್ತು ಅದರ ಕಾರ್ಯಕ್ಷೇತ್ರದ ಬಗ್ಗೆ ನನಗೆ ಹೆಚ್ಚಿನ ಆಸಕ್ತಿ. ಆ ಕಾರ್ಯಕ್ಷೇತ್ರದ ಒಳನೋಟದಿಂದ ಜಾಗತಿಕ ಉದ್ಯೋಗ ಮತ್ತು ಶಿಕ್ಷಣ ಎತ್ತ ಸಾಗಿದೆ ಅನ್ನೋ ಚಿತ್ರಣ ಸಿಗುತ್ತದೆ.

ಇದೇ ಕಾರಣಕ್ಕೆ 2004ರಲ್ಲಿ ನನ್ನ “ದಿ ವಲ್ರ್ಡ್ ಇಸ್ ಫ್ಲಾಟ್” (The World is Flat) ಪುಸ್ತಕ ಬರೆಯಲು ಬೆಂಗಳೂರಿನ ಇನ್ಫೋಸಿಸನ್ನೇ ಆರಿಸಿಕೊಂಡಿದ್ದೆ. ಆಗಿನ ಕಾಲಕ್ಕೆ ಮುಖ್ಯವಾಗಿ ಇನ್ಫೋಸಿಸ್ ಅಮೆರಿಕಾದಿಂದ ಸಿಗೋ ಹೊರಗುತ್ತಿಗೆ ಕೆಲಸಗಳಿಗೆ ಸೀಮಿತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ರವಿಕುಮಾರ್ ಅಮೆರಿಕಾದ ನ್ಯೂಯಾರ್ಕ್ ನಗರದಿಂದ ಕಾರ್ಯ ನಿರ್ರ್ವಹಿಸುತ್ತಾರೆ. ಅಲ್ಲದೆ ಅವರು ಇಲ್ಲೇ ಅಮೆರಿಕಾದಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದಾರೆ. ಅದು ಹೇಗೆ ಸಾಧ್ಯ?

ರವಿಕುಮಾರ್ ಹೇಳೋ ಪ್ರಕಾರ “ತಾಂತ್ರಿಕ ಬದಲಾವಣೆ, ಅಂಕೀಕರಣ, ಜಾಗತೀಕರಣ ಅದೆಷ್ಟು ವೇಗವಾಗಿದೆಯೆಂದರೆ ಇಡೀ ಜಗತ್ತು ಇಂದು ಮುಂಚೆಗಿಂತಲೂ ಹೆಚ್ಚು ಹೆಣೆದುಕೊಂಡು ಒಂದಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಈಗಿರೋ ಸಾಂಕ್ರಾಮಿಕ ಸಮಸ್ಯೆ ಮತ್ತು ರಾಜಕೀಯದಿಂದ ಜಾಗತಿಕ ಸರಕು ಸಾಮಗ್ರಿ ವಹಿವಾಟು ಸ್ವಲ್ಪ ಸ್ಥಗಿತಗೊಂಡಿರೋದು ಸತ್ಯ. ಆದರೆ ಈ ಕೋವಿಡ್ ಕಾಲದಲ್ಲಿ ಐಟಿ ಸೇವಾ ಬೇಡಿಕೆ ಮುಗಿಲು ಮುಟ್ಟಿದೆ. ಜೊತೆಗೆ ಈ ಸೇವೆಗಳಿಗೆ ಬೇಕಾಗಿರೋ ಸಾಂಪ್ರದಾಯಕ ಕುಶಲತೆಗಳ (skill-sets)ಪ್ರಭಾವ ಕುಸಿಯುತ್ತಿದೆ”. ಅರ್ಥಾತ್ ನಿಮ್ಮ ಈಗಿನ ಕುಶಲತೆ ಮುಂಬರೋ ದಿನಗಳಲ್ಲಿ ತನ್ನ ಪ್ರಭಾವ ಕಳೆದುಕೊಳ್ಳುತ್ತೆ.

ನಿಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗ ಹಿಡಿಯೋ ಕ್ರಮವೇ ಬದಲಾಗಲಿದೆ. ಹೆದರ್ ಮ್ಯಾಕ್ಗೋವನ್ (Heather McGowan) ಮತ್ತೊಬ್ಬರ ಜೊತೆ ಸಂಪಾದಿಸಿರೋ “ಖಿhe ಂಜಚಿಠಿಣಚಿಣioಟಿ ಂಜvಚಿಟಿಣಚಿge” ಕೃತಿಯಲ್ಲಿ ಪ್ರತಿಪಾದಿಸೋ “ಕೆಲಸಕ್ಕಾಗಿ ಕಲಿ” (Learn-to-work) ಅನ್ನೋ ಸೂತ್ರ ಇನ್ನು ಮುಂದೆ “ಕೆಲಸ-ಕಲಿ-ಕೆಲಸ-ಕಲಿ-ಕೆಲಸ-ಕಲಿ” ಎಂದು ಮಾರ್ಪಾಡಾಗಲಿದೆ. ಆಕೆ “ಕಲಿಕೆ ನಿಮ್ಮ ಪಿಂಚಣಿ” (learning is your pension) ಅನ್ನುತ್ತಾ ಅದೇ ನಿಮ್ಮ ಭವಿಷ್ಯದ ಮೌಲ್ಯ ಅಂದಿದ್ದಳು. ಈ ಕಾರಣಕ್ಕೆ ಇನ್ನು ಮುಂದೆ ಶಿಶುವಿಹಾರದಿಂದ ಹೈಸ್ಕೂಲ್ ಮಟ್ಟದವರಿಗೆ ಕಲಿಸೋ ಶಿಕ್ಷಕರು ಮಕ್ಕಳ ಕುತೂಹಲ ಮತ್ತು ಉತ್ಸುಕತೆಯ ಬಗ್ಗೆ ಗಮನ ಕೊಟ್ಟು ಅವರು ಜೀವನ ಪೂರ್ತಿ ಕಲಿಯೋ ಹಾಗೆ ನೋಡಿಕೊಳ್ಳಬೇಕಾಗಿದೆ. ಇದರ ಜೊತೆ ಸ್ವಾಭಾವಿಕವಾಗಿ ಎಲ್ಲರೂ ಉತ್ತಮ ಓದು, ಬರಹ ಮತ್ತು ಗಣಿತ ಅನ್ನೋ ಮೂಲಭೂತ ವಿಷಯಗಳನ್ನ ಮರೆಯುವಂತಿಲ್ಲ. ಮುಂಬರೋ ದಿನಗಳಲ್ಲಿ ನಿಮ್ಮ ಮಕ್ಕಳು ಒಂದೇ ಉದ್ಯೋಗಕ್ಕೆ ಅಂಟಿಕೊಳ್ಳದೇ ಹಲವಾರು ಕಡೆ ಕೆಲಸ ಬದಲಾಯಿಸೋ ಯುಗದಲ್ಲಿ ಈ ಮೂಲಭೂತ ವಿಷಯಗಳ ಅಗತ್ಯವೂ ಇರುತ್ತದೆ.

ಇದೆಲ್ಲ ಗಮನದಲ್ಲಿಟ್ಟುಕೊಂಡು ಇನ್ಫೋಸಿಸ್ ಅಧ್ಯಕ್ಷ ರವಿಕುಮಾರ್ ಬಹುಘಟಕ ಅಥವಾ ಬಹುಮಾಧ್ಯಮದ (Modular)  ಉಪಯುಕ್ತತೆ ಮತ್ತು ಬಳಕೆಯ ಬಗ್ಗೆ ವಿವರಿಸುತ್ತಾರೆ. “ನಾಗಾಲೋಟದಲ್ಲಿ ಬದಲಾಗುತ್ತಿರೋ ಜಾಗತಿಕ ಡಿಜಿಟಲ್ ಪ್ರಪಂಚದಲ್ಲಿ ದೊಡ್ಡ ಯೋಜನೆಗಳನ್ನ ಸಣ್ಣಸಣ್ಣ ಪ್ಯಾಕೇಟುಗಳಂತೆ ಬಿಡಿಸಿಕೊಂಡು ಹಲವಾರು ಸಣ್ಣ ಸಂಸ್ಥೆಗಳು ತಮ್ಮತಮ್ಮ ವೇದಿಕೆಗಳಲ್ಲಿ (ಸಂಯೋಜನೆ-ಹೊಂದಾಣಿಕೆ ಮಾಡಿಕೊಂಡು) ಉತ್ಪಾದನೆ/ಸೇವೆ ಮಾಡೋ ಸಾಧ್ಯತೆ ಇದೆ”. ಹೀಗೆ ಮಾಡ್ಯೂಲರ್ ವ್ಯವಸ್ಥೆಯಲ್ಲಿ ಕಂಪನಿಗಳು ಮತ್ತು ಅದರ ಉದ್ಯೋಗಿಗಳ ನಡುವಿನ ಸಂಪರ್ಕ ಕಳೆದುಹೋಗುತ್ತದೆ. ಉದ್ಯೋಗಿ ದೈಹಿಕವಾಗಿ ಮಾಡೋ ಕೆಲಸ ಯಂತ್ರಗಳು ಮಾಡತೊಡಗುತ್ತವೆ; ಉದ್ಯೋಗಿಯ ದೈಹಿಕ ಅವಶ್ಯಕತೆ ಕಡಿಮೆಯಾಗಿ ಕಾರ್ಖಾನೆ ಅಥವಾ ಕಚೇರಿ ಕೆಲಸಗಳನ್ನು ದೂರದಿಂದಲೇ ಕಾರ್ಯ ನಿರ್ವಹಣಿಸಲು ಸಾಧ್ಯ.

ಅದಿರಲಿ ಒಂದು ಸಂಸ್ಥೆಯ ಕೆಲಸವನ್ನು ಆ ಸಂಸ್ಥೆಯ ಉದ್ಯೋಗಿಯೇ ಮಾಡಬೇಕೆಂದಿಲ್ಲ. ಎಲ್ಲೋ ಕುಳಿತ ಯಾರು ಬೇಕಾದರೂ ಅಂತಹ ಮಾಡ್ಯೂಲರ್ ಕೆಲಸ ಮಾಡಬಹುದು. ಈ ಮಾಡ್ಯೂಲರ್ ವ್ಯವಸ್ಥೆ ವಿಸ್ತಾರವಾದಂತೆ ಎಲ್ಲೋ ದೂರದ ಹಳ್ಳಿ ಜನ, ಅಲ್ಪಸಂಖ್ಯಾತರು, ಮನೆಯಲ್ಲಿರೋ ಗೃಹಿಣಿ ಅಥವಾ ಗೃಹಸ್ಥರು ಮತ್ತು ಅಂಗವಿಕಲರು… ಹೀಗೆ ಎಲ್ಲರಿಗೂ ಅವಕಾಶಗಳನ್ನ ಕಲ್ಪಿಸಿಕೊಡುತ್ತದೆ. 

ಇನ್ಫೋಸಿಸ್ ಅಧ್ಯಕ್ಷ ರವಿಕುಮಾರ್ ನ್ಯೂಯಾರ್ಕ್ ನಗರದಲ್ಲಿರೋದಕ್ಕೂ ಕಾರಣವಿದೆ. ಮುಂದಿನ ದಿನಗಳಲ್ಲಿ ಅಮೆರಿಕಾದ ಕಂಪನಿಗಳು ತಮಗೆ ಅಗತ್ಯವಿರೋ ಕುಶಲ ಉದ್ಯೋಗಿಗಳನ್ನು ಹೇಗೆ ಮತ್ತು ಎಲ್ಲಿ ಹುಡಕಬೇಕೆಂಬ ಸಮಸ್ಯೆಯನ್ನು ಬಗೆಹರಿಸೋ ನಿಟ್ಟಿನಲ್ಲಿ ಇನ್ಫೋಸಿಸ್ ಅಂಥ ಕಂಪನಿಗಳಿಗೆ ತರಬೇತಿ ನೀಡೋ ವಿಪುಲ ಅವಕಾಶಗಳಿವೆ. ಕುಶಲ ಉದ್ಯೋಗಿಗಳು ಅಂದಕೂಡಲೇ ಅವರು ಕಾಲೇಜು ಪದವೀಧರರು ಅಂತಲ್ಲ. ಮುಖ್ಯವಾಗಿ ಐ.ಟಿ. ಕಂಪನಿಗಳಿಗೆ ಬೇಕಾಗಿರೋದು ಕುಶಲತೆ (skills). ಆನ್ಲೈನ್ ಶಿಕ್ಷಣದಿಂದ ಯಾರು ಬೇಕಾದರೂ ಅಂಥ ಕುಶಲತೆ ಗಳಿಸಿಬಹುದು ಮತ್ತು ಆ ಪ್ರತಿಭಾವಂತರ ಗುಂಪಿನಿಂದ ಆಯ್ದ ಉದ್ಯೋಗಿಗಳನ್ನು ಅಮೆರಿಕಾದ ಐ.ಟಿ. ಕಂಪನಿಗಳಿಗೆ ಸರಬರಾಜು ಮಾಡೋ ಕಾಲ ಈಗಾಗಲೇ ಬರತೊಡಗಿದೆ. ರವಿಕುಮಾರ್ ಪ್ರಕಾರ ಇನ್ಫೋಸಿಸ್ ಕಂಪನಿಗೆ ಅಮೆರಿಕಾದಲ್ಲಿ ಇದು ದೊಡ್ಡ ಆದಾಯದ ಅವಕಾಶ ಮತ್ತು ಆ ಕಾರಣಕ್ಕೇ ಅವರು ನ್ಯೂಯಾರ್ಕ್ ನಗರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಐ.ಟಿ. ಒಂದೇ ಅಲ್ಲ ಇತರೆ ಕಂಪೆನಿಗಳಲ್ಲೂ ಈ ಬದಲಾವಣೆ ಕಂಡು ಬರುತ್ತಿದೆ.

ಉದಾಹರಣೆಗೆ “ದಿ ನ್ಯೂ ಯಾರ್ಕ್ ಟೈಮ್ಸ್” ತಗೊಳ್ಳಿ. ಪತ್ರಿಕೆಯ ಈಗಿನ ಆನ್ಲೈನ್ ಬರಹಗಾರರ ಮತ್ತು ಅಭಿಪ್ರಾಯ ಹಂಚಿಕೊಳ್ಳೋ ಗುಂಪನ್ನು ನೋಡಿದರೆ ಕಾಲ ಅದೆಷ್ಟು ಬದಲಾಗಿದೆ ಅನಿಸುತ್ತೆ. 1995ರಲ್ಲಿ ನಾನು ಈ ಪತ್ರಿಕೆಗೆ ಅಂಕಣಕಾರನಾಗಿ ಸೇರಿಕೊಂಡೆ. ಅಂದರೆ ನನ್ನಂಥವರು ಆಗ ಪತ್ರಿಕೆಯ ಸಿಬ್ಬಂದಿಯಾಗಬೇಕಿತ್ತು. ಆದರೆ ಈಗ ಪತ್ರಿಕೆಗೆ ಅದೆಷ್ಟೋ ಜನ ಅಂಕಣ ಬರೆಯುತ್ತಾರೆ. ನಿಯಮಿತ ಅಂಕಣ ಬರೆಯೋರು, ಆಗಾಗ ವಿರಳವಾಗಿ ಬರೆಯೋರು.. ಹೀಗೆ ಜಗತ್ತಿನ ಎಲ್ಲಕಡೆಯಿಂದ ಪತ್ರಿಕೆಗೆ ಬರೆಯೋ ಅವರ್ಯಾರೂ ಸಿಬ್ಬಂದಿವರ್ಗದವರಲ್ಲ. ಇವರಲ್ಲಿ ಎಷ್ಟೋ ಜನ ಹವ್ಯಾಸೀ ಬರಹಗಾರರು. ನನ್ನ ಬಹುಕಾಲದ ಕಾಪಿ ಎಡಿಟರ್ ಕೂಡ ಈಗ ಮನೆಯಿಂದಲೇ ಕೆಲಸ ಮಾಡುತ್ತಾನೆ.

ಈ ಎಲ್ಲ ಬದಲಾವಣೆಗಳು ಶಿಕ್ಷಣಕ್ಷೇತ್ರದ ಮೇಲೆ ದೊಡ್ಡ ಪರಿಣಾಮ ಬೀರಿದೆ. “ಕಾಲೇಜು ಡಿಗ್ರಿ ಇಲ್ಲದವರನ್ನು ನಾವೀಗ ಕೆಲಸಕ್ಕೆ ಸೇರಿಸಿಕೊಳ್ಳತೊಡದ್ದೇವೆ” ಅನ್ನೋ ರವಿಕುಮಾರ್ ಮುಂದುವರಿದು “ನಮಗೆ ಬೇಕಾಗಿರೋದು ಸದರಿ ಉದ್ಯೋಗಕ್ಕೆ ಅವಶ್ಯ ಇರೋ ಕುಶಲತೆ. ಅಭ್ಯರ್ಥಿಗಳು ಆ ಕುಶಲತೆ ಪ್ರದರ್ಶಿಸಿ ಹೊಸದನ್ನು ನಿರಂತರವಾಗಿ ಕಲಿತರೆ ಸಾಕು. ಇದು ‘ಪದವಿಯಿಂದ ಕುಶಲತೆಯೆಡೆಗೆ’ (from degrees to skills) ಅನ್ನೋ ರಚನಾತ್ಮಕ ಬದಲಾವಣೆ. ಕಾಲೇಜು ಶಿಕ್ಷಣದ ಖರ್ಚು ಕಳೆದ ಎರಡು ದಶಕಗಳಲ್ಲಿ ಶೇಕಡಾ 150ರಷ್ಟು ಏರಿಕೆಯಾಗಿ ಹಲವರಿಗೆ ತಾಂತ್ರಿಕ ಶಿಕ್ಷಣ ಪಡೆಯೋ ಆಸೆ ಇದ್ದರೂ ಅದು ಸಾಧ್ಯವಾಗಲ್ಲ. ಅಂಥ ಅಂಕೀಯ ಅಂತರ (ಡಿಜಿಟಲ್ ಡಿವೈಡ್) ಅನ್ನೋ ಸಾಮಾಜಿಕ ಸಮಸ್ಯೆಗೆ ಈಗಿನ ‘ಪದವಿಯಿಂದ ಕುಶಲತೆಯೆಡೆಗೆ’ ಚಿಂತನೆ ಪರಿಹಾರವಾಗಹುದು”.

ಇನ್ಫೋಸಿಸ್ ಸಂಸ್ಥೆ ಈಗಲೂ ಬೇಕಾದಷ್ಟು ಎಂಜನಿಯರುಗಳಿಗೆ ಉದ್ಯೋಗ ಕೊಡುತ್ತದೆ. ಆದರೆ ಈಗ ರವಿಕುಮಾರ್ ಬರೀ ಸಮಸ್ಯೆ-ನಿವಾರಕರನ್ನ (problem solvers) ಹುಡುಕುತ್ತಿಲ್ಲ. ಅವರಿಗೆ ಬೇಕಾಗಿರೋದು ಸಮಸ್ಯೆ ಶೋಧಕರು (problem finders). ಅಂಥವರು ಕಲೆ, ಸಾಹಿತ್ಯ, ವಿಜ್ಞಾನ, ಮಾನವಸಾಸ್ತ್ರ… ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಿಗುತ್ತಾರೆ ಮತ್ತು ಅವರಿಗೆ ಜನಕ್ಕೆ ಏನು ಬೇಕು ಅನ್ನೋದು ಬೇರೆಯವರಿಗೆ ಗೊತ್ತಾಗೋ ಮುಂಚೆಯೇ ತಿಳಿದಿರುತ್ತದೆ. ಅಂಥವರ ಪೈಕಿ ಆಪಲ್ ಕಂಪನಿ ಸ್ಥಾಪಿಸಿ ಇತ್ತೀಚೆಗೆ ತೀರಿಕೊಂಡ ಸ್ಟೀವ್ ಜಾಬ್ಸ್ ಕೂಡಾ ಒಬ್ಬ.

ಈಗ ಲಭ್ಯವಿರೋ ಜನಪ್ರಿಯ ಆನ್ಲೈನ್ ಆಟಗಳು ಮುಂದೆ ಆವಿಷ್ಕಾರಗೊಳ್ಳಲು ಅಥವಾ ಹೊಸ ಸಾಫ್ಟ್‍ವೇರುಗಳನ್ನು ಸೃಷ್ಟಿಸಲು ನಿಮಗೆ ಕೋಡ್ ಮಾಡೋ ಅಗತ್ಯವಿಲ್ಲದ ದಿನಗಳಿವು. ಕೃತಕ ಬುದ್ಧಿಮತ್ತೆಯಿಂದ (artificial intelligence)ಇದೆಲ್ಲ ಸಾಧ್ಯವಾಗಿರೋ ಈ ಕಾಲದಲ್ಲಿ “ಕೋಡ್ ಇಲ್ಲದ ಸಾಫ್ಟ್‍ವೇರ್” ಕೂಡಾ ಬರತೊಡಗಿವೆ. ನಿಮಗೆ ಬೇಕಾಗಿರೋ ಒಂದು ವಿನ್ಯಾಸಕ್ಕೆ ಬೇಕಾಗಿರೋ ಕೋಡ್ ಬೇಕೆಂದು ನೀವು ಇಂಥ ಂI ಸಾಫ್ಟ್‍ವೇರ್‍ಗೆ ಕೇಳಿಕೊಂಡರೆ ಸಾಕು ಅದು ದಿಢೀರ್ ಎಂದು ನಿಮ್ಮ ಮುಂದಿಡುತ್ತದೆ. ಇದು ಒಂದು ರೀತಿ ‘ಸಾಫ್ಟ್‍ವೇರ್ ಪ್ರಜಾಪ್ರಭುತ್ವ’ ಅನ್ನೋ ರವಿಕುಮಾರ್ “ಹಾಗೆ ನೋಡಿದರೆ ಈ ಂI ಮೂಲಕ ಬಳಕೆದಾರರೇ ಸೃಷ್ಟಿಕರ್ತರಾಗುತ್ತಿದ್ದರೆ. ಇದು ಹಿಂದಿನ ಸಾಂಪ್ರದಾಯಕ ಉದ್ಯೋಗಗಳನ್ನು ಕಸಿದುಕೊಂಡು ಮುಂದಿನ ದಿನಗಳಿಗೆ ಬೇಕಾಗೋ ಹೊಸ ಅವಕಾಶಗಳನ್ನ ಹುಟ್ಟು ಹಾಕುತ್ತದೆ” ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕೊನೆಗೆ ಅವರು ಹೇಳುವಂತೆ ಇನ್ನು ಮುಂದೆ ಹೈಸ್ಕೂಲ್ ನಂತರದ ಶಿಕ್ಷಣ ಮುಖ್ಯವಾಗಿ ಕುಶಲತೆ ಕಲಿಸೋ ದಿಟ್ಟಿನಲ್ಲಿರುತ್ತದೆ. ಇದಕ್ಕೆ ಕಾಲೇಜುಗಳು, ಸ್ಥಳೀಯ ಶಾಲೆಗಳು ಮತ್ತು ಅಭ್ಯರ್ಥಿಗಳನ್ನ ಹುಡುಕೋ ಕಂಪನಿಗಳ ಜಂಟಿ ಸಹಕಾರ ಇರಬೇಕು. ಇದು ಒಂದು ರೀತಿ ಮಿಶ್ರ ಪರಿಸರ ವ್ಯವಸ್ಥೆ. ಈ ವ್ಯವಸ್ಥೆಯಿಂದ ಕಲಿಯೋ ಆಜೀವ ಅವಕಾಶಗಳು ಸೃಷ್ಟಿಯಾಗುತ್ತವೆ. ಇದೊಂಥರಾ ಕುಶಲತೆಯ ಆಮೂಲಾಗ್ರ ಮರುಹಂಚಿಕೆ (ಡಿಚಿಜiಛಿಚಿಟ ಡಿesಞiಟಟiಟಿg). ಈ ವ್ಯವಸ್ಥೆಯಲ್ಲಿ ಒಬ್ಬ ಹೋಟೆಲ್ ಕಾರ್ಮಿಕನನ್ನು ಸೈಬರ್ ರಕ್ಷಣೆ ಮಾಡೋ ತಂತ್ರಜ್ಞನನ್ನಾಗಿಸಬಹುದು ಅಥವಾ ಒಬ್ಬ ವೈಮಾನಿಕ ಕಂಪನಿಯ ಟಿಕೆಟ್ ಕೊಡೋ ಗುಮಾಸ್ತೆಯನ್ನು ಡೇಟಾ ಸಲಹಾಗಾರ್ತಿಯನ್ನಾಗಿ ರೂಪಿಸಬಹುದು.

ಈಗ ಇನ್ಫೋಸಿಸ್, ಐಬಿಎಂ, ಎಟಿ & ಟಿ ಮುಂತಾದ ಬೃಹತ್ ಕಂಪನಿಗಳು ತಮ್ಮದೇ ಆದ (ಇನ್-ಹೌಸ್) ಸುಸಜ್ಜಿತ ವಿಶ್ವವಿದ್ಯಾಲಯಗಳನ್ನು ನಡೆಸತೊಡಗಿವೆ. ಇನ್ಫೋಸಿಸ್ ಸಂಸ್ಥೆ ಅಮೆರಿಕಾದ ಇಂಡಿಯಾನಾಪೊಲಿಸ್ ನಗರದಲ್ಲಿ 100 ಎಕರೆ ಜಾಗದಲ್ಲಿ ತನ್ನ ಉದ್ಯೋಗಿಗಳು ಮತ್ತು ಗ್ರಾಹಕರಿಗೆ ತರಬೇತಿ ನೀಡಲು ಕಟ್ಟಡ ನಿರ್ಮಿಸುತ್ತಿದೆ. ಇಲ್ಲಿ ಬರೀ “ಜಸ್ಟ್-ಇನ್-ಕೇಸ್” ಕಲಿಕೆ (ಒಂದು ವೇಳೆ ಬೇಕಾಗಬಹುದಾದ ಮಾಹಿತಿ) ಕಲಿಸದೇ ಒಂದು ಕೆಲಸ ಮುಗಿಸಲು ಬೇಕಾಗೋ ನಿರ್ದಿಷ್ಟ ಕುಶಲತೆ ಮತ್ತು ಸಾಮಗ್ರಿ ಗಮನದಲ್ಲಿಟ್ಟುಕೊಂಡು “ಜಸ್ಟ್-ಇನ್-ಟೈಮ್” ಕಲಿಕೆಗೆ ಒತ್ತು ಕೊಡಲಾಗುತ್ತದೆ.

ಇಷ್ಟು ಹೇಳಿದ ರವಿಕುಮಾರ್ ಆಜೀವ ಕಲಿಕೆ (lifelong learning) ಹೇಗೆ ಸಾಧ್ಯ ಅನ್ನೋದನ್ನ ಹೀಗೆ ವಿವರಿಸುತ್ತಾರೆ: “ಈ ಆಜೀವ ಕಲಿಕೆಗಾಗಿ ಹಲವಾರು ಸಂಸ್ಥೆಗಳು ಜೊತೆಗೂಡಿ ನಡೆಸೋ ಸಂಕೀರ್ಣ ಒಕ್ಕೂಟಗಳಿರುತ್ತವೆ (complex adaptive coalitions). ಇನ್ಫೋಸಿಸ್, ಐಬಿಎಂ ಅಥವಾ ಮೈಕ್ರೋಸಾಫ್ಟ್ ರೀತಿಯ ಕಂಪನಿಗಳು, ಹೈಸ್ಕೂಲು, ವಿಶ್ವವಿದ್ಯಾಲಯಗಳು ಒಕ್ಕೂಟದಲ್ಲಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕಂಪೆನಿಗಳಲ್ಲಿ ಜಸ್ಟ್-ಇನ್-ಟೈಮ್ ತರಬೇತಿ ಅಥವಾ ಕಂಪನಿ ಉದ್ಯೋಗಿಗಳು ಶಾಲಾ ಕಾಲೇಜುಗಳಲ್ಲಿ ಸಿಗೋ ಮಾನವ ಶಾಸ್ತ್ರ ತರಗತಿಗಳಿಗೆ ಹೋಗಬಹುದು. ಇಂಥ ಕೌಶಲ್ಯ ಮಾಹಿತಿ ವಿನಿಮಯ ಈಗಾಗಲೇ ಆರಂಭವಾಗಿದೆ ಮತ್ತು ಇದರಿಂದ ಒಕ್ಕೂಟದಲ್ಲಿರೋ ಎಲ್ಲರಿಗೂ ಉಪಯೋಗವಾಗುತ್ತದೆ.

ರವಿಕುಮಾರ್ ವಿವರಿಸಿದ ಈ ಒಕ್ಕೂಟದ ಉದ್ದೇಶ ಈಡೇರಿದರೆ ವಿದ್ಯಾರ್ಥಿಗಳಿಗೆ ಕಂಪನಿಗಳಲ್ಲಿ ನಡೆಯೋ ಅಮೂಲ್ಯ ತಾಂತ್ರಿಕ ಆವಿಷ್ಕಾರಗಳು ಮತ್ತು ವಿಧಾನಗಳ ಪರಿಚಯವಾಗುತ್ತದೆ. ಹಾಗೇ ಐಟಿ ಕಂಪನಿಗಳಲ್ಲಿರೋ ಎಂಜಿನಿಯರುಗಳು ಮತ್ತು ಅಧಿಕಾರಿಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಿಗೋ ನಾಗರಿಕತೆ, ನೀತಿಶಾಸ್ತ್ರ, ನ್ಯಾಯಾಂಗ ಸಿದ್ಧಾಂತ, ಪ್ರಜಾಪ್ರಭುತ್ವದ ಸಿದ್ಧಾಂತಗಳು, ಜನಸಾಮಾನ್ಯರ ಒಳಿತಿಗಾಗಿರೋ ಚಿಂತನೆಗಳು ಮತ್ತು ಪರಿಸರ ಕಾಳಜಿ ಮುಂತಾದ ವಿಷಯಗಳ ಅರಿವಾಗುತ್ತದೆ.

ಮೂಲ: ಒಪಿನಿಯನ್, ನ್ಯೂಯಾರ್ಕ್ ಟೈಮ್ಸ್.

*ಲೇಖಕರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಅಂಕಣಕಾರರು; ವಿದೇಶ ವ್ಯವಹಾರ, ಜಾಗತೀಕರಣ ಮತ್ತು ತಂತ್ರಜ್ಞಾನ ಅವರ ಬರವಣಿಗೆ-ಆಸಕ್ತಿಯ ವಿಷಯಗಳು. ಅನುವಾದಕರು ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಪರಿಸರ ಸಮಾಲೋಚಕರು; ಬಳ್ಳಾರಿ ಮೂಲದವರು.

Leave a Reply

Your email address will not be published.