ಕೋವಿಡ್ ಮೂರನೇ ಅಲೆ ಅಪಾಯ ಎದುರಿಸಲು ಏಳು ಉಪಾಯ!

ಲಸಿಕೆ ನೀಡುವ ಮೂಲಕ ಮಹಾಮಾರಿಯ ಭೀಕರತೆಯನ್ನು ಕೇವಲ ಸಾಮಾನ್ಯ ಶೀತವಾಗಿ ಪರಿವರ್ತಿಸುವ ಅವಕಾಶವೊಂದು ನಮ್ಮ ಬಳಿ ಇದೆ. ಇದು ಮುಂಬರುವ ಕೋವಿಡ್ ಮೂರನೇ ಅಲೆಯ ಅಪಾಯವನ್ನು ಎದುರಿಸುವ ಉಪಾಯ.

-ಡಾ.ದೇವಿಪ್ರಸಾದ್ ಶೆಟ್ಟಿ

ಕೋವಿಡ್ ಲಸಿಕೆ ಪಡೆದ ಕೊರೋನಾ ರೋಗಿಗಳಲ್ಲಿ ಸಾಮಾನ್ಯ ಶೀತಕ್ಕಿಂತಲೂ ತುಸು ಹೆಚ್ಚಿನ ರೋಗಲಕ್ಷಣಗಳು ಕಂಡುಬರುತ್ತವೆ ಹೊರತು ಅವರು ತೀವ್ರ ನಿಗಾ ಘಟಕ ಸೇರುವ ಪ್ರಮೇಯವಿರುವುದಿಲ್ಲ. ಹಾಗಾಗಿಯೇ ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಮೂರನೆಯ ಅಲೆಯು ಎರಡನೆಯ ಅಲೆಗಿಂತಲೂ ಭೀಕರವಾಗಿದ್ದರೂ, ಲಸಿಕೆಯು ರಕ್ಷಣೆ ಒದಗಿಸುತ್ತದೆ ಎಂಬುದು ಮತ್ತೆ ಮತ್ತೆ ಜಾಗತಿಕ ಅನುಭವದಿಂದ ಸಾಬೀತಾಗುತ್ತಿದೆ. ಲಸಿಕೆ ನೀಡುವ ಮೂಲಕ ಈ ಮಹಾಮಾರಿಯ ಭೀಕರತೆಯನ್ನು ಕೇವಲ ಸಾಮಾನ್ಯ ಶೀತದ ಮೂರನೆಯ ಅಲೆಯಾಗಿ ಪರಿವರ್ತಿಸುವ ಅವಕಾಶವೊಂದು ನಮ್ಮ ಬಳಿ ಇದೆ.

64 ಕೋಟಿ ಜನರಿಗೆ ಎಷ್ಟು ಶೀಘ್ರವಾಗಿ ಲಸಿಕೆ ನೀಡುತ್ತೇವೆ ಎಂಬುದರತ್ತ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಪ್ರಧಾನ ಮಂತ್ರಿಗಳ ನಾಯಕತ್ವದಲ್ಲಿ ನಮ್ಮ ಸರ್ಕಾರವು ಸಾಕಾಗುವಷ್ಟು ಲಸಿಕೆಗಳನ್ನು ವ್ಯವಸ್ಥೆ ಮಾಡುತ್ತದೆ ಎಂದು ನಾನು ನಂಬಿದ್ದೇನೆ. ಮುಂದೆ, ಲಸಿಕಾ ಕಾರ್ಯಕ್ರಮವನ್ನು ಒಂದು ಸಾಮೂಹಿಕ ಪರಿಶ್ರಮವನ್ನಾಗಿ ಬದಲಾಯಿಸಿ ಈ ಸಪ್ತ ಸೂತ್ರಗಳನ್ನು ಅನುಸರಿಸಿದರೆ, ನಾವು ಪ್ರತಿದಿನ ಒಂದು ಕೋಟಿ ಭಾರತೀಯರಿಗೆ ಲಸಿಕೆ ನೀಡಬಹುದು.    

ಕೇಂದ್ರ ಸರ್ಕಾರವು ಸಾಧ್ಯವಾದಷ್ಟು ಬೇಗ ಉತ್ತಮ ಬೆಲೆಗೆ ಲಭ್ಯವಿರುವ ಎಲ್ಲಾ ಭಾರತೀಯ ಮತ್ತು ವಿದೇಶೀ ಲಸಿಕೆಗಳನ್ನು ಕೊಳ್ಳಬೇಕು. ಭಾರತದ ಶೇ.14 ರಷ್ಟು ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವ ನಮ್ಮ ತಂಡಕ್ಕೆ, ಆರ್ಥಿಕ ಶಕ್ತಿಗಳ ಚೌಕಾಶಿಯ ಅರಿವಿದೆ. ಭಾರತೀಯ ಲಸಿಕಾ ಉತ್ಪಾದಕರ ಬಳಿ ಖಾಸಗಿ ಆಸ್ಪತ್ರೆಗಳು ಲಸಿಕೆಗಾಗಿ ಭಿಕ್ಷೆ ಬೇಡುತ್ತಿವೆ. ಭಾರತ ಸರ್ಕಾರದ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಜ್ಞಾನಿಗಳಿಂದ, ಭಾರತದಲ್ಲಿ ಅಭಿವೃದ್ಧಿ ಹೊಂದಿದ ಲಸಿಕೆಯು ಈಗ ಅಮೆರಿಕದ ಲಸಿಕೆಗಳಿಗಿಂತಲೂ ದುಬಾರಿಯಾಗಿದೆ.

ಸರಕಾರ ಈಗಾಗಲೇ ಶೇ.75 ರಷ್ಟು ಲಸಿಕೆಗಳನ್ನು ಭಾರತೀಯ ಲಸಿಕಾ ಉತ್ಪಾದಕರಿಂದ ಖರೀದಿಸುತ್ತಿದ್ದು ಇದು ಶೇ.100ಕ್ಕೆ ಏರಬೇಕು ಮತ್ತು ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ಮೊತ್ತಕ್ಕೆ ಸರಬರಾಜು ಮಾಡಬೇಕು.

ಲಭ್ಯವಿರುವ ಉತ್ತಮ ಗುಣಮಟ್ಟದ ವಿದೇಶೀ ಲಸಿಕೆಗಳನ್ನು ಕೊಳ್ಳುವುದರ ಜೊತೆಗೆ ನಮ್ಮಲ್ಲಿರುವ ಲಸಿಕೆಯ ನಿಧಿಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಸರಕಾರ ಮಾಡಬೇಕು. ದೇಶದ ಭವಿಷ್ಯ ಅಪಾಯದಲ್ಲಿರುವಾಗ ನಾವು ಕೇವಲ ಕೆಲವು ಭಾರತೀಯ ಲಸಿಕಾ ಉತ್ಪಾದಕರ ಮೇಲೆ ಅವಲಂಬಿತರಾಗಲು ಸಾಧ್ಯವಿಲ್ಲ. ಕೇವಲ ಶೇ.30 ರಷ್ಟು ಜನರು ವಿದೇಶೀ ಲಸಿಕೆಗಳಿಗೆ ಹಣ ಪಾವತಿ ಮಾಡಿದರೂ, ಮಿಕ್ಕ ಶೇ40 ರಷ್ಟು ಬಡ ಜನತೆಗೆ ಸರಕಾರವು ಉಚಿತವಾಗಿ ಲಸಿಕೆಗಳನ್ನು ನೀಡಬಹುದು.

ರಾಜ್ಯ ಸರಕಾರಗಳು ಸರಕಾರಿ ಆಸ್ಪತ್ರೆಗಳಿಗೆ ಉಚಿತವಾಗಿಯೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸಣ್ಣ ಮೊತ್ತಕ್ಕೆ ಲಸಿಕೆ ಸರಬರಾಜು ಮಾಡಬೇಕು. ಲಸಿಕೆಯ ಸರಬರಾಜು ಮತ್ತು ವಿತರಣೆಯನ್ನು ಸರಕಾರವೇ ನೇರವಾಗಿ ಮಾಡುವ ಮೂಲಕ ಅದಕ್ಷ ಮತ್ತು ದುಬಾರಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕು. ಮುಂಚೂಣಿ ಕಾರ್ಯಕರ್ತರಿಗೆ (ಜಿಡಿoಟಿಣಟiಟಿe ತಿoಡಿಞeಡಿs) ಲಸಿಕೆ ನೀಡುವ ವಿಚಾರದಲ್ಲಿ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಾರದರ್ಶಕತೆ ಮೆರೆದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ.

ಯಾವುದೇ ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳ ಶೀತಗಾರದಲ್ಲಿ ಲಸಿಕೆಗಳು ಹತ್ತು ದಿನಗಳಿಗಿಂತ ಹೆಚ್ಚಿಗೆ ಇರಬಾರದು. ಅದು ಯಾರದಾದರೂ ದೇಹವನ್ನು ಪ್ರವೇಶಿಸಿ ಆದಷ್ಟು ಬೇಗ ಈ ಮಾರಣಾಂತಿಕ ರೋಗದಿಂದ ರಕ್ಷಿಸಬೇಕು. ಪ್ರತೀ ಹತ್ತು ದಿನಗಳಿಗೊಮ್ಮೆ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಇರುವ ಲಸಿಕೆಯ ಸಂಗ್ರಹದ ಆರಂಭಿಕ ಮತ್ತು ಅಂತ್ಯದ ಲೆಕ್ಕವನ್ನು ರಾಜ್ಯದ ಕೋವಿಡ್ ವಾರ್ ರೂಮಿಗೆ ನೀಡಬೇಕು. ಅಕಸ್ಮಾತ್ ಯಾವುದೇ ಆಸ್ಪತ್ರೆಯಿಂದ ತಮ್ಮ ಬಳಿಯಿರುವ ದಾಸ್ತಾನನ್ನು ಹತ್ತು ದಿನಗಳೊಳಗೆ ಮುಗಿಸಲು ಸಾಧ್ಯವಾಗದಿದ್ದರೆ, ಅದನ್ನು ಇತರೆ ಆಸ್ಪತ್ರೆಗಳಿಗೆ ವಿತರಿಸಬೇಕು. ಇದರಿಂದ ಲಸಿಕೆಯ ವಿತರಣೆಯಲ್ಲಿ ಸರಕಾರಿ ಆಸ್ಪತ್ರೆಗಳ ಅದಕ್ಷತೆಯನ್ನು ಮತ್ತು ಖಾಸಗೀ ಆಸ್ಪತ್ರೆಗಳ ಅಕ್ರಮ ಸಂಗ್ರಹಣೆಯನ್ನು ನಿಯಂತ್ರಿಸಬಹುದು. 

ವೈದ್ಯಕೀಯ ಮೇಲ್ವಿಚಾರಣೆಯಡಿ ಲಸಿಕೆಯ ವಿತರಣೆಯು 24/7 ಸೇವೆಯಾಗಬೇಕು. ಸಮಯ ವೇಗವಾಗಿ ಓಡುತ್ತಿರುವುದರಿಂದ ನಾವು ಮನೆಗಳಲ್ಲಿ, ಮರದಡಿ ನಿಂತ ಕಾರುಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿಯೂ ಲಸಿಕೆ ನೀಡಬೇಕು. ಆಸ್ಪತ್ರೆಯ ಆವರಣದಲ್ಲಿ ಮಧ್ಯರಾತ್ರಿಯೂ ಲಸಿಕೆ ಲಭ್ಯವಿರಬೇಕು.

ಕೋಲ್ಕತ್ತಾದ ನಮ್ಮ ಪ್ರತಿಭಾವಂತ ದಾದಿಯರು ಈಗಾಗಲೇ ಈ ಸಾಧ್ಯತೆಯನ್ನು ಪ್ರದರ್ಶಿಸಿದ್ದಾರೆ. ಸ್ಥಳಿಯವಾಗಿ ಲಭ್ಯವಿದ್ದ ನಿರುದ್ಯೋಗಿ ಯುವತಿಯರಿಗೆ ಕೆಲ ವಾರಗಳ ತರಬೇತಿ ನೀಡಿ ಒಂದು ನಿಮಿಷಕ್ಕೆ ಏಳು ಮಂದಿಗೆ ಸುಲಭವಾಗಿ ಮತ್ತು ಸುರಕ್ಷಿತವಾಗಿ ಲಸಿಕೆ ಹಾಕಿದ್ದಾರೆ. ಇಂತಹ ಪ್ರತಿಭಾವಂತ ವೈದ್ಯರನ್ನ, ಶುಶ್ರೂಷಕರನ್ನ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಪಡೆದಿರುವ ನಾವು ಧನ್ಯರು. ಸುಲಭವಾಗಿ ಮತ್ತು ಸುರಕ್ಷಿತವಾಗಿ ಲಸಿಕೆ ನೀಡುವ ಮಾರ್ಗೋಪಾಯಗಳನ್ನು ಹುಡುಕಲು ಇವರಿಗೇ ಬಿಡುವುದು ಒಳಿತು.

ರಾಜ್ಯ ಸರಕಾರಗಳು ತಮ್ಮ ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಸಣ್ಣ ಮತ್ತು ದೊಡ್ಡ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳನ್ನೂ ಸೇರಿಸಿಕೊಳ್ಳಬೇಕು. ಸರಕಾರದಲ್ಲಿ ಕೇವಲ 2-3 ಲಕ್ಷ ಜನ ನರ್ಸುಗಳಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಆ ಸಂಖ್ಯೆ ಹತ್ತು ಲಕ್ಷವಿದೆ. ಜೊತೆಗೆ ಕೋವಿಡ್ ನಂತರ ಉಂಟಾಗಿರುವ ನೂಕು ನುಗ್ಗಲಿನಿಂದ ಆಸ್ಪತ್ರೆಗಳು ಕೇವಲ ಶೇ.5 ರಷ್ಟು ಶುಶ್ರೂಷಕ ಸಿಬ್ಬಂದಿಯನ್ನು ಮಾತ್ರ ಲಸಿಕೆ ನೀಡಲು ನಿಯೋಜಿಸಬಹುದು. ಇಷ್ಟು ಸಣ್ಣ ಸಿಬ್ಬಂದಿಯಿಂದ ಶೇ.75 ರಷ್ಟು ಜನಸಂಖ್ಯೆಗೆ ಸರಕಾರಿ ಆಸ್ಪತ್ರೆಗಳಿಂದ ಲಸಿಕೆ ನೀಡುವುದು ತ್ರಾಸದಾಯಕ.

ಸರಕಾರದಿಂದ ಲಸಿಕೆಯೊಂದಕ್ಕೆ 100-150 ರೂಪಾಯಿಗಳನ್ನು ನೀಡಿದರೆ ಹಲವಾರು ಖಾಸಗಿ ಆಸ್ಪತ್ರೆಗಳು ಲಸಿಕೆ ನೀಡಲು ಮುಂದೆ ಬರಬಹುದು ಎಂದು ನನ್ನ ಅನಿಸಿಕೆ. ಗೀವ್ ಇಂಡಿಯಾದಂತಹ ಪರೋಪಕಾರಿ ಸಂಸ್ಥೆಗಳು ಲಸಿಕೆಯೊಂದಕ್ಕೆ 100 ರೂ ನೀಡುತ್ತಿದೆ. ಇಂತಹ ಹಲವು ಸಂಘ ಸಂಸ್ಥೆಗಳು ಸಹಾಯ ಮಾಡಲು ಮುಂದೆ ಬರುತ್ತವೆ. ಲಸಿಕೆಯ ಸೇವೆಗಳು ಜನರಿಗೆ ತಮ್ಮ ಮನೆಯಿಂದ ಅಥವಾ ಕಛೇರಿಯಿಂದ ಕಾಲ್ನಡಿಗೆಯ ದೂರಕ್ಕೆ ಸಿಗುವಂತಾಗಬೇಕು. ನೋಂದಣಿಯಾಗಿರುವ ಎಲ್ಲಾ ನರ್ಸಿಂಗ್ ಹೋಂ ಮತ್ತು ಕ್ಲಿನಿಕ್ ಗಳನ್ನು ಉಪಯೋಗಿಸಿಕೊಂಡರೆ ಸಣ್ಣ ಪಟ್ಟಣಗಳಲ್ಲೂ ಇದನ್ನು ಸಾಧ್ಯವಾಗಿಸಬಹುದು. ಲಭ್ಯವಿರುವ ನರ್ಸ್ ಮತ್ತು ವೈದ್ಯರ ಜೊತೆಗೆ ಸರಕಾರೇತರ ಸಂಸ್ಥೆಗಳೂ ಸೇರಿಕೊಂಡರೆ ಹಳ್ಳಿಗಳಲ್ಲಿ ಮನೆ ಮನೆಗೆ ಲಸಿಕೆಗಳನ್ನು ತಲುಪಿಸಬಹುದು.

ಲಸಿಕಾ ಕಾರ್ಯಕ್ರಮವು ಒಂದು ಸಾಮೂಹಿಕ ಕ್ರಿಯೆಯಾಗಬೇಕು. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಶೇ.21 ರಷ್ಟು ಜನರು ಸ್ಲಂಗಳಲ್ಲಿ ವಾಸ ಮಾಡುತ್ತಿದ್ದಾರೆ. ಬೆಂಗಳೂರಿನ ಇತರೆ ಶೇ.21 ರಷ್ಟು ಜನ ಗೀವ್ ಇಂಡಿಯದಂತಹ ಸಂಸ್ಥೆಗಳಿಗೆ ತಲಾ 630 ರೂಗಳನ್ನು ಬಡವರಿಗೆ ಲಸಿಕೆ ಹಾಕಿಸಲು ದಾನವಾಗಿ ನೀಡಿದರೆ, ಸರಕಾರದ ಉಚಿತ ಲಸಿಕೆಯ ಅವಶ್ಯಕತೆ ಇಲ್ಲದೆಯೇ ಇಡೀ ನಗರದ ಜನರನ್ನು ಲಸಿಕೆಯ ವ್ಯಾಪ್ತಿಯೊಳಗೆ ತರಬಹುದು. ರೂ.20000 ಕೋಟಿಗಳಷ್ಟು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್.) ಹಣವನ್ನು ಲಸಿಕೆ ಕೊಳ್ಳಲು ಅಥವಾ ಬಡವರಿಗೆ ಉಚಿತವಾಗಿ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕೊಡಬಹುದು.

ಹಲವಾರು ಕಂಪೆನಿಗಳು ತಮ್ಮ ನೌಕರರ ಇಡೀ ಕುಟುಂಬಕ್ಕೆ ಲಸಿಕೆ ಕೊಡಿಸಬಹುದು. ಬಹಳಷ್ಟು ಜನ ಗೃಹಿಣಿಯರು ತಮ್ಮ ಮನೆಗೆಲಸದವರಿಗೆ, ಚಾಲಕರಿಗೆ ಮತ್ತು ಅವರ ಕುಟುಂಬದವರಿಗೆ ಲಸಿಕೆ ಕೊಡಿಸಬಹುದು. ಲಾಕ್ಡೌನ್ ಗಳಿಂದ ನಗರವಾಸಿ ಬಡವರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅರಿವು ಮೂಡಿಸಬೇಕು. ಅಸಲಿಗೆ ಇವರ ಏಕೈಕ ಕೆಲಸವೇ ಉಳ್ಳವರ ಸೇವೆ ಮಾಡುವುದಾಗಿರುವಾಗ, ಲಸಿಕೆಗಾಗಿ ನೀಡುವ ಮೊತ್ತವು ಉತ್ತಮ ಮತ್ತು ಶೀಘ್ರವಾಗಿ ಹಿಂದಿರುಗುವ ಹೂಡಿಕೆಯಾಗಿದೆ.

ಲಸಿಕೆಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾದ ನಂತರ ಕೆಲಸದ ಸ್ಥಳಗಳಲ್ಲಿ, ಸಾರ್ವಜನಿಕ ಸಾರಿಗೆಗಳಲ್ಲಿ ಮತ್ತು ಮನರಂಜನಾ ಸ್ಥಳಗಳಲ್ಲಿ ಲಸಿಕಾ ದೃಢೀಕರಣ ಪತ್ರ (vಚಿಛಿಛಿiಟಿe ಛಿeಡಿಣiಜಿiಛಿಚಿಣe) ಕಡ್ಡಾಯಗೊಳಿಸಬೇಕು.

ಮುಂಚೂಣಿ ಕಾರ್ಯಕರ್ತರಿಗಂತೂ (ಜಿಡಿoಟಿಣಟiಟಿe ತಿoಡಿಞeಡಿs) ಕಳೆದ ಒಂದೂವರೆ ವರ್ಷದಿಂದ ಬಹಳ ಕಠಿಣ ದಿನಗಳಾಗಿವೆ. ನಮ್ಮ ವೃತ್ತಿಜೀವನದಲ್ಲಿಯೇ ಅತೀ ಹೆಚ್ಚು ಸಾವುಗಳನ್ನು ಈ ವರ್ಷ ನಾವು ಘೋಷಣೆ ಮಾಡಿದ್ದೇವೆ. ಹತ್ತಿರದ ಭವಿಷ್ಯದಲ್ಲಿ, ಮಧ್ಯರಾತ್ರಿಯಲ್ಲಿ ನಮ್ಮೆದುರಿಗೆ ಯುವತಿಯೊಬ್ಬಳು ಮೂರು ಮಕ್ಕಳೊಂದಿಗೆ, ಆಸ್ಪತ್ರೆಯ ಐಸಿಯುವಿನಲ್ಲಿ ಕೊನೆಯುಸಿರೆಳೆದ 35ರ ಹರೆಯದ ತನ್ನ ಗಂಡನ ಬಗೆಗೆ ವಿಚಾರಿಸಲೆಂದು ನಿಂತಿದ್ದಾಗ ನಾವು ಆಕೆಗೆ ಸುಳ್ಳು ಹೇಳಬೇಕೆಂದು ಮಾತ್ರ ಬಯಸಬೇಡಿ. ಅದು ಕೇವಲ, ತನ್ನ ಕುಟುಂಬದ ಅತ್ಯಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡ ಒಬ್ಬ ಯುವತಿಗೆ ಹೇಳುವ ಸುಳ್ಳಲ್ಲ. ಬದಲಾಗಿ ತನ್ನ ಪ್ರೀತಿ ಪಾತ್ರರನ್ನು ಕಾಪಾಡಿಕೊಳ್ಳಲು ಆಕೆ ಅವಲಂಬಿಸಿದ್ದ ಇಡೀ ಭಾರತೀಯ ನಾಗರಿಕ ಸಮಾಜಕ್ಕೆ ಹೇಳುವ ಸುಳ್ಳು.

ಮೂಲ: ಟೈಮ್ಸ್ ಆಫ್ ಇಂಡಿಯಾ  ಅನುವಾದ: ಹೇಮಂತ್ ಎಲ್.

*ಲೇಖಕರು ಖ್ಯಾತ ಹೃದಯ ತಜ್ಞರು; ನಾರಾಯಣ ಹೃದಯಾಲಯದ ಸಂಸ್ಥಾಪಕರು. ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಕಾರ್ಯಪಡೆಯ ಮುಖ್ಯಸ್ಥರು.

Leave a Reply

Your email address will not be published.