ಕೋವಿಡ್ ಸಂಕಷ್ಟದಲ್ಲಿ ಹೆಚ್ಚಾಗುತ್ತಿದೆ ಸೈಬರ್ ಭಯೋತ್ಪಾದನೆ

ಸೈಬರ್ ಸುರಕ್ಷತೆ ಮತ್ತು ಸೈಬರ್ ವಿಧಿವಿಜ್ಞಾನ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಕೋವಿಡ್-19 ದುಸ್ತರ ಪರಿಸ್ಥಿತಿಯಲ್ಲಿ ಕೂಡಾ ವಿಶ್ವಾದಂತ್ಯ ಸುಮಾರು 50 ಲಕ್ಷ ಉದ್ಯೋಗಾವಕಾಶಗಳು, ಸೂಕ್ತ ಅಭ್ಯರ್ಥಿ ದೊರೆಯದ ಕಾರಣ ಖಾಲಿ ಉಳಿದಿವೆ.

-ಡಾ.ಉದಯ ಶಂಕರ ಪುರಾಣಿಕ

  • ಕೋವಿಡ್ ಲಸಿಕೆ ಪಡೆದಿರುವುದಾಗಿ ಹೇಳುವ ನಕಲಿ ಸರ್ಟಿಫಿಕೇಟ್‍ಗಳನ್ನು ಸೈಬರ್ ಭಯೋತ್ಪಾದಕರು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ, ಕೋವಿಡ್-19 ಲಸಿಕೆ ಪಡೆದಿರುವವರಿಗೆ ಜರ್ಮನಿಯಲ್ಲಿ ನೀಡಲಾಗುವ ಸರ್ಟಿಫಿಕೇಟ್‍ನಂತೆ ಇರುವ ನಕಲಿ ಸರ್ಟಿಫಿಕೇಟ್‍ಗೆ ತಲಾ 25 ಡಾಲರ್ ನಂತೆ ಮಾರಾಟ ಮಾಡಲಾಗುತ್ತಿದೆ.
  • ವಿದೇಶದಲ್ಲಿ ತಯಾರಾದ ಕೋವಿಡ್ ಲಸಿಕೆ ಬೇಕು, ಬೆಲೆ ಎಷ್ಟಾದರೂ ಪರವಾಗಿಲ್ಲವೆನ್ನುವವರಿಗೆ ಅಮೆರಿಕಾದ ಲಸಿಕೆಗಳನ್ನು ತಲಾ 850 ಡಾಲರ್‍ಗಳಂತೆ ಮಾರಾಟ ಮಾಡಲಾಗುತ್ತಿದೆ.
  • ಯಾವುದಾದರೂ ಸಂಸ್ಥೆಯ ಲಸಿಕೆ ಕುರಿತು ಅಪಪ್ರಚಾರ ಮಾಡಿ, ಆ ಸಂಸ್ಥೆಯ ಲಸಿಕೆಗೆ ಮಾರುಕಟ್ಟೆ ಇಲ್ಲದಂತೆ ಮಾಡಬೇಕಾದರೆ, ಇಷ್ಟು ಹಣ ಕೊಟ್ಟರೆ ಸಾಕು, ಸಮೂಹ ಮಾಧ್ಯಮಗಳನ್ನು ಬಳಸಿ ನಿರಂತರವಾಗಿ ಅಡಿಯೋ, ವಿಡಿಯೋ ಮತ್ತು ಫೋಸ್ಟಗಳ ಮೂಲಕ ಅಪಪ್ರಚಾರ ಮಾಡುವ ಸೈಬರ್ ಭಯೋತ್ಪಾದಕರಿದ್ದಾರೆ.
  • ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಮತ್ತು ವೃತ್ತಿಪರರ ನೆಟ್‍ವರ್ಕ್, ಫೋನ್, ಕಂಪ್ಯೂಟರ್ ಮತ್ತು ಕ್ಯಾಮರಾಗಳ ಮೇಲೆ ನಿಯಂತ್ರಣ ಸಾಧಿಸಿ, ದುರ್ಬಳಕೆ ಮಾಡಿಕೊಳ್ಳುವ ಸೈಬರ್ ಭಯೋತ್ಪಾದಕರೂ ಇದ್ದಾರೆ.
  • ಆಸ್ಪತ್ರೆಗಳಿಂದ ರೋಗಿಗಳ ವೈಯಕ್ತಿಕ ವಿವರ, ಆರೋಗ್ಯ ಸಂಬಂಧಪಟ್ಟ ದಾಖಲೆಗಳು, ವಿಮೆ, ಕ್ರೆಡಿಟ್ ಕಾರ್ಡ್ ಮೊದಲಾದ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವ ಸೈಬರ್ ಭಯೋತ್ಪಾದಕರು ಇದ್ದಾರೆ.
  • ಕೋವಿಡ್-19 ಸಂಕಷ್ಟದ ನಡುವೆ ಸರ್ಕಾರ, ಪ್ರಮುಖ ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು ಹೀಗೆ ಅನೇಕರನ್ನು ಗುರಿಯಾಗಿಟ್ಟುಕೊಂಡು, ಅಪಪ್ರಚಾರ ಮಾಡುವ, ಜನಸಾಮಾನ್ಯರನ್ನು ಹಿಂಸೆಗೆ ಪ್ರಚೋದಿಸುವ, ಕೋಮು ಸೌಹಾರ್ದ ಕದಡುವ ಸುಳ್ಳು ಸುದ್ದಿ, ವಿಡಿಯೋ, ಆಡಿಯೋಗಳನ್ನು ನಿರಂತರವಾಗಿ ಸೃಷ್ಟಿಸಿ, ಪ್ರಚಾರ ಮಾಡುತ್ತಿರುವ ಸೈಬರ್ ಭಯೋತ್ಪಾದಕರಿದ್ದಾರೆ.

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಸೈಬರ್ ಭಯೋತ್ಪಾದಕ ದಾಳಿಗಳು, ವಿಶ್ವಾದಂತ್ಯ ಆತಂಕವನ್ನುಂಟು ಮಾಡಿವೆ. ನಕಲಿ ಚಿತ್ರಗಳು, ಆಡಿಯೋ, ವಿಡಿಯೋ ಮತ್ತು ಮಾಹಿತಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳ ಮೂಲಕ ವಿತರಣೆ ಮಾಡುವುದಷ್ಟಕ್ಕೆ ಈ ಸೈಬರ್ ಭಯೋತ್ಪಾದಕರು ಸೀಮಿತವಾಗಿಲ್ಲ.

ದೂರವಾಣಿ ವ್ಯವಸ್ಥೆ, ವಿದ್ಯುತ್ ವಿತರಣೆ, ಕುಡಿಯುವ ನೀರು ಪೂರೈಕೆ, ಸರಕು ಸಾಗಾಣಿಕೆ, ಬ್ಯಾಂಕು, ವಿಮಾನಯಾನ, ಆಸ್ಪತ್ರೆಗಳು, ಟಿವಿ, ವಾಣಿಜ್ಯ ಸಂಕೀರ್ಣಗಳು, ಸಂಶೋಧನಾ ಕೇಂದ್ರಗಳು, ಪೋಲೀಸರು, ರಕ್ಷಣಾ ಪಡೆಗಳು, ಹೀಗೆ ಹಲವಾರು ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳನ್ನು ಈ ಸೈಬರ್ ಭಯೋತ್ಪಾದಕರು ನಡೆಸುತ್ತಿದ್ದಾರೆ.

ಸೈಬರ್ ಅಪರಾಧಿಗಳು ಎಂದು ನೀವು ಕೇಳಿರುತ್ತೀರಿ. ಹಾಗಾದರೆ ಈ ಸೈಬರ್ ಭಯೋತ್ಪಾದಕರು ಯಾರು?

ಕೆಲವು ದೇಶಗಳು ಉಗ್ರವಾದಿ ಸಂಘಟನೆಗಳಿಗೆ ಅಗತ್ಯ ಹಣ, ರಕ್ಷಣೆ, ತರಬೇತಿ ಮತ್ತು ಸಂಪನ್ಮೂಲಗಳನ್ನು ನೀಡಿ, ಅವುಗಳ ಮೂಲಕ ಭಯೋತ್ಪಾದನೆ ನಡೆಸುತ್ತಿರುವುದು ನಿಮಗೆ ಗೊತ್ತಿರಬಹುದು. ಇದೇ ರೀತಿ ಕೆಲವು ದೇಶಗಳು ಸಾವಿರಾರು ಸಂಖ್ಯೆಯಲ್ಲಿ ಸೈಬರ್ ಭಯೋತ್ಪಾದಕರನ್ನು ಪೋಷಿಸುವ, ರಕ್ಷಿಸುವ ಮತ್ತು ಬಳಸಿಕೊಳ್ಳುವ ಕೆಲಸ ಮಾಡುತ್ತಿವೆ.

ಸೈಬರ್ ಭಯೋತ್ಪಾದನೆ ಇಂದು ವಿಶ್ವವನ್ನು ಕಾಡುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಎಲ್ಲಾ ದೇಶಗಳು ಸೈಬರ್ ಭಯೋತ್ಪಾದಕರು ಮತ್ತು ಸೈಬರ್ ಅಪರಾಧಗಳನ್ನು ಕುರಿತು ಮಾಹಿತಿ ಹಂಚಿಕೊಳ್ಳುವುದು ಸೇರಿದಂತೆ, ಸೈಬರ್ ಭಯೋತ್ಪಾದನೆಯನ್ನು ನಿರ್ಮೂಲ ಮಾಡಲು ಸಂಘಟಿತರಾಗಿ ಹೋರಾಡುವ ಅಗತ್ಯವನ್ನು ಭಾರತದ ಪ್ರಧಾನಮಂತ್ರಿ ಸೇರಿದಂತೆ, ಹಲವು ದೇಶಗಳ ಮುಖ್ಯಸ್ಥರು ವಿವಿಧ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಒತ್ತಾಯಿಸಿದ್ದಾರೆ. ಭಾರತವು ಸೇರಿದಂತೆ ಕೆಲವು ದೇಶಗಳು ಸೈಬರ್ ಭಯೋತ್ಪಾದನೆ ವಿರುದ್ಧ ಹೋರಾಟಕ್ಕಾಗಿ ಒಂದುಗೂಡಿದರೆ, ಕೆಲವು ಪ್ರಮುಖ ದೇಶಗಳು ಮಾತ್ರ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ.

ಸೈಬರ್ ಸುರಕ್ಷತೆ ಮತ್ತು ಸೈಬರ್ ವಿಧಿವಿಜ್ಞಾನ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಕೋವಿಡ್-19ರ ದುಸ್ತರ ಪರಿಸ್ಥಿತಿಯಲ್ಲಿ ಕೂಡಾ ವಿಶ್ವಾದಂತ್ಯ ಸುಮಾರು 50 ಲಕ್ಷ ಉದ್ಯೋಗಾವಕಾಶಗಳು, ಸೂಕ್ತ ಅಭ್ಯರ್ಥಿ ದೊರೆಯದ ಕಾರಣ ಖಾಲಿ ಉಳಿದಿವೆ.

ಇಂಜಿನಿಯರಿಂಗ್ ಪದವಿ ಮತ್ತು ಸ್ನಾತಕ್ಕೋತ್ತರ ಪದವಿ ಪಡೆದವರಿಗೆ, ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಅವರಿಗೆ ಇರುವ ಕೌಶಲ ಮತ್ತು ಅನುಭವದ ಆಧಾರದ ಮೇಲೆ ತಂತ್ರಜ್ಞಾನ ಪರಿಣತರಾಗಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.

ಬಿಎ, ಬಿಕಾಮ್, ಬಿಸ್ಸಿ ಪದವಿಗಳನ್ನು ಪಡೆದವರಿಗೂ ಈ ಕೆಳಗಿನ ಉದ್ಯೋಗವಕಾಶಗಳು ದೊರೆಯುತ್ತವೆ. ಆದರೆ ಅಗತ್ಯವಾದ ಕೌಶಲಗಳನ್ನು ಪಡೆಯಲು ಆಸಕ್ತಿ ಇರುವವರು, ಕೌಶಲಗಳನ್ನು ಕುರಿತು ತರಬೇತಿ ನೀಡುವ ಸಂಸ್ಥೆ ಮತ್ತು ತರಬೇತಿದಾರರ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸಿವುದು ಅಗತ್ಯವಿದೆ. ಏಕೆಂದರೆ ಈ ಕೌಶಲಗಳಿಗೆ ಬೇಡಿಕೆ ಇದೆ, ಹಣ ಮಾಡಿಕೊಳ್ಳೋಣ ಎಂದು ಪ್ರಾರಂಭವಾಗುತ್ತಿರುವ ಕೆಲವು ತರಬೇತಿ ಸಂಸ್ಥೆಗಳಿವೆ. ಇಂತಹ ತರಬೇತಿ ಸಂಸ್ಥೆಗಳಲ್ಲಿ ಈ ಕೌಶಲಗಳನ್ನು ಕಲಿಸಲು ಅಗತ್ಯವಾದ ತಂತ್ರಾಂಶಗಳು ಮತ್ತು ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಇದಲ್ಲದೆ ತರಬೇತಿದಾರರು ಕೂಡಾ ಸೈಬರ್ ಸುರಕ್ಷತೆ ಕೌಶಲಗಳಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಕೋರ್ಸ್‍ಗಳನ್ನಾಗಲಿ ಅಥವಾ ಸರ್ಟಿಫಿಕೇಷನ್ ಪಡೆದಿರುವುದಿಲ್ಲ.

1) ಸೈಬರ್ ದಾಳಿಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ, ನಿಷ್ಕ್ರಿಯಗೊಳಿಸಲು ಕೆಲವು ಸ್ಥಳೀಯ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಅತ್ಯಾಧುನಿಕ ಕೇಂದ್ರಗಳನ್ನು ಸ್ಥಾಪಿಸಿ, ನಿರ್ವಹಿಸುತ್ತಿವೆ. ಇಂತಹ ಕೇಂದ್ರಗಳಲ್ಲಿ ಸೈಬರ್ ದಾಳಿಯನ್ನು ಗುರುತಿಸಲು ನೆರವಾಗುವ ಫೈರ್‍ಐ ಮೊದಲಾದ ಸಂಸ್ಥೆಗಳ ತಂತ್ರಾಂಶಗಳನ್ನು ಬಳಸಲಾಗುತ್ತದೆ. ಇಂತಹ ತಂತ್ರಾಂಶಗಳಲ್ಲಿ ಕೌಶಲ ಮತ್ತು ಅಂತರಾಷ್ಟ್ರೀಯ ಮಾನ್ಯತೆ ಪಡೆದಿರುವ ಸರ್ಟಿಫಿಕೇಟ್‍ಗಳನ್ನು ಹೊಂದಿರುವವರಿಗೆ, ಈ ಕೇಂದ್ರಗಳಲ್ಲಿ ಉದ್ಯೋಗವಕಾಶಗಳು ದೊರೆಯುತ್ತವೆ.

ಸೈಬರ್ ದಾಳಿ ನಡೆದಾಗ ಅವುಗಳನ್ನು ನಿಷ್ಕ್ರೀಯಗೊಳಿಸಲು ವಿಶೇಷ ತರಬೇತಿ ಪಡೆದ ತಜ್ಞರ ತಂಡಗಳು ಕೆಲಸ ಮಾಡುತ್ತವೆ. ಸೈಬರ್ ಸುರಕ್ಷತೆಯಲ್ಲಿ ಹಲವಾರು ವರ್ಷಗಳ ಅನುಭವ ಮತ್ತು ಇಂತಹ ವಿಶೇಷ ತರಬೇತಿ ಪಡೆದವರಿಗೆ, ಈ ತಜ್ಞರ ತಂಡದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.

2) ಸಾಮಾನ್ಯವಾಗಿ ಸೈಬರ್ ದಾಳಿಗಳು ಏಕಾಯೇಕಿಯಾಗಿ ನಡೆಯುವುದಿಲ್ಲ. ಇಂತಹ ದಾಳಿ ಮಾಡಲು ಸಾಕಷ್ಟು ಪೂರ್ವತಯಾರಿಗಳನ್ನು ಮತ್ತು ಕೆಲವೊಮ್ಮೆ ಪರೀಕ್ಷಾರ್ಥ ದಾಳಿಗಳನ್ನು ಅಪರಾಧಿಗಳು ನಡೆಸುತ್ತಾರೆ. ಇಂತಹ ದಾಳಿಗಳು ನಡೆಯಬಹುದು ಎಂದು ಮುಂಚಿತವಾಗಿ ತಿಳಿಯಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಕೌಶಲ ಮತ್ತು ಕೆಲವು ವರ್ಷಗಳ ಅನುಭವ ಇರುವವರು ಇಂತಹ ಉದ್ಯೋಗವಕಾಶಕ್ಕಾಗಿ ಪ್ರಯತ್ನಿಸಬಹುದು.

3) ಸೈಬರ್ ದಾಳಿ ನಡೆದ ನಂತರ ತನಿಖೆ ಮಾಡಲು, ಸೈಬರ್ ವಿಧಿವಿಜ್ಞಾನ ತಂತ್ರಜ್ಞಾನ ಮತ್ತು ವಿಧಾನಗಳನ್ನು ಬಳಸಲಾಗುತ್ತದೆ. ಈ ವಿಷಯದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಕೆಲವು ಇಂಜಿನಿಯರಿಂಗ್ ಕಾಲೇಜುಗಳು ನೀಡಲು ಪ್ರಾರಂಭಿಸಿವೆ. ಆಸಕ್ತರು ಇಂತಹ ಕಾಲೇಜುಗಳನ್ನಾಗಲಿ ಅಥವಾ ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು.

4) ಸೈಬರ್ ಅಪರಾಧ ಕುರಿತು ವಾದ ಪ್ರತಿವಾದ ಮಂಡಿಸಲು ನ್ಯಾಯವಾದಿಗಳಿಗೆ ಕೂಡಾ ಅವಕಾಶಗಳಿವೆ. ಆಸಕ್ತರು ರಾಜ್ಯದಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಅಥವಾ ಈ ವಿಷಯದಲ್ಲಿ ತಜ್ಞರಾಗಿರುವ ನ್ಯಾಯವಾದಿಗಳನ್ನು ಸಂಪರ್ಕಿಸಬಹುದು.

5) ಆಸ್ಪತ್ರೆಗಳು ಮತ್ತು ಸಂಶೋಧನಾ ಕೇಂದ್ರಗಳ ಮೇಲೆ ಸೈಬರ್ ದಾಳಿಗಳು ಹೆಚ್ಚಾಗುತ್ತಿರುವುದರಿಂದ, ವೈದ್ಯರಿಗೆ ಕೂಡಾ ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಅವಕಾಶಗಳಿವೆ. ರೋಗಿಗಳ ಮಾಹಿತಿ, ಆರೋಗ್ಯ ದಾಖಲೆಗಳನ್ನು ರಕ್ಷಿಸುವುದರ ಜೊತೆಗೆ ಸಿಟಿ ಸ್ಕ್ಯಾನ್, ಎಮ್‍ಆರ್‍ಐ, ಲ್ಯಾಬ್ ಉಪಕರಣಗಳು, ಜೀವರಕ್ಷಕ ಯಂತ್ರಗಳನ್ನು ಕೂಡಾ ಸೈಬರ್ ಭಯೋತ್ಪಾದಕರಿಂದ ರಕ್ಷಿಸಿಕೊಳ್ಳುವುದು ಅಗತ್ಯವಾಗುತ್ತಿದೆ.

6) ಸೈಬರ್ ಅಪರಾಧಿಗಳಿಂದ ಹೆಚ್ಚು ಕಿರುಕುಳ, ಹಿಂಸೆ ಮತ್ತು ಬ್ಲಾಕ್‍ಮೇಲ್ ಅನುಭವಿಸುತ್ತಿರುವವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂತ್ರಸ್ತರಿಗೆ ನೆರವಾಗಲು ಆಪ್ತ ಸಮಾಲೋಚಕರ ಅಗತ್ಯ ಹೆಚ್ಚಾಗುತ್ತಿದೆ. ಆಸಕ್ತಿ ಇರುವವರು ಅಗತ್ಯ ಕೌಶಲಗಳನ್ನು ಪಡೆದು ಇಂತಹ ಉದ್ಯೋಗಗಳಿಗಾಗಿ ಪ್ರಯತ್ನಿಸಬಹುದು.

7) ಟಿವಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಗುರಿಯಾಗಿರಿಸಿಕೊಂಡು ನೆಡೆಯುತ್ತಿರುವ ಸೈಬರ್ ಭಯೋತ್ಪಾನೆಯ ದಾಳಿಗಳು ಅತಂಕಕಾರಿಯಾಗಿವೆ. ಆದರೆ ಸೈಬರ್ ಅಪರಾಧ ಮತ್ತು ಸುರಕ್ಷತೆ ಕುರಿತು ಮಾಧ್ಯಮ ಮಿತ್ರರಲ್ಲಿ ಜಾಗೃತಿ ಹೆಚ್ಚಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಸೈಬರ್ ಸುರಕ್ಷತೆ ಕುರಿತು ಕೌಶಲ ಇರುವ ಮಾಧ್ಯಮ ಮಿತ್ರರಿಗೆ ಅವಕಾಶಗಳು ಹೆಚ್ಚಾಗಲಿವೆ.

ಇದಲ್ಲದೆ ಸೈಬರ್ ಸುರಕ್ಷತೆ ಕ್ಷೇತ್ರದಲ್ಲಿ ಶಿಕ್ಷಣ, ಉದ್ಯಮ, ಸರ್ಕಾರ, ಮಾಹಿತಿ ತಂತ್ರಜ್ಞಾನ, ವಾಹನೋದ್ಯಮ, ಪುಸ್ತಕೋದ್ಯಮ, ಚಿತ್ರೋದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೌಶಲ ಹೊಂದಿರುವವರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಆಸಕ್ತ ಕನ್ನಡಿಗರು ಇಂತಹ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು.

ಸೈಬರ್ ದಾಳಿ ಅಥವಾ ಕಿರುಕುಳ, ಹಿಂಸೆ, ಬ್ಲಾಕ್‍ಮೇಲ್ ನಂತಹ ಅಪರಾಧಕ್ಕೆ ಗುರಿಯಾದವರು, ತಡಮಾಡದೆ ಸೈಬರ್ ಪೋಲೀಸರಿಗೆ ದೂರು ನೀಡಬೇಕು. ಸೈಬರ್ ಅಪರಾಧಗಳನ್ನು ಕುರಿತು ತನಿಖೆ ಮಾಡಲು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಲು ಅಗತ್ಯ ಕೌಶಲ ಹೊಂದಿರುವ ತಜ್ಞರು ಸೈಬರ್ ಪೋಲೀಸರಲ್ಲಿದ್ದಾರೆ. ಅವರಲ್ಲಿ ವಿಶ್ವಾಸವಿಟ್ಟು, ದೂರು ನೀಡುವುದು ಅಗತ್ಯವಿದೆ.

ಸೈಬರ್ ಅಪರಾಧಿ ಜಗತ್ತು ಹೇಗಿದೆ ಎನ್ನುವ ಕುತೂಹಲದಿಂದ ಅಥವಾ ಅಲ್ಪಸ್ವಲ್ಪ ಸೈಬರ್ ಸುರಕ್ಷತೆ ಕೌಶಲಗಳು ಗೊತ್ತಿದೆ, ಸೈಬರ್ ದಾಳಿಗಳನ್ನು ತಡೆಯುತ್ತೇನೆ ಎಂದೋ, ದಯವಿಟ್ಟು ಯಾರೂ ಸಾಹಸಕ್ಕೆ ಇಳಿಯಬೇಡಿ. ಸೈಬರ್ ಅಪರಾಧಿ ಜಗತ್ತು ಕುರಿತು ಸಿನಿಮಾ ಅಥವಾ ಪುಸ್ತಕಗಳಲ್ಲಿ ಓದುವುದಕ್ಕೂ ಮತ್ತು ವಾಸ್ತವದಲ್ಲಿ ಅದು ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಸಾಮಾನ್ಯವಾಗಿ ಕುಖ್ಯಾತ ಸೈಬರ್ ಅಪರಾಧಿಗಳು ಮತ್ತು ವಿಶೇಷವಾಗಿ ಸೈಬರ್ ಭಯೋತ್ಪಾದಕರು, ವಿವಿಧ ಸೈಬರ್ ತಂತ್ರಜ್ಞಾನಗಳಲ್ಲಿ ಅನುಭವ ಹೊಂದಿದವರು ಮತ್ತು ತಜ್ಞರಾಗಿರುತ್ತಾರೆ. ಇಂತಹವರನ್ನು ಎದುರಿಸಲು ಮತ್ತು ಅವರ ದಾಳಿಗಳನ್ನು ನಿಷ್ಕ್ರೀಯಗೊಳಿಸಲು ಸಾಕಷ್ಟು ಪೂರ್ವ ಸಿದ್ಧತೆ ಅಗತ್ಯವಿರುತ್ತದೆ. ಹೀಗಾಗಿ ಕುತೂಹಲದಿಂದ ಮುನ್ನುಗ್ಗಿ, ಪ್ರಾಣಾಪಾಯಕ್ಕೆ ಸಿಲುಕಬೇಡಿ.

*ಲೇಖಕರು ಇಂಜಿನಿಯರಿಂಗ್‍ನಲ್ಲಿ ಮೂರು ಡಾಕ್ಟರೇಟ್ ಪದವಿ ಪಡೆದಿದ್ದಾರೆ; ವೃತ್ತಿಯಿಂದ ಮಾಹಿತಿ ತಂತ್ರಜ್ಞಾನ ಪರಿಣತರು, ಕನ್ನಡದ ಖ್ಯಾತ ವಿಜ್ಞಾನ-ತಂತ್ರಜ್ಞಾನ ಬರಹಗಾರರು, ಪ್ರಸ್ತುತ ಕನ್ಸೆಲ್‍ಟೆನ್ಸಿ ಸಂಸ್ಥೆಯಲ್ಲಿ ಡೇಟಾ ವಿಜ್ಞಾನ ವಿಭಾಗದ ಮುಖ್ಯಸ್ಥರು. ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ’ ಕೃತಿಗೆ ಅಕಾಡೆಮಿ ಗೌರವ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published.