ಕೋವಿಡ್ ಸೃಷ್ಟಿಸಿರುವ ಹಸಿವಿನ ಬಿಕ್ಕಟ್ಟು

ಮುಂದಿನ ದಿನಗಳಲ್ಲಿ ವಿತ್ತೀಯ ಸಂಪನ್ಮೂಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ. ಹಿನ್ನೆಲೆಯಲ್ಲಿ ನಾವು ಬಹು ಎಚ್ಚರಿಕೆಯಿಂದ ಹಣವನ್ನು ವೆಚ್ಚ ಮಾಡಬೇಕು. ಆದರೆ ಯಾರಿಗೆ ನಿಜವಾಗಿ ನೆರವಿನ ಅಗತ್ಯವಿದೆಯೋ ಅವರು ಸದರಿ ಕಾರ್ಯಯೋಜನೆ ವ್ಯಾಪ್ತಿಯಿಂದ ಹೊರಗುಳಿದುಬಿಟ್ಟರೆ ನಾವು ಸವಾಲನ್ನು ಎದುರಿಸುವುದರಲ್ಲಿ ಸೋತಂತಾಗುತ್ತದೆ!

ಭಾರತವು ದೊಡ್ಡ ಪ್ರಮಾಣದಲ್ಲಿ ನಗದು ವರ್ಗಾವಣೆ (ಅಥವಾ ಆಹಾರ ಪದಾರ್ಥ) ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ ಇದರ ಅನುಷ್ಠಾನದಲ್ಲಿ ಉಂಟಾಗಬಹುದಾದ ಅಪವ್ಯಯದ/ತಪ್ಪು ಅನುಷ್ಠಾನದ ಬಗ್ಗೆ ಭಾರತೀಯರಾದ ನಮಗೆ ಅನೇಕ ಆತಂಕಗಳಿವೆ. ಏಕೆಂದರೆ ಈ ವರ್ಗಾವಣೆಯಲ್ಲಿ ಯಾರು ಇದಕ್ಕೆ ಅರ್ಹರೋ ಅವರ ಬದಲಾಗಿ ವರ್ಗಾವಣೆ ಹಣ ಅಥವಾ ಆಹಾರ ಪದಾರ್ಥ ಬೇರೆಯವರ ಪಾಲಾಗಿಬಿಡಬಹುದು ಎಂಬುದೇ ಈ ಆತಂಕ.

ತೆರಿಗೆದಾರರ ಹಣದ ಮೂಲಕ ಜಾರಿಯಾಗುತ್ತಿರುವ ಇಂತಹ ಕಾರ್ಯಯೋಜನೆಯ ತಪ್ಪು ಅನುಷ್ಠಾನದಿಂದ ಕೆಲವು ಮಧ್ಯವರ್ತಿಗಳು ಶ್ರೀಮಂತರಾಗಿಬಿಡಬಹುದು ಮತ್ತು ಅವರು ಪ್ರತಿನಿಧಿಸುವ ಸಂಸ್ಥೆಗಳು ಇದನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆದರೆ ‘ಕೆಟ್ಟದ್ದನ್ನು ನೋಡುವುದಿಲ್ಲ’ ಎಂಬಂತೆ ಬಡವರ ಸಂಕಷ್ಟಗಳನ್ನು ಗಮನಿಸದೆ, ಸರ್ಕಾರವೇ ಹೋಟೆಲುಗಳನ್ನು, ಐಷಾರಾಮಿ ಮೋಜಿನ ತಾಣಗಳನ್ನು ನಿರ್ವಹಿಸುವಂತಹ ಕಾರ್ಯಕ್ರಮಗಳ ಮೂಲಕ ಉಂಟಾಗುವ ಅಪವ್ಯಯಕ್ಕಿಂತ ಇದೊಂದು ಆಶಾವಾದಿ ಸ್ವಾಗತಾರ್ಹ ಪಲ್ಲಟವಾಗಿದೆ.

ಆದರೆ ಇಂದಿನ ಸಮಯದಲ್ಲಿ, ಅಂದರೆ 1. ರೋಗಗ್ರಸ್ಥ ಸ್ಥಿತಿ, 2. ಜಾಗತಿಕ ಆರ್ಥಿಕ ಕ್ರೆಸಿಸ್, 3. ದೇಶವು ಲಾಕ್‌ಡೌನ್‌ನಲ್ಲಿ ನಲುಗುತ್ತಿರುವ ಸ್ಥಿತಿ, 4. ಜನರ ಜೀವನ ಮತ್ತು ಜೀವನಾಧಾರಗಳ ಅಪಾಯದ ಸ್ಥಿತಿ -ಈ ಸಂದರ್ಭದಲ್ಲಿ ಮೇಲ್ಕಂಡ ಆತಂಕಗಳಿಗೆ  ಅರ್ಥವಿಲ್ಲ.

ಈಗಾಗಲೆ ಸ್ಪಷ್ಟವಾಗಿರುವಂತೆ ಲಾಕ್‌ಡೌನ್, ಪೂರ್ಣ ಪ್ರಮಾಣದಲ್ಲಿ ಅಥವಾ ಸ್ಥಳಿಯ ನಿರ್ಬಂಧದ ರೂಪದಲ್ಲಿ ಇನ್ನಷ್ಟು ಕಾಲ ಮುಂದುವರಿಯಬಹುದು. ಸದ್ಯದ ಕಳವಳಕಾರಿ ಸಂಗತಿಯೆಂದರೆ -ಇದು ದೊಡ್ಡ ಪ್ರಮಾಣದಲ್ಲಿ ಜನರನ್ನು ತೀವ್ರ ಬಡತನಕ್ಕೆ ದೂಡುತ್ತದೆಯೇ ಅಥವಾ ಜೀವನೋಪಾಯದ ನಷ್ಟದಿಂದ ಹಾಗೂ ಉನ್ನತ ಗುಣಮಟ್ಟದ ಸೇವಾ ವಿತರಣೆ ವ್ಯವಸ್ಥೆಯ ಕುಸಿತದಿಂದ ತೀವ್ರ ಹಸಿವಿಗೆ ದೂಡುತ್ತದೆಯೇ ಎಂಬುದಾಗಿದೆ. ಇದು ತನ್ನಷ್ಟಕ್ಕೆ ಅತ್ಯಂತ ದೊಡ್ಡ ದುರಂತವಾಗಿದೆ.

ಇದರಿಂದಾಗಿ ಹಸಿವಿನಿಂದ ಕಂಗೆಟ್ಟ ಹಾಗೂ ಕಳೆದುಕೊಳ್ಳಬೇಕಾದುದು ಏನೂ ಇಲ್ಲದಿರುವ ಬಡ ಜನರು ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್ ಉಲ್ಲಂಘನೆ ಮಾಡುವುದಕ್ಕೆ ತೊಡಗಬಹುದು. ಈ ಸಮಸ್ಯೆಯನ್ನು ನಾವು ಎದುರಿಸಬೇಕಾಗಬಹುದು. ಆದ್ದರಿಂದ ಸಮಾಜವು ಇಂತಹ ಜನರ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂಬ ಆರೋಪ ಬರದಂತೆ ನಾವು ನೋಡಿಕೊಳ್ಳಬೇಕಾಗಿದೆ ಮತ್ತು ಜನರ ಜೀವನೋಪಾಯವನ್ನು ಕನಿಷ್ಮ ಮಟ್ಟದಲ್ಲಿಯಾದರೂ ಸಂರಕ್ಷಿಸಬೇಕಾಗಿದೆ.

ಈ ಕಾರ್ಯಯೋಜನೆಯನ್ನು ನಿರ್ವಹಿಸಲು ಅಗತ್ಯವಾದ ಸಂಪನ್ಮೂಲ ನಮ್ಮಲ್ಲಿದೆ. ಭಾರತೀಯ ಆಹಾರ ನಿಗಮದ ಬಳಿಯಲ್ಲಿ ಮಾರ್ಚ್ 2020ರಲ್ಲಿದ್ದ ಆಹಾರದ ದಾಸ್ತಾನು 770 ಲಕ್ಷ ಟನ್ನುಗಳು. ಈ ಹಿಂದಿನ ಯಾವುದೇ ವರ್ಷದ ದಾಸ್ತಾನಿಗಿಂತ ಇದು ಅಧಿಕವಾಗಿದೆ. ಯಾವುದನ್ನು ‘ಕಾಪು ದಾಸ್ತಾನು’ ಎಂದು ಕರೆಯುತ್ತೇವೆಯೋ ಅದಕ್ಕಿಂತ ಮೂರುಪಟ್ಟು ಈಗಿರುವ ದಾಸ್ತಾನು ಅಧಿಕವಾಗಿದೆ. ಈ ದಾಸ್ತಾನಿನ ಪ್ರಮಾಣವು ಮುಂದಿನ ವಾರಗಳಲ್ಲಿ ಹಿಂಗಾರು ಬೆಳೆಯು ಮಾರುಕಟ್ಟೆಗೆ ಬರುವುದರಿಂದ ಇನ್ನಷ್ಟು ಹೆಚ್ಚಾಗುತ್ತದೆ.

ಲಾಕ್‌ಡೌನ್‌ನಿಂದಾಗಿ ಒಕ್ಕಲುತನ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ  ಅವ್ಯವಸ್ಥೆಯನ್ನು ಗಮನಿಸಿ ಮಾರಾಟಕ್ಕೆ ತುದಿಗಾಲಿನಲ್ಲಿ ನಿಂತಿರುವ ರೈತವರ್ಗದಿಂದ ಆಹಾರ ಪದಾಥವನ್ನು ಖರೀದಿಸುವಲ್ಲಿ ಸರ್ಕಾರ ಕ್ರಿಯಾಶೀಲವಾಗಿರುವಂತೆ ಕಾಣುತ್ತಿಲ್ಲ. ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಸದ್ಯ ಉಗ್ರಾಣದ ಮಳಿಗೆಗಳಲ್ಲಿರುವ ದಾಸ್ತಾನನ್ನು ಅಗತ್ಯವಿರುವವರಿಗೆ ಹಂಚುವ ಕ್ರಮವು ಇಂದಿನ ವಿಶೇಷ ಬಿಕ್ಕಟ್ಟಿನ ಸಂದರ್ಭದಲ್ಲಿ ವಿವೇಕಯುತ ಕ್ರಮವಾಗಿ ಕಾಣುತ್ತದೆ. ಇಂತಹ ಕ್ರಮವನ್ನು ಯಾವುದೇ ವಿವೇಕಯುತ ಸಾರ್ವಜನಿಕ ಉತ್ತರದಾಯಿತ್ವ ವ್ಯವಸ್ಥೆಯಲ್ಲಿ ಅನವ್ಯಶಕ ವೆಚ್ಚದ ಅಥವಾ ದುಂದುವೆಚ್ಚದ ಕ್ರಮ ಎಂದು ವರ್ಣಿಸಲು ಬರುವುದಿಲ್ಲ.

ಈಗಾಗಲೆ ಸರ್ಕಾರವು ತನ್ನ ಬಳಿಯಲ್ಲಿರುವ ಆಹಾರ ದಾಸ್ತಾನನ್ನು ಬಳಸುವ ಬಗ್ಗೆ ಆಸಕ್ತಿ ತೋರಿಸುತ್ತಿದೆ. ಸರ್ಕಾರವು ಮುಂದಿನ ಮೂರು ತಿಂಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನೀಡುವ ರೇಷನ್ನಿಗೆ ಇನ್ನೂ ಹೆಚ್ಚುವರಿಯಾಗಿ 5 ಕೆ.ಜಿ. ಧಾನ್ಯ ನೀಡುವುದಕ್ಕೆ ಮುಂದಾಗಿದೆ. ಆದರೆ ಈ ಮೂರು ತಿಂಗಳು ಸಾಕಾಗುವುದಿಲ್ಲ. ಏಕೆಂದರೆ ಲಾಕ್‌ಡೌನ್ ತೆರವಾದ ಮೇಲೂ ಆರ್ಥಿಕ ಪುನಶ್ಚೇತನಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಟ್ಟಿಯಲ್ಲಿ ಸೇರದಿರುವ ಅನೇಕ ಬಡಕುಟುಂಬಗಳಿವೆ (ರೇಷನ್ ಕಾರ್ಡ್ ಪಡೆಯುವಲ್ಲಿ ವಿಫಲರಾಗಿರುವ ಬಡಕುಟುಂಬಗಳ ಸಮಸ್ಯೆಯನ್ನು ಬಗೆಹರಿಸುವುದು ಸುಲಭದ ಕೆಲಸವಲ್ಲ).

ಇದೀಗ ಸರ್ಕಾರ ತೀರ್ಮಾನಿಸಿರುವ ಹೆಚ್ಚುವರಿ 5 ಕೆ.ಜಿ. ಆಹಾರವು ಈಗಾಗಲೆ ರೇಷನ್ ಕಾರ್ಡ್ ಹೊಂದಿರುವವರಿಗೆ ಅನ್ವಯವಾಗುತ್ತದೆ. ಉದಾ: ಸಣ್ಣ ರಾಜ್ಯವಾದ ಜಾರ್ಖಂಡ್‌ನಲ್ಲಿ ನಮಗೆ ತಿಳಿದುಬಂದಿರುವಂತೆ ಇನ್ನೂ ಇತ್ಯರ್ಥವಾಗದ 7 ಲಕ್ಷ ಬಡಕುಟುಂಬಗಳ ರೇಷನ್‌ಕಾರ್ಡ್ ಅರ್ಜಿಗಳು ಸರ್ಕಾರದ ಕಚೇರಿಯಲ್ಲಿ ಅನುಮೋದನೆಯಾಗದೆ ಉಳಿದಿವೆ ಎನ್ನಲಾಗಿದೆ. ರೇಷನ್ ಕಾರ್ಡಿಗೆ ಅರ್ಹವಾದ ಅನೇಕ ಕುಟುಂಬಗಳ ಅರ್ಜಿಗಳ ತಪಾಸಣೆ ಇನ್ನೂ ಮುಗಿದಿಲ್ಲ ಎಂಬುದು ತಿಳಿದುಬಂದಿದೆ. ಇದಕ್ಕೆ ಸ್ಥಳೀಯ ಅಧಿಕಾರಿಗಳು ರೇಷನ್ ಕಾರ್ಡಿಗೆ ಅರ್ಹರಲ್ಲದವರು ಎಲ್ಲಿ ಅರ್ಹರ ಪಟ್ಟಿಯಲ್ಲಿ ಸೇರಿಬಿಡುತ್ತಾರೋ ಎಂಬ ಆತಂಕದಿಂದಾಗಿ ಕಾರ್ಡುಗಳನ್ನು ನೀಡುವುದಕ್ಕೆ ಮುಂದಾಗುತ್ತಿಲ್ಲ ಎಂಬುದು ಪ್ರಬಲ ಕಾರಣವಾಗಿದೆ.

ಇಂತಹ ಅಧಿಕಾರಿಗಳ ಎಚ್ಚರಿಕೆ ಕ್ರಮಗಳು ಸ್ವಾಗತಾರ್ಹವಾದರೂ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂತಹ ಕ್ರಮಗಳು ಅಪೇಕ್ಷಣೀಯವಲ್ಲ. ಇಂತಹ ಸಂದರ್ಭದಲ್ಲಿ ಕನಿಷ್ಟ ಷರತ್ತುಗಳನ್ನು ವಿಧಿಸಿ, ಯಾರು ರೇಷನ್‌ಗಾಗಿ ಸಾಲುಗಳಲ್ಲಿ ನಿಂತುಕೊಂಡು ತಿಂಗಳ ರೇಷನ್ ಪಡೆದುಕೊಳ್ಳಲು ಸಿದ್ಧರಿದ್ದಾರೋ ಅಂತವರಿಗೆ ತಕ್ಷಣ ತಾತ್ಪೂರ್ತಿಕ ರೇಷನ್ ಕಾರ್ಡುಗಳನ್ನು ವಿತರಿಸುವುದು ಸರಿಯಾದ ಕ್ರಮವಾಗಿದೆ. ರೇಷನ್ ಕಾರ್ಡುಗಳಿಂದ ಯಾರು ವಂಚಿತರಾಗಿದ್ದಾರೋ ಅವರಿಗೆ ನೀಡುವ ರೇಷನ್ನಿನಿಂದ ಉಂಟಾಗುವ ವೆಚ್ಚಕ್ಕಿಂತ ಅವರ ಜೊತೆಯಲ್ಲಿ ಇಂತಹ ಕಾರ್ಡುಗಳ ಅಗತ್ಯವಿಲ್ಲದೆಯೂ ಬದುಕು ಸಾಗಿಸಬಲ್ಲರೋ ಅಂತಹವರು ಇದರಲ್ಲಿ ಸೇರಿಕೊಳ್ಳುವುದರಿಂದ ಉಂಟಾಗುವ ಸಾಮಾಜಿಕ ವೆಚ್ಚವು ಅಧಿಕವೇನಲ್ಲ.

ಈ ತತ್ವವನ್ನು ನಾವು ಒಪ್ಪಿಕೊಂಡರೆ ಇದರಿಂದ ನಾವು ಅನೇಕ ಪಾಠ ಕಲಿಯಬಹುದು:

ಮೊದಲನೆಯದಾಗಿ, ಸರ್ಕಾರವು ತನ್ನ ಬಳಿಯಲ್ಲಿರುವ ಎಲ್ಲ ಕ್ರಮಗಳನ್ನು ಬಳಸಿ ಯಾರೊಬ್ಬರೂ ಹಸಿವಿಗೆ ಒಳಗಾಗದಂತೆ ಖಚಿತಪಡಿಸಿಕೊಳ್ಳಬೇಕು. ಇದರ ಮೊದಲನೆಯ ಅಥÀð ಈಗಾಗಲೆ ಚರ್ಚಿಸಿರುವಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂಬುದಾಗಿದೆ. ಎರಡನೆಯ ಅರ್ಥ ವಲಸೆ ಕಾರ್ಮಿಕರು ಮತ್ತು ಇತರೆ ಬಡಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಉಪಾಹಾರ ಗೃಹಗಳನ್ನು (ಕ್ಯಾಂಟೀನ್) ತೆರೆಯಬೇಕು.

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಬಂದಿಗಳಾಗಿರುವ ಶಾಲಾ ಮಕ್ಕಳಿಗೆ ಅವರು ಶಾಲೆಯಲ್ಲಿ ಪಡೆಯುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯವನ್ನು ಅವರ ಮನೆಗಳಿಗೆ ತಲುಪಿಸುವ ಕ್ರಮ ಕೈಗೊಳ್ಳಬೇಕು ಎಂಬುದೂ ಈ ಕಾರ್ಯಯೋಜನೆಯಲ್ಲಿ ಸೇರುತ್ತದೆ. ಇದನ್ನು ಕೆಲವು ರಾಜ್ಯಗಳು ಈಗಾಗಲೆ ಜಾರಿಗೊಳಿಸಿವೆ. ಇದಕ್ಕೆ ಬಡವರ ಮತ್ತು ಅಂಚಿನಲ್ಲಿ ಬದುಕು ದೂಡುತ್ತಿರುವ ಜನರ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಪ್ರಸಿದ್ಧ ಎನ್‌ಜಿಒಗಳ ನೆರವನ್ನು ಪಡೆದುಕೊಂಡು ಇದನ್ನು ಜಾರಿಗೊಳಿಸಬಹುದು.

ಎರಡನೆಯದು, ಹಸಿವು ಇಂದಿನ ಒಂದು ಸಮಸ್ಯೆಯಾಗಿದೆ. ಅನಿರೀಕ್ಷಿತ ವರಮಾನದ ನಷ್ಟದಿಂದ ಮತ್ತು ಉಳಿತಾಯವೆಲ್ಲ ಮುಗಿದಿರುವುದರಿಂದ ಕಡುಬಡವರಿಗೆ ಗಂಭೀರ ಸಮಸೈಗಳು ಉಂಟಾಗುತ್ತವೆ. ಇವರರಿಗೆ ಅಗತ್ಯವಾದ ಊಟವನ್ನು ವಿತರಿಸಬಹುದು. ಆದರೆ ಬಿತ್ತನೆ ಹಂಗಾಮು ಆರಂಭವಾಗುವುದರಿಂದ ಬೀಜಗಳನ್ನು ಮತ್ತು ಗೊಬ್ಬರವನ್ನು ಖರೀದಿಸಲು ರೈತರಿಗೆ ಹಣ ಬೇಕಾಗುತ್ತದೆ. ವ್ಯಾಪಾರಗಾರರು ತಮ್ಮ ಮಳಿಗೆಗಳಲ್ಲಿ ಖಾಲಿಯಾಗಿರುವ ಬೀರುಗಳಲ್ಲಿ ಸರಕುಗಳನ್ನು ತುಂಬುವುದರ ಬಗ್ಗೆ ಯೋಚಿಸಬೇಕಾಗುತ್ತದೆ. ಇನ್ನು ಅನೇಕರು ಹಿಂದೆ ಪಡೆದ ಸಾಲದ ಬಾಕಿ ಉಳಿದಿರುವ ಕಂತನ್ನು ಹಿಂತಿರುಗಿಸುವುದರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಒಂದು ಸಮಾಜವಾಗಿ ಇಂತಹ ಕಳವಳಕಾರಿ ಸ್ಥಿತಿಯನ್ನು ನಿರ್ಲಕ್ಷಿಸುವುದಕ್ಕೆ ಕಾರಣಗಳಿಲ್ಲ.

ಹಸಿವು ಸಮಾಜದಲ್ಲಿ ಕೆಲವರಿಗೆ ಆಹಾರ ದೊರೆಯದಿರುವ ಸಮಸ್ಯೆಯೇ ವಿನಾ ಇದು ಆಹಾರ ಇಲ್ಲದಿರುವ ಸಮಸ್ಯೆಯಲ್ಲ”.

ಅಮರ್ತ್ಯ ಸೆನ್

ನಗದು ವರ್ಗಾವಣೆಯನ್ನು ಸರ್ಕಾರವು ಆಂಶಿಕವಾಗಿ ಗುರುತಿಸಿದೆ. ಸಮಾಜದ ಕೆಲವು ಬಡಕುಟುಂಬಗಳಿಗೆ ನಗದು ವರ್ಗಾವಣೆಯ ಆಶ್ವಾಸನೆ ನೀಡಲಾಗಿದೆ. ಆದರೆ ವರ್ಗಾವಣೆಯ ಹಣದ ಮೊತ್ತ ಅತ್ಯಂತ ಕಡಿಮೆ ಮತ್ತು ಇದರ ಅನುಕೂಲಕ್ಕೆ ಗುರುತಿಸಿರುವ ಕುಟುಂಬಗಳ ಸಂಖ್ಯೆಯು ಅತ್ಯಂತ ಸೀಮಿತವಾದುದು. ಕೇವಲ ರೈತರಿಗೆ ಅನುಕೂಲಗಳನ್ನು ಒದಗಿಸುವುದರ ಬಗ್ಗೆ ಮಾತ್ರ ಸರ್ಕಾರ ಯೋಚಿಸುತ್ತಿರುವಂತೆ ಕಾಣುತ್ತಿದೆ. ಲಾಕ್‌ಡೌನ್‌ನಿಂದಾಗಿ ಮನ್‌ರೇಗ ಸಾಧ್ಯವಾಗದಿರುವಾಗ ಭೂರಹಿತ ಕೃಷಿ ಕಾರ್ಮಿಕರ ಬಗ್ಗೆ ಏಕೆ ಯೋಚಿಸುತ್ತಿಲ್ಲ? ಇಂತಹ ಅನುಕೂಲಗಳನ್ನು ನಗರ ಪ್ರದೇಶಗಳ ಬಡಕುಟುಂಬಗಳಿಗೂ ವಿಸ್ತರಿಸುವುದು ಅಗತ್ಯ. ‘ಎಲ್ಲರನ್ನು ಒಳಗೊಳ್ಳುವ’ ಉದ್ದೇಶಕ್ಕೆ ಭಂಗ ಬರದಂತೆ ಇದನ್ನು ಆದ್ಯತೆಯ ಸಂಗತಿಯಾಗಿ ಪರಿಗಣಿಸಬೇಕು.

ಪಿ.ಚಿದಂಬರಮ್ ಹೇಳುತ್ತಿರುವಂತೆ 2019ರ ಮನ್‌ರೇಗ ಪಟ್ಟಿಯಲ್ಲಿರುವವರ ಜೊತೆಗೆ ಜನಾರೋಗ್ಯ ಮತ್ತು ಉಜ್ವಲ ಯೋಜನೆಯಲ್ಲಿ ಗುರುತಿಸಿರುವ ಬಡಕುಟುಂಬಗಳ ಪ್ರತಿ ಜನಧನ್ ಖಾತೆಗೆ ರೂ.5000 ವರ್ಗಾಯಿಸುವುದು ಒಂದು ಒಳ್ಳೆಯ ಮೊದಲ ಹೆಜ್ಜೆಯಾಗಿದೆ.

ಆದರೆ ಈ ಯೋಜನೆಗಳಲ್ಲಿನ ಪಟ್ಟಿಯು ಪರಿಪೂರ್ಣವಾದುದೇನಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರೋಹಿಣಿ ಪಾಂಡೆ, ಕಾರ್ತಿಕ್ ಮುರಳೀಧರನ್ ಮತ್ತು ಇತರರು ಬಹಿರಂಗ ಪಡಿಸಿರುವಂತೆ ಕಡುಬಡವರನ್ನು ಒಳಗೊಳ್ಳುವಂತೆ ಮಾಡಲು ಜೆ.ಎ.ಎಮ್. ಯೋಜನೆಯಲ್ಲಿ ಅಗತ್ಯವಾದ ಮೂಲಸೌಕರ್ಯಗಳಲ್ಲಿ ಅನೇಕ ಸಮಸ್ಯೆಗಳಿವೆ. ಆದ್ದರಿಂದ ಸದರಿ ಯೋಜನೆಯಲ್ಲಿನ ಆಶ್ವಾಸನೆಯಂತೆ ಅಗತ್ಯವಿರುವವರಾರು ಯೋಜನೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಕಡುಬಡತನದಿಂದ ನರಳುತ್ತಿರುವವರನ್ನು ತಲುಪಲು ಪರಿಣಾಮಕಾರಿ ಕ್ರಮಗಳನ್ನು ಕಂಡುಕೊಳ್ಳುವುದಕ್ಕೆ ಮತ್ತು ಇದನ್ನು ಅನುಷ್ಠಾನಗೊಳಿಸುವುದಕ್ಕೆ ರಾಜ್ಯ ಮತ್ತು ಸ್ಥಳಿಯ ಸರ್ಕಾರಗಳ ಬಳಿ ಸಾಕಷ್ಟು ಸಂಪನ್ಮೂಲವಿರಬೇಕು.

ಇಂದು ನಾವು ಹಿಂದೆಂದೂ ಊಹಿಸಲಸಾಧ್ಯವಾದ ಸವಾಲನ್ನು ಎದುರಿಸುತ್ತಿದ್ದೇವೆ. ಇದನ್ನು ಎದುರಿಸಲು ನಿರ್ಭೀತಿಯ ಹಾಗೂ ಪ್ರತಿಭಾಪೂರ್ಣ ಕ್ರಮಗಳ ಅಗತ್ಯವಿದೆ. ಮುಂದಿನ ದಿನಗಳಲ್ಲಿ ವಿತ್ತೀಯ ಸಂಪನ್ಮೂಲದ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಬಹುಎಚ್ಚರಿಕೆಯಿಂದ ಹಣವನ್ನು ವೆಚ್ಚ ಮಾಡಬೇಕು. ಆದರೆ ಯಾರಿಗೆ ನಿಜವಾಗಿ ನೆರವಿನ ಅಗತ್ಯವಿದೆಯೋ ಅವರು ಸದರಿ ಕಾರ್ಯಯೋಜನೆ ವ್ಯಾಪ್ತಿಯಿಂದ ಹೊರಗುಳಿದು ಬಿಟ್ಟರೆ ನಾವು ಸವಾಲನ್ನು ಎದುರಿಸುವುದರಲ್ಲಿ ಸೋತಂತಾಗುತ್ತದೆ.

*ಅಮರ್ತ್ಯ ಸೆನ್ ಅವರು ನೋಬಲ್ ಪ್ರಶಸ್ತಿ ಪುರಸ್ಕೃತ  ಅರ್ಥಶಾಸ್ತಜ್ಞ, ಹಾರ್ವ್ರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ ಮತ್ತು ತತ್ವಶಾಸ್ತಪ್ರಾಧ್ಯಾಪಕ. ರಘುರಾಮ್ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ಮಾಜಿ ಗೌರ್ವನರ್, ಶಿಕಾಗೋ ವಿಶ್ವವಿದ್ಯಾಲಯದ ಭೂತ್ ಸ್ಕೂಲಿನಲ್ಲಿ ಹಣಕಾಸು ವಿಷಯದ ಪ್ರಾಧ್ಯಾಪಕ. ಅಭಿಜಿತ್ ಬ್ಯಾನರ್ಜಿ, ನೊಬಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ, ಮೆಸ್ಸಾಚುಸೆಟ್ಸ್ ಇನ್‌ಸ್ಟಿಟೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕ.

ಮೂಲ: ದಿ ಇಂಡಿಯನ್ ಎಕ್ಸ್ ಪ್ರೆಸ್  ಅನುವಾದ: ಡಾ.ಟಿ.ಆರ್.ಚಂದ್ರಶೇಖರ

 

Leave a Reply

Your email address will not be published.