ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?

-ಪ್ರೊ.ದೇವಿ ಶ್ರೀಧರ್

ಅನು: ಹೇಮಂತ್ ಎಲ್.

ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ.

ವಸಂತಕಾಲದ ಅಸ್ತವ್ಯಸ್ತತೆಗೆ ಈಗಾಗಲೇ ಹಲವಾರು ಮಂದಿ ತಮ್ಮ ಆಶಾಭಾವನೆಗಳನ್ನು ಹೊಂದಿಸಿಕೊಂಡಿದ್ದರೂ, ಮತ್ತಷ್ಟು ಜನ ಸದ್ದಿಲ್ಲದೆ ಬೇಸಿಗೆಗೆ ಅಥವಾ ಶರತ್ಕಾಲದ ಒಳಗೆ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ (ಯುನೈಟೆಡ್ ಕಿಂಗ್ಡಮ್- ಯುಕೆ)ನ ಪರಿಸ್ಥಿತಿ ಸುಧಾರಿಸಬಹುದೆಂಬ ಅಂದಾಜಿನಲ್ಲಿದ್ದಾರೆ. ಅವರ ಆತ್ಮವಿಶ್ವಾಸವಾದರೂ ಎಷ್ಟರ ಮಟ್ಟಿಗೆ ಸರಿ? ಲಾಕ್ ಡೌನ್‍ನಂತಹ ಕ್ರಮಗಳತ್ತ ಮತ್ತೆ ಜಾರದಿರಲು ನಾವೇನು ಮಾಡಬಹುದು? ಚುಟುಕಾಗಿ: ಈ ಸೋಂಕಿನ ಅಂತ್ಯ ಹೇಗೆ ಮತ್ತು ಎಷ್ಟು ವೇಗವಾಗಿ ಆಗಲಿದೆ? ಎಂಬ ಪ್ರಶ್ನೆಗಳಿವೆ.

ಯುಕೆ ಬಳಿ ಐದು ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆಗಳು ಲಭ್ಯವಿದ್ದು ಜಾಗತಿಕವಾಗಿ ಉತ್ತಮ ಸ್ಥಾನದಲ್ಲಿದ್ದರೂ, ಮುಂಬರುವ ಸವಾಲುಗಳು ಕಠಿಣವಾಗಿವೆ. ನಮಗೆ ತಿಳಿದಿರುವಂತೆ ಕೆಂಟ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಗಳ ಪ್ರಬೇಧಗಳು ಅತಿ ಹೆಚ್ಚು ವೇಗದಲ್ಲಿ ಹರಡುತ್ತಾ ಸವಾಲುಗಳನ್ನು ಒಡ್ಡುತ್ತಿವೆ. ಇಂಗ್ಲೆಂಡಿನಲ್ಲಿ ಕಂಡುಬಂದಿರುವ ಪ್ರಬೇಧವಂತೂ ತೀವ್ರತರವಾದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ.

ಅದಕ್ಕಿಂತಲೂ ಕೆಟ್ಟದ್ದೆಂದರೆ, ಈ ವೈರಾಣುವಿನ ಪ್ರಬೇಧಗಳು ದಿನದಿಂದ ದಿನಕ್ಕೆ ಮಾರ್ಪಾಡಾಗುತ್ತಲೇ ಇವೆ. ಉದಾಹರಣೆಗೆ ಬ್ರೆಜಿಲ್ ಮತ್ತು ಆಫ್ರಿಕಾದ ಪ್ರಬೇಧಗಳು ಹಾಗೂ ಮುಂಬರಬಹುದಾದ ಪ್ರಬೇಧಗಳು ನಮ್ಮ ಲಸಿಕೆಗಳಿಂದ ಮತ್ತು ರೋಗನಿಯಂತ್ರಣ ವ್ಯವಸ್ಥೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಲ್ಲವು. ಇದರ ಪರಿಣಾಮವಾಗಿ ಈಗ ಲಭ್ಯವಿರುವ ಲಸಿಕೆಗಳು ನಿರುಪಯುಕ್ತವಾಗಿ, ಸೋಂಕು ಪುನಃ ಹರಡಬಲ್ಲುದು. ಒಂದು ಮಾದರಿಯ ಕೋವಿಡ್-19 ಬಂದಿದೆ ಎಂದರೆ, ಮತ್ತೊಂದು ಮಾದರಿಯ ಸೋಂಕು ಕಾಣಿಸಬಾರದೆಂದೇನೂ ಇಲ್ಲ.

ನಮ್ಮ ಮುಂದಿನ ಹಾದಿಯು ಕಲ್ಲು ಮುಳ್ಳುಗಳಿಂದ ಕೂಡಿದ್ದರೂ, ಕೆಲವು ಸುರಕ್ಷಿತವಾದ ದಾರಿಗಳನ್ನು ಸೃಷ್ಟಿಸಿಕೊಳ್ಳುವ ಅವಕಾಶವಂತೂ ಇದೆ. ಆಸ್ಟ್ರೇಲಿಯಾ, ಜಪಾನ್, ಕೆನಡಾ, ನ್ಯೂಜಿಲೆಂಡ್, ಇಂಗ್ಲೆಂಡ್ ನಂತಹ ಮತ್ತು ಯೂರೋಪಿನ ಶ್ರೀಮಂತ ದೇಶಗಳು ಸೋಂಕನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು (ಣesಣ, ಣಡಿಚಿಛಿe ಚಿಟಿಜ isoಟಚಿಣe- 3ಖಿ) ಪರೀಕ್ಷಿಸು, ಪತ್ತೆ ಹಚ್ಚು ಮತ್ತು ಪ್ರತ್ಯೇಕಿಸು ಎಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಂಡಿವೆ. ಚಿಕ್ಕದಾಗಿಯಾದರೂ, ಸೋಂಕು ಪಸರಿಸದ ಹಾಗೆ ಪರಿಣಾಮಕಾರಿಯಾದ ಲಾಕ್ಡೌನ್ ಗಳನ್ನು ವಿಧಿಸುತ್ತಿವೆ. ಹೊಸ ಪ್ರಬೇಧಗಳು ಒಳ ಬರದಂತೆ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಕ್ರಮವು ಇತರೆ ದೇಶಗಳಿಗೂ ಮಾದರಿಯ ಹೆಜ್ಜೆಯಾಗಿ, ಎಲ್ಲರೂ ಅಳವಡಿಸಿಕೊಂಡರೆ, ಕೋವಿಡ್-19 ಮೇಲೆ ಜಾಗತಿಕವಾಗಿ ನಿಯಂತ್ರಣ ಸಾಧಿಸಿ ಪಿಡುಗನ್ನು ಕೊನೆಗಾಣಿಸಲು ಸಹಕಾರಿಯಾಗುತ್ತದೆ.

ಹಾಗೇನಾದರೂ ಈ ದೇಶಗಳು ತನ್ನ ಬಹುಪಾಲು ಜನಸಂಖ್ಯೆಗೆ (ಮಕ್ಕಳನ್ನೂ ಒಳಗೊಂಡಂತೆ ವಿಸ್ತಾರವಾದ ಜನಸಂಖ್ಯೆಗೆ ಲಸಿಕೆ ನೀಡಿದರೆ “ಸಮೂಹ ರೋಗನಿರೋಧಕ ಶಕ್ತಿ” ಯನ್ನು ಸಾಧಿಸಬಹುದು) ಲಸಿಕೆಯನ್ನು ನೀಡಿ, ಅವರನ್ನು ಬಾಹ್ಯ ಪ್ರಭೇದಗಳಿಂದ ಕಾಪಾಡಿಕೊಂಡರೆ, ಈಗಿರುವ ಪ್ರತಿಬಂಧಗಳನ್ನು ಸಡಿಲಗೊಳಿಸಿಕೊಂಡು ಜನಜೀವನ ಸಹಜ ಸ್ಥಿತಿಗೆ ಮರಳಲು ಮುಂದಿನ ಆರರಿಂದ ಎಂಟು ತಿಂಗಳುಗಳಾದರೂ ಬೇಕು. ಇದರರ್ಥ ಶಾಲೆಗಳು, ರೆಸ್ಟೋರೆಂಟುಗಳು, ಬಾರು, ಜಿಮ್ಮು, ಸಂಗೀತ ಕಾರ್ಯಕ್ರಮಗಳು ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮರುಚಾಲನೆ ನೀಡಬಹುದು. ಮತ್ತೊಮ್ಮೆ ಸೋಂಕು ಸ್ಫೋಟಗೊಂಡಾಗ ಅದನ್ನು ನಿಯಂತ್ರಿಸಲು ಮತ್ತೊಂದು ಹೊಸ ಹೋರಾಟ ಶುರುವಾಗುವುದಾದರೂ, ಅದು ಸ್ಥಳೀಯ ಪ್ರದೇಶವೊಂದಕ್ಕೆ ಸೀಮಿತವಾಗಿ ಚುಟುಕಾಗಿರಲಿದೆ.

ತವರಿನ ಸ್ವಾತಂತ್ರ್ಯಕ್ಕೋಸ್ಕರ ಅಂತರಾಷ್ಟ್ರೀಯ ಪ್ರವಾಸಗಳ ಜೊತೆ ರಾಜಿ-ಒಪ್ಪಂದ ಮಾಡಿಕೊಳ್ಳಬೇಕಾಗಿ ಬಂದಿದೆ. ಈ ವಿಷಯವಾಗಿ ಇಸ್ರೇಲ್ ಲಸಿಕಾ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದು ತನ್ನೆಲ್ಲಾ ಒಳಬರುವ ಮತ್ತು ಹೊರಹೋಗುವ ವಿಮಾನಗಳ ಮೇಲೆ ನಿರ್ಬಂಧ ಹೇರಿದೆ. ಕೆನಡಾ ದೇಶವು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ನಾಲ್ಕು ವಿಮಾನ ನಿಲ್ದಾಣಗಳನ್ನು ಮಾತ್ರ ತೆರೆದಿದ್ದು ಹೋಟೆಲುಗಳಲ್ಲಿ ಕಡ್ಡಾಯವಾಗಿ ಪ್ರತ್ಯೇಕವಾಗಿರುವಂತೆ ನಿರ್ದೇಶಿಸಿದೆ. ಕಳೆದ ವರ್ಷ ಕೋವಿಡ್ ಸೋಂಕನ್ನು ನಿಭಾಯಿಸಿರುವ ಅನುಭವದಲ್ಲಿ ಹೇಳುವುದಾದರೆ, ದೇಶೀಯವಾಗಿ ಸಹಜ ಸ್ಥಿತಿಗೆ ಮರಳಲು ಇದು ವೇಗದ ದಾರಿ.

ಇದರಿಂದ ಬ್ರಿಟನ್ ಕಲಿಯಬಹುದಾದದ್ದು ಏನು? ಒಂದೂವರೆ ಕೋಟಿ ಜನರಿಗೆ ಲಸಿಕೆ ನೀಡುವುದು ಅದ್ವಿತೀಯ ಶುರುವಾತಾದರೂ, ಸೋಂಕು ನಿಯಂತ್ರಣಕ್ಕೆ ಸಿಗಬೇಕಾದರೆ ಇದನ್ನು ಮತ್ತಷ್ಟು ವಿಸ್ತರಿಸಬೇಕಿದೆ. ಬಹುತೇಕ ಜನಸಂಖ್ಯೆಗೆ ಲಸಿಕೆ ಹಾಕಬೇಕಾಗಿದೆ. 3ಟಿ ಸೂತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಪಾಲಿಸುವುದರ ಜೊತೆಗೆ, ತಮ್ಮ ಮನೆಯಲ್ಲೇ ಸ್ವಯಂಪ್ರೇರಿತರಾಗಿ ಪ್ರತ್ಯೇಕವಾಗಿರುವವರ ಖರ್ಚುಗಳನ್ನು ನಿಭಾಯಿಸಲು ಆರ್ಥಿಕ ಬೆಂಬಲ ನೀಡಬೇಕಾಗುತ್ತದೆ. ಇದೇ ಸಮಯಕ್ಕೆ ಬೇಸಿಗೆ ಮುಗಿಯುವವರೆಗೆ ಅಂತಾರಾಷ್ಟ್ರೀಯ ಓಡಾಟಗಳನ್ನು ನಿರ್ಬಂಧಿಸಬೇಕಿದೆ.

ಯುಕೆ ಈ ದಾರಿಯಲ್ಲಿ ಮುಂದಿದ್ದರೂ, ವಿವಿಧ ದೇಶಗಳಿಂದ ಆಗಮಿಸುತ್ತಿರುವ ಯಾತ್ರಾರ್ಥಿಗಳಲ್ಲಿ ಕೇವಲ ಸೋಂಕಿತರನ್ನಲ್ಲದೇ, ಎಲ್ಲರನ್ನೂ ಕಡ್ಡಾಯವಾಗಿ ಪ್ರತ್ಯೇಕಿಸಿಡುವ ವಿಚಾರದಲ್ಲಿ ಹಿಂಜರಿಯುತ್ತಿದೆ. ಇದರಿಂದ ಹೊಸ ಪ್ರಭೇದಗಳನ್ನು ಪತ್ತೆಮಾಡಿ ಅನುಕ್ರಮ ವಹಿಸುವುದ ರೊಳಗೆ ಅವು ಹರಡಿಬಿಡುವ ಸಾಧ್ಯತೆಯಿರುತ್ತದೆ. ಸದ್ಯದ ಸ್ಪಷ್ಟವಾದ ಅವಶ್ಯಕತೆಯೆಂದರೆ ದೇಶದ ಒಳಬರುವ ಎಲ್ಲ ಪ್ರಯಾಣಿಕರನ್ನೂ ಪೂರ್ವಭಾವಿಯಾಗಿ ಕಡ್ಡಾಯ ಕ್ವಾರಂಟೈನ್‍ಗೆ ಒಳಪಡಿಸುವುದು, ಪರೀಕ್ಷಿಸಿ ಪಾಸಿಟಿವ್ ಬಂದಂತಹ ವರದಿಗಳನ್ನು ಅನುಕ್ರಮವಾಗಿ ಜೋಡಿಸುವುದು. ಸ್ಕಾಟ್ಲೆಂಡಿನ ಪ್ರಥಮ ಮಂತ್ರಿ ನಿಕೋಲಸ್ ಸ್ಟ್ರೂಜೆನ್ ಈ ವಿಧಾನವನ್ನು ಅಳವಡಿಸಿಕೊಳ್ಳಲು ದೃಢಚಿತ್ತರಾಗಿದ್ದರೂ, ಬ್ರಿಟನ್ನಿನ ಬೋರಿಸ್ ಜಾನ್ಸನ್ ಅವರ ಘೋಷಣೆಗೆ ಕಾಯುತ್ತಿದ್ದಾರೆ.

ಒಮ್ಮೆ ಯುಕೆಯಂತಹ ಶ್ರೀಮಂತ ದೇಶಗಳು ತಮ್ಮ ದೇಶೀಯ ಸಮಸ್ಯೆಯನ್ನು ನಿರ್ವಹಿಸಿ ನಿಯಂತ್ರಣಕ್ಕೆ ಪಡೆದರೆ, ಬಡ ದೇಶಗಳ ಜನತೆಯ ಲಸಿಕಾ ಕಾರ್ಯಕ್ರಮಗಳಿಗೆ ಅಗತ್ಯವಾದ ಪ್ರೋತ್ಸಾಹ ನೀಡಬಹುದು. ಎಷ್ಟೋ ಬಡ ರಾಷ್ಟ್ರಗಳು ಸಂಪನ್ಮೂಲದ ಕೊರತೆಯಿಂದ ಲಸಿಕೆ ಕೊಳ್ಳಲು ಬೇಕಾದ ಕೋಟ್ಯಂತರ ಹಣ ನೀಡಲು ಔಷಧ ಕಂಪನಿಗಳ ಜೊತೆಗೆ ಚೌಕಾಸಿ ನಡೆಸಿದರೆ, ಹಲವು ಶ್ರೀಮಂತ ರಾಷ್ಟ್ರಗಳು ಈಗಾಗಲೇ ತಲಾ ಒಂಬತ್ತು ಡೋಸುಗಳ ಲಸಿಕೆಯನ್ನು ಖರೀದಿಸಿ ಪೇರಿಸಿಟ್ಟುಕೊಂಡಿವೆ.

ವಿಶ್ವ ಆರೋಗ್ಯ ಸಂಸ್ಥೆಯು ಈ ದೇಶಗಳಿಗೆ ತಮ್ಮ ಬಳಿ ಹೆಚ್ಚುವರಿಯಾಗಿರುವ ಲಸಿಕೆಗಳನ್ನು ತನ್ನ “ಕೋವ್ಯಾಕ್ಸ್ ಕಾರ್ಯಕ್ರಮ” ದಡಿಯಲ್ಲಿ ಬಡ ದೇಶಗಳಿಗೆ ಹಂಚಲು ಕರೆ ನೀಡಿದೆ. ನಾರ್ವೆ ದೇಶವು ಈಗಾಗಲೇ ಸಹಕಾರ ನೀಡಲು ಮುಂದೆ ಬಂದಿದೆ. ಯುಕೆ ಕೋವ್ಯಾಕ್ಸ್ ಕಾರ್ಯಕ್ರಮಕ್ಕೆ ಧನ ಸಹಾಯ ನೀಡುವುದಾಗಿ ಹೇಳಿದ್ದರೂ, ಎಷ್ಟು ಪ್ರಮಾಣದ ಲಸಿಕೆಯನ್ನು ಪೂರೈಕೆ ಮಾಡಲಿದೆ ಎಂಬುದನ್ನು ತಿಳಿಸಿಲ್ಲ.

ಜಗತ್ತಿನಾದ್ಯಂತ ಜೀವಗಳನ್ನು ಉಳಿಸಲು ಅಘೋಷಿತ ನೈತಿಕ ಆಜ್ಞೆಯೊಂದನ್ನು ಪಾಲಿಸಲಾಗುತ್ತಿದ್ದರೂ, ಇದರಲ್ಲಿ ಸ್ವಾರ್ಥವೂ ಅಡಗಿದೆ. ಎಲ್ಲಿಯವರೆಗೂ ಬೇರೆ ಬೇರೆ ಪ್ರದೇಶಗಳಲ್ಲಿ ವೈರಾಣು ಗಸ್ತು ಹಾಕುತ್ತಿರುತ್ತದೆಯೋ, ಅಲ್ಲಿಯವರೆಗೂ ಅದು ದ್ವಿಗುಣಗೊಳ್ಳುತ್ತಾ, ರೂಪಾಂತರ ಹೊಂದುತ್ತಾ, ಈಗಾಗಲೇ ಲಸಿಕೆ ಪಡೆದು ಸುರಕ್ಷಿತವಾಗಿರುವವರನ್ನು ಸೋಂಕಿತರನ್ನಾಗಿ ಮಾಡಬಲ್ಲ ಅಪಾಯಕಾರಿ ರೂಪಕ್ಕೆ ಪರಿವರ್ತನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೈಗೆಟಕುವ, ಸುಲಭಸಾಧ್ಯವಾಗಿ ದೊರಕುವ, ಸುರಕ್ಷಿತ-ಪರಿಣಾಮಕಾರಿ ಲಸಿಕೆಗಳು ವಿಶ್ವದಾದ್ಯಂತ ದೊರೆಯುವಂತಾದಾಗ ಮಾತ್ರ ಕೋವಿಡ್ ಪಿಡುಗು ಅಂತ್ಯವಾಗಲಿದೆ. ವಿಷಾದಕರವೆಂದರೆ ಈ ಗುರಿಯನ್ನು ಸಾಧಿಸಲು ಇನ್ನೂ ಬಹಳಷ್ಟು ದೂರ ಸಾಗಬೇಕಿದೆ.

ಸಾಂಕ್ರಾಮಿಕವು ಥಟ್ಟನೆಯಂತೂ ನಿಲ್ಲುವುದಿಲ್ಲ. ಆದರೆ ದೇಶದಿಂದ ದೇಶಕ್ಕೆ ಕೋವಿಡ್-19 ವೈರಾಣುವಿನ ಮೇಲೆ ನಿಯಂತ್ರಣ ಸಾಧಿಸಿದಂತೆಲ್ಲ ಅದನ್ನು ನಿಧಾನವಾಗಿ ನಿರ್ಮೂಲನೆ ಮಾಡಬಹುದು. ಶ್ರೀಮಂತ ದೇಶಗಳು 3ಟಿ ಸೂತ್ರಗಳನ್ನು ಪರಿಣಾಮಕಾರಿಯಾಗಿ ಮರುರೂಪಿಸಿಕೊಳ್ಳುತ್ತಾ, ಉತ್ತಮ ಚಿಕಿತ್ಸೆಗಳನ್ನು ನೀಡುತ್ತಾ ಇದನ್ನು ಸಾಧಿಸಲಿವೆ. ಆದರೆ ಬಡ ರಾಷ್ಟ್ರಗಳು ಈ ಹಾದಿಯಲ್ಲಿ ಮುಗ್ಗರಿಸುತ್ತಾ, ತಮಗೆ ಬೇಕಾದ ಸಂಪನ್ಮೂಲ ದೊರಕದೆ ಪುನರಾವರ್ತಿತ ಅಲೆಗಳನ್ನು ಎದುರಿಸಬೇಕಾಗುತ್ತದೆ. ಜಾಗತಿಕ ಸ್ವಾಸ್ಥ್ಯದ ವಿಚಾರದಲ್ಲಿ ಇದೊಂದು ದುಃಖದ ಸಂಗತಿ. ಶ್ರೀಮಂತ ದೇಶಗಳು ತಾವು ಎದುರಿಸಿದ ಸಮಸ್ಯೆಗಳನ್ನು ಶೀಘ್ರವಾಗಿ ಮರೆತಿದ್ದರೆ, ಬಡದೇಶಗಳು ಈಗಲೂ ಅವುಗಳೊಂದಿಗೆ ಹೋರಾಟುತ್ತಿವೆ. ದಡಾರ, ಮಂಗನಬಾವು, ಕ್ಷಯ, ಮತ್ತು ಪೋಲಿಯೋ ರೋಗಗಳ ಕಥೆ ಕಣ್ಣಮುಂದಿದೆ. 

*ಲೇಖಕರು ಎಡಿನ್‍ಬರೋ ವಿಶ್ವವಿದ್ಯಾಲಯದಲ್ಲಿ ಜಾಗತಿಕ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.

Leave a Reply

Your email address will not be published.