ಕೋವಿಡ್-19 ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಂಕ

ಕೊರೊನ ಬಗ್ಗೆ ದಿನವಿಡೀ ನ್ಯೂಸ್ ನೋಡುವುದು, ಓದುವುದು ಮತ್ತು ಕೇಳುವುದು ಮಾಡದೆ ಇತರ ವಿಷಯಗಳ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು.

ಕೊರೊನ ವೈರಸ್ ದೇಹಕ್ಕೆ ಸಂಬಂಧ ಪಟ್ಟರೂ ಅದರ ಮೊದಲ ವೈರಿ ಮನಸ್ಸು. ಮನಸ್ಸು ಹಣಿದರೆ ದೇಹದ ಕುಸಿತ ಅತಿ ಸುಲಭ. ಕೊರೊನ ವೈರಸ್‌ನಿಂದ ಪ್ರಾಣ ಬಿಟ್ಟವರಿಗಿಂತ ಮಾನಸಿಕವಾಗಿ ಕಳಂಕ, ಭಯ, ಆತಂಕ, ಒತ್ತಡ ಮತ್ತು ಸುಸೈಡ್ ಬಗ್ಗೆ ಯೋಚಿಸಿದವರೆ ಅಧಿಕ. ಗುಣಮುಖರಾಗಿ ಬಂದ ಜನರ ಬಗ್ಗೆ ಪಾಸಿಟಿವ್ ಮಾತಾಡುವ ಜನ, ಸಮಾಜದಲ್ಲಿ ಅತೀ ವಿರಳ. ಆ ಅಂಕಿಸಂಖ್ಯೆಗಳು ನಮ್ಮನ್ನು ಆತಂಕ, ಭಯ ಮತ್ತು ಒತ್ತಡದಂತಹ ಮಾನಸಿಕ ಕಾಯಿಲೆಗೆ ಗುರಿ ಮಾಡಬಹುದು. ಈ ಲಾಕ್ ಡೌನ್ ಸಮಯದಲ್ಲಿ ಮನಸ್ಸು ಉಲ್ಲಾಸ, ಚೈತನ್ಯದಿಂದ ಬಲಿಷ್ಟವಾಗಿದ್ದರೆ ಅರ್ಧ ಕೊರೊನ ವೈರಸ್ ತಡೆದ ಹಾಗೆಯೇ. ಗುಣಮುಖರಾಗಿ ಬಂದ ವ್ಯಕ್ತಿಗಳಲ್ಲಿ ಹೆಚ್ಚು ಮಾನಸಿಕ ಸದೃಢತೆಯೂ ಕಾರಣ.

ಇದರ ಮಧ್ಯೆ ಕೋವಿಡ್-19 ಜೊತೆಗೆ ಸೃಷ್ಟಿಯಾಗುವ ಸಾಮಾಜಿಕ ಕಳಂಕ (Stigma) ಕೂಡಾ ಆತಂಕಕಾರಿ. ಸೋಂಕಿತ, ಶಂಕಿತ, ಆತನ ಕುಟುಂಬ, ಸೋಂಕು ಕಂಡು ಬಂದ ಪ್ರದೇಶಗಳ ಜನರಿಗೆ ಅನುಮಾನದ ಕಳಂಕ ಹಚ್ಚಲಾಗುತ್ತಿದೆ. ಹಾಗೆಯೇ ಕೋವಿಡ್-19 ತಡೆಯಲು ಹಗಲುರಾತ್ರಿ ಶ್ರಮಿಸುತ್ತಿರುವ ಫ್ರಂಟ್ ಲೈನ್ ಯೋಧರಾದ ಆರೋಗ್ಯ ಸಿಬ್ಬಂದಿ, ಪೌರ ಕಾರ್ಮಿಕರು ಮತ್ತು ಪೊಲೀಸರನ್ನು ನಮ್ಮ ಸಮಾಜ ಅನುಮಾನಿಸುತ್ತಿದೆ. ಇದರಿಂದಾಗಿ ಅವರ ವೈಯಕ್ತಿಕ ಬದುಕುಗಳಲ್ಲಿ ಭಯ, ಆತಂಕ (Anxiety), ಖಿನ್ನತೆ (Depression) ಉಂಟಾಗುವ ಅಪಾಯವಿದೆ.

ನಾವೇನು ಮಾಡಬೇಕು, ಏನು ಮಾಡಬಾರದು?

ಗುಣಮುಖರಾಗಿ ಬಂದ ವ್ಯಕ್ತಿಗಳನ್ನು ಕೋವಿಡ್ ವ್ಯಕ್ತಿಯೆಂದು ಪ್ರತ್ಯೇಕವಾಗಿ ಗುರುತಿಸಬಾರದು. ಕೋವಿಡ್ ಬಗ್ಗೆ ನಿಖರವಾದ, ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಾಲತಾಣದ ಮಾಹಿತಿ ಮಾತ್ರ ಹಂಚಿಕೊಳ್ಳಿ. ಭಯ, ಉದ್ವಿಗ್ನತೆ ಹುಟ್ಟಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಗತ್ಯ ಮಾಹಿತಿ ಶೇರ್ ಮಾಡಬೇಡಿ. ಯಾವುದೇ ಆರೋಗ್ಯ, ಪೊಲೀಸರು ಅಥವಾ ಪೌರ ಕಾರ್ಮಿಕರನ್ನು ಅನಗತ್ಯ ಟಾರ್ಗೆಟ್ ಮಾಡಬೇಡಿ. ಅವರು ಇರುವುದು ನಮಗೆ ಸಹಾಯ ಒದಗಿಸಲು. ಕೋವಿಡ್-19 ಕಾರಣಕ್ಕೆ ಅನಗತ್ಯವಾಗಿ ಯವುದೇ ಸಮುದಾಯ ಅಥವಾ ಪ್ರದೇಶದ ಜನರನ್ನು ಕಳಂಕಿತರನ್ನಾಗಿಸಬೇಡಿ.

ಕೊರೊನಾ ಸೋಂಕಿತ ವ್ಯಕ್ತಿ ಅಥವಾ ಕ್ವಾರಂಟೈನ್ ವ್ಯಕ್ತಿಯ ಹೆಸರು, ಸ್ಥಳ, ಆತ ವಾಸಿಸುವ ಪ್ರದೇಶದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಡದೆ, ಗೌಪ್ಯತೆ ಕಾಪಾಡಿ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಫ್ರಂಟ್ ಲೈನ್ ಕಾರ್ಯಕರ್ತರು ಸೇರಿದಂತೆ ತಮ್ಮ ಜೀವದ ಹಂಗು ಬಿಟ್ಟು ಕೆಲಸ ನಿರ್ವಹಿಸುತ್ತಿರುವವರಿಗೆ ಮತ್ತು ಅವರ ಕುಟುಂಬಕ್ಕೆ ನಾವೆಲ್ಲರೂ ಬೆಂಬಲ ಮತ್ತು ಸಹಾಯ ನೀಡೊಣ.

ಕೊರೊನ ಬಗ್ಗೆ ದಿನವಿಡೀ ನ್ಯೂಸ್ ನೋಡುವುದು, ಓದುವುದು ಮತ್ತು ಕೇಳುವುದು ಮಾಡದೆ ಇತರ ವಿಷಯಗಳ ಬಗ್ಗೆ ಗಮನ ಹರಿಸಿದರೆ ಒಳ್ಳೆಯದು. ಕೊರೊನ ಬಗ್ಗೆ ಮಾಹಿತಿಯನ್ನು ಇನ್ನೊಬ್ಬರಿಗೆ ಕಳಿಸುವ ಮುನ್ನ ಮಾಹಿತಿಯ ನಿಖರತೆ ಪರಿಶೀಲಿಸಬೇಕು.

ಮಾದಕ ವಸ್ತುಗಳ ಬಳಕೆಯಿಂದ ದೂರವಿರುವುದು ಮುಖ್ಯ. ಅವಕಾಶವಿದ್ದರೆ ಆನ್ ಲೈನ್ ಕ್ಲಾಸ್ ಸೇರಬಹುದು. ದೈಹಿಕ ಅಂತರ (Physical distance) ಕಾಪಾಡಿಕೊಂಡು ಸೋಂಕಿತರೊಂದಿಗೆ ಮಾತಾಡಿ. ಕೊರೊನ ಸೋಂಕಿತ ಅಥವಾ ಶಂಕಿತ ವ್ಯಕ್ತಿಯು ಮನೆ ಅಥವಾ ಆಸ್ಪತ್ರೆಯಲ್ಲಿ ಐಸೋಲೆಷನಲ್ಲಿ ಇರುವಾಗ ಅವರಲ್ಲಿ ಭಯ, ಏಕಾಂಗಿತನ, ಆತಂಕ, ಆತ್ಮಹತ್ಯೆ ಯೋಚನೆ, ಉದ್ವಿಗ್ನತೆ ಮತ್ತು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಭಯದಲ್ಲಿ ಐಸೋಲೆಷನ್ ಜಾಗಗಳಿಂದ ತಪ್ಪಿಸಿಕೊಂಡು ಹೋದ ಉದಾಹರಣೆಗಳು ಇವೆ. ಅಂತಹ ವ್ಯಕ್ತಿಯ ಮೇಲೆ ಸೂಕ್ಷ್ಮ ನಿಗಾವಿರಬೇಕು. ಹಾಗಂತ ಆತನನ್ನು ಅನುಮಾನದಿಂದ ಕಾಣದೆ ಅಂತಹ ವ್ಯಕ್ತಿಗೆ ಸಾಧ್ಯವಾದರೆ ಮೊಬೈಲ್ ಒದಗಿಸಿ ತನ್ನ ಸ್ನೇಹಿತರ ಜೊತೆ ಮಾತನಾಡಲು ಅವಕಾಶ ಕಲ್ಪಿಸಿ ಕೊಟ್ಟರೆ ಆತಂಕ, ಭಯ ದೂರ ಮಾಡಬಹುದು.

ಜೈಲಿನ ವಾತಾವರಣ ಸಲ್ಲದು. ಆ ವ್ಯಕ್ತಿಯನ್ನು ಸಾಮಾಜಿಕ ಕಳಂಕಿತನಂತೆ, ಅಪರಾಧಿಯಂತೆ ನೋಡದೇ, ಅವರಲ್ಲಿ ಪಾಸಿಟಿವ್ ಸ್ಫೂರ್ತಿ, ಪ್ರೋತ್ಸಾಹ ನೀಡಿದರೆ ಖಂಡಿತವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಾರೆ. ಲಾಕ್ ಡೌನ್ ಸಮಯದಲ್ಲಿ ತುಂಬ ಸಮಯ ಮನೆಯಲ್ಲಿ ಕಳೆಯುದರಿಂದ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸ ಸಹಜ. ದೆಹಲಿಯ ಪ್ರತಿಷ್ಠಿತ ಏಮ್ಸ್ ಸಂಸ್ಥೆ ಮನೋವೈದ್ಯರಾದ ಡಾ.ಕೌಶಿಕ ಸಿನ್ಹ ದೇಬ್ ಅವರ ಪ್ರಕಾರ ದೈಹಿಕ ಒತ್ತಡದ ಲಕ್ಷಣಗಳು, ಚಡಪಡಿಕೆ, ಅತೀವ ಬೆವರು, ಉಸಿರಾಟದ ತೊಂದರೆ, ತೀವ್ರ ಹೃದಯದ ಬಡಿತ ಮತ್ತು ಬಾಯಿ ಒಣಗುವುದು ಆಗಿರುತ್ತದೆ.

ಇವುಗಳನ್ನು ನಿಭಾಯಿಸಲು ನಮ್ಮ ಮನಸ್ಸಿಗೆ ತರಬೇತಿ ಬೇಕು. ಕುಟುಂಬದವರೊಂದಿಗೆ, ಪ್ರೀತಿಪಾತ್ರರೊಂದಿಗೆ ಫೋನ್ ಕಾಲ್, ಗೇಮ್, ಕಥೆ ಪುಸ್ತಕ ಓದುವುದು, ಮನೆಯಲ್ಲಿಯೇ ವ್ಯಾಯಾಮ, ಧ್ಯಾನ, ಯೋಗ ಮಾಡುವದು ಉತ್ತಮ. ಸರಿಸುಮಾರು 8-9 ಗಂಟೆ ನಿದ್ರೆ ಮಾಡುವುದು ಅವಶ್ಯಕ. ಏನಾದರು ತೀವ್ರ ತರಹದ ಮಾನಸಿಕ ತೊಂದರೆಯಾದರೆ ಸ್ವತಃ ಔಷಧಿ ತೆಗೆದುಕೊಳ್ಳದೆ, ಮಾನಸಿಕ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಒಳ್ಳೆಯದು.

*ಲೇಖಕರು ದೆಹಲಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದಲ್ಲಿ ಡಾಕ್ಟರಲ್ ಫೆಲೋ ಆಗಿದ್ದಾರೆ.

Leave a Reply

Your email address will not be published.