ಕೋವಿಡ್-19 ವಿಶ್ವ ನಾಯಕರ ವಿಚಿತ್ರ ಸಲಹೆಗಳು!

ಸೋಂಕು ನಿವಾರಕ ಚುಚ್ಚುಮದ್ದು, ಸಾರಾಯಿ ಸೇವನೆ, ಗೋಮೂತ್ರ ಸೇವನೆ, ಗೊಬ್ಬರದ ಸೇವನೆ ಹೀಗೆ ತಮ್ಮದೇ ಆದ ವಿಭಿನ್ನ ಪರಿಹಾರ ಮಾರ್ಗಗಳನ್ನು ರಾಜಕೀಯ ನಾಯಕರು ಸೂಚಿಸುತ್ತಿದ್ದಾರೆ!

ಕೋವಿದ್ 19 ವಿಶ್ವದಾದ್ಯಂತ ಪಸರಿಸುತ್ತಿರುವಂತೆಯೇ ಈ ರೋಗಾಣುವಿನ ವಿರುದ್ಧ ಹೋರಾಡಲು ಹೊಸ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳೂ ನಡೆಯುತ್ತಿವೆ. ಈ ಲಸಿಕೆ ಕಂಡುಹಿಡಿಯಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದಾದರೂ, ಕೊರೋನಾ ವೈರಾಣು ನಿಯಂತ್ರಣಕ್ಕೆ, ವಿಶ್ವದಾದ್ಯಂತ ರಾಜಕೀಯ ನಾಯಕರು ತಮ್ಮದೇ ಆದ ಚಿತ್ರವಿಚಿತ್ರವಾದ ಚಿಕಿತ್ಸಾ ವಿಧಾನಗಳನ್ನು, ಔಷಧಿಗಳನ್ನು ಶಿಫಾರಸು ಮಾಡುತ್ತಿರುವುದು ಕಂಡುಬರುತ್ತಿದೆ.

ಸೋಂಕು ನಿವಾರಕ ಚುಚ್ಚುಮದ್ದು, ಸಾರಾಯಿ ಸೇವನೆ, ಗೋಮೂತ್ರ ಸೇವನೆ, ಗೊಬ್ಬರದ ಸೇವನೆ ಹೀಗೆ ತಮ್ಮದೇ ಆದ ವಿಭಿನ್ನ ಪರಿಹಾರ ಮಾರ್ಗಗಳನ್ನು ರಾಜಕೀಯ ನಾಯಕರು ಸೂಚಿಸುತ್ತಿದ್ದಾರೆ. ಇದಾವುದಕ್ಕೂ ವೈಜ್ಞಾನಿಕ ತಳಹದಿ ಇಲ್ಲ ಎನ್ನುವುದನ್ನು ಹೇಳಬೇಕಿಲ್ಲ.

ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸೋಂಕು ತಗುಲಿದ್ದು ವಿಶ್ವ ಆರೋಗ್ಯ ಸಂಸ್ಥೆಯು                ‘ಪ್ರಸರಣವನ್ನು ತಡೆಗಟ್ಟಿ’ ಎಂಬ ಘೋಷವಾಕ್ಯದೊಡನೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿದೆ. ಈ ಆಂದೋಲನದ ಮೂಲಕ ಕೊರೋನಾ ನಿಯಂತ್ರಣದ ಸುತ್ತ ಹರಡುತ್ತಿರುವ ಮಿಥ್ಯೆಗಳನ್ನು, ಚಿಕಿತ್ಸೆ ಮತ್ತು ತಪಾಸಣೆಯ ಸುತ್ತ ಹೆಣೆಯಲಾಗುತ್ತಿರುವ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ರೀತಿಯ ಸುಳ್ಳು ಚಿಕಿತ್ಸಾ ವಿಧಾನಗಳನ್ನು ಸೂಚಿಸುತ್ತಿರುವ ವಿಶ್ವದ ಕೆಲವು ನಾಯಕರ ನಿದರ್ಶನಗಳು ಹೀಗಿವೆ:

ಡೋನಾಲ್ಡ್ ಟ್ರಂಪ್

ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊರೋನಾ ವೈರಾಣು ಹೋಗಲಾಡಿಸಲು ಸೋಂಕು ನಿರ್ಬಂಧಕ ಚುಚ್ಚುಮದ್ದು ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚನೆ ನೀಡಿ ವ್ಯಾಪಕ ಟೀಕೆ, ಖಂಡನೆಗೆ ಒಳಗಾಗಿದ್ದಾರೆ. ಕೋವಿದ್ 19 ಸೋಂಕಿತರನ್ನು ಅಲ್ಟ್ರಾ ವಯಲೆಟ್ ಬೆಳಕಿಗೆ ಒಡ್ಡುವ ಸಲಹೆಯನ್ನೂ ಟ್ರಂಪ್ ನೀಡಿದ್ದರು. ಅಮೆರಿಕದಲ್ಲಿ ಈವರೆಗೆ 35 ಲಕ್ಷ ಸೋಂಕಿತರನ್ನು ಗುರುತಿಸಲಾಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

‘ಒಂದು ವೇಳೆ ನಾವು ದೇಹಕ್ಕೆ ಅಪಾರ ಶಕ್ತಿಯುಳ್ಳ ಅಲ್ಟಾç ವಯಲೆಟ್ ಬೆಳಕು ಅಥವಾ ಪ್ರಖರ ಬೆಳಕು ತಗಲುವಂತೆ ಮಾಡಿದರೆ…’ ಎಂದು ಟ್ರಂಪ್ ಶ್ವೇತ ಭವನದ ಕೊರೋನಾ ವೈರಾಣು ನಿಯಂತ್ರಣ ಸಂಯೋಜಕ ಡಾ ಡೆಬೋರಾ ಬಿಕ್ಸ್ ಅವರಿಗೆ ಹೇಳಿದ್ದಾರೆ. ಮತ್ತೊಂದೆಡೆ ಟ್ರಂಪ್ ‘ಒಂದು ಸೋಂಕು ನಿರ್ಬಂಧಕ ಚುಚ್ಚುಮದ್ದು ಕ್ಷಣ ಮಾತ್ರದಲ್ಲಿ ಕೊರೋನಾ ವೈರಾಣುವನ್ನು ತೊಡೆದುಹಾಕುತ್ತದೆ. ನಾವು ಈ ಚುಚ್ಚುಮದ್ದು ನೀಡುವ ಮೂಲಕ ಈ ಸಾಧನೆ ಮಾಡಲು ಸಾಧ್ಯವೇ ಯೋಚಿಸಬೇಕಿದೆ, ಇದನ್ನು ಪರಿಶೀಲಿಸುವುದು ಒಳಿತು’ ಎಂದೂ ಹೇಳಿದ್ದರು. ಬಿಬಿಸಿ ವರದಿಗಳ ಅನುಸಾರ ವೈದ್ಯ ಸಮುದಾಯ ಎರಡೂ ಸಲಹೆಗಳನ್ನು ತಿರಸ್ಕರಿಸಿದೆ.  

ಅಲೆಕ್ಸಾಂಡರ್ ಲುಕಾಶೆಂಕೋ

ಬೆಲಾರಸ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೋ ಕೋರೋನಾ ಹೋಗಲಾಡಿಸಲು ಇನ್ನೂ ಹಲವು ವಿಚಿತ್ರ ವಿಧಾನಗಳನ್ನು ಸೂಚಿಸಿದ್ದಾರೆ. ಟ್ರಾಕ್ಟರ್ ಓಡಿಸುವುದು, ಮದ್ಯಪಾನ ಮಾಡುವುದರಿಂದ ನೊವೆಲ್ ಕೊರೋನಾ ಹೋಗುತ್ತದೆ ಎಂದು ಹೇಳಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಲುಕಾಶೆಂಕೋ ಕೊರೋನಾ ಕುರಿತು ಯಾವುದೇ ಆತಂಕಕ್ಕೊಳಗಾಗದೆ ಇರುವಂತೆ ಹೇಳಿರುವುದೇ ಅಲ್ಲದೆ ‘ಟಿವಿ ನೋಡುವುದೂ ಒಳ್ಳೆಯದು, ಜನರು ಟ್ರಾಕ್ಟರ್ ಓಡಿಸಿಕೊಂಡಿದ್ದಾರೆ ಯಾರೂ ವೈರಾಣು ಕುರಿತು ಮಾತನಾಡುತ್ತಿಲ್ಲ, ಟ್ರಾಕ್ಟರ್‌ಗಳು ಎಲ್ಲವನ್ನೂ ಗುಣಪಡಿಸುತ್ತದೆ, ಕೃಷಿ ಭೂಮಿ ಎಲ್ಲರನ್ನೂ ಗುಣಪಡಿಸುತ್ತದೆ ಎಂದು ಹೇಳಿದ್ದಾರೆ.

ಸಿಎನ್‌ಬಿಸಿ ವರದಿಯ ಅನುಸಾರ ಈ ಸರ್ವಾಧಿಕಾರಿ ಅಧ್ಯಕ್ಷ ಜನರಿಗೆ ವೊಡ್ಕಾ ಕುಡಿಯುವಂತೆಯೂ ಸಲಹೆ ನೀಡಿದ್ದು, ಇತರ ದೇಶಗಳು ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಕೆಲಸಗಳಿಗೆ ಹಿಂದಿರುಗುವಂತೆ ಕರೆ ನೀಡಿದ್ದರು.

ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿ ಕೋವಿದ್ 19 ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲೇ, ಇದು ಸಾಮಾನ್ಯ ವಿಷಮಶೀತ ಜ್ವರದಂತೆ ಅಷ್ಟೇ ಶೇ.90ರಷ್ಟು ಸೋಂಕಿತರು ಕೆಲವೇ ದಿನಗಳಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದು ಹೇಳಿಕೆಯಲ್ಲಿ ಇಮ್ರಾನ್ ಖಾನ್ ಜನರನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ಸಲಹೆ ನೀಡಿದ್ದೇ ಅಲ್ಲದೆ ತಮ್ಮ ರೋಗ ಲಕ್ಷಣಗಳನ್ನು ಆಸ್ಪತ್ರೆಗೆ ಹೋಗದೆ ಖುದ್ದು ತಾವೇ ಗಮನಿಸುವಂತೆ ಹೇಳಿದ್ದರು. ಪಾಕಿಸ್ತಾನದಲ್ಲಿ 2 ಲಕ್ಷ ಕೋವಿದ್ ಪ್ರಕರಣಗಳು ವರದಿಯಾಗಿದ್ದು 5568 ಜನರು ಮೃತಪಟ್ಟಿದ್ದಾರೆ. ನಂತರ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದ ಇಮ್ರಾನ್ ಖಾನ್ ಕೋವಿದ್ ಹರಡಲು ಜನರೇ ಕಾರಣ ಎಂದೂ ದೂಷಿಸಿದ್ದಾರೆ. ‘ಜನರು ಕೊರೋನಾ ವೈರಾಣುವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇದನ್ನು ಕೇವಲ ವಿಷಮಶೀತ ಜ್ವರ ಎಂದು ಭಾವಿಸಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾನ್ ಪಾಂಬ್ ಮಾಗುಫುಲಿ

ಜೂನ್ ತಿಂಗಳಲ್ಲಿ ಟಾಂಜಾನಿಯಾದ ಅಧ್ಯಕ್ಷ ಜಾನ್ ಪಾಂಬ್ ಮಾಗುಫುಲಿ ದೇಶ ಕೋವಿದ್ 19ನಿಂದ ಮುಕ್ತವಾಗಿದೆ, ಇದಕ್ಕೆ ಪ್ರಜೆಗಳ ಪ್ರಾರ್ಥನೆಯೇ ಕಾರಣ ಎಂದು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ. ಕೊರೋನಾ ಹರಡುತ್ತಿದ್ದ ಸಂದರ್ಭದಲ್ಲೂ ಧಾರ್ಮಿಕ ತಾಣಗಳನ್ನು ಮುಚ್ಚಲು ನಿರಾಕರಿಸಿದ್ದ ಅಧ್ಯಕ್ಷ, ಈ ವೈರಾಣು ರಾಕ್ಷಸೀ ಶಕ್ತಿಯಾಗಿದ್ದು ಕ್ರಿಸ್ತನ ದೇಹದಲ್ಲಿ ಇರಲು ಸಾಧ್ಯವಿಲ್ಲ ಎಂದು ಘೋಷಿಸಿದ್ದರು. ಎಲ್ಲೆಡೆ ಈ ವೈರಾಣುವಿನ ಬಗ್ಗೆ ಉತ್ಪ್ರೇಕ್ಷೆ ಮಾಡಲಾಗುತ್ತಿದೆ, ಜನರು ಮಸೀದಿಗಳಲ್ಲಿ ಮತ್ತು ಚರ್ಚುಗಳಲ್ಲಿ ಎಂದಿನಂತೆ ಪ್ರಾರ್ಥನೆಯಲ್ಲಿ ತೊಡಗಿರಲಿ ಎಂದು ಹೇಳಿದ್ದ ಜಾನ್ ಪಾಂಬ್, ಪ್ರಾರ್ಥನೆಯಿಂದಲೇ ವೈರಾಣು ತೊಲಗುತ್ತದೆ ಎಂದು ಹೇಳಿದ್ದರು. ಕೋವಿದ್ 19 ನಿಯಂತ್ರಿಸುವಲ್ಲಿ ಟಾಂಜಾನಿಯಾ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.

ಯೋಗಿ ಆದಿತ್ಯನಾಥ್

ಋಷಿಕೇಷದಲ್ಲಿ ನಡೆದ ಒಂದು ವಾರದ ಅಂತಾರಾಷ್ಟ್ರೀಯ ಯೋಗ ಉತ್ಸವವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಗವನ್ನು ಸತತ ಅಭ್ಯಾಸ ಮಾಡುವ ಮೂಲಕ ಅನೇಕ ರೋಗಗಳನ್ನು ನಿವಾರಿಸಬಹುದು, ಕೋವಿದ್ 19 ಸಹ ವಾಸಿಯಾಗುತ್ತದೆ ಎಂದು ಹೇಳಿದ್ದರು. ‘ಭಾರತೀಯ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಿ ಅರ್ಥಮಾಡಿಕೊಂಡರೆ ಯೋಗದ ಮೂಲಕ ಅನೇಕ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳಬಹುದು. ಇಡೀ ವಿಶ್ವ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ವಿರುದ್ಧ ಹೋರಾಡುತ್ತಿದೆ. ಯೋಗದ ಸಹಾಯದಿಂದ, ರಕ್ತದೊತ್ತಡ, ಹೃದಯಾಘಾತ, ಮೂತ್ರಪಿಂಡ ವೈಫಲ್ಯ, ಲಿವರ್ ಸಮಸ್ಯೆ ಮತ್ತು ಕೊರೋನಾವನ್ನೂ ಹೋಗಲಾಡಿಸಬಹುದು’ ಎಂದು ಹೇಳಿದ್ದರು.

ಲೂಯಸ್ ಮಿಗುಎಲ್ ಬರ್ಬೋಸಾಹೆರ್ಟಾ

ಮೆಕ್ಸಿಕೋದಲ್ಲಿ ಪೂಬ್ಲಾ ಗವರ್ನರ್ ಆಗಿರುವ ಲೂಯಸ್ ಮಿಗುಎಲ್ ಬರ್ಬೋಸಾಹೆರ್ಟಾ ಬಡ ಜನರು ಈ ವೈರಾಣುವನ್ನು ಎದುರಿಸುವ ರೋಗ ನಿರ್ಬಂಧಕ ಶಕ್ತಿ ಹೊಂದಿರುತ್ತಾರೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ‘ನೀವು ಶ್ರೀಮಂತರಾಗಿದ್ದರೆ ಅಪಾಯ ಹೆಚ್ಚು ಎದುರಿಸುತ್ತೀರಿ, ಬಡವರಾಗಿದ್ದರೆ ಇಲ್ಲ, ಏಕೆಂದರೆ ಬಡಜನತೆಯಲ್ಲಿ ರೋಗ ನಿರ್ಬಂಧಕ ಶಕ್ತಿ ಹೆಚ್ಚಿರುತ್ತದೆ’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದ ಈತ ನಂತರ ಟರ್ಕಿ ಮಾಸ್ ಈ ರೋಗ ನಿವಾರಣೆಗೆ ಸಹಾಯವಾಗುತ್ತದೆ ಎಂದು ಹೇಳಿದ್ದರು.

 

ಸುಮನ್ ಹರಿಪ್ರಿಯ

ಅಸ್ಸಾಂನ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯ ‘ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಕೊರೋನಾ ಹೋಗಲಾಡಿಸಬಹುದು’ ಎಂದು ಹೇಳುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಗೋಮೂತ್ರ ಮತ್ತು ಸಗಣಿ ಸೇವಿಸುವುದರಿಂದ ಕ್ಯಾನ್ಸರ್ ಸಹ ಗುಣವಾಗುತ್ತದೆ ಎಂದೂ ಸುಮನ್ ಹರಿಪ್ರಿಯ ಹೇಳಿದ್ದರು. ‘ಸಗಣಿ ಎಷ್ಟು ಉಪಯುಕ್ತ ಎನ್ನುವುದು ನಮಗೆಲ್ಲ ತಿಳಿದಿದೆ. ಹಾಗೆಯೇ ಗೋಮೂತ್ರವನ್ನೂ ಸಹ ಎಲ್ಲೆಡೆ ಸಿಂಪಡಿಸಿದರೆ ಆ ಜಾಗ ಶುದ್ಧೀಕರಣವಾಗುತ್ತದೆ. ಕೊರೋನಾ ವೈರಾಣು ಹರಡುತ್ತಿರುವ ರೋಗವನ್ನು ಗುಣಪಡಿಸಲು ಗೋಮೂತ್ರ ಮತ್ತು ಸಗಣಿಯನ್ನು ಬಳಸುವುದು ಸೂಕ್ತ’ ಎಂದು, ಹರಿಪ್ರಿಯ ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುವುದರ ಬಗ್ಗೆ ಏರ್ಪಡಿಸಿದ್ದ ಚರ್ಚೆಯೊಂದರಲ್ಲಿ ಹೇಳಿದ್ದರು.

ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್   ಅನು: ನಾ ದಿವಾಕರ

 

Leave a Reply

Your email address will not be published.