ಕೋವಿದ್ ಕಾಲದಲ್ಲಿ ದಾಸ್ತೋವಸ್ಕಿ ದೃಷ್ಟಾಂತ ಉದ್ದೀಪಿಸುವ ವಿಚಾರಗಳು

ಕಳೆದ ಒಂದು ವರ್ಷದಿಂದ ನಾವು ಎದುರಿಸುತ್ತಿರುವ ಪರಿಸ್ಥಿತಿ ಹಲವರಿಗೆ ಫ್ಯೂಡೋರ್ ದಾಸ್ತೋವಸ್ಕಿಯ ಪ್ರಸಿದ್ಧಕ್ರೈಮ್ ಅಂಡ್ ಪನಿಷ್ಮೆಂಟ್ಕಾದಂಬರಿಯಲ್ಲಿ ಬರುವ ಸ್ವಪ್ನದೃಶ್ಯಗಳಲ್ಲೊಂದನ್ನು ಜ್ಞಾಪಿಸುತ್ತಿರುವುದು ಸಹಜವೇ ಆಗಿದೆ. ಕೋವಿದ್ ಸಂದರ್ಭವು ನಮಗೆ ಹಳೆಯ ಮಹಾಸಾಂಕ್ರಾಮಿಕಗಳನ್ನು ಮಾತ್ರವಲ್ಲ, ಅವುಗಳ ಕುರಿತಾಗಿ ಬಂದ ಬರಹಗಳನ್ನು ಕೂಡ ಜ್ಞಾಪಿಸುತ್ತಿದೆ.

-ಕಮಲಾಕರ ಕಡವೆ

ಕಳೆದ ಒಂದು ವರ್ಷದಲ್ಲಿ ಮಹಾಸಾಂಕ್ರಾಮಿಕಗಳ ಬಗೆಗಿನ ಕಥಾನಕಗಳ ಚರ್ಚೆ ಮಾಧ್ಯಮಗಳಲ್ಲಿ, ಅಕಡೆಮಿಕ್ ವಲಯದ ಪ್ರಕಟಣೆಗಳಲ್ಲಿ, ವೆಬಿನಾರುಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ವಿಶೇಷವೆಂದರೆ, ಮಹಾಸಾಂಕ್ರಾಮಿಕಗಳ ಬಗೆಗಿನ ಸಾಹಿತ್ಯದ ವಿಶ್ಲೇಷಣೆ ವೈಜ್ಞಾನಿಕ ಪ್ರಬಂಧಗಳ ಭಾಗವಾಗಿ “ಜರ್ನಲ್ ಆಫ್ ದ ರಾಯಲ್ ಸೊಸೈಟಿ ಆಫ್ ಮೆಡಿಸಿನ್” ಅಥವಾ “ಇಮರ್ಜಿಂಗ್ ಇನ್ಫೆಕ್ಶಿಯಸ್ ಡಿಸೀಸಸ್” ಮುಂತಾದ ಆರೋಗ್ಯಕ್ಕೆ ಸಂಬಂಧಿಸಿದ ಜರ್ನಲ್-ಗಳಲ್ಲಿಯೂ ಬರುತ್ತಿರುವುದು. ವರ್ತಮಾನವನ್ನು ಅರಿತುಕೊಳ್ಳಲು ಐತಿಹಾಸಿಕ ಕಥನಗಳಂತೆಯೇ, ಕಾಲ್ಪನಿಕ ಕಥಾನಕಗಳೂ ಸಹಾಯಕವೆನ್ನುವುದೇ ಸಾಹಿತ್ಯ ವಿಶ್ಲೇಷಣೆಯತ್ತ ಈ ವಿಶೇಷ ಆಸಕ್ತಿಗೆ ಕಾರಣವಿದ್ದೀತು.

ಗ್ರೀಕ್ ನಾಟಕಕಾರ ಸೋಫೋಕ್ಲೀಸನ “ಈಡಿಪಸ್ ರೆಕ್ಸ್” ಮತ್ತು ಬೈಬಲ್ಲಿನ ಕತೆಗಳಲ್ಲಿ ನಾವು ಕಾಣುವಂತೆ, ಪುರಾತನರ ಕಲ್ಪನೆಯಲ್ಲಿ ಪ್ಲೇಗ್ ಮತ್ತು ಬರಗಾಲ ಮಾನವರ ಅಪರಾಧಕ್ಕೆ ವಿಧಿಸಿದ ಶಿಕ್ಷೆಗಳು. ಇದೇ ಮುಂದೆ ಅನ್ಯೋಕ್ತಿಯ (ಅಲಿಗರಿ) ರೂಪದಲ್ಲಿ ಸಾಂಕೇತಿಕ ಅರ್ಥವಿವರಣೆಯ ಪದ್ಧತಿಯಾಗಿ ಬಳಕೆಯಲ್ಲಿದೆ. ಹಾಗಾಗಿಯೇ, ಕೋವಿದ್ ಮನುಕುಲಕ್ಕೆ ನಿಸರ್ಗ ಕೊಟ್ಟಿರುವ ಎಚ್ಚರಿಕೆ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ. ಸಾರ್ವಜನಿಕ ಚರ್ಚೆಗಳಲ್ಲಿ ಒಟ್ಟಾರೆ ಆಸ್ತಿಕ-ನಾಸ್ತಿಕ ವ್ಯಾಪ್ತಿಯನ್ನೂ ಮೀರಿ, ಬಹಳಷ್ಟು ಜನ ಈ ಅಭಿಪ್ರಾಯ ತಳೆದಿರುವುದು ಕಂಡುಬರುತ್ತದೆ.  

ದಾಸ್ತೊವಸ್ಕಿಯ “ಕ್ರೈಮ್ ಅಂಡ್ ಪನಿಷ್ಮೆಂಟ್” ಕಾದಂಬರಿಯಲ್ಲಿ ದೃಶ್ಯವನ್ನು ಸಹ ಒಂದು ಅನ್ಯೋಕ್ತಿಯಾಗಿ ನೋಡಲಾಗಿದೆ. ಈ ಕೃತಿಯಲ್ಲಿ ನಾಲ್ಕು ಸ್ವಪ್ನದೃಶ್ಯಗಳಿವೆ. ಅವುಗಳಲ್ಲಿ ಕಾದಂಬರಿಯ ಹಿನ್ನುಡಿಯ ಭಾಗದಲ್ಲಿ ಬರುವ ನಾಲ್ಕನೆಯ ಸ್ವಪ್ನದೃಶ್ಯದಲ್ಲಿ ಒಂದು ವಿಚಿತ್ರ ಪ್ಲೇಗ್ ಪಿಡುಗು ಇಡೀ ವಿಶ್ವವನ್ನು ಬಾಧಿಸುತ್ತದೆ. ಕಾದಂಬರಿಯ ನಾಯಕ ರಸ್ಕಾಲ್ನಿಕೋವನು ಕಾಣುವ ಈ ಕನಸಲ್ಲಿ ವಿಶ್ವವ್ಯಾಪಿ ಹಬ್ಬುವ ಮಹಾರೋಗ ಉಗಮಿಸುವುದು ಏಶಿಯಾದಲ್ಲಿ. ಕೋವಿದ್ ಪಿಡುಗಿನ ಜೊತೆಯ ಸಾದೃಶ್ಯವೂ ಇಲ್ಲಿಂದಲೇ ಮೊದಲಾಗುತ್ತದೆ. ರಸ್ಕಾಲ್ನಿಕೋವನ ಕನಸಿನಲ್ಲಿ ಅಪರಿಚಿತ ರೋಗಾಣುವೊಂದು ಹುಟ್ಟುಹಾಕುವ ಭೀಕರ ಪಿಡುಗು ವಿಶ್ವದೆಲ್ಲ ನಾಡುಗಳಲ್ಲೂ ಹಬ್ಬುತ್ತದೆ. ಈ ಮಹಾರೋಗದ ಲಕ್ಷಣಗಳಲ್ಲಿ ಜನರು ತಮ್ಮದೇ ಬುದ್ಧಿವಂತಿಕೆಯನ್ನು ಅತಿಯಾಗಿ ಪ್ರದರ್ಶಿಸುವ, ತಮ್ಮ ಅಭಿಪ್ರಾಯಗಳನ್ನು ದೋಷಾತೀತವೆಂದು ಭಾವಿಸುವ ವರ್ಣನೆಗಳನ್ನು ದಾಸ್ತೋವಸ್ಕಿ ಕೊಡುತ್ತಾನೆ. ಇತರರ ವಿಚಾರಗಳನ್ನು ವಿವೇಚನೆಗೆ ತೆಗೆದುಕೊಳ್ಳುವ ವ್ಯವಧಾನವೇ ಈ ಪಿಡುಗಿಗೆ ಬಲಿಯಾದವರಲ್ಲಿ ಇರಲಿಲ್ಲವೆಂಬ ವರ್ಣನೆ ಕೂಡ ಇದೆ.

ಈ ಎಲ್ಲ ವಿವರಗಳನ್ನೂ ಪರಿಗಣಿಸಿದೆವಾದರೆ, ಒಟ್ಟಾರೆ ಈ ಸ್ವಪ್ನದೃಶ್ಯವನ್ನು ಒಂದು ದೃಷ್ಟಾಂತವಾಗಿ (ಪ್ಯಾರೆಬಲ್) ನಾವು ಓದಿಕೊಳ್ಳಬಹುದು ಮತ್ತು ನಮ್ಮದೇ ಪ್ರಸಕ್ತ ಪರಿಸ್ಥಿತಿಯೊಂದಿಗೆ ಹೋಲಿಸಬಹುದು. ದಾಸ್ತೋವಸ್ಕಿಯ ವಿವರಣೆಯ ಪ್ರಕಾರ ಈ ವೈರಸ್ಸಿಗೆ ಈಡಾದವರು ಸ್ವ-ಲೋಲುಪರಾಗಿ, ತಮ್ಮ ಅಭಿಪ್ರಾಯವೇ ಅಂತಿಮ ಸತ್ಯವೆಂಬ ಹುಂಬತನದಲ್ಲಿ ವಸ್ತುನಿಷ್ಠ ವಾಸ್ತವವನ್ನು ಕಡೆಗಣಿಸುತ್ತಾರೆ. ಇದು ಲೋಕದಲ್ಲಿ ವಿಪರೀತ ಧ್ರುವೀಕರಣವನ್ನು ಸೃಷ್ಟಿಸುತ್ತದೆ. ಕೋವಿದ್ ನಿರ್ಮಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ದೃಷ್ಟಾಂತ-ಸದೃಶ ಸ್ವಪ್ನದೃಶ್ಯವನ್ನು ಸಾಂಕ್ರಾಮಿಕ ರೋಗ ಮತ್ತು ಇಂದಿನ ಸತ್ಯೋತ್ತರ ಸ್ಥಿತಿಗೆ ರೂಪಕವೆಂದು ಅನೇಕ ಅಂತರರರಾಷ್ಟ್ರೀಯ ವಿಶ್ಲೇಷಕರು ಚರ್ಚಿಸಿದ್ದಾರೆ.

ದಾಸ್ತೋವಸ್ಕಿಯ ಕಾದಂಬರಿಯಲ್ಲಿನ ಸ್ವಪ್ನದೃಶ್ಯದಲ್ಲಿ ಬರುವ ಎಲ್ಲ ವಿವರಗಳೂ ನಮ್ಮ ಇಂದಿನ ಸ್ಥಿತಿಯನ್ನು ಹೋಲುತ್ತವೆ ಎಂದರೆ ಅತಿಶಯೋಕ್ತಿಯಾಗುತ್ತದೆ. ಇಂದಿನ ಸನ್ನಿವೇಶವನ್ನು ಮುಂಗಂಡು ಬರೆದಿರುವನೊ ಎನ್ನುವ ಮಟ್ಟಿಗೆ ಸಾದೃಶ್ಯವನ್ನು ಈ ಸ್ವಪ್ನದೃಶ್ಯಕ್ಕೆ ಆರೋಪಿಸಬಹುದಾದರೂ, ಒಂದು ದೃಷ್ಟಿಯಲ್ಲಿ, ಅಂತಹುದೊಂದು ಅರ್ಥಕಲ್ಪನೆಗೆ ದಾಸ್ತೋವಸ್ಕಿಯ ಈ ದೃಷ್ಟಾಂತ ಸೂಕ್ತವಿದೆಯೆನಿಸಿದರೂ, ಅವನ ಸಾಹಿತ್ಯದ ಒಟ್ಟಾರೆ ಕಾಣ್ಕೆಯ ಹಿನ್ನೆಲೆಯಲ್ಲಿ, ಮತ್ತು ಕಾದಂಬರಿಯ ಇಂಗಿತಗಳ ಹಿನ್ನೆಲೆಯಲ್ಲಿ ನೋಡಿದರೆ, ಈ ಸ್ವಪ್ನದೃಶ್ಯದ ಮೂಲಕ ದಾಸ್ತೋವಸ್ಕಿ ವಿಮರ್ಶಿಸುತ್ತಿರುವ ಸಾಮಾಜಿಕ ವಾಸ್ತವಕ್ಕೂ, ಕೋವಿದ್-ವಾಸ್ತವಕ್ಕೂ ಸಂಬಂಧ ಅತಿದೂರದ್ದು ಎಂದು ಹೇಳಬೇಕಾಗುತ್ತದೆ.

ದಾಸ್ತೋವಸ್ಕಿಯನ್ನು ಓದಿರುವವರಿಗೆ ತಿಳಿದಿರುವಂತೆ, ಈ ದೃಶ್ಯದ ಮೂಲಕ ವ್ಯಕ್ತಪಡಿಸುತ್ತಿರುವ ವಿಚಾರ ಪ್ಲೇಗಿಗೆ ಅಥವಾ ಇನ್ನಾವುದೇ ವಿಚಿತ್ರ ಮಹಾಸಾಂಕ್ರಾಮಿಕಕ್ಕೆ ಸಂಬಂಧಿಸಿದ್ದಲ್ಲವೇ ಅಲ್ಲ. ತನ್ನ ಕಾಲಮಾನದಲ್ಲಿ ಲೋಕಪ್ರಿಯವಾಗುತ್ತಿದ್ದ ವೈಜ್ಞಾನಿಕ ಮನೋಭಾವ, ಆಧ್ಯಾತ್ಮಿಕತೆಯನ್ನು ನಗಣ್ಯಮಾಡುವ ವಿವೇಕವಾದ (ರಾಷನಲಿಸಂ), ಧಾರ್ಮಿಕ ನಿರ್ದೇಶನದ ಹೊರಗೆ ವ್ಯವಹರಿಸುವ ರಾಜಕೀಯ ಸಂಸ್ಥೆಯಾದ ಪ್ರಜಾಪ್ರಭುತ್ವವೇ ಮೊದಲಾದ ಆಧುನಿಕ ಮೌಲ್ಯಗಳು ದಾಸ್ತೋವಸ್ಕಿಯ ಗುರಿಯಾಗಿವೆ. ಆಧ್ಯಾತ್ಮಿಕ ಪಥವನ್ನು ತೊರೆದು ಜಗತ್ತು ಲೌಕಿಕ ವಿವೇಚನೆಗಳ ಮೇಲೆ ಸಮಾಜವನ್ನು ಕಟ್ಟುವುದು ಅಸಾಧ್ಯವೂ, ಅಪಾಯಕಾರಿಯೂ ಎಂದು ದಾಸ್ತೋವಸ್ಕಿ ತನ್ನ ಬರಹಗಳ ಮೂಲಕ ಹೇಳುತ್ತಾನೆ. ಕರಮಜೋವ್ ಸಹೋದರರ ಕತೆಯಲ್ಲಿಯೂ ದಾಸ್ತೋವಸ್ಕಿ ಇವಾನ್ ಎಂಬ ಸಹೋದರನ ಕತೆಯ ಮೂಲಕ ಹೇಳುತ್ತಿರುವುದೂ ಕೂಡ ಇದೇ ಆಧುನಿಕ ಮೌಲ್ಯಗಳ `ಕೇಡಿನ’ ಬಗೆಗೆ.

ಆದರೂ, ಈ ಸ್ವಪ್ನದೃಶ್ಯದಲ್ಲಿ ದಾಸ್ತೋವಸ್ಕಿ ಅಭಿವ್ಯಕ್ತಿಸಿರುವ ವಿಜ್ಞಾನ-ವಿವೇಕವಾದ-ವಿರೋಧಿ ದೃಷ್ಟಿಕೋನ, ಬೇರೆ ಕಾದಂಬರಿಗಳಲ್ಲೂ ಕಾಣುವ ಅವನ ಈ ವಿಚಾರ ಸರಣಿ ಒಪ್ಪುವುದು ಅಸಾಧ್ಯ. ಅದರಲ್ಲಿಯೂ, ವೈಜ್ಞಾನಿಕ ಮನೋಭಾವ ಕ್ಷೀಣಿಸುತ್ತಿರುವ ಈ ಕಾಲದಲ್ಲಿ, ವೈಜ್ಞಾನಿಕ ಪದ್ಧತಿಯ ಅಗತ್ಯವನ್ನು ಒತ್ತಿ ತಿಳಿಸಿರುವ ಕೋವಿದ್-ಸಂದರ್ಭದಲ್ಲಿ ದಾಸ್ತೊವಸ್ಕಿಯ ಈ ನಿಲುವನ್ನು ಪುಷ್ಟೀಕರಿಸಲಾಗದು. ಪುರೋಗಾಮಿ ಮೌಲ್ಯಗಳ ಕುರಿತ ಅವನ ಈ ಅಸಡ್ಡೆ, ಚರ್ಚ್-ಕೇಂದ್ರಿತ ನಿರ್ದೇಶನದಡಿಯೇ ಸಮಾಜ ವ್ಯವಹರಿಸಬೇಕೆನ್ನುವ ಸೂಚನೆಗಳುಳ್ಳ ಅವನ ಆಧ್ಯಾತ್ಮಿಕ ಒಲವು, ಎನ್ಲೈಟನ್ಮೆಂಟ್ ಉದಾರವಾದದ ಕುರಿತ ಅವನ ಅಸಹನೆ, ರಶಿಯಾದ ರೈತಸಾಮಾನ್ಯರ ಪರವಾಗಿ ಸ್ವಾಯತ್ತ ಪದ್ಧತಿಯನ್ನು ಎತ್ತಿಹಿಡಿದರೂ, ಅದು ದೇವರ ನೀತಿಯನ್ನು ಪೂರ್ಣಗೊಳಿಸಬಲ್ಲ ಅರಸೊತ್ತಿಗೆಯಡಿ ಇರಬೇಕೆಂಬ ಅವನ ಅಸ್ಪಷ್ಟ ಆದರ್ಶವಾದ… ಇವೆಲ್ಲವೂ ನಾವು ಈ ಹೊತ್ತು ಗೌರವಿಸುವ ಮತ್ತು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿರುವ ಮೌಲ್ಯಗಳಿಗೆ ವ್ಯತಿರಿಕ್ತವಾಗಿವೆ. ಇದು ನನ್ನಲ್ಲಿ ಹುಟ್ಟಿಸುವ ಉಭಯಸಂಕಟವೆಂದರೆ: ಕಾದಂಬರಿ ಇಷ್ಟ, ಆದರೆ ಅದರಲ್ಲಿ ಪ್ರತಿಪಾದಿಸಿರುವ ಮೌಲ್ಯವಲ್ಲ.

ಹಾಗೆ ನೋಡಿದರೆ, ಈ ಸ್ವಪ್ನದೃಶ್ಯವನ್ನು ನಮ್ಮ ಸತ್ಯೋತ್ತರ ಸಂದರ್ಭಕ್ಕೆ ಅನ್ವಯಿಸಿ ನೋಡುವಲ್ಲಿ ಒಂದು ವ್ಯಂಗ್ಯವಿದೆ. ಅದೆಂದರೆ, ಈ ಸತ್ಯೋತ್ತರ ಪೀಳಿಗೆ ಯಾವ ವಿವೇಚನಾವಾದದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಾಲ್ ಮಾಡುವುದೋ, ಯಾವ ವಿವೇಚನಾವಾದದ ತತ್ವಗಳಿಗೆ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ಎತ್ತಿಹಿಡಿಯುತ್ತದೆಯೋ, ಯಾವ ವಿಜ್ಞಾನದ ತರ್ಕಗಳಿಗೆ ಅಸಡ್ಡೆಯನ್ನು ಪ್ರದರ್ಶಿಸುವುದೋ, ತನ್ನದೇ ಸೂಕ್ಷ್ಮ, ಸಂಕೀರ್ಣ ರೀತಿಯಲ್ಲಿ ದಾಸ್ತೋವಸ್ಕಿ ಸಹ ಈ ಸ್ವಪ್ನದೃಶ್ಯದಲ್ಲಿ ಅವುಗಳನ್ನೇ ಟ್ರಾಲ್ ಮಾಡುತ್ತಾ ಇದ್ದಾನೆ, ಎನ್ನುವುದು. ಹೀಗೆ, ಈ ದೃಶ್ಯವನ್ನು ಕಾದಂಬರಿಯಿಂದ ಪ್ರತ್ಯೇಕಿಸಿ ಓದಿದರೆ, ಹೊರನೋಟಕ್ಕೆ ಸತ್ಯೋತ್ತರ ಪೀಳಿಗೆಯನ್ನು ಅಣಕಿಸುತ್ತಿದೆಯೆನಿಸಿದರೂ, ಕಾದಂಬರಿಯ ಮತ್ತು ದಾಸ್ತೋವಸ್ಕಿಯ ಒಟ್ಟಾರೆ ಬರಹಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ತದ್ವಿರುದ್ಧ ಅರ್ಥಕಲ್ಪನೆ ನಮ್ಮೆದುರು ಬರುತ್ತದೆ.

ಹೀಗಿರುವಾಗಲೂ, ನಾವು ದಾಸ್ತೋವಸ್ಕಿಯನ್ನು ಓದಬೇಕೆಂದು ನಾನು ಬಯಸುತ್ತೇನೆ. ಯಾಕೆಂದರೆ, ನಾನು ಅವನನ್ನು ಅರ್ಥೈಸಿಕೊಂಡಿದ್ದಕ್ಕೆ ಹೊರತಾದ ಅರ್ಥಕಲ್ಪನೆಯೂ ಸಾಧ್ಯ. ಹೊಸ ಓದುಗರು ಅವನ ಕಾದಂಬರಿಗಳಲ್ಲಿ ಹೊಸ ಮೌಲ್ಯಗಳನ್ನು ದರ್ಶಿಸಬಹುದು, ಅವು ನಮ್ಮನ್ನು ಆಕರ್ಷಿಸಲೂ ಬಹುದು. ಹಾಗಾಗಿ, ದಾಸ್ತೋವಸ್ಕಿಯಂತಹ ಸಂಕೀರ್ಣ ಶೈಲಿಯ ಲೇಖಕರು ನಮ್ಮನ್ನು ಯಾವಾಗಲೂ ಯೋಚನೆಗೆ, ವಿವೇಚನೆಗೆ ತೊಡಗಿಸುವ ಮೂಲಕ ನಮ್ಮ ವಿವೇಚನಾಶಕ್ತಿಯನ್ನು ವೃದ್ಧಿಸುತ್ತಾರೆ. ತುಂಬ ಸ್ಪಷ್ಟವಾಗಿ ಇದು ಸರಿ, ಅದು ತಪ್ಪು, ಎಂದು ಗುರುತುಹಾಕಿ ಗೆರೆ ಎಳೆಯುವ ಬರವಣಿಗೆ ನಮ್ಮ ಮೂಗಿನ ನೇರಕ್ಕೆ ಇರುವಾಗ ನಮ್ಮನ್ನು ತೃಪ್ತಗೊಳಿಸಬಹುದು. ಆದರೆ ನಮ್ಮೊಳಗೆ ಚರ್ಚೆಯನ್ನೇ ಹುಟ್ಟುಹಾಕದೇ, ಹೌದಪ್ಪಗಳನ್ನಾಗಿಸುತ್ತದೆ. ದಾಸ್ತೋವಸ್ಕಿಯಂತಹ ಬರಹಗಾರರು ನಮ್ಮನ್ನು ಪ್ರಶ್ನೆಗಳನ್ನು ಕೇಳುವಂತೆ, ಚರ್ಚಿಸುವಂತೆ ಒತ್ತಾಯಿಸುತ್ತಾರೆ. ಇಂದು ಓದುವಾಗ ಕಂಡಿದ್ದಕ್ಕೆ ವ್ಯತಿರಿಕ್ತವಾದುದು ನಾಳೆ ಓದುವಾಗ ಕಾಣುವ, ಪ್ರತಿ ಓದಿಗೂ ಹೊಸ ಯೋಚನಾಸರಣಿ ಬಿಚ್ಚುವಂತೆ ಮಾಡುವ ಗುಣವೊಂದು ಈ ಬರಹಗಾರರ ಕೃತಿಗಳಲ್ಲಿರುತ್ತದೆ. ಎಲ್ಲರನ್ನೂ ಯೋಚನೆಗೆ ಹಚ್ಚುವ ಕೃತಿ ಎಲ್ಲರ ಅನುಮೋದನೆ ಪಡೆವ ಕೃತಿಗಿಂತ ಹೆಚ್ಚಿನದೆಂದು ನಾನು ಭಾವಿಸುತ್ತೇನೆ.

ರಸ್ಕಾಲ್ನಿಕೋವನ ಸ್ವಪ್ನದೃಶ್ಯ

ಉಪವಾಸದ ಕಾಲವಾದ ಲೆಂಟ್‍ನ ನಡುವಿನಿಂದ ಈಸ್ಟರ್ ತನಕ ಅವನು ಆಸ್ಪತ್ರೆಯಲ್ಲಿದ್ದ. ಸುಧಾರಿಸಿಕೊಂಡ ನಂತರ, ಜ್ವರ ಏರಿ, ಭ್ರಾಂತಿಯಲ್ಲಿದ್ದಾಗ ಕಂಡ ಕನಸುಗಳು ಅವನಿಗೆ ನೆನಪಾದವು. ಇಡೀ ವಿಶ್ವವೇ ಏಶಿಯಾದ ಆಳದಿಂದ ಯುರೋಪಿಗೆ ಬಂದ ವಿಚಿತ್ರ ಭೀಕರ ಪ್ಲೇಗಿನ ಪಿಡುಗಿಗೆ ತುತ್ತಾದಂತೆ. ಕೆಲವೇ ಕೆಲವು ಆಯ್ದವರನ್ನು ಬಿಟ್ಟು ಮತ್ತೆಲ್ಲ ಧ್ವಂಸಕ್ಕೆ ಈಡಾಗಲಿದ್ದವು. ಹೊಸ ಬಗೆಯ ರೋಗಾಣುಗಳು ಜನರ ದೇಹದ ಮೇಲೆ ದಾಳಿ ಮಾಡುತ್ತಿದ್ದವು. ಈ ರೋಗಾಣುಗಳಿಗೆ ಬುದ್ಧಿಯೂ, ಇಚ್ಛಾಶಕ್ತಿಯೂ ಇದ್ದವು. ಅವುಗಳ ದಾಳಿಗೆ ಒಳಗಾದ ಜನರು ಏಕಾಏಕಿ ಹುಚ್ಚರಾಗುತ್ತಿದ್ದರು, ಉದ್ರಿಕ್ತರಾಗುತ್ತಿದ್ದರು.

ಈ ಯಾತನೆಗೆ ಒಳಗಾದವರಷ್ಟು ತಮ್ಮನ್ನು ತಾವು ಬುದ್ಧಿವಂತರೆಂದು, ಸಂಪೂರ್ಣ ಸತ್ಯದ ಅರಿವುಳ್ಳವರೆಂದು, ತಮ್ಮ ನಿರ್ಧಾರಗಳು, ತಮ್ಮ ವೈಜ್ಞಾನಿಕ ತರ್ಕಗಳು, ತಮ್ಮ ನೈತಿಕ ನಿಷ್ಠೆಗಳು ದೋಷಾತೀತವೆಂದು ಬೇರೆ ಯಾವ ಜನರೂ ಎಂದೂ ತಮ್ಮ ಕುರಿತು ತಾವು ಯೋಚಿಸಿರಲಿಲ್ಲ. ಊರಿಗೆ ಊರೇ, ಇಡೀ ಪಟ್ಟಣಗಳೇ, ಅಲ್ಲಿನೆಲ್ಲ ಜನ ಈ ಪಿಡುಗಿಗೆ ತುತ್ತಾಗಿ ಹುಚ್ಚರಾಗಿದ್ದರು. ಉನ್ಮಾದದಲ್ಲಿದ್ದ ಅವರಿಗೆ ಒಬ್ಬರನ್ನಿನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ತನಗೆ ತಿಳಿದದ್ದು ಮಾತ್ರ ಸರಿಯೆಂಬ ನಂಬಿಕೆಯಲ್ಲಿ ಪ್ರತಿಯೊಬ್ಬರೂ ಇತರರನ್ನು ನಿಕೃಷ್ಟವೆಂದು ಗಣಿಸಿ, ಡಬಡಬ ಎದೆಬಡಕೊಂಡು, ಕೈಗಳನ್ನು ಆಡಿಸಿ ಚೀರಾಡುತ್ತಿದ್ದರು. ವಿವೇಚನೆ ಅವರಿಗೆ ಅಸಾಧ್ಯವಾಗಿತ್ತು ಮತ್ತು ಯಾವುದು ಕೆಡುಕು, ಯಾವುದು ಲೇಸು ಎನ್ನುವುದರ ಕುರಿತು ಅವರಿಗೆ ಸರ್ವಮಾನ್ಯತೆ ಇರಲಿಲ್ಲ; ಯಾರನ್ನು ದೂರುವುದು, ಯಾರನ್ನು ಸಮರ್ಥಿಸಿಕೊಳ್ಳುವುದೆಂದೇ ಅವರಿಗೆ ಗೊತ್ತಿರಲಿಲ್ಲ. ಅರ್ಥವೇ ಇಲ್ಲದ ದ್ವೇಷದಲ್ಲಿ ಜನ ಪರಸ್ಪರರನ್ನು ಕೊಲೆ ಮಾಡುತ್ತಿದ್ದರು. ಒಬ್ಬರಿನ್ನೊಬ್ಬರ ವಿರುದ್ಧ ಒಟ್ಟಾಗಿ ದಾಳಿ ಮಾಡಲು ಹೊರಡುತ್ತಿದ್ದರು. ಆದರೆ, ತಾವು ತಾವೇ ಹೊಡೆದಾಡಿಕೊಳ್ಳುತ್ತಿದ್ದರು. ತಮ್ಮ ತಮ್ಮಲ್ಲೇ ಆಕ್ರಮಣ ಮಾಡಿ, ಇರಿದು, ಕಚ್ಚಿ, ಒಬ್ಬರಿನ್ನೊಬ್ಬರ ನಾಶ ಮಾಡುತ್ತಿದ್ದರು.

ಶಹರದಲ್ಲಿ ಅಲಾರ್ಮಿನ ಗಂಟೆ ದಿನದುದ್ದಕ್ಕೂ ಬಾರಿಸುತ್ತಿತ್ತು; ಜನ ಓಡೋಡಿ ಬರುತ್ತಿದ್ದರು. ಆದರೆ ಯಾತಕ್ಕಾಗಿ ತಾವು ಸೇರುತ್ತಿದ್ದೇವೆ, ಯಾರು ತಮ್ಮನ್ನು ಕರೆದಿದ್ದಾರೆ ಎಂದು ಅವರ್ಯಾರಿಗೂ ಅರಿವಿರಲಿಲ್ಲ. ಅತ್ಯಂತ ಸಾಧಾರಣ ಕಾಯಕವನ್ನೂ ಕೈಬಿಡಬೇಕಾಗಿ ಬರುತ್ತಿತ್ತು. ಯಾಕೆಂದರೆ, ಏನನ್ನೇ ಮಾಡುವ ಕುರಿತಾಗಿ ಒಮ್ಮತ ಮೂಡುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮತಮ್ಮದೇ ರೀತಿಯನ್ನು, ತಮ್ಮತಮ್ಮದೇ ಸುಧಾರಣೆಯನ್ನು ಸೂಚಿಸುತ್ತಿದ್ದರು. ಜಮೀನು ಸಹ ಪಾಳುಬಿದ್ದಿದ್ದವು. ಜನ ಗುಂಪು ಸೇರುತ್ತಿದ್ದರು, ಏನೋ ಒಂದು ಮಾಡಲು ಒಪ್ಪುತ್ತಿದ್ದರು, ಒಟ್ಟಾಗಿರುವ ಆಣೆ ಹಾಕುತ್ತಿದ್ದರು, ಕ್ಷಣದಲ್ಲಿಯೇ ಎಲ್ಲ ಮರೆತು ಬೇರೇನೋ ಮಾಡಲು ತೊಡಗುತ್ತಿದ್ದರು. ಒಬ್ಬರಿನ್ನೊಬ್ಬರ ಮೇಲೆ ಆಪಾದನೆ ಹಾಕುತ್ತಿದ್ದರು, ಬಡಿದಾಡಿಕೊಂಡು ಸಾಯುತ್ತಿದ್ದರು.

ದಳ್ಳುರಿ, ಬರಗಾಲ ಸಾಮಾನ್ಯವಾಗಿ ಹೋಗಿತ್ತು. ಎಲ್ಲವೂ, ಎಲ್ಲ ಜನರೂ ವಿನಾಶದಲ್ಲಿಯೇ ತೊಡಗಿಕೊಂಡಿದ್ದರು. ಪ್ಲೇಗಿನ ಪಿಡುಗು ಮತ್ತೂ ಮತ್ತೂ ಹಬ್ಬುತ್ತಿತ್ತು. ಜಗದಾದ್ಯಂತ ಕೆಲವೇ ಕೆಲವರು ಅದರಿಂದ ಬಚಾವಾಗಿ ಉಳಿದಿದ್ದರು. ಈ ಸ್ವಚ್ಛ ಮಂದಿ, ಮುಂದಿನ ಜನಾಂಗವನ್ನು ಸೃಷ್ಟಿಸಲು ವಿಶೇಷ ಆಯ್ದ ಮಂದಿ, ಭೂಮಿಯನ್ನು ಈ ಪಿಡುಗಿನಿಂದ ಪಾರಾಗಿಸಬಲ್ಲ ಮಂದಿ ಅವರಾಗಿದ್ದರು. ಆದರೆ, ಯಾರೂ ಅಂತಹವರನ್ನು ಕಂಡಿರಲ್ಲ, ಅಂತಹವರನ್ನು ಕೇಳಿರಲಿಲ್ಲ.

Leave a Reply

Your email address will not be published.