ಕೋವಿದ್ ನಿಯಂತ್ರಣ ಅಧಿಕಾರಶಾಹಿಗಳ ಆತ್ಮನಿರ್ಭರತೆ!

ಅಧಿಕಾರಿವರ್ಗದ ಸ್ವತಂತ್ರ ನಿರ್ಧಾರಗಳು ಜನರಿಗೆ ತಂದೊಡ್ಡಿದ ಅತಂತ್ರಗಳು ಒಂದೆರಡಲ್ಲ!

ಮೇ ತಿಂಗಳ ಮಧ್ಯಭಾಗದಲ್ಲಿ, ಕೋವಿದ್ 19 ಹಿನ್ನೆಲೆಯಲ್ಲಿ ಘೋಷಿಸಿದ್ದ ಲಾಕ್‌ಡೌನ್ ನಿಂದ ಉಂಟಾದ ರಾಜಕೀಯ ಲಾಭವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಪ್ರಧಾನಿ ಮೋದಿ ತಮ್ಮ ಹೊಸ ಸಿದ್ಧಾಂತವನ್ನೇ ಘೋಷಿಸಿದ್ದರು. ಇನ್ನು ಮುಂದೆ ಭಾರತ ಆತ್ಮನಿರ್ಭರತೆಯನ್ನು ಸಾಧಿಸಲು ಶ್ರಮಿಸುತ್ತದೆ ಎಂದು ಭಾರತದ ಪ್ರಧಾನಿ ಘೋಷಿಸಿದ್ದರು. ಬಹುಶಃ ಈ ಘೋಷಣೆಯ ಮೂಲ ಉತ್ತರ ಕೊರಿಯಾದ ಅಧ್ಯಕ್ಷ, ಎಂದಿಗೂ ತನ್ನ ತಪ್ಪಿಗಾಗಿ ಪರಿತಪಿಸದ ನಾಯಕ ಕಿಮ್ 2 ಸಂಗ್ ಅವರ ಜೂಚೆ ಎಂಬ ಘೋಷಣೆ ಇರಬಹುದು. ಜೂಚೆ ಎಂದರೂ ಕೊರಿಯಾ ಭಾಷೆಯಲ್ಲಿ ಆತ್ಮನಿರ್ಭರತೆ ಎಂದರ್ಥ, ಸ್ವಾವಲಂಬನೆ ಎಂದರ್ಥ. ಆದಾಗ್ಯೂ ಈ ಹಿಂದಿ ಪದ ಜನರನ್ನು ಹೆಚ್ಚಾಗಿ ಆಕರ್ಷಿಸಿದೆ. ಭಾರತದ ಸಾಮಾನ್ಯ ಪ್ರಜೆಗಳಿಗಿಂತಲೂ ಹೆಚ್ಚಾಗಿ ಆಡಳಿತ ವ್ಯವಸ್ಥೆಯ ಅಧಿಕಾರಶಾಹಿಗಳನ್ನು ಹೆಚ್ಚಾಗಿ ಆಕರ್ಷಿಸಿದೆ.

ಈ ಪ್ರವೃತ್ತಿಗೆ ಹಲವು ಕಾರಣಗಳನ್ನು ಗುರುತಿಸಬಹುದು. ಭಾರತದಲ್ಲಿ ಅಧಿಕಾರಶಾಹಿಗಳು ಉಚಿತ ಸರ್ಕಾರಿ ವಸತಿ, ಜೀವನ ಪರ್ಯಂತ ನೌಕರಿ, ಹಲವಾರು ಸೌಲಭ್ಯಗಳು, ಕಚೇರಿಯಲ್ಲಿ ಸಹಾಯಕ್ಕೆ ಜನ, ವಾಹನಕ್ಕೆ ಚಾಲಕರು, ಅತ್ಯುತ್ತಮ ಗುಣಮಟ್ಟದ ಶಾಲೆ ಮತ್ತು ಆಸ್ಪತ್ರೆಯಲ್ಲಿ ಸವಲತ್ತುಗಳು, ಅತ್ಯುತ್ತಮ ಕ್ಲಬ್ಬುಗಳಲ್ಲಿ ಸದಸ್ಯತ್ವ ಹೊಂದಿರುತ್ತಾರೆ. ಇವೆಲ್ಲಾ ಐಷಾರಾಮಿ ಸೌಲಭ್ಯಗಳನ್ನು ಅನುಭವಿಸುವ ಈ ಅಧಿಕಾರಿಗಳು ಹೊರ ಜಗತ್ತಿನ ಸಾಮಾನ್ಯ ಜನರಾದ ವ್ಯಾಪಾರಿಗಳು, ರೈತರು, ಮತದಾರರು ಮತ್ತು ಇತರರಿಂದ ಪ್ರತ್ಯೇಕವಾಗಿಯೇ ಬದುಕುತ್ತಾರೆ. ಆದಾಗ್ಯೂ ಈ ಪ್ರಸ್ತುತ ಬಿಕ್ಕಟ್ಟು ಈ ಕಂದರವನ್ನು ಹೆಚ್ಚು ಪ್ರಖರವಾಗಿ ಪ್ರದರ್ಶಿಸಿದೆ.

ಎರಡು ತಿಂಗಳ ಲಾಕ್ ಡೌನ್ ಅವಧಿಯಲ್ಲಿ 130 ಕೋಟಿ ಭಾರತೀಯ ಪ್ರಜೆಗಳನ್ನು ಮನೆಯೊಳಗೇ ಇರುವಂತೆ ಮಾಡಿದ ಭಾರತದ ಅಧಿಕಾರಶಾಹಿ 4000 ವಿವಿಧ ನಿಯಮಗಳನ್ನು ಜಾರಿಗೊಳಿಸಿ ಅಧಿಸೂಚನೆಗಳನ್ನು ಹೊರಡಿಸಿದೆ. ಈ ಅಧಿಸೂಚನೆಗಳ ಮಹಾಪೂರದಲ್ಲಿ ಬಹುಪಾಲು ಅರ್ಥಪೂರ್ಣವಾಗಿದ್ದವು. ಆದರೂ ಹಲವಾರು ನಿಯಮಗಳು ಸಮಸ್ಯೆಯನ್ನು ಬಗೆಹರಿಸಿದಷ್ಟೇ ಉಲ್ಬಣಿಸುವಂತೆ ಮಾಡಿದ್ದೂ ಸತ್ಯ.

ಮಾರ್ಚ್ 25ರಿಂದ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ ದೇಶವ್ಯಾಪಿ ಲಾಕ್ ಡೌನ್ ವಿಧಿಸಿದ ನಂತರದಲ್ಲಿ ಹಲವು ದಿನಗಳ ಕಾಲ ಕೂಲಿನಾಲಿ ಇಲ್ಲದೆ ಅನ್ನಾಹಾರವಿಲ್ಲದೆ ಬಳಲಿ ಬೆಂಡಾದ ಲಕ್ಷಾಂತರ ವಲಸೆ ಕಾರ್ಮಿಕರ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ. ವಲಸೆ ಕಾರ್ಮಿಕರ ಜುಗುಪ್ಸೆ, ಆತಂಕ ಹೆಚ್ಚಾದಂತೆಲ್ಲಾ ಲಕ್ಷಾಂತರ ಜನರು ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲೇ ಹಿಂದಿರುಗಲಾರAಭಿಸಿದ್ದರು. ಬಿಸಿಲು, ಹಸಿವು, ಸುಸ್ತು ಯಾವುದನ್ನೂ ಲೆಕ್ಕಿಸದೆ ನೂರಾರು, ಸಾವಿರಾರು ಕಿಲೋಮೀಟರ್ ದೂರದ ಊರುಗಳಿಗೆ ನಡೆಯಲಾರಂಭಿಸಿದರು. ಇದರೊಂದಿಗೆ ಪೊಲೀಸರಿಂದ ಲಾಠಿ ರುಚಿಯನ್ನೂ ಅನುಭವಿಸಬೇಕಾಯಿತು.

ಮೇ ತಿಂಗಳ ಮಧ್ಯ ಭಾಗದ ವೇಳೆಗೆ ಅಧಿಕಾರಶಾಹಿಗಳು ತಮ್ಮ ವರಸೆಯನ್ನು ಬದಲಿಸಿ, ಅಲ್ಲಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಮಾಡಲಾರಂಭಿಸಿದ್ದರು. ಈ ಸಂದರ್ಭದಲ್ಲೇ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಮ್ಮೊಡನೆ ಕೋವಿದ್ 19 ವೈರಾಣುವನ್ನೂ ಹೊತ್ತೊಯ್ದಿದ್ದರು.

ಈಗ ಲಾಕ್‌ಡೌನ್ ತೆರವಾಗಿದೆ. ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಿವೆ. ವಲಸೆ ಈಗಾಗಲೇ ಗ್ರಾಮಗಳಿಂದ ನಗರಗಳಿಗೆ ಆರಂಭವಾಗಿದೆ. ಕಾರ್ಮಿಕರು ಪುನಃ ನಗರಗಳಲ್ಲಿ ನೌಕರಿ ಅರಸಿ ಬರುತ್ತಿದ್ದಾರೆ. ಆದರೆ ದೇಶದ ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರ ಬವಣೆಯ ಬಗ್ಗೆ ಈಗ ಎಚ್ಚೆತ್ತಿದೆ. ಜೂನ್ 9ರಂದು ಸ್ವಯಂ ಪ್ರೇರಣೆಯಿಂದ ವಲಸೆ ಕಾರ್ಮಿಕರ ಸಮಸ್ಯೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ದೇಶದ ಇತರ ಎಲ್ಲ ಸಾಂವಿಧಾನಿಕ ಸಂಸ್ಥೆಗಳಿಗಿAತಲೂ ತಾನು ಭಿನ್ನ ಎಂದು ಪ್ರದರ್ಶಿಸುವಂತೆ, ಆತ್ಮನಿರ್ಭರತೆಯ ಸ್ಫೂರ್ತಿಯೊಂದಿಗೆ, ಎಲ್ಲ ವಲಸೆ ಕಾರ್ಮಿಕರನ್ನೂ 15 ದಿನಗಳೊಳಗಾಗಿ ಅವರವರ ಊರುಗಳಿಗೆ ಕಳುಹಿಸಲು ವ್ಯವಸ್ಥೆ ಮಾಡುವಂತೆ ಸ್ವಪ್ರೇರಿತ ಆದೇಶ ನೀಡಿದೆ.

ಸರ್ಕಾರದ ಕೆಲವು ಅತ್ಯುನ್ನತ ವಿರೋಧಾಭಾಸಗಳು ಬಹಳ ಕ್ಷುಲ್ಲಕ ಎನಿಸುವಂತಹ ವಿಚಾರಗಳಾಗಿವೆ. ಉದ್ಯಾನವನಗಳನ್ನು ತೆರೆಯುವ ಬಗ್ಗೆ ದೇಶದ ರಾಜಧಾನಿಯಿಂದ ಹೊರಡಿಸಿದ ಆದೇಶದಲ್ಲಿ ಸಾರ್ವಜನಿಕರು ಬೆಳಿಗ್ಗೆ 7 ರಿಂದ 10 ಗಂಟೆಯವರೆಗೆ, ಮಧ್ಯಾಹ್ನ 3.30 ರಿಂದ ಸಂಜೆ 6.30ರವರೆಗೆ ಪ್ರವೇಶಿಸಬಹುದು ಎಂದು ಸೂಚನೆ ನೀಡಿತ್ತು. ಇದರಿಂದ ಜನದಟ್ಟಣೆ ಹೆಚ್ಚಾಗಿ ದೈಹಿಕ ಅಂತರ ಕಡಿಮೆಯಾಗುವುದು ಖಚಿತ ಎನ್ನುವುದು ಬೇರೆ ವಿಚಾರ.

ಭಾರತದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ನಿವಾಸಿಗಳು ಕಠಿಣ ಎನಿಸಬಹುದಾದ ಆದೇಶವನ್ನು ಓದಬೇಕಾಯಿತು. ಅದು ಹೀಗಿದೆ “ಎಲ್ಲ ಷಾಪಿಂಗ್ ಮಾಲ್‌ಗಳೂ ತೆರೆದಿರುತ್ತವೆ ಆದರೆ ಷಾಪಿಂಗ್ ಮಾಲ್‌ಗಳಲ್ಲಿರುವ ಎಲ್ಲ ಅಂಗಡಿಗಳೂ ಮುಚ್ಚಿರುತ್ತವೆ”. ಇದೇ ದಿನ ದೆಹಲಿಗೆ ಅಂಟಕೊಂಡಂತೆಯೇ ಇರುವ ಹರಿಯಾಣಾದಲ್ಲಿ ರಾಜಧಾನಿಯ ಗಡಿ ರೇಖೆಯ ಹೆದ್ದಾರಿಯನ್ನು ಸಂಚಾರಮುಕ್ತಗೊಳಿಸಲಾಯಿತು. ಆದರೆ ಅದೇ ದಿನ ದೆಹಲಿ ಹರಿಯಾಣ ಗಡಿ ಹೆದ್ದಾರಿಯನ್ನು ಬಂದ್ ಮಾಡಿತ್ತು. ಬೃಹತ್ ದೆಹಲಿ ನಗರದ ಮತ್ತು ಉಪನಗರಗಳ ನಡುವೆ ಪ್ರಯಾಣ ಮಾಡುವ 20 ಲಕ್ಷಕ್ಕೂ ಹೆಚ್ಚು ಜನರು, ವಾಹನ ಸಂಚಾರರು ಟ್ರಾಫಿಕ್ ಜಾಮ್‌ನಲ್ಲಿ ಹಲವು ಬಾರಿ ಸಿಕ್ಕಿಹಾಕಿಕೊಳ್ಳಬೇಕಾಯಿತು. ಇದಕ್ಕೆ ಕಾರಣ ಅಧಿಕಾರಶಾಹಿಗಳ ಮನಸ್ಸು ಕ್ಷಣಕ್ಕೊಮ್ಮೆ ಬದಲಾಗುತ್ತಿರುವುದು.

ಈ ರೀತಿಯ ನಿಯಮಗಳು ಕೇವಲ ಕಿರಿಕಿರಿ ಉಂಟುಮಾಡುವುದೇ ಅಲ್ಲದೆ ಮಾರಣಾಂತಿಕವೂ ಆಗಬಹುದು. ಬಹುಶಃ ಜನದಟ್ಟಣೆಯನ್ನು ತಪ್ಪಿಸಲು ದೆಹಲಿ ಸರ್ಕಾರ ಕೆಲವು ಅಸ್ಪತ್ರೆಗಳನ್ನು ಕೋವಿದ್ 19 ಪರೀಕ್ಷೆ ನಡೆಸುವುದರಿಂದ ನಿಷೇಧಿಸಿತು. ವೈದ್ಯರು ಇದನ್ನು ಹುಚ್ಚು ನಿರ್ಧಾರ ಎಂದು ಖಂಡಿಸಿದರು. ಇಲ್ಲಿ ವೈದ್ಯರು ಎದುರಿಸಿದ ಗೊಂದಲ ಎಂದರೆ, ಒಂದು ವೇಳೆ ಕೋವಿದ್ 19 ಸೋಂಕು ಇರುವ ಮಹಿಳೆಗೆ ಹೆರಿಗೆಯಾದರೆ ನವಜಾತ ಶಿಶುವನ್ನು ಇತರ ಹಸುಳೆಗಳಿಂದ ದೂರ ಇರಿಸಬೇಕೇ ಎನ್ನುವ ಗೊಂದಲ. ಮತ್ತೊಂದೆಡೆ ಯಾವುದೋ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಕೋವಿದ್ ತಗುಲಿದ್ದರೆ ಏನು ಮಾಡಬೇಕು ಎನ್ನುವ ಗೊಂದಲ. ವೈದ್ಯಕೀಯ ಸಂಸ್ಥೆಗಳು ಸಹ, ಸಾಂಕ್ರಾಮಿಕ ರೋಗ ತಜ್ಞರೊಬ್ಬರನ್ನೂ ಸೇರಿದಂತೆ, ಸರ್ಕಾರ ಮಾಹಿತಿಯನ್ನು ಮರೆಮಾಚಿ ತಜ್ಞರನ್ನು ಸಂಪರ್ಕಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ.

ಅಧಿಕಾರವರ್ಗದ ಆತ್ಮನಿರ್ಭರತಾ ಘೋಷಣೆಯಿಂದ ಕೆಲವು ಕುಟಿಲ ಪರಿಣಾಮಗಳನ್ನೂ ಗುರುತಿಸಬಹುದು. ಕಳೆದ ಹತ್ತು ತಿಂಗಳಿAದ ಯಾವುದೇ ಆರೋಪವೂ ಇಲ್ಲದಿದ್ದರೂ ಸೆರೆವಾಸದಲ್ಲಿರುವ 82 ವರ್ಷದ ಮಾಜಿ ಸಚಿವರೊಬ್ಬರ ಬಿಡುಗಡೆಗೆ ದೇಶದ ಸುಪ್ರೀಂಕೋರ್ಟ್ ಮತ್ತೊಮ್ಮೆ ತಡೆಯೊಡ್ಡಿದೆ.  ಇವರ ದುರಾದೃಷ್ಟವೆಂದರೆ ಇವರು ಕಾಶ್ಮೀರ ಕಣಿವೆಯಿಂದ ಬಂದಿರುವವರು. ಕೆಳಹಂತದ ನ್ಯಾಯಾಲಯಗಳು 81 ವರ್ಷದ ಕವಿ ವರಾವರರಾವ್ ಅವರಿಗೆ ಜಾಮೀನು ನಿರಾಕರಿಸುತ್ತಲೇ ಇವೆ. ಎರಡು ವರ್ಷಗಳ ಹಿಂದೆ ಸಮಾಜದ ಕೆಳಸ್ತರದಲ್ಲಿರುವ ಜನಸಮುದಾಯಗಳನ್ನು ದಂಗೆ ಏಳಲು ಪ್ರಚೋದಿಸಿದ್ದರು ಎಂಬ ಆರೋಪ ಹೊತ್ತಿರುವ ಈ ವೃದ್ಧ ಸಾಮಾಜಿಕ ಕಾರ್ಯಕರ್ತರೊಡನೆ ಇನ್ನೂ ಹತ್ತು ಜನರ ಮೇಲೆ ಆರೋಪ ಹೊರಿಸಲಾಗಿದ್ದು ಮುಂಬೈನಲ್ಲಿ ವಿಚಾರಣೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯ ಚುನಾವಣಾ ಪ್ರಚಾರದ ರೂವಾರಿ, ದೇಶದ ಗೃಹಸಚಿವ ಅಮಿತ್ ಶಾ ಅವರಿಗೆ ದೇಶದ ನಾಡಿಮಿಡಿತವನ್ನು ಗ್ರಹಿಸುವುದರಲ್ಲಿ ಅಪಾರ ಚಾಣಾಕ್ಷತೆ ಇದ್ದರೂ, ಅವರಿಗೂ ಆತ್ಮನಿರ್ಭರತೆಯ ಸೋಂಕು ತಗುಲಿದೆ. ಇತ್ತೀಚಿನ ಚುನಾವಣಾ ರ‍್ಯಾಲಿಯೊಂದರಲ್ಲಿ ಅಪರೂಪ ಎನ್ನುವಂತೆ ಅಮಿತ್ ಶಾ, ಕೋವಿದ್ 19 ನಿರ್ವಹಣೆಯಲ್ಲಿ ಸರ್ಕಾರ ಎಡವಿರಬಹುದು ಎಂದು ಹೇಳಿದ್ದಾರೆ. ಆದರೆ ತಾವು ಕಳೆದ ಆರು ವರ್ಷಗಳಿಂದ ವಿರೋಧ ಪಕ್ಷವೇ ಇಲ್ಲದಂತೆ ಬಹುಮತ ಪಡೆದು ಪ್ರಬಲ ಆಡಳಿತ ನಡೆಸಿಕೊಂಡು ಬಂದಿರುವುದನ್ನೂ ಮರೆತಂತೆ, “ನಾನು ವಿರೋಧ ಪಕ್ಷಗಳನ್ನು ಒಂದು ಪ್ರಶ್ನೆ ಕೇಳಬೇಕೆಂದಿದ್ದೇನೆ, ನೀವೇನು ಮಾಡಿದ್ದೀರಿ?” ಎಂದು ಹೇಳಿದ್ದಾರೆ.

 

ಮೂಲ: ದ ಎಕಾನಮಿಸ್ಟ್  ಅನುವಾದ: ನಾ ದಿವಾಕರ

Leave a Reply

Your email address will not be published.