ಕೋವಿದ್ ಸಂದರ್ಭದಲ್ಲಿ ಸಿಖ್ ಸಮುದಾಯದ ಸೇವಾ ಮನೋಭಾವ

ಸಿಖ್ ಧರ್ಮದಲ್ಲಿ ಜನಸೇವೆಯಲ್ಲಿ ತೊಡಗುವವರು ಸನ್ಯಾಸಿಗಳಲ್ಲ, ಮಹಾ ಸಂತರೂ ಅಲ್ಲ; ಆದರೆ ಜನಸಾಮಾನ್ಯರ ನಡುವೆ ಬದುಕುವ ಶ್ರೀಸಾಮಾನ್ಯರೇ ಸೇವೆಯಲ್ಲಿ ತೊಡಗಿರುತ್ತಾರೆ. ಗುರುವಿನ ಸೇವೆ ಸಲ್ಲಿಸುವುದಕ್ಕಾಗಿ ಸಿಖ್ ಧರ್ಮದಲ್ಲಿ ವಿಶೇಷ ಸ್ಥಾನಮಾನಗಳೇನೂ ಇರುವುದಿಲ್ಲ. ಸಾಮಾನ್ಯ ಜನರಿಗೆ, ಅನ್ಯ ಧರ್ಮದವರಿಗೂ ಸಹ ಸಲ್ಲಿಸುವ ಸೇವೆಯ ಉನ್ನತ ಹಂತವನ್ನು ಗುರುಸೇವೆಯಲ್ಲಿ ಕಾಣಲಾಗುತ್ತದೆ.

-ದೀಪಂಕರ್ ಗುಪ್ತಾ

ಅನುವಾದ: ನಾ.ದಿವಾಕರ

ಸಿಖ್ಖರನ್ನು ನೆನೆದ ಕೂಡಲೇ ನಮಗೆ ನೆನಪಾಗುವುದು ಹಾಸ್ಯದ ಹೊನಲಿನ ಕ್ಷಣಗಳು, ಎದೆಯ ಮೇಲೆ ಮಿಂಚುವ ಶೌರ್ಯ ಪದಕಗಳು ಅಥವಾ ಒಂದು ಬಾರ್. ಇಲ್ಲೊಂದು ಹಳೆಯ ಜೋಕ್ ನೆನಪಾಗುತ್ತದೆ. ನೀಲ್ ಆಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿರಿಸುವ ಮುನ್ನ ತಾನೇ ಪ್ರಥಮ ಮನುಷ್ಯ ಎಂದು ಭಾವಿಸಿರುತ್ತಾನೆ. ಆದರೆ ಅಲ್ಲೊಬ್ಬ ಸಿಖ್ ಟ್ಯಾಕ್ಸಿ ಚಾಲಕ ಅವನಿಗಾಗಿ ಕಾಯುತ್ತಿರುತ್ತಾನೆ. ಇದು ನಮಗೆ ಸಾಮಾನ್ಯವಾಗಿ ಸ್ಮರಣೆಗೆ ಬರುವ ಸಿಖ್ಖರ ಕುರಿತ ಚಿತ್ರಣ.

ಆದರೆ ಈಗಿನ ಪರಿಸ್ಥಿತಿಯನ್ನೊಮ್ಮೆ ನೋಡೋಣ. ಕೋವಿದ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಿಖ್ಖರ ಬಗ್ಗೆ ಇದ್ದ ಸಾರ್ವತ್ರಿಕ ಚಿತ್ರಣ ಬದಲಾಗಿದೆ. ಭಾರತದಲ್ಲಿ ಮಾತ್ರವೇ ಅಲ್ಲ ಜಗತ್ತಿನಾದ್ಯಂತ ಸಿಖ್ಖರನ್ನು ವಿಭಿನ್ನವಾಗಿ ಬಿಂಬಿಸಲಾಗುತ್ತಿದೆ. ಈ ಸಂಕಷ್ಟದ ಕಾಲದಲ್ಲಿ ತಮಗೆ ನೆರವಾದ ಸಿಖ್ಖರನ್ನು ಕ್ರೋಷಿಯಾ ಮತ್ತು ಸಿರಿಯಾ ದೇಶದ ನಾಗರಿಕರೂ ಸಹ ಸ್ಮರಿಸುತ್ತಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಸಿಖ್ಖರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿ, ನ್ಯೂಯಾರ್ಕ್ ನಗರದ 101 ರಸ್ತೆಯನ್ನು ಪಂಜಾಬ್ ಅವೆನ್ಯೂ ಎಂದು ಮರುನಾಮಕರಣ ಮಾಡಲಾಗಿದೆ.

ಇತ್ತ ಭಾರತದಲ್ಲಿ ಕೋವಿದ್ ಸಾಂಕ್ರಾಮಿಕವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಿಖ್ ಸಂಘಟನೆಗಳು, ಸಂಸ್ಥೆಗಳು ಸಲ್ಲಿಸುತ್ತಿರುವ ನೆರವು ಮತ್ತು ಸೇವೆಯನ್ನು ಮಾಧ್ಯಮಗಳಲ್ಲಿ ಮುಕ್ತಕಂಠದಿಂದ ಪ್ರಶಂಸಿಸಲಾಗುತ್ತಿದೆ. ಆಕ್ಸಿಜನ್ ಪೂರೈಕೆ, ಆಂಬುಲೆನ್ಸ್ ಸೇವೆ, ಬಡ ಜನತೆಗೆ ಆಹಾರ ಒದಗಿಸುವುದು ಹೀಗೆ ಎಲ್ಲೆಡೆಯೂ ಸಿಖ್ಖರು ನೆರವಾಗುತ್ತಿದ್ದು ಮುಂಚೂಣಿಯಲ್ಲಿ ಕಾಣುತ್ತಿದ್ದಾರೆ. ಸಂಬಂಧಿಕರು ಕೋವಿದ್ ಪೀಡಿತ ಮೃತ ವ್ಯಕ್ತಿಯ ದೇಹವನ್ನು ನಿರ್ಲಕ್ಷಿಸಿದರೆ ಸಿಖ್ ಸ್ವಯಂ ಸೇವಕ ಯುವಕರು ಸ್ವ ಪ್ರೇರಣೆಯಿಂದ, ಯಾವುದೇ ಮುಜುಗರ ಇಲ್ಲದೆ ಅಂತ್ಯ ಸಂಸ್ಕಾರ ಮಾಡಿರುವ ಪ್ರಕರಣಗಳೂ ಹೇರಳವಾಗಿವೆ.

ಸಿಖ್ಖರ ಈ ಸೇವಾನಿರತ ಮನೋಭಾವಕ್ಕೆ ವಿಶೇಷ ಕಾರಣವೂ ಇದೆ. ಇದಕ್ಕೆ ಸಿಖ್ ಧರ್ಮದಲ್ಲೇ ಉತ್ತರ ಸಿಗುತ್ತದೆ. ಇತರ ಎಲ್ಲ ಮತಧರ್ಮಗಳಂತೆಯೇ ಸಿಖ್ ಧರ್ಮ ಸಹ ವಿಶ್ವಮಾನವತೆಯನ್ನು ಪ್ರತಿಪಾದಿಸುತ್ತದೆ. ಇಡೀ ಮನುಕುಲವನ್ನು ಪ್ರೀತಿಸಲು ಬೋಧಿಸುತ್ತದೆ. ಅನುಕಂಪದಿಂದ ಜನಸೇವೆ ಮಾಡಲು ಪ್ರೇರಣೆ ನೀಡುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ, ಮತ್ತಾವುದೇ ಧರ್ಮದಲ್ಲಿ ಕಾಣದಂತಹ ಒಂದು ಅಂಶವನ್ನು ಸಿಖ್ ಧರ್ಮದಲ್ಲಿ ಕಾಣಲು ಸಾಧ್ಯ. ಇದು ಸಿಖ್ ಧರ್ಮದ ಮೂಲ ತತ್ವಗಳಲ್ಲೇ ಅಡಗಿದೆ. ಸಿಖ್ ದೇವಾಲಯಗಳ ಆವರಣದಲ್ಲಿ ಭಕ್ತಿಯಿಂದ ಸೇವೆ ಸಲ್ಲಿಸುವುದರಲ್ಲಿ ನಿರತರಾಗಿರುವ ಶ್ರೀಸಾಮಾನ್ಯರಿಗೆ ಸೇವೆ ಸಲ್ಲಿಸುವುದೇ ಒಂದು ಭಕ್ತಿಪೂರ್ವಕ ಕಾಯಕವಾಗಿರುತ್ತದೆ. ಇದನ್ನು ಪ್ರತಿಯೊಬ್ಬ ಸಿಖ್ ವ್ಯಕ್ತಿಯೂ ಅನುಸರಿಸುತ್ತಾನೆ.

ಇತರ ಮತಧರ್ಮಗಳಲ್ಲೂ ಸಂತರು, ನೋವು ನಿವಾರಕರು, ಬೋಧಕರು ಹೇರಳವಾಗಿದ್ದಾರೆ. ಆದರೆ ಸಿಖ್ ಧರ್ಮದ ವಿಶೇಷ ಎಂದರೆ ಇಲ್ಲಿ ಪುರೋಹಿತರು, ದೇವರ ಸೇವೆಯಲ್ಲಿ ತೊಡಗಿರುವವರು, ನಿತ್ಯ ಪೂಜಾ ಕಾಯಕದಲ್ಲಿ ತೊಡಗಿರುವವರು, ಸಂತರು ಈ ಎಲ್ಲ ವರ್ಗಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯವನ್ನು ಶ್ರೀಸಾಮಾನ್ಯನು ಪಡೆಯುತ್ತಾನೆ. ಶ್ರೀಸಾಮಾನ್ಯನೇ ಸಿಖ್ ಧರ್ಮದ ಮೂಲ ತತ್ವಗಳನ್ನು, ಆಶಯಗಳನ್ನು ಸಾಕಾರಗೊಳಿಸುವ ಜವಾಬ್ದಾರಿಯನ್ನೂ ಹೊತ್ತಿರುತ್ತಾನೆ. ಇತರರಿಗೆ ನೆರವು ನೀಡುವ ಮೂಲಕ, ಸೇವೆ ಮಾಡುವ ಮೂಲಕ ಪ್ರತಿಯೊಬ್ಬ ಸಿಖ್ಖನೂ ಸಿಖ್ ಧರ್ಮವನ್ನು ಎತ್ತಿಹಿಡಿಯುತ್ತಾರೆ.

ದೇವಾಲಯದ ಬಾಗಿಲ ಬಳಿ ಜನರ ಚಪ್ಪಲಿ, ಬೂಟುಗಳನ್ನು ತೆಗೆದಿಡುವುದು, ದೇವಾಲಯದ ನೆಲವನ್ನು ಗುಡಿಸಿ ಸ್ವಚ್ಛಗೊಳಿಸುವುದು, ಲಂಗಾರ್ ಎಂದು ಹೇಳಲಾಗುವ ಅಡುಗೆ ಮನೆಯಲ್ಲಿ ಎಷ್ಟೇ ಕಾವು ಇದ್ದರೂ ಅಲ್ಲಿಯೇ ಇದ್ದು ಕಾರ್ಯ ನಿರ್ವಹಿಸುವುದು ಇವೆಲ್ಲವೂ ಸೇವೆಯ ಒಂದು ಭಾಗವಾಗಿಯೇ ಇರುತ್ತದೆ.  ದಿನನಿತ್ಯದ ಚಟುವಟಿಕೆಗಳಾಗಿ ಸಿಖ್ಖರು ಈ ಕಾಯಕಗಳಲ್ಲಿ ತೊಡಗುವುದರಿಂದಲೇ ಗುರುದ್ವಾರ ಇಲ್ಲದ ಜಾಗಗಳಲ್ಲೂ ಸಹ ಸಿಖ್ ಸಮುದಾಯದವರು ಜನಸೇವೆಯಲ್ಲಿ ನಿರತರಾಗಿರುತ್ತಾರೆ. ಸೇವೆ ಮತ್ತು ನೆರವು ಅವರ ಜೀವನದ ಒಂದು ಭಾಗವಾಗಿರುತ್ತದೆ. ಈ ಸೇವೆಗಳನ್ನೂ ಸಿಖ್ಖರು ಕರಸೇವೆ ಎಂದೇ ಭಾವಿಸುತ್ತಾರೆ. ಅಂದರೆ ದೇವರ ಆವಾಸ ಸ್ಥಾನಕ್ಕೆ ಸಲ್ಲಿಸುವ ಸೇವೆ ಎಂದರ್ಥ. ದೇವರು ಎಲ್ಲೆಡೆ ಇದ್ದಾನೆ ಎಂಬ ನಂಬಿಕೆಯೇ ಈ ಸೇವೆಯ ಮೂಲ ಉದ್ದೇಶ.

ಸಿಖ್ ಧರ್ಮದಲ್ಲಿ ಜನಸೇವೆಯಲ್ಲಿ ತೊಡಗುವವರು ಸನ್ಯಾಸಿಗಳಲ್ಲ, ಮಹಾ ಸಂತರೂ ಅಲ್ಲ; ಆದರೆ ಜನಸಾಮಾನ್ಯರ ನಡುವೆ ಬದುಕುವ ಶ್ರೀಸಾಮಾನ್ಯರೇ ಈ ಸೇವೆಯಲ್ಲಿ ತೊಡಗಿರುತ್ತಾರೆ. ಗುರುವಿನ ಸೇವೆ ಸಲ್ಲಿಸುವುದಕ್ಕಾಗಿ ಸಿಖ್ ಧರ್ಮದಲ್ಲಿ ವಿಶೇಷ ಸ್ಥಾನಮಾನಗಳೇನೂ ಇರುವುದಿಲ್ಲ. ಸಾಮಾನ್ಯ ಜನರಿಗೆ, ಅನ್ಯ ಧರ್ಮದವರಿಗೂ ಸಹ ಸಲ್ಲಿಸುವ ಸೇವೆಯ ಉನ್ನತ ಹಂತವನ್ನು ಗುರುಸೇವೆಯಲ್ಲಿ ಕಾಣಲಾಗುತ್ತದೆ. ಸಿಖ್ ಗುರುದ್ವಾರಗಳು ಕನ್ನಡಿಯಂತೆ ಸ್ವಚ್ಛವಾಗಿ ಹೊಳೆಯುತ್ತಿದ್ದರೆ, ಅಲ್ಲಿ ಎಲ್ಲರಿಗೂ ಆಶ್ರಯ ದೊರೆಯುವುದಾದರೆ ಇದಕ್ಕೆ ಕಾರಣ ಭಕ್ತಾದಿಗಳು ದೇವಾಲಯದಲ್ಲಿ ಸ್ಪಪ್ರೇರಣೆಯಿಂದಲೇ ಸಲ್ಲಿಸುವ ಸೇವೆ. ಈ ಸೇವಾ ಕಾರ್ಯವನ್ನು ತಮ್ಮ ದೈನಂದಿನ ಕಾಯಕದಂತೆ ನಿರ್ವಹಿಸುತ್ತಾರೆಯೇ ಹೊರತು ವಿಶೇಷ ಕೆಲಸ ಎಂದೇನಲ್ಲ.

ಈ ರೀತಿಯ ಸೇವೆ ಸಲ್ಲಿಸಲು ಸಿಖ್ಖರಿಗೆ ಯಾವುದೇ ಗ್ರಂಥಿ ಅಥವಾ ಪುರೋಹಿತ ಅಥವಾ ರಾಗಿ ಎನ್ನಲಾಗುವ ಉನ್ನತ ವ್ಯಕ್ತಿಗಳ ಅವಶ್ಯಕತೆಯೇ ಇರುವುದಿಲ್ಲ. ಸಿಖ್ ಸಮುದಾಯವು, ಸಂಗತ್ ಎಂದು ಗುರುತಿಸಲಾಗುವ ಜನಸಮೂಹವು, ಒಟ್ಟಾಗಿ ಪ್ರಾರ್ಥಿಸುವಂತೆಯೇ ಒಟ್ಟಾಗಿ ಸೇವೆಯನ್ನೂ ಸಲ್ಲಿಸುತ್ತಾರೆ. ಈ ವಿಶೇಷ ಸೇವೆಗಳಿಗೆ ಯಾವುದೇ ಹಬ್ಬ ಹರಿದಿನಗಳು ಅಥವಾ ನಭೋ ಮಂಡಲದಲ್ಲಿ ಸಂಭವಿಸುವ ವಿದ್ಯಮಾನಗಳು ಕಾರಣ ಆಗಬೇಕಿಲ್ಲ. ಸೇವೆ ಎನ್ನುವುದು ನಿತ್ಯ ಕಾಯಕವಾಗಿರುತ್ತದೆ. ಈ ಸೇವೆ ಇಲ್ಲದೆ ಹೋದರೆ ಸಿಖ್ಖರ ನಿತ್ಯ ಪ್ರಾರ್ಥನಾ ವಿಧಿವಿಧಾನಗಳು ಅಪೂರ್ಣವಾಗಿಯೇ ಉಳಿದುಬಿಡುತ್ತವೆ.

ಸಿಖ್ ಧರ್ಮದಲ್ಲಿ ದಾನ ಮಾಡುವುದು ಒಂದು ವಿಶೇಷ ಗುಣವೇನಲ್ಲ. ಇತರರಿಗ ನೆರವಾಗಲು ಸಿಖ್ಖರು ಮುಂದಾದಾಗ ಅದನ್ನು ಔದಾರ್ಯ ಅಥವಾ ದಾನ ಎಂದು ಭಾವಿಸುವುದಿಲ್ಲ, ಸೇವೆ ಎಂದಷ್ಟೇ ಭಾವಿಸುತ್ತಾರೆ. ಇತರ ಧರ್ಮಗಳಲ್ಲಿರುವಂತೆ ದಯೆ, ಔದಾರ್ಯ ಮತ್ತು ಸೇವೆ ಸಿಖ್ಖರಲ್ಲಿ ವಿಶೇಷತೆಯನ್ನೇನೂ ಹೊಂದಿರುವುದಿಲ್ಲ. ಭಿಕ್ಷೆ ನೀಡುವುದೂ ಸಹ ನಿತ್ಯ ಕಾಯಕದಂತೆಯೇ ಭಾವಿಸಲಾಗುತ್ತದೆ. ಮನೆಯಲ್ಲೇ ಸೇವಾ ಕಾಯಕ ಆರಂಭವಾದಾಗ ದಯೆ ಮತ್ತು ಔದಾರ್ಯದ ದಾನವೂ ಸಹ ಸಹಜ ಕ್ರಿಯೆ ಆಗಿಬಿಡುತ್ತದೆ. ಸಿಖ್ಖರಲ್ಲಿ ಕಾಣುವ ಈ ಉದಾತ್ತ ವಿಶಿಷ್ಟ ಲಕ್ಷಣವೇ ಅವರನ್ನು ಸಂಕಷ್ಟದ ಸಂದರ್ಭಗಳಲ್ಲಿ ಎದ್ದುಕಾಣುವಂತೆ ಮಾಡುತ್ತವೆ.

ಸಿಖ್ಖರು ಮಹಾ ಧೈರ್ಯವಂತರು ಎನ್ನುವುದು, ಧೈರ್ಯ ಮತ್ತು ದಿಟ್ಟತನ ನಿಗೂಢ ಅನುವಂಶಿಕವಾಗಿ ಬಂದಿರುವ ಗುಣ ಎಂದು ಹೇಳಲಾಗುತ್ತದೆ. ಆದರೆ ಅವರು ಯುದ್ಧದ ಸಂದರ್ಭದಲ್ಲಿ ಮತ್ತಾವುದೇ ಸಾಂಕ್ರಾಮಿಕದ ಸಂದರ್ಭದಲ್ಲಿ, ವಿಪತ್ತಿನ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿ ಸೇವಾ ನಿರತರಾಗಲು ಈ ಅನುವಂಶೀಯ ಗುಣಗಳಷ್ಟೇ ಕಾರಣ ಅಲ್ಲ. ಇದು ಅವರ ಸೇವಾ ಮನೋಭಾವದ ಪ್ರತೀಕ. ಗೋರ್ಖಾ, ರಜಪೂತ ಸಮುದಾಯಗಳಲ್ಲೂ ಧೈರ್ಯ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆಯಾದರೂ ಸಿಖ್ಖರ ಧೈರ್ಯ ಪ್ರಧಾನವಾಗಿ ಕಾಣುತ್ತದೆ. ಏಕೆಂದರೆ ಸಿಖ್ಖರಲ್ಲಿ ಸೇವೆ ಪ್ರಥಮ ಆದ್ಯತೆ ಪಡೆಯುತ್ತದೆ. ಹೊರಜಗತ್ತಿನಲ್ಲಿ ಸಿಖ್ ವ್ಯಕ್ತಿಯೊಬ್ಬ ರ್ಯಾಂಬೋ ರೀತಿಯ ದೃಢಕಾಯನಾಗಿರಬಹುದು ಆದರೆ ಅಂತಹ ವ್ಯಕ್ತಿ ಗುರುದ್ವಾರಕ್ಕೆ ಬಂದರೆ ಶಿಸ್ತಿನ ಭಕ್ತನಾಗಿಬಿಡುತ್ತಾನೆ. ಸೇವೆಯಲ್ಲಿ ತೊಡಗುತ್ತಾನೆ.

ಗುರುದ್ವಾರದಲ್ಲೂ ಸಹ ಸಿಖ್ಖರು ಪವಿತ್ರ ಗ್ರಂಥದ ಮುಂದೆ ಸಲ್ಲಿಸುವ ಕಾಣಿಕೆ, ಇತರ ಧರ್ಮಗಳಲ್ಲಿರುವಂತೆ ವಿಶೇಷ ಲಕ್ಷಣಗಳನ್ನೇನೂ ಹೊಂದಿರುವುದಿಲ್ಲ. ಸದ್ದಿಲ್ಲದೆ ಹುಂಡಿಯಲ್ಲಿ ಹಣವನ್ನು ಹಾಕಿ ತಮ್ಮ ಸೇವೆಯಲ್ಲಿ ನಿರತರಾಗುತ್ತಾರೆ. ಯಾರು ಎಷ್ಟು ಹಣ ಕಾಣಿಕೆ ಸಲ್ಲಿಸಿದ್ದಾರೆ ಎಂದು ಎಲ್ಲಿಯೂ ದಾಖಲಾಗುವುದಿಲ್ಲ, ರಸೀದಿ ಪಡೆಯುವ ಪದ್ಧತಿಯೂ ಇರುವುದಿಲ್ಲ. ಲೌಡ್ ಸ್ಪೀಕರ್ ಮೂಲಕ ಕಾಣಿಕೆ ಕೊಟ್ಟವರ ಹೆಸರನ್ನು ಘೋಷಿಸುವ ಪದ್ಧತಿಯೂ ಇರುವುದಿಲ್ಲ. ಹಾಗಾಗಿ ಈ ಕಾಣಿಕೆ ಸಲ್ಲಿಸುವ ಕಾಯಕವೂ ಸಹ ಒಂದು ಜನಸೇವೆಯಾಗಿಯೇ ಕಾಣುತ್ತದೆ. ಮಂಟಪದಲ್ಲಿರುವ ಪವಿತ್ರ ಗ್ರಂಥವನ್ನು ಸಮೀಪಿಸುತ್ತಿರುವಂತೆ ಬಡವ ಶ್ರೀಮಂತರೆಲ್ಲರೂ ಒಂದೇ ಆಗಿಬಿಡುತ್ತಾರೆ.

ಸೇವೆ ಮತ್ತು ಆಚರಣೆಗಳ ಈ ಕೇಂದ್ರೀಕರಣದಿಂದಲೇ ಸಿಖ್ ಧರ್ಮವು ಇತರ ಧರ್ಮಗಳಿಗಿಂತಲೂ ವಿಭಿನ್ನವಾಗಿ ಕಾಣುತ್ತದೆ. ಇದೇ ಸಿಖ್ ಧರ್ಮದ ವಿಶಿಷ್ಟ ಲಕ್ಷಣವೂ ಆಗಿದೆ. ಸಿಖ್ ಸಮುದಾಯದವರು ದೇವಾಲಯಗಳಲ್ಲಿ, ದೇವಸ್ಥಾನದ ಸಮಿತಿಗಳಲ್ಲಿ, ಹೊರಜಗತ್ತಿನಲ್ಲಿ ತಮ್ಮ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸಲು ಮುಂದಾಗುವ ಪ್ರವೃತ್ತಿಯನ್ನು ತೋರುತ್ತಿದ್ದರೆ ಅದಕ್ಕೆ ಕಾರಣ ಸಿಖ್ ಧರ್ಮದ ಈ ನಿಯಮಗಳಲ್ಲೇ ಅಡಗಿದೆ. ಇತರರು ಬೆನ್ನು ತಿರುಗಿಸಿ ಹೋಗುತ್ತಿರುವ ಸಂದರ್ಭದಲ್ಲೂ ಅನಾಥ ರೋಗಗ್ರಸ್ತರನ್ನು, ರೋಗ ಪೀಡಿತರನ್ನು ಪಾಲನೆ ಮಾಡುವ ಸಿಖ್ಖರ ಈ ಗುಣಗಳು ವಿಶಿಷ್ಟ ಎನಿಸುತ್ತವೆ. ಯಾರೂ ನೆರವಿಗೆ ಮುಂದಾಗುತ್ತಿಲ್ಲ ಎನ್ನುವ ಸಂದರ್ಭದಲ್ಲೂ ಒಬ್ಬ ಸಿಖ್ ವ್ಯಕ್ತಿ ಸೇವೆಗೆ ಮುಂದಾಗಿರುತ್ತಾನೆ. ಹಾಗಾಗಿಯೇ ಸೇವೆಯನ್ನು ಸಲ್ಲಿಸುವ ಸಿಖ್ಖನೇ ಕೋಟಿ ರೂಗಳಿಗೆ ಸಮ ಎಂಬ ಗಾದೆ ಮಾತು ಸಹ ಕೇಳಿಬರುತ್ತದೆ.

*ಲೇಖಕರು ದೆಹಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಸಮಾಜ ವಿಜ್ಞಾನ ಬೋಧಕರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

Leave a Reply

Your email address will not be published.