ಕೌತುಕಗಳ ಕಣಜ

ನಿನಗೆ ಲಾಭ ಬರದಿದ್ದರೂ ನನ್ನಿಂದ ಲಾಸ್ ಆಯ್ತು ಅನ್ನೋ ಮಾತು ಬ್ಯಾಡ ಅನ್ನೋರೆ ಜಾಸ್ತಿ ನಮ್ಮ ಹಳ್ಳೀಲಿ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಪೂರೀಗಾಲಿ ನನ್ನ ಊರು. ಊರ ಮುಂದೆ ಗೌತಮ ಬುದ್ಧನನ್ನು ನೆನೆಸುವ ದೊಡ್ಡ ಅರಳಿಮರವಿದೆ. ಯಾವ ಕಾಲದ್ದೋ, ಯಾರು ನೆಟ್ಟಿದ್ದೋ. ಭೀಷ್ಮನ ಛಾಯೆ ಆ ಮರಕ್ಕಿದೆ. ಅಲ್ಲೇ ಬದಿಗೆ ಸುತ್ತಮುತ್ತಲು ಗಡ್ಡ ಬಿಟ್ಟುಕೊಂಡು ಧ್ಯಾನಸ್ಥನಾಗಿರುವ ಮುನಿದೇವರ ಮರವೂ ಉಂಟು. ಊರಿನ ಮೊಗಸಾಲೆಯ ಬಯಲಿಗೊಂದು ದೊಡ್ಡ ಕೆರೆ. ಅಲ್ಲೇ ಊರಿಗೆ ಬೇಕಾದ ನೀರೆತ್ತುವ ಬಾವಿ, ಜತೆಗೆ ಕರೆಂಟು ಮನೆ. ವಿಶಾಲವಾದ ಆಲ, ಗೊಬ್ಬಳ್ಳಿ, ಸುರಗಿ, ಸಂಪಗಿ, ಬಸರಿ, ತೆಂಗು, ಮಾವಿನಮರದ ತೋಪುಗಳೇ ಹಳ್ಳಿಯ ಪ್ರೀತಿಯ ಹೆಜ್ಜೆಸಾಲು!

ಆಹ್ಞಾ! ನಮ್ಮೂರಿನ ಒಂದು ಅರಳೀಮರ ವಯಸ್ಸಾಗಿ ಬಿದ್ದೋದಾಗ ನಾವು ನಮ್ಮ ಅಜ್ಜಅಜ್ಜಿ ಸತ್ತ್ಹೋದ ಹಾಗೇನೇ ನೊಂದುಕೊಳ್ತೀವಿ. ನಮ್ಮರಲ್ಲಿರೋ ಆ ಭಿಕ್ಷುಕ ಸತ್ತುಹೋದಾಗ ನಾವು ನಮ್ಮನ್ನು ಕಳ್ಕೊಂಡಾಗೆ ಅಳ್ತೀವಿ. ಇದೇ ಕಣ್ರಿ ಹಳ್ಳಿಪ್ರೀತಿ. ನೂರು ದೇವರ ನೆನೆದರೂ ಸಿಕ್ಕೋಲ್ಲ ಹಳ್ಳಿ ಪ್ರೀತಿ. ನಮ್ಮೂರು ಹಾಗೇನೆ.

ಆ ಅನ್ನ ಕೊಡೋ ಹೊಲ, ಗದ್ದೆ, ತೋಟಗಳು. ವಿಭೂತಿ ಹಚ್ಕೊಂಡು ಉಳೋಕೆ ಏರು ಕಟ್ಟೋ ರೈತ, ಕೆರೆನೀರು ತರೋ ಆ ಚೆಲ್ವಿಯರು, ಆ ಹಾಡು, ಕುಣಿತ, ಹಬ್ಬ, ತೇರುಗಳು ತಾಳೆಗೆ ಎಲ್ಲೂ ಸಿಕ್ಕೋಲ್ಲ. ಇದೇ ಅಲ್ವೇನ್ರ್ರಿ `ಹಳ್ಳಿ ಪ್ರೀತಿ’ ಅನ್ನೋದು. ಎಷ್ಟೋ ವರ್ಷಗಳು, ಎಷ್ಟೇ ಶತಮಾನಗಳು ಕಳೆದರೂ ಆ ರಾಗಿ ಬೀಸೋ ಕಲ್ಲು, ಕಳದಲ್ಲಿ ಅಡ್ಡೆ ಹೊಡೆಯೋ ಕಲ್ಲು. ಗಂಡಾಳುಗಳು ತೋಳು ಕಟ್ಟೋ ಆ ಎತ್ತು ಕಲ್ಲುಗಳು ಯಾವತ್ತೂ ಮರೆಯೋ ಹಾಗಿಲ್ಲ. ನನ್ನೂರಿನ ಬಸಪ್ಪನ ಗುಡಿ ಮುಂದೆ ಅಂತಹ ಹತ್ತಾರು ಕಲ್ಲುಗಳು ಈಗಲೂ ಬಿದ್ದಾವೆ.

ನಮ್ಮ ದೇವ್ರು, ನಮ್ಮ ಆಚಾರ, ವಿಚಾರ, ನಮ್ಮ ನಾಟಕದ ಮುಂದೆ ನಿಮ್ಮ ನಾಟ್ಕ ಏನೈತೆ ತೆಗೀರಿ ಅನ್ನೋರೆ ಹೆಚ್ಚು ಹಳ್ಳೀಲಿ.

ನಮ್ಮ ನೇಗಿಲು ನಮ್ ದ್ಯಾವ್ರು. ಬರಿಕಾಲಲ್ಲಿ ಹೊಲಗದ್ದೆ ತುಳಿದು ಕೊನೇಲಿ ಮಣ್ಣನ್ನು ಕಣ್ಣಿಗೆ ಒತ್ತಿಕೊಳ್ಳೋ ಜನ ನಮ್ಮವರು. ಸೂರು ಅಂದ್ರೆ ಸೂಲು ಅಂತ. ಆ ಮನೆ ಸೂರು ಹೋಯ್ತು ಅಂದ್ರೆ ಮಾತು ಸರಿಯಾಗ್ಲಿಲ್ಲಾ ಅಂತಾನೆ. ಹೃದಯ ಹೃದಯಗಳು ಗೆಲ್ಲೋ ಮಾತು ಹಳ್ಳಿಯ ಕತೆಗಳು. ನಾವು ಕ್ಷೇಮ ನಿಮ್ಮ ಕ್ಷೇಮಕ್ಕೆ ಕಾಗದ ಬರೀರಿ ಅನ್ನೋ ಮಾತಲ್ಲ. ನಾವೂ ಕ್ಷೇಮ, ನೀವೂ ಕ್ಷೇಮಾನ ಅನ್ನೋದೇ ತೀರ್ಮಾನ. ಒಂದ್ ಕಿತ್ತ ನನಗೆ ವಸಿ ಕಮ್ಮಿ ಇಲ್ಲಿ. ನಿಂಗೆ ಕಡಿಮೆ ಮಾಡ್ಕೋಬ್ಯಾಡ. ನಿನಗೆ ಲಾಭ ಬರದಿದ್ದರೂ ನನ್ನಿಂದ ಲಾಸ್ ಆಯ್ತು ಅನ್ನೋ ಮಾತು ಬ್ಯಾಡ ಅನ್ನೋರೆ ಜಾಸ್ತಿ ನಮ್ಮ ಹಳ್ಳೀಲಿ.

ನನ್ನೂರ ಹಳ್ಳಿಪ್ರೀತಿಯೇ ಅಂತದ್ದು. ಇಲ್ಲಿ ಮಾತು ಅಂದರೆ ಕೇವಲ ಸಂಭಾಷಣೆಯಲ್ಲ. ಹಾಗಾಗಿ ಹಳ್ಳಿಗರ ಮಾತೆಂದರೆ ಅದು ಒಂಥರದಲ್ಲಿ ಭಾಷೆ ಕೊಟ್ಟಂತೆ. `ದೇವರ ಮುಂದೆ ಪ್ರಮಾಣ ಮಾಡು’ ಅನ್ನೋ ಗಟ್ಟಿ ಮಾತು ಬಂದಿದ್ದೇ ಹಳ್ಳಿಯಿಂದ. ಇಲ್ಲಿ ಇನ್ನಾವ ನ್ಯಾಯಾಧೀಶ, ನ್ಯಾಯಾಲಯವೂ ಬೇಕಿಲ್ಲ ಅನ್ನೋ ನಿಲುವು ಹಳ್ಳಿ ಭಾಷೆಯದ್ದು. ಹೀಗಾಗಿಯೇ ದೇಶದ ಪ್ರತಿಯೊಂದು ಹಳ್ಳಿಯಲ್ಲೂ `ಅನ್ನ ತಿನ್ನೋ ಬಾಯಲ್ಲಿ ಒಳ್ಳೆಯ ಮಾತಾಡು’ ಅನ್ನೋ ವ್ಯಾಖ್ಯಾನವಿದೆ.

ಆ ಮಾತುಕತೆ, ಆ ನಡೆನುಡಿ, ಬದುಕು, ಬವಣೆ, ಹಾಡುಪಾಡು, ಎಲ್ಲವೂ ಪ್ರಕೃತಿ ಪರ. `ಹೊತ್ತಾರೆ’ ಹುಟ್ಟಿ ಮುಸ್ಸಂಜೆ ಆಗೋ ಹಂಗೆ ಹಳ್ಳಿಗರ ಬದುಕು ಕೂಡ. ಭೂತಾಕಾರವಾಗಿ ನಿಲ್ಲೋ ಯಾವುದೇ ಒಂದು ಸಮಸ್ಯೆ ಇಲ್ಲಿ `ಚಿಟಿಕೆ’ ಹೊಡಿಯೋ ರೀತಿ `ಬುಳುಬುಳು’ ಅಂತ ನೀರು ಹರಿದು ಹೋದಂಗೆ ಹೊಂಟೈತುದೆ. ಕಾಲ ಘಟ್ಟದ ಅಲ್ಲಲ್ಲಿ ಚಿನಕುರುಳಿ ಪಟಾಕಿ ಹೊಡೆದಂತೆ ಒಂದಿಷ್ಟು ದೇವರ ಹೆಸರಲ್ಲಿ, ಕೇರಿ ಕೇರಿ ಹೆಸರಲ್ಲಿ, ಮಾಂಸ ತಿನ್ನೋ ವಿಚಾರದಲ್ಲಿ, ಹೆಣ್ಣು ಮಕ್ಕಳ ವಿಚಾರದಲ್ಲಿ ಸಣ್ಣ ಪುಟ್ಟ ಗಲಾಟೆಗಳು ನಡೆದಿರುವುದನ್ನು ಲೆಕ್ಕಕ್ಕೆ ಪರಿಗಣಿಸಲಾಗದು. ಒಂದಷ್ಟು ಕಾಲ ಜಾತಿ ವಿಚಾರದಲ್ಲಿ `ಜಗಳದಟ್ಟಿ’ ಅನ್ನೋ ಖ್ಯಾತಿಯು ಬಂದಿತ್ತು. ಅರೇ, ಆದರೂ ಆ ಹಳ್ಳಿ ಪ್ರೀತಿ ಮುಂದೆ ಸರ್ಕಾರಿ ಕಡತದಲ್ಲಿ ಇಡೋ ಹಂಗೆ ಏನೂ ಇಡೋಕಾಗಲ್ಲ ಅನ್ನೋದೆ ಹೆಚ್ಚುಗಾರಿಕೆ.

ಜಾತಿವ್ಯವಸ್ಥೆ ಬೀದಿಬೀದಿಗಳಲ್ಲಿ ಬಿದ್ದಿದ್ದರೂ ಭಾವನೆಗಳಲ್ಲಿ ಎಂದೂ ಇಲ್ಲ. ಗೌಡಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಮೇಲು ಕೀಳಲ್ಲ. ಕಾಯಕ ಸಮಾಜಕ್ಕೆ ಅದರದೇ ಆದ ಮಾನ್ಯತೆ ಐತೆ. ಅದೇ ಅಲ್ವೇ ಹಳ್ಳೀ ಪ್ರೀತಿ. ನನ್ನೂರಿನ ಈ ಹಳ್ಳೀಪ್ರೀತಿನ ಜಾಗತಿಕ ಜಗಲಿ ಮೇಲೆ ನಿಂತು ಕೈಯೆತ್ತಿ, ಕೊರಳೆತ್ತಿ ಹಾಡೋ ಗಮ್ಯತೆ ನನ್ನದು.

ಹಳ್ಳಿಗಳಲ್ಲಿನ ಬೀದಿಬೀದಿಗಳಲ್ಲೂ ಧರ್ಮ, ಜಾತೀಯ ಲೆಕ್ಕಾಚಾರಗಳಿರಬಹುದು. ಆದರೆ ಆಯಾಯ ಕೇರಿಯವರೊಟ್ಟಿಗೆ ಬೇರೆ ಕೇರಿಯವರು ಮಾತಾಡೋ ರೀತೀನೇ ದೊಡ್ಡತನದ್ದು. ಬಾಯಿ ತಪ್ಪಿಯೂ ಅಸಡ್ಡೆತನ ಇರೋಲ್ಲ. ನನ್ನೂರು ಈ ಎಲ್ಲಾ ಖ್ಯಾತಿ ತುಂಬಿಕೊಂಡಿದೆ. ಊರಲ್ಲಿ `ಏನ್ ಬುದ್ಧಿ ಚೆನ್ನಾಗಿದ್ದೀರಾ?’, `ಏನವ್ವ ಚೆಂದಾಕಿದ್ದೀಯಾ?’, `ಏನ್ ತಾಯಿ ಊರಿಗೆ ಯಾವಾಗ್ ಬಂದೆ’, `ಮಗಳೇ ಚೆಂದಾನವ್ವ’ ಹೀಗೆ ಜನ ಬಾಯಿತುಂಬಾ ಹೇಳೋ ಮಾತಿಗೆ ಕೋಟಿ ಬೆಲೆ ಇದೆ. `ಏನ್ ಸ್ವಾಮಿ’, `ಅಪ್ಪೋರೆ’, `ಸ್ವಾಮಿ ಶ್ಯಾನುಭೋಗ್ರೆ’, `ಬುದ್ದ್ಯೋರೆ’, `ಅಪ್ಪಾಜಿ’ ಹೀಗೆ ಹೇಳೋ ಸಾಲು ಬಾಯಿಪದಗಳು ನನ್ನೂರಲ್ಲೂ ಗಣ್ಯವಾದವು. `ಅವ್ವೋ’ ಅನ್ನೋ ಕರೆಗೆ ವಿಶೇಷವಾದ ಮಾನ್ಯತೆ ನೀಡ್ತಾರೆ. ಮಠದ ಸ್ವಾಮಿಗಳ ನೋಡಿದವ್ರ `ಬುದ್ಧಿ ನಮಸ್ಕಾರ’ ಅನ್ನೋ ಚಿತ್ರಣ ವಿಶೇಷವಾದದ್ದು. ಜಾತಿವ್ಯವಸ್ಥೆ ಬೀದಿಬೀದಿಗಳಲ್ಲಿ ಬಿದ್ದಿದ್ದರೂ ಭಾವನೆಗಳಲ್ಲಿ ಎಂದೂ ಇಲ್ಲ. ಗೌಡಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಮೇಲು ಕೀಳಲ್ಲ. ಕಾಯಕ ಸಮಾಜಕ್ಕೆ ಅದರದೇ ಆದ ಮಾನ್ಯತೆ ಐತೆ. ಅದೇ ಅಲ್ವೇ ಹಳ್ಳೀ ಪ್ರೀತಿ. ನನ್ನೂರಿನ ಈ ಹಳ್ಳೀಪ್ರೀತಿನ ಜಾಗತಿಕ ಜಗಲಿ ಮೇಲೆ ನಿಂತು ಕೈಯೆತ್ತಿ, ಕೊರಳೆತ್ತಿ ಹಾಡೋ ಗಮ್ಯತೆ ನನ್ನದು.

ನನ್ನೂರಿನಲ್ಲಿ ಬೇಸಾಯವೇ ಉಸಿರು. ಮರ ಕಡಿದರೆ ಅಲ್ಲೇ ಇನ್ನೊಂದು ಮರ ನೆಡೋ ಸಂಪ್ರದಾಯ ಹಳ್ಳಿಗರದು. ಉಳೋ ಎತ್ತುಗಳನ್ನು ಕಠಿಣ ದುಡಿಮೆಯಲ್ಲಿ ಬಳಸಿದ್ದೇವೆ ಎಂಬ ಕಾರಣಕ್ಕೆ ಅವುಗಳನ್ನು `ಬಾಸು’ ಅಂತಾಲೇ ಅಕ್ಕರೆಯಿಂದ ನೋಡ್ಕೋತಾನೆ ರೈತ. ನಮ್ಮ ಹಳ್ಳಿಯಲ್ಲಿ, ಹಳ್ಳಿಗರಲ್ಲಿ, ರೈತರಲ್ಲಿ, ಶ್ರೀಸಾಮಾನ್ಯನಲ್ಲಿ ಒಳ್ಳೇತನದ್ದೇ ರಾಶಿ. ಹಣಕ್ಕೆ ಎರಡನೇ ಸ್ಥಾನ.

ಉಸಿರು ಅನ್ನೋದರ ಅರ್ಥವೇ ಮಾನ. ಮಾನದ ಅರ್ಥವೆಂದರೆ ಪ್ರಾಣ. ಇದನ್ನು ಬಿಟ್ಟು ಬದುಕೋ ಶಕ್ತಿ `ಹಳ್ಳಿ’ಗೆ ಇಲ್ಲ. `ಹಳ್ಳಿಮನೆ’ ಅನ್ನೋದೇ ಒಂದು ಹೆಮ್ಮೆ. ದೇವಸ್ಥಾನದ ಹೊಸಲಿನಷ್ಟೇ ಹಳ್ಳಿಮನೆ ಹೊಸಲುಗಳು ಗೌರವಯುತವಾಗಿವೆ. ಹಟ್ಟಿ ಬಾಗಿಲಿನ ಎರಡೂ ಬದಿಯಲ್ಲಿ ದೀಪ ಬೆಳಗುತ್ತಾರೆ. ಮೊಗಸಾಲೆಯಲ್ಲಿ ಬಂದವರಿಗೆ ದೊಡ್ಡದೊಡ್ಡ ಕಂಬದ ಜಗಲಿಗಳಿವೆ. ಯಾವುದೋ ಊರಿನವರು ಬಂದು ಹಟ್ಟಿ ಮುಂದೆ ಅಗತ್ಯವಿದ್ದರೆ ಮಲಗಿಹೋಗಲಿ, ವಿಶ್ರಾಂತಿ ತೆಗೋಳ್ಳಿ ಅನ್ನೋ ಭಾವನೆ ಇದೆ. ಹಟ್ಟಿ ಅಂದ್ರೆ ಪ್ರೀತಿ ಕಂಡ್ರಿ. ಈಹೊತ್ತು ಹಳ್ಳೀಮನೆಗಳು ತೀರಾ ಕಡಿಮೆಯಾಗಿವೆ. ಯಾವಾಗ ಅಂತಹ ಮನೆಗಳು ಕಮ್ಮಿ ಆದ್ವು, ಆಗ್ಲೇ ಸಾಕಷ್ಟು ರೋಗಗಳು ಜನರನ್ನು ಕಾಡ್ತಾ ಇರೋದು ಸುಳ್ಳಲ್ಲ.

ಇಲ್ಲಿ ಯಾರಿಗೂ ಕೀಳರಿಮೆ ಇಲ್ಲ. ಪದಾರ್ಥಗಳಿಗೆ ಮೊದಲ ಆದ್ಯತೆಯಾದರೆ ದುಡ್ಡಿಗೆ ಎರಡನೇ ಆದ್ಯತೆ. `ಕಾಸಿದ್ದೋನೇ ಬಾಸು’ ಅನ್ನೋದು ಸಿಟಿ ಮಾತು. `ಒಳ್ಳೆಯ ಬದುಕಿದ್ದೋನೇ ಬಾಸು’ ಅನ್ನೋದು ಹಳ್ಳಿಮನೆ ಮಾತು. ಯಾರದೇ ಮನೆ ಮುಂದೆ ಹೋದರೆ ಅಲ್ಲೊಂದು ಅಕ್ಕರೆ ಇರುತ್ತೆ. ತುತ್ತು ಅನ್ನಕ್ಕೆ ಬರವಿಲ್ಲ.

ಸಿಟಿ ಮಕ್ಕಳಿಗೆ `ಹಳ್ಳಿಮನೆ’ ಅಂದ್ರೆ ಕನಸು. ಎಷ್ಟೋ ಮಕ್ಕಳಿಗೆ ಆ ಕಲ್ಪನೆಯೇ ಇರೋಲ್ಲ. ನಗರದ ಯಾಂತ್ರಿಕ ಬದುಕಷ್ಟೇ ಕಣ್ಣು ತುಂಬಿಕೊಂಡಿರುತ್ತವೆ. ಆ ಪೇಪರ್ ಹಾಕೋ ಹುಡುಗ, ಹಾಲಿನವಳು, ಹೂವಿನವಳು, ಸೊಪ್ಪು ಮಾರುವಾಕೆ, ತರಕಾರಿ ಗಾಡಿಯವನು, ಇಸ್ತ್ರೀ ಮಾಡುವವ,, ನೀರಿನ ಕ್ಯಾನ್ ತಂದಿಡೋನು… ಇಷ್ಟೇ ಸಿಟಿ ಕಾಣುವ ಬದುಕು. ಎಲ್ಲವನ್ನೂ ತಂದರೇನೇ ಆ ಮನೆ ತುಂಬೋದು? ನನ್ನೂರಿನ ಈ ಹಳ್ಳಿಮನೆ ಹಾಗಲ್ಲ. ಇಲ್ಲಿನ ಸೂರಿಗೆ ಸಿಕ್ಕಿಸಿದ ಬೇವಿನ ಕಡ್ಡಿಯಿಂದ ಹೊಸಲಿಗೆ ಸಿಕ್ಕಿಸಿದ ಮಾವಿನ ಸೊಪ್ಪು, ಉತ್ತರಾಣಿ ಕಡ್ಡಿ, ಹಸಿರು ಭೂತಾಳ ಎಲ್ಲವೂ ಒಂದೊಂದು ಔಷಧಗಳೇ. ಒಳ್ಳೆಯ ಗಾಳಿ, ಬೆಳಕು ಅನ್ನೋ ಸಂಭ್ರಮ ಇದೆಯಲ್ಲ್ಲ ಅದೇ ಹಳ್ಳಿಮನೆಯ ಬೆಡಗು. ನನ್ನೂರಿನ `ಹಳ್ಳಿ ಪ್ರೀತಿ’ ಯಲ್ಲಿ ಪ್ರತಿಯೊಬ್ಬರೂ ನಾಯಕನೆ. ಇಲ್ಲಿ ಯಾರಿಗೂ ಕೀಳರಿಮೆ ಇಲ್ಲ. ಪದಾರ್ಥಗಳಿಗೆ ಮೊದಲ ಆದ್ಯತೆಯಾದರೆ ದುಡ್ಡಿಗೆ ಎರಡನೇ ಆದ್ಯತೆ. `ಕಾಸಿದ್ದೋನೇ ಬಾಸು’ ಅನ್ನೋದು ಸಿಟಿ ಮಾತು. `ಒಳ್ಳೆಯ ಬದುಕಿದ್ದೋನೇ ಬಾಸು’ ಅನ್ನೋದು ಹಳ್ಳಿಮನೆ ಮಾತು. ಯಾರದೇ ಮನೆ ಮುಂದೆ ಹೋದರೆ ಅಲ್ಲೊಂದು ಅಕ್ಕರೆ ಇರುತ್ತೆ. ತುತ್ತು ಅನ್ನಕ್ಕೆ ಬರವಿಲ್ಲ.

ಇಂತಹ ಹಳ್ಳೀಮನೆಯಲ್ಲಿ ನಾಲ್ಕು ಕಂಬದ್ದು, ಎಂಟು ಕಂಬದ್ದು, ಹದಿನಾರು ಕಂಬದ ತೊಟ್ಟಿಮನೆ ಕಣ್ಣು ತುಂಬುತ್ತವೆ. ಒಂದು ಕಡೆ ಹಸೆ ಬರೆದ ಹಜಾರ, ಅಲ್ಲೊಂದು ದೊಡ್ಡ ಮಂಚ. ಅವರ ಬದಿಗೆ ಒಂದು ಕಬ್ಬಿಣದ ಬೀರು, ಅದರ ಆಚೆಗೆ ಮರದ ಬೃಹತ್ ಬೀರುಗಳಲ್ಲಿ ಕಾಗದ, ಲೆಕ್ಕಪತ್ರಗಳು ಶೇಖರಣೆಯಾಗಿರುತ್ತವೆ. ಸಾಹುಕಾರರ ಮನೆಗಳಲ್ಲಿ ಕಬ್ಬಿಣದ ಅಲ್ಮೇರಾ ಬಿಚ್ಚಿ ಹಣ ತೆಗೆಯುವುದೇ ಒಂದು ಕಲೆಯಾಗಿದೆ. ಇದೆಲ್ಲ ನನ್ನೂರಿನ ಝಲಕ್‍ನ ಚಿತ್ರಪಟ್ಟಿಕೆ.

ನಮ್ಮೂರ `ಹಳ್ಳೀಮನೆ’ಯಲ್ಲಿ ಮಳೆಯ ಸಂಭ್ರಮ ನೋಡಬೇಕು. ತೊಟ್ಟಿಮನೆಯಲ್ಲಿ ಸುರಿಯುವ ಮಳೆಯಿಂದ ಮನೆಯವರೆಲ್ಲಾ ಸಂತೋಷಗೊಳ್ಳಬಹುದು. ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುವುದೇ ಇಲ್ಲಿನ ವಿಶೇಷ ಕೂಡ. ನಮ್ಮೂರ ಮನೆಯೊಳಗೆ ಏನೆಲ್ಲಾ ಕೌತುಕಗಳು ತುಂಬಿರುತ್ತವೆ ಎನ್ನುವುದೇ ಅಚ್ಚರಿ. ಹಾಗೆ ಸುಮ್ಮಸುಮ್ಮನೆ ಒಂದು ಹಳ್ಳೀಮನೆ ಅಚ್ಚರಿಯನ್ನು ಇಷ್ಟೇ ಅಂತ ಕಟ್ಟಿಕೊಡಲು ಕೂಡ ಸಾಧ್ಯವಿಲ್ಲ. ಗೊತ್ತಿರುವಷ್ಟು ಹೇಳಬಹುದು. ಅಥವಾ ಯಾರಿಗೋ ಗೊತ್ತಿರಬಹುದಾದದ್ದು ನಮಗೆ ಗೊತ್ತಿಲ್ಲದಿಬಹುದೇನೋ. ಅದೇ ಕೌತುಕಗಳು. ನನ್ನ ಅಜ್ಜಿ `ಬೆಣ್ಣೆ ಮರಿಗೆ’ ಮೇಲೆ ಕಟ್ಟಿಡುತ್ತಿದ್ದ ಸಾಲುಸಾಲು ಬೆಣ್ಣೆ ಗೋಲಿಗಳು ಎಷ್ಟೋ ಮಂದಿಗೆ ಗೊತ್ತಿಲ್ಲದಿರಬಹುದು. ಎಷ್ಟೋ ಮಂದಿಗಳ ಅಜ್ಜಿಯರು ಕಟ್ಟಿಕೊಟ್ಟಿರಬಹುದಾದ `ಪಿರೂತಿ’ಗಳು ನಮಗೆ ಗೊತ್ತಿಲ್ಲದಿರಬಹುದು. ಅದೇ ಅಲ್ವೇನು`ಹಳ್ಳೀಪ್ರೀತಿ’

ಇದೇ ನಮ್ಮತನ. ಇದೇ ನಮ್ಮ ಹಳ್ಳಿತನ.

*ಲೇಖಕರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೈಸೂರಿನಲ್ಲಿ ಪತ್ರಿಕಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 50ಕ್ಕೂ ಹೆಚ್ಚು ಸಾಹಿತ್ಯಕೃತಿ ರಚಿಸಿದ್ದಾರೆ. ಇದರಲ್ಲಿ ಕಥೆ, ಕಾದಂಬರಿ, ಕವನ, ಪ್ರವಾಸಕಥನ, ಹೋರಾಟ, ವ್ಯಕ್ತಿವಿಚಾರ, ಅಂಕಣ, ವಚನಸಾಹಿತ್ಯ ಸೇರಿವೆ.

Leave a Reply

Your email address will not be published.