ಕ್ರಾಂತಿಯೇ ಅಲ್ಲದ ಆನ್ ಲೈನ್ ಕ್ರಾಂತಿ!

ಕೊರೊನಾ ವೈರಾಣು ಆಗಲೇ ಮಾರುಕಟ್ಟೆ ಹಾಗೂ ರಾಜಕೀಯ ಶಕ್ತಿಯ ಬೆಂಬಲ ಪಡೆದಿದ್ದ online ಶಿಕ್ಷಣಕ್ಕೆ ಅಪಾರ ವೇಗವನ್ನು ಹಾಗೂ ವಿಸ್ತಾರವನ್ನು ಸೃಷ್ಟಿಸಿದೆಯೇ ಹೊರತು ಅದು ಈ ಪಿಡುಗಿನಿಂದಾಗಿ ಅನಿವಾರ್ಯವಾಗಿ ಹುಟ್ಟಿಕೊಂಡ ಹೊಸ ವಿದ್ಯಮಾನ ಖಂಡಿತ ಅಲ್ಲ.

ಒಂದು ಕುತೂಹಲದ ಅಂಶವೆAದರೆ ಅಂತರ್‌ಜಾಲವು ಭಾರತವನ್ನು ಪ್ರವೇಶ ಮಾಡಿದ್ದು ಶಿಕ್ಷಣ ಹಾಗೂ ಸಂಶೋಧನೆಯ ಶಿಕ್ಷಣ ಸಂಸ್ಥೆಗಳ ಮೂಲಕವೆ.  1986ರಲ್ಲಿ Educational Research Network (ERNET) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಐ.ಐ.ಟಿ.ಗಳು ಸಂಶೋಧನೆಗಾಗಿ ಬಳಸಿಕೊಳ್ಳತೊಡಗಿದವು. ಅಲ್ಲಿಂದ 9 ವರ್ಷಗಳ ನಂತರ 1995ರಲ್ಲಿ VSNLನ ನಿಯಂತ್ರಣದಲ್ಲಿ ಅಂತರ್ಜಾಲವು ಸಾರ್ವಜನಿಕವಾಗತೊಡಗಿತು. ಅದರ ಬೆಳವಣಿಗೆ ಅನೇಕ ಅಡೆತಡೆಗಳಿಂದಾಗಿ ಕುಂಟುತ್ತಲೇ ನಡೆದು ಉದಾರೀಕರಣದ ನೀತಿಗಳು ಅನುಷ್ಠಾನಕ್ಕೆ ಬಂದು ಖಾಸಗಿ ಅಂತರ್ಜಾಲ providers ಪ್ರವೇಶದಿಂದ ತ್ವರಿತವಾಗಿ ಬೆಳೆದು ಈಗ ದೇಶದ ಒಟ್ಟು ಜನಸಂಖ್ಯೆಯ ಪ್ರತಿಶತ 52.08 ರಷ್ಟು ಜನರನ್ನು ಅದು ತಲುಪಿದೆ.

ಅಂತರ್‌ಜಾಲ ಬಳಕೆದಾರರ ಪ್ರಮಾಣವು ಹೆಚ್ಚಾಗುತ್ತಲೇ ಇದ್ದು ಈಗ 9.6 ಮಿಲಿಯನ್ ಬಳಕೆದಾರರು ಭಾರತದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಕೋವಿಡ್ ಪೂರ್ವದ ಅವಧಿಯಲ್ಲಿ ನಾವು ಗಮನಿಸದೇ ಇದ್ದ ಸಂಗತಿಯೆಂದರೆ ಭಾರತದಲ್ಲಿ ಈ ಶಿಕ್ಷಣವು ಬೆಳೆಯುತ್ತಲೇ ಬಂದಿದ್ದು ಈಗ ಅದರ ಒಟ್ಟು ಮೌಲ್ಯ 1.96 ಬಿಲಿಯನ್ ಡಾಲರ್‌ಗಳಷ್ಟು ಆಗಿದೆಯೆಂದು ವರದಿಗಳು ಹೇಳುತ್ತವೆ.

ಹಾಗೆಯೇ, 2011ರ ಜನಗಣತಿಯ ಪ್ರಕಾರ ಭಾರತದ 71 ಪ್ರತಿಶತ ಮನೆಗಳಲ್ಲಿ ಎರಡು ಅಥವಾ ಒಂದು ಕೋಣೆಗಳಿವೆ. National Sample Survey ದತ್ತಾಂಶಗಳ ಪ್ರಕಾರ ಕೇವಲ ಪ್ರತಿಶತ 42 ನಗರ ಪ್ರದೇಶಗಳಲ್ಲಿರುವ ಮನೆಗಳಲ್ಲಿ, 15 ಪ್ರತಿಶತ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಅಂತರ್ಜಾಲ ಸೌಲಭ್ಯವಿದೆ.

ಅಂತರ್ಜಾಲದ ಸರಾಸರಿ ವೇಗದಲ್ಲಿ 207 ದೇಶಗಳಲ್ಲಿ ಭಾರತ 74ನೇ ಸ್ಥಾನದಲ್ಲಿದೆಯೆಂದು ಒಂದು ವರದಿ ಹೇಳಿದೆ. 2021ರಲ್ಲಿ ಒಟ್ಟು 70 ಕೋಟಿ ಭಾರತೀಯರು ಅಂತರ್ಜಾಲದ ಬಳಕೆದಾರರಾಗುವ ಅಂದಾಜಿದೆ.

ಈ ಅಂಕಿಸಂಖ್ಯೆಗಳನ್ನು ಒಟ್ಟಿಗೆ ಜೋಡಿಸಿ ನೋಡಿದರೆ online ಕ್ರಾಂತಿಯು ಆಗಿದೆಯೆಂದಾಗಲೀ, ಆಗುತ್ತದೆಯೆಂದಾಗಲೀ ಹೇಳಲು ಆಧಾರಗಳಿಲ್ಲ. ಅವಶ್ಯಕವಾದ ತಂತ್ರಜ್ಞಾನವು ಪ್ರವೇಶ ಮಾಡಿ ಹಲವಾರು ವರ್ಷಗಳ ನಂತರ ಜಾಗತೀಕರಣದ ಪರಿವರ್ತನೆಯ ಶಕ್ತಿಯನ್ನು ಬಳಸಿಕೊಂಡು ಬೆಳೆದಿದೆಯೆನ್ನುವುದು ಮುಖ್ಯ. ಇಲ್ಲದಿದ್ದರೆ ಆ ತಂತ್ರಜ್ಞಾನಕ್ಕೆ ಇಂಥ ಅಗಾಧ ಶಕ್ತಿಯಿದೆಯೆನ್ನುವ ತಪ್ಪು ವ್ಯಾಖ್ಯಾನವನ್ನು ಒಪ್ಪಿಕೊಂಡಂತಾಗುತ್ತದೆ.

ಸ್ವಲ್ಪ ಬಿಡಿಸಿ ಹೇಳುವುದಾದರೆ ಜಾಗತಿಕ ಬಂಡವಾಳಶಾಹಿಯು ಒಂದು ಯುಗದಲ್ಲಿ ವಸಾಹತುಶಾಹಿಯನ್ನು ಬಳಸಿಕೊಂಡು ಹೊಸ ಅವತಾರವನ್ನು ಪಡೆದಿದ್ದರೆ, ಇಂದಿನ ಯುಗದಲ್ಲಿ ಜಾಗತೀಕರಣವೆಂದು ಕರೆಯಲಾಗುವ ನವ ವಸಾಹತುಶಾಹಿಯ ಬೆಳವಣಿಗೆಯೊಂದಿಗೆ ಈ ತಂತ್ರಜ್ಞಾನದ ಬೆಳವಣಿಗೆಯು ಹೆಣೆದುಕೊಂಡಿದೆ. ಈಗಲೂ ಅದನ್ನು ದೈತ್ಯ ಶಕ್ತಿಯಾಗಿ ಪರಿವರ್ತಿಸುತ್ತಿರುವ ಶಕ್ತಿಗಳು ದೈತ್ಯ ಅಂತರ್‌ರಾಷ್ಟ್ರೀಯ ಕಂಪನಿಗಳೆ. ಆದ್ದರಿಂದಲೇ ಈ ತಂತ್ರಜ್ಞಾನವು ಅಧಿಕಾರದ ಕೇಂದ್ರೀಕರಣ, ಪ್ರಬಲ ವರ್ಗಗಳಿಗೆ ಯಜಮಾನಿಕೆ, ವ್ಯಕ್ತಿಗಳ ಮೇಲೆ ಅವರ ಖಾಸಗಿತನ ಮತ್ತು ಸ್ವಾತಂತ್ರ್ಯಗಳ ಮೇಲೆ ನಿಯಂತ್ರಣ ಹಾಗೂ ಸಾಮಾಜಿಕ ವರ್ಗಗಳ ಮಧ್ಯ ಅಪಾರವಾದ ಅಂತರವನ್ನು ಸೃಷ್ಟಿಸುವ ತಂತ್ರಜ್ಞಾನವಾಗಿ ಪರಿವರ್ತನೆಯಾಗಿದೆ.

ಇದೇ ತಂತ್ರಜ್ಞಾನವು ಜ್ಞಾನದ ಸಮಾನ ಹಂಚಿಕೆ, ಪ್ರಜಾಪ್ರಭುತ್ವದ ಜೀವಾಳವೇ ಆದ ಸಂಪರ್ಕ, ಸಂವಹನ ಮತ್ತು ಸಮಾನತೆಗಳನ್ನು ಪೋಷಿಸುವ ತಂತ್ರಜ್ಞಾನವು ಆಗುವ ಸಾಮರ್ಥ್ಯವನ್ನು ಹೊಂದಿದೆ. ಅದನ್ನು ಪ್ರಜಾಪ್ರಭುತ್ವವಾದಿ ಸಮಾಜವಾದಿ ಶಕ್ತಿಗಳು ಆ ಉದ್ದೇಶಗಳಿಗಾಗಿ ಈಗಲೂ ಬಳಸಿಕೊಳ್ಳುತ್ತಲೇ ಇವೆ. ಆದರೆ ದುರಂತವೆಂದರೆ ಸರ್ವಾಧಿಕಾರಿ ಬಲಪಂಥೀಯ ಸರಕಾರಗಳು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಪ್ಪ್ಪದ ಸಂಘಟನೆಗಳು ಈ ತಂತ್ರಜ್ಞಾನವನ್ನು ಆಕ್ರಮಿಸಿಕೊಂಡಿವೆ. ಈ ತಂತ್ರಜ್ಞಾನವನ್ನೇ ಆಧರಿಸಿರುವ ಭಾರತದ ಮಾಧ್ಯಮಗಳು ನೂರಾರು ವರ್ಷಗಳ ಹೋರಾಟ, ಚಿಂತನೆ, ಕ್ರಿಯೆಗಳಿಂದ ಭಾರತವು ಪಡೆದುಕೊಂಡಿದ್ದ ಪ್ರಜಾಪ್ರಭುತ್ವ ಸಂಸ್ಕೃತಿಯನ್ನು ಸರ್ವನಾಶ ಮಾಡಿರುವುದು ಒಂದು ದುರಂತ ಕತೆ.

ತಂತ್ರಜ್ಞಾನವನ್ನೇ ವಿರೋಧಿಸುವ ಪ್ರಖರ ಚಿಂತಕರ, ತತ್ವಜ್ಞಾನಿಗಳ ಪರಂಪರೆಯೇ ಪಶ್ಚಿಮದಲ್ಲಿದೆ. ಹೈಡೆಗರ್, ಇವಾನ್ ಇಲಿಚ್, ಲೂಯಿ ಮಮ್‌ಫೋರ್ಡ್, ಹರ್ಬರ್ಟ್ ಮಾರ್ಕ್ಸೂಸ್ ಮತ್ತು ನೀಲ್ ಪೋಸ್ಟ್ಮನ್ ಮುಂತಾದವರು ತಂತ್ರಜ್ಞಾನದ ಆಂತರ್ಯದಲ್ಲಿಯೇ ಮನುಷ್ಯ ವಿರೋಧಿ ನೆಲೆಗಳಿವೆ ಎಂದು ಪ್ರತಿಪಾದಿಸಿದ್ದಾರೆ. ನನಗೆ ಗೊತ್ತಿರುವಂತೆ ಆಶೀಸ್ ನಂದಿ, ವಂದನಾ ಶಿವಾ ಮುಂತಾದ ಕೆಲವರು ಈ ಸಂಪ್ರದಾಯದ ಭಾರತೀಯ ಚಿಂತಕರಾಗಿದ್ದಾರೆ. ನಾನು ಈ ಲೇಖನದಲ್ಲಿ ಈ ಪರಂಪರೆಯನ್ನು ಚರ್ಚಿಸುವುದಿಲ್ಲ. ನಮ್ಮೆದುರಿಗಿರುವುದು ಒಂದು ಮೂರ್ತವಾದ ಚಾರಿತ್ರಿಕ ಹಾಗೂ ರಾಜಕೀಯ ಸನ್ನಿವೇಶ. ಈ ಸನ್ನಿವೇಶದಲ್ಲಿ ಕೊರೋನಾ ವೈರಸ್ ಪ್ರಮುಖ ಪಾತ್ರಧಾರಿಯಾಗಿದೆ. ವಿಶೇಷವಾಗಿ ಈ ವೈರಾಣುವಿನಿಂದಾಗಿ ಸಾಂಪ್ರದಾಯಿಕ ನೈಜ ತರಗತಿ ಶಿಕ್ಷಣ ಸಾಧ್ಯವಾಗದೆ online ಶಿಕ್ಷಣವು ಒಂದು ಪರ್ಯಾಯವಾಗಿ ಕಂಡುಬಂದಿದೆ.

online ಶಿಕ್ಷಣವೆಂದರೇನು, ಅದರ ಸಾಮರ್ಥ್ಯ ಮತ್ತು ಮಿತಿಗಳು ಏನು ಎನ್ನುವ ತಿಳಿವಳಿಕೆ ಇಲ್ಲದೆಯೆ ತರಾತುರಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು, ಸರಕಾರದ ಶಿಕ್ಷಣ ಇಲಾಖೆಗಳು online ಶಿಕ್ಷಣವನ್ನು ಆರಂಭಿಸಿಬಿಟ್ಟಿವೆ.  ಕೊರೋನಾಗೆ ಲಸಿಕೆ ಸಿಕ್ಕುವ ಮೊದಲು ಶಿಕ್ಷಣದ ಸಮಸ್ಯೆಗಳಿಗೆ online ರಾಮಬಾಣ ಸಿಕ್ಕಿದೆಯೆಂದು ಭಾವಿಸಲಾಗುತ್ತಿದೆ. ನಾನು ಲೇಖನದ ಶುರುವಾತಿಗೆ ದಾಖಲಿಸಿದ ಅಂಕಿಸಂಖ್ಯೆಗಳ ಪ್ರಕಾರ 2016ರ ಬಹುಪೂರ್ವದಲ್ಲಿಯೇ online ಶಿಕ್ಷಣ ಮಾರುಕಟ್ಟೆಯ ಜನರು ಆಗಲೇ ನೈಜ ತರಗತಿ ಶಿಕ್ಷಣಕ್ಕೆ online ಶಿಕ್ಷಣವೇ ಪರಿಹಾರವೆಂದು ಎಲ್ಲಾ ದತ್ತಾಂಶಗಳೊAದಿಗೆ ವಾದ ಮಂಡಿಸಿದ್ದವು. ಕೇಂದ್ರ ಸರಕಾರವು ಕೂಡ ಕೊರೋನಾಪೂರ್ವ ಅವಧಿಯಲ್ಲಿಯೇ ಅನೇಕ online ಶಿಕ್ಷಣ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿತ್ತು.

ಹೀಗಾಗಿ ನನ್ನ ದೃಷ್ಟಿಯಲ್ಲಿ ಕೊರೋನಾ ವೈರಾಣು ಆಗಲೇ ಮಾರುಕಟ್ಟೆ ಹಾಗೂ ರಾಜಕೀಯ ಶಕ್ತಿಯ ಬೆಂಬಲ ಪಡೆದಿದ್ದ online ಶಿಕ್ಷಣಕ್ಕೆ ಅಪಾರ ವೇಗವನ್ನು ಹಾಗೂ ವಿಸ್ತಾರವನ್ನು ಸೃಷ್ಟಿಸಿದೆಯೇ ಹೊರತು ಅದು ಈ ಪಿಡುಗಿನಿಂದಾಗಿ ಅನಿವಾರ್ಯವಾಗಿ ಹುಟ್ಟಿಕೊಂಡ ಹೊಸ ವಿದ್ಯಮಾನ ಖಂಡಿತ ಅಲ್ಲ. ಹಾಗೆ online ಕ್ರಾಂತಿ ಆಗಬಹುದಾಗಿದ್ದರೆ ಈ ಮೊದಲೇ ಆಗುವ ಎಲ್ಲಾ ಸಾಧ್ಯತೆಗಳಿದ್ದವು. ಅಲ್ಲದೆ ಆಧುನಿಕ ಜಗತ್ತಿನ ಚರಿತ್ರೆಯಲ್ಲಿಯೇ ಅತಿದೊಡ್ಡ ವರ್ಗವಾಗಿ ಬೆಳೆದಿರುವ ಭಾರತೀಯ ಶಿಕ್ಷಿತ ಮಧ್ಯಮ ವರ್ಗವು ಮಾಹಿತಿ ತಂತ್ರಜ್ಞಾನದ ಬೆಂಬಲದಿಂದ ಅಪಾರವಾದ ಸಂಪತ್ತು, ಅವಕಾಶಗಳು ಹಾಗೂ ಪ್ರಭಾವವನ್ನು ಆಗಲೇ ಪಡೆದಿತ್ತು.  ಆದರೆ ಈ ವರ್ಗದವರು ಮೊನ್ನೆಯವರೆಗೆ online ಶಿಕ್ಷಣ ಕೊಡಿ ಎಂದು ಸರಕಾರವನ್ನು ಒತ್ತಾಯಿಸಿರಲಿಲ್ಲ. ಬದಲಾಗಿ ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿಯೇ ಓದಿಸಿ ಜಾಗತೀಕರಣದ ಪ್ರಯೋಜನವನ್ನು ಪಡೆದಿದ್ದರು. ಈಗಲೂ ಈ ವರ್ಗದ ಚಿಂತನೆಯೆಂದರೆ ಹೇಗಿದ್ದರೂ online ಶಿಕ್ಷಣದ ಸರಿಯಾದ ಪ್ರಯೋಜನವನ್ನು ದುಬಾರಿ ಖಾಸಗಿ ಸಂಸ್ಥೆಗಳಲ್ಲಿ ಅವರ ಮಕ್ಕಳು ಪಡೆಯುತ್ತಾರೆ. ಈ ಶಿಕ್ಷಣವು ದೇಶದ ಬಹುಸಂಖ್ಯಾತ ಮಕ್ಕಳಿಗೆ ದೊರೆಯುವುದಿಲ್ಲವೆನ್ನುವುದು ಅವರಿಗೆ ಸಮಸ್ಯೆಯೇ ಅಲ್ಲ. ಬದಲಾಗಿ ತಮ್ಮ ಮಕ್ಕಳಿಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಗಳು ಕಡಿಮೆಯಾಗುತ್ತಾರೆ ಎನ್ನುವುದು ಸಮಾಧಾನದ ವಿಷಯವೇ ಆಗಿದೆ.

ಹಾಗಿದ್ದರೆ online ‘ಕ್ರಾಂತಿ’ಗೆ ಏನಾಗುತ್ತದೆ? ಉತ್ತರವು ಅದೆಷ್ಟು ಸರಳವಾಗಿದೆಯೆಂದರೆ ಹೀಗೆ ಸರಳವಾಗಿರುವುದು ನಮ್ಮ ಬಹುದೊಡ್ಡ ಸಮಕಾಲೀನ ದುರಂತ. online ಶಿಕ್ಷಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳು ಇಲ್ಲದೆ ಬಹುಸಂಖ್ಯಾತ ಬಡವರು, ದಮನಿತ ಜಾತಿಗಳ ಜನರು, ಮಹಾನಗರಗಳಿಗೆ ವಲಸೆ ಹೋಗುವ ಕಾರ್ಮಿಕರು, ಆದಿವಾಸಿಗಳು- ಇವೇ ಮುಂತಾದ ವರ್ಗಗಳ ಮಕ್ಕಳು online ಶಿಕ್ಷಣದಿಂದ ವಂಚಿತರಾಗಿ ಇನ್ನೂ ಹಿಂದಕ್ಕೆ ತಳ್ಳಲ್ಪಡುತ್ತಾರೆ. ಅವರಿಗೆ ಭವಿಷ್ಯವೇ ಇರುವುದಿಲ್ಲ. ನಮ್ಮ ಶಿಕ್ಷಿತ ನಗರವಾಸಿ ಮಧ್ಯಮವರ್ಗದವರು ಎಂದಿನಂತೆ ಶಿಕ್ಷಣ ವ್ಯವಸ್ಥೆಯ ಪ್ರಯೋಜನ ಪಡೆದು ಅಮೆರಿಕದ ಗೌರವಾನ್ವಿತ ವೃತ್ತಿಪರರಾಗುತ್ತಾರೆ. ಆದರೆ ಟ್ರಂಪ್ ಇನ್ನೊಂದು ಅವಧಿಗೆ ಚುನಾಯಿತನಾದರೆ ಏರುಪೇರುಗಳಾಗಿ ಭಾರತಮಾತೆಯ ಸೇವೆಗೆ ಇಲ್ಲಿಯೇ ಉಳಿದುಕೊಳ್ಳಬಹುದು. ಅಮೇರಿಕದ ಅನಿವಾಸಿ ಭಾರತೀಯರು ಭಾರತದಲ್ಲಿ ಅತಾರ್ಕಿಕವಾದ ರಾಷ್ಟ್ರವಾದೀ ರಾಜಕೀಯವನ್ನು ಮತ್ತು ಅಮೆರಿಕದಲ್ಲಿ ಅದೇ ಮಾದರಿಯ ಟ್ರಂಪ್‌ನ ‘America First’ ಎನ್ನುವ ರಾಜಕೀಯವನ್ನು ಬೆಂಬಲಿಸಿದ್ದರು. ಹೀಗಾಗಿ ಅವರಿಗೆ ಈ ವಿದ್ಯಮಾನವನ್ನು ವಿರೋಧಿಸುವ ನೈತಿಕ ಅಧಿಕಾರವೇ ಇಲ್ಲ.

online ಶಿಕ್ಷಣವನ್ನು ಕೇವಲ ಒಂದು ತತ್‌ಕ್ಷಣದ ಪರಿಹಾರವೆಂದು ಅನೇಕರು ವಾದಿಸುತ್ತಾರೆ. ಅಂದರೆ ಕೊರೋನಾ ಪಿಡುಗಿನಿಂದ ಹೊರಬಂದಾಗ ಇದು ಅಪ್ರಸ್ತುತವಾಗಬಹುದು, ಆದರೆ ಸದ್ಯಕ್ಕೆ ಅದೊಂದೆ ಪರಿಹಾರ. ಅದು ಹಾಗೆ ಅಗುವುದಿಲ್ಲ. ಇಲ್ಲಿಯವರೆಗಿನ ಶಿಕ್ಷಣ ಪದ್ಧತಿಯನ್ನು ಬಿಟ್ಟುಕೊಟ್ಟು ಪರ್ಯಾಯವಾದ online ಶಿಕ್ಷಣವನ್ನು ಹೇರುವ ಪ್ರಯತ್ನಗಳನ್ನು ನಾನು ಪ್ರಸ್ತಾಪಿಸಿರುವ ವಿವಿಧ ವರ್ಗ ಶಕ್ತಿಗಳು ಮಾಡುತ್ತವೆ. ಇದರ ಬಗ್ಗೆ ಪ್ರಜಾಪ್ರಭುತ್ವವಾದಿ ಚರ್ಚೆ, ಸಂವಾದಗಳು ನಡೆಯುವ ಸಾಧ್ಯತೆಗಳನ್ನು ಈಗಾಗಲೇ ಮೊಟಕುಗೊಳಿಸಲಾಗಿದೆ. ಆದ್ದರಿಂದ ಪ್ರಭುತ್ವದಿಂದ ಬೆಂಬಲಿತವಾದ online ಶಿಕ್ಷಣವು ಹೆಚ್ಚು ವಿಸ್ತಾರಗೊಳ್ಳುತ್ತದೆ.  ಬರಬರುತ್ತ ಅದರ ಬಗೆಗಿನ ವಿಮರ್ಶೆಗಳು ಕಡಿಮೆಯಾಗಿ ನಮ್ಮ ಪ್ರಭಾವಶಾಲಿ ಮಧ್ಯಮವರ್ಗದ common sense ಸತ್ಯವಾಗಿ ಅದಕ್ಕೆ ಸಮರ್ಥನೆಯು ಸಿಕ್ಕುತ್ತದೆ. ನಮ್ಮ ಪ್ರಗತಿಪರ ರಾಜಕೀಯ ಚಿಂತನೆಯು ಇದಕ್ಕೆ ಸಮರ್ಥವಾದ ಪರ್ಯಾಯವನ್ನು ಈವರೆಗೆ ರೂಪಿಸಿಯೇ ಇಲ್ಲ. ಹೀಗಾಗಿ ಕೊರೋನಾ ವೈರಸ್ಸಿನಿಂದ ಉಂಟಾದ ಸಂಕಷ್ಟದ ಪರಿಸ್ಥಿತಿಯಲ್ಲಿ online ಶಿಕ್ಷಣದಿಂದ ವಂಚಿತರಾದ ಸಮುದಾಯಗಳು ಅದನ್ನು ನಮಗೂ ಕೊಡಿ ಎನ್ನುವ ಒತ್ತಾಯವನ್ನು ತಮ್ಮ ರಾಜಕೀಯ ಕ್ರಿಯೆಯಾಗಿ ರೂಪಿಸಿಕೊಳ್ಳುತ್ತವೆಯೆ ಹೊರತು online ಶಿಕ್ಷಣದ ವಿಮರ್ಶೆಯಲ್ಲಿ ಸಹಭಾಗಿಗಳಾಗುವುದಿಲ್ಲ.

ಮುಖ್ಯ ಪ್ರಶ್ನೆಯೆಂದರೆ ಮಾಹಿತಿ ತಂತ್ರಜ್ಞಾನದ ಬಗ್ಗೆ ನಮಗಿರಬಹುದಾದ ತಾತ್ವಿಕ ವಿರೋಧದಿಂದಾಗಿ ಆನ್‌ಲೈನ್ ಶಿಕ್ಷಣವನ್ನು ಅಲಕ್ಷಿಸಬಹುದು? ಇಂಥ ಕ್ರಿಯೆಯು ಅಸಾಧುವೂ ಹೌದು ಮತ್ತು ಅಪಾಯಕಾರಿಯೂ ಹೌದು. ಆನ್‌ಲೈನ್ ಕ್ಷೇತ್ರವನ್ನು ಆಳದಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಹೋರಾಟಗಳ ನೆಲೆಯೆಂದು ಕಲ್ಪಿಸಿಕೊಂಡು, ಅದರ ಮೂಲಕವೇ ಅವಶ್ಯಕವಾದ ವಿಮರ್ಶಾತ್ಮಕ ಚಿಂತನೆ (Critical thinking) ಹಾಗೂ ಕಲಿಯುವಿಕೆಗಳನ್ನು ಬೆಂಬಲಿಸುವ ಕೆಲಸವನ್ನು ಮಾಡಬೇಕಾಗಿದೆ. ಇದಕ್ಕೆ ಬೇಕಾದ ಸೃಜನಶೀಲತೆ, ಪ್ರತಿಭೆ ಮತ್ತು ಸ್ವಂತಿಕೆಗಳು ಆನ್‌ಲೈನ್ ಮಾರುಕಟ್ಟೆಯಲ್ಲಿಲ್ಲ. ನಮ್ಮ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಲ್ಲಿಯೇ ದುಡಿಯುತ್ತಿರುವ ಶಿಕ್ಷಕರು, ಬರಹಗಾರರು ಹಾಗೂ ಸಂಶೋಧಕರಲ್ಲಿವೆ.

ಹೀಗಾಗಿ ಆನ್‌ಲೈನ್ ಕ್ಷೇತ್ರದಲ್ಲಿ ಪ್ರವೇಶಿಸಿ ಸಾಧ್ಯವಿದ್ದಷ್ಟು ಮಟ್ಟಿಗೆ ಅದನ್ನು ಪ್ರಜಾಪ್ರಭುತ್ವವಾದಿ ಉದ್ದೇಶಗಳಿಗೆ ಪಳಗಿಸುವ ಪ್ರಯತ್ನವನ್ನು ಮಾಡಲೇಬೇಕಿದೆ. ಏಕೆಂದರೆ ಆನ್‌ಲೈನ್ ತಂತ್ರಜ್ಞಾನವು ಕೇವಲ ಶಿಕ್ಷಣ ತರಗತಿಗಳಿಗೆ ಸೀಮಿತವಾಗಿಲ್ಲ. ಅದರಾಚೆಗೆ ನಮ್ಮ ಚಿಂತನೆ, ನಡವಳಿಕೆ, ಕ್ರಿಯೆಗಳನ್ನು ರೂಪಿಸುವ ವಿದ್ಯಮಾನಗಳಲ್ಲೂ ಇದೆ. ಅಲ್ಲಿರುವ ಸಾಧ್ಯತೆಗಳು ಅಪಾರವಾಗಿವೆ. ತಮಿಳುನಾಡಿನ ಮೀನುಗಾರ ಕುಟುಂಬದ ಸ್ತ್ರೀಯರು ಅಂತರ್ಜಾಲವನ್ನು ಬಳಸಿಕೊಂಡು ಮೀನುಗಾರರಿಗೆ ಅವಶ್ಯಕವಾದ ಹವಾಮಾನ ಮಾಹಿತಿಯನ್ನು ನೀಡಿದ್ದು ಇದೇ ತಂತ್ರಜ್ಞಾನದಿಂದ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಲ್ಲಿ ನಡೆದ ಅನೇಕ ಪ್ರತಿಭಟನೆಗಳ ಸಂಯೋಜನೆಯು ಇದೇ ತಂತ್ರಜ್ಞಾನದಿAದಲೇ ಸಾಧ್ಯವಾಗಿದೆ. ಇಂಥ ಸಾಧ್ಯತೆಗಳನ್ನು ಬಳಸಿಕೊಂಡರೆ ನಿಜವಾದ ಅರ್ಥದಲ್ಲಿ ಆನ್ ಲೈನ್ ಕ್ರಿಯಾಶೀಲತೆಯು ಗಟ್ಟಿಗೊಳ್ಳಬಹುದಾಗಿದೆ.

ಹೀಗಾಗಿ online ಕ್ರಾಂತಿಯು ಕ್ರಾಂತಿಯೇ ಅಲ್ಲ. ಅದು (ನಾವು ಒಪ್ಪಲಿ ಬಿಡಲಿ) ಆಗುವ ಸಾಧ್ಯತೆಗಳು ಅತ್ಯಂತ ಕಡಿಮೆ. ಆದರೆ ಅದು ಆಗಿದೆಯೆನ್ನುವ ಸಮೂಹ ಸನ್ನಿಯನ್ನು ನಮ್ಮ ಸರಕಾರಗಳು ಹಾಗೂ ಬಂಡವಾಳಶಾಹಿ ಶಕ್ತಿಗಳು ಜಂಟಿಯಾಗಿ ಸೃಷ್ಟಿಸುತ್ತವೆ. ಸಮಾಜವಾದಿ ಹಾಗೂ ಪ್ರಜಾಪ್ರಭುತ್ವವಾದಿ ಚಿಂತನೆಗಳು ಹಾಗೂ ಚಳವಳಿಗಳು ಕೋಮಾದಲ್ಲಿರುವ ಇಂದಿನ ಪರಿಸ್ಥಿತಿಯಲ್ಲಿ online ಕ್ರಾಂತಿಯ ಬದಲಾಗಿ ಬಂಡವಾಳಶಾಹಿ ಶಕ್ತಿಗಳು ತಮ್ಮ ಯಾಜಮಾನ್ಯವನ್ನು (hegemony) ಸ್ಥಾಪಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು ನಿಚ್ಚಳವಾಗಿವೆ.

*ಲೇಖಕರು ಕನ್ನಡದ ಪ್ರಮುಖ ವಿಮರ್ಶಕರು, ಕಥೆಗಾರರು. ಹುಟ್ಟೂರು ಧಾರವಾಡ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ಈಗ ಶಿವಮೊಗ್ಗೆಯ ಮಾನಸ ಸಾಂಸ್ಕೃತಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕರು.

Leave a Reply

Your email address will not be published.