ಕ್ರೌರ್ಯಕ್ಕೆ ಗಡಿಗಳ ಹಂಗಿಲ್ಲ

ಡಾ.ರವಿ ಎಂ.ಸಿದ್ಲಿಪುರ

ಪ್ರಭುತ್ವಗಳು ಚರಿತ್ರೆಯುದ್ದಕ್ಕೂ ಯುದ್ಧಗಳನ್ನು ಮಾಡಿವೆ. ಆದರೆ ಜಯವನ್ನು ಪಡೆದಿವೆಯೇ? ಎಂಬ ಪ್ರಶ್ನೆಗೆ ಭಾವನಾತ್ಮಕ ನೆಲೆಗಳ ಆಚೆಯಲ್ಲಿ ಉತ್ತರಿಸಿಕೊಳ್ಳಬೇಕಿದೆ. ಎರಡು ದೇಶಗಳ ನಡುವಿನ ಗಡಿಗಳಲ್ಲಿ ಯೋಧರ ಶವಗಳು ಯಾವ ಬದಿಗಿದ್ದರೂ, ಅವರ ಕೊಲೆಗೆ ಪ್ರಭುತ್ವ ನೇರ ಕಾರಣವಾಗಿರುತ್ತದೆ; ಆ ಎರಡು ದೇಶಗಳ ಜನತೆ ಕಾರಣವಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಏಕೆಂದರೆ ಎರಡು ಪ್ರಭುತ್ವಗಳ ನಡುವೆ ಯುದ್ಧ ನಡೆದರೆ ವೈರಿಗಳು ಯಾರಾಗುತ್ತಾರೆ ಎನ್ನುವುದನ್ನು ನಿರ್ಧರಿಸುವುದು ಸುಲಭದ ಕೆಲಸವಲ್ಲ.

ಯುದ್ಧ ಪ್ರಭುತ್ವದ ಮನಸ್ಥಿತಿಯಾಗಿರುವಂಥದ್ದು. ಅದು ಆಡಳಿತ ವ್ಯವಸ್ಥೆಯ ಭಾಗವಾಗಿಯೂ ಇರುತ್ತದೆ. ಅಂದ ಮಾತ್ರಕ್ಕೆ ಸಕಲ ಜನರ ಒಪ್ಪಿಗೆ ಯುದ್ಧಕ್ಕೆ ಸಿಕ್ಕಿರುವುದಿಲ್ಲ. ಎರಡು ಪ್ರಭುತ್ವಗಳಲ್ಲಿಯೂ ಜನ ಸಮೂಹ ಇದ್ದೇ ಇರುತ್ತದೆ. ಆ ಸಮೂಹವೇ ಯುದ್ಧವನ್ನು ನಿರ್ಧರಿಸುವುದಿಲ್ಲ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಪ್ರಭುತ್ವದ ಅಧಿಕಾರ ದಾಹ ಯುದ್ಧವನ್ನು ಹುಟ್ಟುಹಾಕುತ್ತದೆ. ಅದಕ್ಕಾಗಿ ಸೇನಾಬಲವನ್ನೂ ಬಳಸಿಕೊಳ್ಳುತ್ತದೆ. ಅದು ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಎಂಬ ಹಸಿಸುಳ್ಳನ್ನು ಸತ್ಯವೆಂಬಂತೆ ಮಂಡಿಸುತ್ತಿರುತ್ತದೆ. ಹೀಗೆ ಪ್ರಭುತ್ವದ ರಾಜಕಾರಣಗಳು ರಕ್ತವಿಲ್ಲದ ಯುದ್ಧದಂತೆ ಸಮಾಜದಲ್ಲಿ ಜೀವಂತವಿರುತ್ತವೆ; ಯುದ್ಧ ರಕ್ತಸಿಕ್ತ ರಾಜಕಾರಣಕ್ಕೆ ನಾಂದಿಯಾಗುತ್ತದೆ. ಇದರ ಕ್ರೌರ್ಯಕ್ಕೆ ಗಡಿಗಳ ಹಂಗಿರುವುದಿಲ್ಲ.

ಮಹಾಭಾರತ ಕಾವ್ಯಗಳಲ್ಲಿ, ವರ್ತಮಾನದಲ್ಲಿಯೂ ಒಂದೇ ಭೂಪ್ರದೇಶದೊಳಗಿರುವ ಪ್ರಭುತ್ವದ ‘ಅರಮನೆ’ಗಳು ಯುದ್ಧ ಗೆದ್ದ ಉನ್ಮಾದದಲ್ಲಿ ಸದಾ ವಿಜೃಂಭಿಸುತ್ತವೆ. ಆ ವಿಜೃಂಭಣೆಗಾಗಿ ಯುದ್ದದಲ್ಲಿ ಸತ್ತ, ಅಂಗಾಂಗಗಳನ್ನು ಕಳೆದುಕೊಂಡು ನರಳುವ ಯೋಧರ, ಅವರ ಕುಟುಂಬದವರ ಕಣ್ಣೀರು, ಸಂಕಟಗಳು, ಗೆಲುವಿನ ಉನ್ಮಾದಲ್ಲಿ ಸದಾ ಮೆರವಣಿಗೆ ಹೊರಡುವವರ ಸದ್ದಿನಲ್ಲಿ ಕೇಳುವುದಿಲ್ಲ; ಕಾಣುವುದಿಲ್ಲ. ಇಂತಹವುಗಳನ್ನು ಪ್ರಭುತ್ವ ಕಣ್ಣಿದ್ದೂ, ಕಾಣದೆ, ಕಿವಿಯಿದ್ದೂ ಕೇಳದಂತೆ ವರ್ತಿಸುತ್ತಿದೆ. ಹೀಗೆ ಯುದ್ಧ ಎನ್ನುವ ಕ್ರಿಯೆಯು ಮನುಕುಲದ ನಾಶವನ್ನೇ ಬಯಸುವ ಪ್ರಭುತ್ವದ ಅಜೆಂಡಾವೇ ಆಗಿರುತ್ತದೆ. ಪ್ರಭುತ್ವದ ಇಂಥ ಜೀವವಿರೋಧಿ ವರ್ತನೆಯೊಂದಿಗೆ, ಯುದ್ಧವೆಂದು ಕೇಕೆ ಹಾಕುವವರು, ಯುದ್ಧವೇ ಒಂದಲ್ಲ ಒಂದು ರೂಪದಲ್ಲಿ ತಮ್ಮನ್ನು, ತಮ್ಮವರನ್ನೂ ಕೊಲ್ಲಬಲ್ಲದು ಎಂಬ ಪರಿಜ್ಞಾನವೇ ಇಲ್ಲದಂತೆ ಕುದಿಯುತ್ತಿರುತ್ತಾರೆ. ಈ ಕುದಿಯುವಿಕೆಗೆ ಪ್ರಭುತ್ವಗಳು ಬೇಕಾದ ಶಾಖವನ್ನು ಕೊಡುತ್ತಿರುತ್ತವೆ. ಪ್ರಭುತ್ವದ ಇಂತಹ ನಿರ್ಣಯಗಳಿಗೆ ಸೈನಿಕರು, ಸಾಮಾನ್ಯರು ಯುದ್ಧದ ಹೆಸರಿನಲ್ಲಿ ಬಲಿಪಶುಗಳಾಗುತ್ತಾರೆ. ಒಳನೋಟಗಳು

 

ಸಂಶೋಧನಾ ವಿಷಯ: ಕನ್ನಡ ಮಹಾಭಾರತ ಕಾವ್ಯಗಳಲ್ಲಿ
ಪ್ರಭುತ್ವ, ಯುದ್ಧ ಮತ್ತು ಜನತೆ
ಸಂಶೋಧಕರು: ಡಾ.ರವಿ ಎಂ.ಸಿದ್ಲಿಪುರ
ಮಾರ್ಗದರ್ಶಕರು: ಡಾ.ಹೆಚ್.ಎಸ್.ಮೋಹನ ಚಂದ್ರಗುತ್ತಿ,
ಸಹಾಯಕ ಪ್ರಾಧ್ಯಾಪಕರು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.

 

ಕನ್ನಡ ಮಹಾಭಾರತಗಳಲ್ಲಿನ ರಾಜಸತ್ತೆಗೆ ರಾಜ್ಯಾಡಳಿತ ಜವಾಬ್ದಾರಿಯಾಗಿಲ್ಲ. ಅದು ಭೋಗಕ್ಕಿರುವುದೆಂದು ಭಾವಿಸಿದೆ. ಈ ರಾಜಸತ್ತೆಗೆ ದಿಜವರ್ಗ ಅಥವಾ ಬೌದ್ಧಿಕವರ್ಗದ ಬೆಂಬಲವಿದೆ. ಹಾಗಾಗಿ ಇವರಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ದೇವತೆಗಳಿಗೆ ಸಹಾಯಕರಾಗಿರುವಂತಹ ರಾಜಪ್ರಭುತ್ವವನ್ನು ದೇವತೆಗಳು ಪೊರೆದಿದ್ದಾರೆ. ಇದರ ಮೂಲಕ ತಮ್ಮ ಶತ್ರುಗಳಾದ ರಾಕ್ಷಸರನ್ನು ಹತ್ತಿಕ್ಕಿದ್ದಾರೆ. ರಾಜಪ್ರಭುತ್ವವು ಋಷಿಗಳಿಗೆ ತೊಂದರೆ ಕೊಡುವವರನ್ನು ನಾಶಮಾಡಿದೆ. ಹೀಗೆ ನಿರ್ದಿಷ್ಟ ವರ್ಣದವರನ್ನು ಕಾಪಾಡುತ್ತಾ, ಅವರ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಸ್ಥಾನಮಾನಗಳನ್ನು ಕಾಯುವ ‘ಪ್ರಭುತ್ವ’ವು ಭಾರತ ಕಾವ್ಯಗಳಲ್ಲಿದೆ.

ಪಂಪ-ರನ್ನರ ಮಹಾಭಾರತ ಕಾವ್ಯಗಳ ಯುದ್ಧ ವರ್ಣನೆಗಳಲ್ಲಿ ‘ಚಲದೊಳ್ ದುರ್ಯೋಧನಂ’, ‘ನೆಲಕಿರಿವೆನೆಂದು ಬಗೆದಿರೆ’- ಎಂಬ ಮಾತುಗಳು ಕೊಲ್ಲುವ ಅರ್ಜುನನನ್ನು, ಭೀಮನನ್ನು ನಾಯಕರನ್ನಾಗಿಸಿಕೊಂಡಾಗಲೂ, ಸಾಯುವ ದುರ್ಯೋಧನನಿಗಾಗಿ ಮಿಡಿಯುತ್ತವೆ. ಅವನಿಗೆ ವಿಶೇಷವಾದ ಸ್ಥಾನವನ್ನು ಕೊಡುತ್ತಿವೆ. ಅವನನ್ನು ಮಹಾನುಭಾವನನ್ನಾಗಿ ಮಾಡುತ್ತಿವೆ. ಅಂದರೆ ಅಸಹಾಯಕತೆಯಲ್ಲಿ ಯುದ್ಧ ಮಾಡುವವನನ್ನು ಮೆಚ್ಚಿಕೊಳ್ಳುತ್ತಿವೆ. ಹೀಗೆ ಯುದ್ಧಕ್ಕೊಂದು ಬೇರೆ ಕಥನ ಬರೆಯುತ್ತಿವೆ. ಪಂಪನ ‘ಚಲ’ ಎನ್ನುವುದು ಒಂದು ದೊಡ್ಡ ಮೌಲ್ಯವಾದರೆ; ರನ್ನನ ನಿಲುವು ಸೋತವನ ಘನತೆಯನ್ನು ಒತ್ತಿ ಹೇಳುತ್ತಿದೆ. ಈ ನಿಲುವುಗಳು ಅನೇಕ ಸಲ ಪಾಂಡವರ ಪಕ್ಷಪಾತಿಯಾಗಿ ಇರುವುದಿಲ್ಲ. ಗೆಲ್ಲುವವನನ್ನು ಕುರಿತು ಬರೆದ ಕಾವ್ಯಗಳು ಸೋತವನ ಪರವಾಗಿಯೂ ನಿಲ್ಲುತ್ತವೆ. ಜನಪದ ಕಾವ್ಯವೂ ಸಹ ಸೋತವರ ಬಗ್ಗೆ ಅಂತಃಕರಣ ಮಿಡಿಯುತ್ತದೆ. ಹೀಗೆ ಖಳನಾಯಕ ಪಾತ್ರದ ನಿರೂಪಣೆಯಲ್ಲಿದ್ದ ಸಾಂಪ್ರಾದಾಯಿಕ ಸಾಮಾನ್ಯ ಮಾದರಿಯನ್ನು ಮುರಿದ ಪ್ರತಿನಾಯಕ ಪಾತ್ರಸೃಷ್ಟಿ ಹಾಗೂ ಅದರ ಮೂಲಕ ಕಟ್ಟಿಕೊಡುವ ಹೊಸ ನೋಟವನ್ನು ಕನ್ನಡ ಮಹಾಭಾರತ ಕಾವ್ಯಗಳು ಮಾಡಿವೆ.

ಪಂಪ-ರನ್ನರ ವೈಯಕ್ತಿಕ ಧರ್ಮಗಳು ಕೃಷ್ಣನನ್ನು ಮನುಷ್ಯನಂತೆ ಚಿತ್ರಿಸಿವೆ. ಇಲ್ಲಿ ಅವರ ಜೈನಧರ್ಮವು ಪಾತ್ರವನ್ನು ಹಾಗೂ ಕತೆಯನ್ನು ಬದಲಾಯಿಸಲು ನೆರವಾಗಿದೆ. ಆದರೆ ಕುಮಾರವ್ಯಾಸ ಯುದ್ಧಗಳನ್ನು ನಿರ್ವಹಿಸುವಾಗ ವಿಜೃಂಭಿಸುತ್ತಾನೆ. ಯುದ್ಧದ ಕ್ರೌರ್ಯಗಳ ವಿವರಗಳನ್ನು ಕುಮಾರವ್ಯಾಸ ನೀಡಿದಂತೆ ಪಂಪ-ರನ್ನರು ನೀಡುವುದಿಲ್ಲ. ಇವು ಅವರವರ ಧರ್ಮಗಳ ಕೊಡುಗೆಯಾಗಿಯೂ ಕಾಣುತ್ತದೆ. ಇನ್ನು ಜನಪದ ಮಹಾಭಾರತದಲ್ಲಿ ಯುದ್ಧ ಕ್ರೌರ್ಯಗಳು ಮುನ್ನೆಲೆಗೆ ಬರುವುದಿಲ್ಲ. ‘ವಿಕ್ರಮಾರ್ಜುನ ವಿಜಯ’ ಹಾಗೂ ‘ಗದಾಯುದ್ಧ’ ಕಾವ್ಯಗಳಲ್ಲಿ ಬರುವ ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ’, ‘ಕುಲಂ ಕುಲಮಲ್ತು ಚಲಂ ಕುಲಂ’ ಅಂತಹ ಮಾತುಗಳು, ಜನಪದ ಮಹಾಭಾರತದ ಕರ್ಣದುರ್ಯೋಧನರ ಮೊದಲ ಭೇಟಿಯಲ್ಲಿ ‘ಸ್ವಾಮಿ,…ನನ್ನ ಧನುರ್ವಿದ್ಯೆಗೆ ಬೆಲೆ ಬರುವಂತ ನೌಕರಿಯನ್ನು ಹುಡುಕಿಕೊಂಡು ಹೊರಟಿದ್ದೀನಿ’ ಎನ್ನುವ ಕರ್ಣನ ಮಾತುಗಳು ಯುದ್ಧದ ಹಿನ್ನೆಲೆಯಲ್ಲಿ ಕುಲದ ಕಲ್ಪನೆಗೆ ಹೊಸ ಅರ್ಥವನ್ನು ರೂಪಿಸುತ್ತವೆ. ಯುದ್ಧ ಸಂಬಂಧಿ ವಿಚಾರಗಳು ಪ್ರಾಚೀನ ಕುಲಪದ್ಧತಿಗಳನ್ನು ‘ಕುಲಮಲ್ತು’ ಎಂದು ನಿರ್ಧರಿಸಿ, ಅದರ ಸ್ಥಾನದಲ್ಲಿ ಬೀರ, ಚಲಗಳು ನೆಲೆಸುತ್ತವೆ. ಇಲ್ಲಿ ಯುದ್ಧವೆನ್ನುವುದು ಸಾಮಾಜಿಕ ಕುಲಪದ್ಧತಿಯ ನಿರಾಕರಣೆಯಲ್ಲಿಯೂ ಪ್ರಮುಖ ಪಾತ್ರವಹಿಸಿದೆ.

ಅಲ್ಲಿನ ಪ್ರಭುತ್ವವು ತನ್ನ ಜನತೆಯೊಂದಿಗೆ ನೇರವಾಗಿ ಮುಖಾಮುಖಿಗೊಂಡಿದೆ. ಜನಸಾಮಾನ್ಯರ ಬದುಕಿನ ಎಲ್ಲಾ ಆಗುಹೋಗುಗಳನ್ನು ತಾನು ಅನುಸರಿಸುತ್ತಾ, ಸಮಾಜದ ಅವಿಭಾಜ್ಯ ಅಂಗದಂತೆ ಕಂಡುಬರುತ್ತದೆ.

ಕನ್ನಡ ಮಹಾಭಾರತ ಕಾವ್ಯಗಳು ಊಳಿಗಮಾನ್ಯ ವ್ಯವಸ್ಥೆಯ ಅನೇಕ ಮಗ್ಗುಲುಗಳನ್ನು ಪ್ರಧಾನವಾಗಿ ಅಭಿವ್ಯಕ್ತಿಸಿವೆ. ಇಂತಹ ವ್ಯವಸ್ಥೆಯಲ್ಲಿಯೂ ಭಾರತಕವಿಗಳು ಸೃಜನಶೀಲ ಪ್ರಕ್ರಿಯೆಯನ್ನು ಕಾಪಾಡಿಕೊಂಡಿದ್ದಾರೆ. ಅದಕ್ಕಾಗಿ ಕಥೆಯನ್ನು ಮಾರ್ಪಡಿಸಿಕೊಂಡಿದ್ದಾರೆ. ಕಾವ್ಯಾಭಿವ್ಯಕ್ತಿಗಾಗಿ ಅನೇಕ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅವುಗಳಲ್ಲಿ ಕಥೆಯನ್ನು ‘ತಗುಳ್ಚಿ’ ಹೇಳುವುದು, ನಾಯಕ ಬದಲಾವಣೆ, ಪ್ರತಿನಾಯಕ ವೈಭವೀಕರಣ, ಸ್ತ್ರೀ ಪ್ರಾಧಾನ್ಯ, ಲೌಕಿಕತೆಯ ಕಿಲುಬುಗಳನ್ನು ‘ಬೆಳಗುವುದು’, ಪ್ರಾಣಿ-ಪಕ್ಷಿ, ರಾಕ್ಷಸರಂತಹ ಮನುಷ್ಯ ಸ್ವಭಾವದ ರೂಪಕಗಳು, ರಾಜಮನೆತನದ ಪಾತ್ರಗಳ ಮೂಲಕವೇ, ಸಾಮಾನ್ಯ ಜನತೆಯು ಪ್ರಭುತ್ವ, ಯುದ್ಧಗಳಿಗೆ ತೋರಬಹುದಾದ ಪ್ರತಿರೋಧಗಳನ್ನು ದಾಖಲಿಸುವ- ಬಗೆಗಳು ಮುಖ್ಯವಾಗುತ್ತವೆ. ರಾಜಪ್ರಭುತ್ವ ಭೂಮಿಯನ್ನು ಒಟ್ಟುಮಾಡುವ ನೆವದಲ್ಲಿ ಸೈನಿಕರ ತಲೆಯಲ್ಲಿ ಸ್ವರ್ಗದ ಕನಸುಗಳನ್ನು ಬಿತ್ತಿದೆ. ದೇವಲೋಕದ ಹೆಣ್ಣುಮಕ್ಕಳ ಆಮಿಷವನ್ನು ತೋರಿಸಿದೆ. ಆ ಕಾರಣಕ್ಕಾಗಿ ಸೈನಿಕರು ಭೂಮಿ ತಣಿವಂತೆ ರಕ್ತಹರಿಸಿ ಹೋರಾಡುವಂತೆ ಮಾಡಿದೆ.

ಜನಪದ ಮಹಾಭಾರತ ಕಾವ್ಯದ ರಾಜಪ್ರಭುತ್ವವು ಉಳಿದ ಮೂರು ಕಾವ್ಯಗಳ ಪ್ರಭುತ್ವಕ್ಕಿಂತ ಭಿನ್ನವಾಗಿದೆ. ಅಲ್ಲಿನ ಪ್ರಭುತ್ವವು ತನ್ನ ಜನತೆಯೊಂದಿಗೆ ನೇರವಾಗಿ ಮುಖಾಮುಖಿಗೊಂಡಿದೆ. ಜನಸಾಮಾನ್ಯರ ಬದುಕಿನ ಎಲ್ಲಾ ಆಗುಹೋಗುಗಳನ್ನು ತಾನು ಅನುಸರಿಸುತ್ತಾ, ಸಮಾಜದ ಅವಿಭಾಜ್ಯ ಅಂಗದಂತೆ ಕಂಡುಬರುತ್ತದೆ. ಕೇವಲ ರಾಜಕೀಯ ಅಧಿಕಾರವನ್ನು ಚಲಾಯಿಸುವುದಕ್ಕಷ್ಠೆ ಸೀಮಿತವಾಗದೇ, ಜನತೆ ನಂಬಿಕೊಂಡಿದ್ದ ಮೌಲ್ಯಗಳನ್ನು ತಾನು ಅನುಸರಿಸುತ್ತದೆ. ಹೀಗಾಗಿ ರಾಜಪ್ರಭುತ್ವ ಕೇವಲ ಅಧಿಕಾರದ ಭಾಗ ಎನಿಸದೆ, ಸಮುದಾಯವನ್ನು ಪ್ರತಿನಿಧಿಸುವ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯನ್ನು ನಿರ್ಮಿಸುವ ಅಂಗವಾಗಿದೆ. ರಾಜಪ್ರಭುತ್ವದ ಮಾಧ್ಯಮಗಳಂತಿರುವ ಪಂಪ-ರನ್ನ- ಕುಮಾರವ್ಯಾಸರ ಭಾರತಗಳಲ್ಲಿನ ಪ್ರಭುತ್ವಗಳು ಸಾಮಾನ್ಯ ಜನರ ಸಾಂಸ್ಕೃತಿಕ ವ್ಯವಸ್ಥೆಯನ್ನು ಪ್ರನಿಧಿಸುವುದಕ್ಕಿಂತಲೂ ಹೆಚ್ಚಿನದಾಗಿ ಮೇಲ್ವರ್ಗದ ಅಥವಾ ಅರಸ ಕೇಂದ್ರಿತ ವ್ಯವಸ್ಥೆಯ ಮೌಲ್ಯಗಳನ್ನೇ ಪ್ರತಿಪಾದಿಸುತ್ತವೆ.

ಕನ್ನಡ ಮಹಾಭಾರತ ಕಾವ್ಯಗಳ ಸಮಾಜದಲ್ಲಿ ಕಂಡುಬರುವ ಅಧಿಕೃತ ಎನ್ನಬಹುದಾದ ವರ್ಣ, ಕುಲ, ಧರ್ಮ, ರಾಜತ್ವಗಳನ್ನು ಸೂಕ್ಷ್ಮವಾಗಿ ಪರೀಕ್ಷೆಗೆ ಒಳಪಡಿಸುತ್ತವೆ. ವಿಶೇಷವಾಗಿ ಇವುಗಳ ಚರ್ಚೆ ಹೆಚ್ಚಾಗಿ ಕಂಡುಬರುವುದೇ ಯುದ್ಧಗಳ ಪ್ರಸಂಗಗಳಲ್ಲಿ. ದುರ್ಯೋಧನ, ಕರ್ಣ, ಅಶ್ವತ್ಥಾಮ, ಭೀಷ್ಮ, ಕೃಷ್ಣ, ಧರ್ಮರಾಯ, ಋಷಿ ಪಾತ್ರಗಳ ಕುರಿತು ಕಾವ್ಯಗಳು ತಾಳುವ ಅಭಿಪ್ರಾಯಗಳು ವರ್ಣ, ಕುಲ, ಧರ್ಮ, ರಾಜತ್ವಗಳಿಗೆ ಸಂಬಂಧಿಸಿವೆ. ಇವುಗಳು ಏಕಕಾಲಕ್ಕೆ ರಾಜಕಾರಣ ಸಾಮಾಜಿಕ ಆರ್ಥಿಕ ಆಯಾಮಗಳನ್ನು ಒಳಗೊಳ್ಳುತ್ತವೆ. ಅಂದರೆ ಧರ್ಮ ಲೌಕಿಕ ಭಾಗವಾಗುತ್ತದೆ. ಈ ಅಂಶಗಳಲ್ಲಿ ಹೆಣ್ಣಿನ ಪ್ರಕ್ರಿಯೆಗಳು, ಭಾಗವಹಿಸುವಿಕೆ ಹೆಚ್ಚಾಗಿ ಕಂಡುಬರುವುದಿಲ್ಲ. ಅಂದರೆ ಹೆಣ್ಣನ್ನು ಇವುಗಳನ್ನು ಕಾಪಾಡಿಕೊಳ್ಳಲು ಇರುವ ಪರಿಕರವನ್ನಾಗಿ ಬಳಸಿಕೊಂಡಿವೆ.

ತಮ್ಮ ವಿರುದ್ಧ ತಿರುಗಿಬಿದ್ದವರನ್ನು ತಾವೇ ಮುಂದೆ/ ಮರೆಯಲ್ಲಿ ನಿಂತು ಕೊಲ್ಲಿಸಿದ್ದಾರೆ. ಅದಕ್ಕಾಗಿ ಕುರುಕ್ಷೇತ್ರದಂತಹ ಯುದ್ಧವನ್ನೂ ಮಾಡಿಸಿದ್ದಾರೆ. ವೀರರಿಬ್ಬರು ಯುದ್ಧ ಮಾಡುವಾಗ ಬಂದು ಅವರ ಯುದ್ಧರೀತಿಯನ್ನು ಮೆಚ್ಚುವ, ಪುಷ್ಪಗಳನ್ನು ಸುರಿಸುವ ದೇವತೆಗಳು ಸಾವಿನ ಮೂಲಕ ಪಡೆಯುವ ಜಯವನ್ನು ಹಾಡಿ ಹೊಗಳಿದ್ದಾರೆ.

ಕನ್ನಡ ಭಾರತಗಳಲ್ಲಿನ ದೇವತೆಗಳು ಪ್ರಭುತ್ವಕ್ಕೆ ಸಂದರ್ಭಕ್ಕನುಸಾರವಾಗಿ ರಾಜಸಂಹಿತೆಯನ್ನು ಬೋಧಿಸಿದ್ದಾರೆ. ಆ ರಾಜಸಂಹಿತೆಯು ಹೆಚ್ಚಾಗಿ ದ್ವಿಜರ ಒಳಿತನ್ನು ಬಯಸುವಂಥದ್ದಾಗಿದೆ. ಇವರು ರಾಜಕಾರಣದಲ್ಲಿ ಸಕ್ರಿಯವಾದಂತೆ, ಯುದ್ಧದ ವಿಷಯದಲ್ಲಿಯೂ ಹಿಂದೆ ಸರಿದಿಲ್ಲ. ತಮಗೆ ಅನುಕೂಲವನ್ನು ಮಾಡುವಂತಹ, ತಾವು ಬೋಧಿಸುವ ನೀತಿಗಳನ್ನು ಅನುಸರಿಸುವಂತಹ ವೀರರಿಗೆ ಶಸ್ತ್ರಾಸ್ತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆ ಮೂಲಕ ಪ್ರಭುತ್ವವನ್ನು ಯುದ್ಧೋನ್ಮಾದಕರನ್ನಾಗಿಸಿದ್ದಾರೆ. ಸ್ವಾರ್ಥಕ್ಕೂ ಬಳಸಿಕೊಂಡಿದ್ದಾರೆ. ತಮ್ಮ ವಿರುದ್ಧ ತಿರುಗಿಬಿದ್ದವರನ್ನು ತಾವೇ ಮುಂದೆ/ ಮರೆಯಲ್ಲಿ ನಿಂತು ಕೊಲ್ಲಿಸಿದ್ದಾರೆ. ಅದಕ್ಕಾಗಿ ಕುರುಕ್ಷೇತ್ರದಂತಹ ಯುದ್ಧವನ್ನೂ ಮಾಡಿಸಿದ್ದಾರೆ. ವೀರರಿಬ್ಬರು ಯುದ್ಧ ಮಾಡುವಾಗ ಬಂದು ಅವರ ಯುದ್ಧರೀತಿಯನ್ನು ಮೆಚ್ಚುವ, ಪುಷ್ಪಗಳನ್ನು ಸುರಿಸುವ ದೇವತೆಗಳು ಸಾವಿನ ಮೂಲಕ ಪಡೆಯುವ ಜಯವನ್ನು ಹಾಡಿ ಹೊಗಳಿದ್ದಾರೆ. ಆದರೆ ಯುದ್ಧೋತ್ತರ ರಣರಂಗದಲ್ಲಿ ಹೆಣ್ಣು, ಮಕ್ಕಳು, ವೃದ್ಧರು ಬಿಟ್ಟರೆ ದೇವತೆಗಳು ಸುಳಿಯುವುದಿಲ್ಲ.

ಕನ್ನಡ ಭಾರತಗಳಲ್ಲಿ ಕಂಡುಬರುವ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣನ್ನು ದ್ವಿತೀಯ ದರ್ಜೆಗೆ ಸರಿಸಿವೆ. ಅಲ್ಲಿನ ಸ್ತ್ರೀ ಪಾತ್ರಗಳು ಪಿತೃಪ್ರಧಾನ್ಯ ಮೌಲ್ಯಗ್ರಹಿಕೆಗೆ ಅನುಗುಣವಾಗಿಯೇ ರೂಪುಗೊಂಡಿವೆ. ಎಲ್ಲಾ ಬಗೆಯ ಪ್ರಭುತ್ವಗಳು ಹೆಣ್ಣನ್ನು ವೈಭವೀಕರಿಸುವುದರೊಂದಿಗೆ, ಅಸಹಾಯಕತೆಗೆ ಸೀಮಿತಗೊಳಿಸಿ, ಅವಳ ನೋವು, ಶೋಕ, ಹಟಗಳಿಂದ ಪ್ರಚೋದನೆಯನ್ನು ಪಡೆದಿವೆ. ಪ್ರಭುತ್ವಗಳು ಹೆಣ್ಣಿನ ಪರವಾಗಿ ತಾವು ಬಯಸಿದ ಕಾರ್ಯಗಳಲ್ಲಿ ಕಾದಾಡಿ ಜಯವನ್ನು ಸಾಧಿಸಿವೆ. ಆ ಮೂಲಕ ಅವಳ ನೋವು, ಶೋಕ, ಹಟಗಳಿಗೆ ಜಯವನ್ನು ತಂದುಕೊಟ್ಟಿರುವಂತೆ ಆತ್ಮಾಭಿಮಾನದ ತುತ್ತತುದಿಯಲ್ಲಿ ನಿಂತಿವೆ. ಆದರೆ ಯುದ್ಧದ ನಾಶ, ದುರಂತಗಳನ್ನು ಅವಳ ತಲೆಗೆ ಕಟ್ಟಿವೆ. ಕಾವ್ಯಗಳು ಸಹ ಇದಕ್ಕೆ ಪೂರಕವಾಗಿಯೇ ಕಥಾ ಪ್ರಸಂಗಗಳನ್ನು ನಿರ್ವಚಿಸಿವೆ. ಅಲ್ಲದೆ ಮಹಿಳೆಯರಿಗೆ ಹೆರಿಗೆ ಇರುವಂತೆ; ಪುರುಷರಿಗೆ ಯುದ್ಧವೆನ್ನುವ ರೀತಿಯಲ್ಲಿ ಪ್ರಭುತ್ವ, ಯುದ್ಧಗಳನ್ನು ಸಮರ್ಥಿಸುವ ಸಂದರ್ಭದಲ್ಲಿ ಮಂಡಿಸಿವೆ. ಆದರೂ ಕಾವ್ಯಗಳು ಸೂಕ್ಷ್ಮಸ್ತರದಲ್ಲಿ ಯುದ್ಧಕ್ಕೆ ಪ್ರತಿರೋಧಾತ್ಮಕ ನಿಲುವುಗಳನ್ನು ಸ್ತ್ರೀಪಾತ್ರಗಳಿಂದಲೇ ಪ್ರತಿಪಾದಿಸುತ್ತವೆ.

ಕನ್ನಡ ಮಹಾಭಾರತಗಳು ಜೈನ, ವೈದಿಕ ಹಾಗೂ ಜಾನಪದೀಯ ನೆಲೆಗಳಲ್ಲಿ ನಿರ್ವಚನಗೊಂಡಿವೆ. ಅವುಗಳಲ್ಲಿ ರಾಜಪ್ರಭುತ್ವ, ಯುದ್ಧಗಳು ಪ್ರಧಾನವಾಗಿವೆ. ಜೊತೆಗೆ ಋಷಿಗಳು, ಬ್ರಾಹ್ಮಣರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಇವರು ಹಾಗೂ ರಾಜಪ್ರಭುತ್ವ, ಯುದ್ಧಗಳು ಸ್ತ್ರೀನಿರಾಕರಣ ಮನೋಭಾವವನ್ನೇ ಪ್ರಧಾನವಾಗಿ ಅಭಿವ್ಯಕ್ತಿಸಿವೆ. ರಾಜಕೀಯ ವಸ್ತುವಿನ ಭಾರತ ಕಾವ್ಯಗಳಲ್ಲಿ ಪುರುಷ ವೈಭವೀಕರಣವೇ ಹೆಚ್ಚಾಗಿ ನಡೆದಿದೆ.ಹಾಗಾಗಿ ಕುಂತಿ, ಗಾಂಧಾರಿ, ದ್ರೌಪದಿಯಂತಹ ರಾಜಮನೆತನದ ಸ್ತ್ರೀ ಪಾತ್ರಗಳು ಅಧಿಕಾರದ ಗದ್ದುಗೆಯನ್ನು ಏರುವಂತಹ ಗಂಡು ಮಕ್ಕಳನ್ನು ಹೆರುವುದಕ್ಕೆ ಸೀಮಿತವಾಗಿರುವಂತೆ ಕಂಡುಬರುತ್ತಾರೆ.

ಪ್ರಭುತ್ವ, ಧರ್ಮ, ಮೌಲ್ಯ, ದೈವ, ಇತ್ಯಾದಿಗಳ ಹೆಸರುಗಳಲ್ಲಿ ಹಿಂಸೆಯನ್ನು ವೈಭವೀಕರಿಸಿವೆ; ಕೊಂಡಾಡಿವೆ. ಇವುಗಳಿಂದಾಗಿ ಸೀಮಿತ ಜನವರ್ಗಗಳ ಪಾತ್ರಗಳು ಪ್ರಧಾನವಾಗಿವೆ. ಸಾಮಾನ್ಯ ಜನತೆ ಕಥಾ ಚೌಕಟ್ಟಿನಿಂದ ಹೊರಗುಳಿದಿದ್ದಾರೆ.

ಇವರ ಹೊರತಾಗಿ ವೇಶ್ಯಾವಾಟಿಕೆಯ ಸ್ತ್ರೀಪಾತ್ರಗಳು ಗಂಡು ಬಯಸುವ ಮಾದರಿಗಳಾಗಿ ಚಿತ್ರಣಗೊಂಡಿವೆ. ದೇವತಾ ಸ್ತ್ರೀಪಾತ್ರಗಳೂ ಸಹ ಋಷಿಗಳನ್ನು, ರಾಜರನ್ನು, ವೀರರನ್ನು ಬಯಸುವ ಜಾರೆಯರಾಗಿಯೂ; ದೈಹಿಕ ಸೌಂದರ್ಯವತಿಯರಾಗಿಯೂ ಚಿತ್ರಣಗೊಂಡಿದ್ದಾರೆ. ಸ್ತ್ರೀಪಾತ್ರಗಳನ್ನು ಪ್ರಭುತ್ವ ಮತ್ತು ಯುದ್ಧಗಳಿಂದ ದೂರವಿಟ್ಟ ಕಾವ್ಯಗಳು ಯುದ್ಧಾನಂತರದ ರಣಭೂಮಿಯ ಶೋಕಾಚರಣೆಯ ಪ್ರಸಂಗಗಳಲ್ಲಿ ಮುನ್ನೆಲೆಗೆ ತರುತ್ತವೆ. ಹೀಗೆ ಸ್ತ್ರೀಪಾತ್ರಗಳು ಗರ್ಭಧಾರಣೆ, ವೇಶ್ಯಾವಾಟಿಕೆ, ಶೋಕಾಚರಣೆ, ಯುದ್ಧೋತ್ಸಾಹಕ ನುಡಿಗಳನ್ನಾಡುವ ಪ್ರಸಂಗಗಳಲ್ಲಿ ಮುನ್ನೆಲೆಗೆ ಬರುತ್ತವೆ.

ಭಿನ್ನ ಸಂವೇದನೆಗಳಿಂದ ಕನ್ನಡ ಭಾರತಗಳು ರಚನೆಗೊಂಡಿದ್ದರೂ, ಧರ್ಮ ಮತ್ತು ವರ್ಣಧರ್ಮಗಳನ್ನು ಸಮರ್ಥಿಸುತ್ತವೆ. ಜೊತೆಗೆ, ಆಹಾರ, ಹುಟ್ಟುಗಳ ಹಿನ್ನೆಲೆಗಳಲ್ಲಿಯೂ ವರ್ಣ ಸಂಘರ್ಷಗಳು ಏರ್ಪಟ್ಟಿವೆ. ಇಂತಹ ಸಂಗತಿಗಳನ್ನು ದುರ್ಯೋಧನ ದ್ರೋಣ, ಅಶ್ವತ್ಥಾಮರ ಬಗ್ಗೆ ಆಡುವ ಮಾತುಗಳಲ್ಲಿ, ಪರುಶುರಾಮ, ದ್ರೋಣ, ಶಲ್ಯ, ಮುಂತಾದವರು ಕರ್ಣನ ಕುರಿತು ಆಡುವ ಮಾತುಗಳಲ್ಲಿ, ಋಷಿಗಳು ರಾಜನೀತಿಯನ್ನು ಬೋಧಿಸುವಂತಹ ಮತ್ತು ಪ್ರಭುತ್ವ ದ್ವಿಜರಲ್ಲಿ ತೋರುವ ಉದಾರತೆಗಳಂತಹ ಪ್ರಸಂಗಗಳಲ್ಲಿ ಗುರುತಿಸಬಹುದು.

ಭಾರತಗಳು ಪುರಾಣದ ಕಥೆಯೊಂದಿಗೆ ಸಮಕಾಲೀನ ಹಿಂಸೆಯನ್ನೂ ಸಮೀಕರಿಸಲು ಯತ್ನಿಸಿವೆ. ಪ್ರಭುತ್ವ, ಧರ್ಮ, ಮೌಲ್ಯ, ದೈವ, ಇತ್ಯಾದಿಗಳ ಹೆಸರುಗಳಲ್ಲಿ ಹಿಂಸೆಯನ್ನು ವೈಭವೀಕರಿಸಿವೆ; ಕೊಂಡಾಡಿವೆ. ಇವುಗಳಿಂದಾಗಿ ಸೀಮಿತ ಜನವರ್ಗಗಳ ಪಾತ್ರಗಳು ಪ್ರಧಾನವಾಗಿವೆ. ಸಾಮಾನ್ಯ ಜನತೆ ಕಥಾ ಚೌಕಟ್ಟಿನಿಂದ ಹೊರಗುಳಿದಿದ್ದಾರೆ. ಕನ್ನಡ ಭಾರತಗಳಲ್ಲಿನ ಸಮಾಜದಲ್ಲಿ ಸಾಮಾನ್ಯ ಜನತೆ ಅತ್ಯುತ್ತಮವಾದ ರೀತಿಯಲ್ಲಿ ಬಾಳಿದಂತಹ ಉದಾಹರಣೆಗಳು ಕಾಣಸಿಗುವುದಿಲ್ಲ. ಆದರೆ ಇವರ ಹಿತಾಸಕ್ತಿಗಳನ್ನು ರಕ್ಷಿಸುವ ನೆಪದಲ್ಲಿ ‘ಪ್ರಭುತ್ವ’ಗಳು ಯುದ್ಧವನ್ನು ಮಾಡಲಾಗುತ್ತಿದೆ ಎಂಬಂತಹ ನಿಲುವುಗಳನ್ನು ಪ್ರಕಟಿಸುತ್ತವೆ. ಇಂತಹ ಯುದ್ಧಗಳನ್ನು ‘ಜನಪದ ಮಹಾಭಾರತ’ವೊಂದನ್ನು ಹೊರತುಪಡಿಸಿ, ಪಂಪ, ರನ್ನ ಹಾಗೂ ಕುಮಾರವ್ಯಾಸರ ಕನ್ನಡ ಮಹಾಭಾರತಗಳು ಅತ್ಯಂತ ಉತ್ಸುಕತೆಯಿಂದಲೇ ಚಿತ್ರಿಸಿವೆ. ಅಲ್ಲೆಲ್ಲಾ ಯುದ್ಧದ ಉತ್ಕಟ ಅನುಭವಗಳನ್ನು ಕಟ್ಟಿಕೊಡುತ್ತಲೇ, ಅದರ ಅಮಾನವೀಯ ಸ್ತರಗಳನ್ನೂ ಕಾವ್ಯಗಳು ಸೂಕ್ಷ್ಮವಾಗಿ ಮಂಡಿಸುತ್ತವೆ.

ಹಾಗೆಯೇ ಮಹಾಭಾರತ ಕಾವ್ಯಗಳು ‘ಅರಸು ರಾಕ್ಷಸ’ ಹಾಗೂ ಪಾಂಡುರಾಜ ‘ಕೆರೆಕಟ್ಟೆ ಬಾವಿಗಳನ್ನು, ಅಶ್ವತ್ಥಕಟ್ಟೆಗಳನ್ನು, ಅನ್ನಛತ್ರ ಧರ್ಮಛತ್ರ’ಗಳನ್ನು ಕಟ್ಟಿಸಲಿಲ್ಲವೆಂದು ಹೇಳುವಲ್ಲಿ ಒಬ್ಬ ರಾಜ ಅತ್ಯುತ್ತಮನಾಗಿ ಇರಬೇಕಾದರೆ ಜನತೆಯ ಧರ್ಮವನ್ನು ಪಾಲಿಸುವಂತವನಾಗಿರಬೇಕೆಂಬ ಆಶಯವನ್ನು ವ್ಯಕ್ತಪಡಿಸಿವೆ. ಇಲ್ಲಿ ಧರ್ಮವು ಜನ ಕೇಂದ್ರಿತವಾಗಿರಬೇಕೆಂಬ ನಿಲುವಿದೆ. ಅಂದರೆ ಧರ್ಮವೆನ್ನುವುದು ನಿಸ್ಸಂಶಯವಾಗಿ ಸಾಮಾಜಿಕ, ರಾಜಕೀಯ, ಆರ್ಥಿಕವಾದ ಆಯಾಮಗಳನ್ನು ಒಳಗೊಂಡಿದೆ. ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಧರ್ಮವೆಂಬುದು ಈ ಎಲ್ಲವುಗಳನ್ನು ಒಳಗೊಂಡಿರುವ ಸಂಕೀರ್ಣ ಆಯಾಮವಾಗಿದೆ.

‘ಸಮಾಜಮುಖಿ’ಯಲ್ಲಿ ಪಿಹೆಚ್.ಡಿ ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್.ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್.ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಅತಿ ಉತ್ತಮ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಕೂಡಾ ಹೊರತರಲಾಗುವುದು. ನಿಮ್ಮ ಸಂಶೋಧನೆಯನ್ನು ಸಮಾಜದೊಂದಿಗೆ ಹಂಚಿಕೊಳ್ಳಲು ನೆರವು ನೀಡಲಾಗುವುದು. ಇಮೇಲ್: samajamukhi2017@gmail.com

Leave a Reply

Your email address will not be published.