ಕ್ಷಮಿಸು ಏಕಲವ್ಯ

ಡಾ.ಜ್ಯೋತಿ

ಇದು, ಏಕಲವ್ಯ ಮತ್ತು ದ್ರೋಣಾಚಾರ್ಯರ ನಡುವಿನ ಮುಖಾಮುಖಿ ಹಾಗೂ ಅವರ ಗುರುಶಿಷ್ಯ ಸಂಬಂಧದ ಮರುವ್ಯಾಖ್ಯಾನದ ಪ್ರಯತ್ನ.

`ಆಚಾರ್ಯ, ನಿಮ್ಮ ಕೈ ಯಾಕೆ ಹೀಗೆ ನಡುಗುತ್ತಿದೆ? ಹೆಬ್ಬೆರಳ ಕತ್ತರಿಸಿಕೊಂಡು ನೋವು ಅನುಭವಿಸುತ್ತಿರುವವನು ನಾನು. ಆದರೆ, ನಿಮ್ಮ ಕಣ್ಣಲ್ಲಿ ನೀರು! ಯಾಕೆ, ಕಂಪನ? ನಿಮ್ಮ ಅಂಗೈಯಲ್ಲಿ ನನ್ನ ಹೆಬ್ಬೆರಳು ಸುರಿಸುತ್ತಿರುವ ರಕ್ತವನ್ನು ನಿಮ್ಮ ಕಣ್ಣೀರು ತೊಯ್ಯುತ್ತಿದೆ. ಸುಧಾರಿಸಿಕೊಳ್ಳಿ. ನನಗೇನು ಬೇಸರವಾಗಿಲ್ಲ. ನಿಮಗೆ ಸಲ್ಲಬೇಕಾದ ಗುರುದಕ್ಷಿಣೆ ಕೊಡುವುದು ಬಾಕಿಯಾಗಿಯೇ ಉಳಿದಿತ್ತು. ಅದನ್ನು ತೀರಿಸಿದ ಮೇಲಷ್ಟೇ, ನಾನು ನಿಮ್ಮ ಸ್ಫೂರ್ತಿಯಿಂದ ಕಲಿತ ಶಶ್ತ್ರಾಸ್ತ್ರ ವಿದ್ಯೆ ತನ್ನ ಬೆಲೆ ಪಡೆಯುತ್ತದೆ. ಇದಂತೂ, ನೀವೇ ಮನಃಪೂರ್ವಕವಾಗಿ ಕೇಳಿ ಪಡೆದಿರುವ ಕಾಣಿಕೆ. ಈಗ, ಯಾಕೆ ಕಸಿವಿಸಿ? ನೀವು, ನನ್ನ ಆರಾಧ್ಯ ದೈವದಂತೆ. ಹಾಗಾಗಿ, ಖುಷಿಯಿಂದಲೇ ಹೆಬ್ಬೆರಳು ಕತ್ತರಿಸಿ ಕೊಟ್ಟೆ. ಈಗ ನೀವು ಕಣ್ಣೀರು ಸುರಿಸಿ ನನ್ನ ಕಾಣಿಕೆಯ ಬೆಲೆ ಕಡಿಮೆ ಮಾಡಬೇಡಿ. ನೀವು ನನ್ನ ಹೆಬ್ಬೆರಳನ್ನೇ ಯಾಕೆ ಕೇಳಿದಿರೆಂದು ನಾನು ಪ್ರಶ್ನಿಸುವುದಿಲ್ಲ. ಇದರಿಂದ ನೀವೇನು ಗಳಿಸಿದಿರಿ, ಎಂದೂ ನಾನು ಪ್ರಶ್ನಿಸುವುದಿಲ್ಲ. ನೀವೇನು ಚಿಂತಿಸಬೇಡಿ.’

`ಮೂಲತಃ, ನಾನು ಹರಸಾಹಸಿ. ಒಮ್ಮೆ ಮನಸ್ಸಿಗೆ ಬಂದದ್ದನ್ನು ಸಾಧಿಸದೆ ಬಿಡುವವನಲ್ಲ. ನಾನು ಏಕಾಂಗಿಯಾಗಿ ಅಭ್ಯಾಸ ಮಾಡುತ್ತಾ ಮಾಡುತ್ತಾ ಈಗಂತೂ ಬಹಳ ಪಳಗಿಬಿಟ್ಟಿದ್ದೇನೆ. ಹೆಬ್ಬೆರಳ ಸಹಾಯವಿಲ್ಲದೆ ಪುನಃ ಬಿಲ್ವಿದ್ಯೆ ಕಲಿಯಬಲ್ಲೆ ಎನ್ನುವ ವಿಶ್ವಾಸವಿದೆ. ಹಾಂ, ಒಂದು ವೇಳೆ ನಾನು ಮತ್ತೊಮ್ಮೆ ಕಲಿಯುವುದು ನಿಮಗೆ ಇಷ್ಟವಿಲ್ಲದಿದ್ದರೆ ಹೇಳಿ. ಅದನ್ನೂ ಬಿಟ್ಟು ಬಿಡುತ್ತೇನೆ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಹಿರಿಮೆ ಸಾಧಿಸಬೇಕೆಂಬ ಹೆಬ್ಬಯಕೆ ನಂಗಿಲ್ಲ. ನಿಮ್ಮ ಕುರುಪುತ್ರರಂತೆ ನನಗೆ ಯಾವುದೇ ಯುದ್ಧ ಜಯಿಸಬೇಕಾಗಿಲ್ಲ. ಕಲಿತಿರುವುದೆಲ್ಲಾ ನನ್ನ ಮನದ ಖುಷಿಗಾಗಿ. ಅದು ನನಗೆ ಪ್ರಾಪ್ತಿಯಾಗಿಬಿಟ್ಟಿದೆ. ಗುರುಗಳೇ, ಸಾವಕಾಶದಿಂದ ಎದ್ದೇಳಿ. ನಿಮ್ಮ ಶಿಷ್ಯಂದಿರೆಲ್ಲಾ ಆಶ್ರಮದೆಡೆಗೆ ನಡೆದು ಬಹಳ ಸಮಯವಾಯಿತು. ನೀವು ಇಲ್ಲಿ ಒಬ್ಬರೇ ಇದ್ದೀರಿ. ಹೊತ್ತು ಮುಳುಗುವಂತಿದೆ. ಬೇಗ ನಡೆಯಿರಿ. ನಾನೇ ಬಿಟ್ಟು ಬರಲೇ?’

ದ್ರೋಣ ತಲೆಯೆತ್ತಿ ಏಕಲವ್ಯನ ಮುಖ ನೋಡಿದ. ಮಂಜಾಗಿದ್ದ ಕಣ್ಣುಗಳ ಕರವಸ್ತ್ರದಿಂದ ಒರೆಸಿಕೊಂಡು ಏಕಲವ್ಯನ ಬಲಗೈ ಗಟ್ಟಿಯಾಗಿ ಹಿಡಿದು ತಗ್ಗಿದ ದನಿಯಲ್ಲಿ ಹೇಳಿದ:

`ಇಲ್ಲ, ಏಕಲವ್ಯ. ಆಶ್ರಮ ಸೇರುವ ತರಾತುರಿಯಲ್ಲಿ ನಾನಿಲ್ಲ. ನಿನಗೆ ನಾನೀಗ ಬಹಳ ಕಟುಕನಂತೆ ಕಾಣಿಸುತ್ತಿದ್ದೇನೆ, ನಿಜ. ಆದರೆ, ನನ್ನ ಪರಿಸ್ಥಿತಿಯ ಒತ್ತಡವನ್ನು ನಿನಗೆ ವಿವರವಾಗಿ ಹೇಳಲೇ ಬೇಕಿದೆ. ಆಗಲೇ ನನ್ನ ಮನಸ್ಸಿನ ಕೋಲಾಹಲ ಸ್ವಲ್ಪ ಕಡಿಮೆಯಾಗಬಹುದು. ಮೊದಲಿಗೆ, ನೀನೇ ಸ್ವತಃ ಕಷ್ಟಪಟ್ಟು ಗಳಿಸಿದ ಬಿಲ್ವಿದ್ಯೆ ಕೌಶಲವನ್ನು ಕಸಿದುಕೊಂಡಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನಿಜ, ನಾನು ಕ್ಷಮೆಗೆ ಅರ್ಹನಲ್ಲ. ನಾನೊಬ್ಬ ಶ್ರೇಷ್ಠ ಗುರುವೆಂಬ ಭ್ರಮೆಯನ್ನು ಇಂದು ಸಂಪೂರ್ಣವಾಗಿ ಒಡೆದು ಹಾಕಿದೆ ನೀನು. ಒಬ್ಬ ಗುರುವಿನ ಸ್ಥಾನದಲ್ಲಿರುವವನು ಎಂದೂ ಮಾಡಬಾರದ ಕ್ರೂರ ಕೆಲಸ ನಾನಿಂದು ಮಾಡಿದ್ದೇನೆ. ಆದರೆ, ನಾನು ಏಕೆ ಹೀಗೆ ಮಾಡಿದೆ ಎಂದು ನಿನ್ನಲ್ಲಿ ಹೇಳಿಕೊಳ್ಳಬೇಕಿದೆ. ಇದು ನನ್ನ ಸಮಜಾಯಿಷಿ ಅಲ್ಲ. ನಾನಿನ್ನೂ ಗೊಂದಲದಲ್ಲಿದ್ದೇನೆ. ನಿನ್ನೆ ರಾತ್ರಿಯೆಲ್ಲಾ ನಿದ್ರೆ ಮಾಡದೆ ತಲೆಕೆಡಿಸಿಕೊಂಡು ತೆಗೆದುಕೊಂಡ ನಿರ್ಧಾರವಿದು. ಆದರೂ, ನಾನು ಮಾಡಿದ್ದು ಸರಿಯೆಂದು ನನಗಿನ್ನೂ ದೃಢವಾಗಿಲ್ಲ. ಮನಸ್ಸು ಕಂಪಿಸುತ್ತಿದೆ. ಇದೊಂದು ಮನುಷ್ಯ ಜಗತ್ತಿನ ಗುರುಶಿಷ್ಯ ಸಂಬಂಧದಲ್ಲಿನ ವಿಲಕ್ಷಣ ಘಟನೆಯೆಂದು ದಾಖಲಾಗಬಹುದು. ಇತಿಹಾಸದ ಭಾಗವಾಗಿ ಮುಂದೆ ಚರ್ಚೆಯಾಗುತ್ತಲೇ ಇರಬಹುದು– `ದ್ರೋಣ ಮಾಡಿದ್ದು ಸರಿ‘. `ಇಲ್ಲ, ದ್ರೋಣ ಹೀಗೆ ಮಾಡಬಾರದಿತ್ತು.’ ಜೊತೆಗೆ, ಗುರುಶಿಷ್ಯ ಸಂಬಂಧದ ಕುರಿತು ತಾತ್ವಿಕ ಚರ್ಚೆಯಾಗಬಹುದು. ಹಾಗಾಗಿ, ನಿನ್ನೊಂದಿಗೆ ಸ್ವಲ್ಪ ಹೊತ್ತು ಕುಳಿತು ನನ್ನ ನಿರ್ಧಾರದ ಹಿಂದಿನ ಸಂದಿಗ್ಧತೆ, ನಾನು ಬಂದಿಯಾಗಿರುವ ಸಾಮಾಜಿಕ ಹಾಗೂ ಅಧಿಕಾರ ವ್ಯವಸ್ಥೆ, ಗುರು ಶಿಷ್ಯ ಪರಂಪರೆಹೀಗೆ ಎಲ್ಲವನ್ನೂ ನಿನಗೆ ವಿವರವಾಗಿ ಹೇಳಬೇಕಿದೆ. ಇದು ನಿನಗೇನೂ ಮುಖ್ಯವಲ್ಲ ನಿಜ. ಆದರೆ, ಗುರುವಿನ ಸ್ಥಾನದಲ್ಲಿರುವ ನಾನು, ನನಗೇನೇ ಸಮಜಾಯಿಷಿ ಕೊಡಬೇಕಾಗಿದೆ.’

`ಆದರೆ, ಎಲ್ಲದಕ್ಕಿಂತ ಮೊದಲು ನಿನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆನಿನಗ್ಯಾವ ಕಟ್ಟುಪಾಡಿತ್ತು, ಹೆಬ್ಬೆರಳ ಕೊಡಲು? ನನ್ನ ಆಜ್ಞೆಯನ್ನು ದಿಕ್ಕರಿಸಿಬಿಡಲಿಲ್ಲವೇಕೆ? `ನೀನ್ಯಾವ ಸೀಮೆಯ ಗುರು ನನಗೆ? ಕುರುವಂಶದ ಪುತ್ರರಂತೆ ಕೈಹಿಡಿದು ತಿದ್ದಿ ಕಲಿಸಿದ್ದಿಯೇನು? ನಾನು ಕಲಿತಿರುವುದೆಲ್ಲಾ ನನ್ನ ಸ್ವಂತ ಕಲಿಕೆ. ನನಗೆ ನಿಮ್ಮ ಯಾವುದೇ ಅಧಿಕೃತ ಛಾಪು ಬೇಕಾಗಿಲ್ಲ…’ ಎಂದು ಹೇಳಿ ಬಚಾವಾಗಬಹುದಿತ್ತು. ನಿನಗೇನೂ ಉಪಕಾರ ಮಾಡದ, ಹತ್ತಿರ ಸೇರಿಸಿಕೊಳ್ಳದ ವಿದ್ಯಾವಂತ, ಸುಸಂಸ್ಕø ಮನುಷ್ಯ ಜಗತ್ತಿನ ಹಂಗು ನಿನಗೇನಿತ್ತು? ನಮಗಿಂತ ಹೆಚ್ಚು ಸಭ್ಯಸ್ಥನೆನಿಸಿಕೊಳ್ಳುವ ಉಸಾಬರಿ ಬೇಕಿತ್ತೆ? ನಿನ್ನ ಭವಿಷ್ಯದ ಬಗ್ಗೆ ಸ್ವಲ್ಪ ಯೋಚಿಸಬೇಕಿತ್ತಲ್ಲವೇ? ಕೇಳಿದೆಯೆಂದು ಏನು ಬೇಕಾದರೂ ಕೊಟ್ಟುಬಿಡುತ್ತೀಯೇನೋ? ನೀನು ಇಷ್ಟು ಒಳ್ಳೆಯವನಾಗಿರುವುದರಿಂದಲೇ, ನಾನು ರೀತಿ ಕೆಟ್ಟವನಾಗಬೇಕಾಯಿತು.’

`ದಯವಿಟ್ಟು ನನ್ನ ಮನಃಶಾಂತಿಗೋಸ್ಕರವಾದರೂ ಸರಿ, ನನ್ನ ಮಾತನ್ನು ಸ್ವಲ್ಪ ಸಾವಧಾನದಿಂದ ಕೇಳಿಸಿಕೋ. ಎಲ್ಲಿಂದ ಆರಂಭಿಸಲಿ…? ನೀನು ಬಹಳ ಸಂಭ್ರಮ, ಉತ್ಸಾಹದಿಂದ ಭಾಗವಾಗಬೇಕು ಎಂಕೊಂಡಿದ್ದ ಗುರುಕುಲ ವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತೇನೆ. ಗುರುಶಿಷ್ಯ ಪರಂಪರೆ, ಗುರುದಕ್ಷಿಣೆ, ಇದೆಲ್ಲಾ ಕಲಿಕೆಗೊಂದು ಶಿಸ್ತುಬದ್ಧ ಚೌಕಟ್ಟು ಕೊಡಲು, ನಮ್ಮ ಬೌದ್ಧಿಕ ಜಗತ್ತು ಕಟ್ಟಿಕೊಂಡ ಒಂದು ವ್ಯವಸ್ಥೆಯಷ್ಟೇ. ಇದು, ಬ್ರಾಹ್ಮಣ ಮತ್ತು ಕ್ಷತ್ರಿಯ ವರ್ಗದವರ ನಡುವಿನ ಪರಸ್ಪರ ಪೂರಕ ಅಲಿಖಿತ ಒಳಒಪ್ಪಂದದಂತೆ. ಇಲ್ಲಿ ಅನ್ಯರಿಗೆ ಬಹುತೇಕ ಪ್ರವೇಶವಿಲ್ಲ. ವ್ಯವಸ್ಥೆಯಲ್ಲಿ, ಗುರು ಸ್ಥಾನದಲ್ಲಿರುವವನು ಕಲಿಕಾ ಪ್ರಕ್ರಿಯೆಯ ಸಂಪೂರ್ಣ ನಿಯಂತ್ರಕನ ಸ್ಥಾನದಲ್ಲಿರುತ್ತಾನೆ. ಇದು ಜ್ಞಾನದ ಅಧಿಕಾರ, ಅಹಂಕಾರ ಮತ್ತು ನಿಯಂತ್ರಣನೂ ಹೌದು. ಗುರುವಿನ ದೃಷ್ಟಿಯಿಂದ ನೋಡಿದರೆ, ವ್ಯವಸ್ಥೆಯ ಮುಂದುವರಿಕೆ ಅಗತ್ಯ. ಯಾಕೆಂದರೆ, ಅವನಿಗೆ ವೃತ್ತಿ, ಆದಾಯ, ಘನತೆ, ಸ್ಥಾನಮಾನ, ರಾಜಾಶ್ರಯ ಎಲ್ಲಾ ಕೊಟ್ಟಿದೆ. ಇದನ್ನು ಯಾರು ತಾನೇ ಕಳೆದುಕೊಳ್ಳಲು ಇಷ್ಟಪಡುತ್ತಾರೆ, ಹೇಳು?’

ಇನ್ನು ಇಲ್ಲಿಗೆ ಬರುವ ಶಿಷ್ಯಂದಿರಲ್ಲಿ ಬಹುತೇಕ ರಾಜಮನೆತನದವರೆ. ಅವರ ಅಧಿಕಾರದ ಪ್ರಾಬಲ್ಯ, ನಮ್ಮ ಗುರುಕುಲವನ್ನು ಆರ್ಥಿಕವಾಗಿ ನಿಯಂತ್ರಿಸುತ್ತದೆ. ಅಕಸ್ಮಾತ್ ಗುರುವಿಗೆ ಇಷ್ಟವಿದ್ದರೂ, ಜನಸಾಮಾನ್ಯರೊಂದಿಗೆ ಕಲಿಯಲು ಅಥವಾ ವಿವಿಧ ಸ್ಪರ್ಧೆಯಲ್ಲಿ ಪೈಪೆೀಟಿ ನೀಡಿ ಸೋಲಲು ರಾಜಮನೆತನದವರು ಇಷ್ಟಪಡುವುದಿಲ್ಲ. ವಿದ್ಯೆ ಎಲ್ಲರಿಗೂ ಸಿಗುವಂತಾದರೆ, ರಾಜಕುಮಾರರು ಹೇಗೆ ವಿಶೇಷವೆನಿಸಿಕೊಳ್ಳುತ್ತಾರೆ? ಹೀಗೆ, ವಿದ್ಯೆಯನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟು ಮೂಲಕ ವಿದ್ಯೆಯ ಗಂಧ ಗಾಳಿ ಅಭಿರುಚಿ ಜನಸಾಮಾನ್ಯರಿಗೆ ಸೋಂಕದಂತೆ, ನೋಡಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ, ಇಲ್ಲಿ ಗುರುವಿಗೂ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ನಿನ್ನಲ್ಲಿ ಮಾತ್ರ ಹೇಳುವ ಒಂದು ಗುಟ್ಟಿನ ವಿಚಾರವೆಂದರೆ, ಇಲ್ಲಿಗೆ ಬರುವ ಹೆಚ್ಚಿನ ರಾಜಕುಮಾರರು ಬುದ್ಧಿಶಕ್ತಿಯಲ್ಲಿ ಮೂಲತಃ ಸಾಮಾನ್ಯರೇ. ಅತಿ ಮುದ್ದು ಮತ್ತು ಅಧಿಕಾರದ ದರ್ಪದೊಂದಿಗೆ ಬೆಳೆದ ಇವರನ್ನು ತಿದ್ದುವುದೇ ಒಂದು ತ್ರಾಸದ ಕೆಲಸ. ಒಂದು ವೇಳೆ, ಸಮಾನತೆಯ ಹೆಸರಲ್ಲಿ, ಜನಸಾಮಾನ್ಯರನ್ನು ಗುರುಕುಲದ ಒಳಗೆ ಸೇರಿಸಿಕೊಂಡರೆ, ಹೆಚ್ಚಿನ ರಾಜಕುಮಾರರ ಅಹಂ ಇಳಿದುಹೋಗಲಿಕ್ಕಿದೆ. ಅವರ ನಿಜ ಸಾಮಥ್ರ್ಯ, ಬಂಡವಾಳ ಜಗತ್ತಿಗೆ ಬಯಲಾಗಲಿದೆ. ಆದ್ದರಿಂದಲೇ, ಹೊರಜಗತ್ತಿಗೆ ಬೇಲಿ, ದಾಟಲಾಗದ ಭದ್ರ ಕೋಟೆ. ಇಲ್ಲಿ, ಅವರದೇ ಸಮಾನ ಅಂತಸ್ತಿನ ಮಕ್ಕಳೊಂದಿಗೆ ಬೆರೆಯುತ್ತಾರೆ. ಅವರವರ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಜೀವನ ಮತ್ತು ಆಡಳಿತ ಕೌಶಲವನ್ನು ಪಡೆದು, ಮುಂದೆ ಅವರು ರಾಜರಾಗುತ್ತಾರೆ. ನಮಗೂ ಜೀವನ ನಿರ್ವಹಣೆಗೆ ಒಂದಿಷ್ಟು ಗುರುದಕ್ಷಿಣೆ ಸಿಗುತ್ತದೆ.’

`ಬಹುಶಃ, ನೀನೆ ಪ್ರಪ್ರಥಮ ಬಾರಿಗೆ ವ್ಯವಸ್ಥೆಯನ್ನು ಪ್ರಶ್ನಿಸಿದವನು. ಗುರುವಿನ ಅಗತ್ಯವಿಲ್ಲದೆ ಸ್ವಪ್ರಯತ್ನದಲ್ಲಿ ಕಲಿಯಬಹುದೆಂದು ನಿರೂಪಿಸಿ ನನ್ನ ಜ್ಞಾನದ ಅಹಂಕಾರವನ್ನು ಒಡೆದೆ. ಗುರುಕುಲ ಪರಂಪರೆಯ ಅಡಿಪಾಯವನ್ನೇ ಅಲ್ಲಾಡಿಸಿದೆ. ಅದೇ ರೀತಿ, ನಾನು ಕಷ್ಟಪಟ್ಟು ತಿದ್ದಿ ತಿದ್ದಿ ಕಲಿಸಿದ ಶಿಷ್ಯಂದಿರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಅವರ ಸಾಮಥ್ರ್ಯ ಮತ್ತು ಜ್ಞಾನದ ಅಹಂಕಾರ ಮುರಿದೆ. ನಿಜವಾಗಿಯೂ ಗೆದ್ದವನು ನೀನೆ.’

`ಇನ್ನು ನನ್ನ ವೈಯಕ್ತಿಕ ಹಿನ್ನೆಲೆಯ ಕುರಿತು ನಿನಗೆ ಒಂದಿಷ್ಟು ವಿಚಾರ ಹೇಳಿದರೆ, ನಾನು ಯಾಕೆ ಹೀಗೆ ಮಾಡಿದೆನೆಂದು ಇನ್ನೂ ಹೆಚ್ಚು ಅರ್ಥವಾಗಬಹುದೆಂಬ ಅನಿಸಿಕೆ. ನಾನು ಜಾತಿಯಲ್ಲಿ ಬ್ರಾಹ್ಮಣ ಎನ್ನುವುದನ್ನು ಬಿಟ್ಟರೆ, ನಿನ್ನಂತೆಯೇ ಸಾಮಾನ್ಯ ಬಡಕುಟುಂಬದ ಹಿನ್ನೆಲೆಯವನು. ನನ್ನ ಅಪ್ಪ ಭಾರದ್ವಾಜ, ಸಚ್ಚಾರಿತ್ರ್ಯದ ಬಡ ಋಷಿಯಾಗಿದ್ದ. ಅವನು, ಹೆಚ್ಚಿನ ಋಷಿಗಳು ಮಾಡುವ ಕುಲ ಕಸುಬಂತೆ, ತನ್ನದೇ ಗುರುಕುಲ ನಡೆಸುತ್ತಿದ್ದ. ಅಲ್ಲಿ ಒಂದಷ್ಟು ರಾಜಮನೆತನದ ವಿದ್ಯಾರ್ಥಿಗಳು ತರಬೇತಿಗೆಂದು ಬರುತ್ತಿದ್ದರು. ಇದರಿಂದ ಜೀವನವೇನೋ ಸಾಗುತ್ತಿತ್ತು. ನನ್ನ ಬಾಲ್ಯದಲ್ಲಿ, ವಿದ್ಯೆ ಕಲಿಯಲೆಂದು ಪಾಂಚಾಲ ದೇಶದ ರಾಜಕುಮಾರ ದ್ರುಪದ, ನಮ್ಮ ಆಶ್ರಮ ಸೇರಿಕೊಂಡಿದ್ದ. ಅವನು ನನ್ನ ಅತ್ಯಂತ ಖಾಸಾ ಸ್ನೇಹಿತನಾದ. ಕಲಿಕೆ ಮುಗಿದು ಆಶ್ರಮದಿಂದ ಬೀಳ್ಕೊಡುವಾಗ, `ಮುಂದೆ ನನ್ನ ಪಟ್ಟಾಭಿಷೇಕದ ನಂತರ ಭೇಟಿಯಾಗು. ನಿನಗೆ ಸಹಾಯ ಮಾಡುತ್ತೇನೆಅಂದಿದ್ದ. ನಾನು ಮಾತನ್ನು ಬಹುತೇಕ ಮರೆತೇ ಹೋಗಿದ್ದೆ.’

`ಮುಂದೆ, ನಾನು ಹೆಚ್ಚಿನ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಅಪ್ರತಿಮ ಬಿಲ್ವಿದ್ಯಾ ಪಾರಂಗತ ಗುರು ಪರಶುರಾಮರಲ್ಲಿ ಹೋದೆ. ಆತ, ನನ್ನಂತಹ ಬಡ ಶಿಷ್ಯನಿಗೆ ಕೂಡ ಪ್ರೀತಿಯಿಂದ, ಬಹಳ ಕಾಳಜಿಯಿಂದ ವಿದ್ಯೆ ಹೇಳಿಕೊಟ್ಟ. ಅಂದು, ನನ್ನಲ್ಲಿಯೂ ನಿನ್ನಂತೆಯೇ ಗುರುಭಕ್ತಿ, ಉತ್ಸಾಹ, ಹಂಬಲ, ದೈನ್ಯತೆ ಎಲ್ಲಾ ಇತ್ತು. ನನ್ನ ಗುರು ಪರಶುರಾಮ ಎಂದಿಗೂ ತನ್ನತನ ಬಿಟ್ಟುಕೊಟ್ಟವನಲ್ಲ, ಅಧಿಕಾರದ ಎದುರಿಗೂ ಕೂಡ. ತನ್ನಿಷ್ಟದಂತೆ ಶಿಷ್ಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಯಾವುದೇ ಅಧಿಕಾರ ವ್ಯವಸ್ಥೆಯ ಹಂಗಿಗೆ ಅಂಟಿಕೊಳ್ಳಲಿಲ್ಲ. ಬಹುಶಃ, ನಾನು ಸಹ ಹಾಗೆಯೇ ನಿನಗೆ ಹೇಳಿಕೊಟ್ಟಿದ್ದರೆ, ನನ್ನ ಗುರುವಿಗೆ ಸೂಕ್ತ ಗುರುದಕ್ಷಿಣೆ ಸಂದಾಯವಾಗುತ್ತಿತ್ತು. ಬದಲಾಗಿ, ಶ್ರೇಷ್ಠ ಗುರುವಿನಿಂದ ಉಚಿತವಾಗಿ ಕಲಿತ ವಿದ್ಯೆಯನ್ನು ನಾನು ನನ್ನ ವ್ಯವಹಾರ ಜೀವನಕ್ಕಾಗಿ, ವ್ಯವಸ್ಥೆಗೆ ಮಾರಿಕೊಂಡೇ ಅನ್ನಿಸುತ್ತದೆ.’

`ಪುನಃ ಕ್ಷಮಿಸು ನನ್ನಕಾಲಾನಂತರ ನನ್ನ ಮದುವೆಯಾಯಿತು. ಅಶ್ವತ್ಥಾಮ ಹುಟ್ಟಿದ. ನನ್ನ ಬಡತನ ಹಾಗೆಯೇ ಮುಂದುವರಿಯಿತು. ಒಂದು ದಿನ, ನನ್ನ ಮಗ ತನ್ನ ಸ್ನೇಹಿತರು ಹಾಲು ಕುಡಿಯುತ್ತಿದ್ದುದನ್ನು ನೋಡಿ ತಾನು ಕೂಡ ಹಾಲು ಕುಡಿಯಲು ಆಸೆ ಪಟ್ಟ. ಅದನ್ನು ತಿಳಿದ ಅವನ ಸ್ನೇಹಿತರು ನೀರಿನಲ್ಲಿ ಅಕ್ಕಿಹಿಟ್ಟು ಕಲಸಿ, `ಇದು ಹಾಲು, ಇದನ್ನು ಕುಡಿಎಂದು ಅಪಹಾಸ್ಯ ಮಾಡಿದರು. ಮುಗ್ಧತೆಯಿಂದ ಅದನ್ನು ಕುಡಿದು, ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು, ಮಗು ಅಳುವುದನ್ನು ಕೇಳಿಸಿಕೊಂಡ ನಾನು ಓಡಿ ಹೋಗಿ ರಕ್ಷಿಸಿದೆ. ಎಂದಿಗೂ ನನ್ನ ಬಡತನದ ಬಗ್ಗೆ ತಲೆಕೆಡಿಸಿಕೊಳ್ಳದ ನಾನು, ಅಂದು, ಮಗನಿಗಾಗಿಯಾದರೂ ಅಂತಸ್ತನ್ನು ಹೆಚ್ಚಿಸಿಕೊಳ್ಳಬೇಕೆಂದುಕೊಂಡೆ. ಆಗ, ನಮ್ಮ ಆಶ್ರಮವಾಸಿಯಾಗಿದ್ದ ಬಾಲ್ಯಸ್ನೇಹಿತ ದ್ರುಪದನ ನೆನಪಾಯಿತು. ಸ್ವಾಭಿಮಾನಿಯಾದ ನಾನು ಇಷ್ಟವಿಲ್ಲದಿದ್ದರೂ, ಅನಿವಾರ್ಯವೆಂಬಂತೆ, ‘ನನಗೊಂದು ಹಸು ದಾನ ಮಾಡುಎಂದು ಕೇಳಲು ಅವನಲ್ಲಿಗೆ ಹೋದೆ. ಸಿಂಹಾಸನದಲ್ಲಿ ಕುಳಿತಿದ್ದ ದ್ರುಪದನಿಗೆ ನನ್ನ ಪರಿಚಯ ಮರೆತೇ ಹೋಗಿತ್ತು. ‘ನಿನ್ನಂತಹ ಬಡ ಬ್ರಾಹ್ಮಣ ನನ್ನ ಸ್ನೇಹಿತನಾಗಲು ಹೇಗೆ ಸಾಧ್ಯ?’ –ಅಪಹಾಸ್ಯ ಮಾಡಿ ನಕ್ಕ. ಅವನ ಆಸ್ಥಾನದಲ್ಲಿದ್ದ ಸಮಸ್ತ ಮಹನೀಯರು ನನ್ನ ಗೇಲಿ ಮಾಡಿ ನಕ್ಕರು. ಮೊದಲ ಬಾರಿಗೆ ನನ್ನ ಬಡತನ ಜುಗುಪ್ಸೆ ಹುಟ್ಟಿಸಿತು. ನನ್ನ ಅಂತಸ್ತು ಹೇಗಾದರೂ ಮಾಡಿ ಹೆಚ್ಚಿಸಿಕೊಂಡು ಒಂದು ದಿನ ಇವನ ಮರೆವು ಬಿಡಿಸುತ್ತೇನೆ ಎಂದುಕೊಂಡೆ.’

ಅದೇ ಆವೇಶದಿಂದ ಹಸ್ತಿನಾಪುರದ ಮೂಲಕ ಹಾದು ಹೋಗುತ್ತಿದ್ದಾಗ, ಅರಮನೆಯ ಅಂಗಳದಲ್ಲಿ ಚೆಂಡಾಟವಾಡುತ್ತಿದ್ದ ಕುರುವಂಶದ ರಾಜಕುಮಾರರು ಎದುರಾದರು. ಅವರ ಆಟ ಗಮನಿಸುತ್ತಾ ದಣಿವಾರಿಸಿಕೊಳ್ಳುತ್ತಿದ್ದ ನಾನು, ಕೇವಲ ಹುಲ್ಲಿನ ಕಡ್ಡಿಯ ಮೂಲಕ ಚೆಂಡನ್ನು ತಳ್ಳುವುದನ್ನು ಅವರಿಗೆ ಹೇಳಿಕೊಟ್ಟೆ. ಇದರಿಂದ ಬಹಳ ರೋಮಾಂಚನಗೊಂಡ ಮಕ್ಕಳು ತಮ್ಮ ಅಜ್ಜ ಭೀಷ್ಮನಲ್ಲಿಗೆ ನನ್ನನ್ನು ಕರೆದುಕೊಂಡು ಹೋದರು. ಅವನಿಗೆ ನನ್ನ ಬಗ್ಗೆ ಮೊದಲೇ ಅರಿವಿದ್ದ ಕಾರಣ, ತಕ್ಷಣ ನನ್ನನ್ನು ಮಕ್ಕಳ ಬಿಲ್ವಿದ್ಯೆ ತರಬೇತಿಗೆ ನೇಮಕ ಮಾಡಿ ರಾಜಾಶ್ರಯ ನೀಡಿದ. ನನಗೆ ಕಳೆದು ಹೋದ ಮಾನ ಮರಳಿ ಸಿಕ್ಕಂತಾಯಿತು. ಅಂದಿನಿಂದ ಮಕ್ಕಳು ನನ್ನ ಆಶ್ರಮದಲ್ಲಿಯೇ ಇದ್ದಾರೆ. ಬಹಳ ವಿನಮ್ರ ಮಕ್ಕಳು. ಅದರಲ್ಲಿಯೂ ಅರ್ಜುನ, ನನ್ನ ಆಜ್ಞೆಯನ್ನು ಶಿರಸಃ ವಹಿಸಿ ಪಾಲಿಸುತ್ತಾನೆ. ಮುಂದೊಂದು ದಿನ ಅವನು ದ್ರುಪದನ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆ ಎನ್ನುವ ಭರವಸೆ ನನಗೆ ಇದೆ.’

ರೀತಿ ನನ್ನ ವ್ಯವಹಾರ ಬುದ್ಧಿ ಜಾಗೃತವಾಗಿ ಘೋರ ಕೃತ್ಯ ಮಾಡಿದೆನೋ, ನನ್ನ ಪ್ರೀತಿಯ ಶಿಷ್ಯನ ಮೇಲಿನ ಅತಿಯಾದ ಮೋಹದಿಂದಾಗಿಯೋ, ಅಥವಾ ನನ್ನ ಬಿಲ್ವಿದ್ಯೆ ಪರಿಣತಿಯ ಕುರಿತು ಎಲ್ಲರಿಂದ ಪ್ರಶಂಸೆ ಕೇಳಿಸಿಕೊಳ್ಳುತ್ತಾ, ನನಗರಿವಿಲ್ಲದೆ ಅಹಂಕಾರ ಆವರಿಸಿ ಬಿಟ್ಟಿತೇ?, ಪ್ರಬಲ ಕುರುವಂಶದ ರಾಜಕುಮಾರರನ್ನು ಬೆಳೆಸುವ ಅವಕಾಶ ಸಿಕ್ಕ ಮೇಲೆ ನಾನೊಬ್ಬನೇ ಶ್ರೇಷ್ಠಗುರು ಅನ್ನಿಸತೊಡಗಿತೇ? ಯಾಕೆಂದರೆ, ನೀನು ನನ್ನನ್ನೂ ಮೀರಿಸಿಬಿಟ್ಟಿದ್ದಿ. ಅಥವಾ, ನನಗೆ ಆಶ್ರಯ ನೀಡಿದವರ ಶಹಬಾಸ್ ಗಿರಿ ಬೇಕಾಗಿತ್ತೆ? ದ್ರುಪದನ ಮೇಲೆ ಸೇಡು ತೀರಿಸಿಕೊಳ್ಳುವುದು ಮುಖ್ಯವಾಗಿತ್ತೇ? ಗುರುಕುಲ ವ್ಯವಸ್ಥೆ ಮುಂದುವರಿಸಲು ನಿನ್ನ ಬಲಿದಾನ ಬೇಕಾಗಿತ್ತೇ…? ನಂಗಿನ್ನೂ ಸ್ಪಷ್ಟವಾಗಿಲ್ಲ.’

`ಬಹುಶಃ, ಅರ್ಜುನನ ಮೇಲಿದ್ದ ಅತೀವ ಪ್ರೀತಿ ಕೂಡ ಹೀಗೆ ಮಾಡಿಸಿತು ಅನ್ನಿಸುತ್ತದೆ. ಅವನು ನನ್ನ ಅತ್ಯಂತ ಭರವಸೆಯ ಶಿಷ್ಯ. ಅವನನ್ನು ನೋಯಿಸುವುದು ನನಗೆ ಕಷ್ಟವಾಗಿತ್ತು. ಜೊತೆಗೆ, ಅವನು ಕಠಿಣ ಪರಿಶ್ರಮಿ ಕೂಡ. ನಾನು ಹೇಳಿದ ಏನೇ ಕೆಲಸ ಮಾಡಲು ಸದಾ ಸಿದ್ಧನಿದ್ದ. ನನಗಿನ್ನೂ ನೆನಪಿದೆ. ತರಬೇತಿಯ ಆರಂಭದ ದಿನಗಳವು. ನನಗೆ ನನ್ನ ಶಿಷ್ಯಂದಿರನ್ನು ಸ್ವಲ್ಪ ಪರೀಕ್ಷಿಸಬೇಕೆನಿಸಿತು:

`ನಿಮ್ಮ ವಿದ್ಯೆ ಕಲಿತಾದ ಮೇಲೆ ನನ್ನದೊಂದು ವೈಯಕ್ತಿಕ ಗುರಿ ಸಾಧಿಸಲು ನಿಮ್ಮ ಸಹಾಯ ಬೇಕು. ಯಾರು ನನಗೆ ಸಹಾಯ ಮಾಡುತ್ತೀರಿ?’

`ಎಲ್ಲರೂ ಮೌನವಾಗಿದ್ದರು. ಆದರೆ ಅರ್ಜುನ ಮಾತ್ರ ಎದ್ದು ನಿಂತು ಹೇಳಿದ– `ಗುರುವರ್ಯ, ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ. ಅದು ಏನೆ ಆಗಿರಲಿ.

`ಅಂದೇ ಅರ್ಜುನ ನನ್ನ ಹೃದಯ ಗೆದ್ದುಬಿಟ್ಟ. ಕೃತಜ್ಞತೆಯಿಂದ ನನ್ನ ಕಣ್ಣು ತುಂಬಿಬಂತು.’

`ಉಳಿದೆಲ್ಲಾ ರಾಜಕುಮಾರರಿಗಿಂತ ಅರ್ಜುನ ಬಿಲ್ವಿದ್ಯೆಯಲ್ಲಿ ಅದ್ವಿತೀಯ ನೈಪುಣ್ಯ ಗಳಿಸಿದ್ದ. ಇಂತಹ ಶಿಷ್ಯ, ಗುರುವಿನ ಸ್ವಕಲಿಕೆಗೆ ಪ್ರಚೋದನೆಯಿದ್ದಂತೆ. ನನಗೆ ನಿರಂತರವಾಗಿ ಇನ್ನಷ್ಟು ಕಲಿಯಲು, ಬುದ್ಧಿಶಕ್ತಿ ಚುರುಕು ಗೊಳಿಸಲು ಪ್ರೇರಣೆ ಅವನಿಂದ ಸಿಗುತ್ತಿತ್ತು. ನನಗಿದ್ದ ಒಬ್ಬನೇ ಮಗ ಅಶ್ವತ್ಥಾಮನಿಗೂ ಕೂಡ ನಾನು ಬಿಲ್ವಿದ್ಯೆ ಹೇಳಿಕೊಡುತ್ತಿದ್ದೆ. ಎಲ್ಲರೆದುರು ಅವನಿಗೆ ಹೇಳಿಕೊಡಲು, ವಿಶೇಷ ಧ್ಯಾನ ನೀಡಲು ಕಷ್ಟವಾಗುತ್ತಿತ್ತು. ಹಾಗಾಗಿ, ಶಿಷ್ಯರೆಲ್ಲರೂ ನದಿಗೆ ನೀರು ತರಲು ಹೋಗಿದ್ದಾಗ ಅಶ್ವತ್ಥಾಮನಿಗೆ ಬಿಲ್ವಿದ್ಯೆ ಹೇಳಿಕೊಡುತ್ತಿದ್ದೆ. ಅರ್ಜುನ ಅದನ್ನೂ ಕಂಡುಹಿಡಿದುಬಿಟ್ಟ. ಹಾಗಾಗಿ, ಉಳಿದವರಿಗಿಂತ ಬೇಗನೆ ಓಡೋಡಿ ಬಂದು ಅಶ್ವತ್ಥಾಮನನ್ನು ಸೇರಿಕೊಂಡು ಇನ್ನಷ್ಟು ಕಲಿತುಕೊಳ್ಳುತ್ತಿದ್ದ. ಹೀಗೆ, ಅವನೆಂದೂ ಕಲಿಯುವ ಅವಕಾಶ ಕಳೆದುಕೊಂಡವನಲ್ಲ.’

`ಒಂದು ರಾತ್ರಿ ಇವರೆಲ್ಲಾ ಊಟ ಮಾಡುತ್ತಿದ್ದಾಗ ಜೋರಾಗಿ ಗಾಳಿ ಬೀಸಿ, ದೀಪ ಆರಿ ಹೋಯಿತು. ಉಳಿದವರೆಲ್ಲಾ ಊಟ ನಿಲ್ಲಿಸಿದರೆ, ಅರ್ಜುನ ಮಾತ್ರ ಕತ್ತಲಲ್ಲಿಯೂ ಊಟ ಮುಂದುವರಿಸಿದ. ಆಗ ಅವನಿಗೊಂದು ಆಲೋಚನೆ ಹೊಳೆಯಿತುಕತ್ತಲಲ್ಲಿ ಊಟ ಮಾಡಬಹುದಾದರೆ, ಬಿಲ್ವಿದ್ಯೆ ಕಲಿಯಲಾಗುವುದಿಲ್ಲವೇ? ತಕ್ಷಣ ನನ್ನಲ್ಲಿ ಪ್ರಸ್ತಾಪಿಸಿದ. ನಾನು, `ಪ್ರಯತ್ನ ಮಾಡುಎಂದು ಪೆÇ್ರೀತ್ಸಾಹಿಸಿದೆ. ಅಲ್ಲಿಂದ, ಅವನ ಶಸ್ತ್ರಾಭ್ಯಾಸ ರಾತ್ರಿಯೂ ಮುಂದುವರಿಯಿತು. ಏಕಾಂಗಿಯಾಗಿ ಅಭ್ಯಾಸ ಮಾಡುತ್ತಿದ್ದ. ಕಲಿಯುವ ಹುಚ್ಚು ಅವನಿಗೆ ಹಿಡಿದಿತ್ತು. ನೆಲದ ಮೇಲಲ್ಲದೆ, ಕುದುರೆ, ಆನೆ, ರಥದ ಮೇಲೆ ಕುಳಿತು ಬಿಲ್ವಿದ್ಯೆ ಕಲಿಯುತ್ತಿದ್ದ. ಬಿಲ್ಲಿನೊಂದಿಗೆ, ಖಡ್ಗ, ಈಟಿ, ಕತ್ತಿ, ಕೋಲು, ಹೀಗೆ, ಎಲ್ಲವನ್ನೂ ಆಯುಧವಾಗಿ ಬಳಸಿ ಯುದ್ಧ ಮಾಡುವುದನ್ನು ಕಲಿಯುತ್ತಿದ್ದ. ಕೆಲವೊಮ್ಮೆ, ಅವನ ಕಲಿಯುವ ಹುಚ್ಚು ನೋಡಿ ನನಗೆ, ನನ್ನ ಕೌಶಲದ ಬತ್ತಳಿಕೆಯೆಲ್ಲಾ ಮುಗಿದುಹೋದಂತೆ ಭಾಸವಾಗುತ್ತಿತ್ತು. ಜೊತೆಗೆ, ಪ್ರಪಂಚದಲ್ಲಿ ಅವನಿಗೆ ಸರಿಸಾಟಿಯಾದ ಬಿಲ್ವಿದ್ಯೆ ಪಾರಂಗತ, ಇನ್ನೊಬ್ಬ ಇರಬಾರದೆನ್ನುವ ವ್ಯಾಮೋಹವೂ ಆವರಿಸಿತು. ನಾನೂ ಕೂಡ ಹಾಗೆಯೇ ನಡೆದಿದ್ದೆ ಅಂದುಕೊಂಡಿದ್ದೆ. ಅವನನ್ನು ಮೀರಿಸುವವನು ಇನ್ನ್ಯಾರು ಇರಲಿಕ್ಕಿಲ್ಲವೆಂದು ಕೊಂಡಿದ್ದೆ, ನಿನ್ನನ್ನು ನೋಡುವವರೆಗೆ.’

`ನೀನು ಮೊನ್ನೆ ಅರಮನೆಯ ಬೊಗಳುತ್ತಿದ್ದ ನಾಯಿಯ ಬಾಯಿಗೆ ಗಾಯವಾಗದ ಹಾಗೆ ಏಳು ಬಾಣಗಳನ್ನು ಚುಚ್ಚಿ, ನಿನ್ನ ಕಲಿಕೆಯ ಏಕಾಗ್ರತೆಯನ್ನು ಭಂಗಗೊಳಿಸದಂತೆ ಮಾಡಿದ, ಚಾಕಚಕ್ಯತೆಯನ್ನು ಕಂಡಂದಿನಿಂದ ಅವನ ಅಹಂಕಾರ, ಹೆಬ್ಬಯಕೆ ಎಲ್ಲಾ ನುಚ್ಚು ನೂರಾಯಿತು. ಅವನು ಸಂಪೂರ್ಣವಾಗಿ ಕುಸಿದುಹೋದ. ಕಲಿಕೆಯಲ್ಲಿನ ಅವನ ಏಕಾಗ್ರತೆ ನಾಶವಾಗಿ ಹೋಯಿತು. ಮಂಕಾಗಿ ಹೋದ. ಇಡೀ ದಿನ ಮೌನವಾಗಿದ್ದವನು, ರಾತ್ರಿ ಎಲ್ಲರು ಮಲಗಿದ ಮೇಲೆ ನನ್ನ ಬಳಿ ಸದ್ದಿಲ್ಲದೇ ಬಂದು ಕೇಳಿದ.’

`ಗುರುವರ್ಯ, ಯಾಕೆ ಹೀಗಾಯಿತು? ನೀವೇ ಹೇಳುತ್ತಿದ್ದೀರಿನನಗಿಂತ ಬಿಲ್ವಿದ್ಯೆ ಪಾರಂಗತರು ಇನ್ನ್ಯಾರು ಹುಟ್ಟಲೂ ಸಾಧ್ಯವೇ ಇಲ್ಲ. ಈಗ, ನಿಮ್ಮ ಹಂಗಿಲ್ಲದೆ ಕೇವಲ ನಿಮ್ಮ ಒಂದು ಮೂರ್ತಿಯ ಪ್ರೇರಣೆಯಿಂದ ಅಷ್ಟೊಂದು ವಿದ್ಯೆ ಅವನು ಗಳಿಸಿರಬೇಕಾದರೆ, ಇದು ನನ್ನ ಸೋಲೋ ಅಥವಾ ನಿಮ್ಮದೋ? ನೀವೇ ಹೇಳಿ?’ ಎಂದು ನನ್ನ ಕಾಲು ಹಿಡಿದು ಕುಸಿದುಹೋದ. `

`ನಾನು, `ಈಗ ಬಹಳ ರಾತ್ರಿಯಾಗಿದೆ. ನಾಳೆ ಮಾತನಾಡುವ. ನೀನಿನ್ನು ಮಲಗುಎಂದು ಅವನನ್ನು ಕಳುಹಿಸಿದೆ. ಆದರೆ, ರಾತ್ರಿಯಿಡೀ ನನಗೂ ನಿದ್ರೆ ಹತ್ತಲಿಲ್ಲ.`

`ಅಲ್ಲ, ನೀನೆಂತಹ ಅಪ್ರತಿಮ ಛಲಗಾರನಿರಬೇಕು! ಕಣ್ಣೆದುರೇ ಹೇಳಿಕೊಟ್ಟರೂ ಕಲಿಯಲು ಕಷ್ಟ ಪಡುವವರ ಮಧ್ಯೆ, ಕೇವಲ ನನ್ನ ಮಣ್ಣಿನ ಪ್ರತಿಮೆ ಮುಂದೆ ನಿಂತು ಅಭ್ಯಾಸ ಮಾಡಿದೆಯೆಂದರೆ ನಂಬುವುದು ಕಷ್ಟ. ನಿಜ ಹೇಳಬೇಕೆಂದರೆ, ನಿನಗೆ ನಾನು ಗುರುವಾಗಿರಲಿಲ್ಲ. ನಿನಗೆ ನೀನೆ ಗುರುವಾಗಿದ್ದೆ. ನಿನ್ನ ತಪ್ಪುಗಳ ನೀನೆ ತಿದ್ದಿಕೊಂಡು ಕಲಿತೆ. ಒಬ್ಬ ವೃತ್ತಿನಿರತ ಗುರುವಾಗಿ, ನಿನ್ನ ಸಾಧನೆಯ ಕುರಿತು ನಾನು ಹೆಮ್ಮೆ ಪಡುತ್ತೇನೆ. ಆದರೆ ವಿಧಿಯಾಟ. ನಿನ್ನನ್ನು ಶಿಷ್ಯನಾಗಿ ಪಡೆಯುವ ಭಾಗ್ಯ ನನ್ನದಾಗಲಿಲ್ಲ. ಆದರೆ, ಇದರ ಅರಿವಿದ್ದೂ, ‘ಗುರುದಕ್ಷಿಣೆ ಹೆಸರಲ್ಲಿ, ಹೆಬ್ಬೆರಳ ಪಡೆದು ನಿನ್ನ ಕೌಶಲದ ಸದ್ದಡಗಿಸಿದೆ. ಇಂದು, ನನ್ನ ಜ್ಞಾನ, ತನ್ನ ಘನತೆಯನ್ನು ಸಂಪೂರ್ಣ ಕಳೆದುಕೊಂಡಿತು.’

`ಜೊತೆಗೆ, ನೀನು ನನ್ನ ಅಹಂಕಾರಕ್ಕೆ ದೊಡ್ಡ ಪೆಟ್ಟು ಕೊಟ್ಟೆಯೆನ್ನುವುದೂ ನಿಜ. ಕಲಿಯುವವನು ಮನಸ್ಸು ಮಾಡಿದರೆ, ಹೇಗೂ ಕಲಿಯಬಹುದು. ಗುರುವೇ ಹೇಳಿಕೊಡಬೇಕೆಂದಿಲ್ಲ. ಗುರುವಿನ ಆಶ್ರಮದಲ್ಲಿ ವರ್ಷಾನುಗಟ್ಟಲೆ ಕಾಲಕಳೆಯಬೇಕೆಂದಿಲ್ಲ. ಬದಲಾಗಿ, ಒಂದು ಪ್ರತಿಮೆ ಇದ್ದರೂ ಸಾಕು. ಕಲಿಕೆಯಲ್ಲಿ ಗುರುವಿಗಿಂತ ಶಿಷ್ಯನೇ ಮುಖ್ಯ. ನಿನ್ನ ಒಂದು ನಡೆ, ಇಡೀ ಗುರುಶಿಷ್ಯ ಪರಂಪರೆಯನ್ನೇ ಅಲ್ಲಾಡಿಸುವಂತಹ, ಪ್ರಶ್ನಿಸುವಂತಹ ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಒಂದು ವೇಳೆ ನಿನ್ನ ಹೆಬ್ಬೆರಳ ಕಾಣಿಕೆ ಪಡೆಯದಿದ್ದರೆ, ನಾಳೆ ಹೆಚ್ಚಿನ ಆಶ್ರಮಗಳೇ ಮುಚ್ಚಿ ಹೋಗಬಹುದು. ಆಗ, ಇದನ್ನೇ ವೃತ್ತಿಯಾಗಿಸಿಕೊಂಡ ಎಲ್ಲ ಗುರುಗಳ ಹೊಟ್ಟೆಪಾಡಿನ ದಾರಿಯನ್ನು ಮುಚ್ಚಿಸಿದ ಅಪವಾದ, ನನ್ನ ಮೇಲೆ ಬರಬಹುದು. ಹಾಗಾದಲ್ಲಿ, ಆತ್ಮೀಯ ಗುರು ವೃಂದದವರಿಗೆ ನಾನು ಹೇಗೆ ಉತ್ತರಿಸಲಿ? ಆದ್ದರಿಂದ, ನಾನು ವ್ಯವಸ್ಥೆಯ ಒಂದು ಭಾಗವಾಗಿ, ಅದಾಗದಂತೆ ತಡೆಯುವುದು ನನ್ನ ಕರ್ತವ್ಯವೆನಿಸಿತು. ಒಟ್ಟಿನಲ್ಲಿ, ವ್ಯವಸ್ಥೆ ಉಳಿಸಿಕೊಳ್ಳಲು, ನನ್ನಂತಹ ಹಲವಾರು ಗುರುಗಳ ಜೀವನ ನಿರ್ವಹಣೆ ನಿರ್ವಿಘ್ನವಾಗಿ ಮುಂದುವರಿಯಲು, ನಿನ್ನ ಸ್ವಕಲಿಕೆಯ ಬಲಿದಾನವಾಗಲೇ ಬೇಕಿತ್ತು.’

`ನೀನೇನು ಮಾಡಿದೆಯೆನ್ನುವ ಅರಿವಿದೆಯೇ ನಿನಗೆ? –ನೀನು ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಲು ಹೊರಟಿದ್ದಿ. ಗುರು ನಿಯಂತ್ರಿತವಾಗಿರುವ ವ್ಯವಸ್ಥೆಯನ್ನು, ನೀನು ಶಿಷ್ಯ ಕೇಂದ್ರಿತವಾಗಿ ಮಾಡಲು ಹೊರಟಿದ್ದಿ. ಕಲಿಸುವವನಿಗಿಂತ, ಕಲಿಯುವವನ ಇಚ್ಚಾಶಕ್ತಿ ಬಹಳ ಮುಖ್ಯವೆನ್ನುವುದನ್ನು ಸಾಧಿಸಲು ಹೊರಟಿದ್ದಿ. ಅದಾಗಲು ಸಾಧ್ಯವಿಲ್ಲ. ನಾನು ವಿಲಕ್ಷಣ ಬೆಳವಣಿಗೆಯನ್ನು ತಡೆಯಲೇ ಬೇಕಿತ್ತು. ಈಗ ನಡೆದಿರುವುದು ಎಲ್ಲಾ ಸರಿಯಾಗಿಯೇ ಇದೆ. ನಮ್ಮಿಬ್ಬರ ನೋವು, ಕಣ್ಣೀರು, ನಿಟ್ಟುಸಿರು, ಎಲ್ಲಾ ಅನಿವಾರ್ಯ. ನಿನ್ನಷ್ಟೇ ನೋವು ನನಗೂ ಆಗಿದೆ. ವ್ಯವಸ್ಥೆ ಮುಂದುವರಿಯುವುದೇ ಇಲ್ಲಿ ಎಲ್ಲದಕ್ಕಿಂತ ಮುಖ್ಯ. ನನ್ನ ಕ್ಷಮಿಸು. ಆದರೆ, ನೀನು ಹೀಗೆ ಗುರುವಿನ ಅರಿವಿಗೆ ಬಾರದಂತೆ ಕಲಿಯುವಂತಿಲ್ಲ.’

`ಒಂದು ವಿಷಯ ಗೊತ್ತಿದೆಯೇ ನಿನಗೆ? – ವ್ಯವಸ್ಥೆಯ ಕೈಗೊಂಬೆಯಾಗಿ, ನಾನು ನನ್ನ ಒಬ್ಬನೇ ಮಗ ಅಶ್ವತ್ಥಾಮನಿಗಿಂತ, ಶಿಷ್ಯ ಅರ್ಜುನನನ್ನು ಒಬ್ಬ ಶ್ರೇಷ್ಠ ಬಿಲ್ವಿದ್ಯ ಪಾರಂಗತನನ್ನಾಗಿಸಿದೆ. ಒಂದು ವೇಳೆ ಅವನು ಕುರು ಪುತ್ರರನ್ನು ಬಿಲ್ವಿದ್ಯೆಯಲ್ಲಿ ಮೀರಿಸಿದ್ದರೆ, ನನ್ನ ಪುತ್ರವಾತ್ಸಲ್ಯ ಮತ್ತು ಗುರುವೃತ್ತಿಯ ಕುರಿತು ರಾಜಮನೆತನದವರು ಸಂಶಯ ಪಡುತ್ತಿದ್ದರು. ಅದೂ ಕೂಡ ನಾನು ವ್ಯವಸ್ಥೆಗಾಗಿ ಮಾಡಿದ ತ್ಯಾಗ.’

`ಆಕಸ್ಮಾತ್, ಉಳಿದವರಂತೆ ಗುರುವಿನ ಉಸ್ತುವಾರಿಯಲ್ಲಿ ಗುರುಕುಲದ ಒಳಗೆ ಕಲಿಯುವುದಕ್ಕಿಂತ, ನಿನ್ನಂತವನೊಬ್ಬ ಕೇವಲ ತನ್ನ ಇಚ್ಚಾಶಕ್ತಿಯ ಬಲದಿಂದ ಹೊರಗೆನೇ ಚೆನ್ನಾಗಿ ಕಲಿಯಬಹುದಾದರೆ, ಗುರುಕುಲದ ಅಗತ್ಯವಾದರೂ ಏನಿದೆ ಹೇಳು? ವ್ಯವಸ್ಥೆಯೊಂದು ಮುಂದುವರಿಯಬೇಕಾದರೆ, ನನ್ನ ನಿನ್ನಂತಹ ಹಲವಾರು ಜನರ ತ್ಯಾಗ, ಬಲಿದಾನ ಬೇಕಾಗುತ್ತದೆ. ಇಂದು ನಿನ್ನ ಹೆಬ್ಬೆರಳ ಬಲಿದಾನವಾದರೆ, ನನ್ನ ಗುರು ಸ್ಥಾನದ ಹಿರಿಮೆ ಮಣ್ಣುಪಾಲಾಯಿತು?’

ಮುಸ್ಸಂಜೆ ಕಳೆದು ಹೋಗಿ, ಸುತ್ತಲೂ ಸಂಪೂರ್ಣ ಕತ್ತಲು ಆವರಿಸಿತ್ತು.

Leave a Reply

Your email address will not be published.