ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!

ಸಿ.ಯು.ಬೆಳ್ಳಕ್ಕಿ

ಆಕಾಶವಾಣಿ ಜನಪದ ಸಂಗೀತ ವಿಭಾಗಕ್ಕೆ ಈಗ ಗ್ರಹಣ ಹಿಡಿದಂತಿದೆ. ದೆಹಲಿಯಲ್ಲಿ ಕೇಂದ್ರೀಕ್ರತ ಆನ್ಲೈನ್ ಅರ್ಜಿ ಸಲ್ಲಿಕೆ, ಮೇಲಿಂದ ಮೇಲೆ ಅಡಿಷನ್ ನಿಯಮಗಳ ಬದಲಾವಣೆ, ಪ್ರಕ್ರಿಯೆಗಳಲ್ಲಿ ಉಂಟಾದ ವಿಳಂಬ ಇವು ಗೊಂದಲ ಸೃಷ್ಟಿಸಿವೆ.

ಹಲವು ವರ್ಷಗಳ ಹಿಂದೆ ಆಕಾಶವಾಣಿ ಧಾರವಾಡದಲ್ಲಿ ಜನಪದ ಕಲಾವಿದರ ಧ್ವನಿಪರೀಕ್ಷೆ (ಆಡಿಷನ್) 22 ದಿನ ನಡೆಯಿತು. ಅದರಲ್ಲಿ 8 ಜಿಲ್ಲೆಗಳ ನೂರಾರು ಗ್ರಾಮಗಳ ಜನಪದ ಕಲಾವಿದರು ಭಾಗವಹಿಸಿದ್ದು ಒಂದು ದಾಖಲೆಯಾಗಿದೆ. ಟೆಂಪೊ, ಟ್ರ್ಯಾಕ್ಟರ್, ಮಿನಿ ಟ್ರಕ್ಕುಗಳಲ್ಲಿ ಗುಂಪುಗುಂಪಾಗಿ ಉತ್ಸಾಹದಿಂದ ಬಂದು ಭಾಗವಹಿಸಿದ್ದರು. ಅದೊಂದು ಜನಪದ ಸಂಭ್ರಮ. ವರ್ಷದಲ್ಲಿ ಕನಿಷ್ಠ 2-3 ಇಂತಹ ಧ್ವನಿ ಪರೀಕ್ಷೆಗಳು ನಡೆಯುತ್ತವೆ. ಕಲಾವಿದರು ಧ್ವನಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿ, ಬಿಡಲಿ, ಅದರೆ ಒಂದು ಮಾತಂತೂ ದಿಟ. ಅವರೆಲ್ಲ ಗ್ರಾಮೀಣ ಹಿನ್ನೆಲೆಯುಳ್ಳ ನಿಜವಾದ ಜನಪದ ಕಲಾವಿದರಾಗಿರುತ್ತಾರೆ.

ಪ್ರಕ್ರಿಯೆ ಕೇವಲ ಇದೊಂದೇ ಕೇಂದ್ರಕ್ಕೆ ಸೀಮಿತವಾದುದಲ್ಲ. ದೇಶದ ನೂರಾಐವತ್ತಕ್ಕೂ ಹೆಚ್ಚು ಪ್ರಮುಖ ಕೇಂದ್ರಗಳಲ್ಲಿ ಜನಪದ ಕಲಾವಿದರು ಆಯ್ಕೆಗಾಗಿ ನಿರಂತರವಾಗಿ ಧ್ವನಿಪರೀಕ್ಷೆಗಳು ನಡೆಯುತ್ತವೆ. ಸುಮಾರು 8 ದಶಕಗಳ ಹಿಂದೆಯೇ ಪ್ರಕ್ರಿಯೆ ಆಕಾಶವಾಣಿಯಲ್ಲಿ ಪ್ರಾರಂಭವಾಯಿತು. ಸಾಹಿತ್ಯ, ಸಂಗೀತ ಲೋಕಗಳ ವಿಸ್ಮಯ ಎಂದು ಗುರುತಿಸಲ್ಪಡುವ ಭಾರತೀಯ ಜನಪದ ಸಂಗೀತ ವೈಶಿಷ್ಟ್ಯಪೂರ್ಣವಾದದ್ದು. ಮೊದಲಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿ, ಯಾವುದೇ ನಿರ್ದಿಷ್ಟ ಪೋಷಕರಿಂದ ವೇದಿಕೆಯಿಂದ ವಂಚಿತರಾಗಿದ್ದ, ಅಪ್ಪಟ ಜನಪದ ಸಂಗೀತ ಕಲೆಕಲಾವಿದರನ್ನು ಗುರುತಿಸಿ, ಅದಕ್ಕೆ ಬೃಹತ್ ವೇದಿಕೆ, ಪೋಷಣೆ ಒದಗಿಸಿದ ಹಾಗೂ ವಿಶೇಷವಾಗಿ ಗ್ರಾಮೀಣ ಬಡಹಿಂದುಳಿದ ಕಲಾವಿದರು ಬದುಕು ಕಟ್ಟಿಕೊಳ್ಳುವಂತೆ ಮಾಡಿದ ಶ್ರೇಯ ಆಕಾಶವಾಣಿಯದಾಗಿದೆ. ಧ್ವನಿಪರೀಕ್ಷೆ ಮೂಲಕ ಜನಪದ ಕಲಾವಿದರ ಪ್ರತಿಭೆಯ ಮೌಲ್ಯಮಾಪನ ಮಾಡಿ ಅರ್ಹರಾದವರನ್ನು ಅನುಮೋದಿತ ಕಲಾವಿದರನ್ನಾಗಿ ಆಯ್ಕೆಮಾಡಿ, ಗ್ರೇಡಿಂಗ್ ನೀಡುವ ಕ್ರಮ ದೇಶದಲ್ಲಿಯೇ ವಿಶಿಷ್ಟವಾದ ವ್ಯವಸ್ಥೆಯಾಗಿದೆ.

ಜನಪದ ಸಂಗೀತದ ಕಣಜ

ವಿವಿಧ ಭಾಷೆ, ಪ್ರದೇಶ, ಬುಡಕಟ್ಟಿಗೆ ಸೇರಿದ 20,000 ಕ್ಕೂ ಹೆಚ್ಚು ಅನುಮೋದಿತ ಕಲಾವಿದರು ದೇಶದ ಆಕಾಶವಾಣಿ ಕೇಂದ್ರಗಳಿಂದ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಎಲ್ಲ ವಿಶಿಷ್ಟ ಕಲಾಪ್ರಕಾರಗಳ ಹಿರಿಯ ಜನಪ್ರಿಯ ಕಲಾವಿದರ ಸಾವಿರಾರು ಗಂಟೆಗಳ ಧ್ವನಿಮುದ್ರಣ ಹೊಂದಿರುವ ಆಕಾಶವಾಣಿ ಕೇಂದ್ರೀಯ ಧ್ವನಿಭಂಡಾರ ಹಾಗೂ ವಿವಿಧ ಆಕಾಶವಾಣಿ ಕೆಂದ್ರಗಳಲ್ಲಿರುವ ಧ್ವನಿಭಂಡಾರಗಳು ಅನನ್ಯ ಹಾಗೂ ಅಪರೂಪ.

ಜನಪದ ಸಂಗೀತ ಆಕಾಶವಾಣಿ ಪ್ರಸಾರದಲ್ಲಿ ಮಹತ್ತರ ಸ್ಥಾನ ಪಡೆದಿದೆ. ಮೊದಲು ಗ್ರಾಮೀಣ ಕಾರ್ಯಕ್ರಮಕ್ಕೆ ಸೀಮಿತವಾಗಿದ್ದ ಜನಪದ ಸಂಗೀತ ಕ್ರಮೇಣ ಸಾಮಾನ್ಯ ಹಾಗೂ ರಾಷ್ಟ್ರೀಯ ಪ್ರಸಾರದಲ್ಲೂ ಸ್ಥಾನ ಪಡೆಯಿತು. ಜನಪದ ಸಂಗೀತ ಉಳಿಸಿ ಬೆಳೆಸಿ ಸಂಗ್ರಹಿಸುವಲ್ಲಿ ಆಕಾಶವಾಣಿ ಪಾತ್ರ ವಿಶಿಷ್ಟವಾದುದು. ಇದೇ ಉದ್ದೇಶಕ್ಕಾಗಿ ದೇಶಾದ್ಯಂತ ನಿರ್ದಿಷ್ಟ ಪ್ರದೇಶಕ್ಕನುಗುಣವಾಗಿ ಆಕಾಶವಾಣಿ ಕೇಂದ್ರಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲಾಯಿತು. ಆಕಾಶವಾಣಿ ಧಾರವಾಡ ದಕ್ಷಿಣ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಘಟಕಗಳಲ್ಲಿ ಒಂದು, ಹಾಗೂ ಕರ್ನಾಟಕದ ಏಕೈಕ ಕೇಂದ್ರವಾಗಿದೆ. ಕರ್ನಾಟಕ ಜನಪದ ಸಂಗೀತದ ಪ್ರಮುಖ ಕಣಜವಾಗಿದೆ.

ರಾಜ್ಯದ ಆಕಾಶವಾಣಿ ಕೇಂದ್ರಗಳಲ್ಲಿ ಒಂದುಸಾವಿರಕ್ಕೂ ಹೆಚ್ಚು ಜನಪದ ತಂಡಗಳ ಸುಮಾರು ಐದು ಸಾವಿರ ಕಲಾವಿದರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿ ನೂರಾರು ಜನಪದ ಪ್ರಕಾರಗಳು ಜೀವಂತವಾಗಿವೆ. 58 ಕಲಾಪ್ರಕಾರಗಳನ್ನು ಪ್ರತಿನಿಧಿಸುವ 500ಕ್ಕೂ ಹೆಚ್ಚು ಅನುಮೋದಿತ ಜನಪದ ಕಲಾವಿದರ ತಂಡಗಳನ್ನು ಹೊಂದಿದ ಧಾರವಾಡ ಕೇಂದ್ರ ದೇಶದಲ್ಲಿಯೇ ವಿಶಿಷ್ಟ ಸ್ಥಾನಪಡೆದಿದೆ. ಹಗಲು ರಾತ್ರಿ ಹಾಡಿದರೂ ಮುಗಿಯದ ಜನಪದ ಭಂಡಾರ ವಾರಗಟ್ಟಲೆ ಹಾಡಿದರೂ ಮುಗಿಯದ ಜನಪದ ಆಟಗಳ ಸಂಗ್ರಹ ಹೊಂದಿರುವುದು ಬಹಳಷ್ಟು ಆಕಾಶವಾಣಿ ಕಲಾವಿದರ ತಂಡಗಳ ವಿಶೇಷತೆಯಾಗಿದೆ.

ಅವಕಾಶಗಳ ಆಗರ

ಕಂಚಿನ ಕಂಠದಲ್ಲಿ ಸುಮಧುರವಾಗಿ ಹಾಡುತ್ತ ಬೀದಿಯಲ್ಲಿ ಹೋಗುತ್ತಿದ್ದ ಕಲಾವಿದನ ಪ್ರತಿಭೆಗೆ ಮಾರುಹೋಗಿ ಪಂಡಿತ ಮಲ್ಲಿಕಾರ್ಜುನ ಮನಸೂರ ಆತನನ್ನು ಆಕಾಶವಾಣಿ ಕೇಂದ್ರಕ್ಕೆ ಕರೆದೊಯ್ದು ಧ್ವನಿಪರೀಕ್ಷೆ ಮಾಡಿಸಿ ಅನುಮೋದಿತ ಕಲಾವಿದನನ್ನಾಗಿ ಮಾಡಿಸಿದರು. ಕಲಾವಿದ ತಮ್ಮ ಸ್ಮರಣೀಯ ತತ್ವಪದಗಳಿಂದ ಜನಪ್ರಿಯವಾದ ಕಲಾವಿದ ಮಾರೆಪ್ಪ ದಾಸರ. ರಾಷ್ಟ್ರಾದ್ಯಂತ ಇಂತಹ ಸಾವಿರಾರು ಅವಕಾಶವಂಚಿತ ಬಡ, ಪ್ರತಿಭಾನ್ವಿತ ಜನಪದ ಕಲಾವಿದರನ್ನು ಗುರುತಿಸಿ ಉಳಿಸಿ ಬೆಳೆಸಿದ ಶ್ರೇಯ ಆಕಾಶವಾಣಿಗೆ ಸಲ್ಲುತ್ತದೆ.

ಇಂತಹ ವ್ಯವಸ್ಥಿತ ಮಾದರಿಯ ಆಕಾಶವಾಣಿ ಜನಪದ ಸಂಗೀತ ವಿಭಾಗಕ್ಕೆ ಈಗ ಗ್ರಹಣ ಹಿಡಿದಂತಿದೆ. ದೆಹಲಿಯಲ್ಲಿ ಕೇಂದ್ರೀಕ್ರತ ಆನ್ಲೈನ್ ಅರ್ಜಿ ಸಲ್ಲಿಕೆ, ಮೇಲಿಂದ ಮೇಲೆ ಅಡಿಷನ್ ನಿಯಮಗಳ ಬದಲಾವಣೆ, ಪ್ರಕ್ರಿಯೆಗಳಲ್ಲಿ ಉಂಟಾದ ವಿಳಂಬ ಇವು ಗೊಂದಲ ಸೃಷ್ಟಿಸಿದವು. ಆಕಾಶವಾಣಿ ಕೇಂದ್ರಗಳ ಮಟ್ಟದಲ್ಲಿ ನಿಯಮಿತವಾಗಿ ನಡೆಯುತ್ತಿದ್ದ ಅಡಿಷನ್ಗಳು ಅನಿಯಮಿತವಾದವು. ಇವೆಲ್ಲ ಗೊಂದಲಗಳ ಮಧ್ಯ ಕರೋನಾ ಕಾಟ. ಇದರಿಂದಾಗಿ ಜನಪದ ಧ್ವನಿಪರೀಕ್ಷೆ ಹಾಗೂ ರಿಕಾರ್ಡಿಂಗ್ ಸ್ಥಗಿತ. ಇವು ಯಾವಾಗ ನಿಯಮಿತವಾಗಿ ಪ್ರಾರಂಭವಾಗುತ್ತವೆ ಎಂದು ಕಲಾವಿದರು ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ. ಕಾರ್ಯ ಅವ್ಯಾಹತವಾಗಿ ನೋಡಿಕೊಳ್ಳಬೇಕಾಗಿದೆ. ಕೆಲಸವನ್ನು ಸಾರ್ವಜನಿಕ ಪ್ರಸಾರಕ್ಕೆ ಮೀಸಲಾದ ಆಕಾಶವಾಣಿ ಕೇಂದ್ರಂಥ ವ್ಯವಸ್ಥೆಗೆ ಮಾತ್ರ ಸಾಧ್ಯ.

ಆಕಾಶವಾಣಿಯ ಕೃಷಿ ಲೋಕ

ತೇರಗಾಂವ ಉತ್ತರ ಕನ್ನಡಜಿಲ್ಲೆಯ ಒಂದು ಪುಟ್ಟ ಗ್ರಾಮ. ಅದು ಗುಣಮಟ್ಟದ ಆಪುಸ್ ಮಾವಿನ ಕಸಿಮಾಡಿದ ಸಸಿಗಳಿಗಾಗಿ ಹೆಸರುವಾಸಿ. ಗ್ರಾಮಕ್ಕೆ ಅದನ್ನು ತಂದವರು ಅದೇ ಊರಿನ ಕುಶಪ್ಪನವರ್ ಅವರು. ಅದು ಹೇಗೆ ಸಾಧ್ಯವಾಯಿತು ಎಂದು ರೇಡಿಯೊ ಸಂದರ್ಶನದಲ್ಲಿ ಕೇಳಿದಾಗ ಅವರ ಉತ್ತರ ಕೇಳಿ ನಮಗೆಲ್ಲ ಆಶ್ಚರ್ಯ. ಹೇಳಿದ್ದಿಷ್ಟೆ ಆಕಾಶವಾಣಿ ಧಾರವಾಡದಿಂದ ಪ್ರಸಾರವಾದ ಸಂದರ್ಶನವೊಂದರಲ್ಲಿ ತೋಟಗಾರಿಕಾ ತಜ್ಞರೊಬ್ಬರು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕಸಿ ಕಟ್ಟಲು ಆಸಕ್ತಿ ಇರುವವರಿಗೆ ಉಚಿತವಾಗಿ ತರಬೇತಿ ನೀಡಲಾಗುವುದೆಂದು ಹೇಳಿದ ವಿಷಯ ತಿಳಿದು ಕುಶಪ್ಪನವರ್ ತರಬೇತಿಗೆ ಹಾಜರಾದರು, ತರಬೇತಿ ಮುಗಿಸಿದ ಅವರು ಕಸಿ ಕೆಲಸದಲ್ಲಿ ನಿರತರಾದರು. ಅವರ ಕಸಿಕೃಷಿಯು ತೇರಗಾಂವಿನ ಎರಡುನೂರಕ್ಕೂ ಹೆಚ್ಚು ಕುಟುಂಬಗಳಿಗೆ ಸ್ಫೂರ್ತಿಯಾಯಿತು. ಪ್ರತಿಫಲ ಇಂದು ತೇರಗಾಂವ ಮಾವಿನ ಕೃಷಿಗ್ರಾಮವಾಗಿ ರೂಪಗೊಂಡಿದೆ.

1960 ದಶಕದಲ್ಲಿ ತಮಿಳುನಾಡಿನ ತಂಜಾವೂರ ಪ್ರದೇಶದಲ್ಲಿ ಅಧಿಕ ಇಳುವರಿ ಭತ್ತದ ತಳಿಯೊಂದು ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಯಿತು. ರೇಡಿಯೋ ಮೂಲಕವೇ ರೈತರಿಗೆ ಚಿರಪರಿಚಿತವಾದಎಡಿಟಿ-27’ ಈಗ ರೇಡಿಯೊ ಭತ್ತದ ತಳಿ ಎಂದೇ ಗುರುತಿಸಲ್ಪಟ್ಟಿದೆ.

ರೈತರ ಮಿತ್ರ, ಒಡನಾಡಿ, ಸರಳ ಜನಮಾಧ್ಯಮ ರೇಡಿಯೊ ನೀಡುವ ಮಾಹಿತಿ ಶಿಕ್ಷಣ ಎಂತಹ ಗಮನಾರ್ಹ ಬದಲಾವಣೆಗಳನ್ನು ತರಲು ಸಾಧ್ಯ ಎಂಬುದಕ್ಕೆ ಮೇಲೆ ಪ್ರಸ್ತಾಪಿಸಿದ ಎರಡು ನಿದರ್ಶನಗಳೇ ಸಾಕ್ಷಿ. ಮಾಹಿತಿಶಿಕ್ಷಣ ಎಂದರೆ ಜ್ಞಾನ. ಇಂದು ಜ್ಞಾನವನ್ನೇ ಶಕ್ತಿಯೆಂದು ಪರಿಗಣಿಸಲಾಗುತ್ತದೆ. ಜೀವನಾವಶ್ಯಕ ಮಾಹಿತಿ, ಶಿಕ್ಷಣ ಪ್ರಸಾರಗಳು ಸಶಕ್ತೀಕರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಂಟಾದ ವ್ಯಾಪಕ ಬದಲಾವಣೆಗೆ ಅದರಲ್ಲೂ ವಿಶೇಷವಾಗಿ ಹಸಿರು ಕ್ರಾಂತಿಗೆ ಆಕಾಶವಾಣಿ ಕೊಡುಗೆ ಅಪೂರ್ವವಾದುದು. 1936ರಿಂದ ದೆಹಲಿ ಕೇಂದ್ರ ಗ್ರಾಮಾಂತರ ಜನರಿಗಾಗಿ ಕಾರ್ಯಕ್ರಮ ಪ್ರಾರಂಭಿಸಿತು. 1965ರಿಂದ ಆಕಾಶವಾಣಿಯಲ್ಲಿ ಗ್ರಾಮಾಂತರ ಪ್ರಸಾರ ಹೊಸರೂಪವನ್ನು ಪಡೆದುಕೊಂಡಿತು. ಗ್ರಾಮೀಣ ಜನತೆಗೆ ಕೃಷಿ ಮಾಹಿತಿ, ಶಿಕ್ಷಣ, ಜತೆಗೆ ಮನರಂಜನೆಯನ್ನು ಒದಗಿಸುವ ಉದ್ದೇಶದಿಂದಹೊಲಮನೆ(ಫಾರ್ಮ್ ಆ್ಯಂಡ್ ಹೋಮ್) ವಿಭಾಗಗಳನ್ನು ದೇಶದ ಆಯ್ದ ಪ್ರಮುಖ ಕೇಂದ್ರಗಳಲ್ಲಿ ಸ್ಥಾಪಿಸಲಾಯಿತು. ಇಂದು ದೇಶದ ಬಹುತೇಕ ಆಕಾಶವಾಣಿ ಪ್ರಸಾರ ಕೇಂದ್ರಗಳಲ್ಲಿ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

ಕಿರು ನಿಲಯ

ಭಾಷಣ, ಚರ್ಚೆ, ಸಂದರ್ಶನ, ರೂಪಕ, ಜನಪದ ಸಂಗೀತ ಹೀಗೆ ಪ್ರಸಾರದ ಎಲ್ಲ ಪ್ರಕಾರಗಳು ಇಲ್ಲಿ ಬಳಕೆಯಾಗಿವೆ. ಗ್ರಾಮೀಣ ಮಕ್ಕಳು, ಯುವಜನ, ಮಹಿಳೆಯರು ಕಾರ್ಯಕ್ರಮಗಳಲ್ಲಿ ಬಾಗವಹಿಸಲು ವಿಶೇಷ ಅವಕಾಶಗಳಿವೆ. ಇವೆಲ್ಲವುಗಳಿಂದ ಕೃಷಿ ಕಾರ್ಯಕ್ರಮವನ್ನು ಒಂದು ಕಿರು ನಿಲಯವೆಂದು ಕರೆಯಬಹುದು. ವಿಕೇಂದ್ರೀಕೃತ ಪ್ರಸಾರ ವ್ಯವಸ್ಥೆ, ಸರಳ ಹಾಗೂ ಸ್ಥಳೀಯ ಆಡು ಭಾಷೆಯಲ್ಲಿ, ತಮ್ಮ ಆಸಕ್ತಿಯ ಹಾಗೂ ಉಪಯುಕ್ತ ವಿಷಯಗಳ ಪ್ರಸಾರ, ಗ್ರಾಮೀಣ ಪ್ರತಿಭೆಗಳಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳು ಇವೆಲ್ಲವುಗಳಿಂದ ಕೃಷಿರಂಗ ಆಕಾಶವಾಣಿ ಪ್ರಸಾರದಲ್ಲಿ ವೈಶಿಷ್ಟ್ಯಪೂರ್ಣ.

ಪರ್ವಕಾಲ

19ನೆಯ ಶತಮಾನದ 70-80 ದಶಕ ಕೃಷಿ ರಂಗಕ್ಕೆ ಪರ್ವಕಾಲ. ಪರಿಣತರಿಂದ ಕೂಡಿದ ಪೂರ್ಣಪ್ರಮಾಣದ ತಂಡ ಹೊಂದಿದ್ದ ಹೊಲಮನೆ ವಿಭಾಗಗಳು ಸಮಗ್ರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡುವ ಆಕರ್ಷಕ ಕಾರ್ಯಕ್ರಮಗಳನ್ನು ನೀಡಿ ಗ್ರಾಮೀಣ ಜನತೆಯ ಒಡನಾಡಿಯಾದವು. 90ನೆಯ ದಶಕದಲ್ಲಿ ಮಾಧ್ಯಮ ಸ್ಫೋಟದಿಂದ, ವಿಶೇಷವಾಗಿ ಟಿವಿ ಪ್ರವೇಶದಿಂದ ಕೇಳುಗರ ಸಂಖ್ಯೆ ಇಳಿಮುಖವಾಯಿತು. ಜೊತೆಗೆ ಆಕಾಶವಾಣಿ ಅದರ ಪಾತ್ರವನ್ನು ಪುನರ್ ವ್ಯಾಖ್ಯಾನಿಸಿ ಕೇಳುಗರನ್ನು ಮರಳಿ ಗಳಿಸುವ ಪ್ರಯತ್ನಗಳು ಅಷ್ಟಾಗಿ ನಡೆಯಲಿಲ್ಲ. ಮೇಲ್ಮಟ್ಟದಲ್ಲಿ ವಿವೇಚನಾರಹಿತ ನೀತಿನಿರ್ಧಾರ ಆಡಳಿತ, ದೂರದೃಷ್ಟಿ, ವೃತ್ತಿಪರತೆ, ಆತ್ಮ ವಿಶ್ವಾಸದ ಕೊರತೆ, ಅಧಿಕಾರಿ ನಿರ್ಲಕ್ಷ್ಯ, ವಾಣಿಜ್ಯೀಕರಣದ ಹಳವಂಡ, ತೀವ್ರ ಸಿಬ್ಬಂದಿ ಕೊರತೆ, ಕೇಳುಗರ ನಿರಾಸಕ್ತಿ ಇವು ಹಿನ್ನಡೆಗೆ ಪ್ರಮುಖ ಕಾರಣಗಳು.

ಖಾಸಗಿ ಟಿವಿ ಚಾನಲ್ಗಳು, ಇಂಟರ್ನೆಂಟ್ ಆಧಾರಿತ ಹೊಸ ಮಾಧ್ಯಮಗಳ ಮಹಾಪೂರವೇ ಇರುವಾಗ ಆಕಾಶವಾಣಿ ಪ್ರಸಾರ ಏಕೆ ಎಂದು ಕೇಳುವುದು ಸಹಜ. ಹಣಗಳಿಕೆಗಾಗಿ ಟಿಆರ್ಪಿ, ಮನರಂಜನೆ, ರೋಚಕ ಸುದ್ದಿಗಳ ಸುತ್ತಲೇ ಗಿರಕಿ ಹೊಡೆಯುತ್ತಿರುವ ಖಾಸಗಿ ಚಾನಲ್ಗಳಿಗೆ ಮಾಹಿತಿ ಶಿಕ್ಷಣ ನೀಡುವ ಕಾರ್ಯಕ್ರಮಗಳು ಬೇಕಿಲ್ಲ. ಗ್ರಾಮೀಣ ಅಭಿವೃದ್ಧಿಗೆ ಹಾಗೂ ಸಾರ್ವಜನಿಕ ಸೇವಾ ಪ್ರಸಾರಕ್ಕೆ ಮೀಸಲಾದ ಆಕಾಶವಾಣಿ ಬೆಂಬಲ ಅನಿವಾರ್ಯ. ಇದನ್ನು ಪ್ರಸಾರ ಭಾರತಿ ಕೇಳುಗರು ತಿಳಿಯಬೇಕಾಗಿದೆ.

*ಲೇಖಕರು ಆಕಾಶವಾಣಿಯ ನಿಲಯದ ನಿರ್ದೇಶಕರು (ವಿಶ್ರಾಂತ); ಆಕಾಶವಾಣಿಜನಮಾಧ್ಯಮ, ರೇಡಿಯೋ ಲೋಕ, ಕೇಳುವ ಕೌತುಕ, ಬಾನುಲಿದ ಬೇಂದ್ರೆ ಬೆರಗು ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ಧಾರವಾಡದಲ್ಲಿ ವಾಸ.

Leave a Reply

Your email address will not be published.