ಕ್ಷೌರದ ಕನ್ನಡಿಯಲ್ಲಿ ಕಂಡ ಮುಖ್ಯಮಂತ್ರಿ ಮುಖವಾಡ!

ನಸುನಗುತ್ತಿದ್ದ ಮುಖ್ಯಮಂತ್ರಿಗಳ ಮುಖ ಒಂದು ಕ್ಷಣ ಗಂಭೀರವಾಯ್ತು. ಆದರೆ ಗಾಂಭೀರ್ಯ ಹೆಚ್ಚು ಹೊತ್ತು ಉಳಿಯಲಿಲ್ಲ. ಬಾರಿ ನಸುನಗೆ, ಕಿರುನಗೆಯಾಗಿ ಕ್ಷಣಾರ್ಧದಲ್ಲೇ ಅಟ್ಟಹಾಸವಾಗಿ ಬದಲಾಯ್ತು. ಕರಟಕ ದಮನಕರಿಬ್ಬರೂ ನಿಮ್ಹಾನ್ಸ್ಗೆ ಕರೆ ಮಾಡುವುದೋ, ಇಲ್ಲಾ ಜಯದೇವಕ್ಕೆ ಕರೆ ಮಾಡುವುದೋ ಎಂಬ ಗೊಂದಲದಲ್ಲಿ ಬಿದ್ದರು!

-ಬಾಲಚಂದ್ರ ಬಿ.ಎನ್.

ಮುಖ್ಯಮಂತ್ರಿಗಳ ಮೃದುವಾದ ಕೆನ್ನೆಗೆ ಸೇವಕ ದುಬಾರಿ ನೊರೆಯನ್ನು ಉಜ್ಜಿ ಮುಖ ಕ್ಷೌರ ಮಾಡುತ್ತಿದ್ದ. ಅವರ ಮುಖದುದ್ದಗಲಕ್ಕೂ ಕ್ಷೌರಿಕ ಹರಿತವಾದ ಕತ್ತಿ ಲೀಲಾಜಾಲವಾಗಿ ಹರಿದಾಡುತ್ತಿತ್ತು. ಸಿಎಂ ಸಾಹೇಬರು ಬಿಸಿ ನೀರಿನ ಹಿತವಾದ ಬಿಸುಪನ್ನು ಆಸ್ವಾದಿಸುತ್ತಾ ಕುಳಿತಿದ್ದರು. ಅಷ್ಟರಲ್ಲಿ ಅವರಲ್ಲಿ ಎಡಭುಜ ಬಲಭುಜಗಳೆಂದು ಖ್ಯಾತರಾದ ಕರಟಕ ಮತ್ತು ದಮನಕರು ಆಗಮಿಸಿದರು.

ವೀರಾಧಿವೀರ, ವೀರ ಮಾರ್ತಾಂಡ, ಅರಿರಾಯರ ಗಂಡ, ಭ್ರಷ್ಟಕುಲದೋದ್ದಂಡ, ಸದಾ ಮುಖ್ಯಮಂತ್ರಿ ಸಿಂಹಾಸನಾಧೀಶ ಬಹುಪರಾಕ್, ಬಹುಪರಾಕ್, ಬಹುಪರಾಕ್ ಎಂದು ವಂದಿಮಾಗಧರಂತೆ ಘೋಷಣೆಯನ್ನು ಮಾಡಿ ಎಡಬಲದ ಆಸನಗಳಲ್ಲಿ ತಮ್ಮ ಆಸನವನ್ನೂರಿದರು. ಸೋಪಿನ ನೊರೆಗೆ ತಮ್ಮ ಕೆನ್ನೆಯನ್ನೊಡ್ಡಿ ಕುಳಿತಿದ್ದ ಮುಖ್ಯಮಂತ್ರಿಗಳಿಗೆ ಲೈಟಾಗಿ ಕಿರಿಕಿರಿಯುಂಟಾದರೂ, ಒಂದು ಕ್ಷಣ ಬ್ಲೇಡಿನ ಹೆರತವನ್ನು ನಿಲ್ಲಿಸುವಂತೆ ಸೇವಕನಿಗೆ ಕಣ್ಸನ್ನೆ ಮಾಡಿ ಟವಲಿನಿಂದ ತಮ್ಮ ಕೆನ್ನೆಯನ್ನೊರೆಸಿಕೊಂಡು, ಏನು ಸಮಾಚಾರ? ಎಲ್ಲಾ ವದರು ಎಂಬಂತೆ ತಮ್ಮ ಕಟು ದೃಷ್ಟಿಯನ್ನು ಹಾಯಿಸಿದರು.

ಸಾಯೇಬರ ಕ್ರೂರ ದೃಷ್ಟಿಗೆ ಕರಟಕ ದಮನಕರಿಬ್ಬರಿಗೂ ಜಂಘಾಬಲವೇ ಒಮ್ಮೆ ಉಡುಗಿದಂತಾಗಿ, ಕುಳಿತಲ್ಲೇ ಬಹಿರ್ದೆಶೆಗೆ ಅವಸರವಾದ ಅನುಭವವಾಯಿತು.

ಆದರೆ ಕರಟಕನು ಅಷ್ಟರಲ್ಲಿ ಮುಖ್ಯಮಂತ್ರಿಗಳ ಸ್ಮರಣ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಇತ್ತೀಚಿಗೆ ಕೈಕೊಡುತ್ತಿರುವುದನ್ನು ನೆನಪಿಸಿಕೊಂಡ. ಬರೆದುಕೊಟ್ಟಿದ್ದನ್ನು ಓದುವುದು ಬಿಟ್ಟರೆ ಮತ್ತೇನೂ ನೆನಪಿಲ್ಲದೆ ಎಪ್ಪತ್ತುವರ್ಷದ ಹಸುಗೂಸಿನಂತಾಗಿರುವ ಮುಖ್ಯಮಂತ್ರಿಗಳೆಡೆಗೆ ಕರುಣಾಪೂರಿತ ದೃಷ್ಟಿ ಹಾಯಿಸಿದ ಕರಟಕ.

‘ಸಾಯೇಬ್ರೇ, ಕೊರೊನಾ ಎರಡನೇ ಅಲೆ ಮುಗಿದು ಮೂರನೇ ಅಲೆ ಮುನ್ನುಗ್ಗುವ ಎಲ್ಲಾ ಸೂಚನೆಗಳು ಖಚಿತವಾಗಿವೆ. ನಿಖರ ಮಾಹಿತಿಗಳೊಡನೆ ತಜ್ಞರು ತಮ್ಮ ವರದಿಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಪರಾಂಬರಿಸುವ ಕೃಪೆ ಮಾಡಬೇಕು’ ಎಂದು ಬಿನ್ನಯಿಸಿಕೊಂಡ.

ಕೊರೊನಾ ಎಂದೊಡನೇ ಮುಖ್ಯಮಂತ್ರಿಗಳ ಮುಖದಲ್ಲಿ ಮಂದಹಾಸ ಅರಳಿತು. ಮುಖಕಮಲವು ಭಾಸ್ಕರನ ದರ್ಶನವಾದ ಸರೋಜದಂತೆ ಪ್ರಫುಲ್ಲವಾಯಿತು. ಒಮ್ಮೆಗೆ, ‘ಸಾವಿರಾರು ಕೋಟಿ…’ ಎಂದು ಉದ್ಗರಿಸಿದರು.

ಕರಟಕ ದಮನಕರಿಬ್ಬರೂ ಮುಖ ಮುಖ ನೋಡಿಕೊಂಡರು. ಸಾಯೇಬರಿಗೆ ಚಿತ್ತಭ್ರಮೆಯುಂಟಾಗಿರುವ ಸುದ್ದಿ ಸುಳ್ಳೇನಲ್ಲ ಎಂದು ಮನದಲ್ಲೇ ಸಂತಾಪ ವ್ಯಕ್ತಪಡಿಸಿದರು. ಇವರ ಕೆಕರುಮಕರತನವನ್ನು ನೋಡಿ ಹುಸಿನಗೆ ನಕ್ಕ ಮುಖ್ಯಮಂತ್ರಿಗಳು, ‘ಶಾಲಾಕಾಲೇಜುಗಳಿಗೆ ಸ್ಯಾನಿಟೈಸರು, ಮುಂಚೂಣಿ ಕೊರೊನಾ ಯೋಧರಿಗೆ ಪಿಪಿಇ ಕಿಟ್ಟು, ಹಾದಿಬೀದಿಗಳಲ್ಲಿ ನಿರ್ಗತಿಕರಿಗೆ ಹಂಚಲು ಪಡಿತರ ಕಿಟ್ ವ್ಯವಸ್ಥೆಗಾಗಿ ಕೂಡಲೇ ಸಾವಿರ ಕೋಟಿ ಮೀಸಲಾಗಿಡಲಾಗಿದೆ’ ಎಂದು ಘೋಷಿಸಲು ಪತ್ರಿಕಾಗೋಷ್ಠಿ ಕರೆಯುವಂತೆ ತಮ್ಮ ಆಪ್ತ ಸಹಾಯಕನಿಗೆ ಆಜ್ಞಾಪಿಸಿ ಮತ್ತೆ ಬಿಸಿನೀರಿನ ಹಬೆಗೆ ಮುಖವೊಡ್ಡಿ ಕುಳಿತರು. ಸೇವಕ ತನ್ನ ಬ್ಲೇಡಿಗೆ ಕೆಲಸ ಕೊಟ್ಟ.

ಕರಟಕ ದಮನಕರಿಗೆ ಮತ್ತೂ ಅಚ್ಚರಿಯಾಯ್ತು. ‘ಸಾ….ರ್’ ಎಂದು ಮೆಲ್ಲನುಸುರಿದ ದಮನಕ ಈ ಬಾರಿ ತನ್ನ ಜೋಳಿಗೆಯಿಂದ ಮತ್ತೊಂದು ಫೈಲನ್ನು ಹೊರತೆಗೆದ.

ಮುಖಕ್ಷೌರಕ್ಕೆ ಮತ್ತೆ ಸಾಬೂನುಜ್ಜಿದ್ದ ಘಳಿಗೆಯಲ್ಲೇ ಈತ ಮತ್ತೆ ಕರೆದಿದ್ದರಿಂದ ಅಭಿನವ ದೂರ್ವಾಸರೆಂದೇ ಹೆಸರುವಾಸಿಯಾಗಿದ್ದ ಸಾಯೇಬರಿಗೆ ಕೆಂಡಾಮಂಡಲ ಕೋಪ ಬಂತು. ಕೈಸನ್ನೆಯಿಂದ ಒಂದುನಿಮಿಷ ಇರು ಎಂಬಂತೆ ಸನ್ನೆ ಮಾಡಿ, ಮತ್ತೇನು ಎಂಬಂತೆ ದುರುಗುಟ್ಟಿ ನೋಡಿದರು.

‘ಸಾರ್, ಎಲ್ಲೂ ಆಮ್ಲಜನಕ ಪೂರೈಕೆಯಿಲ್ಲ ಎಂಬಂಥಾ ಸುದ್ದಿ ಬರುತ್ತಿವೆ. ಇದೇ ನೆಪವೊಡ್ಡಿ ಖಾಸಗಿ ಆಸ್ಪತ್ರೆಗಳು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಪರಿಸ್ಥಿತಿಯ ಲಾಭ ಪಡೆದು ತಲೆಯೆತ್ತಿರುವ ಕಾಳಸಂತೆಕೋರರು, ಪ್ರಾಣವಾಯುವಿಗೆ ಪ್ರಾಣದಷ್ಟೇ ಬೆಲೆ ಕಟ್ಟಿ ಮಾರಾಟ ಮಾಡುತ್ತಿದ್ದಾರೆ. ಕಳೆದ ಬಾರಿಗಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗಬಹುದೆಂದು ತಜ್ಞರು ಈಗಾಗಲೇ ಎಚ್ಚರಿಸಿದ್ದು, ಈ ಸಮಸ್ಯೆ ನಿವಾರಣೆಗೆ ಒಂದಷ್ಟು ಪರಿಹಾರೋಪಾಯಗಳನ್ನು ಸೂಚಿಸಿದ್ದಾರೆ’.

ಮತ್ತೆ ಸಾಯೇಬರ ಮುಖಕಮಲದ ಮೇಲೆ ಕಿರುನಗೆ ಅರಳಿತು. ಜೀವಮಾನವಿಡೀ ಭ್ರಷ್ಟಾಚಾರವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಅವರಿಗೆ ಹೆಂಡತಿ, ಮಕ್ಕಳು, ಪ್ರೇಯಸಿಯರು, ಬಂಧು ಬಾಂಧವರು, ತಮ್ಮ ಕರ್ತವ್ಯ, ರಾಜಕೀಯ ದೂರದೃಷ್ಟಿ ಎಲ್ಲವೂ ಸ್ಮೃತಿಪಟಲದಿಂದ ದೂರಾಗಿದ್ದರೂ ಹಣದಾಹ, ಅಧಿಕಾರದಾಸೆ ಮತ್ತು ಸ್ವಜನ ಪಕ್ಷಪಾತಗಳು ತ್ರಿಕರಣಗಳಂತೆ ಮೈಗಂಟಿಕೊಂಡುಬಿಟ್ಟಿದ್ದವು.

‘ಏನ್ರಯ್ಯಾ… ಒಂದರಗಳಿಗೆ ನೀಟಾಗಿ ಶೇವಿಂಗ್ ಮಾಡಿಸ್ಕೋಳ್ಳೋದಕ್ಕೂ ಬಿಡೋಲ್ಲಾ ಅಂತೀರಲ್ಲಾ’ ಹುಸಿಕೋಪ ಪ್ರದರ್ಶಿಸಿದ ಸಾಯೇಬರು, ಕಣ್ಣು ಹೊಡೆದು ಕಿಸಕ್ಕನೆ ನಕ್ಕರು. ಇವರ ಈ ಬಾಲಲೀಲೆಗಳು ಕರಟಕ ದಮನಕರಿಗೆ ಒಂಚೂರು ಅರ್ಥವಾಗಲಿಲ್ಲ.

ಚಪ್ಪಾಳೆ ತಟ್ಟಿ ಮತ್ತೆ ಆಪ್ತ ಸಹಾಯಕನನ್ನು ಬಳಿಗೆ ಕರೆದ ಸಾಯೇಬರು, ‘ಕೂಡಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಸ್ಪತ್ರೆಯಲ್ಲೂ ಒಂದೊಂದು ಆಮ್ಲಜನಕ ಘಟಕ ಸ್ಥಾಪನೆಗೆ ಕ್ರಮ ಕೈಗೊಂಡಿರುವುದಾಗಿ ಪತ್ರಿಕಾ ಪ್ರಕಟಣೆ ಸಿದ್ಧಪಡಿಸಲು ಹೇಳಿದರು. ಹಾಗೇ ತಮ್ಮ ಪ್ರಾಣಸಖರಾದ ಹಲವು ಉದ್ಯಮಿಗಳನ್ನು ಕರೆದು ಆಕ್ಸಿಜನ್ ಪ್ಲಾಂಟೇಷನ್ನಿಗೆ ಅಂದಾಜು ವೆಚ್ಚದ ಕೊಟೇಷನ್ನುಗಳನ್ನು ತರಿಸಿಕೊಳ್ಳಲು ಹೇಳಿದರು. ಹಾಗೆಯೇ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ “ಪ್ರಾಣವಾಯು ನೀಡಿದ ಪ್ರಾಣದಾತ” ಎಂದು ಪಕ್ಷದ ಚಿಹ್ನೆ ಹಾಗೂ ಪ್ರಧಾನಿ ಫೆÇೀಟೋದೊಡನೆ ಫುಲ್ ಪೇಜ್ ಜಾಹೀರಾತು ಪ್ರಕಟಿಸಲು ಆಜ್ಞಾಪಿಸಿದರು. ಆಪ್ತಸಹಾಯಕ ಇದೆಲ್ಲವನ್ನೂ ನೋಟ್ ಮಾಡಿಕೊಂಡು ದೂರ ಸರಿದುಹೋದ.

‘ಇನ್ನೇನಾದ್ರೂ ಇದೆಯೇನ್ರಯ್ಯಾ…’ ಎಂದು ಮತ್ತೆ ಸುಖಾಸೀನರಾಗಿ ಮುಗುಳ್ನಗುತ್ತಾ ಕುಳಿತರು. ಇಷ್ಟು ಹೊತ್ತಿಗೆ ಆರಿಹೊಗಿದ್ದ ನೊರೆಗೆ ಹೊಸ ಕ್ರೀಮು ಹಚ್ಚಿ ಸೇವಕ ಉಜ್ಜಲಾರಂಭಿಸಿದ. ಮುಮಂ ಅವರು, ಮತ್ತೆ ಬೆಚ್ಚನೆಯ ಆಹ್ಲಾದಕರ ಅನುಭೂತಿಯನ್ನು ಮನಸ್ಪೂರ್ತಿಯಾಗಿ ಅನುಭವಿಸುತ್ತಾ ಆರಾಮಾಗಿ ಕಣ್ಮುಚ್ಚಿ ಕುಳಿತರು. ಬ್ಲೇಡು ಎಲ್ಲೆಡೆ ಓಡಾಡಲಾರಂಭಿಸಿತು.

ಕರಟಕ ದಮನಕರಿಗೆ ಸಾಯೇಬರ ಬುದ್ಧಿ ಎತ್ತ ಓಡುತ್ತಿದೆ ಎಂದು ಅರ್ಥವೇ ಆಗಲಿಲ್ಲ. ಸೇವಕ ಮಾತ್ರ ಕಿವಿಯಿದ್ದೂ ಕಿವುಡನಂತೆ, ಬಾಯಿದ್ದೂ ಮೂಗನಂತೆ, ಕಣ್ಣಿದ್ದೂ ಕುರುಡನಂತೆ ತನ್ನ ಸೇವೆಯನ್ನು ತನ್ನ ಪಾಡಿಗೆ ಮುಂದುವರೆಸುತ್ತಾ ಕರ್ತವ್ಯದಲ್ಲಿ ತಲ್ಲೀನನಾಗಿದ್ದ.

ಮತ್ತಷ್ಟು ಧೈರ್ಯವನ್ನು ಎದೆಯ ತಿದಿಗೆ ತುಂಬಿಕೊಂಡ ಕರಟಕ.

‘ಸಾರ್, ಕಳೆದ ಬಾರಿಯೇ ಜನ ಹುಳಗಳಂತೆ ಬಿದ್ದು ಸತ್ತದ್ದನ್ನು ಇನ್ನೂ ಮರೆತಿಲ್ಲ. ಬೆಂಗಳೂರೆಂಬ ಭಳಾರೆ ಬೆಂಗಳೂರೇ ಇನ್ನೇನು ಇನ್ನೇನು ಊರಿಗೂರೇ ಸ್ಮಶಾನವಾಗಿಬಿಡುತ್ತದೆ ಎಂದು ಅನಿಸಿಬಿಟ್ಟಿತ್ತು. ಸ್ಮಶಾನಗಳಲ್ಲಿ ಜಾಗ ಸಾಕಾಗದೇ ಹಾದಿಬೀದಿಯಲ್ಲೆಲ್ಲಾ ಹೆಣ ಸುಟ್ಟಿದ್ದಾಯ್ತು. ಆಂಬುಲೆನ್ಸ್‍ಗಳು ಲಭ್ಯವಿಲ್ಲದೇ ಜನರು ಹೆಣವನ್ನು ಹೆಗಲಮೇಲೆ ಹೊತ್ತೊಯ್ದರು. ಸ್ಮಶಾನದ ಕಟ್ಟಿಗೆಗೆ ಕಾಸಿಲ್ಲದೇ ಜನರು ಹೆಣವನ್ನು ಮಸಣದ ಹೊರಬಾಗಿಲಿನಲ್ಲೇ ಮಲಗಿಸಿ ಊರು ಬಿಟ್ಟರು. ಈ ಬಾರಿ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಹದಗೆಡಬಹುದೆಂದು ತಜ್ಞರ ಅನಿಸಿಕೆ’.

ಇಷ್ಟು ಹೊತ್ತೂ ನಸುನಗುತ್ತಿದ್ದ ಮುಖ್ಯಮಂತ್ರಿಗಳ ಮುಖ ಒಂದು ಕ್ಷಣ ಗಂಭೀರವಾಯ್ತು. ಆದರೆ ಆ ಗಾಂಭೀರ್ಯ ಹೆಚ್ಚು ಹೊತ್ತು ಉಳಿಯಲಿಲ್ಲ. ಈ ಬಾರಿ ನಸುನಗೆ, ಕಿರುನಗೆಯಾಗಿ ಕ್ಷಣಾರ್ಧದಲ್ಲೇ ಅಟ್ಟಹಾಸವಾಗಿ ಬದಲಾಯ್ತು. ಜೋರಾಗಿ ನಕ್ಕೂ ನಕ್ಕೂ ಸುಧಾರಿಸಿಕೊಂಡ ಮುಮಂ ಸಾಯೇಬರು ಒಂದು ಕ್ಷಣ ಎದೆ ನೀವಿಕೊಂಡಾಗ ಕರಟಕ ದಮನಕರಿಬ್ಬರೂ ನಿಮ್ಹಾನ್ಸ್‍ಗೆ ಕರೆ ಮಾಡುವುದೋ ಇಲ್ಲಾ ಜಯದೇವಕ್ಕೆ ಕರೆ ಮಾಡುವುದೋ ಎಂಬ ಗೊಂದಲದಲ್ಲಿ ಬಿದ್ದರು.

ತುಸು ಹೊತ್ತಿನಲ್ಲೇ ಇವರ ಗೊಂದಲವನ್ನು ಪರಿಹರಿಸುವಂತೆ ಸಹಜಸ್ಥಿತಿಗೆ ಮರಳಿದ ಸಾಹೇಬರು, ಯಥಾ ರೀತಿ ಮತ್ತೆ ಚಪ್ಪಾಳೆ ತಟ್ಟಿದರು. ಆಪ್ತ ಸಹಾಯಕ ಬಳಿ ಬಂದು ಕೈಕಟ್ಟಿಕೊಂಡು ವಿನೀತನಾಗಿ ನಿಂತ.

‘ಕಳೆದ ಬಾರಿ ಹೆಣಗಳ ಸಂಖ್ಯೆ ಹೆಚ್ಚಾದಷ್ಟೂ ನಮ್ಮ ಶಾಸಕರು ಖುಷಿಪಟ್ಟಿದ್ದು ಮರೆತೆಯಾ ಅಪ್ಪಿ’, ಎಂದು ಸಹಾಯಕನನ್ನು ಆಪ್ತವಾಗಿ ಸಂಬೋಧಿಸಿದ ಸಾಯೇಬರು ಕೂಡಲೇ ಪಕ್ಷದಿಂದ ಚಿತಾಕಮಲ ಎಂಬ ಹೊಸ ಯೋಜನೆಯ ಘೋಷಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದರು. ಈ ಯೋಜನೆಗೆ ಸರ್ಕಾರದ ವತಿಯಿಂದ ಕೂಡಲೇ ಎರಡು ಸಾವಿರ ಕೋಟಿ ಮೀಸಲಾಗಿರಿಸಲು ನಿರ್ಣಯ ಕೈಗೊಳ್ಳುವಂತೆ ಶಾಸಕರನ್ನು ಒಡಂಬಡಿಸಲು ಮಗನಿಗೆ ಹೇಳುವಂತೆ ಆಪ್ತ ಸಹಾಯಕನಿಗೆ ಸೂಚಿಸಿದರು. ಜೊತೆಗೆ ಇದು ಪಕ್ಷದ ಕಂಬನಿದುಂಬಿದ ಕಾಣಿಕೆ ಎಂಬ ಒಕ್ಕಣೆ ಸೇರಿಸಲು ಮರೆಯಬಾರದು ಎಂದೂ ಸಹ ಒತ್ತಿ ಹೇಳಿದರು.

ಜೊತೆಗೆ ಅನಾಥರ ಚಿತಾಸಂಸ್ಕಾರದ ಬೂದಿಯನ್ನು ಶಾಸ್ತ್ರೋಕ್ತವಾಗಿ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಲೂ ಸಹ ಪ್ರತ್ಯೇಕ ನಿಧಿ ಸ್ಥಾಪನೆಗೆ ಮುಂದಾಗಿರುವುದೂ ನಮ್ಮ ಪಕ್ಷದ ಹೆಗ್ಗಳಿಕೆ ಎಂದು ಸೇರಿಸಲು ಮರೆಯದಿರಿ ಎಂದು ಎಚ್ಚರಿಸಿದರು.

ನರಿದ್ವಯರಿಗೆ ತಮ್ಮ ಮಹಾನ್ ನಾಯಕನ ಬಗ್ಗೆ ಹಿಡಿಸಲಾರದಷ್ಟು ಹಿಗ್ಗುಂಟಾಯ್ತು. ತಮ್ಮ ಮುಂದಿನ ಹದಿನೈದಿಪ್ಪತ್ತು ತಲೆಮಾರಿಗೆ ಇನ್ನೇನೂ ಚಿಂತೆಯಿಲ್ಲ ಎಂದು ಮನಸಿನಲ್ಲೇ ಸಂಭ್ರಮಿಸಿದರು. ದೇವರ ದಯದಿಂದ ಕೊರೊನಾ ಇನ್ನೂ ಒಂದ್ಹತ್ತು ವರ್ಷ ಇರಲಪ್ಪಾ ಎಂದು ಪ್ರಾರ್ಥಿಸಿಕೊಂಡರು. ಮನಸಿನಲ್ಲೇ ಮನೆದೇವರಿಗೆ ಹರಕೆ ಕಟ್ಟಿಕೊಂಡರು. ತಮ್ಮ ಕುಟುಂಬಕ್ಕೆಲ್ಲಾ ಆದ್ಯತೆಯ ಮೇರೆಗೆ ಸ್ಫುಟ್ನಿಕ್, ಫೈಜರ್ ಮುಂತಾದ ವಿದೇಶಿ ಲಸಿಕೆ ಸಿಗುತ್ತಿದೆಯಲ್ಲಾ… ಇನ್ನೇನು ಚಿಂತೆ.

ಸಾರ್ವಜನಿಕರಿಗೆ ಲಸಿಕೆ ಲಭ್ಯತೆಯನ್ನು ಇನ್ನೂ ಕಡಿಮೆ ಮಾಡಬೇಕೆಂದು ಶಪಥ ತೊಟ್ಟರು.

ಅರ್ಧ ತಲೆಕೆಟ್ಟ ಸ್ಥಿತಿಯಲ್ಲೇ ನಮ್ಮ ಸಾಯೇಬ್ರ ಮೆದುಳು ಇಷ್ಟು ಚೆನ್ನಾಗಿ ಭ್ರಷ್ಟಾಚಾರ ಮಾಡುತ್ತಿದೆ ಎಂದರೆ, ಇನ್ನು ಸರಿಯಾಗಿದ್ದಾಗ ಇನ್ನೆಷ್ಟು ತಿಂದಿರಬಹುದೆಂದು ಊಹಿಸಿ ಬೆಚ್ಚಿಬಿದ್ದರು.

ಸಾಲದೆಂಬಂತೆ ಮುಗ್ಧ ನಾಗರಿಕರ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿ ತಮ್ಮ ತಮ್ಮ ಮನೆಗಳಲ್ಲಿ ಹಣದ ಮಳೆಯೇ ಸುರಿಯುತ್ತಿರುವಂತೆ ಕುಳಿತಲ್ಲೇ ಕನಸು ಕಂಡರು. ‘ಸರ್, ಆದರೆ ತಜ್ಞರ ವರದಿ, ಎಕ್ಸ್ಪರ್ಟ್ ಕಮೀಷನ್ ಸಲಹೆ, ಸಾರ್ವಜನಿಕರ ಅಹವಾಲು… ಇದನ್ನೆಲ್ಲಾ ಏನು ಮಾಡೋದು ಸಾರ್?’

ಕರಟಕ-ದಮನಕರು ಏಕಕಂಠದಿಂದ ಅನುನಯದ ದನಿಯಲ್ಲಿ ಮುಮಂ ಅವರನ್ನು ಕೇಳಿದರು.

ತಮ್ಮ ಕ್ಷೌರ ಇನ್ನೇನು ಅಂತಿಮ ಹಂತದಲ್ಲಿದ್ದುದರಿಂದ ಸಾಹೇಬರು ತಲೆಕೆಡಿಸಿಕೊಳ್ಳದೇ ನಿಧಾನವಾಗಿ ಉತ್ತರಿಸಿದರು,

‘ಅಯ್ಯೋ ನನ್ನ ಕಂದಮ್ಮಗಳೇ, ಇಂಥಾ ವರದಿಯನ್ನು ಇನ್ನೂ ಹತ್ತು ತರಿಸಿಕೊಳ್ಳಿ. ಇಂಥಾ ಇನ್ನೂ ಹತ್ತಾರು ತಜ್ಞರ ಸಮಿತಿಗಳನ್ನು ರಚಿಸಿ. ಅವೆಲ್ಲವನ್ನೂ ವಿವರವಾಗಿ ಪರಿಶೀಲಿಸಿ ಬಳಿಕ ಆ ವರದಿಗಳ ಫೈಲುಗಳನ್ನು ಸುಟ್ಟುಹಾಕಿಬಿಡಿ. ಬಳಿಕ ನಮಗೆ ಯಾವುದು ಲಾಭದಾಯಕವೋ ಅಂಥಾ ತೀರ್ಮಾನಗಳನ್ನು ಜಾರಿಗೊಳಿಸಿ. ಸಾರ್ವಜನಿಕರಿಂದ ಪ್ರಶ್ನೆಗಳೆದ್ದರೆ, ತಜ್ಞರ ವರದಿಯನ್ನಾಧರಿಸಿ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂಬ ಉತ್ತರ ಸಿದ್ಧವಾಗಿರಲಿ. ಸಾಧ್ಯವಾದಷ್ಟೂ ಸಾವುನೋವಿನ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳಿ. ಸತ್ತವರ ಮನೆಗೆ ಹತ್ತೋ ಇಪ್ಪತ್ತೋ ಸಾವಿರ ಕೊಡಿ. ಉದ್ಯೋಗ, ವ್ಯವಹಾರ ಕಳೆದುಕೊಂಡು ನಿರ್ಗತಿಕರಾದವರಿಗೆ ಮೂರು ತಿಂಗಳಿಗೆ ಸಾಲುವಷ್ಟು ಮಗ್ಗಲು ಅಕ್ಕಿಯನ್ನು ಉಚಿತವಾಗಿ ವಿತರಿಸಿ. ಇವೆಲ್ಲಾ ಮಾಧ್ಯಮಗಳಲ್ಲಿ ಬರುವಂತೆ ನೋಡಿಕೊಳ್ಳಿ’ ಮುಮಂ ದರ್ಪಣದಲ್ಲಿ ತಮ್ಮ ಮುಖವನ್ನು ವೀಕ್ಷಿಸಿಕೊಳ್ಳುತ್ತಾ ದರ್ಪದಿಂದುತ್ತರಿಸಿದರು.

ತನ್ನ ಕೆಲಸ ಮುಗಿಸಿ ಹೊರಟು ನಿಂತಿದ್ದ ಸೇವಕನೆಡೆಗೆ 2 ಸಾವಿರ ರೂಪಾಯಿಯ ಗಾಂಧಿ ನೋಟನ್ನು ಚಾಚಿದರು.

ಇಷ್ಟು ಹೊತ್ತೂ ಸುಮ್ಮನಿದ್ದ ಸೇವಕ ಈಗ ಬಾಯ್ತೆರೆದು, ‘ಬ್ಯಾಡಾ ಬುದ್ಧಿ, ಅದನ್ನ ನೀವೇ ಮಡಗಿಕೊಳ್ಳಿ. ನಿಮ್ಮ ಪರಿಹಾರ ಕಾರ್ಯಕ್ಕೆ ಈ ಬಡವನದೊಂದು ಕಾಣಿಕೆ ಅಂತ ಮಡಗಿಕೊಳ್ಳಿ’ ಎಂದು ಹೇಳಿ ಬೆವರಿನಿಂದ ನೆಂದಿದ್ದ 10 ರೂಪಾಯಿ ನೋಟನ್ನು ಮುಖ್ಯಮಂತ್ರಿಗಳ ಕೈಲಿಟ್ಟು ನಡೆದು ಹೋದ.

ಆ ಬೆವರಿನಲ್ಲಿ ನೆಂದಿದ್ದ ನೋಟಿನಲ್ಲಿದ್ದ ಗಾಂಧಿ ಈ ಮೂವರನ್ನೂ ನೋಡಿ ನಕ್ಕಂತೆ ಭಾಸವಾಗಿ ಮೂವರೂ ಅವನು ಹೋದ ದಿಕ್ಕನ್ನೇ ವೀಕ್ಷಿಸುತ್ತಾ ಕಾಫಿ ಕುಡಿಯಲು ತೆರಳಿದರು.

Leave a Reply

Your email address will not be published.