ಖಾಕಿ ಕಾವಲು

ಡಾ.ಪ್ರಕಾಶ .ಖಾಡೆ

ಇದ್ಯಾವುದೋ ದೆವ್ವ ಮಾಯವಾಗಲಾರದ ಇಲ್ಲೇ ಬಿತ್ತಲ್ಲಎಂದು ಪೊಲೀಸಪ್ಪ ಇದು ದೆವ್ವ ಆಗಿರಲಾಕ ಇಲ್ಲಂತ, ಅದರ ಕಾಲ ನೋಡಿದಾ, ಬರೋಬ್ಬರಿ ಇದ್ದವು. ಮುಖಾ ಮೋತಿ ನೋಡಿದಾ, ‘ಇದು ದೆವ್ವ ಅಲ್ಲಾ ಮನುಷ್ಯಾನ ಆಕೃತಿ ಐತಿಅಂದವನ ಹೊರಳಿಸಿ ನೋಡಿದಾ, ಐವತ್ತರ ಆಸುಪಾಸಿನಲ್ಲಿದ್ದ ಒಂದು ಹಳ್ಳಿ ಹೆಣ್ಣುಮಗಳಾಗಿದ್ದಳು!

ನಟ್ಟ ನಡುರಾತ್ರಿ ಎರಡ ಆಗಿರಬೇಕ, ದಟ್ಟ ಅರಣ್ಯದಾಗ ಒಂದ ಅಕರಾಳ ವಿಕರಾಳ ಆಕೃತಿ ಬಾಯಿ ಬಡಕೊಂಡ ಬಂದ ಪೊಲೀಸಪ್ಪನ ತೆಕ್ಕಿ ಬಡಕೊಂಡಎಲ್ಲಿ ಹ್ವಾದೋ ನನ್ನ ಸರದಾರಎಂದು ತನಗ ತಿಳಿದಾಂಗ ಹಾಡ್ಯಾಡಿಕೊಂಡ ಎದಿ ಬಡಕೊಂಡ ಅಳಾಕ ಚಾಲೂ ಮಾಡಿತು. ಇದಾವ ಪರಿವೇ ಇಲ್ಲದೆ ಈಗಷ್ಟೇ ಕಣ್ಣು ಮುಚ್ಚಿ ಸಣ್ಣಗೆ ನಿದ್ರೆಗೆ ಜಾರಿದ್ದ ಪೊಲೀಸಪ್ಪ ಇಂಥ ನಟ್ಟ ನಡುರಾತ್ರಿ ಅದೂ ಊರ ಬಿಟ್ಟು ದೂರವಿರೋ ಮಡ್ಡ್ಯಾಗ ಬಂದ ನನ್ನ ಮೈಮ್ಯಾಲ ಬಿದ್ದ ಬೋರ್ಯಾಡತೈತಿ ಅಂದ್ರ ಇದು ಹೆಣ್ಣ ದೆವ್ವ ಇರಬೇಕಂತ ತಿಳಿದು ಮೈಯೆಲ್ಲಾ ಸರ್ರನ ಬೆವತ ಹೋಗಿ, ಆದ್ರೂ ಸುಧಾರಿಸಿಕೊಂಡು ಎಲ್ಲಿತ್ತೋ ಏನೋ ಧೈರ್ಯ ತಂದುಕೊಡು ದೆವ್ವ ನೀ ಯಾರ ಅದಿಎಂದು ಸೊಂಟದಾನ ಬೆಲ್ಟ್ ತಗದ ಬಾರಿಸಾಕ ಚಾಲೂ ಮಾಡಿದಾ, ಹೊಸಾ ಬೆಲ್ಟಿನ ಹೊಡತಕ್ಕ ಹೆಣ್ಣು ಆಕೃತಿಸತ್ತನಿ ಎಪ್ಪೋಎಂದು ದೂರ ಹೋಗಿ ಬಿದ್ದು ಬಿಟ್ಟಿತು.

ಇದ್ಯಾವುದೋ ದೆವ್ವ ಮಾಯವಾಗಲಾರದ ಇಲ್ಲೇ ಬಿತ್ತಲ್ಲಎಂದು ಪೊಲೀಸಪ್ಪ ಇದು ದೆವ್ವ ಆಗಿರಲಾಕ ಇಲ್ಲಂತ, ಅದರ ಕಾಲ ನೋಡಿದಾ, ಬರೋಬ್ಬರಿ ಇದ್ದವು. ಮುಖಾ ಮೋತಿ ನೋಡಿದಾ, ‘ಇದು ದೆವ್ವ ಅಲ್ಲಾ ಮನುಷ್ಯಾನ ಆಕೃತಿ ಐತಿಅಂದವನ ಹೊರಳಿಸಿ ನೋಡಿದಾ, ಐವತ್ತರ ಆಸುಪಾಸಿನಲ್ಲಿದ್ದ ಒಂದು ಹಳ್ಳಿ ಹೆಣ್ಣುಮಗಳಾಗಿದ್ದಳು. ಇವಳ್ಯಾಕ ಹೊತ್ತಿನ್ಯಾಗ ಅದೂ ನಡುರಾತ್ರಿ ಎಡ್ಡ ಆಗೈತಿ, ದಟ್ಟ ಅರಣ್ಯಾ ಐತಿ, ಇಂಥ ಹೊತ್ತಿನ್ಯಾಗ ಇವಳ್ಯಾಕ ಇಲ್ಲಿ ಬಂದಳು ಎಂದು ಧೈರ್ಯ ತಂದುಕೊಂಡು ಪೊಲೀಸಪ್ಪ, ‘ಬೇ ಯಾರ ಅದಿ ನೀ ಅಂದಾ. ಮೊದಲೇ ಪೊಲೀಸಪ್ಪನ ಅಪ್ರಜ್ಞಾಸ್ಥಿತಿಯ ಭಾರಿ ಹೊಡೆತಕ್ಕೆ ಮೂರ್ಛೆ ಹೋಗಿ ಬಿದ್ದಿದ್ದ ಹೆಣ್ಣು ಆಕೃತಿ ಯಾವ ಪ್ರತಿಕ್ರಿಯೆ ನೀಡದಾದಾಗ, ‘ಇದೇನಪಾ ಇಲ್ಲಿ ಮತ್ತೊಂದು ಹೆಣಾ ಬಿತ್ತೇನುಎಂದು ಗಾಬರಿಯಾಗಿ, ನೀರು ಹುಡುಕಿದ, ಬರುವಾಗ ಏನನ್ನು ತಂದಿರದ, ಬಂದವರು ಏನನ್ನೂ ಇಲ್ಲಿ ಬಿಟ್ಟು ಹೋಗಿರದ ಕಾರಣವಾಗಿ ಇಲ್ಲಿ ಏನೂ ಇರಲಿಲ್ಲ. ಮೊನ್ನಿ ಮಳಿಗಿ ಅಲ್ಲಲ್ಲಿ ತೆಗ್ಗಿನಲ್ಲಿ ಅಷ್ಟಿಷ್ಟು ನೀರು ನಿಂತಿದ್ದನ್ನು ಕಂಡು ಓಡಿ ಹೋಗಿ ತನ್ನ ತುಂಬು ಬೊಗಸೆಯಲ್ಲಿ ನೀರು ತಂದು ಮುಖಕ್ಕೆ ಚಿಮುಕಿಸಿದ, ಹೀಗೆ ಎರಡು ಮೂರು ಬಾರಿ ಮಾಡಿದಾಗ ನಿಧಾನಕ್ಕೆ ಹೆಣ್ಣು ಆಕೃತಿ ಕಣ್ಣು ಬಿಟ್ಟು ಪೊಲೀಸಪ್ಪನನ್ನು ದಯನೀಯವಾಗಿ ನೋಡಿತು.

*

ಬಂದವಳು ಸಂಜೆ ಕೊಲೆಯಾಗಿ ಹೋದ ಫೈಲ್ವಾನನ ಅಕ್ಕ ಆಗಿದ್ದಳು. ಯಾರೋ ಹಿಂದಿನ ದ್ವೇಷóವನ್ನು ಸಾಧಿಸಲು ಪರವೂರಿನಿಂದ ಬಂದ ಸುಪಾರಿ ಕೊಲೆಗಡುಕರು ಫೈಲ್ವಾನನ್ನು ಹುಡುಕಿಕೊಂಡು ಬಂದು ಜಾಲಿಕಂಟಿ ಮರೆಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ಫೈಲ್ವಾನ್ ಸಂಜೀ ಮುಂದ ತನ್ನ ಹೊಲದ ಕೆಲಸಾ ಮುಗಿಸಿಕೊಂಡು ದೌಡ ಊರ ಸೇರಬೇತಂತ, ಊರ ದಾರಿ ಹಿಡಿದಿದ್ದ. ಅದು ದಟ್ಟ ಅಡವಿ, ಸುತ್ತಲ ಜಾಲಿಕಂಟಿ ಕಾಡ, ಅದರಾಗನ ಕಾಲದಾರಿಯಿಂದ ಒಬ್ಬನ ಹೊರಟಿದ್ದ. ಸುಪಾರಿ ಮಂದಿ ಫೈಲ್ವಾನನ್ನು ಹಿಂದ ಬಂದ ಹಿಡಿದು ಕೈಕಾಲು ರುಂಡ ಮುಂಡ ಬ್ಯಾರೆ ಮಾಡಿ ಕತ್ತರಿಸಿ ಹಾಕಿದ್ದರು. ಎಲ್ಲಾ ಚೆಲ್ಲಾಪಿಲ್ಲಿ ಮಾಡಿ ಪರಾರಿಯಾಗಿದ್ದರು.

ಹೀಂಗ ಹ್ವಾದ ಮ್ಯಾಲ ದನಾ ಕಾಯೋ ಮಂದಿ ತಮ್ಮ ದನಾ ಹೊಡಕೊಂಡ ದಾರಿ ಹಿಡಿದ ಊರಕಡೆ ಹೋಗುವಾಗ ರಕ್ತದ ಮುಡುವಿನ್ಯಾಗ ಬಿದ್ದ ಹೆಣಾ ನೋಡಿ ಊರಿಗಿ ಸುದ್ದಿ ಮುಟ್ಟಿಸಿದರು. ಊರ ಗೌಡ್ರ ಮೊದಲ ಮಾಡಿ ಹಿರೀಕರು, ಸರೀಕರು ಅನ್ನದ ಇಡೀ ಊರ ಕಿತ್ತ ಬಂತು. ಫೈಲ್ವಾನ್ ಕೊಲೆಯಾಗಿದ್ದಕ್ಕ ಊರಾನವರು ಮಮ್ಮಲ ಮರಗಿದರು, ಗೌಡ್ರು ಪೊಲೀಸರು ಬರೋತನಾ ಯಾರು ಮುಟ್ಟಬ್ಯಾಡ್ರಿ ಎಂದು ಸುತ್ತ ಮುಳ್ಳ ಬೇಲಿ ಬಡಿಸಿ, ಸಿಟಿಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಇಲ್ಲಿಂದ ಹದಿನೈದು ಕಿಲೋಮೀಟರ್ ದೂರವಿದ್ದ ಪೊಲೀಸ ಸ್ಟೇಷನ್ದಿಂದ ಪಿ.ಎಸ್. ತಮ್ಮ ಪೊಲೀಸರನ್ನು ಕರೆದುಕೊಂಡು ಜೀಪು ಚಾಲೂ ಮಾಡಿ ಹಳ್ಳಿಯತ್ತ ಹೊರಟರು. ಅದೇ ತಾನೇ ಇವತ್ತೇ ಪೊಲೀಸ ನೌಕರಿಗೆ ಸೇರಿದ್ದ ಹುಡುಗನನ್ನು ಇರಲಿ ಎಂದು ಜೀಪಿನಲ್ಲಿ ಕೂಡ್ರಿಸಿಕೊಂಡು ಬಂದಿದ್ದರು.

ಪೊಲೀಸ ಜೀಪು ಊರದಾಟಿ ಅಡವಿಗಿ ಬಂತು. ಜನಾ ಸಿಕ್ಕಂಗ ಸೇರಿದ್ದರು. ಪಿ.ಎಸ್.. ಫೊಟೋಗ್ರಾಫರ ಕಡಿಯಿಂದ ಎಲ್ಲ ಮೂಲೆಗಳ ಫೊಟೋ ತೆಗೆಸಿದರು, ಗೌಡ್ರಿಗೆ, ‘ಕುಟುಂಬದವರು ಯಾರ ಬಂದಾರೇನ್ರಿಎಂದು ಕೇಳಿದರು. ‘ಯಾರು ಇಲ್ಲರಿ, ಇದೊಂದು ತಾಯಿ ಐತಿ ನೊಡ್ರಿ ಮುದುಕಿ ಹಾಡ್ಯಾಡಿಕೊಂಡ ಅಳಾಕ ಹತ್ತೈತಿ. ಇವರ ತಮ್ಮಾ ಗೋವಾದಾಗ ಇರತಾನ್ರಿ, ಫೈಲ್ವಾನ್ ಹೆಣ್ಣ ಕೊಟ್ಟ ಬೀಗರಿಗೆ ಜಗಳಾ ಆಗಿ ಹೆಣ್ತಿ ಇವನ್ನ ಬಿಟ್ಟ ಹೋಗ್ಯಾಳ್ಳ್ರೀ, ಮತ್ತ ಇವಗ ಅಕ್ಕ ತಂಗಿಯಾರ ಅದಾರಿ, ಇಲ್ಲೇ ಸುತ್ತಮುತ್ತ ಹಳ್ಳಿಯೊಳಗ ಮದುವಿ ಮಾಡಿ ಕೊಟ್ಟಾರಿ, ಅವರಿಗೂ ಸುದ್ದಿ ಹೋಗೇತ್ರಿಎಂದು ಒಂದೇ ಉಸಿರಿನಲ್ಲಿ ಫೈಲ್ವಾನನ ವೃತ್ತಾಂತ ತಿಳಿಸಿದರು. ಕುತೂಹಲದ ಕಣ್ಣಿನಿಂದ ಸೇರಿದ್ದ ಮಂದೀ ಗಾಬರಿಯಾಗಿ ನಿಂತಿತ್ತು. ವಾಕಿಟಾಕಿಯಿಂದ ಪಿ.ಎಸ್.. ಸಾಹೇಬರು ಜಿಲ್ಲಾ ಕಚೇರಿಗೆ ಸುದ್ದಿ ಮುಟ್ಟಿಸಿದರು, ಆವಾಗೇನ ಮೊಬೈಲ್ಲು, ಟಿ.ವಿ.ಗೀವಿ ಅಷ್ಟಾಗಿ ಇರಲಿಲ್ಲ. ಜಿಲ್ಲಾ ಕೇಂದ್ರ ಇಲ್ಲಿಂದ ತೊಂಬತ್ತ ಕಿಲೋಮೀಟರ ದೂರವಿತ್ತು. ಜಿಲ್ಲಾ ಕಚೇರಿಯಿಂದ ಮತ್ತ ಹೊಳ್ಳಿ ಸುದ್ದಿ ಕಳಿಸಿದರು. ಹರ್ಯಾಗೆದ್ದು ಎಸ್ಪಿ ಸಾಹೇಬರು ಸ್ಥಳಕ್ಕೆ ಬರುವವರಿದ್ದು ಅಲ್ಲಿಯವರೆಗೆ ಹೆಣ ಇದ್ದ ಸ್ಥಿತಿಯಲ್ಲಿ ಇಡುವುದು, ಅದನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಪಿ.ಎಸ್.. ಸಾಹೇಬರ ಹೆಗಲಿಗೆ ಹಾಕಿ ಕೈ ತೊಳಕೊಂಡರು.

ಈಗ ಪಿ.ಎಸ್.. ಸಾಹೇಬರು ಗರಂ ಆದರು. ತಮ್ಮ ಜೊತೆ ಬಂದಿದ್ದ ಮೂವರು ಪೊಲೀಸರಿಗೆ ಸ್ಥಳದಲ್ಲಿಯೇ ಆದೇಶ ಮಾಡಿದರು. ‘ನೋಡ್ರಿ ಎಸ್ಪಿ ಸಾಹೇಬರು ನಾಳಿ ಮುಂಜಾನಿ ದವಡ ಬರ್ತಾರ, ಅವರ ಬರೋತನಾ ಹೆಣ ಹೀಂಗ ಇರಬೇಕ, ತುಂಡಾಗಿ ಬಿದ್ದ ಕೈಕಾಲು ನಾಯಿ ನರಿ ಹಿಡಕೊಂಡ ಹೋಗಬಾರದು, ರಾತ್ರಿಯೆಲ್ಲಾ ನೀವು ಮೂರೂ ಮಂದಿ ಇಲ್ಲೇ ಇದ್ದ ಕಾಯಬೇಕ. ಸಂಜಿ ಊಟಕ್ಕ ಒಬ್ಬಬ್ಬರ ಹಳ್ಳ್ಯಾಗ ಹೋಗಿ ಊಟಾ ಮಾಡಿಕೊಂಡ ಬಂದ, ಇದನ್ನ ಕಾಯಬೇಕ. ಇದರಾಗೇನರ ಹೆಚ್ಚು ಕಡಿಮಿ ಆದ್ರ, ನನಗಷ್ಟ ಅಲ್ಲಾ ನಿಮ್ಮ ಕುತ್ತಿಗಿಗೂ ಉರಲ ಬರತೈತಿಅಂತಾ ಎಚ್ಚರಿಕೆ ಕೊಟ್ಟರು.

ಸುತ್ತಲ ಸೇರಿದ್ದ ಮಂದಿನೆಲ್ಲಾ ಹೋಗಿರಿ ಹೋಗ್ರಿ ಎಂದು ಕಳಿಸಿದರು. ಮೂವರು ಪೊಲೀಸರಲ್ಲಿ ಇವತ್ತೇ ಪೊಲೀಸ ನೌಕರಿಗೆ ಸೇರಿದ್ದ ಹೊಸ ಡ್ರೆಸ್ಸಿನ ಹುಡುಗ ನಿಧಾನಕ್ಕ ಸಾಹೇಬರ ಬಳಿ ಬಂದುಸರ್, ನನಗ ಅಂಜಿಕೆ ಬರತೈತ್ರಿ, ನನಗ ಆಗುದಿಲ್ಲರಿ, ಇದ ನನಗ ಹೊಸಾದರಿ, ದಯವಿಟ್ಟು ಇವತ್ತೊಂದು ದಿನಾ ಬಿಟ್ಟ ಬಿಡರಿಎಂದು ಅಂಗಲಾಚಿ ಬೇಡಿಕೊಂಡ. ಆದ್ರ ಕರ್ತವ್ಯದ ಸಂದರ್ಭದಲ್ಲಿ ಇವೆಲ್ಲಾ ನಡೆಯೋದ, ನೀವೊಬ್ಬನ ಇಲ್ಲಾ, ನಿನ್ನ ಜೊತಿ ಸಿನೀಯರ ಪೊಲೀಸರು ಇರ್ತಾರ, ಯಾವುದಕ್ಕೂ ಅಂಜಬ್ಯಾಡ, ಪೊಲೀಸ ಅಂದ್ರ ನಮ್ಮ ಡ್ಯೂಟಿ ಹೀಂಗ. ಧೈರ್ಯ ಇರಬೇಕ, ನೀಯೇನೂ ಕಾಳಜಿ ಮಾಡಮ್ಯಾಡ, ನಾನ ಅವರಿಗಿ ಹೇಳ್ತೇನೆಎಂದು ಹೊಸ ಪೊಲೀಸಪ್ಪನಿಗೆ ಸಮಾಧಾನ ಹೇಳಿದರು. ಮತ್ತ ಸಿನೀಯರ್ ಪೊಲೀಸರಿಗೆನೋಡ್ರಿಪಾ ಹುಡುಗ ಹೊಸದಾಗಿ ಅದಾನ, ಇವತ್ತ ನೌಕರಿ ಸೇರ್ಯಾನ, ಇವನ ಮ್ಯಾಲ ಬಿಟ್ಟ ನೀವು ಎಲ್ಲಿ ಹೋಗಬ್ಯಾಡ್ರಿ ತಿಳಿತಿಲ್ಲೋಅಂದಾಗ ಇಬ್ಬರು ಪೊಲೀಸರು ಗೋಣು ಅಳ್ಳಾಡಿಸಿಅದ್ಯಾಂಗ ಆಕ್ಕತೈತ್ರಿ ಸಾಹೇಬ್ರ, ಖಂಡಿತ ನಾವೆಲ್ಲಾ ಇರತೇವು, ನೀವು ಕಾಳಿಜಿ ಮಾಡದ ಹೋಗಿ ಬರ್ರೀಎಂದು ಹಲ್ಲುಗಿಂಜಿದರು.

ಅದಾಗಲೇ ಮಂದಿಯನ್ನು ಚದುರಿಸಲಾಗಿತ್ತು, ಗೌಡ್ರರೊಂದಿಗೆ ಪಿ.ಎಸ್.. ಸಾಹೇಬರುನಾಳಿ ಎಸ್ಪಿ ಸಾಹೇಬರ ಬರ್ತಾರ್ರೀ, ನೀವೂ ಇರ್ರೀಎಂದು ಜೀಪು ಹತ್ತಿದರು. ಗೌಡ್ರು ಸಿನೀಯರ್ ಪೊಲೀಸರಿಗೆಸಂಜೀಮುಂದ ನಮ್ಮ ಪಾರವ್ವ ಮುದಕಿಗಿ ಅಡಗಿ ಮಾಡಕ ಹೇಳ್ತೇನು, ನೀವ ಯಾರರೇ ಒಬ್ಬರು ಬಂದು ಊಟಾ, ನೀರ ಕಟಗೊಂಡ ಹೋಗ್ರಿಎಂದು ಮೂವರ ಸಂಜೆ ಬಸ್ತಾನಿ ವ್ಯವಸ್ಥೆ ಮಾಡಿ ಅವರೂ ತಮ್ಮ ಪಟಾಲಂ ದೊಂದಿಗೆ ತೆರಳಿದರು.

*

ಈಗ ಹೆಣದ ಮುಂದೆ ಉಳಿದವರು ಮೂವರೇ. ಸಂಜಿ ಸೂರ್ಯಾ ಕೆಂಪ ರಕ್ತ ಕಾರುತ್ತಾ ನಿಧಾನಕ್ಕೆ ಮುಳುಗಿಹೋದ, ಅಷ್ಟೇ ನಿಧಾನಕ್ಕೆ ರಾಕ್ಷಸಿ ರೂಪದಲ್ಲಿ ಕತ್ತಲಾವರಿಸತೊಡಗಿತು. ಸಿನೀಯರ್ ಪೊಲೀಸರು ಹೊಸದಾಗಿ ಬಂದ ಪೊಲೀಸಪ್ಪನೊಂದಿಗೆ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ರಾತ್ರಿ ಎಂಟರವರೆಗೆ ಹೊತ್ತ ಕಳೆದರು. ನಿಧಾನಕ್ಕೆ ಹೊಟ್ಟೆ ಹಸಿಯಲು ಚಾಲೂ ಆದಂತೆ ಚುಕ್ಕೆಗಳ ಬೆಳಕಿನಲ್ಲಿ ಒಬ್ಬ ಸಿನಿಯರ್ ಪೊಲೀಸ ತಾನು ಊಟ, ನೀರು ತರುವದಾಗಿ ಊರ ದಾರಿ ಹಿಡಿದಾ. ‘ದೌಡ ಬಾ ತಡಮಾಡಬ್ಯಾಡಎಂದು ವಿನಂತಿಸಿದರು. ‘ಅಯ್ತ ಹೀಂಗ ಹೋಗಿ ಹೀಂಗ ಬರ್ತೇನಿಅಂತಾ ಹೋದವನು ರಾತ್ರಿ ಒಂಬತ್ತು, ಹತ್ತ ಆದ್ರು ಬರಲಿಲ್ಲ. ಹೋದವನು ಪಾರುಬಾಯಿ ಮನೆಗೆ ಹೋಗಿ ಊಟ ತರವುದನ್ನು ಬಿಟ್ಟು ಊರ ಹೊರಗಿದ್ದ ಶೆರೆದಂಗಡಿ ಹೊಕ್ಕು ಅಂಗಡಿಯವನನ್ನು ಹೆದರಿಸಿ ಬಿಟ್ಟಿ ಶೆರೆಯನ್ನು ನಿಧಾನಕ್ಕೆ ಸ್ವಲ್ಪ ಸ್ವಲ್ಪ ಕುಡಿಯುತ್ತಾ ಮುಂದೆ ಕಂಠಮಟ ಕುಡಿದು ಅಲ್ಲೇ ನಿದ್ರೆಗೆ ಜಾರಿದ್ದನು.

ಇಲ್ಲಿ ಹಸಿದು ಕಣ್ಣಲ್ಲಿ ಚುಕ್ಕೆ ಮೂಡಿದ್ದ ಪೊಲೀಸರಿಬ್ಬರು ಚಿಂತಾಕ್ರಾಂತರಾದರು, ದಾರಿ ನೋಡಿ ನೋಡಿ ನಿಟ್ಟುಸಿರು ಬಿಟ್ಟರು. ಆದರೂ ಇಲ್ಲಿದ್ದ ಇನ್ನೊಬ್ಬ ಸಿನಿಯರ್ ಪೊಲೀಸತಮ್ಮಾ ನೀ ಏನ ಕಾಳಜಿ ಮಾಡಬ್ಯಾಡ ನಾ ಹೋಗಿ ಊಟಾ, ನೀರಾ ತರತೇನಿ ನೀ ಧೈರ್ಯಲೇ ಕೂಡ್ರಎಂದು ಅವನ ಒಪ್ಪಿಗೆಗೂ ಕಾಯದೇ ಹೋಗಿಬಿಟ್ಟ. ಹೀಗೆ ಹೋದವನೂ ಸಹಪಾಠಿ ಎಣ್ಣೆ ಮಿತ್ರನೊಂದಿಗೆ ತಾನೂ ಕಂಠಮಟ ಕುಡಿದು ಅಲ್ಲಿಯೇ ನಿದ್ರೆಗೆ ಜಾರಿದನು.

*

ಇತ್ತ ಇವತ್ತೇ ಹೊಸದಾಗಿ ಸೇರಿದ್ದ ಪೊಲೀಸಪ್ಪನಿಗೆ ನಡುಕ ಶುರುವಿಟ್ಟುಕೊಂಡಿತು. ಎಲ್ಲೋ ಅಡವಿ ತೋಳಗಳು ಚೀರುವುದು, ಮೊನ್ನಿನ ಮಳಿಗಿ ಬಯಲಿಗೆ ಬಂದ ಕಪ್ಪೆಗಳು ಒಟಗುಟ್ಟುವುದು, ದೂರದಲ್ಲಿ ನಾಯಿಗಳು ಚೀರುವುದುಒಂದು ಕರಾಳ ಕತ್ತಲೆಯಲ್ಲಿ ಒಬ್ಬಂಟಿ ಪೊಲೀಸಪ್ಪ ಅಧೀರನಾಗಿಬಿಟ್ಟ. ಮೊದಲೇ ಇದು ಅವನಿಗೆ ಹೊಸದು. ರಾತ್ರಿ ಹೀಗೆ ಒಂಟಿಯಾಗಿ ಇರೋದು, ಅದು ಹೆಣದೊಂದಿಗೆ ಕಾಡಿನಲ್ಲಿರೋದು ಅಂಜಿಕೆ ಸೇರಿಕೊಂಡು ಅವನಿಗೆ ನೆಲವೇ ಕುಸಿದು, ತಾನು ಅದರ ಗರ್ಭದಲ್ಲಿ ಸೇರಿಕೊಳ್ಳಬೇಕೆನಿಸಿತು. ಹೋದವರ ದಾರಿ ಮೈಯೆಲ್ಲಾ ಕಣ್ಣಾಗಿ ಕಾದ. ಅಕರಾಳ ವಿಕರಾಳ ಬಿದ್ದ ಹೆಣವನ್ನು ನೋಡಿ ಓಡಿ ಹೋಗಬೇಕೆನಿಸಿತು. ನೌಕರಿ ಸಾಕಪ್ಪಾ, ಊರಾಗ ಒಕ್ಕಲತನಾ ಮಾಡಕೊಂಡ ಇರೋದು ಛಲೋ, ಇಲ್ಲಿಂದ ಓಡಿ ಹೋಗಿ ಮನಿ ಸೇರಿಕೊಳ್ಳಬೇಕು ಅಂತಾ ಹಲವಾರು ವಿಚಾರಗಳು ತೆಲೆಯಲ್ಲಿ ಬಂದು ಹೋದವು. ಆದರೂ ಆಗಿದ್ದಾಗಲಿ ಇದೊಂದ ರಾತ್ರಿ ಕಳದರ ಸಾಕು ನೌಕರಿಗೆ ತಿಲಾಂಜಲಿ ಇಟ್ಟ ಬಿಡಬೇಕೆಂದು ತೀರ್ಮಾನಿಸಿ ಮತ್ತ ಹೋದವರ ದಾರಿ ನೋಡಿದಾ.

ಹೋದವರು ಈಗ ಬಂದಾರು, ಆಗ ಬಂದಾರು ಎಂದು ಕಾದು ಕಾದು ಸುಸ್ತಾಗಿ ಟೈಮ್ ನೋಡಿದ. ರಾತ್ರಿ ಎರಡ ಆಗಿತ್ತು. ಸಣ್ಣಗೆ ನಿದ್ರೆ ಬರಲು ಹತ್ತಿತು. ಇನ್ನು ಕಾಯುವುದು ಸರಿಯಲ್ಲಂತ ಭಂಡ ಧೈರ್ಯ ಮಾಡಿ ಅಲ್ಲಿ ಕತ್ತರಿಸಿ ಬಿದ್ದ ಕೈ, ಕಾಲ, ರುಂಡ ಎಲ್ಲಾ ಒಂದ ಕಡೆ ಹಾಕಿದ. ನಾ ಮಲಗಿದ ಮ್ಯಾಲ ಯಾವುದರ ನರಿ, ನಾಯಿ ಬಂದ ಅಂಗಾಂಗ ಹಿಡಕೊಂಡ ಹ್ವಾದ್ರ ನಾ ಸಾಹೇಬಗ ಏನ ಉತ್ತರಾ ಕೊಡಲಿ ಅಂತಾ ಅಲ್ಲಲ್ಲಿ ಚದರಿ ಬಿದ್ದಿದ್ದ ಧಡೂತಿ ಫೈಲ್ವಾನನ ಅಂಗಾಂಗಗಳನ್ನು ಒಂದ ಕಡೆ ಹಾಕಿ, ಅದರ ಮ್ಯಾಲ ಅಲ್ಲೇ ಮಗ್ಗಲ ಹೊಲದಾಗ ಬೆಳಿದಿದ್ದ ಜೋಳದ ದಂಟ ಕಿತ್ತು ತಂದು ಇಡೀ ದೇಹದ ಎಲ್ಲಾ ಅಂಗಾಗಳನ್ನು ಮುಚ್ಚಿ, ಮತ್ತ ಮ್ಯಾಲ ಇನ್ನಷ್ಟು ಇನ್ನಷ್ಟು ದಂಟ ಹಾಕಿ ಅದರ ಮಾಲ್ಯ ಆಕಾಶಕ್ಕ ಮುಖಾ ಮಾಡಿ ಮಲಗಿ ಬಿಟ್ಟ. ಹೀಂಗ ಸಣ್ಣಾಗಿ ನಿದ್ರಿ ತುಗೊಂಡಿತ್ತು. ಇಂಥಾ ವ್ಯಾಳೆದಾಗ ದೆವ್ವಿನ್ಯಾಂಗ ಬಂದ ಹೆಂಗಸು ಇಲ್ಲಿ ರಾದ್ದಾಂತ ಮಾಡಿ ಪೆಟ್ಟು ತಿಂದು ಈಗ ಸುಧಾರಿಸಿಕೊಂಡಿದ್ದಳು.

*

ಪೊಲೀಸಪ್ಪ ಉಸಿರು ಬಿಟ್ಟು ನಿರಾಳನಾಗಿ, ಧೈರ್ಯ ತಂದುಕೊಂಡು ಹೆಂಗಸಿಗೆ, ‘ನೀ ಯಾರ ಅದಿ, ಹೇಳ ಇಂಥ ಅಕರಾಳ ವಿಕರಾಳ ವ್ಯಾಳೆದಾಗ ಯಾಕ ಬಂದಿಎಂದು ಠಬರು ಮಾಡುತ್ತಾ ಕೇಳಿದಾ. ಆಗ ಬಂದಾಕಿಎಪ್ಪಾ ನಾನು ಇಲ್ಲಿ ಸತ್ತ ಬಿದ್ದಾನಲ್ಲಾ ಅವನ ಅಕ್ಕ ಅದೀನಿ, ಅವನ ಮಾರಿ ನೋಡಾಕ ಬಂದೇನಿಅಂದಳು. ‘ಹರ್ಯಾಗೆದ್ದ ಬರಾಕ ನಿನಗೇನ ಧಾಡಿಯಾಗಿತ್ತುಕುದಿವ ಸಿಟ್ಟಿನಲ್ಲಿ ಬಂದ ಮಹಿಳೆಗೆ ಬಾಯಿಗೆ ಬಂದಂತೆ ಬೈಯತೊಡಗಿದ. ‘ಎಪ್ಪಾ ನನ್ನ ಗಂಡನ ಮನಿಯಿಂದ ಬಂದೇನಿ, ಇಲ್ಲೇ ಮಗ್ಗಲ ಊರ ನಮ್ಮದು, ಹಗಲತ್ತಾದರ ನಮ್ಮ ಮನ್ಯಾಗ ಬಿಡೋದಿಲ್ಲ, ಈಗ ಯಾರಿಗೂ ಹೇಳಲಾರದ ಬಂದೇನಿ, ನನ್ನ ಹಣೆಭರಾ ಕೆಟ್ಟ ಐತಿ, ಬರೀ ಜಗಳದಾಗ ಕಳದೈತಿ, ಅಟ ಮಾರಿ ನೋಡಿ ನಾ ಮತ್ತ ಬೆಳಗ ಹರಿದ್ರೊಳಗ ಮನಿ ಸೇರಬೇಕ ಎಲ್ಲಿ ಐತಿ ನಮ್ಮ ಅಣ್ಣನ ಹೆಣಾಎಂದು ಒಂದೇ ಸವನೆ ಬೋರ್ಯಾಡಿ ಅಳತೊಡಗಿದಳು.

ಇವಳ ಪರಿತಾಪ ನೋಡಲಾರದೆ ಕನಿಕರ ಬಂದು ಪೊಲೀಸಪ್ಪ ಒಟ್ಟಿದ್ದ ದಂಟ ತೆಗೆದು ಮುಖಾ ತೋರಿಸಿದಾ. ಕೆಟ್ಟ ಕಾಡಡವಿಯೊಳಗ ದೊಡ್ಡ ಸ್ವರಾ ತಗದ ಚೀರ ತೊಡಗಿದಳು. ಆಕೆಯನ್ನು ಸಮಾಧಾನ ಮಾಡೋದು ಪೊಲೀಸಪ್ಪಗ ಸಾಕ ಸಾಕಾಗಿ ಹೋಯ್ತು. ತಾಯಿ ವಯಸ್ಸಿನ ಹೆಣಮಗಳಿಗಿ ಸುಮ್ಮನ ಬೆಲ್ಟ್ ತುಗೊಂಡು ಭಾರಿಸಿದಿನಲ್ಲಾ ಎಂದು ಪಶ್ಚಾತಾಪ ಪಟ್ಟ. ‘ಬೇ ಯವ್ವಾ ಇನ್ನ ನೀ ನಿಂದರಬ್ಯಾಡ ಹೋಗಿಬಿಡ ಊರ ಸೇರಕೋಎಂದು ಕಳಿಸಿದಾ. ಅವಳು ಹೋದ ಮೇಲೆ ಅದೆಲ್ಲಿಂದ ನಿದ್ರೆ ಬಂದೀತು, ಪೂರ್ಣ ಎಚ್ಚರಿದ್ದೇ ಬೆಳಗು ಹರಿಸಿದಾ.

*

ಜಿಲ್ಲಾ ಕೇಂದ್ರದಿಂದ ಎಸ್ಪಿ ಸಾಹೇಬರು ನಸುಕಿನಲ್ಲಿಯೇ ಊರು ಬಿಟ್ಟಿದ್ದರಿಂದ, ಏಳು ಅನ್ನುದರೊಳಗ ವ್ಯಾಪ್ತಿಯ ಪೊಲೀಸ ಸ್ಟೇಷನ್ನಿಗೆ ಬಂದಿದ್ದರು. ಪಿ.ಎಸ್.. ಮತ್ತ ಸ್ಟೇಷನ್ನ ಒಳಗಿದ್ದ ಪೊಲೀಸರು ಎಸ್ಪಿ ಅವರನ್ನು ಬರಮಾಡಿಕೊಂಡರು. ಯಾವಾಗಲೂ ಶಾಂತವಿರುತ್ತಿದ್ದ ಏರಿಯಾದಾಗ ಜಿಲ್ಲಾ ಕೇಂದ್ರದಿಂದ ಸಾಹೇಬರು ಬರೋದು ತುಂಬಾ ಅಪರೂಪ. ಇದೇ ಮೊದಲ ಬಾರಿ ತಮ್ಮ ಸ್ಟೇಷನ್ನಗೆ ಬಂದ ಸಾಹೇಬರಿಗೆ ಚಾ ತರಿಸಿಕೊಟ್ಟು ಉಪಚಾರ ಮಾಡಿ ಹಳ್ಳಿಗೆ ಹೋಗಲು ಸಜ್ಜಾದರು. ಎಸ್ಪಿ ಸಾಹೇಬರು ಬರುವಾಗ ತಮ್ಮೊಂದಿಗೆ ಕೊಲೆಗಡುಕರ ಸುಳಿವು ಹಿಡಿಯಲು ಪೊಲೀಸ ನಾಯಿಗಳನ್ನು ತಂದಿದ್ದರು. ಬೆಳ್ಳಂ ಬೆಳಿಗ್ಗೆ ಎರಡ ಮೂರು ಜೀಪುಗಳು ಹಳ್ಳಿ ಕಡೆಗೆ ಸವಾರಿ ಹೊರಟವು. ಸೀದಾ ಕೊಲೆ ನಡೆದ ಸ್ಥಳಕ್ಕೆ ಬಂದರು.

ಅಲ್ಲಿ ಹೊಸ ಪೊಲೀಸನ ಹೊರತಾಗಿ ಯಾರೂ ಇರಲಿಲ್ಲ. ಪೊಲೀಸಪ್ಪ ಸಾಹೇಬರಿಗೆ ಸೆಲ್ಯೂಟ್ ಹೊಡೆದಾ. ಪಿ.ಎಸ್.. ‘ಯಾಕ ತಮ್ಮಾ ಅವರೆಲ್ಲಿಎಂದು ಕೇಳಿದರು. ‘ಮತ್ತ ಹೆಣಾ ಎಲ್ಲಿಎಂದು ಕೇಳಿದರು. ರಾತ್ರಿ ನಡೆದ ಎಲ್ಲ ಘಟನೆಯನ್ನು ಸವಿಸ್ತಾರವಾಗಿ ಹೇಳಿ, ಮುಚ್ಚಿದ್ದ ಹೆಣಾ ತಗದು ತೋರಿಸಿದನು. ಇದು ಎಸ್ಪಿ ಸಾಹೇಬರಿಗೆ ಒಂದ ಕಡೆ ಹೊಸದಾಗಿ ಸೇವೆಗೆ ಸೇರಿದ್ದ ಪೊಲೀಸಪ್ಪನ ಧ್ಯೆರ್ಯ ಕಂಡು ಸಮಾಧಾನ. ಮತ್ತೊಂದೆಡೆ ಸಿನಿಯರ್ ಪೊಲೀಸರ ಕರ್ತವ್ಯ ನಿರ್ಲಕ್ಷತೆ ಕಂಡು ರೊಷ ಉಕ್ಕಿ ಬಂದಿತು. ಎಸ್ಪಿ ಸಾಹೇಬರು ಸ್ಥಳಕ್ಕೆ ಬಂದ ಸುದ್ದಿ ಊರಲ್ಲಿ ಆರಾಮಾಗಿ ವಿರಮಿಸಿದ್ದ ಸಿನೀಯರ್ ಪೊಲೀಸರಿಗೆ ತಿಳಿದು ಎದ್ದೇನೋ, ಬಿದ್ದೇನೋ ಎಂದು ಇನ್ನೂ ಇಳಿಯದ ನಿಶೆಯಲ್ಲಿಯೇ ಓಡಿ ಬಂದು ಸಾಹೇಬರಿಗೆ ಸೆಲ್ಯೂಟ್ ಹೊಡೆದರು. ಶಾಂತವಿದ್ದ ಸಾಹೇಬರು ಅಲ್ಲಿ ಏನನ್ನೂ ಹೇಳದೇ ಊರವರ ಮತ್ತು ಆಗಲೇ ಬಂದಿದ್ದ ಗೌಡರ ಕಡೆಯಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದರು, ತಂದ ನಾಯಿಗಳನ್ನು ಬಿಟ್ಟು ನೋಡಿದರು. ಅವು ಹಳ್ಳದತನಾ ಹೋಗಿ ವಾಪಸ್ಸು ಬಂದವು. ಎಲ್ಲ ವಿಚಾರಣೆ ಮುಗಿಸಿ ಮತ್ತೆ ಹೆಣ ಪೋಸ್ಟ್ ಮಾರ್ಟ್ ಕಳಿಸಿ ಸ್ಟೇಶನ್ನಿಗೆ ಬಂದರು.

ಮುಂದಿನ ತನಿಖೆಗೆ ಸಂಬಂಧಪಟ್ಟಂತೆ ಸ್ಥಳೀಯ ಪಿ.ಎಸ್..ಯೊಂದಿಗೆ ಮತ್ತಷ್ಟು ಅಧಿಕಾರಿಗಳನ್ನು ಒದಗಿಸಿ ಕೊಲೆಗಡುಕರು ಎಲ್ಲೇ ಅಡಗಿರಲಿ ಒದ್ದು ತಂದು ನ್ಯಾಯಾಲಯಕ್ಕೆ ಒಪ್ಪಿಸುವುದಾಗಿ ಜೊತೆಯಲ್ಲಿ ಬಂದ ಊರವರಿಗೆ ಮತ್ತು ಗೌಡರಿಗೆ ತಿಳಿಸಿದರು. ಇನ್ನೇನು ಎಸ್ಪಿ ಸಾಹೇಬರು ಹೊರಡುವವರಿದ್ದರು, ಅಷ್ಟೊತ್ತಿಗೆ ಹೊಸ ಪೊಲೀಸಪ್ಪ ತನ್ನ ಹೊಸ ಕ್ಯಾಪು, ಹೊಸ ಬಡಿಗೆಯನ್ನು ಎಸ್ಪಿಯವರ ಟೇಬಲ್ ಮೇಲೆ ಇಟ್ಟುಸಾಹೇಬರಾ ನೌಕರಿ ನನಗ ಬ್ಯಾಡ್ರಿ, ಊರಾಗ ಒಕ್ಕಲತನಾ ಮಾಡಕೊಂಡ ಇರತೀನ್ರಿಎಂದು ಕೈ ಮುಗಿದಾ. ಎಸ್ಪಿ ಸಾಹೇಬರು ನಕ್ಕು ಸಮಾಧಾನ ಹೇಳಿದರು. ಅವನಲ್ಲಿ ಧೈರ್ಯ ತುಂಬಿದರು.

ಹೋಗುವಾಗ ಪಿ.ಎಸ್.. ಅವರಿಗೆ ಒಂದು ಲಕೋಟೆ ಕೊಟ್ಟು ಹೋದರು. ನಾನು ಹೋದ ಮೇಲೆ ಲಕೋಟೆ ಒಡೆಯಿರಿ ಎಂದಿದ್ದರು. ಎಸ್ಪಿ ಅವರ ಜೀಪು ಮುಂದೆ ಹೋದಂತೆ ಪಿ.ಎಸ್.. ಸಾಹೇಬರು ಲಕೋಟೆ ಒಡೆದರು. ಅದರಲ್ಲಿ ಎರಡು ಪತ್ರಗಳಿದ್ದವು ಮತ್ತು ಎರಡು ಸಾವಿರ ರೂಪಾಯಿ ಮೊತ್ತವಿತ್ತು. ಮೊದಲ ಪತ್ರ ಓದಿದರು. ಹೊಸದಾಗಿ ನಮ್ಮ ಇಲಾಖೆ ಸೇರಿದ ಹುಡುಗ ರಾತ್ರಿ ಧೈರ್ಯದಿಂದ ಕರ್ತವ್ಯ ನಿರ್ವಹಿಸಿದ್ದಾನೆ. ಅವನಿಗೆ ನಮ್ಮ ಅಭಿನಂದನೆಗಳು. ಅವನ ಕರ್ತವ್ಯ ಪ್ರಜ್ಞೆಗೆ ನಮ್ಮ ಕಡೆಯಿಂದ ಎರಡು ಸಾವಿರ ರೂಪಾಯಿ ಬಹುಮಾನ ಕೊಡುವುದು ಎಂದು ಪ್ರಶಂಸನಾ ಪತ್ರ ಬರೆದಿದ್ದರು. ಇನ್ನೊಂದರಲ್ಲಿ ಕತ್ತಲ ರಾತ್ರಿಯಲ್ಲಿ ಹೊಸ ಹುಡುಗನನ್ನು ಒಬ್ಬನೇ ಬಿಟ್ಟು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಇಬ್ಬರು ಸಿನೀಯರ್ ಪೊಲೀಸರನ್ನು ತಕ್ಷಣದಿಂದ ಸೆಸ್ಪೆಂಡ್ ಮಾಡಿ ಪ್ರಕರಣವನ್ನು ಜಿಲ್ಲಾ ಕೇಂದ್ರಕ್ಕೆ ರವಾನಿಸಲು ತಿಳಿಸಿದ್ದರು. ಗರಬಡಿದವನಂತೆ ನಿಂತಿದ್ದ ಹೊಸ ಪೊಲೀಸಪ್ಪನಿಗೆ ಸಿನೀಯರ್ ಪೊಲೀಸರು ಇನ್ನೂ ಟೇಬಲ್ಲ ಮೇಲೆಯೇ ಇದ್ದ ಹೊಸ ಕ್ಯಾಪು, ಹೊಸ ಬಡಿಗೆ ಕೊಟ್ಟು ಕೈ ಮುಗಿದರು.

Leave a Reply

Your email address will not be published.