ಖಾಸಗಿ ಕಾಡು ಬೆಳೆಸುವ ವಿಶಿಷ್ಟ ಪ್ರಯೋಗ ಸಾಗರ ಪರಿಸರದಲ್ಲಿ ‘ಉಷಾಕಿರಣ’

-ಅಖಿಲೇಶ್ ಚಿಪ್ಪಳಿ

ಸಾಗರದ ಬಳಿ ಸದ್ದಿಲ್ಲದೇ ನಡೆಯುತ್ತಿರುವ ಖಾಸಗಿ ಕಾಡು ಬೆಳೆಸುವ ಕಾರ್ಯಕ್ಕೆ ಪ್ರಚಾರ ಬೇಡವೆಂಬುದು ಮಾಲೀಕರ ಅಭಿಪ್ರಾಯ; ಇದನ್ನು ಹೊರಜಗತ್ತಿಗೆ ತೋರ್ಪಡಿಸಿ ಈ ತರಹದ ಕಿರುಕಾಡು ಬೆಳೆಸುವವರಿಗೆ ಪ್ರೇರಣೆ ನೀಡಬೇಕೆಂಬುದು ಲೇಖಕರ ಸ್ವಾರ್ಥ!

ಬೆಂಗಳೂರಿನ ಯಶಸ್ವೀ ಉದ್ಯಮಿ ಸುರೇಶ್ ಕುಮಾರ್ ಬಿ.ವಿ. ಅವರು ಸಾಗರದಿಂದ 7 ಕಿಮಿ ದೂರದಲ್ಲೊಂದು 21 ಎಕರೆ ಒಣಭೂಮಿ ಕೊಂಡರು. ಅವರು ಮೂಲತಃ ಕೃಷಿಕರೇ ಆಗಿದ್ದು, ಓದಿ ಬೆಂಗಳೂರು ಸೇರಿ ಉದ್ಯಮಿಯಾಗಿದ್ದರು. ಜಾಗವನ್ನೇನೋ ಕೊಂಡರು. ಆ ಜಾಗದಲ್ಲಿ ಏನು ಮಾಡುವುದು?

ಅದು ನೀರಿಲ್ಲದ ಒಣಭೂಮಿ. ಉತ್ಪತ್ತಿ ಬರಬೇಕು ಎಂಬ ಆಲೋಚನೆಯಿಂದ ಖರೀದಿಸಿದ್ದೂ ಆಗಿರಲಿಲ್ಲ. ಗುಣಿಸಿ ಭಾಗಿಸಿ ಲೆಕ್ಕಾಚಾರ ಹಾಕುವ ಮನೋಭಾವದವರೂ ಅವರಲ್ಲ. ಹುಟ್ಟಿ ಬೆಳೆದ ಸಮಾಜಕ್ಕೆ ಏನನ್ನಾದರೂ ತಿರುಗಿ ಕೊಡಬೇಕು, ಮಾದರಿಯಾಗುವಂತಹ ಏನಾದರೂ ಮಾಡಬೇಕು ಎಂಬ ಹಂಬಲವಿತ್ತಷ್ಟೇ ಹೊರತು, ಯಾವುದೇ ನಿಖರ ಯೋಚನೆಯಾಗಲೀ ಅಥವಾ ಯೋಜನೆಯಾಗಲಿ ಇರಲಿಲ್ಲ. ಹೀಗೆ ಹೆಸರಿಲ್ಲದ ಜಾಗದಲ್ಲಿ ನೆಲೆಯೂರಿ, ಪಶ್ಚಿಮಘಟ್ಟದ ಕಾಲಬುಡದಲ್ಲಿ ಮಾದರಿಯಾಗಿ ಕಾಡು ಬೆಳೆಸುವ ಕಾರ್ಯ ಸವಾಲಿನದಾಗಿತ್ತು.

ಕುರುಚಲು ಕಾಡು ಮೇಲೆದ್ದು ನೈಜ ಅರಣ್ಯದ ಹಂತಕ್ಕೆ ಬರುವ ಪ್ರತಿಯೊಂದು ಕ್ಷಣ ಕುತೂಹಲಕಾರಿಯಾಗಿತ್ತು. ಜನ-ಜಾನುವಾರುಗಳ ಕಿರುಕುಳದ ಮಧ್ಯದಲ್ಲಿ ಸೋತುಹೋಗುವ ಭಾವ ಬಂದಾಗ ಎದ್ದು ನಿಲ್ಲು, ಗೆಲ್ಲುವೆ ಎಂದು ಬೋಧಿಸಿದವು ಇರುವೆಗಳು, ಗೆದ್ದಲುಗಳು. ಹೆಚ್ಚೂ-ಕಡಿಮೆ ಮರಳುಗಾಡಿನ ನೆಂಟನಂತಿದ್ದ, ಈ ಖುಷ್ಕಿ ಭೂಮಿಯಲ್ಲಿ ಏನೇನೂ ಬೆಳೆಯದು, ಇದನ್ನು ಭೂಪರಿವರ್ತನೆ ಮಾಡಿ ನಿವೇಶನಗಳನ್ನಾಗಿಸಿ, ಮಾರುವುದು ಲಾಭ ಎಂಬ ಪುಕ್ಕಟೆ ಸಲಹೆಗಳನ್ನು ಸಹನೆಯಿಂದ ಸ್ವೀಕರಿಸಬೇಕಾಯಿತು. ಈಗ ಯಶಸ್ಸಿನ ಮೆಟ್ಟಿಲೇರುತ್ತಿರುವ ಈ ಹೆಸರಿಲ್ಲದ ಪ್ರದೇಶದಲ್ಲಿ ನಡೆಯುವ ಪ್ರತಿ ವಿದ್ಯಮಾನವೂ ದಾಖಲರ್ಹ.

ಮಲೆನಾಡಿನ ಪಾರಿಸಾರಿಕ ಬೃಹತ್ ಸಮಸ್ಯೆಗಳಿಗೆ ಕಿಂಚಿತ್ ಪರಿಹಾರ ಹಾಗೂ ಸಮಾಜದ ಎದುರು ಒಂದು ರೂಪಕವಾಗಿ ತೋರಿಸಬಲ್ಲ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಹುಟ್ಟಿದ ಸಂಸ್ಥೆಯ ಹೆಸರು ‘ಉಷಾಕಿರಣ’. ಈ ಸಂಸ್ಥೆಯು ಸಾಗರ ತಾಲ್ಲೂಕು ಅಮಟೆಕೊಪ್ಪದಲ್ಲಿ 21 ಎಕರೆ ನೈಸರ್ಗಿಕ ಕಾಡನ್ನು ಬೆಳೆಸುತ್ತಿದೆ. ಆರ್ಥಿಕ ಬೆಳೆಗಳಾದ ನೀಲಗಿರಿ-ಅಕೇಶಿಯಾ ಬೆಳೆದು ಬರಡಾದ ಈ ಭೂಮಿಯನ್ನು ‘ಉಷಾಕಿರಣ’ ಬರೀ ಐದು ವರ್ಷಗಳಲ್ಲಿ ಹಸನುಗೊಳಿಸಿದೆ, ನೂರಾರು ಪ್ರಬೇಧದ ಸಸ್ಯಗಳೀಗ ಇಲ್ಲಿ ನಳನಳಿಸುತ್ತಿವೆ. ಬಂದವರಿಗೆ ಯಾವುದೇ ಶುಲ್ಕದ ಬರೆ ಹಾಕದೇ ಬರೀ ಶುದ್ಧ ಗಾಳಿಯನ್ನು ನೀಡುತ್ತಿವೆ. ಜೀವಿವೈವಿಧ್ಯ ಇಲ್ಲಿ ಸಮೃದ್ಧವಾಗಿದೆ. 2017ರ ಅಕ್ಟೋಬರ್ ತಿಂಗಳಿಂದ ಪ್ರಾಣಿಶಾಸ್ತ್ರಜ್ಞರು ಬಂದು ವನ್ಯಗಣತಿಯಲ್ಲಿ ತೊಡಗಿಕೊಂಡಿದ್ದಾರೆ. ನೂರಾರು ಪ್ರಬೇಧದ ಪಕ್ಷಿಗಳು ದಾಖಲಾಗಿವೆ. ಹಾಗೆಯೇ ಕಪ್ಪೆ-ಓತಿಗಳ ಸಂಖ್ಯೆ ಸ್ವಾಭಾವಿಕವಾಗಿ ಹೆಚ್ಚಿದೆ. ಇವುಗಳನ್ನು ಅರಸಿಕೊಂಡು ಬರುವ ಬೇಟೆಪ್ರಾಣಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಜೇಡಗಳ ಹತ್ತಾರು ಪ್ರಬೇಧಗಳು ಎಲ್ಲೆಂದರಲ್ಲಿ ತಮ್ಮ ನೂಲಿನ ಚಿತ್ತಾರ ಬಿಡಿಸಿಕೊಂಡು ಕುಳಿತಿವೆ.

ಸದ್ದಿಲ್ಲದೇ ನಡೆಯುತ್ತಿರುವ ಈ ಮಹಾತ್ಕಾರ್ಯಕ್ಕೆ ತೀರಾ ಪ್ರಚಾರ ಬೇಡವೆಂಬುದು ಮಾಲೀಕರ ಅಭಿಪ್ರಾಯ; ಇದನ್ನು ಕೊಂಚ ಹೊರಜಗತ್ತಿಗೆ ಹೇಳೋಣ ಮತ್ತು ಇದರಿಂದ ಪ್ರೇರಿತರಾಗಿ ಇನ್ನಷ್ಟು ಈ ತರಹದ ಕಿರುಕಾಡುಗಳನ್ನು ನಿರ್ಮಿಸಲು ಮುಂದೆ ಬರಬಹುದು ಎಂಬುದು ನನ್ನ ಸ್ವಾರ್ಥ. ಈ ಕೆಲಸದಲ್ಲಿ ನೈತಿಕವಾಗಿ ಬೆನ್ನೆಲುಬಾಗಿ ನಿಂತಿದ್ದು, ನನ್ನ ಹಿರಿಯ ಸ್ನೇಹಿತರಾದ ಕಲ್ಯಾಣ ಸುಂದರಂ; ಯುನೈಟೆಡ್ ಇನ್ಸೂರೆನ್ಸ್ ಕಂಪನಿಯಲ್ಲಿ ಅಭಿವೃದ್ದಿ ಅಧಿಕಾರಿ ಹಾಗೂ ಹಲವು ಉದ್ಯಮಗಳನ್ನು ಪ್ರಾರಂಭಿಸಿ ಹಲವರಿಗೆ ಕೆಲಸ ನೀಡಿದವರು; ದುಡಿದ ಕೆಲಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ನೀಡುವ ಪರಿಪಾಠ ಇಟ್ಟುಕೊಂಡವರು. ವಾರಕ್ಕೊಮ್ಮೆ ಉಷಾಕಿರಣದಲ್ಲಿ ತಿರುಗಾಡುತ್ತಾ; ನನ್ನನ್ನು ಈ ಕೆಲಸದಲ್ಲಿ ಉತ್ತೇಜಿಸಿದವರು.

ಹಲವು ಸ್ನೇಹಿತರು ಕಾಡು ಬೆಳೆಸುವ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿ, ಬೆನ್ನು ಚಪ್ಪರಿಸಿದರು. ಕಾಯ್ದೆ-ಕಾನೂನು ರೂಪಿಸುವ ಭಾವಿ ರಾಜಕಾರಣಿಗಳಾದ ಹಾಲಿ ಗ್ರಾಮಪಂಚಾಯ್ತಿ ಸದಸ್ಯರನ್ನು ಕರೆದುಕೊಂಡು ಹೋಗಿ ತೋರಿಸಿದೆ. ಕೆಲವರು ಮೇಲ್ನೋಟಕ್ಕೆ ಸಂತೋಷ ವ್ಯಕ್ತಪಡಿಸಿದರೂ, 20 ಎಕರೆಗಳಷ್ಟು ಜಾಗವನ್ನು ಅಲಿನೇಷನ್ ಮಾಡಿ, ಸೈಟ್ ಮಾಡಿ ಮಾರಿದರೆ ಎಷ್ಟೊಂದು ಹಣ ಗಳಿಸಬಹುದಿತ್ತು, ಸುಮ್ಮನೆ ಕಾಡು ಬೆಳೆಸಿ ಜಾಗವನ್ನು ಹಾಳು ಮಾಡುತ್ತಾರೆ ಎಂಬ ಧೋರಣೆ ತೋರಿದರು. ಅವರ ಈ ಧೋರಣೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಬಿಡಿ.

ಒಂದು ಕಾಲದಲ್ಲಿ ಅಂದರೆ ಸುಮಾರು 40-50 ವರ್ಷಗಳ ಹಿಂದೆ ದಟ್ಟಾರಣ್ಯವಾಗಿದ್ದ ಈ ಜಾಗದಲ್ಲಿ ಎಲ್ಲವೂ ಸರ್ವನಾಶವಾಗಿ, ಅಕೇಶಿಯಾ-ನೀಲಗಿರಿ ತಲೆಯೆತ್ತಿ ಬೆಳೆಸಿದವರಿಗೆ ಲಾಭ ತಂದಿತ್ತು, ಮತ್ತೆ ಚಕ್ರ ತಿರುಗಿ ಚಿಕ್ಕಕಾಡು ಬೆಳೆಸುವ ಈ ಇಡೀ ಯೋಜನೆಯೇ ಒಂದು ವಿಪರ್ಯಾಸದ ಪ್ರತಿರೂಪದಂತೆ ತೋರುತ್ತದೆ. ಈ ಯೋಜಿತ ಕಾಡಿನಲ್ಲಿ ಮತ್ತೆ ಹುಲಿ-ಚಿರತೆಗಳನ್ನು, ಆನೆಗಳನ್ನು ಕಾಣುವುದು ದೂರದ ಮಾತು. ಆದರೂ ಚಿಕ್ಕ-ಪುಟ್ಟ ಪಕ್ಷಿ-ಸಂಕುಲ, ಕಾಡೆಮ್ಮೆ, ಜಿಂಕೆ, ಕಾಡುಕುರಿ ಇವುಗಳೇ ಇಲ್ಲಿನ ಖಾಯಂ ಅತಿಥಿಗಳು.

ಎರಡು ವರ್ಷಗಳ ಹಿಂದೆ ಹೂಬಿಟ್ಟ ಬಿದಿರು ಈ ಭಾಗದಲ್ಲಿ ಸಂಪೂರ್ಣ ಅಳಿದುಹೋಗಿತ್ತು. ‘ಉಷಾಕಿರಣ’ದ ಪ್ರಯತ್ನದಲ್ಲಿ ಇದೀಗ ಬಿದಿರು ಆಳೆತ್ತರ ಬೆಳೆದು, ನೆಲಕ್ಕೆ ನೀರಿಂಗಿಸುತ್ತವೆ. ನೆಟ್ಟ ಕ್ಯಾಲಿಯಾಂಡ್ರ ಗಿಡಗಳ ಮಕರಂದ ಹೀರಲು ಬರುವ ಜೇನು-ದುಂಬಿಗಳು, ಚಿಟ್ಟೆ-ಪತಂಗಗಳು, ಹೂಹಕ್ಕಿಗಳು, ಪಿಕಳಾರ-ಗಿಣಿ-ಕಾಜಾಣದ ನಡುವೆ ಬೆಳಗಿನ ಹೊತ್ತು ಪೈಪೋಟಿ ಏರ್ಪಡುತ್ತದೆ. ಇವು ಕಣ್ಣಿಗೆ ಮನೋಹರವಾಗಿ, ಕಿವಿಗೆ ಇಂಪಾಗಿ, ಇಹಲೋಕವನ್ನು ಮರೆಸಿ ಸ್ವರ್ಗಸದೃಶವಾಗಿಸುತ್ತವೆ. ಅಪರೂಪಕ್ಕೆ ನವಿಲಿನ ಕೇಕೆಯ ಜೊತೆಗೆ ನರಿಯ ಬಳ್ಳಿಕ್ಕುವಿಕೆಯ ಬೋನಸ್ಸು ನಿಮಗೆ ಸಿಗಬಹುದು.

ಮಳೆಗಾಲದ ನೀರನ್ನು ಇಂಗಿಸಲು ಅಲ್ಲಲ್ಲಿ ಕಾಂಟ್ಯೂರ್ ಟ್ರೆಂಚ್‍ಗಳನ್ನು ತೆಗೆಸಲಾಗಿದೆ. ಓಡುವ ನೀರು ಇಲ್ಲಿ ನಿಲ್ಲುತ್ತದೆ. ದಿವಾಚರಿಯಾದ ಮಾನವ ವಿದ್ಯುಚ್ಛಕ್ತಿಯ ದಾಸನಾಗಿದ್ದಾನೆ. ಆದರೆ, ‘ಉಷಾಕಿರಣ’ ಯಾವುದೇ ಕಲುಷಿತ ಇಂಧನದ ವಿದ್ಯುತ್ ಬಳಸುವುದಿಲ್ಲ. ಇಲ್ಲಿ ಬಳಸಲಾಗುವ ಪಂಪ್, ಲೈಟು ಹೀಗೆ ಎಲ್ಲಾ ಕೆಲಸಗಳಿಗೂ ಸೂರ್ಯನೇ ದೇವರಾಗಿದ್ದಾನೆ. ಸೌರಶಕ್ತಿಯ ಮೂಲಕ ಬೇಕಾದಷ್ಟು ಇಂಧನ ಇಲ್ಲಿ ಲಭ್ಯವಿದೆ. ಈ ಪ್ರದೇಶದಲ್ಲಿ ಇಂಗಾಲಾಮ್ಲ ಕಿಟ್ಟ ಹೊರಹೊಮ್ಮುವುದಿಲ್ಲ. ಎಲ್ಲವೂ ಶುದ್ಧ. ಪಶ್ಚಿಮಘಟ್ಟಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಎಲ್ಲಾ ಸಸ್ಯಪ್ರಬೇಧಗಳ ಷೋಕೇಸನ್ನಾಗಿ ರೂಪಿಸುವ ಮಹತ್ತರ ಯೋಜನೆಗೆ ಈಗಾಗಲೇ ಚಾಲನೆ ದೊರಕಿದೆ.

ಹಕ್ಕಿ-ಪಕ್ಷಿ-ಪ್ರಾಣಿಗಳಿಗೆ ನೀಗುವಷ್ಟು ಹಣ್ಣಿನ ಗಿಡಗಳು ಬೇರುಕೊಟ್ಟು ಬೆಳೆಯುತ್ತಿವೆ. ಅಕೇಶಿಯಾ ಹಾಗೂ ನೀಲಗಿರಿಯಂತಹ ಪೀಡೆ ಸಸ್ಯಗಳು ನಿಧಾನವಾಗಿ ಕಾಲುಕೀಳುತ್ತಿವೆ. ಒಂದು ಆರೋಗ್ಯಭರಿತವಾದ ಕಾಡು, ಎಲ್ಲವನ್ನೂ ಪೊರೆಯುತ್ತಾ, ಸಮಸ್ತ ಜೀವಜಾತಿಯನ್ನು ತನ್ನೊಳಗೆ ಪೋಷಿಸುತ್ತಾ, ಜೀವಶಾಸ್ತ್ರ-ಸಸ್ಯಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗೆ ಮಾದರಿಯಾಗುವತ್ತ ದಾಪುಗಾಲಿಕ್ಕಿದೆ.

ಇಲ್ಲಿ ಕಳೆಯುವ ಪ್ರತಿಕ್ಷಣವೂ ಜೀವನದ ಅತ್ಯಮೂಲ್ಯ ಮಧುರಕ್ಷಣಗಳಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಲ್ಲಿನ ಒಂದೊಂದು ಹುಲ್ಲು, ಒಂದೊಂದು ಪಾಠ ಹೇಳುವಷ್ಟು ಸಮರ್ಥ. ಜೇನು, ಜೇಡ, ಚಿಟ್ಟೆ, ಪತಂಗ, ಪಕ್ಷಿಗಳನ್ನು ಹೊಂದಿದ ‘ಉಷಾಕಿರಣ’, ಲಕ್ಷ ವಿಜ್ಞಾನಿಗಳಿಗೆ, ಸಾವಿರ ವಿಶ್ವವಿದ್ಯಾನಿಲಯಗಳಿಗೆ ಸಮವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಹಾಂ! ನಿಮಗಿಲ್ಲಿ ಫ್ರೀ ವೈಫೈ ಸೌಲಭ್ಯ ಸಿಗುವುದಿಲ್ಲ. ಬದಲಿಗೆ ಕಾಜಾಣ-ಮಂಗಟ್ಟೆಗಳ ಸಂಗೀತ ಲಭ್ಯ. ಕಾಡಿನೊಳಗೆ ವಾಹನದ ಸೌಲಭ್ಯವಿಲ್ಲ. ಆದರೆ ನಡೆದರೆ ನಿಮ್ಮ ಇಡೀ ನರಮಂಡಲ ಮರುಚೈತನ್ಯವಾಗುವ ಖಾತ್ರಿ ಇದೆ. ಶುದ್ಧ ಹವೆ, ಶುದ್ಧ ನೀರು, ಶುದ್ಧ ವಾತಾವರಣ ನಮ್ಮ ಹಕ್ಕು. ಉಷಾಕಿರಣದಲ್ಲಿ ಇವೆಲ್ಲವೂ ಸಾಕಾರವಾಗುತ್ತಿದೆ ಎಂಬುದೇ ಸಂಸ್ಥೆಯ ಹೆಮ್ಮೆ.

ಕಾಟಿಯ ಕಥೆಯೊಂದಿಗೆ ಮುಗಿಸುವೆ:

ಮಲೆನಾಡಿನ ಕಾಡುಗಳು ಕ್ಷೀಣಿಸಿದ್ದರೂ; ಆನೆಯಂತೆ ತೋರುವ ಕಾಟಿಗಳು ಅದು ಹೇಗೋ ಮಾನವರೂಪಿತ ಸವಾಲುಗಳನ್ನು ಎದುರಿಸಿ ಬದುಕುತ್ತಿವೆ. ಕಾಟಿಗಳು ಸಂಘಜೀವಿಗಳು. 20-30 ಸಂಖ್ಯೆಯ ಗುಂಪಿಗೆ ಬಲಿಷ್ಠವಾದ ಗಂಡು ಯಜಮಾನನಾಗಿ ಕಾರ್ಯನಿರ್ವಹಿಸುತ್ತಾನೆ. ಮಂದೆಯಲ್ಲಿ ಮತ್ತೊಂದು ಗಂಡು ಕಾಟಿ ಹರಯಕ್ಕೆ ಬಂದಾಗ; ತನ್ನ ಯಜಮಾನನ್ನು ಗುಂಪಿನಿಂದ ಓಡಿಸುತ್ತಾನೆ; ಆ ಹಳೆಯ ಯಜಮಾನನೀಗ ಒಂಟಿ. ಹೆಚ್ಚು ಕಡಿಮೆ 20 ವರ್ಷ ವಯೋಮಾನವೆಂದರೆ, ಅವುಗಳಿಗೆ ಮುದಿತನ ಬಂದಂತೆ, ಅದು ಇನ್ನು ಒಂಟಿಯಾಗಿಯೇ ಇರಬೇಕೆ ಹೊರತು ಗುಂಪಿನಲ್ಲಿ ಅದಕ್ಕೆ ಅವಕಾಶವಿಲ್ಲ.

ಇಂತದೊಂದು ಕಾಟಿ ಈಗ ಉಷಾಕಿರಣದಲ್ಲಿ ಅತಿಥಿಯಾಗಿ ಸೇರಿಕೊಂಡಿದೆ. ಹಿಂದಿನ ಬೇಸಿಗೆ ದಿನಗಳಲ್ಲಿ ಅದನ್ನು ಕ್ಯಾಮೆರಾ ಟ್ರ್ಯಾಪಿನಲ್ಲಿ ಸೆರೆ ಹಿಡಿದಾಗ; ತೀರಾ ತೀರಾ ಬಡಕಲಾಗಿತ್ತು; ಆಹಾರ ಹಾಗೂ ನೀರಿನ ಕೊರತೆಯಿಂದ ಬಳಲಿ ಬೆಂಡಾಗಿತ್ತು. ಬಹುಶಃ ಈ ಬೇಸಿಗೆಯ ಕಾಲವನ್ನು ಅದು ಕಳೆಯಲಿಕ್ಕಿಲ್ಲವೆಂಬುದು ನನ್ನ ಅಂದಾಜಾಗಿತ್ತು. ಹಿಂಗಾರು ಮಳೆ ಬಿದ್ದ ಬೆನ್ನಿಗೆ ಹುಲ್ಲು ಚಿಗುರಲು ಶುರುವಾಯಿತು; ನೀರಿನ ಕೊರತೆಯೂ ತೀವ್ರವಾಗಿ ಬಾಧಿಸಲಿಲ್ಲ; ಹಾಗೂ ಹೀಗೂ ಮಳೆಗಾಲ ಪ್ರಾರಂಭವಾಗುವ ಹೊತ್ತಿಗೆ ಕೊಂಚ ಮೈತುಂಬಿಕೊಂಡಿತು. ಮತ್ತೆ ಎರಡು ತಿಂಗಳಲ್ಲಿ ತನ್ನ ಹಿಂದಿನ ನಿಜ ರೂಪಕ್ಕೆ ಮರಳಿತು.

ಉಭಯಚರಿಯಾದ ಕಾಟಿಗಳು ಸಾಮಾನ್ಯವಾಗಿ ಹೆಚ್ಚು ಚುರುಕಾಗುವುದು ರಾತ್ರಿಯ ಹೊತ್ತು; ಹದಿನೈದು ದಿನಗಳ ಹಿಂದೆ ಸಂಜೆಯ ಹೊತ್ತಿಗೆ ಉಷಾಕಿರಣದಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದೆ; ಪಕ್ಕದ ಖಾಸಗಿ ಜಾಗದಲ್ಲಿ ಸ್ವಾಭಾವಿಕವಾಗಿ ಬೆಳೆದ ಕಾಡನ್ನು ಹಿಟಾಚಿ ಬಂದು ಸವರಿ ಹಾಕಿತ್ತು; ಇವರೇನು ಮತ್ತೆ ಅಕೇಶಿಯಾ ಅಥವಾ ನೀಲಗಿರಿಯನ್ನು ಎಲ್ಲಿ ನೆಡುತ್ತಾರೋ ಎಂಬ ಆತಂಕದಲ್ಲಿ ತುಸು ಮೈಮರೆತಿದ್ದೆ. ಎಡಭಾಗದ ಅನತಿದೂರದಲ್ಲಿ ಅಸಹಜವಾದ ಏನೋ ಇದ್ದಂತೆ ತೋರಿತು; ನೋಡಿದರೆ ನಮ್ಮ ಭೀಮ; ಕಾಡು ಚೆರ್ರಿ ಗಿಡವನ್ನು ಬಗ್ಗಿಸಿಕೊಂಡು ಅದರ ಚಿಗುರೆಲೆಗಳನ್ನು ಮೇಯುತ್ತಿದ್ದ. ತುಂಬಾ ಅಪರೂಪಕ್ಕೆ ಎದುರುಗೊಂಡ ಭೀಮನ ಫೋಟೊ ತೆಗೆದು; ಜೊತೆಗೊಂದು ವಿಡಿಯೋ ಮಾಡಿದೆ.

ನನ್ನ ಉಪಸ್ಥಿತಿ ಅವನಲ್ಲಿ ಅಸಹನೆಯನ್ನು ಹುಟ್ಟಿಸಿತ್ತು. ಹಾಗಂತ ಅದು ದಾಳಿ ಮಾಡುವ ಸೂಚನೆಯೂ ಇರಲಿಲ್ಲ; ಅದರ ಸಹನೆ ಮುಗಿಯಿತು; ಚಿಕ್ಕದೊಂದು ಚಿಗಿತದಿಂದ ಕಾಡಿನೊಳಗೆ ಮರೆಯಾಯಿತು. ಮಾರನೇ ದಿನ ಸಂಜೆ ಮುಗಿದು ಕತ್ತಲಾಗಿತ್ತು; ದಾರಿ ಹಾದು ಕಾಡಿನೊಳಗೆ ಭೀಮ ಹೋಗಿದ್ದನ್ನು ನೋಡಿದೆ. ರಸ್ತೆಯಲ್ಲೇ ಸುತ್ತುಬಳಸಿ ಮತ್ತೊಮ್ಮೆ ದರ್ಶನವಾಗಬಹುದೆಂದು ಹುಡುಕುವ ಪ್ರಯತ್ನ ಮಾಡಿದೆ. ದಟ್ಟ ಮಟ್ಟಿಯಲ್ಲಿದ್ದ ಭೀಮನಿಗೆ ನನ್ನ ಇರುವು ತಿಳಿಯಿತು. ಸಿಟ್ಟಿನಿಂದ ಮಟ್ಟಿ ಮುರಿಯುವ ಶಬ್ದ ಕೇಳಿತು. ಇನ್ನು ಹುಡುಗಾಟಿಕೆ ಮಾಡಬಾರದು ಎಂದು ನಿಶ್ಶಬ್ದವಾಗಿ ಹಿಂದಿರುಗಿದೆ.

ಕೊಡಗಿನಲ್ಲಿ ಮಲ್ಹೋತ್ರ ದಂಪತಿ ಸಾಧನೆ

ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯ ಕುರಿತು ವಿಶೇಷ ಕಾಳಜಿ ಹೊಂದಿರುವ ಅನಿವಾಸಿ ಭಾರತೀಯ ದಂಪತಿ ಡಾ.ಅನಿಲ್ ಮತ್ತು ಪಮೇಲಾ ಮಲ್ಹೋತ್ರಾ, 1991ರಲ್ಲಿ ಕರ್ನಾಟಕದ ಕೊಡಗಿನಲ್ಲಿ, ಪರಿಸರ ಸಂರಕ್ಷಣೆಗಾಗಿ 55 ಎಕರೆ ಭೂಮಿಯನ್ನು ಖರೀದಿಸಿದ್ದರು. ಕಾಲಕ್ರಮೇಣ, ಅದನ್ನು ವಿಸ್ತರಿಸುತ್ತಾ 300 ಎಕರೆಯ ಸುಂದರ ‘ಸಾಯಿ (SಂI -Sಚಿve ಂಟಿimಚಿಟs Iಟಿiಣiಚಿಣive) ವನ್ಯಜೀವಿ ಅಭಯಾರಣ್ಯ’ವನ್ನಾಗಿ ಪರಿವರ್ತಿಸಿದ್ದಾರೆ. ಭಾರತದ ಏಕೈಕ ಖಾಸಗಿ ಅಭಯಾರಣ್ಯವಾದ ಅದರಲ್ಲಿಂದು, ಹುಲಿ, ಚಿರತೆ, ಸಾರಂಗ, ಕತ್ತೆಕಿರುಬ, ಕಾಡುಹಂದಿ, ಮತ್ತು ಆನೆಗಳಂತಹ ಪ್ರಾಣಿಗಳು ವಾಸವಾಗಿವೆ. 

ವನ್ಯಜೀವಿಗಳು ನೆಲೆ ಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ, ಅವುಗಳಿಗಾಗಿ ಅಭಯಾರಣ್ಯವನ್ನು ರೂಪಿಸಿದ ಮಲ್ಹೋತ್ರಾ ದಂಪತಿಯ ಸಮಾಜಸೇವೆ ಶ್ಲಾಘನೀಯ. ಪ್ರಾರಂಭದಲ್ಲಿ, ಹಿಮಾಲಯದ ತಪ್ಪಲಲ್ಲಿ ಭೂಮಿ ಖರೀದಿಸಲು ಪ್ರಯತ್ನಿಸಿದ್ದ ಇವರು, 12 ಎಕರೆಗಳಿಗಿಂತ ಹೆಚ್ಚಿನ ಭೂಮಿ ಖರೀದಿಸಲು ಅಲ್ಲಿ ಪರವಾನಿಗೆ ಇಲ್ಲದಿರುವುದರಿಂದ, ದಕ್ಷಿಣ ಭಾರತದತ್ತ ಮುಖ ಮಾಡಬೇಕಾಯಿತು. ಹೀಗೆ, ಕೊಡಗನ್ನು ತಲುಪಿ, ರೈತರು ಕೃಷಿ ಯೋಗ್ಯವಲ್ಲವೆಂದು ಪರಿಗಣಿಸಿದ್ದ 55 ಎಕರೆ ಭೂಮಿಯನ್ನು ಖರೀದಿಸಿದರು. ಕೊಡಗನ್ನೇ ಆರಿಸಲು ಮುಖ್ಯ ಕಾರಣವೆಂದರೆ, ಅದೊಂದು ಜಗತ್ತಿನ ಏಕೈಕ ಜೈವಿಕ ವೈವಿಧ್ಯದ ಸೂಕ್ಷ್ಮತಾಣ. ಹೀಗೆ ಆರಂಭವಾದ ಇವರ ಭೂಮಿಗೆ ಹಸಿರು ಹೊದಿಸುವ ಉತ್ಸಾಹ, ರೈತರಿಂದ ಇನ್ನಷ್ಟು ನಿಷ್ಫಲ ಭೂಮಿಯನ್ನು ಖರೀದಿಸುವಂತೆ ಪ್ರೇರೇಪಿಸಿ, ಇಂದು 300 ಎಕರೆಯಷ್ಟು ವಿಸ್ತಾರಗೊಂಡಿದೆ.

ಈ ವನ್ಯಜೀವಿ ಅಭಯಾರಣ್ಯದಲ್ಲಿ ನದಿಯೊಂದು ಹರಿಯುತ್ತಿದೆ. ಇದು, ಪ್ರಾಣಿಗಳ ನೀರಿನ ಅಗತ್ಯಗಳನ್ನು ಪೂರೈಸುವುದಲ್ಲದೆ, ಹಲವಾರು ತಳಿಯ ಮೀನು, ಹಾವು ಮತ್ತು ಇನ್ನಿತರ ಜಲಚರಗಳಿಗೆ ನೆಲೆಯಾಗಿದೆ. ಈ ದಟ್ಟಕಾಡಿನಲ್ಲಿ, ಹಾರ್ನ್‍ಬಿಲ್ ಸೇರಿದಂತೆ 305ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿವೆ. ಇವರು ಈ ಭೂಮಿಯನ್ನು ಖರೀದಿಸಿದಾಗ, ಆಗಲೇ ಸ್ಥಳೀಯ ಪ್ರಭೇದದ ಏಲಕ್ಕಿ, ಮತ್ತಿತರ ಮರಗಳಿದ್ದವು. ಅವುಗಳನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದ ಇವರು, ಯಾವುದೇ ಮರವನ್ನು ಕತ್ತರಿಸದೆ, ಹಸ್ತಕ್ಷೇಪ ಮಾಡದೆ, ಮರಗಳ್ಳರಿಂದ ರಕ್ಷಿಸಿ, ಇನ್ನಷ್ಟು ಸ್ಥಳೀಯ ಮರಗಳನ್ನು ಸುತ್ತಲೂ ನೆಟ್ಟರು. ಹಸಿರು ಹೊದಿಕೆ ವಿಸ್ತರಿಸಿದಂತೆ, ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳು ಕೂಡ ಹೆಚ್ಚಾದವು. ಇಂದು, ಈ ಅಭಯಾರಣ್ಯದಲ್ಲಿ ಔಷಧೀಯ ಸಸ್ಯಗಳೂ ಸೇರಿದಂತೆ ನೂರಾರು ಬಗೆಯ ಸ್ಥಳೀಯ ಮರಗಳಿವೆ. ಇವರು ಗಮನಿಸಿದಂತೆ, ಸತ್ತಿರುವ ಮರವು ಕೂಡ ಮಣ್ಣಿಗೆ ಪೋಷಣೆಯನ್ನು ನೀಡುತ್ತದೆ. ಆದ್ದರಿಂದ, ಇವರು ಪರಿಸರ ವ್ಯವಸ್ಥೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ.

ಈ ದಂಪತಿ ಕಂಡುಕೊಂಡಂತೆ, ‘ಆನೆಗಳು, ಬೀಜಗಳನ್ನು ತುಂಡರಿಸದೇ ಹಾಗೆಯೇ ಸಂಪೂರ್ಣವಾಗಿ ನುಂಗುವುದರಿಂದ ಗಿಡಗಳ ಪುನರುತ್ಪಾದನೆಗೆ ಬಹಳ ಮುಖ್ಯ ಕೊಂಡಿಯಾಗಿವೆ. ಸುಮಾರು 30 ಜಾತಿಯ ಮರಗಳು, ಪುನರುತ್ಪಾದನೆಗಾಗಿ ಆನೆಗಳನ್ನು ಸಂಪೂರ್ಣವಾಗಿ ಅವಲಂಬಿಸಿವೆ. ಒಟ್ಟಿನಲ್ಲಿ, ಕಾಡು ಮತ್ತು ಪ್ರಾಣಿಗಳದ್ದು ಅವಿನಾಭಾವ ಸಂಬಂಧ. ಕಾಡು, ಪ್ರಾಣಿಗಳಿಗೆ ಆಶ್ರಯ ಮತ್ತು ಆಹಾರ ಒದಗಿಸಿದರೆ, ಪ್ರಾಣಿಗಳು ಕಾಡಿನ ಪುನರುತ್ಪಾದನೆಗೆ ಸಹಾಯ ಮಾಡುತ್ತವೆ. ನಮ್ಮ ಉದ್ದೇಶ, ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು, ಜೊತೆಗೆ ಮಳೆಕಾಡುಗಳನ್ನು ಭವಿಷ್ಯದ ಪೀಳಿಗೆಗಳಿಗಾಗಿ ಸಂರಕ್ಷಿಸುವುದು. ನಾವು ಪೂರ್ವಜರಿಂದ ಪಡೆದ ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕಿದೆ. ಸರಕಾರವೇ ಎಲ್ಲಾ ನಿರ್ವಹಿಸಲಾಗದು. ಜೊತೆಗೆ, ಸಮಾನ ಮನಸ್ಕರು ಮತ್ತು ಸರಕಾರೇತರ ಸಂಸ್ಥೆಗಳು ಕೂಡ ಭೂಮಿಯನ್ನು ಖರೀದಿಸಿ, ವನ್ಯಜೀವಿಗಳನ್ನು ಸಂರಕ್ಷಿಸಲು ಮನಸ್ಸು ಮಾಡಬೇಕು.’ 

ಇದರೊಂದಿಗೆ, ಈ ದಂಪತಿ 12 ಎಕರೆ ಕಾಫಿ ಮತ್ತು 15 ಎಕರೆ ಏಲಕ್ಕಿ ಬೆಳೆದಿದ್ದಾರೆ. ಜೊತೆಗೆ, ಸಾವಯವ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಂದರ್ಶಕರಿಗೆ ವಿಶಿಷ್ಟ ಅನುಭವವನ್ನು ನೀಡುವ ಅಭಯಾರಣ್ಯವು ಸಂಪೂರ್ಣವಾಗಿ ಸೌರಶಕ್ತಿಯನ್ನು ಅವಲಂಬಿಸಿದೆ. ಮೂರು ಸಣ್ಣ ಗಾಳಿಯಂತ್ರಗಳು, ಮಳೆಗಾಲದ ಜಡಿಮಳೆಯ ದಿನಗಳಲ್ಲಿ ಅಭಯಾರಣ್ಯಕ್ಕೆ ವಿದ್ಯುತ್ ಒದಗಿಸುತ್ತವೆ. ಹೊಸ ಪ್ರಾಣಿಗಳನ್ನು ಗುರುತಿಸಲು ಮತ್ತು ಬೇಟೆಗಾರರ ಮೇಲೆ ನಿಗಾ ಇಡಲು ಅಭಯಾರಣ್ಯದಾದ್ಯಂತ ಕ್ಯಾಮೆರಾಗಳನ್ನು ಸ್ಥಾಪಿಸಿದ್ದಾರೆ. ಜವಾಬ್ದಾರಿಯುತ ಮತ್ತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ಆಸಕ್ತಿ ಹೊಂದಿದ ಪ್ರವಾಸಿಗರಿಗೆ ಮಾತ್ರ ಇಲ್ಲಿ ಪ್ರವೇಶ. ಧೂಮಪಾನ ಮತ್ತು ಮದ್ಯಪಾನಕ್ಕೆ ಅನುಮತಿಯಿಲ್ಲ. ಏಕೆಂದರೆ ಅದು ಪ್ರಾಣಿಗಳಿಗೆ ತೊಂದರೆ ಉಂಟುಮಾಡುವುದಲ್ಲದೆ, ಮಾಲಿನ್ಯಕ್ಕೆ ಎಡೆಮಾಡಿಕೊಡುತ್ತದೆ. 

ಮಲ್ಹೋತ್ರಾ ದಂಪತಿ ಈ ಅಭಯಾರಣ್ಯವನ್ನು ತಮ್ಮ ಸ್ವಂತ ಹಣ ವ್ಯಯಿಸಿ ಪ್ರಾರಂಭಿಸಿದ್ದರು. ಈಗ ‘ಸಾಯಿ’ ನೋಂದಾಯಿತ ಸೇವಾಸಂಸ್ಥೆ ಸ್ಥಾಪಿಸಿದ್ದು, ಪರಿಸರ ಪ್ರೇಮಿಗಳು ನೀಡುವ ದೇಣಿಗೆಯ ಆಧಾರದಲ್ಲಿ ನಿರ್ವಹಿಸುತ್ತಿದ್ದಾರೆ. ಇನ್ನೊಂದು ಸಮಸ್ಯೆಯೆಂದರೆ, ಅಭಯಾರಣ್ಯವು ತುಂಬಾ ವಿಸ್ತಾರವಾಗಿರುವುದರಿಂದ ಬೇಟೆಗಾರರ ಮೇಲೆ ನಿಗಾ ಇಡುವುದು ಕಷ್ಟಕರ. ಇದಕ್ಕೆ ಪರಿಹಾರವಾಗಿ, ಇವರು ಸುತ್ತಮುತ್ತಲಿನ ಶಾಲೆಗಳು ಮತ್ತು ಹಳ್ಳಿಗಳಲ್ಲಿ ವನ್ಯಜೀವಿ ಸಂರಕ್ಷಣೆಯ ಜಾಗೃತಿ ಮೂಡಿಸಿದರು. 2014ರಲ್ಲಿ, ಅಭಯಾರಣ್ಯ ಏಷ್ಯಾ ನೀಡಿದ “ವನ್ಯಜೀವಿ ಮತ್ತು ಪ್ರವಾಸೋದ್ಯಮ ಸಾಧನೆ” ಪ್ರಶಸ್ತಿಯನ್ನು ಈ ಅಭಯಾರಣ್ಯವು ಗೆದ್ದುಕೊಂಡಿತು.

ಜನಸಾಮಾನ್ಯರಲ್ಲಿ ಮಲ್ಹೋತ್ರಾ ದಂಪತಿಯ ಮನವಿಯಿಷ್ಟೇ, ‘ಪ್ರಾಣಿಗಳನ್ನು ಗೌರವಿಸಿ.’ ಜೊತೆಗೆ, ಪರಿಸರ, ವನ್ಯಜೀವಿ ಸಂಕುಲ ಮತ್ತು ಅಂತರ್ಜಲ ಉಳಿಸುವ ಇಚ್ಛೆಯಿರುವ ಸಮಾನ ಮನಸ್ಕರಿಗೆ ಮಾರ್ಗದರ್ಶನ ನೀಡಲು ಇವರು ಸದಾ ಸಿದ್ಧರಿದ್ದಾರೆ.

ಆಧಾರ: ದಿ ಬೆಟರ್ ಇಂಡಿಯಾ.ಕಾಮ್

ಅನು: ಡಾ.ಜ್ಯೋತಿ

*ಲೇಖಕರು ಸಾಗರ ಬಳಿಯ ಚಿಪ್ಪಳಿ ಗ್ರಾಮದವರು. ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರಿಸರ ರಕ್ಷಣೆಯಲ್ಲಿ ನಿರತ ಸ್ವ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಚಾರ್ವಾಕ ವಾರಪತ್ರಿಕೆಯಲ್ಲಿ ಉಪಸಂಪಾದಕರು.

Leave a Reply

Your email address will not be published.