ಗಂಡಂದಿರಿಗೆ ಪರಿವರ್ತನೆಯ ಪಾಠ ದಿ ಗ್ರೇಟ್ ಇಂಡಿಯನ್ ಕಿಚನ್

-ರೇವಣ್ಣ ಎ.ಜೆ.

ಹೆಣ್ಣಿನ ಶೋಷಣೆಯ ಬೇರುಗಳು ಕುಟುಂಬ ವ್ಯವಸ್ಥೆಯಲ್ಲಿವೆ. ಸಮಾನತೆಯ ಭಾವನೆಗಳನ್ನು, ಹೆಣ್ಣು ಇರುವುದು ಗಂಡಸರ ಸೇವೆಗಾಗಿ ಅಲ್ಲ ಎಂಬ ಸಂಗತಿಗಳನ್ನು ಗಂಡು ಮಕ್ಕಳಿಗೆ ಕಲಿಸಬೇಕು ಎಂಬ ಪಾಠವನ್ನು ಸೂಕ್ಷ್ಮವಾಗಿ ದಾಟಿಸುತ್ತದೆ ಈ ಮಲಯಾಳಂ ಸಿನಿಮಾ.

ತಿಂದುಂಡು, ಜಗಿದು ಬಿಸಾಕಿದ ತರಕಾರಿಯ ತುಣುಕುಗಳ ಡೈನಿಂಗ್ ಟೇಬಲ್, ವಾಕರಿಕೆ ಬರಿಸುವ ಎಂಜಲು ತಟ್ಟೆ, ಟಿಫನ್ ಬಾಕ್ಸ್, ರಿಪೇರಿಗೆ ಬಂದ ಸಿಂಕ್‍ನಿಂದ ತೊಟ್ಟಿಕ್ಕುವ ಮುಸುರೆ. ಸರಾಗವಾಗಿ ಹರಿಯಲೆಂದು, ಗಲೀಜು ತೆಗೆಯಲು ಅದರೊಳಗೆ ಕೈ ಅಲ್ಲಾಡಿಸುವ ಅವಳು. ಎಷ್ಟು ಸಲ ತೊಳೆದರೂ ಮೂಗಿಗೆ ಬಡಿಯುವ ಕೈಗಳ ಆ ಕಮಟು ವಾಸನೆಯ ನಡುವೆ ನಲುಗುವ, ದಿನವಿಡೀ ಅಡುಗೆ ಮನೆಯಲ್ಲಿ ದಣಿದ ಆ ಜೀವದ ಮೇಲೆ ರಾತ್ರಿ ಗಂಡನ ತೀರಿದ ದಾಹದ ದಾಳಿ. ಆ ನಡುರಾತ್ರಿಯಲ್ಲಿ ಅವಳ ಸ್ಮೃತಿಪಟಲದಲ್ಲಿ ಮೂಡಿಬರುವ ಅನ್ನದ ಮೇಲೆ ಜೀಂಗುಡುವ ನೊಣಗಳು, ಕಸದ ಬುಟ್ಟಿ… ಮತ್ತೆ ಮುಂಜಾನೆಯೇ ಆಕೆ ಅಡುಗೆ ಮನೆಯ ಪಾಳಿಯಲ್ಲಿದ್ದರೆ ಇತ್ತ ಅಂಗಳದಲ್ಲಿ ಟೀ ಹೀರುತ್ತಾ, ಪೇಪರ್ ಓದುತ್ತಾ ಕೂರುವ ಮುದಿ ಮಾವ, ಗಂಡನ ಯೋಗಾಭ್ಯಾಸ…

ಇದನ್ನು ಭಾರತೀಯ ಸಮಾಜ ಒಪ್ಪಿಕೊಂಡಿರುವ ಕ್ರೌರ್ಯ ಎನ್ನಬಹುದೇ? ಅಥವಾ ಹೆಣ್ಣಿನ ಮೇಲಿನ ನಿತ್ಯ ನಡೆಯುವ ಅತ್ಯಾಚಾರ ಅನ್ನಬೇಕೆ? -ಪ್ರೇಕ್ಷಕನ ಜಿಜ್ಞಾಸೆಗೆ ಇಂತಹ ಹಲವು ಪ್ರಶ್ನೆಗಳನ್ನು ಇಟ್ಟು ಸಾಗುತ್ತದೆ `ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾ. ಈ ಸಿನಿಮಾದ ಹೆಸರೇ ಒಂದು ರೀತಿಯಲ್ಲಿ ವ್ಯವಸ್ಥೆಯ ಅಣಕ. ಯಾವುದನ್ನು ನಾವು ಗ್ರೇಟ್ ಎನ್ನುತ್ತಿದ್ದೇವೆಯೋ, ಅದರಡಿ ದೈಹಿಕ, ಮಾನಸಿಕ, ಧಾರ್ಮಿಕ, ಸಾಮಾಜಿಕ ಶೋಷಣೆಗಳು ಆಂತರ್ಗತವಾಗಿವೆ.

ಜಿಯೋ ಬೇಬಿ ಎಂಬ ಸಂವೇದನಾಶೀಲ ನಿರ್ದೇಶಕನ `ದಿ ಗ್ರೇಟ್ ಇಂಡಿಯನ್ ಕಿಚನ್’, ಹೆಣ್ಣಿನ ಸ್ವಾವಲಂಬನೆಗೆ ಅಡುಗೆ ಮನೆಯೇ ಅತಿದೊಡ್ಡ ಜೈಲು ಎಂದು ಹೇಳುತ್ತಲೇ, ಭಾರತೀಯ ಪುರುಷ ಪ್ರಧಾನ ವ್ಯವಸ್ಥೆಯ ಕ್ರೌರ್ಯಕ್ಕೆ ಕನ್ನಡಿ ಹಿಡಿದುಬಿಡುತ್ತದೆ. ಹೆಣ್ಣಿನ ಆಯ್ಕೆ, ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಗಂಡು ಹೇರಿರುವ ಸಾಮಾಜಿಕ ಕಟ್ಟುಪಾಡುಗಳ ಸರ್ವಾಧಿಕಾರಿ ಧೋರಣೆಯನ್ನು ಯಾವುದೇ ಅತಿರೇಕಗಳಿಲ್ಲದೆ ತಣ್ಣಗೆ ಬಿಚ್ಚಿಡುತ್ತದೆ.

`ದಿ ಸೆಕೆಂಡ್ ಸೆಕ್ಸ್’ ಕೃತಿಯ ಮೂಲಕ ಸ್ತ್ರೀವಾದದ ಮೂಲ ನೆಲೆಗಳನ್ನು ಸುದೀರ್ಘವಾಗಿ ಚರ್ಚಿಸಿದ ಸಿಮೋನ್ ದಿ ಬೋವಾ, `ಹೆಣ್ಣಿನ ಪರಕೀಯತೆ’ಯ ಬಗ್ಗೆ, ಅದನ್ನು ಮೀರಬೇಕಾದ ಮಾರ್ಗಗಳ ಬಗ್ಗೆ ಹೇಳುತ್ತಾಳೆ. ಈ ಬೃಹತ್ ಕೃತಿಯ ಒಟ್ಟು ಆಶಯವನ್ನು ವಿಮರ್ಶಕ ಸಿ.ಎನ್.ರಾಮಚಂದ್ರನ್ ಹೀಗೆ ಸಂಗ್ರಹಿಸುತ್ತಾರೆ:

“ದ್ವಿತೀಯ ಲಿಂಗ ಕೃತಿಯ `ಸತ್ಯ ಮತ್ತು ಕಟ್ಟು ಕತೆಗಳು’ ಎಂಬ ಮೊದಲನೆಯ ಭಾಗದಲ್ಲಿ ಹೇಗೆ ಪ್ರಾಚೀನ ಕಾಲದಿಂದಲೂ ಪುರುಷರು ಸ್ತ್ರೀಯನ್ನು ಸರ್ವತಂತ್ರ ವ್ಯಕ್ತಿಯಂತಲ್ಲದೆ, ಪುರುಷತ್ವಕ್ಕೆ ಪೂರಕವಾಗುವ `ತಾಯಿ, ಪತ್ನಿ, ವೇಶ್ಯೆ’ ಇತ್ಯಾದಿ ಸಿದ್ಧಪಡಿಯಚ್ಚುಗಳಲ್ಲಿ ಕಂಡಿದ್ದಾರೆಂಬುದನ್ನು ಸಾಧಾರಣವಾಗಿ ಸಿಮೋನ್ ದಾಖಲಿಸುತ್ತಾಳೆ. `ಇಂದು ಸ್ತ್ರೀಯ ಬದುಕು’ ಎಂಬ ಎರಡನೇ ಭಾಗದಲ್ಲಿ ಸ್ತ್ರೀಯ ಪಾಲನೆ, ಅವಳಿಗೆ ನೀಡುವ ಶಿಕ್ಷಣ, ಅವಳ ಸಾಮಾಜಿಕ ಪರಿಸ್ಥಿತಿ ಇವೆಲ್ಲವೂ ಹೇಗೆ ಸ್ತ್ರೀಯನ್ನು ಒಂದು ಪೂರ್ವನಿರ್ಧಾರಿತ ಪ್ರಕಾರದಲ್ಲಿ ನಿಯಂತ್ರಿಸಿ ಸ್ವತಃ ಅವಳೇ ತನ್ನ ಪರಾಧೀನ ಸ್ಥಿತಿಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ ಎಂಬುದನ್ನು ವಿವರಿಸುತ್ತಾಳೆ. `ವಿಮುಕ್ತಿಯತ್ತ’ ಎಂಬ ಭಾಗದಲ್ಲಿ ತನ್ನ ಪರಾಧೀನ ಪರಿಸ್ಥಿತಿಯಿಂದ ಸ್ತ್ರೀ ಹೊರಬರಬೇಕಾದರೆ ಆಗಬೇಕಾದ ಸಾಮಾಜಿಕ- ವೈಚಾರಿಕ ಪರಿವರ್ತನೆಗಳನ್ನು ಚರ್ಚಿಸುತ್ತಾಳೆ..”

“ಆರ್ಥಿಕ ಪರಾವಲಂಬನೆ ಸ್ತ್ರೀಯ ಸಾಮಾಜಿಕ- ಕೌಟುಂಬಿಕ ಸ್ಥಾನಮಾನಗಳನ್ನು ನಿಕೃಷ್ಟವಾಗಿಸಿದೆ, ನಿಜ. ಆದರೆ ಆರ್ಥಿಕ ಸ್ವಾತಂತ್ರ್ಯವೊಂದೇ ಸ್ತ್ರೀಗೆ ತನ್ನತನವನ್ನು ಕೊಡಲಾರದು ಎಂದು ಬೋವಾ ವಾದಿಸುತ್ತಾಳೆ. ಎಂದಿನವರೆಗೆ ಪುರುಷನಿರ್ಮಿತ ಮಾನಸಿಕ-ವೈಚಾರಿಕ ಚೌಕಟ್ಟುಗಳಲ್ಲಿಯೇ ಸ್ತ್ರೀ ಬದುಕಬೇಕಾಗುತ್ತದೆಯೋ ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಸ್ತ್ರೀ ಸ್ವತಂತ್ರಳಾಗುವುದಿಲ್ಲ. ವಿವಿಧ ಸ್ವಾತಂತ್ರ್ಯಗಳನ್ನು ಸತತವಾಗಿ ಶೋಧಿಸುವುದರ ಮೂಲಕವೇ ಪ್ರತಿಯೊಬ್ಬನೂ ಸ್ವತಂತ್ರನಾಗುತ್ತಾನೆ. ಅಜ್ಞಾತ, ಅಪಾರ ಭವಿಷ್ಯದತ್ತ ಗರಿಗೆದರಿ ಹಾರುವ ಸಾಧ್ಯತೆಯೊಂದೇ ನಮ್ಮ ಅಸ್ತಿತ್ವಕ್ಕೆ ಸಮರ್ಥನೆ. ಪ್ರತಿಯೊಬ್ಬಳ/ನ ಅಸ್ತಿತ್ವವೂ ಅರ್ಥಪೂರ್ಣವಾಗುವುದು ತನ್ನ ಮಿತಿಗಳನ್ನು ಮೀರಿ ಹೊರಬರುವ, ಸ್ವತಂತ್ರವಾಗಿ ಆಯ್ಕೆಮಾಡಿಕೊಂಡ ಯೋಜನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಅದಮ್ಯ ಬಯಕೆಯಲ್ಲಿ ಮಾತ್ರ..”

ಮೇರಿ ವುಲ್ಸ್ಟನ್ ಕ್ರಾಫ್ಟ್, ವರ್ಜೀನಿಯಾ ವುಲ್ಫ್, ಸಿಮೋನ್‍ದ ಬೋವಾ, ಕೇಟ್ ಮಿಲೆಟ್- ಹೀಗೆ ಹಲವಾರು ಸ್ತ್ರೀವಾದಿಗಳು ತಮ್ಮ ಕೃತಿಗಳ ಮೂಲಕ ಯಾವುದನ್ನು ಹೇಳಲು ಹೊರಟಿದ್ದಾರೋ- ಆ ವಿಚಾರಗಳಿಗೆ ದೃಶ್ಯ ರೂಪ ಕೊಟ್ಟಿದ್ದಾರೆ ಜಿಯೋ ಬೇಬಿ. ಜನಪ್ರಿಯ ಮಾಧ್ಯಮವಾದ ಸಿನಿಮಾ ಹೆಚ್ಚು ಜನರನ್ನು ತಲುಪುವುದರಿಂದ ಗಂಡಸರ ಆತ್ಮವಿಮರ್ಶೆಗೂ ಕಾರಣವಾದರೆ ಅಚ್ಚರಿಯೇನಿಲ್ಲ.

ಸಿನಿಮಾದುದ್ದಕ್ಕೂ ಅಡುಗೆಮನೆ, ಡೈನಿಂಗ್ ಹಾಲ್, ಕ್ಲೀನಿಂಗ್, ಹಿತ್ತಲಲ್ಲಿ ಬಟ್ಟೆ ತೊಳೆಯುವುದು- ಇವೇ ದೃಶ್ಯಗಳು ಪುನರಾರ್ವನೆಯಾಗುತ್ತಲೇ ಇರುತ್ತವೆ. ಇದೇ ಬದುಕು ಎಂದು ಪರಾಧೀನತೆಯನ್ನು ಒಪ್ಪಿಕೊಂಡ ಹೆಂಗಸರು ಒಂದು ಕಡೆಯಾದರೆ, ಹೆಣ್ಣಿನ ಬದುಕೆಂದರೆ ಇಷ್ಟೆಯೇ ಎಂದು ಪ್ರಶ್ನಿಸಿಕೊಳ್ಳುವ ಮನೋಭಾವದ ಹೆಣ್ಣೂ ಇದ್ದಾಳೆ. ಮುಟ್ಟು, ಮಡಿ, ಮೈಲಿಗೆಯ ಮೌಢ್ಯಗಳ ಸುತ್ತ ಹಬ್ಬಿದ ಧಾರ್ಮಿಕತೆಯಿಂದ ಜರ್ಜರಿತಳಾದ ಹೆಣ್ಣಿನ ಹೋರಾಟ, ಅದಕ್ಕೆ ಪುರುಷ ಪ್ರಧಾನ ವ್ಯವಸ್ಥೆ ನೀಡುವ ಪ್ರತಿಕ್ರಿಯೆ ಹಾಗೂ ಹೆಣ್ಣು ಕಂಡುಕೊಳ್ಳಬೇಕಾದ ಸ್ವಾವಲಂಬನೆಯ ಹಾದಿ… ಮತ್ತೊಂದೆಡೆ ಜೊತೆಜೊತೆಯಲ್ಲೇ ನಿರಂತರವಾಗಿ, ತಲತಲಾಂತರವಾಗಿ ಮುಂದುವರಿಯುವ ಹೆಣ್ಣಿನ ಪರಕೀಯತೆ… ಹೀಗೆ ಅನೇಕ ಸೂಕ್ಷ್ಮ ವಿಚಾರಗಳನ್ನು ಒಂದು ಗಂಟೆ 40 ನಿಮಿಷಗಳಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಲೇಖಕಿ ವೇದಾ ಅಠಾವಳೆ ಈ ಸಿನಿಮಾ ಕುರಿತು ಬರೆಯುತ್ತಾ, “ಅಡುಗೆಮನೆ ಅಂದ್ರೆ ಜಿooಜ ಜಿoಡಿ sಣomಚಿಛಿh ಮಾತ್ರ ಅಲ್ಲ ಜಿooಜ ಜಿoಡಿ ಣhoughಣ ನ ಜಾಗ ಕೂಡಾ ಅಂತ ತಿಳಿವಳಿಕೆ ಕೊಡೋ ಅಪರೂಪದ ಸಿನಿಮಾ ದಿ ಗ್ರೇಟ್ ಇಂಡಿಯನ್ ಕಿಚನ್. ಮೌನವೇ ಚಿತ್ರದ ಹೀರೋ ಮತ್ತು ವಿಲನ್. ಹೆಚ್ಚು, ಹೆರೆ, ತುರಿ, ರುಬ್ಬು, ತೊಳಿ, ಬಳಿ, ಬಸಿ, ಒರೆಸು, ಕಾಯಿಸು, ಕುದಿಸು, ಇಳಿಸು ಮುಂತಾದ ಅಡುಗೆಮನೆಯ ಸದ್ದುಗಳೇ ಹಾಡುಗಳು. ಸದ್ದಿಲ್ಲದೇ ಸಂಬಂಧಗಳನ್ನು ಕತ್ತು ಹಿಸುಕಿ ಕೊಲ್ಲೋ ಛಿommuಟಿiಛಿಚಿಣioಟಿ gಚಿಠಿ ಅನ್ನೋ ಕ್ಯಾನ್ಸರ್ ಸಿನಿಮಾದ ಐಟಂ ಸಾಂಗ್” ಎನ್ನುತ್ತಾರೆ.

ಹೆಣ್ಣು ಇರುವುದೇ ಗಂಡು ಹೇಳುವುದನ್ನು ಕೇಳುವುದಕ್ಕಷ್ಟೇ. ಹೆಣ್ಣಿನ ಅಭಿವ್ಯಕ್ತಿಯೇ ಗಂಡಿನ ಅಹಂಗೆ ಪೆಟ್ಟು ಎಂದು ಭಾವಿಸಿದ ಸಮಾಜದಲ್ಲಿ ಸಿಡಿದೆದ್ದ ಹೆಣ್ಣಿನ ಮೇಲೆ ಗಂಡು ಬಳಸುವ ಕೊನೆಯ ಅಸ್ತ್ರ- ಬೈಗುಳ ಮತ್ತು ದಾಳಿ. ಅಯ್ಯಪ್ಪ ಸ್ವಾಮಿಯ ದೇವಾಲಯಕ್ಕೆ ಮುಟ್ಟಾಗುವ ಹೆಂಗಸರು ಪ್ರವೇಶಿಸುವಂತಿಲ್ಲ ಎಂಬುದನ್ನು ಪ್ರಶ್ನಿಸಿದ ಹೋರಾಟಗಾರ್ತಿಯ ಮನೆಯ ಮೇಲೆ ಅಯ್ಯಪ್ಪಸ್ವಾಮಿ ಭಕ್ತರು ದಾಳಿ ಮಾಡುವುದು, ಆ ಹೋರಾಟಗಾರ್ತಿಯ ಫೇಸ್ಬುಕ್ ವಿಡಿಯೋವನ್ನು ಶೇರ್ ಮಾಡಿದ ತನ್ನ ಹೆಂಡತಿಯನ್ನು ಪ್ರಶ್ನಿಸಿ ಡಿಲೀಟ್ ಮಾಡುವಂತೆ ಸೂಚಿಸುವ ಗಂಡ, `ನನಗೆ ಸರಿ ಅನಿಸಿದನ್ನು ಶೇರ್ ಮಾಡಿದ್ದೇನೆ, ನಿಮಗೇನು ತೊಂದರೆ?’ ಎಂದು ಮರುಪ್ರಶ್ನಿಸುವ ಹೆಂಡತಿ- ಇಲ್ಲಿಗೆ ಬಿಡುಗಡೆಯ ಮೊದಲ ಹಾದಿ ತೆರೆದುಕೊಳ್ಳುತ್ತದೆ.

ಅಯ್ಯಪ್ಪಸ್ವಾಮಿಯ ವಿವಾದ ಸಾರ್ವಜನಿಕ ನೆಲೆಯಿಂದ ವೈಯಕ್ತಿಕ ಪ್ರಶ್ನೆಯಾಗಿಯೂ, ವ್ಯಕ್ತಿಗತವಾಗಿ ಅನುಭವಿಸುತ್ತಿರುವ ಶೋಷಣೆಯೂ ಸಾರ್ವಜನಿಕ ವಲಯದ ದಬ್ಬಾಳಿಕೆಯಾಗಿಯೂ ನಿರೂಪಿತವಾಗಿದೆ. ದೇವಾಲಯ ಪ್ರವೇಶ ಎಂಬುದು ಹೆಣ್ಣಿನ ಆಧ್ಯಾತ್ಮಿಕತೆಯ ಪ್ರಶ್ನೆಯಾಗಿ ಉಳಿಯುವುದಿಲ್ಲ. ಮುಟ್ಟು, ಮಡಿಗಳ ಸುತ್ತ ಪುರುಷ ಪ್ರಧಾನ ವ್ಯವಸ್ಥೆ ಕಟ್ಟಿರುವ ಅಹಂಕಾರವನ್ನು ಮುರಿಯುವುದೇ ಆಗಿದೆ.

`ಗ್ರೇಟ್ ಇಂಡಿಯನ್ ಕಿಚನ್’ ತೆರೆದಿಡುವ ಒಟ್ಟು ತಾತ್ವಿಕತೆಯೇ ಸಮಾನತೆ. ಗಂಡು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸಮಾನತೆಯ ಸಂಸ್ಕಾರವನ್ನು ಕಲಿಸುತ್ತಾ ಹೋಗುವ ಜವಾಬ್ದಾರಿ ಇಡೀ ಕುಟುಂಬದ್ದು. ಸಾರ್ವಜನಿಕ ಭ್ರಷ್ಟಾಚಾರವನ್ನು ತಡೆಯಲು `ಲೋಕ್ಪಾಲ್ ಮಸೂದೆ’ ಜಾರಿ ಮಾಡಬೇಕೆಂದು ಹೋರಾಟ ಶುರುವಾಗಿದ್ದಾಗ, ಎಪಿಜೆ ಅಬ್ದುಲ್ ಕಲಾಂ, ‘ಲೋಕಪಾಲ್’ಗಿಂತ `ಹೋಮ್ಪಾಲ್’ ಆಗಬೇಕು ಎಂದಿದ್ದರು. ಅಂದರೆ ಭ್ರಷ್ಟಾಚಾರ ನಿರ್ಮೂಲನೆಯ ಬೇರು ಮನೆಯಿಂದಲೇ ಮೂಡಬೇಕು. ಮಕ್ಕಳಲ್ಲಿ ಸತ್ಯ, ನ್ಯಾಯ, ನಿಷ್ಠೆಯ ಪಾಠ ಕಲಿಸಬೇಕು. ಗಿಡವಾಗಿ ಬಗ್ಗದಿದ್ದರೆ, ಮರವಾಗಿ ಬಗ್ಗುವುದಿಲ್ಲ ಎಂದು ಕಲಾಂ ಮಾತನಾಡಿದ್ದರು. ಈ ಮಾರ್ಗ ಎಲ್ಲ ರೀತಿಯ ಅನ್ಯಾಯಗಳಿಗೂ ಸೂಕ್ತ ಪರಿಹಾರ ಅನಿಸುತ್ತದೆ. ಹೆಣ್ಣಿನ ಶೋಷಣೆಯ ಬೇರುಗಳು ಕುಟುಂಬ ವ್ಯವಸ್ಥೆಯಲ್ಲಿವೆ. ಸಮಾನತೆಯ ಭಾವನೆಗಳನ್ನು, ಹೆಣ್ಣು ಇರುವುದು ಗಂಡಸರ ಸೇವೆಗಾಗಿ ಅಲ್ಲ ಎಂಬ ಸಂಗತಿಗಳನ್ನು ಗಂಡು ಮಕ್ಕಳಿಗೆ ಕಲಿಸಬೇಕು ಎಂಬ ಪಾಠವನ್ನು ಸೂಕ್ಷ್ಮವಾಗಿ ದಾಟಿಸುತ್ತದೆ ‘ದಿ ಗ್ರೇಟ್ ಇಂಡಿಯನ್ ಕಿಚನ್’.

ಗಂಡನ ಮನೆಯ ದಬ್ಬಾಳಿಕೆಯನ್ನು ಧಿಕ್ಕರಿಸಿ ಹೊರಡುವ ಕಥಾನಾಯಕಿ, ತನ್ನ ಇಚ್ಛೆಯ ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಹೀಗೆ ನಿರ್ಧಾರ ತೆಗೆದುಕೊಂಡರೆ ಕುಟುಂಬ ವ್ಯವಸ್ಥೆ ಮುರಿದು ಬೀಳುತ್ತದೆ, ಪ್ರತಿರೋಧ ಸರಿಯಾದರೂ ಗಂಡನ ಮನೆಯನ್ನೇ ತೊರೆಯುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. ಇದು ಹೆಣ್ಣು ಮಕ್ಕಳಿಗೆ ನೀಡಿದ ಸಂದೇಶ ಎಂದು ಭಾವಿಸುವುದಕ್ಕಿಂತ ಗಂಡಸರಿಗೆ ನೀಡಿದ ಎಚ್ಚರಿಕೆ ಎಂದೇಕೆ ನೋಡಬಾರದು? ದುರಂತ ನಾಟಕವೊಂದರ ಉದ್ದೇಶ ಪ್ರೇಕ್ಷಕನಲ್ಲಿ ದುರಂತವನ್ನೇ ಉಂಟು ಮಾಡಬೇಕೆಂದಿರುವುದಿಲ್ಲ. ತೆರೆಯ ಮೇಲೆ ಕಂಡ ದುರಂತಗಳು, ಪ್ರೇಕ್ಷಕನ ನಿಜ ಜೀವನದಲ್ಲಿ ಘಟಿಸಬಾರದೆಂಬ ಪ್ರಜ್ಞೆಯನ್ನು ಬಿತ್ತುತ್ತವೆ. ಈ ನೆಲೆಯಲ್ಲಿ ನೋಡುವುದಾದರೆ ಗ್ರೇಟ್ ಇಂಡಿಯನ್ ಕಿಚನ್‍ನ ಕ್ಲೈಮ್ಯಾಕ್ಸ್ ಅರ್ಥಪೂರ್ಣವಾಗಿದೆ.

ಅಂದಹಾಗೆ ಈ ಸಿನಿಮಾ `ನೀಸ್ಟ್ರೀಮ್’ ಎಂಬ ಹೊಸ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. (ಜಗತ್ತಿನಾದ್ಯಂತ ಇರುವ ಮಲಯಾಳಂ ಪ್ರಿಯರಿಗಾಗಿಯೇ ಹುಟ್ಟಿಕೊಂಡಿರುವ ಓಟಿಟಿ ಇದು).  ಗೃಹಿಣಿಯ ಪಾತ್ರದಲ್ಲಿ ಅಭಿನಯಿಸಿರುವ ನಿಮಿಷ ಸಜಯನ್, ಗಂಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂರಜ್ ವೆಂಜರಮೂಡು ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಮಲಯಾಳಂ ಚಿತ್ರರಂಗದಲ್ಲಿ ಈಗಾಗಲೇ ಚಿರಪರಿಚಿತವಾದ ಹೆಸರುಗಳಿವು. ಈ ಇಬ್ಬರೂ ತಮ್ಮ ವಿಶಿಷ್ಟ ಅಭಿನಯದಿಂದ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡವರು.

ಸ್ತ್ರೀ ಪ್ರಧಾನ ಸಿನಿಮಾಗಳಲ್ಲಿ ನಿಮಿಷ ಸಜಯನ್ ಅವರ ಹೆಸರು ಈಗಾಗಲೇ ಅಚ್ಚೊತ್ತಿದೆ. ಗ್ರೇಟ್ ಇಂಡಿಯನ್ ಕಿಚನ್ ಸಿನಿಮಾ, ಅವರ ಮುಡಿಗೇರಿದ ಮತ್ತೊಂದು ಪುಷ್ಪ.

Leave a Reply

Your email address will not be published.