‘ಗಲ್ಲಿ ಪ್ರತಿಭೆಗಳು ದಿಲ್ಲಿ ಆಳಬೇಕು…’

ಸೌರವ್ ಗಂಗೂಲಿ ‘ಬಂಗಾಳದ ಮಹಾರಾಜ’ ಎಂದು ಖ್ಯಾತರಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಆಧ್ಯಕ್ಷ. ಹೊಸ ವರ್ಷದ ಮೊದಲ ಸಂಚಿಕೆಯಲ್ಲಿ ಅವರ ಸಂದರ್ಶನ ಪ್ರಕಟಿಸಬೇಕೆಂಬ ನಿಟ್ಟಿನಲ್ಲಿ ನಡೆಸಿದ ಸತತ ಸಂಪರ್ಕ ಕೊನೆಗೂ ಕೈಗೂಡಿದೆ. ಸಮಾಜಮುಖಿ ಓದುಗರ ಪರವಾಗಿ ಕೇಳಿದ ಹತ್ತು ಪ್ರಶ್ನೆಗಳಿಗೆ ಅಷ್ಟೇ ಮುಕ್ತವಾಗಿ ಮುತ್ತಿನಂತಹ ಉತ್ತರ ಕೊಟ್ಟಿದ್ದಾರೆ ಗಂಗೂಲಿ.

ಬಿಸಿಸಿಐ ಅಂದ್ರೆ ಹಣದ ಥೈಲಿ ಸುಖದ ಸುಪ್ಪತ್ತಿಗೆ ಅನ್ನೋ ಮಾತಿದೆ, ಹೌದಾ?

ವಿಶ್ವದ ಸಿರಿವಂತ ಕ್ರಿಕೆಟ್ ಸಂಸ್ಥೆ ಅನ್ನೋದನ್ನು ಒಪ್ಪುವೆ. ಆದರೆ ಅಧ್ಯಕ್ಷಗಾದಿ ಸುಖದ ಸುಪ್ಪತ್ತಿಗೆಯಲ್ಲ. ಬದಲಿಗೆ ಸವಾಲಿನ ಹುದ್ದೆ. ಇದು ಸಾವಿರಾರು ಕ್ರಿಕೆಟಿಗರನ್ನು ಹುಟ್ಟುಹಾಕಿ ಬದುಕು ಬೆಳಗಿಸಿರುವ ಮಹೋನ್ನತ ಮಂಡಳಿ. ನಾನೂ ಒಬ್ಬ ಆಟಗಾರನಾಗಿ ಅದರ ಒಂದು ಫಲ ಉಂಡಿದ್ದೇನೆ. ಅದರ ಋಣ ತೀರಿಸುವ ಹೊಣೆ ನನಗೆ ಲಭಿಸಿದೆ.

ನಿಮ್ಮ ಕಲ್ಪನೆಯ ಕ್ರಿಕೆಟ್ ಸಂಸ್ಥೆ ಹೇಗಿರಬೇಕು ಅಂದುಕೊಂಡಿದ್ದೀರಾ? ಅದು ಸಾಧ್ಯವೇ?

ಕನಸು ಕಾಣುವ ವ್ಯಕ್ತಿ ಅದನ್ನು ನನಸು ಮಾಡುವ ಛಲವನ್ನೂ ಹೊಂದಿರಬೇಕು. ನನಗೆ ಅದು ಹುಟ್ಟಿನಿಂದಲೇ ಬಂದಿದೆ. ಬಂಗಾಳ ಟೀಂನಿಂದ ಭಾರತ ತಂಡದ ಪರವಾಗಿ ಆಡುವ ಅವಕಾಶ ಸುಲಭವಾಗಿ ಸಿಕ್ಕಿದ್ದಲ್ಲ. ನಾನು ಸವೆಸಿದ ಕಲ್ಲುಮುಳ್ಳಿನ ಹಾದಿಯೇ ಇಂದು ಇಂತಹ ಉನ್ನತ ಸ್ಥಾನಕ್ಕೆ ತಂದು ಕೂರಿಸಿದೆ. ಹೌದು, ಬಿಸಿಸಿಐ ಹೀಗೇ ಇರಬೇಕು, ಇದನ್ನೇ ಮಾಡಬೇಕು ಎಂಬ ಸ್ಪಷ್ಟ ನಿಲುವು ಮತ್ತು ಕಾರ್ಯಸೂಚಿ ಜೊತೆಯೇ ನಾನಿಲ್ಲಿಗೆ ಬಂದಿದ್ದೇನೆ. ಇದು ವೈಟ್ ಕಾಲರ್ ಗೇಮ್ ಅನ್ನೋ ಹಣೆಪಟ್ಟಿ ಕಳಚಬೇಕಿದೆ. ಪ್ರತಿಭೆ ಯಾರದೇ ಸ್ವತ್ತಲ್ಲ. ಸೂಕ್ತ ವೇದಿಕೆ ಉತ್ತೇಜನ ಸಿಕ್ಕರೆ ಗಲ್ಲಿ ಪ್ರತಿಭೆ ದೆಹಲಿಗೆ ಬರುವುದು ಕಷ್ಟವೇನಲ್ಲ. ಅದನ್ನು ಸುಲಲಿತವಾಗಿಸುವ ಬಗ್ಗೆಯೇ ನನ್ನ ಚಿಂತನೆ ಇದೆ. ಇದಕ್ಕೆ ಅಡ್ಡಿಗಳು ಇರಬಹುದು. ಆಳುವವರು ನಾವೇ ಆಗಿದ್ದೇವೆ. ಫೀಲ್ಡ್ ನ ಒಳಗೆ ಹೊರಗೆ ಎರಡೂ ಅನುಭವ ಆಗಿದೆ. ಇದೇ ನನ್ನ ಕಾರ್ಯಸೂಚಿ ಅನುಷ್ಠಾನಕ್ಕೆ ದಿಕ್ಸೂಚಿ.

ಆಟದಲ್ಲಿದ್ದ ನಿಮ್ಮ ಅಗ್ರೆಸ್ಸಿವ್‍ನೆಸ್ ಆಡಳಿತದಲ್ಲೂ ಕಾಣಬಹುದಾ?

ವೈ ನಾಟ್..? ಹಾಗಂತ ನಮ್ ಟೀಂ ಜತೆ ಜಗಳಕ್ಕೆ ನಿಲ್ಲಲಾಗಲ್ಲ. ಅವರು ನಮ್ಮ ಎದುರಾಳಿ ತಂಡದ ಸದಸ್ಯರೂ ಅಲ್ಲ. ಹಾಗಾಗಿ ಎಲ್ಲರ ವಿಶ್ವಾಸದಿಂದ ಮುನ್ನಡೆಯಬೇಕಿದೆ. ಎಸ್ಪೆಷಲಿ ನನ್ನ ಅಗ್ರೆಸಿವ್‍ನೆಸ್ ರಕ್ತಗತವಾಗಿ ಬಂದಿದ್ದು. ದಶಕಗಳಿಂದ ಬದಲಿಸಲು ಬಹಳಷ್ಟು ಮಂದಿ ಮಾಡಿದ ಪ್ರಯತ್ನ ಸಫಲವಾಗಿಲ್ಲ. ಹೇಳಬೇಕೆಂದರೆ ನನಗೆ ಅದು ವರದಾನವೇ ಆಗಿದೆ. ಕ್ರೀಡಾಂಗಣದಲ್ಲಿ ಗಂಗೂಲಿ ಸಹವಾಸ ಕಷ್ಟ ಅನ್ನುವಷ್ಟರಮಟ್ಟಿಗೆ ನಾನು ಗಟ್ಟಿಗ. ಆಟದಂತೆಯೇ ಆಡಳಿತದಲ್ಲಿಯೂ ಕೆಲವು ಶಿಸ್ತು ಅನಿವಾರ್ಯ. ಅದರಲ್ಲಿ ನೋ ಕಾಂಪ್ರಮೈಸ್.

ಹಣ, ಪ್ರಭಾವ, ವಶೀಲಿ… ಇದ್ದರೆ ಮಾತ್ರ ಕ್ರಿಕೆಟ್ ನಲ್ಲಿ ಹೆಸರು ಮಾಡಬಹುದು. ಬಹುಬೇಗ ರಾಜ್ಯ-ರಾಷ್ಟ್ರತಂಡದಲ್ಲಿ ಸ್ಥಾನ ದಕ್ಕಿಸಿಕೊಳ್ಳಬಹುದು ಅನ್ನುವ ಮಾತಿದೆ. ಇದು ಸತ್ಯವೇ?

ನಾನಾಗಲೇ ಹೇಳಿದ್ದೇನೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ನಿಮ್ಮಲ್ಲಿ ಅದಿದ್ದರೆ ಯಾವ ಲಾಬಿ ಅಥವಾ ವಶೀಲಿಯ ಅಗತ್ಯವಿಲ್ಲ. ಗುರುತಿಸುವುದು ಸ್ವಲ್ಪ ತಡವಾಗಬಹುದು. ಆದರೆ ಖಂಡಿತವಾಗಿ ಭವಿಷ್ಯವಿರುತ್ತದೆ. ಈ ನಿಟ್ಟಿನಲ್ಲಿ ನನ್ನ ಚಿಂತನೆ ಇದೆ. ಪ್ರತಿಭೆಗಳು ದೇಶದ ಯಾವುದೇ ಮೂಲೆಯಲ್ಲಿ ಇರಲಿ, ಸ್ಲಂಗಳಲ್ಲಿಯೇ ಇರಲಿ ಶೋಧಿಸಿ ಉತ್ತೇಜಿಸಿ ದೇಶದ ಪರ ಆಡುವಂತೆ ಮಾಡುವ ಉದ್ದೇಶದಿಂದ ಈ ಸ್ಥಾನದಲ್ಲಿ ಕುಳಿತಿದ್ದೇನೆ. ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತೇನೆ.

ಕ್ರಿಕೆಟ್ ನ ಎಲ್ಲ ಹಂತಗಳಲ್ಲಿಯೂ ಇತ್ತೀಚೆಗೆ ಫಿಕ್ಸಿಂಗ್ ಭೂತ ಆವರಿಸಿದೆ. ಇದಕ್ಕೆ ಕೊನೆ ಎಂದು? ಕ್ರಮ ಏನು?

ಅನಾದಿ ಕಾಲದಿಂದಲೂ ಈ ಆರೋಪವಿದೆ. ಕ್ರಿಕೆಟ್ ಹುಟ್ಟಿನಿಂದಲೂ ಇದೆ. ಇತ್ತೀಚೆಗೆ ಇದು ಹೆಚ್ಚಾಗಿದೆ. ಆಟಗಾರ ವೃತ್ತಿಪರತೆ ಮರೆತಾಗ ಅಥವಾ ಹಣದ ಆಮಿಷಕ್ಕೆ ಒಳಗಾದಾಗ ಇಂತಹ ಕೃತ್ಯ ಕಾಣಸಿಗುತ್ತವೆ. ವಿಶ್ವದ ಬಹುತೇಕ ಎಲ್ಲಾ ದೇಶದ ತಂಡಗಳೂ ಇದಕ್ಕೆ ಹೊರತಾಗಿಲ್ಲ. ಜಂಟಲ್ ಮನ್ ಗೇಮ್ ಗೆ ಇದು ಕಪ್ಪುಚುಕ್ಕೆ. ಐಪಿಎಲ್ ಮಾತ್ರವಲ್ಲದೆ ರಾಜ್ಯಗಳು ಆಯೋಜಿಸುವ ಟೂರ್ನಿಗಳು ಇತ್ತೀಚಿಗೆ ಈ ಫಿಕ್ಸಿಂಗ್ ಕೂಪದಲ್ಲಿ ಸಿಕ್ಕಿಬಿದ್ದಿವೆ. ಇಂತಹ ಕೃತ್ಯದಲ್ಲಿ ಸಿಕ್ಕಿಬೀಳುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಕೇವಲ ಹಣದಾಸೆಗೆ ಮ್ಯಾಚ್ ಫಿಕ್ಸಿಂಗ್ ನಡೆಯುವುದಾದರೆ ಅದನ್ನು ತಡೆಯುವ ನೈಜ ಸಾಮಥ್ರ್ಯ ಬಿಸಿಸಿಐಗೆ ಇದೆ. ಮುಂದಿನ ದಿನಗಳಲ್ಲಿ ಅದು ಹೇಗೆಂಬ ಬಗ್ಗೆ ನಿಮಗೇ ತಿಳಿಯಲಿದೆ.

‘ಜಂಟಲ್ ಮನ್ ಕ್ರೀಡೆ ಎಂದೇ ಹೆಸರಾದ ಕ್ರಿಕೆಟ್ ಪ್ರಸ್ತುತ ವಿಶ್ವವ್ಯಾಪಿ. ಜತೆಗೆ ಆಧುನಿಕ ಸ್ಪರ್ಶ ಪಡೆದು ತಾಂತ್ರಿಕ ಕ್ರೀಡೆ ಎನಿಸಿದೆ. ಸಿರಿವಂತಿಕೆಯ ಸುಪ್ಪತ್ತಿಗೆ ಮೇಲಿರುವ ಕ್ರಿಕೆಟ್ ಗೆ ಸ್ಲಂ ನಲ್ಲಿರುವ ಪ್ರತಿಭೆಗಳೂ ಬರಬೇಕಿದೆ. ಈ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ’

ಸೌರವ್ ಗಂಗೂಲಿ ರಾಜಕೀಯ ಪ್ರವೇಶ ಮಾಡ್ತಾರೆ ಅನ್ನೋ ಸುದ್ದಿ ಇತ್ತು. ಆದರೆ ನೀವ್ಯಾಕೊ ಮನಸ್ಸು ಮಾಡಲಿಲ್ಲ?

ವೈಯಕ್ತಿಕವಾಗಿ ನನಗೆ ಹಣ ಇಲ್ಲವೇ ಹೆಸರು ಮಾಡಬೇಕೆಂಬ ಯಾವುದೇ ಆಸೆಯಿಲ್ಲ. ಜನಸೇವೆಗೆ ರಾಜಕಾರಣಿ ಅಗಬೇಕಿಲ್ಲ. ಹಾಗಾಗಿ ನಾನು ಕ್ರೀಡಾಸೇವೆ ಆಯ್ಕೆ ಮಾಡಿಕೊಂಡಿದ್ದೇನೆ. ನಿಜ ಹೇಳಬೇಕೆಂದರೆ ಕಳೆದ ಚುನಾವಣೆ ಸಂದರ್ಭದಲ್ಲಿ ದೀದಿ (ಮಮತಾ ಬ್ಯಾನರ್ಜಿ) ಮುಕ್ತ ಆಹ್ವಾನ ಕೊಟ್ಟಿದ್ದರು. ಬೇರೆ ಪಕ್ಷಗಳಿಂದ ಕೂಡಾ ಬೇಡಿಕೆ ಇತ್ತು. ಆದರೆ ನನಗದು ಇಷ್ಟವಾಗಲಿಲ್ಲ. ಹಾಗೆಂದು ಶಾಶ್ವತವಾಗಿ ರಾಜಕೀಯ ಕ್ಷೇತ್ರದಿಂದ ದೂರ ಇರೊಲ್ಲ. ನೋಡೋಣ ಭವಿಷ್ಯದಲ್ಲಿ ಏನೇನಾಗಲಿದೆ.

ಬಿಸಿಸಿಐ ಗಾದಿ ಬಂದಂತೆ ಬಂಗಾಳದ ಸಿಎಂ ಹುದ್ದೆ ಅರಸಿ ಬಂದರೆ ಒಪ್ಪುವಿರಾ?

(ನಗುತ್ತಾ..) ಕನಸು ಕಾಣಲು ಒಂದು ಲಿಮಿಟ್ ಬೇಡವೇ? ಜ್ಯೋತಿ ಬಸು, ಭಟ್ಟಾಚಾರ್ಯ, ಮಮತಾ ಬ್ಯಾನರ್ಜಿ ಅಂತಹವರು ಬಂಗಾಳ ಆಳಿದ್ದಾರೆ. ನಾನು ಅಷ್ಟು ದೊಡ್ಡ ವ್ಯಕ್ತಿ ಅಲ್ಲ. ಯಾವುದೇ ಉನ್ನತ ಸ್ಥಾನ ಸಿಕ್ಕರೂ ಅದಕ್ಕೆ ನ್ಯಾಯ ಒದಗಿಸುವ ಭರವಸೆ ಕೊಡಬಲ್ಲೆ.

ನಿಮ್ಮ ಅಚ್ಚುಮೆಚ್ಚಿನ ಕ್ರಿಕೆಟಿಗ ಮತ್ತು ನಿಮ್ಮನ್ನು ಬೆಚ್ಚಿ ಬೀಳಿಸಿದ ಬೌಲರ್ ಯಾರು?

(ನಗುತ್ತಾ..) ನನ್ನ ಫೇವರಿಟ್ ಪ್ಲೇಯರ್ ಡಾನ್ ಬ್ರಾಡ್‍ಮನ್. ಇತ್ತೀಚಿನ ವರ್ಷಗಳಿಗೆ ಬಂದ್ರೆ ಸಹಪಾಠಿ ಸಚಿನ್ ಆಟವನ್ನು ಮೆಚ್ಚಿಕೊಂಡಿದ್ದೇನೆ. ಸಾಕಷ್ಟು ಮಂದಿ ಬೌಲಿಂಗ್ ಎದುರಿಸಿದ್ದೇನೆ. ಆದರೆ ಪಾಕಿಸ್ತಾನದ ವಾಸೀಂ ಅಕ್ರಂ ಭಯಾನಕ ಎಸೆತಗಳ ಬೌಲರ್. ಆದರೆ ಅವರಿಗೂ ನಾನು ಬೆದರಿಲ್ಲ.. ಬ್ಯಾಟ್ ಮೂಲಕವೇ ಅವರ ಬೆವರಿಳಿಸಿದ್ದೇನೆ.

ನೀವು ಟಿ-ಶರ್ಟ್ ಕಳಚಿ ಕ್ರಿಕೆಟ್ ಕಾಶಿ ಲಾಡ್ರ್ಸ್ ಸ್ಟೇಡಿಯಂನಲ್ಲಿ ಅಬ್ಬರಿಸಿದ ಸನ್ನಿವೇಶ ನೆನಪಿದೆಯಾ?

ಸೂಪರ್ಬ್… ನನ್ನ ವೃತ್ತಿ ಜೀವನದ ಅಮೂಲ್ಯ ಕ್ಷಣಗಳಲ್ಲಿ ಅದೂ ಒಂದು. ಅದು 2002ರ ನಾಟ್ ವೆಸ್ಟ್ ಸೀರಿಸ್ ಫೈನಲ್ ಮ್ಯಾಚ್. ನಮ್ಮ ಹುಡುಗರಾದ ಯುವರಾಜ್ ಸಿಂಗ್ ಮತ್ತು ಮಹ್ಮದ್ ಕೈಫ್ ಅದ್ಭುತ ಆಟವಾಡಿ ತಂಡಕ್ಕೆ ಜಯ ತಂದಿತ್ತರು. ಹಿಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಆಂಡ್ರೂ ಫ್ಲಿಂಟಾಫ್ ಅಂಗಳದಲ್ಲೇ ಶರ್ಟ್ ಬಿಚ್ಚಿ ಅಣಕಿಸಿದ್ದರು. ಇದಕ್ಕೆ ಉತ್ತರ ಎಂಬಂತೆ ಸರಣಿ ಗೆದ್ದು ಅವರದ್ದೇ ಧಾಟಿಯಲ್ಲಿ ಉತ್ತರ ಕೊಟ್ಟಿದ್ದೆ. ಇದು ಬಹಳ ಸಮಯ ದೊಡ್ಡ ಸುದ್ದಿಯಾಗಿತ್ತು. ಈಗಲೂ ಒಮ್ಮೊಮ್ಮೆ ನೆನಪಿಸಿಕೊಂಡರೆ ಮೈ ಜುಂ ಅನ್ನುತ್ತದೆ.

ಬಿಸಿಸಿಐ ಗದ್ದುಗೆ ಏರುವ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

ಹೌದು.. ನೀವೇ ಆಲ್ವಾ ಸುದ್ದಿ ಮಾಡಿದ್ದು. ಅದ್ರಲ್ಲೇನು ಬಹಳ ವಿಶೇಷವಿಲ್ಲ. ಅದು ಕ್ರಿಕೆಟ್ ನ ಆಡಳಿತಾತ್ಮಕ ವಿಚಾರದ ಚರ್ಚೆ ಅಷ್ಟೇ. ಶಾ ಅವರ ಪುತ್ರ ಬಿಸಿಸಿಐ ಅಂಗವಾಗಿದ್ದಾರೆ. ಈ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬಂದಿದ್ದವು. ರಾಜಕೀಯ ಮಾತನಾಡಿಲ್ಲ. ಓಕೆ ಎನಿವೇ.. 2020ರ ಹೊಸ ವರ್ಷದ ಶುಭಾಶಯಗಳು.

Leave a Reply

Your email address will not be published.