ಗಾಂಧಾರಿ ವ್ರತ ಭಕ್ತಗಣದ ಪಥ!

-ಎನ್.ಎಸ್. ಶಂಕರ್.

ಪ್ರಸಕ್ತ ಚುನಾವಣೆ ‘ಮೋದಿ ಪ್ರಧಾನಿಯಾಗಬೇಕೋ ಬೇಡವೋ’ ಎಂಬ ಆಯ್ಕೆಯನ್ನು ದೇಶದ ಮುಂದೆ ಇಟ್ಟಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮ ಮುಂದಿರುವ ಪ್ರಶ್ನೆ- ‘ನಮಗೆ ಗಾಂಧಿ ಭಾರತ ಬೇಕೋ, ಗೋಡ್ಸೆ ಭಾರತ ಬೇಕೋ?’ ಎಂಬುದು. ಮತ್ತು ಈ ಆಯ್ಕೆಯನ್ನು ನಮ್ಮ ಮುಂದಿಟ್ಟಿರುವುದು ಚೌಕೀದಾರ್ ನರೇಂದ್ರ ಮೋದಿ.

ರೇಂದ್ರ ಮೋದಿ 2014ರಲ್ಲಿ ಪ್ರಚಂಡ ಬಹುಮತದೊಂದಿಗೆ ಆರಿಸಿ ಬಂದಾಗ ಅದು ಬಿಜೆಪಿ ಗೆಲುವಿಗಿಂತ ಹೆಚ್ಚಾಗಿ ಮೋದಿಯವರ ವೈಯಕ್ತಿಕ ಗೆಲುವಾಗಿತ್ತು. ಆಗ ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳ ತಿಪ್ಪೆಯಲ್ಲಿ ಯುಪಿಎ-2 ಸರ್ಕಾರ ಹೂತುಹೋಗಿದ್ದು ಕೂಡ, ವೈಯಕ್ತಿಕ ಭ್ರಷ್ಟಾಚಾರದ ಕಳಂಕವಿರದಿದ್ದ ಮೋದಿಯವರಿಗೆ ಅನುಕೂಲವಾಯಿತೆಂಬ ವಿಶ್ಲೇಷಣೆಗಳು ಕೇಳಿ ಬಂದಿದ್ದವು.

ಕಾಂಗ್ರೆಸ್ ಮುದಿಯಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದಲೂ, ನಡುವೆ ಒಂದೆರಡು ಬಾರಿ ಹೊರತುಪಡಿಸಿ, ಅಧಿಕಾರದ ಕುರ್ಚಿ ಮೇಲೆ ಕೂತು ಕೂತು ಅದರ ಬುಡ ಕೊಳೆತುಹೋಗಿತ್ತು. ಡಕಾಯಿತರ ಕೂಟದಂತಿದ್ದ ಕಾಂಗ್ರೆಸ್ಸಿನ ಠೇಂಕಾರ, ಜೋಭದ್ರಗೇಡಿತನ, ದಪ್ಪ ಚರ್ಮ… ಆ ಪಕ್ಷ ಇಡೀ ದೇಶಕ್ಕೆ ಅಪ್ರಸ್ತುತವಾಗಿ ಕಾಣತೊಡಗಿತ್ತು. ದೇಶದ ಹೊಸ ತಲೆಮಾರಿನ ಚಡಪಡಿಕೆ, ಕಾಂಗ್ರೆಸ್ಸಿಗೆ ಅರ್ಥವಾಗದ ಭಾಷೆಯಾಗಿತ್ತು. ಆಗ ಹೊಸ ಮುಖಕ್ಕಾಗಿ ಕಾತರಿಸಿದ್ದ ಜನರ ಕಣ್ಣ ಮುಂದೆ ಧುತ್ತೆಂದು ಅವತರಿಸಿದವರು ನರೇಂದ್ರ ಮೋದಿ. ಅದುವರೆಗೆ ಮೋದಿ ಎಂದರೆ, ಪಾಕಿಸ್ತಾನ ಹಾಗೂ ಆ ಮೂಲಕ ಭಾರತೀಯ ಮುಸ್ಲಿಮರ ವಿರುದ್ಧ ಬೆಂಕಿಯುಗುಳುತ್ತ ಬಂದ ಪ್ರಚಾರಕ ಎಂದಷ್ಟೇ ಗೊತ್ತಿದ್ದಿದ್ದು. ಗೋಧ್ರೋತ್ತರ ನರಮೇಧದ ಸುದ್ದಿ ಆಗಿನ್ನೂ ರಾಷ್ಟ್ರಮಟ್ಟದ ಚರ್ಚಾವಸ್ತುವಾಗಿರಲಿಲ್ಲ.

ಅಂತೂ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಬಂದರು. ಆ ಕೂಡಲೇ ಭಾರತೀಯ ರಾಜಕಾರಣದ ನುಡಿಗಟ್ಟು ಬದಲಾಯಿತು. ಮೋದಿ ಚುನಾಯಿತರಾಗಿ ಬಂದ ಮೇಲಂತೂ ಇಡೀ ಸಮಾಜದ ನೇಯ್ಗೆಯೇ ಬದಲಾಗತೊಡಗಿತು….

*
ಕಳೆದ ಐದು ವರ್ಷಗಳಲ್ಲಿ…

• ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದರು. ಸಿಕ್ಕಿದ್ದು ‘ಪಕೋಡಾ ಮಾರುವುದೂ ಉದ್ಯೋಗವೇ’ ಎಂಬ ದಿವ್ಯ ಜ್ಞಾನಾಮೃತ! ತದನಂತರ ‘ನೀವು ಉದ್ಯೋಗ ಕೇಳುವವರಾಗಬಾರದು, ನೀವೇ ಉದ್ಯೋಗ ಕೊಡುವವರಾಗಬೇಕು, ಅದಕ್ಕೇ ಮುದ್ರಾ ಯೋಜನೆ’ ಎಂಬ ಮೂಗಿನ ತುಪ್ಪ. ಅಷ್ಟರ ಮೇಲೆ, ಉದ್ಯೋಗ ಸೃಷ್ಟಿ ಸಾರ್ವಕಾಲಿಕ ಪಾತಾಳ ಮುಟ್ಟಿದೆಯೆಂಬ ವಸ್ತುಸ್ಥಿತಿ ಚಿತ್ರಣವನ್ನು ಸರ್ಕಾರಿ ಅಂಕಿಅಂಶಗಳೇ ನೀಡಿದವು.

• ಮೊದಲಿಗೆ, ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪು ಹಣ ತಂದು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವ ಭರವಸೆ. ಆಮೇಲೆ- ಇಲ್ಲ, ಅದೆಲ್ಲ ‘ಎಲೆಕ್ಷನ್ ಜುಮ್ಲಾ’ ಎಂದು ಅಮಿತ್ ಶಾ ನಮ್ಮ ಕಣ್ಣು ತೆರೆಸಿದರು.

• ರಿಸರ್ವ್ ಬ್ಯಾಂಕಿಗೂ ಹೇಳದೆ ಏಕಾಏಕಿ ಮಾಡಿದ ನೋಟು ರದ್ದು, ಜಿಎಸ್‍ಟಿಗಳಂಥ ದದ್ದು ಮೊದ್ದು ಅನಾಹುತಗಳಿಂದ ದೇಶದ ಅಸಂಘಟಿತ ಅರ್ಥವ್ಯವಸ್ಥೆ ರಿಪೇರಿಯಾಗದ ಮಟ್ಟಿಗೆ ಚಿಂದಿಯಾಯಿತು. ಅದಿನ್ನೂ ಚೇತರಿಸಿಕೊಂಡಿಲ್ಲ. ಚೇತರಿಸಿಕೊಳ್ಳಲು ಎಷ್ಟು ದಶಕ ಬೇಕೋ ಗೊತ್ತಿಲ್ಲ. ಆರಂಭದಲ್ಲಿ ಬ್ಯಾಂಕಿನ ಮುಂದೆ ಕ್ಯೂ ನಿಂತು ಜೀವ ಕಳೆದುಕೊಂಡ ನೂರಾರು ಜನರಿಗೆ ಕನಿಷ್ಠ ಯಾರೂ ಲೊಚಗುಟ್ಟಲೂ ಇಲ್ಲ. ಕೇಳಿದರೆ, ‘ಗಡಿಯಲ್ಲಿ ನಮ್ಮ ಯೋಧರು ಕಾಯುತ್ತ ಪ್ರಾಣಾರ್ಪಣೆ ಮಾಡುತ್ತಿಲ್ಲವೇ?’ ಎಂಬ ಉದ್ಧಟ, ಅಸಂಬದ್ಧ ಸಮಜಾಯಿಷಿಗಳು. ಈಗಂತೂ ಭಾರತೀಯ ಸೈನ್ಯ ಇವರಪ್ಪನ ಆಸ್ತಿಯೇನೋ ಎಂಬಂತೆ, ಯೋಧರ ಹೆಸರಿನಲ್ಲಿ ವೋಟುಗಳ ಚಂದಾ ಎತ್ತಹೊರಟಿದ್ದಾರೆ.

ಕಾರ್ಪೊರೇಟ್ ಕುಳಗಳ ಸರಿಸುಮಾರು ಮೂರು ಲಕ್ಷ ಕೋಟಿ ರೂಪಾಯಿ ಸಾಲಗಳನ್ನು ಮನ್ನಾ ಮಾಡಿ ಬಿಸಾಕಲಾಯಿತು. ಇದರಿಂದಾಗಿ ಬಿಕ್ಕಟ್ಟಿಗೆ ಸಿಕ್ಕಿದ ಬ್ಯಾಂಕುಗಳನ್ನು ಬಚಾವ್ ಮಾಡಲು ಸರ್ಕಾರದಿಂದ ಈಗ ಹಣ ತುಂಬಿಕೊಡಲಾಗುತ್ತಿದೆ. ಹಾಗೆ ತುಂಬಿಕೊಡಲಾಗುತ್ತಿರುವ ಹಣ, ನಮ್ಮ ನಿಮ್ಮಂಥ ಕೋಟ್ಯಂತರ ಮಂದಿ, ಬೆವರು ಸುರಿಸಿ ದುಡಿದು ಕಟ್ಟಿದ ತೆರಿಗೆ ಹಣ. ಅಂದರೆ ದೇಶದ ಲೂಟಿಕೋರರಿಗೆ ನಮ್ಮ ತೆರಿಗೆ ಹಣದ ಬಳುವಳಿ!

• ಸಹಸ್ರಾರು ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದ ವಿಜಯ್ ಮಲ್ಯ, ನೀರವ್ ಮೋದಿ ಇತ್ಯಾದಿ ಖದೀಮರು ದೇಶ ಬಿಟ್ಟು ಓಡಿಹೊದರು. ಇತ್ತ, ಸಾವಿರಗಳಲ್ಲಿ ಅಥವಾ ಕೆಲವೇ ಲಕ್ಷ ರೂಪಾಯಿ ಸಾಲ ಪಡೆದ ರೈತರಿಗೆ ನೋಟಿಸ್ ಕೊಡುತ್ತ, ಇನ್ನೊಂದು ಕೈಯಲ್ಲಿ ಕಾರ್ಪೊರೇಟ್ ಕುಳಗಳ ಸರಿಸುಮಾರು ಮೂರು ಲಕ್ಷ ಕೋಟಿ ರೂಪಾಯಿ ಸಾಲಗಳನ್ನು ಮನ್ನಾ ಮಾಡಿ ಬಿಸಾಕಲಾಯಿತು. ಇದರಿಂದಾಗಿ ಬಿಕ್ಕಟ್ಟಿಗೆ ಸಿಕ್ಕಿದ ಬ್ಯಾಂಕುಗಳನ್ನು ಬಚಾವ್ ಮಾಡಲು ಸರ್ಕಾರದಿಂದ ಈಗ ಹಣ ತುಂಬಿಕೊಡಲಾಗುತ್ತಿದೆ. ಹಾಗೆ ತುಂಬಿಕೊಡಲಾಗುತ್ತಿರುವ ಹಣ, ನಮ್ಮ ನಿಮ್ಮಂಥ ಕೋಟ್ಯಂತರ ಮಂದಿ, ಬೆವರು ಸುರಿಸಿ ದುಡಿದು ಕಟ್ಟಿದ ತೆರಿಗೆ ಹಣ. ಅಂದರೆ ದೇಶದ ಲೂಟಿಕೋರರಿಗೆ ನಮ್ಮ ತೆರಿಗೆ ಹಣದ ಬಳುವಳಿ! ಈ ನಡುವೆ, ಬ್ಯಾಂಕಿನಲ್ಲಿ ಕನಿಷ್ಠ ಠೇವಣಿಯನ್ನೂ ಇರಿಸಲಾಗದ ಕಡುಬಡವರ ಅಕೌಂಟುಗಳ ಮೇಲೆ ಪೆನಾಲ್ಟಿ ಜಡಿದು ನೂರಾರು ಕೋಟಿಗಳನ್ನು ವಸೂಲು ಮಾಡಲಾಗುತ್ತಿದೆ.

• ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂಬ ಎಂ.ಎಸ್.ಸ್ವಾಮಿನಾಥನ್ ವರದಿಯ ಸೊಲ್ಲು ಹಾಡುತ್ತಲೇ ಬಂದಿದ್ದು ಮೋದಿ ಸರ್ಕಾರ. ಆದರೆ ಅದೇ ಸರ್ಕಾರದ ರೈತವಿರೋಧಿ ನೀತಿಗಳ ವಿರುದ್ಧವೇ ದಿಲ್ಲಿಯೂ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಭಾರಿ ಭಾರೀ ರೈತ ಪ್ರತಿಭಟನೆಗಳು ನಡೆದಿವೆ. ಆಗ ಕ್ಯಾರೇ ಎನ್ನದ ಸರ್ಕಾರ, ರೈತರ ಭೂಮಿಯನ್ನು ದರೋಡೆ ಮಾಡಿ ಉದ್ಯಮಿಗಳ ಪದತಲಕ್ಕಿಡುವ ‘ಭೂಸ್ವಾಧೀನ ಕಾಯ್ದೆ’ ತರಲು ಮುಂದಾಗಿತ್ತು. ಆಗ ಎದುರಾದ ಪ್ರಚಂಡ ಪ್ರತಿರೋಧದಿಂದಾಗಿ ಆ ಪ್ರಸ್ತಾವ ಕೈ ಬಿಡಬೇಕಾಗಿ ಬಂತು. ಮನಮೋಹನ ಸಿಂಗ್ ಕಾಲದಲ್ಲಿ ಐದು ಪಟ್ಟು ಏರಿಕೆಯಾಗಿದ್ದ ಕೃಷಿ ರಫ್ತು, ಈ ಸರ್ಕಾರದ ಕಾಲದಲ್ಲಿ ಶೇಕಡಾ 21ರಷ್ಟಕ್ಕೆ ಇಳಿದಿದೆ. ಅದೇ ಸಮಯಕ್ಕೆ ಕೃಷಿ ಕ್ಷೇತ್ರದ ಆಮದುಗಳು ಶೇಕಡಾ 60ರಷ್ಟು ಏರಿವೆ. ಇದರರ್ಥ- ಆಮದುಗಳಿಂದಾಗಿ ಇಲ್ಲಿನ ಬೆಲೆಗಳು ಕುಸಿದು, ರೈತರನ್ನು ಆತ್ಮಹತ್ಯೆ ದಿಕ್ಕಿನಲ್ಲಿ ಮತ್ತಷ್ಟು ದೂಡಿವೆ. ರೈತರ ಬೆಳೆ ನಷ್ಟಕ್ಕೆ ಪರಿಹಾರ ದೊರಕಿಸಿಕೊಡಬೇಕಿದ್ದ ‘ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ’ ಕೂಡ ಕಾರ್ಪೊರೇಟ್ ವಿಮಾ ಸಂಸ್ಥೆಗಳಿಗೆ ಸಾವಿರಾರು ಕೋಟಿ ಲಾಭ ತಂದುಕೊಡುವ ಹಗಲು ದರೋಡೆಯಾಗಿ ಮಾರ್ಪಟ್ಟಿದೆ.

• ನ್ಯಾಯಾಂಗವೂ ಸೇರಿದಂತೆ, ಸಕ್ರಿಯ ಜನತಂತ್ರದ ಜೀವಾಳವಾದ ಎಲ್ಲ ಸಂಸ್ಥೆಗಳನ್ನು ನುಂಗಿ ನೀರು ಕುಡಿಯಲಾಗುತ್ತಿದೆ. ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳೇ ಹಿಂದೆಂದೂ ಇಲ್ಲದಂತೆ ಪತ್ರಿಕೆಗಳ ಮುಂದೆ ಬಂದು ನ್ಯಾಯಾಂಗದ ಹಾಗೂ ಶ್ರೇಷ್ಠ ನ್ಯಾಯಾಧೀಶರ ಕಾರ್ಯವೈಖರಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾಯಿತು. ಗುಜರಾತ್ ನರಮೇಧದ ಪಾತಕಿಗಳು ಒಬ್ಬೊಬ್ಬರಾಗಿ ಜೈಲಿನಿಂದ ಹೊರಬಂದು ಆರಾಮಾಗಿ ಓಡಾಡುವಂತಾಯಿತು, ಇಲ್ಲವೇ ಮೊಕದ್ದಮೆಗಳಲ್ಲಿ ಕ್ಲೀನ್ ಚಿಟ್ ಪಡೆದಿದ್ದಾಯಿತು. ಇನ್ನು ಅಮಿತ್ ಶಾ ಆರೋಪಿಯಾಗಿ ಗುಜರಾತಿನಿಂದಲೇ ಗಡೀಪಾರಾಗಿದ್ದ ನಕಲಿ ಎನ್‍ಕೌಂಟರ್ ಪ್ರಕರಣಗಳಲ್ಲಿ, ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದರೂ, ಸುಪ್ರೀಂ ಕೋರ್ಟ್ ಮಧ್ಯೆ ತಲೆ ಹಾಕಲು ನಿರಾಕರಿಸಿತು! ಇಷ್ಟರ ಮೇಲೆ ದೇಶದ ಎಲ್ಲ ಮುಖ್ಯ ಸಂಸ್ಥೆಗಳೂ ಎಗ್ಗಿಲ್ಲದೆ ಕೇಸರೀಕರಣಗೊಳ್ಳುತ್ತಿವೆ.

• ಇವೆಲ್ಲಕ್ಕೂ ಕಲಶಪ್ರಾಯವಾದದ್ದು ರಫೇಲ್ ಯುದ್ಧವಿಮಾನಗಳ ಖರೀದಿ ಹಗರಣ. ತಲಾ 526 ಕೋಟಿ ರೂಪಾಯಿಗಳಿಗೆ ಸಿಗಬೇಕಿದ್ದ ಯುದ್ಧವಿಮಾನಗಳಿಗೆ, ತಜ್ಞ ಸಮಿತಿಯನ್ನೂ ಬದಿಗೊತ್ತಿ ಖುದ್ದು ಮೋದೀಜಿ, ತಾವೇ ನೇರವಾಗಿ ಚೌಕಾಶಿ ಮಾಡಿ ತಲಾ 1600 ಕೋಟಿ ರೂಪಾಯಿ ನಿಗದಿಪಡಿಸಿದರು! ಮಾತ್ರವಲ್ಲ, ಫ್ರಾನ್ಸ್ ಕಂಪನಿಯ ನಿರ್ಮಾಣ ಪಾಲುದಾರನಾಗಬೇಕಿದ್ದ ಸರ್ಕಾರಿ ಸ್ವಾಮ್ಯದ ಎಚ್‍ಎಎಲ್ ಸಂಸ್ಥೆಯನ್ನು ಕಿತ್ತು ಹಾಕಿ ಆ ಜಾಗದಲ್ಲಿ, ಈವರೆಗೆ ಆಟದ ವಿಮಾನವನ್ನೂ ತಯಾರಿಸಿ ತಿಳಿಯದ, ಈಗಾಗಲೇ ದಿವಾಳಿ ಅಂಚಿಗೆ ಬಂದು ನಿಂತಿರುವ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ಪಾಲುದಾರಿಕೆ ಕೊಡಿಸಿದರು. ಇಷ್ಟು ಮಾಡಿ ತನ್ನನ್ನು ತಾನು ದೇಶದ ಚೌಕೀದಾರ್ ಎಂದು ಕರೆದುಕೊಂಡರು!

ವಿಫಲ ಸರ್ಕಾರವನ್ನು ದೇಶದ ಮೇಲೆ ಹೇರಿದವರಲ್ಲಿ ಮೋದಿ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಯಾಕೆಂದರೆ ಇಂಥ ಭ್ರಷ್ಟಾಚಾರ, ವೈಫಲ್ಯ, ಜನವಿರೋಧಿ ನೀತಿ ಧೋರಣೆಗಳನ್ನು ಹೆಚ್ಚೂಕಮ್ಮಿ ಎಲ್ಲರೂ ಪ್ರದರ್ಶಿಸಿದ್ದಾರೆ. ಇನ್ನು ಮೋದಿ ಪಕ್ಕಾ ಸರ್ವಾಧಿಕಾರಿಯೇ ಆದರೂ, ಆ ವಿಷಯದಲ್ಲೂ ಅವರು ಮೊದಲಿಗರಲ್ಲ. ಎಮರ್ಜೆನ್ಸಿಯಂಥ ಕರಾಳ ಅಧ್ಯಾಯವನ್ನು ಭಾರತೀಯ ಜನತಂತ್ರದ ಇತಿಹಾಸಕ್ಕೆ ಪೋಣಿಸಿದ್ದು ಕಾಂಗ್ರೆಸ್ಸು.

• ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್, ಎಚ್‍ಎಎಲ್‍ನಂಥ ಸಂಸ್ಥೆಗಳು ಮೊಟ್ಟಮೊದಲ ಬಾರಿ ನೌಕರರಿಗೆ ಸಂಬಳ ಕೊಡಲೂ ಆಗದ ದುಸ್ಥಿತಿ ತಲುಪಿರುವುದು, ಇಡೀ ಸರ್ಕಾರವೇ ಕಾರ್ಪೊರೇಟ್ ಉದ್ಯಮಿಗಳ ಕೈವಶವಾಗಿದ್ದರಿಂದಾಗಿ. ಸರ್ಕಾರಿ ಸಂಸ್ಥೆಗಳನ್ನು ನಿಧಾನವಾಗಿ ಕತ್ತು ಹಿಸುಕಿ ಸಾಯಿಸಿ ಅಂಬಾನಿ ಅದಾನಿಯಂಥ ಉದ್ಯಮಿಗಳಿಗೆ ಲಾಭ ಮಾಡಿಕೊಡುವುದೇ ‘ಚೌಕೀದಾರರ’ ಉದ್ದೇಶ. ಜಿಯೋ ಫೋನ್ 4ಜಿ ಮಟ್ಟಕ್ಕೆ ಬೆಳೆದಿದ್ದರೆ, ಸರ್ಕಾರದ ಬಿಎಸ್‍ಎನ್‍ಎಲ್ ಇನ್ನೂ 3ಜಿ ಹಂತದಲ್ಲೇ ತೆವಳುತ್ತಿದೆ. ಇನ್ನು ಬೃಹತ್ ಉದ್ದಿಮೆಗಳ ದಾಸನಾದ ಈ ಸರ್ಕಾರದ ಯೋಜನೆಗಳಲ್ಲಿ ಬಡವರಿಗೆ ಬಾಯುಪಚಾರದ ಹೊರತು ಬೇರೆ ಲಾಭವಿಲ್ಲ. ಜಿಯೋ ಫೋನನ್ನು ಮಾರುಕಟ್ಟೆಗೆ ಬಿಡುವಾಗ ಎಲ್ಲ ಪತ್ರಿಕೆಗಳ ಮುಖಪುಟ ಜಾಹೀರಾತುಗಳಲ್ಲಿ ಅಂಬಾನಿಯವರ ‘ಜಿಯೋ’ದ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದು ಯಾರು? ಇದೇ ಚೌಕೀದಾರ ಮೋದಿ!

• ನರೇಂದ್ರ ಮೋದಿ ಈವರೆಗೆ ನೂರಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ‘ಆದ್ದರಿಂದಲೇ ಜಗತ್ತಿನಲ್ಲಿ ಭಾರತದ ಪ್ರತಿಷ್ಠೆ ಹೆಚ್ಚಿದೆ; ಭಾರತ ವಿಶ್ವಗುರು ಪಟ್ಟಕ್ಕೇರುತ್ತಿದೆ’ ಎಂದು ಅವರ ಅನುಯಾಯಿಗಳು ಗಂಟಲು ಹರಿದುಕೊಳ್ಳುತ್ತಲೇ ಇದ್ದಾರೆ. ಆದರೆ ಪ್ರತಿಯೊಂದು ಪ್ರವಾಸವೂ, ಅಂಬಾನಿ ಅದಾನಿಗಳಿಗೆ ನೂರಾರು- ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ತಂದುಕೊಡುವ ‘ಬಿಸಿನೆಸ್ ಟ್ರಿಪ್’ಗಳು! ಮೋದಿ ಪ್ರವಾಸ ಕೈಗೊಂಡಿದ್ದು ಪ್ರಧಾನಿಯಾಗಿ ಅಲ್ಲ, ಆ ಕಾರ್ಪೊರೇಟ್ ದೈತ್ಯರ ಬಿಸಿನೆಸ್ ಮ್ಯಾನೇಜರ್ ಆಗಿ! ಯಾವ್ಯಾವ ದೇಶದಲ್ಲಿ ಎಂಥೆಂಥ ‘ಬಿಸಿನೆಸ್ ಡೀಲ್’ ಕುದುರಿಸಲಾಯಿತೆಂಬ ಎಲ್ಲ ವಿವರಗಳೂ ಸಾರ್ವಜನಿಕವಾಗಿ ಲಭ್ಯವಿವೆ. ಆಸಕ್ತರು ಗಮನಿಸಬಹುದು.

ಇಂಥ ಸಾಕ್ಷಿಗಳನ್ನು ಎಷ್ಟು ಬೇಕಾದರೂ ಕೊಟ್ಟು, ಒಂದು ಸರ್ಕಾರವಾಗಿ ಮೋದಿ ಆಡಳಿತ ಹೇಗೆ ಸಂಪೂರ್ಣವಾಗಿ ಸೋತಿದೆ ಎಂದು ನಿರೂಪಿಸುವುದು ದೊಡ್ಡ ಮಾತಲ್ಲ. ಹಾಗೆ ನೋಡಿದರೆ ವಿಫಲ ಸರ್ಕಾರವನ್ನು ದೇಶದ ಮೇಲೆ ಹೇರಿದವರಲ್ಲಿ ಮೋದಿ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಯಾಕೆಂದರೆ ಇಂಥ ಭ್ರಷ್ಟಾಚಾರ, ವೈಫಲ್ಯ, ಜನವಿರೋಧಿ ನೀತಿ ಧೋರಣೆಗಳನ್ನು ಹೆಚ್ಚೂಕಮ್ಮಿ ಎಲ್ಲರೂ ಪ್ರದರ್ಶಿಸಿದ್ದಾರೆ. ಇನ್ನು ಮೋದಿ ಪಕ್ಕಾ ಸರ್ವಾಧಿಕಾರಿಯೇ ಆದರೂ, ಆ ವಿಷಯದಲ್ಲೂ ಅವರು ಮೊದಲಿಗರಲ್ಲ. ಎಮರ್ಜೆನ್ಸಿಯಂಥ ಕರಾಳ ಅಧ್ಯಾಯವನ್ನು ಭಾರತೀಯ ಜನತಂತ್ರದ ಇತಿಹಾಸಕ್ಕೆ ಪೋಣಿಸಿದ ಕಾಂಗ್ರೆಸ್ಸು, ದೇಶಕ್ಕೆ ಸರ್ವಾಧಿಕಾರದ ರುಚಿಯನ್ನು ಮೊದಲು ತೋರಿಸಿದ ಪಕ್ಷ. ಇದೆಲ್ಲ ಸರಿಯೇ.

ಇಡೀ ಜಗತ್ತು ಗಮನಿಸಿರುವ ಹಾಗೆ, ಇನ್ನೆಲ್ಲ ಸೋಲುಗಳನ್ನೂ ಮೀರಿ, ಮೋದಿ ಪರಿವಾರ ಸೃಷ್ಟಿಸಿದ ಬ್ರಹ್ಮಾಂಡ ಅನಾಹುತವೆಂದರೆ- ಸರ್ವತ್ರ ಅಸಹನೆ. ಅಸಹನೆ ಎಂಬುದು ಕಾನೂನಿನ ಭಯವನ್ನೂ ಲೆಕ್ಕಿಸದೆ, ರಾಷ್ಟ್ರೀಯ ವ್ಯಾಧಿಯಾಗಿ ಹಬ್ಬಿದ್ದು- ನೇರವಾಗಿ ಇವರ ಕೊಡುಗೆ.

ಆದರೆ ಈಗ ಎದ್ದು ಕಾಣುವ ಒಂದು ವ್ಯತ್ಯಾಸವೆಂದರೆ, ಮುಂಚೆ ಒಂದು ತಪ್ಪನ್ನು ಇಡೀ ದೇಶ ತಪ್ಪು ಎಂದು ಖಂಡಿಸುತ್ತಿತ್ತು. ಆದರೀಗ ತಪ್ಪು ಸರಿಗಳ ಲೆಕ್ಕಾಚಾರವೇ ಅಯೋಮಯವಾಗಿದೆ. ದೇಶದ ಆತ್ಮಸಾಕ್ಷಿಗೆ ಹೂಳು ತುಂಬಿಕೊಂಡಿದೆ. ಬಹುದೊಡ್ಡ ಜನಸ್ತೋಮ, ಕೈಯಾರೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಗಾಂಧಾರಿ ವ್ರತ ಹಿಡಿದು, ಸತ್ಯಕ್ಕೆ ಕುರುಡಾಗಲು ನಿಶ್ಚಯಿಸಿ ಕೂತಿದೆ!

ಹಾಗಾಗಿ ಕೊಲೆಗಡುಕರಿಗೆ ‘ದೇಶಭಕ್ತ’ರೆಂಬ ಹೊಸ ಬಿರುದು ಪ್ರಾಪ್ತವಾಗಿದೆ!
*

ಆರಂಭದಲ್ಲಿ ಮೋದಿಯವರು ಉದ್ದೀಪಿಸಿದ ಆರಾಧನಾ ಭಾವವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಲ್ಲ. ಆದರೆ ಕಾಲ ಉರುಳಿದಂತೆ ಅವರ ನಿಸ್ಸೀಮ ಸುಳ್ಳುಬುರುಕತನ, ವಚನಭ್ರಷ್ಟತೆ, ಹೋಲ್‍ಸೇಲ್ ವೈಫಲ್ಯ, ತಮ್ಮ ಸ್ಥಾನಕ್ಕೆ ತಕ್ಕುದಲ್ಲದ- ಸಭ್ಯತೆಯ ಗಡಿ ದಾಟಿದ ಕೀಳು ನುಡಿಗಟ್ಟು- ಇವೆಲ್ಲ ಕಂಡು ಜನಕ್ಕೆ ಭ್ರಮನಿರಸನವಾಗಿರಬೇಕಿತ್ತಲ್ಲವೇ? ಇಲ್ಲ, ಹಾಗಾಗಲೇ ಇಲ್ಲ! ಪವಾಡವೆಂಬಂತೆ, ಅವರ ಸಮರ್ಥಕರು ಮತ್ತಷ್ಟು ಜಿದ್ದಿನಿಂದ ಮೋದೀಜಿ ಪರ ಪ್ರಶ್ನೆ, ವಿಮರ್ಶೆಗಳಿಗೆ ಅತೀತವಾದ ಕೋಟೆಯನ್ನೇ ಕಟ್ಟಿಬಿಟ್ಟರು. ಭಾರತೀಯರು ಬುದ್ಧಿವಂತರು. ಆದರೆ ಇಷ್ಟೊಂದು ಮಂದಿ ಬುದ್ಧಿವಂತರ ಬುದ್ಧಿಗೆ, ಇದ್ದಕ್ಕಿದ್ದಂತೆ ಅಂಥ ಮಂಕು ಕವಿದಿದ್ದೇಕೆ? ಈ ‘ಗಾಂಧಾರಿ ವ್ರತ’ದ ಮೂಲವೇನು?

ಇದೊಂದು ಕೌತುಕಮಯ ಒಗಟು.

ಇಡೀ ಜಗತ್ತು ಗಮನಿಸಿರುವ ಹಾಗೆ, ಇನ್ನೆಲ್ಲ ಸೋಲುಗಳನ್ನೂ ಮೀರಿ, ಮೋದಿ ಪರಿವಾರ ಸೃಷ್ಟಿಸಿದ ಬ್ರಹ್ಮಾಂಡ ಅನಾಹುತವೆಂದರೆ- ಸರ್ವತ್ರ ಅಸಹನೆ. ಅಸಹನೆ ಎಂಬುದು ಕಾನೂನಿನ ಭಯವನ್ನೂ ಲೆಕ್ಕಿಸದೆ, ರಾಷ್ಟ್ರೀಯ ವ್ಯಾಧಿಯಾಗಿ ಹಬ್ಬಿದ್ದು- ನೇರವಾಗಿ ಇವರ ಕೊಡುಗೆ. ಒಟ್ಟು ಈ ಅಸಹನೆ- ಮುಸ್ಲಿಮರು, ಕ್ರೈಸ್ತರೆಂಬ ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ಗೋರಕ್ಷಣೆ ಎಂಬ ಭಯೋತ್ಪಾದನೆಯಾಗಿ ಅವತರಿಸಿತು. ದಾದ್ರಿಯಲ್ಲಿ ಮಹಮದ್ ಅಖ್ಲಾಕ್ ಎಂಬ ಹಿರಿಯನ ಮನೆಯಲ್ಲಿ ‘ಗೋಮಾಂಸವಿದೆ’ ಎಂಬ ಗಾಳಿಸುದ್ದಿ ಹಿಡಿದು ದಾಳಿ ಮಾಡಿ ಕೊಲ್ಲುವ ಮೂಲಕ ರಾಷ್ಟ್ರಮಟ್ಟದಲ್ಲಿ ಈ ದ್ವೇಷ ಪರ್ವದ ಉದ್ಘಾಟನೆಯಾಯಿತು. ಈ ದೇಶದಲ್ಲಿ ಮನುಷ್ಯ ಜೀವಕ್ಕಿಂತಲೂ ಒಂದು ತುಂಡು ಮಾಂಸದ ಬೆಲೆಯೇ ಹೆಚ್ಚು ಎಂದಾಯಿತು.

ಕುದಿಯುವ ಪೀಳಿಗೆಗೆ, ಅಸಹನೆಯ ಹೊಸ ನುಡಿಗಟ್ಟು ಕೊಟ್ಟ ಮೋದಿ ಆದರ್ಶ ನಾಯಕನಾಗಿ ಕಂಡರು. ಈ ತಲೆಮಾರಿನ ಆಕ್ರಮಣಶೀಲ ನಿರೀಕ್ಷೆ, ಮೋದಿಯವರಲ್ಲಿ ಸಾಕಾರವಾಯಿತು. ಮುಖ್ಯವಾಗಿ ‘ಸಾಬರನ್ನು ಎಲ್ಲಿಡಬೇಕೋ ಅಲ್ಲಿಟ್ಟ’ ಮೋದಿ ಇವರ ಆರಾಧ್ಯದೈವವಾದರು. ಅದಕ್ಕೇ ಮೋದಿ ಲಕ್ಷ ಪ್ರಮಾದಗಳನ್ನು ಮಾಡಿದರೂ, ಅವರೇ ಬೇಕು ಎಂದು ಈ ಸಮೂಹ ಒಕ್ಕೊರಲ ಕೂಗು ಹಾಕುತ್ತದೆ.

ಮುಂದಕ್ಕಿದು ದನದ ಚರ್ಮ ಸುಲಿಯುತ್ತಿದ್ದರೆಂಬ ಆರೋಪ ಹೊರೆಸಿ ಗುಜರಾತಿನ ಊನಾದಲ್ಲಿ ದಲಿತರನ್ನು ಕಾರಿಗೆ ಕಟ್ಟಿ ಹಾಕಿ ಕಬ್ಬಿಣದ ಸರಳುಗಳಿಂದ ಥಳಿಸುವವರೆಗೆ ಹೋಯಿತು. ಕಡೆಗೆ ವಾತಾವರಣ ಎಷ್ಟು ವಿಷಮಯವಾಯಿತೆಂದರೆ, ಇಂದು ಒಬ್ಬ ಜೀವ ಕಳೆದುಕೊಳ್ಳಲು ಆತ ಮುಸ್ಲಿಂ ಎಂಬ ಒಂದೇ ಕಾರಣ ಸಾಕು. ರಾಜಾಸ್ತಾನದ ಶಂಭುಲಾಲ್ ರೇಗಾರ್, ಅಪರಿಚಿತ ಮುಸ್ಲಿಮನನ್ನು ಹೊಡೆದು ಸಾಯಿಸಿ ಬೆಂಕಿ ಹಚ್ಚಿ ವಿಡಿಯೋ ಮಾಡಿದ್ದನ್ನು ನೆನೆಸಿಕೊಳ್ಳಿ. ಹಾಗೇ ದೆಹಲಿ ರೈಲಿನಲ್ಲಿ ಬಲಿಯಾದ ಜುನೈದ್ ಎಂಬ 15 ವರ್ಷದ ಅಮಾಯಕ ಹುಡುಗ. ಇಂಥ ಪ್ರಕರಣಗಳೆಷ್ಟೋ…

ಈ ಅಸಹನೆ ಅತ್ಯಂತ ಭಯಾನಕ ಎಂಬುದು ನಿಜ. ಆದರೆ ಈ ಕೊಲೆಪಾತಕ ಅಸಹನೆಗೆ ದೇಶಪ್ರೇಮವೆಂಬ ಹೆಸರು ಕೊಡಲು ಬುದ್ಧಿವಂತರ ಸೈನ್ಯವೇ ಸಜ್ಜಾಗಿ ನಿಂತಿರುವುದು ಇನ್ನೂ ಕಳವಳದ ಸಂಗತಿ. ಮತ್ತು ಈ ಬೆಳವಣಿಗೆಯ ಅಧಿಪತಿ ಖುದ್ದು ನರೇಂದ್ರ ಮೋದಿ.

ಅವರು ತಮ್ಮ ಈ ಹೊಸ ರಾಜಕೀಯಕ್ಕೆ ನಾಂದಿ ಹಾಡಿದ್ದು ಗುಜರಾತ್ ನರಮೇಧದ ಮೂಲಕ. ಗೋಧ್ರಾದಲ್ಲಿ ರೈಲು ಬೋಗಿಗೆ ಬೆಂಕಿ ಹಚ್ಚಿ 58 ಮಂದಿ ಕರಸೇವಕರನ್ನು ಕೊಂದ ದಾರುಣ ಘಟನೆಗೆ ಉತ್ತರವಾಗಿ, ಮುಸ್ಲಿಮರ ನರಮೇಧವನ್ನು ಸರ್ಕಾರಿ ಕಾರ್ಯಕ್ರಮವಾಗಿ ಹಮ್ಮಿಕೊಂಡು ಎರಡು ಸಾವಿರ ಸಾವುಗಳಿಗೆ ಕಾರಣರಾದವರು ಮೋದಿ. ಆ ಮಾರಣಹೋಮವೇ ಮೋದಿಯವರನ್ನು ಪ್ರಧಾನಿ ಪಟ್ಟಕ್ಕೆ ತಂದು ನಿಲ್ಲಿಸಿತು!

ಜಾಗತೀಕರಣದ ಈ ಯುಗದಲ್ಲಿ ಯಾವುದನ್ನೂ ಹಂಚಿ ತಿನ್ನಲು ತಯಾರಿರದ ಹೊಸ ಪೀಳಿಗೆಯೊಂದು ದಿಕ್ಕು ತಿಳಿಯದೆ ಕುದಿಯುತ್ತಿದೆ. ಜನತಂತ್ರದ ಮೌಲ್ಯಗಳು ಅಷ್ಟೇನೂ ಮುಖ್ಯವಲ್ಲ ಎಂದು ಬಗೆದ ಸಮೂಹವಿದು. ಇವರ ಪಾಲಿಗೆ ಸಾಮಾಜಿಕ ನ್ಯಾಯ, ಮೀಸಲಾತಿಗಳೆಲ್ಲ ಈ ಕಾಲಕ್ಕೆ ಸಲ್ಲದ ಅಡಗೂಲಜ್ಜಿ ಕಥೆಗಳು. ಈ ಕುದಿಯುವ ಪೀಳಿಗೆಗೆ, ಅಸಹನೆಯ ಹೊಸ ನುಡಿಗಟ್ಟು ಕೊಟ್ಟ ಮೋದಿ ಆದರ್ಶ ನಾಯಕನಾಗಿ ಕಂಡರು. ಈ ತಲೆಮಾರಿನ ಆಕ್ರಮಣಶೀಲ ನಿರೀಕ್ಷೆ, ಮೋದಿಯವರಲ್ಲಿ ಸಾಕಾರವಾಯಿತು. ಮುಖ್ಯವಾಗಿ ‘ಸಾಬರನ್ನು ಎಲ್ಲಿಡಬೇಕೋ ಅಲ್ಲಿಟ್ಟ’ ಮೋದಿ ಇವರ ಆರಾಧ್ಯದೈವವಾದರು. ಅದಕ್ಕೇ ಮೋದಿ ಲಕ್ಷ ಪ್ರಮಾದಗಳನ್ನು ಮಾಡಿದರೂ, ಅವರೇ ಬೇಕು ಎಂದು ಈ ಸಮೂಹ ಒಕ್ಕೊರಲ ಕೂಗು ಹಾಕುತ್ತದೆ.

*
“ಅದಕ್ಕೆ ಸಾರ್, ನೆಕ್ಸ್ಟ್ ನಾನು ಮೋದಿಗೇ ವೋಟ್ ಮಾಡೋದು” ಅಂದ ಆತ.

ಅತ ಒಬ್ಬ ಕ್ಯಾಬ್ ಚಾಲಕ. ತನ್ನದೇ ಲಕ್ಷುರಿ ಕಾರ್ ಇಟ್ಟುಕೊಂಡು ಉಬರ್ ಮತ್ತು ಓಲಾ ಜಾಲಗಳಿಗೆ ಸೇರಿಕೊಂಡಿದ್ದಾನೆ, ಜೊತೆಗೆ ಊರಿಂದೂರಿನ ಪ್ರವಾಸಗಳಿಗೂ ಹೋಗುತ್ತಾನೆ. ಹೀಗೊಮ್ಮೆ ಪ್ರವಾಸದಲ್ಲಿ ಅವನು ಒಂದು ಘಟನೆ ವಿವರಿಸುತ್ತಿದ್ದ.

ಇವನು ಬೆಂಗಳೂರಿನಲ್ಲೇ ಒಂದು ಕಡೆ ಗಾಡಿ ನಿಲ್ಲಿಸಿಕೊಂಡಿದ್ದಾಗ ಆಟೋ ಚಾಲಕನೊಬ್ಬ ಬಂದು ಇವನಿಗೆ ಗುದ್ದಿದ. ಆ ಆಟೋ ಚಾಲಕ ಮುಸ್ಲಿಂ. ‘ಯಾಕಪ್ಪ?’ ಎಂದು ಇವನು ಕೇಳಿದರೆ ಆತ ಮೈಮೇಲೇ ಏರಿ ಬಂದನಂತೆ. ಇವನ ಕಾರಿಗೆ ಸ್ವಲ್ಪ ಜಖಂ ಆಗಿತ್ತು. ಅದಕ್ಕೆ ರಿಪೇರಿ ಖರ್ಚು ಕೇಳಿದರೆ ಅವನು ಜಗಳಕ್ಕೇ ನಿಂತುಕೊಂಡನಂತೆ. ಅಷ್ಟೇ ಅಲ್ಲ, ಸುತ್ತ ಮುತ್ತ ಇದ್ದ ಮುಸ್ಲಿಂ ಆಟೋ ಚಾಲಕರೆಲ್ಲ ಒಂದಾಗಿ ಅವನ ಪರ ಬಂದರಂತೆ.

‘ಅಲ್ಲರೀ, ನೋಟು ರದ್ದು, ಜಿಎಸ್‍ಟಿಗಳಿಂದ ಇಡೀ ಅರ್ಥ ವ್ಯವಸ್ಥೆಯೇ ಹಳಿ ತಪ್ಪಲಿಲ್ಲವೇ?’ ಎಂದರೆ, ‘ಮೋದಿಯವರಿಗೆ ಇನ್ನಷ್ಟು ಸಮಯ ಕೊಡಲೇಬೇಕು, ಸರಿ ಮಾಡ್ತಾರೆ’ ಎಂಬ ಮೊಂಡು ಉತ್ತರ! ಬುದ್ಧಿ, ಹೃದಯ ಎರಡೂ ಸವೆದುಹೋದರೆ ಇನ್ನೆಂಥ ಉತ್ತರ ಬಂದೀತು?!

‘ಅಷ್ಟು ಜನ, ನಾನು ಒಬ್ಬ. ಏನು ಮಾಡಲಿ ಸಾರ್? ಸುಮ್ಮನೆ ಅಲ್ಲಿಂದ ಬಂದೆ…’
ಸರಿ. ಅದಕ್ಕೆ?
‘ಅದಕ್ಕೆ ಸಾರ್ ನೆಕ್ಸ್ಟ್ ನಾನು ಮೋದಿಗೇ ವೋಟ್ ಮಾಡೋದು…!’

ಸರಿಯಪ್ಪ, ಹಿಂದೂ ಚಾಲಕರು ಜಗಳನೇ ಆಡಲ್ವೇನಪ್ಪ? ‘ಆಡ್ತಾರೆ ಸಾರ್, ಆದರೆ ನ್ಯಾಯ ನೀತಿ ನೋಡದೆ ಗುಂಪು ಕಟ್ಟಿಕೊಂಡು ಬಂದುಬಿಡಲ್ಲ…!’ ಇದಕ್ಕೆ ಪ್ರತ್ಯುತ್ತರ ಕೊಡುವ ಸಾಮಥ್ರ್ಯ ನನಗಿರಲಿಲ್ಲ.

ಅದು ಹೋಗಲಿ. ಕೊನೆಗೆ ಈ ಕ್ಷುಲ್ಲಕ ಘಟನೆ ಹೋಗಿ ಮುಟ್ಟಿದ್ದೆಲ್ಲಿಗೆ?

‘ಅದಕ್ಕೆ ಸಾರ್, ನೆಕ್ಸ್ಟ್ ನಾನು ಮೋದಿಗೇ ವೋಟ್ ಮಾಡೋದು…’

ನಮ್ಮ ಕಾಲದ ದೊಡ್ಡ ಒಗಟಿಗೆ ಇದೇ ಉತ್ತರವಾಗಿ ಕಾಣುತ್ತದೆ! ಏಕೆಂದರೆ ಈತ ಈ ಕುದಿಯುವ ಸಮೂಹದ ಪ್ರತಿನಿಧಿ.

*
ಹೀಗೇ ವಾದ ಮಾಡುತ್ತ ‘ಮೋದಿ ಸರ್ವಾಧಿಕಾರಿಯಲ್ಲವೇ?’ ಎಂದು ಕೇಳಿದೆ. ಅದಕ್ಕೆ ಆ ಸ್ವತಂತ್ರ ಉದ್ಯಮಿ ‘ಡಿಸಿಷನ್ ತಗೊಳ್ಳೋರು ಒಬ್ಬರು ಬೇಕಲ್ಲ?’ ಎಂದರು. ಅವರ ಕಣ್ಣೋಟದಲ್ಲಿ ಸರ್ವಾಧಿಕಾರವೂ ಒಂದೇ, ನಿರ್ಧಾರ ಸಾಮಥ್ರ್ಯವೂ ಒಂದೇ. ಇನ್ನು ನನ್ನ ಆತ್ಮೀಯರೊಬ್ಬರು ‘ಮೋದಿಯಂಥ ಒಬ್ಬ ಗಂಡಸು ಬೇಕು ಈವಾಗ’ ಎಂದು ದೃಢವಾಗಿ ಘೋಷಿಸಿದರು. ‘ಯಾವುದಕ್ಕೆ?’ ಎಂದು ಕೇಳಿದರೆ- ‘ಅರ್ಥವ್ಯವಸ್ಥೆಯನ್ನು ಸರಿಯಾದ ದಾರಿಗೆ ತರುವುದಕ್ಕೆ’ ಎಂಬ ಉತ್ತರ ಬಂತು! ‘ಅಲ್ಲರೀ, ನೋಟು ರದ್ದು, ಜಿಎಸ್‍ಟಿಗಳಿಂದ ಇಡೀ ಅರ್ಥವ್ಯವಸ್ಥೆಯೇ ಹಳಿ ತಪ್ಪಲಿಲ್ಲವೇ?’ ಎಂದರೆ, ‘ಮೋದಿಯವರಿಗೆ ಇನ್ನಷ್ಟು ಸಮಯ ಕೊಡಲೇಬೇಕು, ಸರಿ ಮಾಡ್ತಾರೆ’ ಎಂಬ ಮೊಂಡು ಉತ್ತರ! ಬುದ್ಧಿ, ಹೃದಯ ಎರಡೂ ಸವೆದುಹೋದರೆ ಇನ್ನೆಂಥ ಉತ್ತರ ಬಂದೀತು?!
*

ಚಿಕ್ಕಂದಿನಲ್ಲಿ ‘ಇದು ಬಾಪೂಜಿ ಬೆಳಗಿದ ಭಾರತ’ ಎಂಬ ಹಾಡು ಹೇಳಿಕೊಡುತ್ತಿದ್ದರು. ಆದರೀಗ ಹೊಸ ಪೀಳಿಗೆಗೆ ಬೇಕಿರುವ ಭಾರತ ಅದಲ್ಲ.

ಮೂರು ವರ್ಷಗಳ ಹಿಂದೆ 2016ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭೆ ಎಂಬ ಸಂಘಟನೆ, ಉತ್ತರಪ್ರದೇಶದ ಸೀತಾಪುರದಲ್ಲಿ ಗಾಂಧಿ ಹಂತಕ ನಾಥೂರಾಂ ಗೋಡ್ಸೆಗೆ ದೇವಸ್ಥಾನ ಕಟ್ಟಲು ಮುಂದಾಗಿತ್ತು. ಇನ್ನೂ ಹದಿಮೂರು ಕಡೆ ಗೋಡ್ಸೆ ಪ್ರತಿಮೆ ಸ್ಥಾಪಿಸಲೂ ಹೊರಟಿತ್ತು. ಗಾಂಧಿ ಹತ್ಯೆಗೊಳಗಾದ ಜನವರಿ 30ರಂದು ದೇಶವೆಲ್ಲ ‘ಹುತಾತ್ಮ ದಿನ’ ಆಚರಿಸಿದರೆ, ಆ ಸಂಘಟನೆ, ಗೋಡ್ಸೆ ಗಲ್ಲಿಗೇರಿದ ನವೆಂಬರ್ 15ರಂದು ಹುತಾತ್ಮ ದಿನ ಆಚರಿಸಲು ಸಜ್ಜಾಗಿತ್ತು. ಈ ಹಿನ್ನೆಲೆಯಲ್ಲಿ ‘ಸುದ್ದಿ ಟಿವಿ’ಗಾಗಿ ಬೆಂಗಳೂರಿನ ಸ್ಥಳೀಯ ಹಿಂದೂ ಮಹಾಸಭಾದ ಮುಖಂಡರನ್ನು ಮಾತಾಡಿಸಿದರೆ-

‘ಗಾಂಧಿ ಒಬ್ಬ ದೇಶದ್ರೋಹಿ. ಗೋಡ್ಸೆ ಮಾಡಿದ್ದು ದುಷ್ಟ ಸಂಹಾರ’ ಎಂಬ ವಾದದ ಜೊತೆಗೆ ‘ಗಾಂಧಿಗೆ ಮರಣೋತ್ತರವಾಗಿ ಮರಣದಂಡನೆ ವಿಧಿಸಬೇಕು ಎಂಬುದು ಹಿಂದೂ ಮಹಾಸಭಾದ ಆಗ್ರಹ’ ಎಂಬ ಅಭೂತಪೂರ್ವ ಒತ್ತಾಯ ಬಂತು!

ಪ್ರಸಕ್ತ ಚುನಾವಣೆ ‘ಮೋದಿ ಪ್ರಧಾನಿಯಾಗಬೇಕೋ ಬೇಡವೋ’ ಎಂಬ ಆಯ್ಕೆಯನ್ನು ದೇಶದ ಮುಂದೆ ಇಟ್ಟಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ ನಮ್ಮ ಮುಂದಿರುವ ಪ್ರಶ್ನೆ- ‘ನಮಗೆ ಗಾಂಧಿ ಭಾರತ ಬೇಕೋ, ಗೋಡ್ಸೆ ಭಾರತ ಬೇಕೋ?’ ಎಂಬುದು. ಮತ್ತು ಈ ಆಯ್ಕೆಯನ್ನು ನಮ್ಮ ಮುಂದಿಟ್ಟಿರುವುದು ಚೌಕೀದಾರ್ ನರೇಂದ್ರ ಮೋದಿ.

*ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ ಎನ್.ಎಸ್.ಶಂಕರ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ; ತಂದೆ ಎನ್.ಎಸ್.ಹಾಲಪ್ಪ, ತಾಯಿ ಗೌರಮ್ಮ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ಪಾಂಡವಪುರ, ಮೈಸೂರು, ಬೆಂಗಳೂರುಗಳಲ್ಲಿ ವ್ಯಾಸಂಗ. ಎಂಎಸ್ಸಿ ನಂತರ ಬೆಂಗಳೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ.