ಗಾಂಧಿ ಕರಾಪ್

–  ಬಸವಣ್ಣೆಪ್ಪಕಂಬಾರ

ಗಾಂಧಿಕರಾಪು ಸುತ್ತಲಿನ ಏಳೆಂಟು ಹಳ್ಳಿಗಳಿಗೆಲ್ಲ ಪ್ರಸಿದ್ಧಿ ಪಡೆದದ್ದು ಮುದುಕಪ್ಪಜ್ಜನ ಪೂರ್ವಜರಿಂದಲೇ.ಯಾಕೆಂದರೆಒಮ್ಮೆ ಬೆಳಗಾವಿಗೆ ಗಾಂಧೀಜಿ ಬರುತ್ತಿರುವ ಸುದ್ದಿ ಗೊತ್ತಾದಕೂಡಲೆ ನಮ್ಮೂರಿನ ಗಾಂಧೀವಾದಿಗಳು, ಸ್ವಾತಂತ್ರ್ಯ ಹೋರಾಟಗಾರರುಅವರನ್ನು ನೋಡಲೆಂದು ಬೆಳಗಾವಿಗೆ ಹೊರಟು ನಿಂತಾಗ ಮುದುಕಪ್ಪಜ್ಜನ ತಾತನೇ ಅಷ್ಟೂ ಜನರಿಗೆಗಾಂಧಿಕರಾಪು ಮಾಡಿತನ್ನದೇಶಸೇವೆ ಮೆರೆದಿದ್ದ.

ನಾವು ಸಣ್ಣವರಿದ್ದಾಗ ನಮ್ಮ ಶಾಲೆ ಸೂಟಿ ಬಿಟ್ಟಿತು ಅಂದರೆ, ಮನೆಯ ಹಿರಿಯರು ನಮ್ಮನ್ನ ಬೆಳ್ಳಂ ಬೆಳಿಗ್ಗೆ ಹಿಡಿದುಕೊಂಡು ಹೋಗೊದೇ ಕಟಿಂಗ್ ಶಾಪಿಗೆ. ನಮ್ಮ ತಂದೆಯ ವಾರಿಗೆಯವನು, ನಮ್ಮಪ್ಪನ ಜಿಗರಿ ದೋಸ್ತನು ಹಾಗೂ ಗಾಂಧೀ ಪ್ರೇಮಿಯು ಆಗಿದ್ದ ಮುದುಕಪ್ಪಜ್ಜನಿಗೆ ನಮ್ಮ ಕೇಶ ಕತ್ತರಿಸುವುದೆಂದರೆ ಎಲ್ಲಿಲ್ಲದ ಸಂತೋಷ. ಜೊತೆಗೆ ಗಾಂಧಿ ಕರಾಪ ಮಾಡೋದಂದ್ರೆ ಎಲ್ಲಿಲದ ಖುಷಿ ಅವನಿಗೆ. ಒಬ್ಬೊಬ್ಬರಾಗಿ ನಾವು ತಲೆ ಮೇಲೆ ನೀರು ಸುರಿದುಕೊಂಡು ಕೂದಲ ನೆನೆಸಿ ಪಾಳೆಯ ಪ್ರಕಾರ ಅವನ ಮುಂದೆ ತಲೆಬಾಗಿ ಕೂಡ್ರಲು ಕಾಯಬೇಕಿತ್ತು.

ನಾವೂ ರಾಜಕುಮಾರನಂತೆ ಉದ್ದ ಕೂದಲ ಬಿಟ್ಟು ಹಣೆಗೆ ವಸ್ತ್ರ ಕಟ್ಟಿ ಶೋಕಿ ಮಾಡಬೇಕು ಅಂತ ಲೆಕ್ಕ ಹಾಕುವ ಹೊತ್ತಿಗೆ ನಮ್ಮ ಶಿರದ ಮೇಲೆ ಬೆಳೆದು ನಿಂತಿರುವ ಪೊಗರಿನ ಕೇಶರಾಸಿಗೆ ಕತ್ತರಿ ಪ್ರಯೋಗ ನಡೆದೇ ಬಿಡುತ್ತಿತ್ತು. ಆಕಳ ಶೆಗಣಿಯಿಂದ ಸಾರಿಸಿದ ನೆಲದ ಮೇಲೆ ನಮಗೊಂದು ಅವನಿಗೊಂದು ಮಣೆ ಇರುತ್ತಿತ್ತು. ನಮ್ಮ ಕೂದಲು ಮಧ್ಯೆ ಬೆರಳಾಡಿಸುತ್ತ ನೆತ್ತಿ ಮತ್ತು ಕೂದಲು ನೆನೆದು ಒಂದು ಹಂತಕ್ಕೆ ಬಂದಿರುವುದನ್ನು ಖಾತರಿಪಡಿಸಿಕೊಳ್ಳುತ್ತಿದ್ದ. ಇಲ್ಲದೇ ಹೋದರೆ ಪ್ಲಾಸ್ಟಿಕ್ ಚೊಂಬಿನಿಂದ ತಲೆಮೇಲೆ ಹಿತವಾಗಿ (ಅವನಿಗೆ ಸಾಕೆನಿಸುವಷ್ಟು) ನೀರು ಸುರಿದು ತಪತಪಾ ಅಂತ ಹಣಿಯತೊಡಗಿದನೆಂದರೆ ತಲೆ ಕೆಳಗೆ ಮಾಡಿ ಕುಳಿತ ನಮಗೆ ಪಾತಾಳ ಲೋಕವೆಲ್ಲ ಪರಿಚಿತವಾಗಬೇಕು. ಅದನ್ನು ನೋಡಿ ಮುಸಿಮುಸಿ ನಕ್ಕರೆ ನಮ್ಮ ಕಡೆಗೆ ವಕ್ರ ದೃಷ್ಟಿಬೀರಿ, ‘ನಿಮಗ ಬ್ಯಾರೇ ಬಿಡಿಸಿ ಹೇಳಬೇಕೇನು..? ಕೂದ್ಲಾ ಕಮ್ಮಗ ನೆನಸ್ರಿ, ಇಲ್ಲದಿರ ಕತ್ತಿ ನೆತ್ತಿ ಕೊಯ್ಯತೈತಿ ನೋಡ್ರಿ, ಆಮ್ಯಾಲ ರಕ್ತ ಬಂತು ತಲಿ ನೂವಾತು ಅಂತ ಅಳಾಂಗಿಲ್ಲ..’ ಅಂತ ಹೆದರಿಸಿಬಿಡತಿದ್ದ.

ನಮ್ಮೂರಿನ ಪೇಟೆಯ ಮಧ್ಯ ಭಾಗದಲ್ಲಿ ಮುದುಕಪ್ಪಜ್ಜನ ಕಟಿಂಗ್ ಅಂಗಡಿ ಇದೆ. ಕರಿ ಹಂಚಿನ, ಹಾಳು ಮಣ್ಣಿನ ಗೊಡೆಯ ಹತ್ತು ಹದಿನೈದು ಅಂಕಣದ ಮನೆ. ಪೂರ್ವಕ್ಕೆ ಅಭಿಮುಖವಾಗಿ ದೊಡ್ಡ ಕನ್ನಡಿಯೊಂದನ್ನು ತೂಗು ಹಾಕಿ ಅದರ ಸುತ್ತಮುತ್ತ ಹಳೇ ಕನ್ನಡ ಚಿತ್ರಗಳ ಪೊಸ್ಟರಗಳನ್ನು ಅಂಟಿಸಲಾಗಿತ್ತು. ಕೆಲವು ಹಿಂದಿ ಚಿತ್ರಗಳ ಪೊಸ್ಟರಗಳು ಕೂಡಾ ಇದ್ದವು. ಒಳಗಡೆ ಒಂದು ಉದ್ದನೆಯ ಬೆಂಚು ಎರಡು ಕುರ್ಚಿಗಳು ಇದ್ದರೂ ಊರಿನ ಗಣ್ಯರು ಮಾತ್ರ ಕುರ್ಚಿಗಳ ಮೇಲೆ ಕುಳಿತು ಕಟಿಂಗ್ ಮಾಡಿಸಿಕೊಳ್ಳುತ್ತಿದ್ದರು. ಉಳಿದಂತೆ ನಾವೆಲ್ಲ ಗೋಣಿ ಚೀಲದ ಮೇಲೊ, ಇಲ್ಲ ಮರದ ಮಣೆಯ ಮೇಲೊ ಕುಳಿತು ಗಾಂಧಿ ಕರಾಪ ಮಾಡಿಸಿಕೊಳ್ಳುತ್ತಿದ್ದೆವು.

ಊರಿಗೆ ಇದೊಂದೇ ಅಂಗಡಿಯಾದ್ದರಿಂದ ಊರಿನ ಎಲ್ಲ ಜನ ಇಲ್ಲೇ ಕೇಶಮುಂಡನೆ ಮಾಡಿಕೊಳ್ಳಬೇಕಿತ್ತು. ನಮ್ಮ ತಂದೆ ಮುದುಕಪ್ಪಜ್ಜ ಚಡ್ಡಿ ದೋಸ್ತರು. ಇಬ್ಬರು ನಾಲ್ಕನೇ ಕ್ಲಾಸಿಗೆ ಶಾಲೆ ಬಿಟ್ಟು ಜೀವನದ ನೊಗ ಹೊರಬೇಕಾದುದು ಅನಿವಾರ್ಯವಾಯ್ತಂತೆ. ನಮ್ಮ ತಾತ ಪಾಂಡುರಂಗನ ಭಕ್ತನಾದುದರಿಂದ ಪ್ರತಿ ಹದಿನೈದು ದಿನಕ್ಕೊಮ್ಮಿ ಪಂಢರಪೂರಕ್ಕೆ ಹೊರಟುಬಿಡುತ್ತಿದ್ದ. ಆವಾಗೆಲ್ಲ ಮನೆಯ ಜವಾಬ್ದಾರಿ, ಕೊಟ್ಟುಕೊಡುವ ವ್ಯವಹಾರ ಅಪ್ಪನ ಹೆಗಲಿಗೆ; ಓದು ಮುಂದುವರಿಸಲು ಆಗಲೇ ಇಲ್ಲ. ಮುದುಕಪ್ಪಜ್ಜನ ಮನೇ ಪರಿಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಾಗಾಗಿ ಇಬ್ಬರು ಒಟ್ಟಿಗೆ ಶಾಲೆ ಬಿಟ್ಟು ತಮ್ಮತಮ್ಮ ವೃತ್ತಿಗೆ ಇಳಿದವರು.

ಇಬ್ಬರ ಮಧ್ಯೆ ಅನ್ಯೊನ್ಯತೆ ಇತ್ತು, ವಿಚಾರಗಳು ಒಂದೇ ತೆರನಾಗಿದ್ದವು. ಇಬ್ಬರೂ ಗಾಂಧಿಯನ್ನು ಪ್ರೀತಿಸುತ್ತಿದ್ದರು. ಆಧ್ಯಾತ್ಮದ ಬಗೆಗೆ ಇಬ್ಬರಿಗೂ ತುಂಬಾ ಒಲವು. ಸಂಜೆ ಬಿಡುವು ಮಾಡಿಕೊಂಡು ಇಬ್ಬರು ಗಜಲಿಂಗೇಶ್ವರ ಗುಡಿಯ ಕಡೆಗೆ ಹೋಗುತ್ತಿದ್ದರು. ಪಾರಿಜಾತ ನಾಟಕ ಇಬ್ಬರಿಗೂ ಪ್ರೀತಿ. ಪಕ್ಕದೂರಿನ ಜಾತ್ರೆ, ತಿಥಿ, ಪ್ರವಚನ, ಕುದುರೆ ಶರತ್ತು ಇದ್ದರೆ ನಡೆದುಕೊಂಡೇ ಹೋಗಿಬರುತ್ತಿದ್ದರು.

ಊರಲ್ಲಿ ಮುದುಕಪ್ಪಜ್ಜನ ಗಾಂಧಿ ಕರಾಪು ಅಂದ್ರೆ ವಿಶೇಷ. ಆತ ತಲೆ ತುರಿಸುತ್ತ, ಕಿವಿಯಲ್ಲಿ ಬೆರಳಾಡಿಸುತ್ತ, ನಿಧನಿಧಾನಕ್ಕೆ ತಲೆಯ ಕೂದಲನ್ನು ಗಾಯವಾಗದ ರೀತಿ ತೆಗೆಯುವುದರಲ್ಲಿ ಸಿದ್ಧಹಸ್ತ. ಯಾಕೆಂದರೆ ಯಾರು ಯಾರಿಗೆಲ್ಲ ತಲೆಗಳಲ್ಲಿ ಗಾಯಗಳಾಗಿ ಅವು ಗಂಟುರೂಪ ಪಡೆದು ಊದಿಕೊಂಡಿರುತ್ತವೆ ಎಂಬುದು ಹೇಗೆ ಗೊತ್ತಾಗಬೇಕು? ತಲೆ ತುಂಬ ಕೂದಲು ಇದ್ದಾಗ ಅವು ಕಾಣಿಸಲ್ಲ; ಗಾಂಧಿ ಕರಾಪು ಮಾಡುವಾಗಲೇ ಅವೆಲ್ಲ ಬೆಳಕಿಗೆ ಬರೋದು. ಕೆಲವರು ತಲೆ ಮೇಲೆ ಕತ್ತಿ ಇಡುವ ಮುನ್ನವೇ ಹೇಳುತ್ತಾರೆ. ನೆತ್ತಿಯಲ್ಲೋ, ತಲೆಯ ಹಿಂಭಾಗದಲ್ಲೋ ಅಥವಾ ಮುಂಭಾಗದಲ್ಲೋ ಗಾಯವಾದ ಕಲೆಗಳು, ಪೆಟ್ಟುತಿಂದು ಊದಿಕೊಂಡವು ಅಥವಾ ಅತಿಯಾದ ಪೆಟ್ಟುಬಿದ್ದು ಹೊಲಿಗೆ ಹಾಕಿದ್ದ ಅಗೋಚರ ಕಲೆಗಳೆಲ್ಲ ಕಾಣಿಸುವುದು ಇಂತಹ ಸಂದರ್ಭದಲ್ಲೇ.

ಈ ಗಾಂಧಿ ಕರಾಪು ಸುತ್ತ ಏಳೆಂಟು ಹಳ್ಳಿಗಳಿಗೆಲ್ಲ ಪ್ರಸಿದ್ಧಿ ಪಡೆದದ್ದು ಮುದುಕಪ್ಪಜ್ಜನ ಪೂರ್ವಜರಿಂದಲೆ. ಯಾಕೆಂದರೆ ಒಮ್ಮೆ ಬೆಳಗಾವಿಗೆ ಗಾಂಧೀಜಿ ಬರುತ್ತಿರುವ ಸಂಗತಿ ಗೊತ್ತಾದ ಕೂಡಲೆ ನಮ್ಮೂರಿನ ಗಾಂಧೀವಾದಿಗಳು, ಸ್ವಾತಂತ್ರ್ಯ ಹೋರಾಟಗಾರರು ಅವರನ್ನು ನೋಡಲೆಂದು ಬೆಳಗಾವಿಗೆ ಹೊರಟು ನಿಂತಾಗ ಮುದುಕಪ್ಪಜ್ಜನ ತಾತನೇ ಅಷ್ಟು ಜನರಿಗೆಲ್ಲ ಗಾಂಧಿ ಕರಾಪು ಮಾಡಿ ತನ್ನ ದೇಶ ಸೇವೆಯನ್ನು ಮೆರೆದಿದ್ದನಂತೆ. ಇದು ಒಂದೇ ರಾತ್ರಿ 52 ಜನರಿಗೆ ಗಾಂಧಿ ಕರಾಪು ಮಾಡಿದ ದಾಖಲೆ. ಆನಂತರ ನಮ್ಮೂರಿನ ಜನರ ಬಗೆಗೆ ಹೇಳುತ್ತಾರೇನೊ ಎಂದು ಅತೀವ ಕುತೂಹಲದಿಂದ ಕಿವಿಗೆ ರೇಡಿಯೊ ಹಿಡಿದು ಪ್ರತಿದಿನ ಪ್ರದೇಶ ಸಮಾಚಾರ, ಸಂಸ್ಕøತ ವಾರ್ತೆ, ಇಂಗ್ಲಿಷ್ ವಾರ್ತೆಗಳನ್ನು ಕೇಳಿದ್ದೇಕೇಳಿದ್ದು. ಹಾಗೇನಾದರು ನಮ್ಮೂರಿನ ಜನರು ಬಂದುದರ ಕುರಿತು ಹೇಳಿದರೆ ಅವರಿಗೆ ಗಾಂಧಿ ಕರಾಪು ನಾನೇ ಮಾಡಿದ್ದು ಅಂತ ಹೇಳಲು ಅವಕಾಶ ದೊರೆಯುತ್ತದೆ ಎಂದು ಅಜ್ಜ ಕಾಯುತ್ತಿದ್ದ ಅಷ್ಟೇ.

ಊರಿಗೆ ಯಾರೇ ಬರಲಿ, ಹೋಗಲಿ, ಕಳ್ಳತನ, ದರೋಡೆ, ಮೋಸ, ಸುಲಿಗೆ, ಹಗೆತನ, ಹಾದರ, ಬಸಿರು ಬಾಣಂತನಾದಿಗಳಿಂದ ಹಿಡಿದು ದಾಯಾದಿಗಳ ಜಗಳ, ಮದುವೆ ಮುಂಜಿ, ಜಾತ್ರೆ, ಹಬ್ಬ, ನಾಟಕ, ಸಂಗೀತ ಹೀಗೆ ಯಾವೆಲ್ಲ ವಿಷಯಗಳ ಚರ್ಚೆ ಈ ಅಂಗಡಿಯಲ್ಲಿ ಅತ್ಯಂತ ರಂಜನೀಯವಾಗಿ ನಡೆಯುತ್ತದೆ. ಗೊತ್ತಿದ್ದವರು ಗೊತ್ತಿಲ್ಲದವರಿಗೆ ಅನೇಕಾನೇಕ ವಿಷಯಗಳನ್ನು ಪ್ರಸ್ತುತ ಪಡಿಸೋದು ಇಂಥಲ್ಲಿಯೆ. ಮುದುಕಪ್ಪಜ್ಜ ನೋಡಲು ವಯಸ್ಸಾದವನ ಹಾಗೆ ಇದ್ದ. ಆದರೆ ಮಾತುಗಳನ್ನು ಮಾತ್ರ ತುಂಬಾ ಮಿತವಾಗಿ ವಿನಮ್ರವಾಗಿ ಬಳಸುತ್ತಿದ್ದ. ಅವನ ಕೆಲಸ ಮತ್ತು ಶ್ರದ್ಧೆ ನೋಡಿ, ಒಮ್ಮೆ ಊರ ಸಾಹುಕಾರರು, “ಮುದುಕಪ್ಪ ನೀ ಪ್ಯಾಟಿಯೊಳಗ ಏನಾದ್ರು ಕಷ್ಟದ ಅಂಗಡಿ ತೆಗಿದಿದ್ದಿ ಅಂದ್ರ ದಿನಾ ನೂರಿಪ್ಪತ್ತು ರೂಪಾಯಿ ಗಳಿಸಿ ಒಗಿತಿದ್ದಿ ನೋಡ. ಹಳ್ಳ್ಯಾಗ ದುಡ್ಡ ಹುಟ್ಟಾಂಗಿಲ್ಲ ಹುಚ್ಚ, ಯಾಕಂದ್ರ ಇಲ್ಲಿ ಇರಾವರು ಬಡವರ, ಎಷ್ಟ ಕೊಟ್ಟಾರವರು…..?” ಅಂತ ಅಂದರು. ಮುದುಕಪ್ಪ ಹೇಹೇ ಅಂತ ಪೆಕರುಪೆಕರಾಗಿ ನಗುತ್ತ ತನ್ನ ತೊಡೆಗೆ ಕತ್ತಿಯನ್ನು ತಿಕ್ಕಿ ಹದಗೊಳಿಸುತ್ತ,
“ಸಾಹುಕಾರ್ರೇ ರೊಕ್ಕದಿಂದ ಮನಿಶೇರನ್ನ ತಗೊಬಹುದು, ಮನಸ್ಸ ತಗೊಳಾಕ ಆಕೈತೇನ ಹೇಳ್ರಿ….?” ಅಂದಾಗ ಸಾಹುಕಾರ್ರು, “ಆತ ಬಾರಲೇ, ಗಡ್ಡಾ ಕೆರಿ ಬಾ” ಅಂತ ಮಾತು ಮುಗಿಸಿಬಿಟ್ಟಿದ್ದರು.

ಈ ಗಾಂಧಿ ಕರಾಪು ನಮ್ಮ ಮನೆಯ ಎಲ್ಲ ಹುಡುಗರಿಗೆ, ಗಂಡಸರಿಗೆ ಯಾವಾಗಲೂ ಶತಸಿದ್ಧ. ಇದನ್ನು ಬಿಟ್ಟು ಬೇರಾವ ಪದ್ಧತಿಯಲ್ಲಿ ಕಟಿಂಗ್ ಮಾಡಿಸುವ ಹಾಗಿರಲಿಲ್ಲ ನಾವು. ಯಾಕೆಂದರೆ ಅದು ಗಾಂಧಿಗೆ ಅವಮಾನ ಮಾಡಿದಂತೆ ಎನ್ನುವ ಮನೋಭಾವ ನಮ್ಮಪ್ಪನದು. ಯಾವ ರೀತಿಯಲ್ಲಿ ಬೇಡಿಕೊಂಡರೂ ನಮ್ಮಪ್ಪ ಗಾಂಧಿ ಕರಾಪ ಬಿಟ್ಟು ಇನ್ನಾವುದೇ ರೀತಿಯಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಒಪ್ಪುತ್ತಿರಲಿಲ್ಲ.

ಹೀಗೆ ಗಾಂಧಿ ಕರಾಪು ಮಾಡಿಸಿಕೊಂಡು ಶಾಲೆಗೆ ಹೋದಾಗಲೆಲ್ಲ ಹುಡುಗರು ತಲೆಮೇಲೆ ಟಪ್ ಅಂತ ಹೊಡೆಯುತ್ತಿದ್ದರು. ಇಲ್ಲಾ, ಮರೆಯಲ್ಲಿ ನಿಂತು ‘ಏಯ್ ಟಕಳ್ಯಾ……?’ ಅಂತ ಕೂಗುತ್ತಿದ್ದರು ಆವಾಗ ನಮಗೆ ಎಂಥಾ ಅವಮಾನ ಅಂದರೆ ಹೇಳಿಕೊಳ್ಳಲು ಆಗದೆ, ಶಾಲೆಯನ್ನು ಬಿಟ್ಟು ಮನೇಲಿ ಇರೋಕು ಆಗದೇ ಒದ್ದಾಡಿದ್ದು ಅಷ್ಟಿಷ್ಟಲ್ಲ. ನಾವು ಮುಲ್ಕಿ ಪರೀಕ್ಷೆ ಬರೆಯುವವರೆಗೂ ಈ ಶಿಕ್ಷೆಯಿಂದ ನಮಗೆ ಹೊರಬರಲಾಗಲೇ ಇಲ್ಲ. ಕೆಲವು ಸಲ ಕಟಿಂಗ್ ಮಾಡಿಸಿಕೊಂಡು ಬರಲು ಹೋದಾಗ ಮುದುಕಪ್ಪಜ್ಜನಿಗೆ ಪೂಸಿ ಹೊಡೆದು, “ಯಜ್ಜಾ… ಎಲ್ಲಾ ಬೋಳಿಸಿಬಿಡಬ್ಯಾಡ, ಸಾಲ್ಯಾಗ ಹುಡುಗೋರೆಲ್ಲ ಹಂಗಿಸ್ತಾವ, ತಲಿತಲಿ ಬಡೀತಾರ…” ಅಂತ ಬೇಡಿಕೊಂಡಾಗ ಅವ ಅದಕ್ಕೆ ಸುತಾರಾಂ ಒಪ್ಪುತ್ತಿರಲಿಲ್ಲ. ಯಾರಂವಾ…? ನಿಮ್ಮ ಮಾಸ್ತರಗ ಹೇಳ, ಯಾಕ ಸುಮಸುಮ್ನ ಬಡಿಸಿಕೊಂತಿ… ಯಾರಂವ, ಮಕಾಟ್ಯಾಗ ತಲಿ ಸರೀ ಐತಿಲ್ಲೊ ಕೇಳ, ಇಲ್ಲದಿರ ನಮ್ಮಾಪನ ಮನೀತನಕ ಕರಕೊಂಡ ಬರತೀನಂತ ಹೇಳು” ಅಂತ ಸಮಜಾಯಿಷಿ ಕೊಡುತ್ತಿದ್ದ.

“ತಲಿಮ್ಯಾಲ ಕೂದಲ ಬಾಳ ಇರಬಾರದು, ಯಾಕ ಗೊತ್ತೈತಿ? ಕುತ್ತಿಗಿ ಸಣ್ಣಗಾಗತೈತಿ, ಕಣ್ಣ ಮಂಜಮಂಜ ಕಾಣತಾವ, ತಲೀಗಿ ಎಷ್ಟಂತ ಎಣ್ಣಿ ತರತಾರು ಮನ್ಯಾಗಿನವ್ರು…. ಶರೀರ ಕಾವೇರತೈತಿ” ಅಂತ ಬುದ್ಧಿ ಹೇಳುತ್ತಿದ್ದ. ಒಂದು ಸಲ ನಮ್ಮ ಹೆಡ್ ಮಾಸ್ತರು ನಿಜಗುಣಿಯವರ ಬಳಿ ಬಂದು, “ಸಾಲ್ಯಾಗ ಹುಡುಗರು ಗಾಂಧಿ ಕರಾಪ ಮಾಡಿಸಿದ ಹುಡುಗರ ತಲಿತಲಿ ಬಡ್ಯಾಕತ್ತಾರಂತ. ಅವರು ಯಾರು ನೋಡ್ರಿ ಮಾಸ್ತಾರೇ…? ಅವರಿಗೂ ಗಾಂಧಿ ಕರಾಪ ಮಾಡಿ ಬಿಡೋಣಂತ” ಅಂತ ಅಂದಾಗ ಅಲ್ಲಿದ್ದ ಹುಡುಗರೆಲ್ಲ ಗಪ್ ಚುಪ್ ಆಗಿದ್ದರು.

ನಾವು ಪಾಲಕರ ಜೊತೆಗೆ ಯಾವೂದೇ ಊರಿಗೆ ಹೋಗಬೇಕೆಂದರೆ, ಜಾತ್ರೆ, ಮದುವೆ, ಹಬ್ಬ, ಉತ್ಸವ, ಇರಲಿ ನಮಗೆಲ್ಲಾ ಮೊದಲು ಗಾಂಧಿ ಕರಾಪ ಆಗಲೆಬೇಕಿತ್ತು. ಇಂದು ಕಟಿಂಗ್ ಸಲೂನುಗಳ ವೈಭವ ನೋಡಿದರೆ ಬೆಕ್ಕಸಬೆರಗಾಗುತ್ತೇವೆ. ಅಂದು ಇಡೀ ಊರಿಗೊಂದೇ ಇದ್ದ ಅಂಗಡಿ ಇಂದು ಗಲ್ಲಿಗಲ್ಲಿಯಲ್ಲಿ ಎದ್ದುನಿಂತಿವೆ. ಸಲೂನುಗಳು ಚಿನ್ನದ ಅಂಗಡಿಯೇನೋ ಎನ್ನುವಷ್ಟು ರೇಂಜಿಗೆ ಝಗಮಗಿಸುತ್ತಿವೆ. ಆ ಕಾಲಕ್ಕೆ ಸಂಜೆ ಆದಮೇಲೆ ಕೂದಲು ಕತ್ತರಿಸುವಂತಿರಲಿಲ್ಲ. ಇವತ್ತು ರಾತ್ರಿ ಹತ್ತು ಗಂಟೆಯಲ್ಲು ನಾವೂ ನಮ್ಮಿಚ್ಚೆಯ ಹೇರ್ ಸ್ಟೈಲ್ ಮಾಡಿಸಬಹುದಾಗಿದೆ.

ಮೊದಲು ಗಾಂಧಿ ಕರಾಪಿಗೆ ನಾವು ಕೊಡುತ್ತಿದ್ದದ್ದು ಒಂದು ತಲೆಗೆ ಎರಡೇ ರೂಪಾಯಿ. ಇವತ್ತು ಆ ದುಡ್ಡಿಗೆ ಒಂದು ಬ್ಲೇಡ್ ಕೂಡಾ ಬರುತ್ತಿಲ್ಲ. ಬದಲಾದ ಕಾಲದಲ್ಲಿ ಗಾಂಧಿ ಕರಾಪು ಜೊತೆಗೆ ನಮ್ಮ ಮುದುಕಪ್ಪಜ್ಜನೂ ಮರೆಯಾಗಿಹೋದ.

*ಕನ್ನಡ ಎಂ.ಎ. ಮಾಡಿರುವ ಲೇಖಕರು ಕಥೆ, ಕವನ ಸಂಕಲನ, ನಾಟಕ ಕೃತಿ ಪ್ರಕಟಿಸಿದ್ದಾರೆ. ಕಥೆಯೊಂದಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರಕಿದೆ. ಪ್ರಸ್ತುತ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದಲ್ಲಿ ಉದ್ಯೋಗಿ.

Leave a Reply

Your email address will not be published.