ಗಾಂಧಿ ಇಲ್ಲದ ಭಾರತ ಊಹಿಸಲು ಸಾಧ್ಯವೇ?

ಮಹಾತ್ಮಾ ಗಾಂಧೀಜಿ ತಪಸ್ಸಿನಂತೆ, ಪ್ರಾಮಾಣಿಕವಾಗಿ ಬದುಕಿದವರು. ಅವರ ಜೀವನನವೇ ಒಂದು ಪಾಠಶಾಲೆ ಮತ್ತು ಸ್ಫೂರ್ತಿ. ನನ್ನ ಜೀವನವೇ ನನ್ನ ಸಂದೇಶ ಎಂದು ಅವರು ಹೇಳುತ್ತಿದ್ದರು. ನುಡಿದಂತೆ ನಡೆದವರು ಅವರು. ಅದರಲ್ಲಿ ಯಾವ ದ್ವಂದ್ವವೂ ಇರಲಿಲ್ಲ.

ಮಹಾತ್ಮನ ಪರಂಪರೆಯನ್ನು ಹೀಗಳೆಯುವವರು ಉತ್ತರ ನೀಡಬೇಕು!

ಈ ವರ್ಷದ ಜನವರಿ 30, ಅಂದರೆ ಗಾಂಧೀಜಿ ಪುಣ್ಯತಿಥಿಯ ದಿನ ದಿಗ್ಭ್ರಾಂತಿಪಡುವಂಥ ಘಟನೆಯೊಂದು ನಡೆಯಿತು. ಮಹಿಳೆಯೊಬ್ಬಳ ನೇತೃತ್ವದ ಒಂದು ಗುಂಪು ಗಾಂಧೀಜಿಯ ಆಳೆತ್ತರದ ಕಟೌಟ್ ಮುಂದೆ ನಿಂತಿತ್ತು. ತನ್ನ ಬಳಿ ಇದ್ದ ಪಿಸ್ತೂಲು ತೆಗೆದ ಆ ಮಹಿಳೆ ಆ ಭಾವಚಿತ್ರಕ್ಕೆ ಗುರಿಇಟ್ಟು ಗುಂಡುಹಾರಿಸಿಯೇ ಬಿಟ್ಟಳು. ಇದು ನಾಥೂರಾಮ್ ಗೋಡ್ಸೆ ಆ ದಿನ ಗಾಂಧೀಜಿಯ ಹತ್ಯೆ ನಡೆಸಿದ ಶೈಲಿಯಲ್ಲೇ ಇತ್ತು. ಬಳಿಕ ಅಲ್ಲಿದ್ದ ಎಲ್ಲರೂ ಒಬ್ಬರಾದ ಬಳಿಕ ಒಬ್ಬರಂತೆ ಹಾಗೆಯೇ ಮಾಡಿದರು. ಇದು ಸಾಲದೆಂಬಂತೆ ಈ ಪ್ರಕ್ರಿಯೆ ಗಾಂಧಿಪುಣ್ಯತಿಥಿಯಂದು ಪುನರಾವರ್ತನೆಯಾಗಲಿದೆ ಎಂಬ ಪ್ರಕಟಣೆ ಬೇರೆ ಹೊರಬಿತ್ತು.

ದೇಶಾದ್ಯಂತ ಹರಿದಾಡಿದ ಈ ವಿಡಿಯೊ ನೋಡಿ ನಾನಂತೂ ತಲ್ಲಣಗೊಂಡೆ. ರಾಷ್ಟ್ರಪಿತನಿಗೆ ಈ ಪರಿಯ ಅಗೌರವ, ಅವಮಾನ ಮಾಡಿದವರನ್ನು ಹಿಡಿದು ಜೈಲಿಗೆ ಅಟ್ಟಲಾಗುವುದು ಎಂಬ ಕಲ್ಪನೆ ಆಗ ನನ್ನಲ್ಲಿ ಮೂಡಿತು. ನಾವು ಕೆಲವರು ತಿರುವನಂತಪುರದ ಸಚಿವಾಲಯದ ಮುಂದೆ ಸೇರಿ ಸಭೆಯೊಂದನ್ನು ನಡೆಸಿ, ಈ ಮತಿಹೀನರ ಕೃತ್ಯವನ್ನು ಮನ್ನಿಸು ಎಂದು ಗಾಂಧಿ ತಾತನಲ್ಲಿ ಕೋರಿದೆವು.

ಇಂಥ ಮೂಲಭೂತ ನಂಬಿಕೆಗಳನ್ನು ಪಸರಿಸುವ ಈ ತೀವ್ರವಾದಿಗಳಿಗೆ ತಮ್ಮ ತಪ್ಪಿನ ಅರಿವಾಗಬಹುದು ಎಂಬ ನಮ್ಮ ನಂಬಿಕೆ ಹುಸಿಯಾಯಿತಷ್ಟೇ ಅಲ್ಲ. ಅಂಥದ್ದೇ ಸಿದ್ಧಾಂತದಲ್ಲಿ ಅಚಲ ನಂಬಿಕೆಯುಳ್ಳ ಮತ್ತೊಬ್ಬ ಮಹಿಳೆ ಲೋಕಸಭೆಗೂ ಚುನಾಯಿತಳಾಗಿಬಿಟ್ಟಳು.

ಗಾಂಧಿಜಿ ಯಾವ ತತ್ತ್ವ, ಸಿದ್ಧಾಂತಕ್ಕಾಗಿ ಹೋರಾಡಿ ಮಡಿದರೋ ಅಂಥದೊಂದು ತತ್ತ್ವಾದರ್ಶಗಳನ್ನು ಈ ಪರಿಯಾಗಿ ದ್ವೇಷಿಸುವ, ಇಷ್ಟೊಂದು ಅಗೌರವದಿಂದ ಕಾಣುವಂಥ ದಿನ ಬರುವುದೆಂದು ಖಂಡಿತ ಯಾರೂ ಊಹಿಸಿರಲಿಲ್ಲ. ಅದೂ ಅವರ 150ನೇ ಜಯಂತಿವರ್ಷದ ಈ ಸಂದರ್ಭದಲ್ಲಿ.! ನಾವು ಇಷ್ಟು ಬೇಗ ಎಲ್ಲವನ್ನೂ ಮರೆತುಬಿಟ್ಟೆವೇ? ಗಾಂಧೀಜಿಯ ಅಧ್ಯಾತ್ಮಿಕ ಮಾರ್ಗದರ್ಶನ ಇಲ್ಲದ ಭಾರತವನ್ನು ನಾವು ಊಹಿಸಿಕೊಳ್ಳಬಹುದೇ? ದೇಶದ ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿ ನಿಂತು ಅವರು ನಡೆಸಿದ ಹೋರಾಟ ಅಪರೂಪ ಹಾಗೂ ಅವಿಸ್ಮರಣೀಯವಾದುದು.

ಅಂತರ್ಮುಖಿ ವ್ಯಕ್ತಿಯೊಬ್ಬ ತನ್ನೊಳಗಿನ ಎಲ್ಲ ಸಂಕೋಚ, ಹಿಂಜರಿಕೆಗಳನ್ನು ಹೇಗೆ ದಾಟಿಬಂದ ಹಾಗೂ ಪ್ರಾಮಾಣಿಕತೆ ಮತ್ತು ವ್ಯಕ್ತಿಗತ ಮೌಲ್ಯಗಳು ವ್ಯಕ್ತಿಯೊಬ್ಬನನ್ನು ಹೇಗೆ ರೂಪಾಂತರಗೊಳಿಸಿ, ಒಂದು ದೊಡ್ಡ ಹೋರಾಟಕ್ಕೆ ಆತನನ್ನು ಹೇಗೆ ಅಣಿಗೊಳಿಸಿತು ಎಂಬುದನ್ನು, ‘ಸತ್ಯದೊಂದಿಗಿನ ನನ್ನ ಪ್ರಯೋಗಗಳು’ ಎಂಬ ಅವರ ಆತ್ಮಚರಿತ್ರೆಯಲ್ಲಿ ನಾವು ಕಾಣಬಹುದು- ಅದು ಒಂದು ಸಮುದಾಯದ ಪರವಾಗಿರಬಹುದು ಇಲ್ಲವೇ ಒಂದು ಧ್ಯೇಯೋದ್ದೇಶಕ್ಕಾಗಿರಬಹುದು.

ಬಲಿಷ್ಠ ಹಾಗೂ ನಿರ್ದಯಿ ಬ್ರಿಟಿಷರ ವಿರುದ್ಧ ಅವರು ಸಂಘಟಿಸಿದ ಅಹಿಂಸಾತ್ಮಕ ಮತ್ತು ಅಸಹಕಾರ ಮಾರ್ಗದ ಹೋರಾಟ ಒಂದು ಮಹಾಸಂಗ್ರಾಮ. ತಮ್ಮ ಈ ಹೋರಾಟದಲ್ಲಿ ಗಾಂಧೀಜಿ ದೇಶದ ಹೆಮ್ಮೆಯ, ಚಿಂತನಶೀಲ ಜನರನ್ನು ಜೊತೆಗೂಡಿಸಿದರು. ಸ್ವರಾಜ್ಯವು ಪ್ರತಿಯೊಬ್ಬರ ಜನ್ಮಸಿದ್ಧ ಹಕ್ಕು ಎಂದು ಸಾರಿದರು. ಮಾತ್ರವಲ್ಲದೆ ಅದರ ಸಾಕಾರಕ್ಕಾಗಿ ಜೀವನವನ್ನೇ ಸವೆಸಿದರು.

ಗಾಂಧೀಜಿ ಎಷ್ಟು ಸರಳ ಹಾಗೂ ನಿಸ್ಪಹ ಜೀವನವನ್ನು ನಡೆಸಿದರೆಂದರೆ, ಅವರನ್ನು ನೋಡಿದ ಪ್ರತಿಯೊಬ್ಬರೂ ಅವರಿಂದ ಕಲಿತರು ಹಾಗೂ ಸ್ಫೂರ್ತಿ ಪಡೆದರು. ಅವರ ನಡೆನುಡಿಯಲ್ಲಿ ದ್ವಂದ್ವ ಇರಲಿಲ್ಲ. ನುಡಿದಂತೆ ನಡೆದ ಪುಣ್ಯಾತ್ಮರವರು. ಅಂತರ್ಮುಖಿ ವ್ಯಕ್ತಿಯೊಬ್ಬ ತನ್ನೊಳಗಿನ ಎಲ್ಲ ಸಂಕೋಚ, ಹಿಂಜರಿಕೆಗಳನ್ನು ಹೇಗೆ ದಾಟಿಬಂದ ಹಾಗೂ ಪ್ರಾಮಾಣಿಕತೆ ಮತ್ತು ವ್ಯಕ್ತಿಗತ ಮೌಲ್ಯಗಳು ವ್ಯಕ್ತಿಯೊಬ್ಬನನ್ನು ಹೇಗೆ ರೂಪಾಂತರಗೊಳಿಸಿ, ಒಂದು ದೊಡ್ಡ ಹೋರಾಟಕ್ಕೆ ಆತನನ್ನು ಹೇಗೆ ಅಣಿಗೊಳಿಸಿತು ಎಂಬುದನ್ನು, ‘ಸತ್ಯದೊಂದಿಗಿನ ನನ್ನ ಪ್ರಯೋಗಗಳು’ ಎಂಬ ಅವರ ಆತ್ಮಚರಿತ್ರೆಯಲ್ಲಿ ನಾವು ಕಾಣಬಹುದು- ಅದು ಒಂದು ಸಮುದಾಯದ ಪರವಾಗಿರಬಹುದು ಇಲ್ಲವೇ ಒಂದು ಧ್ಯೇಯೋದ್ದೇಶಕ್ಕಾಗಿರಬಹುದು.

ಅವರ ಮನದಲ್ಲಿ ದ್ವೇಷಾಸೂಯೆಗೆ ಸ್ಥಾನವೇ ಇರಲಿಲ್ಲ. ಅದು ಬ್ರಿಟಿಷರೊಡನೆ ನಡೆಸಿದ ಹೋರಾಟವಾಗಿರಬಹುದು ಅಥವಾ ಧರ್ಮಾಂಧತೆಯು ಹಿಂಸೆಗೆ ಎಡೆಮಾಡಿಕೊಡುವಂಥ ಸನ್ನಿವೇಶವನ್ನು ಎದುರಿಸುವುದಾಗಿರಬಹುದು-ಎಲ್ಲ ಪರಿಸ್ಥಿತಿಯಲ್ಲೂ, ಎಂಥ ಸನ್ನಿವೇಶದಲ್ಲೂ ಅವರು ಚಿತ್ತಸ್ವಾಸ್ಥ್ಯ ಕಳೆದುಕೊಳ್ಳುತ್ತಿರಲಿಲ್ಲ. ಅಥವಾ ಅಂಥ ಸನ್ನಿವೇಶ ಎದುರಾದಾಗ, ತಮ್ಮ ಆತ್ಮಸಾಕ್ಷಿಯನ್ನು ಪರಿಶುದ್ಧಗೊಳಿಸಿಕೊಳ್ಳಲು ಸತ್ಯಾಗ್ರಹದ ಹಾದಿ ಹಿಡಿಯುತ್ತಿದ್ದರು.

ಇಸ್ಲಾಂ, ಕ್ರೈಸ್ತ ಧರ್ಮಗಳಿಂದಲೂ ಸಾಕಷ್ಟು ವಿಷಯಗಳನ್ನು ಕಲಿತರು. ಮಾತ್ರವಲ್ಲ ನಮ್ಮ ದೇಶದ ಸಿಖ್, ಜೈನ, ಬೌದ್ಧ ಧರ್ಮಗಳಿಂದಲೂ ಜ್ಞಾನ ಪಡೆದರು. ಸನಾತನ ಧರ್ಮದ ಅನ್ವೇಷಣೆಯಲ್ಲಿ ಇತರ ಧರ್ಮಗಳು ಅಡಚಣೆಯಾಗಿವೆ ಎಂದು ಯಾವತ್ತೂ ಭಾವಿಸಿದವರೇ ಅಲ್ಲ. ಒಟ್ಟಾರೆಯಾಗಿ ಅವರು ಒಬ್ಬ ನೈಜ ಭಾರತೀಯರಾಗಿದ್ದರು.

ಅಪ್ಪಟ ಹಿಂದೂ ಆಗಿದ್ದರೂ ಧಾರ್ಮಿಕ ಸಹಬಾಳ್ವೆಯಲ್ಲಿ ಗಾಂಧೀಜಿಗೆ ಅಪಾರ ನಂಬಿಕೆ ಇತ್ತು. ತಾವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲವೂ ಹೌದು ಎಂದು ಗಟ್ಟಿಯಾಗಿ ಹೇಳುತ್ತಿದ್ದುದುಂಟು. ಅವರು ಇಸ್ಲಾಂ, ಕ್ರೈಸ್ತ ಧರ್ಮಗಳಿಂದಲೂ ಸಾಕಷ್ಟು ವಿಷಯಗಳನ್ನು ಕಲಿತರು. ಮಾತ್ರವಲ್ಲ ನಮ್ಮ ದೇಶದ ಸಿಖ್, ಜೈನ, ಬೌದ್ಧ ಧರ್ಮಗಳಿಂದಲೂ ಜ್ಞಾನ ಪಡೆದರು. ಸನಾತನ ಧರ್ಮದ ಅನ್ವೇಷಣೆಯಲ್ಲಿ ಇತರ ಧರ್ಮಗಳು ಅಡಚಣೆಯಾಗಿವೆ ಎಂದು ಯಾವತ್ತೂ ಭಾವಿಸಿದವರೇ ಅಲ್ಲ. ಒಟ್ಟಾರೆಯಾಗಿ ಅವರು ಒಬ್ಬ ನೈಜ ಭಾರತೀಯರಾಗಿದ್ದರು.

ಗಾಂಧೀಜಿಯ ಪರಮಪ್ರಿಯ ದೇವರು ರಾಮ. ಹಾಗಿದ್ದರೂ ಅವರಿಗೆ ಕೃಷ್ಣನೂ ಅಷ್ಟೇ ಪ್ರಿಯ. ಮರ್ಯಾದಾಪುರುಷ ರಾಮ ಹಾಗೂ ರಾಜನೀತಿ ಚತುರನಾದ ಕೃಷ್ಣ- ಇವರಿಬ್ಬರ ಗುಣಗಳು ಮೇಳೈಸಿದಂಥ ವ್ಯಕ್ತಿತ್ವ ಅವರದಾಗಿತ್ತು. ಇಲ್ಲವಾದಲ್ಲಿ ಸ್ವಾತಂತ್ರ್ಯ ದೊರೆಯುವ ತನಕ ಪಟ್ಟುಬಿಡದೆ ಬ್ರಿಟಿಷರ ಜತೆ ಅಷ್ಟು ಸುದೀರ್ಘ ಅವಧಿಯವರೆಗೆ ಸಂಯಮದಿಂದ ಸಂಧಾನ ಮಾತುಕತೆ ನಡೆಸುವುದು ಅವರಿಗೆ ಬಹುಶಃ ಸಾಧ್ಯವಾಗುತ್ತಿರಲಿಲ್ಲವೇನೋ. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆ ಕುರಿತು ಗಾಂಧೀಜಿ ತಳೆದ ನಿಲುವನ್ನಿಲ್ಲಿ ಪರಾಮರ್ಶಿಸಿದರೆ ಇದು ಸ್ಪಷ್ಟವಾಗುತ್ತದೆ. ಯುದ್ಧ ಕೊನೆಗೊಂಡ ಕೂಡಲೇ ಭಾರತದ ಸ್ಯಾತಂತ್ರ್ಯದ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂಬ ವಾಗ್ದಾನವನ್ನು ಬ್ರಿಟಿಷರು ಗೌರವಿಸಲಿಲ್ಲ. ಆದರೂ ಇದರಿಂದ ಗಾಂಧೀಜಿ ಧೃತಿಗೆಡಲಿಲ್ಲ.

ಎರಡನೇ ಮಹಾಯುದ್ಧದ ಸಂದರ್ಭದಲ್ಲೂ ಭಾರತದ ಸೈನಿಕರು ಬ್ರಿಟಿಷರ ಪರವಾಗಿ ಹೋರಾಡಲು ಸಮ್ಮತಿಸಿದರು. ವಿಶ್ವಾಸದ್ರೋಹದ ಬಳಿಕವೂ ಇದು ಸರಿಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ ಗಾಂಧೀಜಿಯ ಯೋಚನೆಯ ಧಾಟಿಯೇ ವಿಭಿನ್ನವಾಗಿತ್ತು. ಇದನ್ನವರು ತಂತ್ರವಾಗಿ, ಚೌಕಾಶಿಯ ಭಾಗವಾಗಿ ಉಪಯೋಗಿಸಿದರು. ಇದರಿಂದ ಬ್ರಿಟಿಷರಿಗೆ ಭಾರತದ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕೆಂಬ ಒಲವು ಹಾಗೂ ಒತ್ತಡ ಎರಡೂ ಉಂಟಾಗುತ್ತದೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. ಈ ತಂತ್ರ ಫಲನೀಡಿತು ಕೂಡ. ಮಹಾಯುದ್ಧ ಕೊನೆಗೊಂಡೊಡನೆ ಬ್ರಿಟಿಷರು ಭಾರತದ ಸ್ವಾತಂತ್ರ್ಯದ ಬೇಡಿಕೆಗೆ ಮಣಿದಿದ್ದು ಮಾತ್ರವಲ್ಲದೆ ಮಾತುಕತೆಗೂ ಮುಂದಾದರು.

ಶಾಂತಿನಿಕೇತನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರವೀಂದ್ರರನ್ನು ಗಾಂಧಿಯವರು ‘ಗುರುದೇವ್’ ಎಂದು ಸಂಬೋಧಿಸಿದರು. ಇದಕ್ಕೆ ಪ್ರತಿಯಾಗಿ ರವೀಂದ್ರರು ಗಾಂಧೀಜಿಯನ್ನು ‘ಮಹಾತ್ಮ’ ಎಂದು ಕರೆದರು. ಅಂದಿನಿಂದ ಗಾಂಧೀಜಿ ಇಡೀ ದೇಶಕ್ಕೆ, ಅಷ್ಟೇ ಏಕೆ ಇಡೀ ಜಗತ್ತಿಗೇ ಮಹಾತ್ಮರಾದರು.

ಗಾಂಧೀಜಿಗೆ ‘ಮಹಾತ್ಮ’ ಎಂಬ ಬಿರುದು ಇರುವುದು ಎಲ್ಲರಿಗೂ ಗೊತ್ತು. ಅವರನ್ನು ಮಹಾತ್ಮಾ ಗಾಂಧಿ ಎಂದೇ ನಾವು ಕರೆಯುತ್ತೇವೆ. ಆದರೆ ಈ ಅಭಿದಾನವನ್ನು ನೀಡಿದವರು ಯಾರು ಗೊತ್ತೆ? ರವೀಂದ್ರನಾಥ ಠಾಕೂರ್. ಶಾಂತಿನಿಕೇತನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರವೀಂದ್ರರನ್ನು ಗಾಂಧಿಯವರು ‘ಗುರುದೇವ್’ ಎಂದು ಸಂಬೋಧಿಸಿದರು. ಇದಕ್ಕೆ ಪ್ರತಿಯಾಗಿ ರವೀಂದ್ರರು ಗಾಂಧೀಜಿಯನ್ನು ‘ಮಹಾತ್ಮ’ ಎಂದು ಕರೆದರು. ಅಂದಿನಿಂದ ಗಾಂಧೀಜಿ ಇಡೀ ದೇಶಕ್ಕೆ, ಅಷ್ಟೇ ಏಕೆ ಇಡೀ ಜಗತ್ತಿಗೇ ಮಹಾತ್ಮರಾದರು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಗಾಂಧೀಜಿ ಅವರು ತಮ್ಮ ಸಹವರ್ತಿಗಳಾದ ಜವಾಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಬಿ.ಆರ್.ಅಂಬೇಡ್ಕರ್, ಅಬುಲ್ ಕಲಾಂ ಆಜಾದ್, ಸುಭಾಸ್ ಚಂದ್ರ ಬೋಸ್ ಅವರೊಡಗೂಡಿ ಭಾರತೀಯರಲ್ಲಿ ಸ್ವಾತಂತ್ರ್ಯದ ಕೆಚ್ಚು ಮೂಡಿಸಿದರು. ತ್ಯಾಗಮನೋಭಾವವನ್ನು ಬಿತ್ತಿದರು. ಆದರೆ ಇವರೆಲ್ಲರ ಪೈಕಿ ಅಚಲ ಮನೋಸ್ಥೈರ್ಯ ಹಾಗೂ ಆಗಾಗ ಗಟ್ಟಿತನ ತೋರುತ್ತಿದ್ದವರು ಬಹುಶಃ ಗಾಂಧೀಜಿ ಒಬ್ಬರೇ. ಆದರೆ ಅವರು ಅಷ್ಟೇ ಮೃದುಭಾಷಿ ಹಾಗೂ ಹೃದಯಕ್ಕೆ ಹತ್ತಿರವಾದ ಭಾಷೆಯನ್ನು ಮಾತನಾಡುತ್ತಿದ್ದರು. ಹಿಂದಿ, ಇಂಗ್ಲಿಷ್, ಗುಜರಾತಿ ಬಲ್ಲವರಾಗಿದ್ದರು. ಆಯಾ ಪ್ರದೇಶದಲ್ಲಿ ಅಲ್ಲಿನ ಭಾಷೆಯಲ್ಲೇ ಸಂಭಾಷಿಸುತ್ತಿದ್ದರು. ಅವರ ಭಾಷೆ ಸರಳವೂ, ನೇರವೂ ಆಗಿರುತ್ತಿತ್ತು. ಅಂತೆಯೇ ಅವರ ಮನವಿ ಸ್ಪಷ್ಟವೂ, ಆಳವೂ ಆಗಿರುತ್ತಿತ್ತು.

ಗಾಂಧೀಜಿಯ ಬದುಕು ಮತ್ತು ಬೋಧನೆಯು ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮೊದಲಾದ ಅನೇಕಾನೇಕ ಹೆಸರಾಂತ ವಿಶ್ವ ನಾಯಕರನ್ನೂ ತಟ್ಟಿತು. ಈ ಶಾಂತಿದೂತನಿಗೆ ಶಾಂತಿಗಾಗಿ ನೊಬೆಲ್ ಸಿಗಲಿಲ್ಲವಾದರೂ ನಾನಾ ಮತ ಮತ್ತು ಪಂಥಗಳ ಜನರಲ್ಲಿ ಶಾಂತಿ, ಸೌಹಾರ್ದದ ಸಂತ ಎನಿಸಿದರು.

ಕೈಯಿಂದ ತಯಾರಿಸಿದ ವಸ್ತುಗಳಿಗೆ ಆದ್ಯತೆ ಇರಬೇಕು ಎಂಬ ಅಭಿಪ್ರಾಯ ಇದ್ದರೂ ಯಾಂತ್ರೀಕರಣವನ್ನು ಅವರೆಂದೂ ವಿರೋಧಿಸಲಿಲ್ಲ. ಜನರ ಕಷ್ಟ, ಹೊರೆ ಕಡಿಮೆಯಾಗಿ ಕೆಲಸ ಸುಲಭವಾಗುವುದಾದರೆ ಯಂತ್ರಗಳು ಏಕೆ ಬೇಡ ಎಂಬುದು ಅವರ ಅಭಿಮತವಾಗಿತ್ತು.

ಸ್ವತಂತ್ರ ಭಾರತದಲ್ಲಿ ಪ್ರಜಾಪ್ರಭುತ್ವವು ಬೇರುಮಟ್ಟದಲ್ಲಿ ಬೆಳೆಯಬೇಕು ಎಂಬುದು ಗಾಂಧೀಜಿಯ ಅಚಲ ನಂಬಿಕೆಯಾಗಿತ್ತು. ಗ್ರಾಮಪಂಚಾಯಿತಿಯು ಅವರ ಕನಸಾಗಿತ್ತು. ಪ್ರಜೆಗಳೇ ಪ್ರಭುಗಳಾಗಬೇಕು ಹಾಗೂ ಅವರು ನಿಸ್ವಾರ್ಥ ಮತ್ತು ಬದ್ಧತೆಯಿಂದ ಜನರ ಸೇವೆ ಮಾಡಬೇಕು ಎಂಬ ಮಹದಾಸೆ ಇತ್ತು.

ಸ್ವಾವಲಂಬನೆಯು ಗಾಂಧೀಜಿಯ ಮತ್ತೊಂದು ಮಂತ್ರವಾಗಿತ್ತು. ಚರಕದಿಂದ ಸ್ವತಃ ನೂಲು ತೆಗೆಯುತ್ತಿದ್ದರು ಹಾಗೂ ಆ ನೂಲಿನಿಂದ ಬಟ್ಟೆ ತಯಾರಿಸಬೇಕು ಎಂಬುದು ಅವರ ತತ್ತ್ವವಾಗಿತ್ತು. ಪ್ರತಿಗ್ರಾಮವೂ ಸ್ವಾವಲಂಬಿಯಾಗಬೇಕು. ಸ್ಥಳಿಯವಾಗಿ ದೊರಕುವ ವಸ್ತುಗಳಿಂದಲೇ ನಮ್ಮೆಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು.

ಪ್ರತಿಯೊಂದು ಜಟಿಲ ಸಮಸ್ಯೆಗೂ ಅವರ ಬಳಿ ಸರಳ ಉತ್ತರ ಇರುತ್ತಿತ್ತು. ಕೈಯಿಂದ ತಯಾರಿಸಿದ ವಸ್ತುಗಳಿಗೆ ಆದ್ಯತೆ ಇರಬೇಕು ಎಂಬ ಅಭಿಪ್ರಾಯ ಇದ್ದರೂ ಯಾಂತ್ರೀಕರಣವನ್ನು ಅವರೆಂದೂ ವಿರೋಧಿಸಲಿಲ್ಲ. ಜನರ ಕಷ್ಟ, ಹೊರೆ ಕಡಿಮೆಯಾಗಿ ಕೆಲಸ ಸುಲಭವಾಗುವುದಾದರೆ ಯಂತ್ರಗಳು ಏಕೆ ಬೇಡ ಎಂಬುದು ಅವರ ಅಭಿಮತವಾಗಿತ್ತು.

ಮಾನವೀಯತೆಯ ತತ್ತ್ವವು ಗಾಂಧಿಯವರ ಸಾರ್ವಕಾಲಿಕ ಸತ್ಯದ ತತ್ತ್ವವಾಗಿದೆ. ಅವರ ಕೊಡುಗೆಗಳನ್ನು ನೋಡದೇ ಅಂಧರಾಗುವುದಾಗಲೀ, ಅದನ್ನು ಹೀಗಳೆಯುವುದಾಗಲೀ ಮಾನವತೆಗೆ ಒಳ್ಳೆಯದಲ್ಲ. ಭಾರತದ ಭವಿಷ್ಯದ ದೃಷ್ಟಿಯಿಂದಂತೂ ಸರಿ ಅಲ್ಲವೇ ಅಲ್ಲ. ದೇಶದ ಈ ಮಹಾನ್ ಪುತ್ರನ ಕೊಡುಗೆಯ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು. ಅದನ್ನು ಸಂಭ್ರಮಿಸಬೇಕು. ಈಗ ಕೆಲವರು ಮಾಡುತ್ತಿರುವಂತೆ ವಿಭ್ರಮಿಸುವುದಲ್ಲ.

*ಲೇಖಕರು ಪ್ರಸಿದ್ಧ ಸಿನಿಮಾ ನಿರ್ದೇಶಕರು; ತಮಿಳುನಾಡಿನ ಗಾಂಧೀಗ್ರಾಮ ಗ್ರಾಮೀಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಕೃಪೆ: ದಿ ಇಂಡಿಯನ್ ಎಕ್ಸ್‍ಪ್ರೆಸ್
ಅನುವಾದ: ವಸಂತ ನಾಡಿಗೇರ

Leave a Reply

Your email address will not be published.