ಗಾಂಧಿ ಚಿಂತನೆಗೆ ಕಾಲ ಕೂಡಿಬಂದಿದೆಯೇ..?

ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕೆ ಅಡಚಣೆಗೆ ಒಳಪಡಬಲ್ಲ ಜಾಗತೀಕರಣ ಹಾಗೂ ರಾಷ್ಟ್ರೀಯತೆ ಆಧಾರದ ಅರ್ಥ ವ್ಯವಸ್ಥೆಯ ಬದಲಿಗೆ ಸ್ಥಳೀಯ ಹಾಗೂ ಸ್ವಾವಲಂಬಿ ಆಧಾರದ ಮೇಲೆ ಕಟ್ಟಿಕೊಳ್ಳುವ ಆರ್ಥಿಕತೆ ನಮಗೆ ಇಂದು ಪರ್ಯಾಯವಾಗಿ ಗೋಚರವಾಗುತ್ತಿದೆ.

ಕೊರೊನಾ ಪಿಡುಗು ನಾವು ಇಲ್ಲಿಯವರೆಗೆ ಬೆಳೆಸಿಕೊಂಡು ಬಂದ ಪರಸ್ಪರ ಸಂಬಂಧಗಳಿಗೆ ಮಾರಣಾಂತಿಕ ಕೊಡಲಿ ಪೆಟ್ಟು ನೀಡಿದೆ. ದೇಶಗಳ ನಡುವೆ, ರಾಜ್ಯಗಳ ನಡುವೆ, ಜನ ಸಮುದಾಯಗಳ ನಡುವೆ ಮತ್ತು ಜನಸಾಮಾನ್ಯರ ನಡುವೆಯ ಸಂಬಂಧಗಳು ಪರಸ್ಪರ ಶಂಕೆ ಮತ್ತು ಅಪನಂಬಿಕೆಗಳ ನಡುವೆ ಮುರಿದುಬಿದ್ದಿವೆ. ಸಭ್ಯ ಸಮಾಜದ ಮೇಲ್ಪಂಕ್ತಿಗಳು ಮುರಿದುಬಿದ್ದ ಕಾರಣ ಕಾನೂನು ಸುವ್ಯವಸ್ಥೆಯ ಕಡ್ಡಾಯ ಹೇರಿಕೆಯ ಮುಖಾಂತರ ಪರಸ್ಪರ ಸಂಪರ್ಕ-ಮಾತುಕತೆಗಳು ನಿಗದಿಯಾಗಬೇಕಿದೆ. ಈ ಸಂವಹನಗಳೂ ಕೊಡುಕೊಳ್ಳುವ ವಿನಿಮಯವಾಗಿ ಸಂಬಂಧಗಳ ವ್ಯಾಪಾರೀಕರಣ ಆಗುತ್ತಿದೆಯೇನೋ ಎನ್ನುವ ಸಂದೇಹವೂ ಮೂಡುತ್ತಿದೆ.

ಅತ್ಯಂತ ನಿರಾಶಾದಾಯಕ ಹಾಗೂ ಮನಕುಲುಕುವ ಈ ಸಮಯದಲ್ಲಿ ಸಮಾಜ ಹಾಗೂ ರಾಷ್ಟçಗಳಿಗೆ ಸಾಂತ್ವನ ನೀಡಬಲ್ಲ ಸಾಮುದಾಯಿಕ ಚಿಂತನೆ ಬೇಕಾಗಿದೆ. ಎಲ್ಲರ ಮನಗೆದ್ದು ಎಲ್ಲರ ಮನಮುಟ್ಟುವ ಹಾಗೂ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಅಂತಃಕರಣೆಯುಳ್ಳ ನಾಯಕನ ಅಗತ್ಯವೂ ಇದೆ. ಪೈಪೋಟಿ ರಾಜಕೀಯದ ನಮ್ಮ ನಾಯಕರಲ್ಲಿ ಈ ಗುಣಗಳನ್ನು ಹುಡುಕುವ ಸಾಧ್ಯತೆಯಿಲ್ಲ. ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿಯೂ ನಮಗೆ ಬೇಕಿರುವ ಮಟ್ಟದ ಉದಾರವಾದಿ ಹಾಗೂ ಸರ್ವರಿಗೂ ಸಲ್ಲುವ ನಾಯಕರು ಇಲ್ಲವಾಗಿದ್ದಾರೆ. ಇನ್ನು ಕೆಲವರು ಸಾಧಕರು ಅನಗತ್ಯ ವಿವಾದ ಹಾಗೂ ಪ್ರಚಾರಗಳಿಗೆ ಹೆದರಿ ತಮ್ಮ ಮಾತು-ಚಿಂತನೆಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವುದು ಒಳ್ಳೆಯದು ಎನ್ನುವ ಮನೋಭಾವದವರಾಗಿದ್ದಾರೆ.

ಈ ಸಮಯದಲ್ಲಿ ನಮಗೆ ಮತ್ತೊಮ್ಮೆ ಮಹಾತ್ಮಾ ಗಾಂಧಿಯವರ ವಿಚಾರಗಳು ಆಕರ್ಷಕವಾಗಿ ಕಂಡಿವೆ ಎಂದರೆ ಅತಿಶಯೋಕ್ತಿಯಲ್ಲ. ಗಾಂಧಿಯವರ ಚಿಂತನೆಗಳು ಸಾರ್ವಕಾಲಿಕ ಎಂದು ನಾವು ಹೇಳಿಕೊಂಡು ಬಂದಿದ್ದರೂ ಈ ‘ಕಾಲ್ ಕೆಳಗಿನ ನೆಲ ಕುಸಿಯುವ’ ಸಂದರ್ಭದಲ್ಲಿ ಸತ್ಯಶೋಧಕನ ವಿಚಾರಗಳು ಅತ್ಯಂತ ಉಪಯುಕ್ತವಾಗಿ ನಮಗೆ ಕಾಣಿಸುತ್ತಿವೆ. ಹಿಂದೆಂದಿಗಿಂತಲೂ ಈಗ ಗಾಂಧಿವಾದದ ಮೂಲಭೂತ ಚಿಂತನಾಕ್ರಮಗಳು ಪ್ರಸ್ತುತ ಎಂದು ನಮಗೆ ಅನ್ನಿಸುತ್ತಿದೆ.

1948ರಲ್ಲಿಯೇ ಹತ್ಯೆಗೊಳಗಾದ ಗಾಂಧಿಯವರ ವಿಚಾರಗಳು 2020ರ ಈ ಕೊರೊನಾ ನಂತರದ ಯುಗದಲ್ಲಿ ಹೇಗೆ ಪ್ರಸ್ತುತವಾಗಬಲ್ಲುವು ಎಂದು ನೀವು ಕೇಳಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಎಲ್ಲಾ ಕಾರ್ಯಕ್ಷೇತ್ರಗಳು ಬದಲಾಗಿವೆ. ಯಾಂತ್ರೀಕರಣ, ಆಧುನೀಕರಣ, ಜಾಗತೀಕರಣ, ಡಿಜಿಟಲೀಕರಣ ಮತ್ತು ಸಮೂಹ ಮಾಧ್ಯಮೀಕರಣಗಳು ಪ್ರಪಂಚವನ್ನು ಬುಡಮೇಲು ಮಾಡಿವೆ. ಗುರುತಿಗೆ ಸಿಗದಷ್ಟು ಮಟ್ಟಿಗೆ ಎಪ್ಪತ್ತು ವರ್ಷಗಳಲ್ಲಿ ಬದಲಾಗಿರುವ ಈ ಪ್ರಪಂಚಕ್ಕೆ ಗಾಂಧಿವಾದ ಹೇಗೆ ಮುಲಾಮು ಹಚ್ಚಬಲ್ಲುದು ಎಂದೂ ನೀವು ಕೇಳಬಹುದು. ನಿಮ್ಮ ಪ್ರಶ್ನೆಗಳು ತಾರ್ಕಿಕವೂ ಹಾಗೂ ನ್ಯಾಯಸಮ್ಮತವೂ ಆಗಿರುತ್ತವೆ. ಆದರೆ ಈ ಪ್ರಶ್ನೆಗಳ ಹಿಂದಿರುವ ತಪ್ಪುಗ್ರಹಿಕೆಯ ಕೆಲವು ಸಂಗತಿಗಳನ್ನು ನಾವು ಗಮನಿಸಬೇಕಾಗುತ್ತದೆ.

  • ಜಾಗತೀಕರಣವಾಗಲಿ ಅಥವಾ ಯಾಂತ್ರೀಕರಣವಾಗಲಿ ಗಾಂಧಿಯವರಿಗೆ ಅಪರಿಚಿತ ವಿಷಯಗಳಾಗಿರಲಿಲ್ಲ. ಈಸ್ಟ್ ಇಂಡಿಯಾ ಕಂಪನಿಯಿಂದ ಬಳುವಳಿಯಾಗಿ ಪಡೆದ ಭಾರತ ಮತ್ತಿತರ ಕಾಲೊನಿಗಳಲ್ಲಿ ಬ್ರಿಟಿಷ್ ರಾಜ್ಯಭಾರ ಒಂದು ರೀತಿಯ ಜಾಗತೀಕರಣದ ಪದ್ಧತಿಯೇ ಆಗಿತ್ತು. ಕಚ್ಚಾ ಪದಾರ್ಥಗಳು ಹಾಗೂ ಸಿದ್ಧ ಮಾರುಕಟ್ಟೆಗಳನ್ನು ಹುಡುಕಿಕೊಂಡು ಹೊರಡುವ ಇಂದಿನ ಬಹುರಾಷ್ಟಿçÃಯ ಕಂಪನಿಗಳಂತೆಯೇ ಅಂದಿನ ಐರೋಪ್ಯ ರಾಷ್ಟçಗಳು ಗುಲಾಮಗಿರಿಯ ವಸಾಹತುಗಳನ್ನು ಹುಡುಕಿ ಹೊರಟಿದ್ದವು. ಇಂಗ್ಲೆಂಡ್ ಮತ್ತು ಐರೋಪ್ಯ ರಾಷ್ಟçಗಳಲ್ಲಿ ಅದಾಗಲೇ ವ್ಯಾಪಕವಾಗಿದ್ದ ಯಾಂತ್ರೀಕರಣಗಳು ಗಾಂಧಿಯವರ ಮೇಲೆ ಅಗಾಧ ಪ್ರಭಾವ ಬೀರಿದ್ದವು.
  • 1914 ರಿಂದ 1919 ರವರೆಗಿನ ಮೊದಲ ಮಹಾಯುದ್ಧ ಹಾಗೂ 1939 ರಿಂದ 1945 ರವರೆಗಿನ ಎರಡನೇ ಮಹಾಯುದ್ಧಗಳಿಗೆ ಗಾಂಧಿಯವರು ಸಾಕ್ಷಿಯಾಗಿದ್ದರು. ಈ ಕಾಲಗಳಲ್ಲಿನ ಅಭಾವ, ಅಸಹಾಯಕತೆ, ಸರಿ-ತಪ್ಪುಗಳ ಗೊಂದಲ ಮತ್ತು ಶಾಂತಿ-ಯುದ್ಧಗಳ ತಾಕಲಾಟಗಳು ಗಾಂಧಿಯವರ ಮುಂದಿದ್ದವು. ಸೂಕ್ಷö್ಮ ಸಂವೇದಿ ಚಿಂತಕನನ್ನು ಗಾಢವಾಗಿ ಕಾಡುವ ಈ ಯುದ್ಧಗಳು ಸಹಜವಾಗಿ ಗಾಂಧಿಯವರ ಚಿಂತನೆಗಳ ಮೇಲೆಯೂ ಪ್ರಭಾವ ಬೀರಿದ್ದವು.
  • 1929-30 ರ ವಿಶ್ವ ಆರ್ಥಿಕ ಕುಸಿತ ಮತ್ತದರ ಪರಿಣಾಮಗಳನ್ನೂ ಗಾಂಧಿ ಬಲ್ಲವರಾಗಿದ್ದರು. ಈ ಘಟನೆಗಳಿಂದ ಹೇಗೆ ರಾಷ್ಟçಗಳ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಬಲ್ಲುದೆಂದು ಅರಿತಿದ್ದರು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತದ ಆರ್ಥಿಕ ಪರಿಸ್ಥಿತಿ ಗಾಂಧಿಯವರಿಗೆ ಪರಿಚಿತವಾಗಿತ್ತು. ಸೋಲು-ಗೆಲುವುಗಳ ಈ ಆರ್ಥಿಕ ವಾತಾವರಣವು ಹೇಗೆ ಗೆಲುವು-ಗೆಲುವುಗಳ ವಾತಾವರಣವಾಗಿ ಪರಿವರ್ತಿತವಾಗಬಲ್ಲುದು ಎಂಬುದನ್ನೂ ಗಾಂಧಿ ಓದಿದವರಾಗಿದ್ದರು.
  • ಎಲ್ಲಕ್ಕಿಂತ ಮುಖ್ಯವಾಗಿ 1918-19ರ ಸ್ಪಾನಿಶ್ ಫ್ಲೂ ರೋಗದ ಪರಾಕ್ರಮವನ್ನು ಗಾಂಧಿ ನೋಡಿದ್ದರು. ಬಾಂಬೆ, ಗುಜರಾತ್, ಮದ್ರಾಸು ಮತ್ತು ಕಲಕತ್ತಾಗಳಲ್ಲಿ ಈ ಇನ್‌ಫ್ಲುಯೆಂಜಾ ಸಾಂಕ್ರಾಮಿಕ ರೋಗದಿಂದ ಸತ್ತ ಎರಡು ಕೋಟಿ ಭಾರತೀಯರ ನೋವನ್ನು ಗಾಂಧಿ ಕಣ್ಣಾರೆ ಕಂಡಿದ್ದರು. ಅಂದಿನ ದಿನಗಳಲ್ಲಿ ಪ್ರಚಲಿತವಾಗಿದ್ದ ಕಾಲೆರಾ, ಮಲೇರಿಯಾ, ಟ್ಯುಬರ್‌ಕ್ಯುಲೋಸಿಸ್ ಮತ್ತಿತರ ರೋಗಗಳನ್ನೂ ಗಾಂಧಿ ಹತ್ತಿರದಿಂದ ಬಲ್ಲವರಾಗಿದ್ದರು. ಈ ಸಾಂಕ್ರಾಮಿಕ ರೋಗಗಳು ಪರಿಣಾಮ ಬೀರುವ ರೀತಿಯಲ್ಲಿ ಗಾಂಧಿ ಚಿಂತನೆಯ ಮೇಲೆ ಸನಿಹದ ಅನುಭವ ನೀಡಿದ್ದವು.

ಗಾಂಧಿ ನಿಧನದ ವರ್ಷದಿಂದ ಎಪ್ಪತ್ತೆರಡು ವರ್ಷಗಳು ಕಳೆದಿದ್ದರೂ ನಮ್ಮ ಮೂಲಭೂತ ಸಮಸ್ಯೆಗಳು ದೂರವಾದಂತೆ ಕಾಣುವುದಿಲ್ಲ. ಕಾಲ ಕಳೆದಿದ್ದರೂ ಬಡತನ-ನಿರುದ್ಯೋಗಗಳ ಸಮಯ ವಿಭಿನ್ನವಾಗಿರುವಂತೆ ಕಾಣುತ್ತಿಲ್ಲ. ನೂರು ವರ್ಷ ಹಿಂದಿನ ಸ್ಪಾನಿಷ್ ಸಾಂಕ್ರಾಮಿಕ ರೋಗದಂತೆಯೇ ಇಂದಿನ ಸಾಂಕ್ರಾಮಿಕ ರೋಗದ ತೀಕ್ಷ್ಣತೆ ನಮ್ಮನ್ನು ಕಲಕಿದೆ. ನಮ್ಮ ಮೂಲಭೂತ ಗ್ರಹಿಕೆ ಮತ್ತು ಚಿಂತನೆಗಳನ್ನೇ ಅಲುಗಾಡಿಸಿದೆ.

ಈ ಸಂದರ್ಭದಲ್ಲಿ ಗಾಂಧಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ನಮ್ಮನ್ನು ಸೆಳೆಯುತ್ತದೆ. ನಗರೀಕರಣ ಮತ್ತು ಯಾಂತ್ರೀಕರಣಗಳ ಆಕರ್ಷಣೆಗೆ ಒಳಗಾಗದೆ ಗ್ರಾಮೀಣವಾಗಿ ಸ್ವಾವಲಂಬನೆ ಕಾಣುವ ಈ ‘ಗ್ರಾಮಸ್ವರಾಜ್ಯ’ದ ಕಲ್ಪನೆ ಅತ್ಯಂತ ಸೂಕ್ತವಾಗಿ ಕಾಣುತ್ತದೆ. ಸ್ಥಳೀಯ ಉತ್ಪಾದನೆ ಹಾಗೂ ಸ್ಥಳೀಯ ಬಳಕೆಯ ಆಧಾರದ ಮೇಲೆ ಕಟ್ಟಿಕೊಳ್ಳುವ ಈ ಸ್ವಾವಲಂಬಿ ಆರ್ಥಿಕತೆ ಇಂದು ನಮಗೆ ಮಾದರಿಯಾಗಿ ಕಾಣುತ್ತಿದೆ. ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕೆ ಅಡಚಣೆಗೆ ಒಳಪಡಬಲ್ಲ ಜಾಗತೀಕರಣ ಹಾಗೂ ರಾಷ್ಟ್ರೀಯತೆ ಆಧಾರದ ಅರ್ಥ ವ್ಯವಸ್ಥೆಯ ಬದಲಿಗೆ ಸ್ಥಳೀಯ ಹಾಗೂ ಸ್ವಾವಲಂಬಿ ಆಧಾರದ ಮೇಲೆ ಕಟ್ಟಿಕೊಳ್ಳುವ ಆರ್ಥಿಕತೆ ನಮಗೆ ಇಂದು ಪರ್ಯಾಯವಾಗಿ ಗೋಚರವಾಗುತ್ತಿದೆ.

ಗಾಂಧಿಯವರಿಗೆ ಪ್ರಿಯವಾಗಿದ್ದ ಶಾಕಾಹಾರಿ ಆಹಾರ ಪದ್ಧತಿಯೂ ಇಂದು ನಮಗೆ ಆರೋಗ್ಯಪೂರ್ಣವಾಗಿ ಕಂಡುಬರುತ್ತಿದೆ. ಗಾಂಧಿಯವರ ಆಯ್ಕೆಯ ಹಿಂದೆ ಧಾರ್ಮಿಕ ಹಾಗೂ ಅಹಿಂಸೆಯ ಕಾರಣಗಳಿದ್ದರೂ ಇಂದು ಮಾಂಸಾಹಾರಿ ಆಹಾರಪದ್ಧತಿಯ ಅವಗುಣಗಳು ನಮಗೆ ಎದ್ದು ಕಾಣುತ್ತಿವೆ. ಪ್ರಾಣಿಗಳಿಂದ ಬರಬಹುದಾದ ರೋಗಗಳು ಒಂದು ಕಾರಣವಾದರೆ ಈ ಪ್ರಾಣಿಗಳನ್ನು ತಿನ್ನಬಲ್ಲ ಮಾಂಸವಾಗಿ ಪರಿವರ್ತನೆ ಮಾಡುವಲ್ಲಿ ಬಳಸುವ ರಾಸಾಯನಿಕಗಳು ಮತ್ತೊಂದು ಕಾರಣವಾಗಿವೆ.

ಹುಟ್ಟಿನಿಂದ ಕೇವಲ ಮೂವತ್ತಾರು ದಿನ ಬದುಕುವ ಕೋಳಿಯೊಂದರ ಶರೀರದಲ್ಲಿ ತುಂಬಿದ ಆಹಾರ, ಕೊಬ್ಬು, ರಾಸಾಯನಿಕ ಮತ್ತು ಸ್ಟೆರಾಯ್ಡ್ಗಳು ನಮ್ಮ ದೇಹವನ್ನು ಸೇರುವ ಅಪಾಯವಿಂದು ನಮ್ಮನ್ನು ಕಾಡುತ್ತಿದೆ. ಈ ಮಟ್ಟದಲ್ಲಿ ರಾಸಾಯನಿಕಗಳಿಂದ ಜರ್ಝರಿತವಾಗುವ ನಮ್ಮ ಶರೀರ ಯಾವುದಾದರೂ ಮಾರಣಾಂತಿಕ ರೋಗಕ್ಕೆ ಹೇಗೆ ಎದುರು ನಿಲ್ಲಬಲ್ಲುದು ಎಂಬ ಸಂಶಯವೂ ಮೂಡಿಸುತ್ತಿದೆ.

ನಾವು ಕೂಡಿಟ್ಟ ಹಣ ನಮ್ಮ ಯಾವುದೇ ಉಪಯೋಗಕ್ಕೆ ಬರದೇ ಇರಬಹುದೆಂಬ ಈ ಸಮಯದಲ್ಲಿ ನಮ್ಮ ಮೋಹ ಮತ್ತು ಲೋಭಗಳಿಗೂ ಕಡಿವಾಣ ಬಿದ್ದಿದೆ. ನಮ್ಮನ್ನು ಬದುಕಿಸಲೇ ಆಗದ ಸಂಪತ್ತು ಮತ್ತು ಅಂತಸ್ತು ಯಾವÀ ಪುರುಷಾರ್ಥಕ್ಕೆ ಎಂದು ನಮ್ಮನ್ನು ನಾವು ಕೇಳುವಂತಾಗಿದೆ. ಈ ಸಾಧ್ಯತೆಯನ್ನು ಬಲ್ಲ ಗಾಂಧಿ ಅಂದಿನ ದಿನವೇ ಟ್ರಸ್ಟೀಶಿಪ್ ಸಿದ್ಧಾಂತವನ್ನು ನಮ್ಮ ಮುಂದೆ ಪರ್ಯಾಯವಾಗಿ ಇಟ್ಟಿದ್ದರು. ನಾವು ಗಳಿಸಿದ ಆದಾಯ ಮತ್ತು ಪಡೆದ ಸಂಪತ್ತನ್ನು ನಾವು ಸಮಾಜದ ಪರವಾಗಿರುವ ಟ್ರಸ್ಟಿಗಳಂತೆ ಪರಿಗಣಿಸಬೇಕು ಎನ್ನುವ ದಾರ್ಶನಿಕವಾದ ನಮಗೆ ಇಂದು ಮಾರ್ಮಿಕ ಸತ್ಯವಾಗಿ ಕಾಣಬರುತ್ತಿದೆ. ಸಂಪತ್ತಿನ ಬಗ್ಗೆ ಮೋಹ ಕಳೆದುಕೊಳ್ಳದೆ ಮಾನಸಿಕ ನೆಮ್ಮದಿಯಿಲ್ಲ ಎಂಬುದೂ ನಮಗೆ ತಿಳಿದು ಬರುತ್ತಿದೆ.

ಯಕಃಶ್ಚಿತ್ ಕ್ರಿಮಿಯೊಂದು ನಮ್ಮ ಪ್ರಪಂಚವನ್ನೇ ಬುಡಮೇಲಾಗಿಸಿರುವ ಸಮಯದಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎಂಬ ಪ್ರಶ್ನೆಯೂ ನಮ್ಮನ್ನು ಕಾಡತೊಡಗಿದೆ. ಈ ಸಂಕ್ರಮಣದಲ್ಲಿ ಗಾಂಧಿ ಪ್ರತಿಪಾದಿಸಿದ ಸರಳ ಜೀವನ ಹಾಗೂ ಸತ್ಯಶೋಧನೆಯ ಮಾರ್ಗ ಇಂದು ಇನ್ನಷ್ಟು ಆಪ್ಯಾಯಮಾನವಾಗಿ ಕಾಣಿಸುತ್ತಿದೆ. ಪೃಥ್ವಿಗೆ ಒಡೆಯನೆಂದು ಬೀಗುತ್ತಿದ್ದ ನಮ್ಮ ಮೂಗುಬಾಯಿಗೆ ಬೀಗ ಹಾಕಿರುವ ಕೊರೊನಾ ಕ್ರಿಮಿಯು ನಮ್ಮ ಗಾಳಿಗುಳ್ಳೆಯ ಮದವನ್ನು ಛೇದಿಸಿ ಸರಳ ಜೀವನದ ಸಾರ್ವಕಾಲಿಕ ಸತ್ಯವನ್ನು ನಮಗೆ ಮನವರಿಕೆ ಮಾಡುತ್ತಿದೆ.

Leave a Reply

Your email address will not be published.