ಗಾಂಧಿ ಯುಗಕ್ಕೆ ಭಾರತ

ಈಗ ಗಾಂಧೀಜಿ ಹೆಜ್ಜೆ ಹೆಜ್ಜೆಗೂ ಬೇಕಾಗಿದ್ದಾರೆ. ಕಳೆದ 70 ವರ್ಷಗಳಲ್ಲಿ ಅವರಿಂದ ದೂರ ದೂರ ಸಾಗಿದ ನಮ್ಮ ದೇಶ ಈಗಲಾದರೂ ಅವರ ನೀತಿಗಳನ್ನು ಅರಿತು ಅಳವಡಿಸಿಕೊಳ್ಳಬೇಕಾಗಿದೆ. ಅಂಥ ಚಮತ್ಕಾರ ನಡೆಯಲಿ!

–  ನೂತನ ದೋಶೆಟ್ಟಿ

ನಮ್ಮ ದೇಶ ಅನಿವಾರ್ಯವಾಗಿ ಅರಿವಿಲ್ಲದೆಯೇ ಗಾಂಧಿ ಯುಗಕ್ಕೆ ಸಾಗುತ್ತಿದೆಯೋ ಅಥವಾ ಗಾಂಧಿಮಾರ್ಗ ಪ್ರಸ್ತುತ ಸಂದರ್ಭದಲ್ಲಿ ಉಳಿದಿರುವ ಏಕೈಕ ಮಾರ್ಗವೋ! ಈ ಪ್ರಶ್ನೆ ಇಂದಿನ ಕೊರೊನಾ ಹಿನ್ನೆಲೆಯಲ್ಲಿ ಜಾಗತೀಕರಣದ ಆವಶ್ಯಕತೆ ಕುರಿತಾ ಚರ್ಚೆಗೂ ಪ್ರಸ್ತುತವಾಗಿದೆ.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಹಾಗೂ ಆನಂತರ ಭಾರತಕ್ಕೆ ಬಂದಾಗ ಮಾಡಿದ ಮೊದಲ ಕೆಲಸ ದಿನನಿತ್ಯದ ಬದುಕಿಗೆ ಸ್ವಾವಲಂಬಿಯಾಗಿರಬೇಕೆಂದು ಪ್ರತಿಪಾದಿಸಿದ್ದು ಮಾತ್ರವಲ್ಲ ಅದನ್ನು ಕಾರ್ಯರೂಪಕ್ಕೆ ತಂದಿದ್ದುದು. ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ವಾಸಿಸಲು ಪಾಳು ಜಮೀನನ್ನು ಕೊಂಡು ಅದನ್ನು ತಮ್ಮ ತಂಡದ ಸದಸ್ಯರೊಂದಿಗೆ ಸ್ಚಚ್ಛಗೊಳಿಸಿ ಸುತ್ತಲಿನ 5 ಕಿ.ಮೀ. ಜಾಗದಲ್ಲಿ ಸಿಗುವ ವಸ್ತುಗಳನ್ನು ಬಳಸಿಯೇ ಮನೆ ನಿರ್ಮಿಸಿದರು. ಉಳಿದ ಜಾಗದಲ್ಲಿ ತರಕಾರಿ ಬೆಳೆದು, ಹಸುವನ್ನು ಸಾಕಿ ದಿನನಿತ್ಯದ ಆಹಾರ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿದ್ದರು.

ಅವರ ಅಗತ್ಯಗಳು ಬಹಳ ನಿಯಮಿತ ಹಾಗೂ ಹಿತ-ಮಿತವಾಗಿದ್ದವು. ಅವರೊಂದಿಗೆ ಇರುತ್ತಿದ್ದ ಅವರ ದೊಡ್ಡ ಪರಿವಾರದಲ್ಲಿ ಸಂಬಂಧಿಗಳು, ಸ್ನೇಹಿತರು ಇದ್ದರು. ಅವರೆಲ್ಲ ಪರಸ್ಪರರ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತ ಸಾಂಘಿಕ ಜೀವನ ನಡೆಸುತ್ತಿದ್ದರು. ಗಾಂಧೀಜಿಯ ಈ ಪ್ರಯೋಗ ಅಲ್ಲಿ ಯಶಸ್ವಿಯಾಯಿತು. ಅದನ್ನು ಅವರು ಭಾರತದಲ್ಲೂ ಮುಂದುವರೆಸಿದ್ದರು. ಇಂದಿಗೂ ಗಾಂಧಿ ಆಶ್ರಮ ಹಾಗೂ ಕಸ್ತೂರಬಾ ಆಶ್ರಮಗಳಲ್ಲಿ ಸ್ವಾವಲಂಬಿ ಬದುಕಿಗೆ ಒತ್ತು ಕೊಡಲಾಗಿದೆ.

ಸ್ವದೇಶಿ ವಸ್ತುಗಳ ಬಳಕೆ ಅವರ ಇನ್ನೊಂದು ಆದ್ಯತೆಯಾಗಿತ್ತು. ಅದಕ್ಕಾಗಿ ಚರಕದಿಂದ ತೆಗೆದ ನೂಲಿನಿಂದ ತಯಾರಿಸಿದ ಬಟ್ಟೆಗಳನ್ನೇ ಅವರು ಧರಿಸುತ್ತಿದ್ದುದಲ್ಲದೇ ಅವರ ದೊಡ್ಡ ಪರಿವಾರವೂ ಅದನ್ನು ಪಾಲಿಸುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ವಿದೇಶಿ ವಸ್ತುಗಳನ್ನು ಸುಡುವುದರ ಮೂಲಕ ಬಹಿಷ್ಕಾರ ಘೋಷಿಸಲಾಗಿತ್ತು. ಇಂದು ಮತ್ತೊಮ್ಮೆ ಭಾರತ ಸ್ವದೇಶಿ ಮಂತ್ರ ಜಪಿಸುವ ಅನಿವಾರ್ಯತೆಯನ್ನು ಮನಗಂಡಿದೆ. ದೇಶದಾದ್ಯಂತ ಚೀನಿ ವಸ್ತುಗಳ ನಿಷೇಧದ ಕೂಗು ಇದಕ್ಕೊಂದು ನಿದರ್ಶನ. ಗಾಂಧೀಜಿ ಕೊಳ್ಳುಬಾಕ ಸಂಸ್ಕೃತಿ ಉಗಮವಾಗದಿದ್ದ ಕಾಲದಲ್ಲೇ ಅಗತ್ಯ ವಸ್ತುಗಳನ್ನು ಮಾತ್ರ ಬಳಸುವ ಹಾಗೂ ಹೊಂದುವ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು.

19ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಆರಂಭವಾದ ಕೊಳ್ಳುಬಾಕ ಸಂಸ್ಕೃತಿ ಈಗ ಅದರ ಅತ್ಯಂತ ವಿರೂಪವನ್ನು ದಾಟಿ ಸಾಗಿದೆ. ಭಾರತದಲ್ಲಿ 80ರ ದಶಕದಿಂದ ಈಚೆಗೆ ಚಿಗುರಿದ ಈ ಸಂಸ್ಕೃತಿಗೆ ವಿದೇಶಿ ವ್ಯಾಮೋಹವೇ ಮೂಲ ಕಾರಣ. ಆನಂತರ ಬದಲಾದ ಆರ್ಥಿಕ ನೀತಿ ಇದಕ್ಕೆ ದಿಡ್ಡಿ ಬಾಗಿಲನ್ನು ತೆರೆಯಿತು. ಭಾರತದಂಥ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದೇ ಚೀನಾ. ನಮ್ಮ ದೇವಾನುದೇವತೆಗಳನ್ನೇ ಎರಕ ಹೊಯ್ದು ಮಾರಿತೆಂದರೆ ಅದರ ಚಾಣಾಕ್ಷತನ ಹಾಗೂ ನಮ್ಮ ಅಪ್ರಬುದ್ಧತೆ ಎರಡೂ ಕನ್ನಡಿಯ ಬಿಂಬದಂತೆ ನಿಚ್ಚಳ. ಈಗ ನಮ್ಮ ದೇಶದ ಪರಿಸ್ಥಿತಿ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದಂತೆ ಆಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವಲಸೆ ಕಾರ್ಮಿಕರ ಬವಣೆಯನ್ನು ಕಣ್ಣಾರೆ ಕಂಡಿದ್ದ ಗಾಂಧೀಜಿ ಅವರ ಪರವಾಗಿ ಹೋರಾಟ ಮಾಡಿದರು. ಕಾರ್ಮಿಕರು ತಾವಿರುವ ಸುತ್ತಮುತ್ತಲಿನ ಪ್ರದೇಶದಲ್ಲೇ ಕೆಲಸ ಮಾಡಬೇಕು, ಕೆಲಸಕ್ಕಾಗಿ ಬಹಳ ದೂರ ಹೋಗಬಾರದು ಎಂದು ಅವರು ಪ್ರತಿಪಾದಿಸಿದರು.

ಇಂದು ಈ ಸತ್ಯ ಮತ್ತೊಮ್ಮೆ ಸರಿಯೆಂದು ಸಿದ್ಧವಾಗಿದೆ. ಶಹರಗಳನ್ನು ಮಾತ್ರ ಬೆಳೆಸಿದ ನಮ್ಮ ಆರ್ಥಿಕತೆ, ರಾಜಕೀಯ ಹಾಗೂ ಅಧಿಕಾರಿ ವರ್ಗ ಇಂದಿನ ಕಾರ್ಮಿಕ ವಲಸೆಗೆ ಪರೋಕ್ಷವಾಗಿ ಕಾರಣ. ಆದರೆ ಬವಣೆ, ಸಾವು-ನೋವು, ಸಂಕಟ, ಹಸಿವು, ಬಡತನದ ಬುತ್ತಿ ವಲಸೆ ಕಾರ್ಮಿಕರ ಪಾಲಿಗೆ. ಸರ್ಕಾರಗಳು ಈಗಲಾದರೂ ಎಚ್ಚೆತ್ತು ಸ್ವಾವಲಂಬಿ ಗ್ರಾಮಗಳನ್ನು ಬೆಳೆಸಿದರೆ ಸಾಕಾರವಾಗುವುದು ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ; ಅದರೊಂದಿಗೆ ಸ್ವಾವಲಂಬಿ ಭಾರತವೂ. ಇಂದಿನ ಜಾಗತಿಕ ರಾಜಕೀಯ ನೀತಿಯಲ್ಲಿ ಇದು ಅಗತ್ಯವಾಗಿದೆ.

ರೊಟ್ಟಿ, ಕಡುಬು, ಪಾಯಸ, ಹೋಳಿಗೆ, ದೇಸಿ ಕೋಳಿ, ಕುರಿ ತಿನ್ನುತ್ತಿದ್ದ ಮಕ್ಕಳಿಗೆ ಮ್ಯಾಗಿ, ಪಿಡ್ಜಾ, ಬರ್ಗರ್, ಕೆಂಟುಕಿ ಚಿಕನ್ ರುಚಿ ಹತ್ತಿಸುವುದರ ಬದಲಾಗಿ ಗಾಂಧೀಜಿಯ ಹಿತ-ಮಿತ ಆಹಾರದ, ವಿವೇಕಾನಂದರ ಯೋಗದ ತಾಲೀಮು ನೀಡಿದ್ದರೆ ಇಷ್ಟೊಂದು ಆಸ್ಪತ್ರೆಗಳು ಹುಟ್ಟುತ್ತಿರಲಿಲ್ಲ. ಗಾಂಧೀಜಿ ಅನಾರೋಗ್ಯಕ್ಕೆ ದೇಸೀ ವೈದ್ಯ ಪದ್ಧತಿಯನ್ನೇ ನೆಚ್ಚಿಕೊಂಡಿದ್ದರು. ಅನೇಕ ಮನೆ ಮದ್ದುಗಳನ್ನು ಮಾಡಿಕೊಳ್ಳುತ್ತಿದ್ದರು. ಪಾಶ್ಚಾತ್ಯ ಜೀವನ ಶೈಲಿಯ ಅಂಧಾನುಕರಣೆಯಿAದ ಅವೆಲ್ಲ ನಮ್ಮ ಅಂಗಳಗಳಿAದ ಹೊರ ನಡೆದವು.

ಈಗ ಗಾಂಧೀಜಿ ಹೆಜ್ಜೆ ಹೆಜ್ಜೆಗೂ ಬೇಕಾಗಿದ್ದಾರೆ. ಕಳೆದ 70 ವರ್ಷಗಳಲ್ಲಿ ಅವರಿಂದ ದೂರ ದೂರ ಸಾಗಿದ ನಮ್ಮ ದೇಶ ಈಗಲಾದರೂ ಅವರ ನಂಬಿಕೆಗಳನ್ನು, ಆಚರಣೆಗಳನ್ನು, ನೀತಿಗಳನ್ನು ಅರಿತು ಅಳವಡಿಸಿಕೊಳ್ಳಬೇಕಾಗಿದೆ.

ಇದು ಸಾಧ್ಯವಾಗುವುದು ಒಂದು ಚಮತ್ಕಾರಕ್ಕೆ ಕಡಿಮೆಯಿಲ್ಲ! ಅಂಥ ಚಮತ್ಕಾರ ನಡೆಯಲಿ.

Leave a Reply

Your email address will not be published.